ಮೊನ್ನೆ ನಾನು ಒಂದು ವರ್ಷದಲ್ಲಿ ಎರಡನೆ ಸಲ ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲು ಹೋಗಿದ್ದೆ. "ಜೋಗಿ" ಎಂಬ ಶಿವರಾಜಕುಮಾರ್ ಅಭಿನಯದ ಚಿತ್ರ ಇಲ್ಲಿ ಸಾಕಷ್ಟು ಹೆಸರು ಮಾಡಿದೆ. ಪತ್ರಿಕೆಗಳೆಲ್ಲಾ ಇದರ ಹೊಗಳಿಕೆ ತುಂಬಿದೆ. ಸುಧಾ ಪತ್ರಿಕೆಯಲ್ಲಂತೂ "ಜೋಗಿ" ಚಿತ್ರದ ಮೇಲೆ ಒಂದು ಲೇಖನವನ್ನೇ ಪ್ರಕಟಿಸಿದ್ದಾರೆ. ಇರಲಿ. ಈ ಚಿತ್ರ ನೋಡಲು ಹೋದರೆ ರಾತ್ರಿಯ ಪ್ರದರ್ಶನಕ್ಕೆ "ಆಟೋ ಶಂಕರ್" ಎಂಬ ಚಿತ್ರ ನಡೆಯುತ್ತಿತ್ತು. ಸರಿ ಬಿಡು. ಇಷ್ಟು ದೂರ ಬಂದಿದ್ದೇನಲ್ಲಾ ಇದನ್ನೇ ನೋಡೋಣವೆಂದು ಚಿತ್ರಮಂದಿರದಲ್ಲಿ ಕುಳಿತೆ. ಈ ಚಿತ್ರಮಂದಿರಗಳಲ್ಲಿ "DTS" ಫಲಕ ಹಾಕಿಕೊಂಡರೂ ಹಾಗೇನು ಇರುವುದಿಲ್ಲ. ಬರೇ ಸದ್ದು ಗದ್ದಲ ಅಬ್ಬರ. ಹಾಡಿನ ಸಾಲುಗಳೂ ಕೇಳುವುದಿಲ್ಲ - ಸಂಗೀತದ (?) ಅಬ್ಬರ ಅಷ್ಟು ಹೆಚ್ಚು.
ಈ ಚಿತ್ರದಲ್ಲಿ ಖಳನಾಯಕಿ ಶಿಲ್ಪಾಶೆಟ್ಟಿ ಒಬ್ಬ ಲೇವಾದೇವಿ ವ್ಯಾಪಾರಿಯ ಸಾಕುಮಗಳು. ಚಿತ್ರದ ಇಪ್ಪತ್ತು ಮೂವತ್ತು ನಿಮಿಷಗಳಿಗೂ ಹೆಚ್ಚಾಗಿ ಅವಳು ಮಾಡುವ ಸಾಲ ವಸೂಲಿಯ ವೈಖರಿಯೇ ತೋರಿಸಿದ್ದಾರೆ. ಮೊದಲಿಗೆ ರಮೇಶ್ ಭಟ್ ನ ತಂಗಿ ಮದುವೆಗೆ ಕಲ್ಲು ಹಾಕಿ ಅವಳು ಆತ್ಮಹತ್ಯೆಮಾಡಿಕೊಳ್ಳುವ ಹಾಗೆ ಮಾಡುತ್ತಾಳೆ. ನಂತರ ಪೋಲೀಸರನ್ನು ಕರೆದು ತಂದ ರಮೇಶ್ ಭಟ್ ಗೆ ಕೆಟ್ಟದಾಗಿ ಅವಮಾನ ಮಾಡಿ ಹೊಡೆಸುತ್ತಾಳೆ. ಇವಿಷ್ಟೂ ಏಕೆಂದರೆ ರಮೇಶ್ ಭಟ್ ಇವರ ಬಳಿ ಸಾಲ ಮಾಡಿರುತ್ತಾನೆ.
