ನಮ್ಮ ಮನೆಯ ವಿಸ್ತೀರ್ಣ ಅಷ್ಟು ದೊಡ್ಡದಲ್ಲ. ಆದರೆ ಗಿಡಗಳೂ ಹೂಗಳೆಂದರೆ ನಮ್ಮ ತಾಯಿಗೆ ಬಹಳಷ್ಟು ಪ್ರೀತಿ. ಆದ್ದರಿಂದ ಮನೆಯ ಮೇಲ್ಛಾವಣಿಯಲ್ಲಿ ಕೆಲವು ಹೂವಿನ ಕುಂಡಗಳನ್ನು ಇಟ್ಟಿದ್ದೇವೆ. ದೇವರ ಪೂಜೆಗೆ ಆಗುವ ಅರ್ಧದಷ್ಟು ಹೂವು ಇಲ್ಲಿ ನಿತ್ಯವೂ ಸಿಗುತ್ತದೆ. ಬೇಸಗೆಯಲ್ಲಂತೂ ಸಾಕಷ್ಟು ಸಿಗುತ್ತದೆ.
ನಾನು ಮನೆಯ ಮೇಲ್ಛಾವಣಿಗೆ ಹೋಗುವುದು ಅಪರೂಪ. ತಿಂಗಳುಗಟ್ಟಲೆ ಆಲ್ಲಿಗೆ ಹೋಗದೇ ಇದ್ದೇನೆ. ಏಕೆಂದರೆ ಅದು ನನ್ನ ಡಿಪಾರ್ಟ್ ಮೆಂಟ್ ಅಲ್ಲ. ಹೋದರೆ ಈಗೊಮ್ಮೆ ಹಾಗೊಮ್ಮೆ. ಹೋದಾಗ ಆ ಹಸಿರು, ಆ ಬಣ್ಣದ ಹೂಗಳನ್ನು ನೋಡಿ "ಇಲ್ಲೇಕೆ ಪದೇ ಪದೇ ಬರಬಾರದು?" ಎಂಬ ಪ್ರಶ್ನೆ ಮೂಡುತ್ತದೆ. ಅದಾದ ಮೇಲೆ ಒಂದೆರಡು ದಿನ ಅಲ್ಲಿಗೆ ಹೋಗುವುದೂ ಆಗುತ್ತದೆ. ಆಮೇಲೆ ಮಾಮೂಲು ಕೆಲಸ. ಮನೆಯ ಮೇಲಿನ ಹಸಿರಿನ ಮೇಲೆ ಗಮನವಿರುವುದಿಲ್ಲ.
ಹೀಗೊಮ್ಮೆ ನಾನು ಮೇಲೆ ಹೋದಾಗ ನನ್ನ ಪಾಲಿಗೆ ಗಿಡಗಳಿಗೆ ನೀರುಣಿಸುವ, ಜೊತೆಗೆ ದೇವರ ಪೂಜೆಗೆಂದು ಹೂಗಳನ್ನು ಆರಿಸುವ ಕೆಲಸಗಳು ಬಂದವು. ಹೋದಾಗ ಬೆಳಗಿನ ಸುಮಾರು ಏಳರ ಸಮಯ. ತಣ್ಣನೆಯ ಗಾಳಿ ಬೀಸಿತ್ತು. ಪೂರ್ವದಲ್ಲಿ ಭಾಸ್ಕರನು ಮೇಲಕ್ಕೆ ಬರುತ್ತಿದ್ದ. ಹಾರಿದ್ದ ನಿದ್ದೆಯ ಮಂಪರಿನ ನನಗೆ ಗಿಡಗಳು ಶಾಲೆಗೆ ಬರುವ ಅಪರಿಚಿತನನ್ನು ಆಶ್ಚರ್ಯ-ಸಂತೋಷಗಳಿಂದ ಕಾಣುವ ಪಾಠದ ಕೋಣೆಯಲ್ಲಿರುವ ಮಕ್ಕಳ ಹಾಗೆ ಕಂಡವು. ಮನಸ್ಸಿಗೆ ಆಹ್ಲಾದವಾಯ್ತು.
ನೀರುಣಿಸುವುದೋ ಹೂವನ್ನು ಬಿಡಿಸುವುದೋ ಎಂಬ ಯೋಚನೆ ಬಂದಿತು. ಅದರ ಆಹಾರವನ್ನು ಕೊಟ್ಟು ನಂತರ ಅವುಗಳಿಂದ ಪಡೆಯೋಣವೆಂದು ನೀರನ್ನು ಕೊಳವೆಯ ಮೂಲಕ ಪ್ರತಿಯೊಂದು ಕುಂಡಕ್ಕೂ ಬಿಡುತ್ತ ಬಂದೆ. ಆ ಕುಂಡಗಳಲ್ಲಿ ನೀರು ಆರಿ ಮಣ್ಣು ಒಣಗಿಹೋಗಿತ್ತು. ಹಸಿವಾದವನ ಹೊಟ್ಟೆಯೊಳಗೆ ಹೋಗಿ ಎಲೆಯಿಂದ ಖಾಲಿಯಾಗುವ ಊಟದ ಹಾಗೆ ನೀರೆಲ್ಲವೂ ಇಂಗುತ್ತ ಹೋಯ್ತು. ಇವೆಲ್ಲವೂ ಸರ್ವೇ ಸಾಮಾನ್ಯವಾದರೂ ಕೆಲಸದ ಕಗ್ಗಂಟಿನಲ್ಲಿ ಕಟ್ಟಿಹೋಗಿದ್ದ ನನಗೆ ಹೊಸದಾಗಿ ಸುಂದರವಾಗಿ ಕಂಡಿತು.
