Thursday, May 26, 2005

ಏಳು ನೂರು ಅಡಿಯ ಬುದ್ಧನ ಮೂರ್ತಿ ರಾಮನಗರದ ಬಳಿ

ಈಚೆಗೆ ಶಾರುಖ್ ಖಾನ್ ಮತ್ತು ಇನ್ನಷ್ಟು ನಟನಟಿಯರು ಬೆಂಗಳೂರಿನಲ್ಲಿ ಒಂದು ಷೋ ಮಾಡಿದ್ದರು. ಅದು ನಡೆದದ್ದು ಸಂಘಮಿತ್ರ ಫೌಂಡೇಶನ್ ಎಂಬ ಸಂಘಟನೆಯ ಅಡಿಯಲ್ಲಿ. ಇದರ ಉದ್ದೇಶ ಒಂದು ಮಹತ್ವಾಕಾಂಕ್ಷೆಯ ಗುರಿಯಾಗಿತ್ತು. ಆ ಗುರಿಯೇನೆಂದರೆ - ಏಳುನೂರು ಆಡಿಯ ಬುದ್ಧನ ವಿಗ್ರಹದ ಸ್ಥಾಪನೆ.

ವಿಗ್ರಹವೆಲ್ಲಿ ಎಂದು ಶೀರ್ಷಿಕೆಯಲ್ಲೇ ಬರೆದಿದ್ದೇನೆ. ಬೆಂಗಳೂರಿನ ಬಳಿಯಲ್ಲಿರುವ ರಾಮನಗರದಲ್ಲೇ. ನಿಮಗೆ ಜ್ಞಾಪಕವಿರಬಹುದು - ಶೋಲೆ ಎಂಬ ಭಾರೀ ಹಿಂದೀ ಚಿತ್ರದ ಚಿತ್ರೀಕರಣ ಇಲ್ಲೇ ನಡೆದದ್ದು.

ಮೂರ್ನಾಲ್ಕು ವರ್ಷದ ಹಿಂದೆ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಬಾಮಿಯಾನ್ ಎಂಬ ಸ್ಥಳದಲ್ಲಿ ಬೃಹತ್ತಾದ ಬುದ್ಧನ ಪ್ರತಿಮೆಗಳನ್ನು ಮದ್ದನ್ನಿಟ್ಟು ಸಿಡಿಸಲಾಯ್ತು. ಇದೀಗ ಬೆಂಗಳೂರಿನಲ್ಲಿ ಇದರ ಪುನರ್ಜನ್ಮವೆಂಬಂತೆ ತೋರುತ್ತಿದೆ.

ಹೊರಗಿನಿಂದ ನೋಡಿದರೆ ಒಳ್ಳೆಯ ಆಲೋಚನೆಯೆಂದೆನಿಸಬಹುದು. ಗೌತಮ ಬುದ್ಧ ನಮ್ಮ ದೇಶದ ದಾರ್ಶನಿಕಶ್ರೇಷ್ಠರಲ್ಲಿ ಅಗ್ರಗಣ್ಯ. ಅವನ ಶಾಂತಿ ಸಂದೇಶ ಪ್ರಪಂಚದಾದ್ಯಂತ ಹರಡಿದೆ. ಅವನ ತತ್ತ್ವಚಿಂತನೆ ಆಳವಾಗಿದ್ದು ವಿಶ್ವದಲ್ಲೆಡೆ ಅವನ ಅನುಯಾಯಿಗಳಿದ್ದಾರೆ. ಅವನ ಜನ್ಮದ ದೇಶವಾದ ಭಾರತದಲ್ಲಿ ಅವನ ಗುರುತಿಗಾಗಿ ಏನಿಲ್ಲ. ಆದ್ದರಿಂದ ಈ ಮೂರ್ತಿನಿರ್ಮಾಣದ ಕಾರ್ಯ ಒಳ್ಳೆಯದೆ ಎಂದು ತೋರುತ್ತದೆ.

ಆದರೆ ವಸ್ತುಸ್ಥಿತಿ ಬೇರೆ. ರಾಮನಗರದ ಪ್ರದೇಶ ಹಲವು ಸಸ್ಯ ಹಾಗೂ ಪ್ರಾಣಿಸಂಕುಲಗಳಿಗೆ ಸ್ಥಾನವಾಗಿದೆ. ಅಲ್ಲಿ ಇವರ ಕಾರ್ಯಕ್ರಮ ನೋಡಿದರೆ - ಒಳ್ಳೆ ಡಿಸ್ನಿಲ್ಯಾಂಡ್ ರೀತಿಯಲ್ಲಿ ಬುದ್ಧಲ್ಯಾಂಡ್ ಮಾಡಲು ಹೊರಟಿದ್ದಾರೆ. ಅದಕ್ಕೆ ಬೇಕಾಗುವ ಸ್ಥಳ ಹಲವು ಎಕರೆಗಳಷ್ಟು. ಇವೆಲ್ಲವನ್ನು ನೆಲಸಮಮಾಡಿಯೇ ಬೇರೆ ಕೆಲಸ ಸಾಧ್ಯ. ಈ ಸಸ್ಯ ಮತ್ತು ಪ್ರಾಣಿಸಂಕುಲಗಳ ನಿರ್ನಾಮಕ್ಕೆ ಬುದ್ಧನ ಒಪ್ಪಿಗೆ ಎಂದಿಗೂ ಸಿಗುತ್ತಿರಲಿಲ್ಲ.