ನಮ್ಮ ಭಾರತದಲ್ಲಿ ಜಾಗತೀಕರಣದಿಂದ ಎಲ್ಲೆಲ್ಲೂ ಹಣದ ಹೊಳೆ ಹರಿಯುತ್ತಿದೆ. ನಮ್ಮಲ್ಲಿಯೂ ಕೊಳ್ಳುಬಾಕ ಸಂಸ್ಕೃತಿ ಮನೆ ಮಾಡಿದೆ. ದುಡ್ಡಿದ್ದವರಿಗೆ ಪರವಾಗಿಲ್ಲ. ತೃಪ್ತರಿಗೆ ಪರವಾಗಿಲ್ಲ. ಆದರೆ ಬಹಳಷ್ಟು ಜನ ಈ ಹಿಂದಿನ ಎರಡೂ ವರ್ಗಗಳಿಗೆ ಸೇರದವರು. ಆದರೆ ಆರ್ಥಿಕ ಸಂಸ್ಥೆಗಳು ಸಾಲಗಳನ್ನು ನೀಡುವುದನ್ನು ಮೊದಲು ಮಾಡಿವೆ. ಹತ್ತು ವರ್ಷಗಳ ಹಿಂದೆ ಸಾಲದ ಚೀಟಿ (ಕ್ರೆಡಿಟ್ ಕಾರ್ಡ್ ಗೆ ನಾನು ಕೊಟ್ಟ ಹೆಸರು)ಯ ಹಾವಳಿ ಇರಲಿಲ್ಲ. ನಾನು ಅದನ್ನು ಮೊದಲು ನೋಡಿ ಉಪಯೋಗಿಸಿದ್ದು ಅಮೇರಿಕದಲ್ಲಿಯೇ. ಸಾಲದ ಚೀಟಿಯ ಉಪಯುಕ್ತತೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಬ್ಯಾಂಕುಗಳೂ ಜೀವಿಸಬೇಕಲ್ಲ? ದುಡ್ಡನ್ನು ಸಕಾಲದಲ್ಲಿ ಕಟ್ಟದವರಿಗೆ ಹೆಚ್ಚಿನ ಬಡ್ಡಿ ದರ ಹಾಕಿ ಇನ್ನೂ ಹೆಚ್ಚು ದುಡ್ಡು ಕೀಳುತ್ತಾರೆ. ದುಡ್ಡು ಕೊಡಲು ಆಗದೆ ಇರುವವರ ಬಳಿ ಹೋಗಿ ಪಡೆಯುತ್ತಾರೆ.
"ಪಡೆಯುತ್ತಾರೆ" ಅಂದೆನಲ್ಲ, ಅದನ್ನು ಸುಮ್ಮನೆ ಹೇಳಿದೆ. ವಾಸ್ತವವಾಗಿ ನಡೆಯುವುದು ಬೇರೆ. ಕಂಪನಿಗಳು ಸಾಲ ಹಿಂದಿರುಗಿಸದವರನ್ನು ಹದ್ದಿನಲ್ಲಿಡಬೇಕಾದರೆ ಪೋಲೀಸರಿಗೆ ಶರಣು ಹೋಗಲು ಆಗುವುದಿಲ್ಲ. ಆದ್ದರಿಂದ ಅವರು ರೌಡಿಗಳ ಮೊರೆ ಬೀಳುತ್ತಾರೆ. ಸಾಲದ ಗಡುವು ಮುಗಿದ ಮೇಲೆ ರೌಡಿಗಳನ್ನು ಛೂ ಬಿಟ್ಟು ಸಾಲತೆಗೆದವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಾರೆ. ಅವರ ಸಾಮಾನುಗಳನ್ನು ಕೊಂಡೊಯ್ಯುತ್ತಾರೆ. ಈ ವಿಷಯ ಥಳುಕಿನ ಜಾಹಿರಾತುಗಳಲ್ಲಿ ಕಾಣುವುದಿಲ್ಲ.
ಇದೇ ವಿಚಾರವನ್ನು ಆಟೋ ಶಂಕರ್ ಚಿತ್ರ ಒಳಗೊಂಡಿದೆ.
