outlookindia.com, more than just the news magazine from IndiaMean Streets... All HQ, No IQ : outlookindia.comಮೇಲಿನ ಕೊಂಡಿಯನ್ನು ಅನುಸರಿಸಿದರೆ ಅಂಜಲಿ ಪುರಿ ಎಂಬಾಕೆ ದೆಹಲಿಯ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುವ ಲೇಖನ ಕಾಣುತ್ತದೆ.
ಮೊದಲು ಒಂದು ಸಂಗತಿಯನ್ನು ಹೇಳಲೇಬೇಕು. ನಾನು ದೆಹಲಿಯನ್ನು ಪ್ರತ್ಯಕ್ಷವಾಗಿ ನೋಡೇ ಇಲ್ಲ. ಆದರೆ ಇವರು ಬರೆದ ಲೇಖನವನ್ನೋದಿದಾಗ ದೆಹಲಿಯ ಬಗ್ಗೆ ನನಗನ್ನಿಸಿದ ಅನಿಸಿಕೆಗಳೇ ಪ್ರತಿಧ್ವನಿಸಿದವು. ನಾನು ಓದಿರುವ, ಕಂಡಿರುವ ಸಂಗತಿಗಳ ದೆಸೆಯಿಂದ ಅನುಮಾನ(inference)-ಪೂರ್ವಕವಾಗಿ ಬರೆದದ್ದು ಇದು. ದೆಹಲಿಯ ಪ್ರೇಮಿಗಳ ಮನಸ್ಸನ್ನು ನೋಯಿಸಬೇಕೆಂದಲ್ಲ. ಅಂಥವರಿಗೆ ಈಗಲೇ ಹೇಳುತ್ತೇನೆ- ಮುಂದೆ ಓದಬೇಡಿ. ಓದಿದ ಮೇಲೆ ನನ್ನನ್ನು ದೂರಬೇಡಿ. ಎಚ್ಚರಿಸಿದ್ದೇನೆ, ಜಾಗ್ರತೆ!
ಈ ಲೇಖನವು ಒತ್ತಿ ಒತ್ತಿ ಹೇಳುವುದು - "ದೆಹಲಿಯು ಒಡ್ಡರ, ಅಸಂಸ್ಕೃತರ, ಕಾಳಜಿಯಿಲ್ಲದ ಜನಗಳ ನಗರ"ವೆಂದು. ನನ್ನ ಮನಸ್ಸು ಬುದ್ಧಿಗಳೂ ಈ ವಿಚಾರವನ್ನು ಅನುಮೋದಿಸುತ್ತವೆ.
ಔಟ್-ಲುಕ್ ನಂಥ ಪತ್ರಿಕೆಗಳಲ್ಲಿ ಯಾವಾಗಲೂ ಕಾಣುವ ಸಂಗತಿ ಸ್ತ್ರೀಯರ ಮೇಲಿನ ಅತ್ಯಾಚಾರ ಅತಿ ಹೆಚ್ಚಿರುವ ನಗರವೆಂದರೆ ದೆಹಲಿಯೆಂದೇ. ಮೇಲಿನ ಬರಹವು ಅಂಕಿ ಅಂಶಗಳೊಂದಿಗೆ ಯಾವ ಯಾವ ವಿಷಯಗಳಲ್ಲಿ ದೆಹಲಿ ಒಂದು ಕೆಟ್ಟ ನಗರವೆಂದು ತೋರಿಸಿದೆ. ರಸ್ತೆ ಕಟ್ಟಡಗಳು ದೆಹಲಿಯಲ್ಲಿ ಚೆನ್ನಾಗಿಯೇ ಇವೆ ಎಂದು ಹೇಳಲೇಬೇಕು, ಬಹಳ ಜನ ಇದನ್ನು ಒಪ್ಪುತ್ತಾರೆ ಕೂಡ. ಆದರೆ ನಗರ ಎಂದರೆ ಬರೇ ರಸ್ತೆ ಕಟ್ಟಡಗಳಲ್ಲ ತಾನೆ? ಒಂದು ನಗರಕ್ಕೂ ಮತ್ತದರ ಜನರಿಗೂ ಅವಿನಾಭಾವ ಸಂಬಂಧವಿದ್ದೇ ಇರುತ್ತದೆ.
