Tuesday, October 05, 2004

ಸುಮ್ಮನೆ ಹೀಗೆ !!

ಬೆಂಗಳೂರಿಗೆ ಬಂದು ಇಂದಿಗೆ ಸರಿಯಾಗಿ ತಿಂಗಳಾಗಿದೆ. ತಿಂಗಳು ಹೋದದ್ದೇ ತಿಳಿಯಲಿಲ್ಲ. ಮೂರು ವಾರ ಕೆಲಸ ಮಾಡಿದೆ. ನಾಲ್ಕನೇ ವಾರದ ಕೆಲಸ. ಈಗ ಸ್ವಲ್ಪ ತಿಳಿಯುತ್ತಾ ಬಂದಿದೆ - ಇಲ್ಲೇ ಇರಲು ಬಂದಿದ್ದೇನೆ ಅಮೇರಿಕಕ್ಕೆ ಮರಳಿ ಹೋಗುವುದಿಲ್ಲ ಎಂದು. ಪ್ರತಿ ದಿನ ಬೆಳಗ್ಗೆಯೂ ಎದ್ದು ಆಫೀಸಿಗೆ ಬರುವುದು. ನಂತರ ರಾತ್ರಿ ಮನೆಗೆ ಹೊರಡುವುದು. ದಿನಕ್ಕೆ ಹತ್ತು ಇಲ್ಲವೇ ಹನ್ನೆರಡು ಘಂಟೆಗಳ ಕೆಲಸ. ಮುಂಚೆಯೆಲ್ಲಾ ಕರಾರುವಾಕ್ಕಾಗಿ ವಾರಕ್ಕೆರಡು ಬಾರಿ ಬ್ಲಾಗಿಸುತ್ತಿದ್ದ ನಾನು ಒಂದಷ್ಟು ದಿನಗಳಿಂದ ಮಾಡಿಲ್ಲವೆಂದರೆ ಅದೆಷ್ಟು ಕೆಲಸವೋ ನೋಡಿ.

ಇರಲಿ, ಈಗ ನಾನು ಬ್ಲಾಗಿಸುತ್ತಿರುವುದು ನನ್ನ ಡಿ.ಎಸ್.ಎಲ್ ಗಾಗಿ ನಡೆಸುತ್ತಿರುವ ಪರದಾಟದ ಬಗ್ಗೆ. ಅಮೇರಿಕದಲ್ಲಿ ನಮ್ಮ ಮೈಮೇಲೆ ಬೀಳುವುದೊಂದು ಬಾಕಿ. ಹಾಗೆ ದುಂಬಾಲು ಬೀಳುತ್ತಿದ್ದರು ನಮ್ಮ ಇಂಟರ್ನೆಟ್ ಸರ್ವೀಸ್ ಹಾಕಿಸಿಕೊಳ್ಳಿ ಅಂತ. ಇಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ. ಒಂದು ಕಂಪನಿಯನ್ನು ಮಾತಾಡಿಸಿದೆ. ಪ್ರತಿದಿನವೂ ಅರ್ಧಘಂಟೆ ವ್ಯಯ ಮಾಡಿ ಫೋನಿಸಿದ ಒಂದು ವಾರದ ನಂತರ 'ನಿಮ್ಮ ಏರಿಯಾದಲ್ಲಿ ನಮ್ಮ ಸರ್ವೀಸ್ ಇಲ್ಲ. ಸಾರಿ' ಎಂಬ ಉತ್ತರ ಬಂದಿತು. ಬೇರೆಡೆ ಪ್ರಯತ್ನ ನಡೆಸಿದೆ. ಸಾಕಷ್ಟು ಮುಂದುವರೆದಿದ್ದೆ ಕೂಡ. ನಾನು ಈ ಕಂಪನಿಗೆ ಕೆಲಸ ಮಾಡುತ್ತಿದ್ದನೆಂದು ತಿಳಿಯಿತು. ಅದಕ್ಕೆ - 'ಸಾರ್, ನೀವು ಈ ಕಂಪನಿಯವರಾಗಿದ್ದರೆ ನಾನು ಸಹಾಯ ಮಾಡಲಾರೆ, ಇನ್ನೊಬ್ಬರು ಮಾಡುತ್ತಾರೆ' ಎಂದು ಹೇಳಿ ಇಡೀ ಕೆಲಸ ಮೊದಲಿನಿಂದ ಆರಂಭವಾಗಿದೆ. ಈಗಲೂ ಪ್ರತಿದಿನ ಹದಿನೈದು ನಿಮಿಷವಾದರೂ ಈ ಕಂಪನಿಯ ಜೊತೆ ಮಾತಾಡುತ್ತಿದ್ದೇನೆ. ಇನ್ನೂ ಫಲ ಸಿಕ್ಕಿಲ್ಲ. ಸಿಕ್ಕಿದ ನಂತರ ಹೇಳುತ್ತೇನೆ. ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಪ್ರತಿದಿನವೂ ದಿನಪತ್ರಿಕೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಓದುತ್ತಲೇ ಇರುತ್ತೇನೆ. ಅದೆಷ್ಟು ಚಟುವಟಿಕೆಗಳು! ಆದರೆ ಎಲ್ಲವೂ ಬೆಳಗ್ಗೆ ಅಥವಾ ಮಧ್ಯಾಹ್ನ ಇರುತ್ತ್ರವೆ. ಅಭಿಯಂತಾರರಾದ ನಮ್ಮಂಥವರಿಗೆ ಹೇಳಿ ಮಾಡಿಸಿದ್ದಲ್ಲ! ನೋಡಿ ನೋಡಿ ಬೇಜಾರು ಮಾಡಿಕೊಳ್ಳುವುದು ನನ್ನ ದೈನಂದಿನ ಪಾಡು.