ಆದರೆ ಇನ್ನೂ ಮೂಲಭೂತವಾದ ಪ್ರಶ್ನೆ - ಸಾಲವನ್ನು ಸ್ವೀಕರಿಸುವುದು ಮತ್ತು ಅದನ್ನು ಹಿಂದಿರುಗಿಸಲಾಗದೇ ಇರುವುದು. ಸಾಲ ತೆಗೆದುಕೊಳ್ಳುವ ಮುಂಚೆ ಅದನ್ನು ತೀರಿಸಬೇಕೆಂಬ ಜವಾಬ್ದಾರಿಯಿರಬೇಡವೇ? ಸಾಲ ತೆಗೆದು "ಮಜಾ" ಮಾಡಿದ ಮೇಲೆ ಕಂತು ಕಟ್ಟಲು ಆಗದೇ ಒದ್ದಾಡುವರು ಹಲವರು! ಇಂಥವರಿಗೆ ಆ ಚಿತ್ರದಲ್ಲಿ ಆದ ಅವಮಾನ ಭಯಾನಕ. ಹೆಂಡತಿಯ ಕೈಯಲ್ಲಿ ಗಂಡನಿಗೆ ಚಪ್ಪಲಿ ಏಟು ಕೊಡಿಸುವುದು. ಚೆನ್ನಾಗಿ ಮನಬಂದಂತೆ ಥಳಿಸುವುದು. ಇತ್ಯಾದಿ.
"ಹಾಸಿಗೆ ಇದ್ದಷ್ಟು ಕಾಲು ಚಾಚು" ಎನ್ನುವುದು ನಮ್ಮ ದೇಶದ ಹಳೆಯ ನಾಣ್ಣುಡಿ. ಈಗಿನ ಕಾಲದಲ್ಲಿ ಇದರ ಪಾಲನೆ ಅಷ್ಟು ಹೆಚ್ಚು ಕಾಣುತ್ತಿಲ್ಲ. ದುರಾಸೆಯೆನ್ನುವುದು ಪ್ರತಿಯೊಬ್ಬರರನ್ನೂ ಕಾಡಿದೆ. ಇದಕ್ಕೆ ವಿನಿವಿಂಕ್ ನಂತಹ ಕಾಲದಿಂದ ಕಾಲಕ್ಕೆ ಆಗುವ ಹಗರಣಗಳೇ ಸಾಕ್ಷಿ. ಈಗ ಯಾವುದಾದರೂ ಒಂದು ಸಂಸ್ಥೆ ನಾವು ನಿಮಗೆ ಶೇಕಡಾ ಇಪ್ಪತ್ತರಷ್ಟು ಬಡ್ಡಿ ನೀಡುತ್ತೇವೆ ಎಂದರೆ ಎಂಥವರಾದರೂ ಹುಬ್ಬು ಹಾರಿಸುವುದಿಲ್ಲವೇ? ಆದರೂ ಅಂಥವರೇ ಕೊನೆಗೆ ಅಲ್ಲಿ ದುಡ್ಡು ನಿವೇಶಮಾಡಿ ಸಂಪಾದಿಸಿದ್ದನ್ನೆಲ್ಲಾ ಕಳೆದುಕೊಂದು ಗೋಳಾಡುವುದು ಸಾಮಾನ್ಯದ ದೃಶ್ಯವಾಗಿಬಿಟ್ಟಿದೆ. ಈಗಂತೂ ಈ.ಟಿ.ವಿ, ಉದಯ ಟಿ.ವಿ. ಗಳಲ್ಲಿ ಮೂಡುವ ಕ್ರೈಂ ಕಾರ್ಯಕ್ರಮಗಳಲ್ಲಿ ಈ ರೀತಿಯ ಹಗರಣಗಳನ್ನು ಚೆನ್ನಾಗಿ ವಿವರಿಸುತ್ತಾರೆ. ಜನರಲ್ಲಿ ಸ್ವಲ್ಪ ಜಾಗೃತಿ ಹೆಚ್ಚಿರಬೇಕು ಎಂದು ನಾವು ಎಣಿಸಬಹುದು. ಆದರೆ ನನ್ನ ಪ್ರಕಾರ ಹಾಗೇನು ಆಗುವುದಿಲ್ಲ.