ದೆಹಲಿ ಒಂದು ಐತಿಹಾಸಿಕ ನಗರ. ಮಹಾಭಾರತದ ಕಾಲದಿಂದಲೂ ಇಲ್ಲಿ ಜನಗಳಿದ್ದೇ ಇದ್ದರು, ಇದ್ದಾರೆ. ಆಗಿನ ಕಾಲದಿಂದ ವಿಧಿವಶಾತ್ "ಭಾರತದ ಭಾಗ್ಯದ ವಿಧಾತ"ರ ನಗರವಾಗಿ ಪರಿಣಮಿಸಿದೆ. ಇದರಿಂದ ಮೇಲಿನಿಂದ ಮೇಲಕ್ಕೆ ಅನರ್ಥಗಳು ನಡೆದೇ ನಡೆದಿವೆ. ಕೌರವ-ಪಾಂಡವರು ಇದ್ದದ್ದು ಇಲ್ಲೇ ಎಂದು ಮರೆಯಬಾರದು. ಅವರ ದಿನನಿತ್ಯದ ಕಾಳಗ-ಮನಸ್ತಾಪಗಳನ್ನು ಮಹಭಾರತ ಚೆನ್ನಾಗಿಯೇ ವರ್ಣಿಸಿದೆ. ಇದರ ಜೊತೆಗೆ ಹಸ್ತಿನಾವತಿಯಲ್ಲೇ ಪ್ರಾಯಃ ಹುಟ್ಟಿದ, ಅಂದರೆ ಅಪ್ಪಟ ದೆಹಲಿಯವರೇ ಆದ, ಕೌರವರು ಮಾಡಿದ ಅತ್ಯಾಚಾರಗಳು ಸರ್ವವಿದಿತ. ದ್ರೌಪದಿಯ ಮಾನಭಂಗಕ್ಕೆ ಯತ್ನಿಸಿದ ದುರ್ಯೋಧನ-ದುಃಶಾಸನರು ಈಗಿನ ದೆಹಲಿಗರಿಗೆ ಪೂರ್ವಜರು. ಆದರೆ ಅವರ ಮಾದರಿಯನ್ನೇ ಅನುಸರಿಸುತ್ತಿರುವ ಇಂದಿನ ದೆಹಲಿಯ ಕೆಲಭಾಗದಷ್ಟು ಪುರುಷವರ್ಗವನ್ನು ಕಂಡಾಗ ಮನಸ್ಸಿಗೆ ಖೇದವಾಗದೇ ಇರದು. ಸ್ವಾರಸ್ಯದ ಒಂದಂಶ ಗಮನಿಸಬೇಕು. ಪಾಂಡವರು ಹುಟ್ಟಿದ್ದು ಹಿಮಾಲಯದ ಅರಣ್ಯಗಳಲ್ಲಿ. ದೆಹಲಿಯಲ್ಲಿ ಹುಟ್ಟದ ಕಾರಣದಿಂದ ಅವರಲ್ಲಿ ಧರ್ಮವಿದ್ದಿರಬೇಕೋ ಏನೊ !
ಈ ಜಗಳದಿಂದ ಕುರುಕ್ಷೇತ್ರಯುದ್ಧ ಸಂಭವಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಈ ನಗರದಲ್ಲಿ ಹುಟ್ಟಿದ ಅಶಾಂತಿಯ ವಾತಾವರಣ ಧರ್ಮಯುದ್ಧಕ್ಕೇ ಮಾತ್ರವಲ್ಲದೆ ದೇಶದ ಎಲ್ಲೆಡೆಗಳಿಂದ ಬಂದ ಸೈನ್ಯಗಳ ಅಪಾರ-ಪ್ರಾಣಹಾನಿಗೂ ಕಾರಣವಾಯ್ತು. ಏನೋ ಒಂದು ಹಠಮಾರಿತನ, ಒಂದು ಅಸಡ್ಡೆಯ ಪ್ರವೃತ್ತಿ, ಮುಂಗೋಪ - ಇವೆಲ್ಲವೂ ಕೌರವರಲ್ಲೂ ಮತ್ತು ಅವರ ವಂಶಜರೇ ಆದ ಇಂದಿನ ದೆಹಲಿಗರಲ್ಲಿ ಸಮಾನವಾಗಿ ಕಾಣುತ್ತದೆ.