ಅಂದ ಹಾಗೆ ಒಂದು ತಿಂಗಳಲ್ಲಿ ಒಂದು ಚಲನಚಿತ್ರವನ್ನೂ ಪೂರ್ಣವಾಗಿ ನೋಡಿಲ್ಲ. ಟಿ.ವಿ.ಯಲ್ಲೂ ಸೇರಿಸಿ! ಅಂದರೆ ಅಷ್ಟು ಸಮಯವಿಲ್ಲವೆಂದಲ್ಲ. ಅಷ್ಟು ಚ್ಯಾನಲ್ ಟಿ.ವಿ.ಯಲ್ಲಿದೇ ಎಂಬುದೇ ಕಾರಣ! ದಿನವೂ ನಮ್ಮ ತಾಯಿ-ತಂದೆ 'ಮುಕ್ತ' ಎಂಬ ಧಾರಾವಾಹಿ ನೋಡುತ್ತಾರೆ. ಪರವಾಗಿಲ್ಲ ಧಾರಾವಾಹಿ. ಆದರೆ ಇದಿಲ್ಲದೇ ಊಟವನ್ನೇ ಮಾಡುವುದಿಲ್ಲ ಎಂದು ಹೇಳುವ ನಮ್ಮ ತಾಯಿಯಂತೆ ನಾನಲ್ಲ.

ಅಚಾನಕ್ಕಾಗಿ ಕೆಲವು ದಿವಸಗಳ ಹಿಂದೆ ಅಮೇರಿಕದಲ್ಲಿರುವ ತಂದೆ ಸಮಾನರಾದ ಹಿರಿಯರಿಗೆ ಹೃದಯಾಘಾತವಾಗಿ ನಮಗೆಲ್ಲ ಬಹಳ ಬೇಜಾರಾಗಿದೆ. ಅವರು ಹೋರಾಟ ನಡೆಸುತ್ತಿದ್ದಾರೆ. ನಾವು ಇಲ್ಲಿದ್ದುಕೊಂದು ಏನೇನು ಮಾಡಲಾರದೆ ಬರೇ ಪ್ರಾರ್ಥನೆಯ ಮೊರೆಯನ್ನು ಹೊಕ್ಕಿದ್ದೇವೆ. ಆ ಭಗವಂತನೇ ತನ್ನ ಭಕ್ತನನ್ನು ಕಾಪಿಡಬೇಕು. ಈ ಘಟನೆ ನನ್ನ ಮನಸ್ಸಿನಲ್ಲಿ ನಾನಾ ವಿಚಾರಗಳನ್ನು ಸ್ಫುರಿಸಿತು. ಈ ವಿಚಾರಗಳನ್ನು ನಂತರದ ಬ್ಲಾಗಿಸುತ್ತೇನೆ. ಸದ್ಯಕ್ಕೆ ಇಷ್ಟು ಸಾಕು. || ಇತಿ ಶಮ್ ||

1 comment:

Anonymous said...

ಚೆನ್ನಾಗಿಯೆ ಬರಿತಿರಾ ;) ಸ್ವಲ್ಪಾ ಟೈಮ್ ತೊಗೊಂಡು ಇನ್ನೂ ಚೆನ್ನಾಗಿ ಬರಿಯುವೆರಿ ಅನುಕೂಂತಿನಿ.

bigerck@yahoo.com