೧೯೨೦ರ ಆಸುಪಾಸಿನ ದಶಕದಲ್ಲಿ ಗೋಪಾಲಸ್ವಾಮಿಯೆನ್ನುವವನು ಬೆಂಗಳೂರಿನಲ್ಲಿ ಇದೇ ರೀತಿಯ ಹಗರಣ ಮಾಡಿದ್ದ. ಬಹಳಷ್ಟು ಗಣ್ಯರು ಅವನಲ್ಲಿ ದುಡ್ಡನ್ನಿಟ್ಟಿದ್ದರು (ಸಿ.ವಿ.ರಾಮನ್ ಸಹ!). ಆದರೂ ಇವರೆಲ್ಲಿಗೂ ಪಂಗನಾಮ ಹಾಕಿದ ನಿಸ್ಸೀಮ ಗೋಪಾಲಸ್ವಾಮಿ. ಇವನೊಬ್ಬ ದಂತಕಥೆಯ ಮಟ್ಟಿಗೆ ಬೆಳೆದರೂ ಜನರು ಕ್ರಮೇಣ ಅವನನ್ನು ಮರೆತರು. ಮರೆತಾಗಲೇ ಉಪನಿಷದ್ವಾಕ್ಯಗಳನ್ನು ಹೇಳಿ ಜನರಿಗೆ ಮೋಡಿ ಮಾಡಿ ನಂತರ ಮೋಸಮಾಡಿದ ಶ್ರೀನಿವಾಸ ಶಾಸ್ತ್ರಿಯಲ್ಲಿ ಗೋಪಾಲಸ್ವಾಮಿಯ ಪುನರವತಾರವಾದದ್ದು! ದುಡ್ಡಿಟ್ಟವರಲ್ಲಿ ಈ ಸಲವೂ ಬಡಬಗ್ಗರೂ, ಗಣ್ಯರೂ, ಸಾಮಾನ್ಯರೂ ಎಲ್ಲರೂ ಸೇರಿದ್ದರು. ಮತ್ತೊಮ್ಮೆ ಹೀಗೇಕಾಯ್ತು?
ದುರಾಸೆಯೆನ್ನುವುದು ಮನುಷ್ಯನ ಸ್ವಭಾವಗುಣ. ಎಲ್ಲರಲ್ಲೂ ಅದು ತಕ್ಕ ಮಟ್ಟಿಗೆ ಇದ್ದೇ ಇರುತ್ತದೆ. ಈಗ ಕಾಣಿಸಿಲ್ಲವೆಂದರೆ ಒಂದು ವರ್ಷವಾದ ಮೇಲೆ ಕಾಣಿಸಬಹುದು ಈ ಚಟ. ಇದು ಹೋಗುವವರೆಗೂ ಶ್ರೀನಿವಾಸ ಶಾಸ್ತ್ರಿಯಂಥ ಆಷಾಢಭೂತಿಗಳು ಜನರನ್ನು ಮೋಸಗೊಳಿಸುತ್ತಲೇ ಇರುತ್ತಾರೆ.
ಸರಿ, ಸಾಲದಿಂದ ಬಡ್ಡಿಯಾಸೆಗೆ ಬಂದದ್ದಾಯ್ತು. ಮತ್ತೆ ಸಾಲಕ್ಕೆ. ಸಾಲ ಸಾಮಾನ್ಯವಾಗಿ ಏಕೆ ಬೇಕಿರುತ್ತದೆ ಎಂದು ನೋಡಬೇಕು. ನಾನು ನೋಡಿದ ಹಾಗೆ ಮದುವೆ, ಹೊಸಮನೆ ಖರ್ಚು, ವಾಹನಖರೀದಿ ಇತ್ಯಾದಿಗಳೇ ಕಾರಣ. ಈಗ ಸಾಲ ಪಡೆಯುವ ಮುಂಚೆ ಇವರ ಅವಸ್ಥೆ ಸ್ವಲ್ಪ ಸುಮಾರಾಗಿಯೇ ಇರುತ್ತದೆ. ಆದರೆ ಸಾಲ ಪಡೆಯುವವರಲ್ಲಿ ಹೊಟ್ಟೆ-ಬಟ್ಟೆಗೆ ಸಾಮಾನ್ಯವಾಗಿ ಮೋಸವಿರುವುದಿಲ್ಲ. ಒಂದು ಹಂತಕ್ಕೆ ಬಂದಾಗ ಮನುಷ್ಯರು ಮೇಲೆ ನೋಡಲು ಆರಂಭಿಸುತ್ತಾರೆ. ಈ ಕೀರ್ತಿಯ ಆಸೆ, ನಮ್ಮ ಸುತ್ತಮುತ್ತಲಿನವರಿಗಿಂತ ಚೆನ್ನಾಗಿ ಬಾಳಬೇಕೆನ್ನುವಾಸೆ - ಈ ಆಸೆಯೇ ಎಲ್ಲ ದುಃಖಗಳಿಗೂ ಮೂಲವೆಂದೆನಿಸುತ್ತದೆ. ಆಸೆ, ನನ್ನ ಪ್ರಕಾರ, ತಪ್ಪಲ್ಲ. ಆದರೆ ಅದರ ಹಿಂದೆ ಬುದ್ಧಿಯ ಕೆಲಸ ಹೆಚ್ಚಿನದಾಗಿರಬೇಕು. ಉದಾಹರಣೆಗೆ : ನನಗೂ ಫೆರಾರಿ ಕಾರ್ ಕೊಳ್ಳಲು ಇಷ್ಟ. ಆದರೆ ಅದನ್ನು ಕೊಳ್ಳಲು ಸಾಲ ಮಾಡಲೇನು ಹೊರಟಿಲ್ಲವಲ್ಲ? ನಮ್ಮ ಇತಿಮಿತಿಗಳೇನು ಎಂಬ ತಿಳಿವಳಿಕೆ ಬೇಕು. (ಇರಲಿ - ಉಪದೇಶ ಮಾಡಲು ನಾನು ಯೋಗ್ಯನಲ್ಲ. ಇಲ್ಲಿಯೇ ಈ ರೀತಿಯ ಯೋಚನಾಸರಣಿಯನ್ನು ಕತ್ತರಿಸುತ್ತೇನೆ).
ಈ ಆಸೆ ಎಂದು ಹೇಳಿದೆನಲ್ಲ, ಅದೇ ಅನರ್ಥಗಳೆಲ್ಲಕ್ಕೂ ಕಾರಣವೆಂದು ತೋರುತ್ತದೆ. ಭಗವಾನ್ ಬುದ್ದನೂ ಈ ಮಾತನ್ನು ಅನುಮೋದಿಸುತ್ತಾನೆ ಅನ್ನುವುದರಲ್ಲಿ ಅನುಮಾನವೇ ಇಲ್ಲ! ನಮ್ಮನ್ನು ಹೇಗೆ ಈ ಆಸೆ ಆಟವಾಡಿಸುತ್ತದೆ ಎಂದು ನೋಡಿದಾಗ ನಾವೆಷ್ಟು ಆಸೆಯ ಗುಲಾಮರು ಎಂದು ಕಾಣುತ್ತದೆ.
ನಮ್ಮ ಧರ್ಮದಲ್ಲಿ ಅರ್ಥಕಾಮಗಳಿಗೆ ಪುರುಷಾರ್ಥದ ಸ್ಥಾನವನ್ನು ನೀಡಲಾಗಿದೆ. ಆದರೆ ಧರ್ಮಮೋಕ್ಷಗಳೆಂಬ ಎರಡು ಸೀಮಾರೇಖೆಗಳ ಮಧ್ಯೆ ಹರಿಯತಕ್ಕಂಥ ನದಿಗಳಿವು ಎನ್ನುವುದು ಹಿರಿಯರ ಮಾತು. ಆಸೆಯನ್ನು ಮಿತಿಗೊಳಿಸುವುದನ್ನು ನಮ್ಮ ಗ್ರಂಥಗಳಲ್ಲಿ ಎಷ್ಟು ಹೊಗಳಿದ್ದಾರೆ! ಆದರೆ ಇಂದಿನ ಪರಿಸ್ಥಿತಿ ನೋಡಿದಾಗ ಆಚರಣೆಗೂ ಗ್ರಂಥಕ್ಕೂ ಏನೇನೂ ಸಂಬಂಧವಿಲ್ಲವೆನ್ನುವುದು ಸ್ಪಷ್ಟ. ಹೇಳಿಲ್ಲವೇ - "ಪುರಾಣ ಓದುವುದಕ್ಕೆ ಬದನೇಕಾಯಿ ತಿನ್ನುವುದಕ್ಕೆ" ಎಂದು!