ಈ ಇತಿಹಾಸ-ಪುರಾಣಗಳ ಕಾಲದ ನಂತರ ಈಚೆಯ ಚರಿತ್ರೆಗೆ ಬರಬಹುದು. ರಾಜಾ ಧಿಲು (ದಿಲು?) ಎಂಬ ಒಬ್ಬ ರಾಜನಿಂದ ದೆಹಲಿಯ ಆಧುನಿಕ ಹೆಸರು ಬಂದಿತೆನ್ನುತ್ತಾರೆ. ಅದಿರಲಿ - ನಂತರ ಕೇಳಿಬರುವ ಹೆಸರು ಪೃಥ್ವೀರಾಜ ಚೌಹಾನನದು. ಪೃಥ್ವೀರಾಜ-ಸಂಯುಕ್ತರ ಪ್ರೇಮಕಥೆ ಎಲ್ಲರಿಗೂ ತಿಳಿದಿರುವುದೇ. ಪೃಥ್ವೀರಾಜನ ದುರಂತ ಕೂಡ ತಿಳಿದದ್ದೇ. ಅವನ ನಂತರ ಹಿಂದೂ ರಾಜರು ದೆಹಲಿಯನ್ನು ಆಳಿದ್ದು ಕಡಿಮೆ ಎನ್ನಬಹುದು. ಪೃಥ್ವೀರಾಜ ಒಳ್ಳೆಯ ಸೈನ್ಯವನ್ನು ಹೊಂದಿ ಶಕ್ತಿವಂತನಾಗಿದ್ದರೂ ಅವನ ಅಸಡ್ಡೆಯೇ ಅವನ ಮೃತ್ಯುವಾಯಿತು. ರಾಜರು ಹೆಚ್ಚಿದ್ದ ದೆಹಲಿಯಲ್ಲಿ ಈ ರಾಜಸ ಗುಣವೇ ತಾಂಡವವಾಡಿದೆ.
ಭಾರತವನ್ನು ಆಕ್ರಮಿಸಬಂದ ಇಸ್ಲಾಂ ಮತೀಯರಾಗಲಿ ಇನ್ನೂ ಯಾರಾದರಾಗಲಿ - ಅವರಿಗೆ ದೆಹಲಿಯನ್ನು ವಶಮಾಡಿಕೊಳ್ಳುವುದು ಅತ್ಯವಶ್ಯಕವಾಗಿತ್ತು. ಬಾಬರ - ಇಬ್ರಾಹಿಮ ಲೋದಿಯ ಕಾಳಗವಿರಬಹುದು - ಅಥವಾ ಅಕ್ಬರ-ಹೇಮೂಗಳ ನಡುವೆ ನಡೆದ ಎರಡನೇ ಪಾನಿಪತ್ತಿನ ಯುದ್ಧವಿರಬಹುದು. ಎಲ್ಲವೂ ದೆಹಲಿಯನ್ನು ಆಕ್ರಮಿಸಲೋಸುಗವೇ! ಮುಘಲರು ಆಕ್ರಮಿಸಿದ ನಂತರ ಅವರದ್ದೇ ನಗರವಾಗಿ ದೆಹಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷ ಉಳಿಯಿತು. ನಂತರ ಬಹಾದುರ ಷಾ ನನ್ನು ಓಡಿಸಿದ ನಂತರ ಬ್ರಿಟೀಷರ ಆಳ್ವಿಕೆ. ಕಲ್ಕತ್ತಾವನ್ನು ತೊರೆದು ದೆಹಲಿಯನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅದಾದ ಮೇಲೆ ಹಾಗೆಯೇ ಉಳಿದಿದೆ. ಕೆಂಪು ಕೋಟೆಯಲ್ಲಿ ಇಂದಿಗೂ ಸ್ವಾತಂತ್ರ್ಯ-ದಿನಾಚರಣೆಯಂದು ಅಂದಿನ ಪ್ರಧಾನ ಮಂತ್ರಿಗಳು ಭಾಷಣ ಮಾಡುತ್ತಾರೆ. ಹಲವು ರಾಜಕೀಯ ಧುರೀಣರ ಸಮಾಧಿಯನ್ನು ಹೊಂದಿದ ನಗರ ದೆಹಲಿಯಾಗಿದೆ. ಹಲವು ದೇಶಗಳ ರಾಯಭಾರಿಗಳ ಕಛೇರಿಗಳನ್ನು ಹೊಂದಿದ ನಗರವೂ ದೆಹಲಿಯೇ!
ಹೀಗೆ ತಲತಲಾಂತರಗಳಿಂದ ರಾಜಕೀಯ ಶಕ್ತಿಗೆ ದೆಹಲಿ ಕೇಂದ್ರವಾಗಿದೆ; ಪ್ರತೀಕವೂ ಆಗಿದೆ. ದೆಹಲಿಯನ್ನು ಹಿಡಿದವರು ದೇಶವನ್ನೇ ಹಿಡಿಯುವರು. ರಾಜಕೀಯ ಶಕ್ತಿಯಲ್ಲಿ ಸಾಮಾನ್ಯವಾಗಿ ಹಿಂಸೆಯ ಒಂದು ನಾಡಿ ಇದ್ದೇ ಇರುತ್ತದೆ. ಈ ರಾಜಕೀಯ ಶಕ್ತಿಯೇ ದೆಹಲಿಯ ಹಿಂಸಾಪ್ರವೃತ್ತಿಯ ಹಿಂದಿನ ಕಾರಣವಿರಬೇಕು.
ಅದಿರಲಿ. ಈಚೆಗೆ ಓದಿದ ಕಾದಂಬರಿ ಭೈರಪ್ಪನವರ ತಂತು. ಇದರಲ್ಲಿ ದೆಹಲಿಯ ಮತ್ತದರ ಜನರ ಪ್ರಮುಖ ಪಾತ್ರವಿದೆ. ಎಮರ್ಜೆನ್ಸಿಯ ಕಾಲಕ್ಕೆ ಸುಮಾರಾಗಿ ಬರುವ ಈ ಕಾದಂಬರಿ ವಿಶ್ವಕೋಶದ ಧಾಟಿಯಲ್ಲಿ ಆ ಕಾಲದ ಜನಮನವನ್ನು ಸೆರೆಹಿಡಿಯುತ್ತದೆ. ಕಲೆ, ಪತ್ರಿಕೋದ್ಯಮ,ರಾಜಕೀಯ, ವಾಣಿಜ್ಯ, ಅಧ್ಯಾತ್ಮ, ವಿದ್ಯಾಭ್ಯಾಸ - ಇವೆಲ್ಲದರ ಬಗ್ಗೆ ಮತ್ತು ಇವುಗಳ ನಡುವಿನ ಸಂಬಂಧದ ಬಗ್ಗೆ ಸೂಕ್ಷ್ಮವಿಶ್ಲೇಷಣೆಯನ್ನು ಹೊಂದಿದ ಭೈರಪ್ಪನವರ ಇಲ್ಲಿನವರೆವಿಗೂ ಅತಿ ದೊಡ್ಡ ಕೃತಿಯೆಂದರೆ ತಂತು. ಇದರಲ್ಲಿ ಕಾಂತಿಯೆಂಬ ಒಂದು ವಿಶಿಷ್ಟ ಪಾತ್ರವಿದೆ. ದೆಹಲಿಯ ಮಹತ್ವಾಕಾಂಕ್ಷೆಯನ್ನೆಲ್ಲಾ ಆಕೆಯಲ್ಲಿ ಭೈರಪ್ಪನವರು ಆವಾಹಿಸಿದ್ದಾರೆ. ಕೆಲಸ ಕೈಗೂಡಬೇಕೆಂದರೆ ಏನು ಮಾಡುವುದಕ್ಕೂ ಹೇಸದ ಛಲ. ಭ್ರಷ್ಟಾಚಾರವಾದರೂ ಮಹತ್ವಾಕಾಂಕ್ಷೆಯ ಸೇವೆಯಲ್ಲಿ ಅದೇ ಸದಾಚಾರವೆಂಬ ಧೋರಣೆ. ಇವೆಲ್ಲದರ ಜೊತೆಗೆ ಏನನ್ನೂ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ. ಆದರೆ ಇದರ ಜೊತೆಗೆ ಸೇರುವ ಪರರ ಭಾವನೆಗಳ ಬಗೆಗಿನ ಸಂವೇದನಾರಾಹಿತ್ಯ ಸೇರುತ್ತದೆ. ಅಂತಸ್ತೇ ಎಲ್ಲವೆಂಬ ಭ್ರಮೆ. ಇವೆಲ್ಲವೂ ಆ ಪಾತ್ರದಲ್ಲಿ ಕಾಣಿಸುತ್ತದೆ. ಇದು ಭೈರಪ್ಪನವರು ಬಹಳಷ್ಟು ದೆಹಲಿಗರನ್ನು ನೋಡಿಯೇ ಮಾಡಿದ ಪಾತ್ರವಿರಬೇಕು. ಮೂಲತಃ ಕನ್ನಡಿತಿಯದೇ ಆದ ಕಾಂತಿ ದೆಹಲಿಯಲ್ಲೇ ಹುಟ್ಟಿಬೆಳೆದದ್ದರಿಂದ ಅಲ್ಲಿನ ಗುಣಗಳನ್ನೇ (ಇಲ್ಲಿ ಗುಣವೆಂದರೆ characteristic ಎಂದು ಮಾತ್ರ) ತನ್ನದಾಗಿ ಮಾಡಿಕೊಳ್ಳುತ್ತಾಳೆ. (ಈ ಪುಸ್ತಕವನ್ನು ಓದದವರು ಒಂದು ಬಾರಿ ಓದಲೇ ಬೇಕೆಂದು ನನ್ನ ಸ್ನೇಹಪೂರ್ವಕ ಒತ್ತಾಯ. ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ ಎಂದು ಮಾತ್ರ ನಾನು ಭರವಸೆ ನೀಡಬಲ್ಲೆ.)
ನಾನು ದೆಹಲಿಯ ಸಂಪರ್ಕವನ್ನು ಹೊಂದಿದ ಜನರನ್ನು ಕಂಡಿದ್ದೇನೆ. ನಾನು ನೋಡಿದ ಜನರಲ್ಲಿ ಮೇಲೆ ಆ ಪಾತ್ರದಲ್ಲಿ ಹೇಳಿದ ಗುಣಗಳ ಜೊತೆಗೆ ಎದ್ದು ಕಾಣುವ ಗುಣ ಎಂದರೆ ಒಡ್ಡತನ. ಈ ಒಡ್ಡತನ ಗ್ರಾಮ್ಯವಾದ ಒಡ್ಡತನವಲ್ಲ. ಔಟ್-ಲುಕ್ಕಿನ ಲೇಖನದಲ್ಲಿ ಬರೆದಿರುವ ಹಾಗೆ - ಸೌಜನ್ಯವಿಲ್ಲದಿರುವಿಕೆ. ನೀವು ಒಂದು ಸರಣಿಯಲ್ಲಿ ನಿಂತು ನಿಮ್ಮ ಸರದಿಗಾಗಿ ಕಾಯುತ್ತಿದ್ದಾಗ ಮಧ್ಯೆ ನುಗ್ಗಿ ತನ್ನ ಕೆಟ ನಡೆನುಡಿಗಳಿಂದ ನಿಮ್ಮ ಮನಸ್ಸಿಗೆ ನೋವುಂಟುಮಾಡಿದರೂ ತನ್ನ ಕೆಲಸವನ್ನು ಮಾಡಿಕೊಳ್ಳುವ ಅಸೌಜನ್ಯ. ಇದನ್ನು ನಾನು ಬೇರೆ ಬೇರೆ ಸ್ತರಗಳಲ್ಲಿ ಕಂಡಿದ್ದೇನೆ. ನಾನು ಕಂಡ ಹಾಗೆ ಅವರಲ್ಲಿ ಒಂದು ಅವ್ಯಕ್ತ ಅನುಕ್ತ ಸ್ವ-ಪ್ರಶಂಸೆಯ ಛಾಯೆ ಮೂಡುತ್ತದೆ. ಇದಕ್ಕಿಂತ ವೈಯಕ್ತಿಕವಾಗಿ ನಾನು ಹೆಚ್ಚು ಹೇಳಲಾರೆ.