ತನ್ನ ಸಂತತಿಯನ್ನು ಮುಂದುವರೆಸುವುದು ಎಲ್ಲ ಜೀವಿಗಳ ಲಕ್ಷಣ. ಒಂದೇ ಜೀವಕೋಶದ ಅಮೀಬಾದಿಂದ ಹಲವು ಟನ್ನುಗಳಷ್ಟು ತೂಗುವ ತಿಮಿಂಗಿಲದ ವರೆಗೂ ಇದೇ ಸಾಮಾನ್ಯದ ಅಂಶ. ಸಸ್ಯಗಳಲ್ಲಿ ಇದಾಗುವುದು ಮುಖ್ಯವಾಗಿ ಹೂಗಳಿಂದ ಅಲ್ಲವೇ? ಹೂಗಳು ತಮ್ಮ ಬಣ್ಣಬಣ್ಣದ ದಳಗಳಿಂದ ಚಿಟ್ಟೆ ಮುಂತಾದ ಕೀಟಗಳನ್ನು ಆಕರ್ಷಿಸಿ ತನ್ನ ಸಂತತಿಯನ್ನು ಮುಂದುವರೆಸಲು ಕಾರಣವಾಗುತ್ತದೆಯಲ್ಲವೇ? ಇದೇ ಹೂವು ಹಣ್ಣೂ ಆಗಿ ಬೀಜಗಳ ಮೂಲಕ ದೂರ ಹರಡಿ ತನ್ನ ಸಂತಾನದ ವೃದ್ಧಿಗೆ ಕಾರಣವಲ್ಲವೇ?
ಈ ಯೋಚನೆಗಳ ನಡುವೆ ಹೂವನ್ನು ಬಿಡಿಸುವ ಸರದಿ ಬಂದಿತು. ಪೂಜೆಗೆ ನಿತ್ಯವೂ ಹೂವನ್ನುಪಯೋಗಿಸುತ್ತೇವೆ. ಆದರೆ ಅಂದು ಗಿಡದ ಮೇಲೆ ನಗುತ್ತಿದ್ದ ಆ ಹೂವನ್ನು ನಮ್ಮ ದೇವರ ಪೂಜೆಗೆ ಕೊಯ್ಯುವುದು ನನಗೆ ಅಷ್ಟು ಹಿತವೆನಿಸಲಿಲ್ಲ. ದೇವರು ನಿತ್ಯತೃಪ್ತನು. ನಮ್ಮ ಪೂಜೆಯ ಮೂಲಕ ಅವನನ್ನು ಮೆಚ್ಚಿಸುತ್ತೇವೆ ಅನ್ನುವುದು ಹಾಸ್ಯಾಸ್ಪದವೇ ಸರಿ. ಅಂಥ ದೇವನ ಪೂಜೆಗೆ ಅವನದೇ ಸೃಷ್ಟಿಯಾದ ಹೂವನ್ನು ಅವನ ಸೃಷ್ಟಿಯೇ ಆದ ನಾವು ಉಪಯೋಗಿಸುವುದು ಒಂದು ರೀತಿ ಚೆನ್ನಾಗಿಯೇ ಕಂಡರೂ ("ಕೆರೆಯ ನೀರನು ಕೆರೆಗೆ ಚೆಲ್ಲಿ") ಇದರ ಅರ್ಥವೇನು ಎಂದು ಅನ್ನಿಸದೇ ಇರಲಿಲ್ಲ. ಹೂವನ್ನು ಬಿಡಿಸಿದ ತಕ್ಷಣ ಅದಕ್ಕೆ ಪ್ರಾಣವೇನಿದ್ದರೂ ಇಲ್ಲವಾಗುತ್ತದೆ. ಆ ನಿರ್ಜೀವಕುಸುಮಗಳಿಂದ ನಾವು ದೇವರ ಪ್ರತೀಕವನ್ನೋ ಮನೆಯನ್ನೋ ಸುಂದರ ಸ್ತ್ರೀಯೊಬ್ಬಳ ಕೃಷ್ಣಕಬರಿಯನ್ನೋ ಅಥವಾ ನಿರ್ಜೀವವೇ ಆದ ಗತಪ್ರಾಣವಾದ ದೇಹವನ್ನೋ ಅಲಂಕರಿಸುತ್ತೇವೆ. ಎಂಥ ವಿಪರ್ಯಾಸ!
ಆ ಹೂಗಳ ಅಸ್ತಿತ್ವ ಇದಕ್ಕಿಂತ ಹೆಚ್ಚಲ್ಲವೇ? ನಮ್ಮ ನಯನಮನೋಹರಣಕ್ಕಾಗಿಯೇ ಇವಿರುವುದು?
ಯಜ್ಞಗಳ ನೆನಪು ಬರದೇ ಇರಲಿಲ್ಲ. ಅಲ್ಲೂ ಹಿಂದೆ ಪಶುವಧೆ ಸಾಮಾನ್ಯವಾಗಿತ್ತು. ಯಜ್ಞಪಶುವು ಸ್ವರ್ಗಕ್ಕೆ ಹೋಗುವುದೆಂದು ಋತ್ವಿಜರ ನಂಬಿಕೆ. ಹಾಗೆಯೇ ಹೂವಿನ ಕೃತಕೃತ್ಯತೆ ದೇವರ ಪ್ರತೀಕದ ಸ್ಪರ್ಶಾಲಂಕಾರಗಳಲ್ಲಿಯೇ ಇರುವುದೆಂದು ನಮ್ಮಲ್ಲಿ ಬಹಳ ಜನರ ನಂಬಿಕೆಯಲ್ಲವೇ? ಹೂವು ದೇವರನ್ನು ಸೇರಿದರೆ ಮಾತ್ರ ಅದಕ್ಕೆ ಪುಣ್ಯವೆಂದು, ಹಾಗೆ ಮಾಡಿದಾಗ ಅದಕ್ಕೆ ಮಾಡಬಹುದಾದಂಥ ಎಲ್ಲ ಉಪಕಾರವನ್ನು ಮಾಡಿರುವುದಾಗಿಯೇ ನಮ್ಮ ಸಾಮಾನ್ಯ ಚಿಂತನೆ. ನಮ್ಮಿಂದ ಸೃಷ್ಟಿಮಾಡಲಾಗದ ವಸ್ತುಗಳಿಂದ ನಮ್ಮನ್ನು ಮೀರಿದ ಒಂದು ಕಲ್ಪನೆಯನ್ನು ಆರಾಧಿಸುತ್ತೇವೆ.
ಯುದ್ಧವೂ ಪೂಜೆಯಲ್ಲವೆ? ಅಲ್ಲಿ ಆರಾಧಿಸಲ್ಪಡುವ ದೈವ ಅವರವರ ದೇಶ/ಮತ ಅಥವಾ ಆ ಯುದ್ಧಗಳ ಧುರೀಣರ ಅಹಂಕಾರ. ಪೂಜೆಯ ಹೂಗಳೋ ಯುದ್ಧಮಾಡುವ ಸೈನಿಕರು. ಒಂದೇ ವ್ಯತ್ಯಾಸವೇನೆಂದರೆ ಗೆದ್ದರೆ ಮಾತ್ರ ಪೂಜೆ ಸಂದ ಹಾಗಾಗುವುದು. ಇಲ್ಲವೆಂದರೆ ಯುದ್ಧವೆಂಬ ಪೂಜೆ ನಿರರ್ಥಕವಾಗಿಬಿಡುವುದು. ನಿತ್ಯದ ಪೂಜೆಯಾದ ಮೇಲೆ ಆ ದಿನ ಮಾತ್ರ ದೇವರ ಮೇಲೆ ಹೂವಿರುತ್ತದೆ. ಇಂದಿನ ಪವಿತ್ರ ಹೂಗಳು ನಾಳಿನ ನಿರ್ಮಾಲ್ಯವಾಗಿ, ಗೌರವಕ್ಕೆ ಅರ್ಹವಾದರೂ, ವಿಸರ್ಜಿಸಬೇಕಾದುವು. ಯುದ್ಧದಲ್ಲೂ ಹಾಗೆಯೇ ಅಲ್ಲವೆ?
ಹೀಗೆ ಸಾಗಿದ ಯೋಚನೆಯ ಯಾನಕ್ಕೆ ರಸ್ತೆಯ ತಡೆ ಸಿಕ್ಕಿತು - ಕೆಳಗಿನಿಂದ ಮನೆಯವರ ಕೂಗು ಬಂದಿತ್ತು. ಆ ವೇಳೆಗೆ ಹೂವುಗಳನ್ನು ಬಿಡಿಸಾಗಿತ್ತು. ಕೆಲಸಕ್ಕೆ ಹೊತ್ತಾಗುತ್ತದೆ ಎಂದು ಬಗೆದು ಸರಸರನೆ ನಡೆದೆ.
ವಿ. ಸೂ - ಎಲ್ಲರಿಗೂ ಹೊಸ ೨೦೦೮ರ ಶುಭಾಶಯಗಳು. ಕೆಲಸ ಹೆಚ್ಚು. ಬರೆಯಲು ಸಮಯವೇ ಇಲ್ಲ. ಮೇಲಿನ ಬರಹದ ಸಂಗತಿಯಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ. ಈಗ ಮೇಲೆ ಹಾಕಲು ಸಮಯ ಬಂದಿತು. ಕೆಲಸದ ಮಾತನ್ನು ಬಿಡಿ - ಎಂದಿನಂತೆ ಹೆಚ್ಚಾಗಿಯೇ ಇದೆ :)