ಆಟೋ ... ಚಿತ್ರದ ನಂತರ ಟಿ.ವಿ.ಯಲ್ಲಿ "ಸ್ವಲ್ಪ adjust ಮಾಡ್ಕೊಳ್ಳಿ" ಚಿತ್ರ ನೋಡಿದೆ. ಇಲ್ಲಿಯೂ ದುರಾಸೆಯಿಂದ ಸಾಲ ಸ್ವೀಕರಿಸಿ ವಾಪಸ್ ಕೊಡಲು ಆಗದೇ ಪಡುವ ಪಾಡು ಕಾಣುತ್ತದೆ. ಆತ್ಮಹತ್ಯೆಯವರೆಗೂ ಚಿತ್ರದ ಪಾತ್ರವೊಂದು ಹೋಗುತ್ತದೆ. ಈ ರೀತಿಯ ಚಿತ್ರಗಳನ್ನು ನೋಡಿ ಜನರು ಎಚ್ಚೆತ್ತುಕೊಳ್ಳಬೇಕು ಅಂದುಕೊಂಡಿದ್ದೇನೆ. "ಆಟೋ " ಚಿತ್ರದಲ್ಲಿ ಪಾತ್ರವೊಂದರ ಬಾಯಲ್ಲಿ ಕೂಡ "ಗಂಜಿ ಕುಡಿದಾದರೂ ಜೀವನ ಮಾಡಬಹುದು. ಸಾಲ ಮಾತ್ರ ತೊಗೋಬಾರದು" ಎಂಬಂತೆ ಮಾತು ಬರುತ್ತದೆ. ಕೇಳದೇ ಇರುವುದು ಕಷ್ಟ.
ಆದರೆ ಸಾಲ ತೆಗೆದುಕೊಳ್ಳುವುದು ಒಂದು ಆತ್ಮವಿಶ್ವಾಸದ ಸಂಕೇತ ಕೂಡ. ಓದಲು ಒಬ್ಬ ವಿದ್ಯಾರ್ಥಿ ಸಾಲ ತೆಗೆದುಕೊಂಡಾಗ ಚೆನ್ನಾಗಿ ಓದಿ ದುಡ್ಡು ಸಂಪಾದನೆ ಮಾಡಿ ತೀರಿಸಿಯೇ ತೀರಿಸುತ್ತೇನೆ ಎಂಬ ಛಲವಿರಬೇಕು, ಆತ್ಮವಿಶ್ವಾಸವಿರಬೇಕು. ಸಿನೆಮಾ ರೀತಿಯಲ್ಲಿ "ಗಂಜಿ ಕುಡಿಯುವ" ಡೈಲಾಗ್ ಇಲ್ಲಿ ಒಪ್ಪುವುದಿಲ್ಲ. ಇದನ್ನು ನೋಡಿದಾಗ ಉತ್ತರ ಸುಲಭ: ಪರಿಸ್ಥಿತಿ ನೋಡಿಕೊಂಡು ಮುಂದುವರೆಯಬೇಕು, ಎಲ್ಲ ಹಂತಗಳಲ್ಲೂ ಜಾಗರೂಕನಾಗಿರಬೇಕು. ಹೇಳಲು ಸುಲಭ, ಆದರೆ ಮೈ ಮರೆಯುವುದೂ ಅಷ್ಟೇ ಸುಲಭ! ಈಗ ನಾನು ಬ್ಲಾಗಿಸುತ್ತಾ ಮೈಮರೆತಿರುವೆನಲ್ಲಾ ಹಾಗೆ!
ಮುಂದೆ ಏನಾದರೊಂದು ವಿಷಯ ಮನಸ್ಸನ್ನು ಚುಚ್ಚುವವರೆಗೆ....
ಸರ್ವೇ ಜನಾಃ ಸುಖಿನೋ ಭವಂತು
No comments:
Post a Comment