ಇದೇನು ದೆಹಲಿಯ ಬಗ್ಗೆ ಯಾವ ನಗರದ ಬಗೆಗೂ ಇರದಷ್ಟು ವಿಚಾರವೆಂದು ಕೇಳಿದರೆ ನನ್ನ ಉತ್ತರ ಹೀಗಿದೆ. ದೆಹಲಿ ಈಗ ಎಲ್ಲರಿಗೂ ಹೇಗೆ ಮುಖ್ಯವೋ ನನಗೂ ಹಾಗೆಯೇ ಮುಖ್ಯ. ನಮ್ಮ ದೇಶದ ರಾಜಕೀಯ ರಾಜಧಾನಿಯದು. ನಮ್ಮ ದೇಶದ ಚರಿತ್ರೆಯಲ್ಲಿ ಸಾವಿರ ಸಾವಿರ ವರ್ಷಗಳಿಂದ ಇರುವ ಕೇಂದ್ರಬಿಂದು ದೆಹಲಿ. ಇಂಥ ನಗರದ ಬಗ್ಗೆ ಕುತೂಹಲಾಸಕ್ತಿಗಳು ಮೂಡದಿರಲು ಹೇಗೆ ಸಾಧ್ಯ? ಸಂಸ್ಕೃತಿಯ ವಿದ್ಯಾರ್ಥಿಯಾಗಿ ಮಾತ್ರ ನಾನು ಗಮನಿಸಿದ ಕೆಲವು ಅಂಶಗಳನ್ನು ಹೇಳಬಯಸಿದ್ದೇನೆ, ಅಷ್ಟೆ.
ನನ್ನ ಜಿಜ್ಞಾಸೆ ಮುಂದುವರೆದಿದೆ. ನಗರವೊಂದು ದೇಶದ ರಾಜಧಾನಿಯಾಗಬೇಕಾದರೆ ಅದರಲ್ಲಿ ಏನಾದರೂ ವಿಶೇಷಗುಣವಿರಬೇಕೆ? ಕೌಟಿಲ್ಯನು ಇದರ ಬಗ್ಗೆ ಏನು ಹೇಳಿರುವನೋ ತಿಳಿಯದು. ದೆಹಲಿಯು ನಮ್ಮ ದೇಶದ ರಾಜಧಾನಿಯಾಗಲು ಅರ್ಹವೇ ಎಂಬ ಪ್ರಶ್ನೆಯು ಮನದಲ್ಲಿ ಮೂಡಿದೆ. ಇದು ಒಂದು academic question. ಅಷ್ಟೆ. ತುಘಲಕ್ ಮಾಡಿದ ಹಾಗೆ ರಾಜಧಾನಿಯನ್ನು ಬದಲಿಸಬೇಕೆಂಬ ಹುಚ್ಚುಬುದ್ಧಿ ನನಗಿಲ್ಲ. ಇದ್ದರೂ ನನ್ನ ಮಾತು ಕೇಳುವವರು ಯಾರು ?
ಇನ್ನೂ ಒಂದು ವಿಚಾರಾರ್ಹ ವಿಷಯ- ಇಂಥ ನಗರದಲ್ಲಿ ನಮ್ಮ ರಾಜಕೀಯ ನೇತಾರರು ನುಗ್ಗಿದಾಗ ಇವರ ಮನದಲ್ಲಿ ಏನಾದರೂ ಬುದ್ಧಿಭೇದವುಂಟಾಗುತ್ತದೆಯೇ? ಇದರಿಂದ ಅವರು ಮನಃಸ್ವಾಸ್ಥ್ಯವನ್ನು ಕಳೆದುಕೊಂಡು ದೇಶವನ್ನು ಆಳಲು ಅಸಮರ್ಥರಾಗುವರೇ? ಅಥವಾ ರಾಜಕೀಯಪುರುಷರಿಂದ ದೆಹಲಿಗೆ ಮತ್ತು ದೆಹಲಿಗರಿಗೆ ಈ ಗುಣ ಬಂದಿತೇ?