ಇದನ್ನು ವಿರೋಧಿಸಿ ಪರಿಸರಾಂದೋಲನ ಸಂಸ್ಥೆಗಳು ಸರ್ಕಾರಕ್ಕೆ ಪತ್ರಗಳನ್ನು ಬರೆದಿವೆ. ಇದರ ವಿರುದ್ಧ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಆದರೆ ಸರ್ಕಾರವನ್ನು ಈ ಸಂಘಮಿತ್ರ ಸಂಸ್ಥೆ ತನ್ನ ಬುಟ್ಟಿಯಲ್ಲಿ ಹಾಕಿಕೊಂಡಿರುವಂತಿದೆ.

ನನ್ನ ಪ್ರಶ್ನೆ ಹೀಗಿದೆ. ಇವರಿಗೆ ಬುದ್ಧನ ಪ್ರತಿಮೆಯನ್ನು ಮಾಡುವಷ್ಟು ಭಕ್ತಿಯಿದ್ದರೆ - ಬರಗಾಲ ಪೀಡಿತವಾದ ಉತ್ತರಕರ್ಣಾಟಕದ ರಾಯಚೂರು, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ಮಾಡಬಹುದಿತ್ತು. ಇದರಿಂದ ಅಲ್ಲಿನ ಜನಗಳಿಗೆ ಉದ್ಯೋಗಾವಕಾಶ ದೊರೆಯುತ್ತಿತ್ತು. ರಾಮನಗರ ಬೆಂಗಳೂರಿನ ತೀರಾ ಸಮೀಪದಲ್ಲಿದೆ. ಇಲ್ಲಿನ ಜನರು ಉದ್ಯೋಗಕ್ಕೆ ಬೆಂಗಳೂರಿಗೇ ಬರಬಹುದು. ಆದರೆ ಈ ಸ.ಸಂ ನ ಉದ್ದೇಶ ಅಷ್ಟು ಒಳ್ಳೆಯದಲ್ಲವೆಂಬಂತೆ ತೋರುತ್ತದೆ. ಬೆಂಗಳೂರಿನ ಬಳಿಯಲ್ಲಿ ಮಾಡಿದರೆ ತಂಡೋಪತಂಡವಾಗಿ ಬೆಂಗಳೂರಿನ ಜನರು ನುಗ್ಗುತ್ತಾರೆ. ಯಾವುದೋ ದೂರದ ಹಳ್ಳಿಯಲ್ಲಿ ಮಾಡಿದರೆ ಪ್ರಯೋಜನವಾದರೂ ಏನು?

ದುರದೃಷ್ಟವಶಾತ್ ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದರು. ಇದು ದುರದೃಷ್ಟ ಹೇಗೆಂದರೆ - ಇವರ ಬೆಂಬಲಿಗರಾದ ದಲಿತರನ್ನು ಸುಲಭವಾಗಿ ಈ ಸಂಸ್ಥೆ ಮರುಳು ಮಾಡುತ್ತದೆ. ಈ ಪ್ರತಿಮೆಯನ್ನು ವಿರೋಧಿಸುವವರನ್ನು ತಮ್ಮ ದಲಿತ ಜನಾಂಗದ ವೈರಿಗಳಾಗಿ ಕಾಣಲು ಸ.ಸಂ ಕುಚೋದ್ಯ ಮಾಡಬಹುದು - ಮಾಡಿಯೇ ಮಾಡುತ್ತದೆ. ಇದನ್ನು ತಿಳಿದೇ ಹಲವು ದಲಿತ ಮುಖಂಡರು ತಮ್ಮ ಪಂಗಡಕ್ಕೆ ಹೆಸರು (ಪಬ್ಲಿಸಿಟಿ) ಬರಲಿ ಎಂದು ಇವರ ಜೊತೆ ಸೇರುತ್ತಾರೆ. ಆಗ ಪರಿಸ್ಥಿತಿ ತೀರಾ ಹದೆಗೆಡುತ್ತದೆ. ಪಾಪ, ಅಂಬೇಡ್ಕರರು ದೇಶಭಕ್ತರು. ಜಾತೀಯತೆಯ ಸೋಂಕಿಲ್ಲದ ಭಾರತೀಯ ಮೂಲದ್ದೇ ಆದ ಬೌದ್ಧಧರ್ಮವನ್ನು ಸ್ವೀಕರಿಸಿದಾಗ ಇದರ ಅರಿವು ಅವಿರಿಗಿರಲಿಲ್ಲ. ದಲಿತರಿಗೆ ಬೌದ್ಧ ಧರ್ಮ (ನವಬೌದ್ಧರೆಂದೇ ಇವರು ಕರೆಯಲ್ಪಡುವುದು) ಕೇವಲ ಒಂದು identity ಆಗಿದೆ. ಜೊತೆಗೆ ಬಂಡಾಯದ ಸಂಕೇತವೂ ಆಗಿದೆ. ಆದರೆ ಅದರ ತತ್ತ್ವಶ್ರೀಯನ್ನು ಅವರೆಂದು ಕಂಡಾರೋ!

ಸರ್ಕಾರಕ್ಕೆ ಬುದ್ಧಿ ಬಂದು ಇದನ್ನು ಮಂಜೂರು ಮಾಡದೇ ಇರಲಿ ಎಂದು ಬುದ್ಧನನ್ನೇ ಪ್ರಾರ್ಥಿಸುವ.

|| ಇತಿ ಶಮ್ ||

No comments: