ನಿನ್ನೆ ಕನ್ನಡ ರಾಜ್ಯೋತ್ಸವ. ಕರ್ನಾಟಕ ಅಥವಾ ಕರ್ಣಾಟಕದ ಏಕೀಕರಣವಾದ ಸಂದರ್ಭವನ್ನು ಸ್ಮರಿಸಲು ಆಯೋಜಿಸಿರುವ ಉತ್ಸವವಿದು. ಕರುನಾಡಿನ ಹೆಗ್ಗುರುತು ಕಸ್ತೂರಿಯ ಕಂಪನ್ನು ಸೂಸುವ ಕನ್ನಡನುಡಿ. ಕನ್ನಡದ ಬಗ್ಗೆ ಈ ಬರೆಹವಿದ್ದರೆ ನಾಡಹಬ್ಬವನ್ನು ಚೆನ್ನಾದ ರೀತಿಯಲ್ಲಿ ಆಚರಿಸಿದ ಹಾಗಾಗುವುದೆಂದು ಬಗೆದು ಇದನ್ನು ಬರೆಯುತ್ತಿದ್ದೇನೆ.
ಸಂಸ್ಕೃತ-ದ್ರಾವಿಡ ಭಾಷಾಧಾತುಗಳ ಹದವಾದ ಮಿಶ್ರಣವೆಂದು ಕನ್ನಡವನ್ನು ಕರೆಯಬಹುದಾದರೂ ಅದಕ್ಕೆ ಮಿಶ್ರಣದಾಚೆಯ ಮಹತ್ತ್ವವಿದೆ. ಸೋಡಿಯಂ ಮತ್ತು ಕ್ಲೋರಿನ್ ಗಳ ಕೂಡಿಕೆಯಿಂದಾದ ಉಪ್ಪು ಮೂಲಧಾತುಗಳ ಗುಣವನ್ನು ಬಿಟ್ಟು ತನ್ನದೇ ಆದ ಗುಣಗಳನ್ನು ಪಡೆಯುವ ಹಾಗೆ ಕನ್ನಡಕ್ಕೆ ಅದರದೇ ಸೊಗಡಿದೆ. ಆದರೆ ಆ ಮೂಲಧಾತುಗಳಿಲ್ಲದೆ ಕನ್ನಡವೂ ಇಲ್ಲವೆಂದು ಎಲ್ಲರೂ ಮನಗಾಣಬೇಕು.
ಕನ್ನಡಕ್ಕೆ ತನ್ನದೇ ಆದ ಕಾವ್ಯಪರಂಪರೆಯಿದೆ, ವ್ಯಾಕರಣಪರಂಪರೆಯಿದೆ. ಇದರ ಬಗ್ಗೆ ಹೆಚ್ಚು ವಿಸ್ತರಿಸದೆ ಈ ವಾರದ ಸುಧಾ ಪತ್ರಿಕೆಯೆಡೆ ಓದುಗರ ಗಮನವನ್ನು ಸೆಳೆಯಬಯಸುತ್ತೇನೆ. ನರಸಿಂಹಮೂರ್ತಿ ಎಂಬ ಲೇಖಕರು ಚೆನ್ನಾಗಿ ಬರೆದಿದ್ದಾರೆ.
ಕನ್ನಡ ಈ ದಿನ ದುರದೃಷ್ಟವಶಾತ್ ಅನೇಕ ತೊಂದರೆಗಳನ್ನೆದುರಿಸುತ್ತಿದೆ. ಕನ್ನಡನಾಡಿನಲ್ಲಿ ಭಾರತದ ಎಲ್ಲೆಡೆಗಳಿಂದ ಆಗಮಿಸಿದವರು ಕನ್ನಡವನ್ನು ಕಲಿಯದಿರುವುದರಿಂದ; ಅದರಲ್ಲಿ ವ್ಯವಹರಿಸದೇ ಇರುವುದರಿಂದ ಭಾಷೆಯ ಜನಶಕ್ತಿ ಕುಂಠಿತವಾಗುತ್ತಿದೆ. ಕನ್ನಡಿಗರೂ ಕನ್ನಡದಲ್ಲಿ ಸಂಭಾಷಿಸುವುದನ್ನು ಕಡಮೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜಾಗತೀಕರಣ ಎಲ್ಲರ ಮನಸ್ಸುಗಳನ್ನು ಚದುರಿಸಿ "ಎಲ್ಲಾ ಒ.ಕೆ. ಕನ್ನಡ ಯಾಕೆ?" ಎಂದು ಕೇಳುವ ಹಾಗೆ ಮಾಡಿದೆ. ಆಂಗ್ಲ ಭಾಷೆಯ ಆರ್ಥಿಕಶಕ್ತಿ ತಾಯಿತಂದೆಯರು ತಮ್ಮ ಮಕ್ಕಳನ್ನು ಕನ್ನಡಮಾಧ್ಯಮಶಾಲೆಗಳಿಗೆ ಸೇರಿಸದಿರುವ ಹಾಗೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಓದುವವರು ತೀರ ನಿರ್ಗತಿಕರೇ ಆಗಿರುವ ಸಂಭಾವನೆ ಹೆಚ್ಚು. ಪಾಶ್ಚಾತ್ಯ ಸಂಸ್ಕೃತಿಯು ಆರ್ಥಿಕವಾಹಿನಿಯಲ್ಲಿ ಪ್ರವಹಿಸುತ್ತ ಬಡತನದಲ್ಲಿರುವ ನಮ್ಮ ದೇಶದ ಸಂಸ್ಕೃತಿಗೆ ಸವಾಲಾಗಿ ನಿಂತಿದೆ. ತೀರ ತಿಳಿಯದವರೋ ಅಥವಾ ಸ್ವಲ್ಪ ಚೆನ್ನಾಗಿ ತಿಳಿದಿರುವವರು ಮಾತ್ರ ಸ್ವದೇಶದ ಸಂಸ್ಕೃತಿಯನ್ನುಳಿಸಿದ್ದಾರೆ. ಮಧ್ಯದ ಹಲವರಿಗೆ "ಸಂಸ್ಕೃತಿ? ಹಾಗೆಂದರೇನು? ಹೊಟ್ಟೆಗೆ ಹಿಟ್ಟು, ಬಟ್ಟೆಗ ಜೀನಿದ್ದರೆ ಸಾಲದೆ?" ಎಂದು ಕೇಳುವವರೇ! ಎಮ್.ಜಿ. ರಸ್ತೆಯ ಅಂಗಡಿಗಳಲ್ಲಿ, ಕೋರಮಂಗಲದ ಮಾಲ್ ಗಳಲ್ಲಿ ಕನ್ನಡ ಫಲಕಗಳಿರುವುದು ಕನ್ನಡದ ಅಭಿಮಾನಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಕೆಲವರ ಕಲ್ಲುತೂರಾಟದಿಂದ ತಪ್ಪಿಸಿಕೊಳ್ಳಲು ಮಾತ್ರ. ಆ ಫಲಕಗಳನ್ನು ಬಿಟ್ಟರೆ ಅಲ್ಲಿ ಕನ್ನಡವೇನೇನೂ ಇಲ್ಲ ಎಂದು ಹೇಳಲು ವಿಷಾದವಾಗುತ್ತದೆ.
ಕನ್ನಡದ ದೊಡ್ಡ ಕೊರತೆಯೇನೆಂದರೆ ಕನ್ನಡಿಗರಿಗೆ ತಮ್ಮ ನಾಡು-ನುಡಿಗಳ ಬಗ್ಗೆ ಇಲ್ಲದಿರುವ ಅಭಿಮಾನ. ನಾವು ತೀರ ಅಭಿಮಾನಶೂನ್ಯರು. ಕನ್ನಡದ ಬಗ್ಗೆ ಅಭಿಮಾನವಿದ್ದರೆ ತಾನೆ ನಮ್ಮ ಮನೆಗಳಲ್ಲಿ ಅದನ್ನು ಉಪಯೋಗಿಸುವುದು; ಹೊರಗಿನ ಅಂಗಡಿಗಳಲ್ಲಿ ಉಪಯೋಗಿಸುವುದು. ಇಂಗ್ಲಿಷ್ ಪದಗಳು ಕನ್ನಡದೊಡನೆ ಚೆನ್ನಾಗಿ ಬೆರೆತಿವೆ. ಒಂದು ದೃಷ್ಟಿಯಲ್ಲಿ ತಪ್ಪಿಲ್ಲದಿದ್ದರೂ ಅಮ್ಮನ ಬದಲಾಗಿ ಮದರ್, ಅಪ್ಪನ ಬದಲಾಗಿ ಫಾದರ್ - ತೀರ ಹತ್ತಿರದ ಶಬ್ದಗಳನ್ನೂ ನಾವು ಬಿಟ್ಟರೆ ನಮ್ಮ ನುಡಿ ಕನ್ನಡವಾಗಿ ಹೇಗೆ ಉಳಿದುಕೊಳ್ಳುತ್ತದೆ? "ಉ" ಕಾರ ಸೇರಿಸಿಬಿಟ್ಟರೆ ಅದು ಕನ್ನಡವೇ? "ನಮ್ ಫಾದರ್ ಸ್ವಲ್ಪ ಸಿಕ್ ಆಗಿದಾರೆ. ಅವರನ್ನು ನಮ್ಮ ಬ್ರದರ್ ಡಾಕ್ಟರ್ ಹತ್ರ ಡ್ರಾಪ್ ಮಾಡಲು ಹೋಗಿದಾರೆ" - ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ, ನಮ್ಮನ್ನು ಆಶ್ಚರ್ಯಕ್ಕೀಡುಮಾಡುವುದಿಲ್ಲವೆಂಬುದೇ ಖೇದದ ಸಂಗತಿ. ಜೊತೆಗೆ ನಮ್ಮ ಪತ್ರಿಕೆಗಳಲ್ಲಿ, ದೂರದರ್ಶನವಾಹಿನಿಗಳಲ್ಲಿ, ಬಾನುಲಿ (ಎಂಥ ಸೊಗಸಾದ ಶಬ್ದ!) ಯ ವಾಹಿನಿಗಳಲ್ಲಿ ಕೂಡ ಕನ್ನಡ ಚೆನ್ನಾಗಿ ಕಾಣುತ್ತಿಲ್ಲ, ಕೇಳುತ್ತಿಲ್ಲ. ಜನರ ಓದಿನ ಮತ್ತು ಮಾತಿನ ಬಗೆಯನ್ನು ಬದಲಾಯಿಸಬಲ್ಲ ಸಶಕ್ತ ಮಾಧ್ಯಮಗಳಾದ ಇವು ಭಾಷೆಯನ್ನುಳಿಸುವ ರೀತಿಯೆಲ್ಲಿ, ಕನ್ನಡನುಡಿಯನ್ನು ಹೇಗೆ ಬಳಸಬೇಕು ಎಂಬ ಮಾದರಿಗಳಾಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಪುಸ್ತಕಗಳಲ್ಲಿ ಅಷ್ಟು ನುಡಿಯ ಶೈಥಿಲ್ಯ ಕಾಣದೇ ಹೋದರೂ ಸಾಹಿತ್ಯ-ಸಮಾಜ ಶಾಸ್ತ್ರಗಳು ಒಂದಕ್ಕೊಂದಕ್ಕೆ ಅಂಟಿರುವುದು ಕಾಣುತ್ತದೆ. ಶುದ್ಧಸಾಹಿತ್ಯ ನಮ್ಮಲ್ಲೀಚೆಗೆ ಕಡಮೆಯಾಗಿದೆ. ಅದರ ಪ್ರಯೋಜನವನ್ನು ಮನಗಾಣದಿರುವವರೇ ಹಲವರು. ಶುದ್ಧಸಾಹಿತ್ಯದ ಬಗ್ಗೆ ಮನಸ್ಸಿರುವವರು ಹಳೆಯಕಾಲದವರಾಗಿ ಕಾಣಿಸುತ್ತಾರೆ. ಭಾಷೆ ಬೆಳೆಯುವುದಕ್ಕೆ ಉಳಿಯುವುದಕ್ಕೆ ಸಾಹಿತ್ಯದ ಕೊಡುಗೆ ಅಪಾರ. ಇದು ಎಲ್ಲರಿಗೂ ತಿಳಿದ ವಿಚಾರವೆಂದುಕೊಂಡಿದ್ದೆ. ಆದರೆ ಹಲವರಿಗೆ, ಸಾಹಿತ್ಯಸುದೂರರಿಗೆ ಇದರ ಗಂಧವೇ ಇಲ್ಲ.
ಅಭಿಮಾನರಾಹಿತ್ಯ ಕನ್ನಡಾಭಿಮಾನದ ಕಾಮನಬಿಲ್ಲಿನ ಒಂದು ಕೊನೆಯಾದರೆ, ದುರಭಿಮಾನ ಇನ್ನೊಂದು ಕೊನೆ. "ತಮಿಳು ತಲೆಗಳ ನಡುವೆ" ಯ ಬಗ್ಗೆ ಬರೆದ ಲೇಖನದಲ್ಲಿ ನಾವು ಕನ್ನಡಿಗರು ಸದ್ಯ ತಮಿಳರ ರೀತಿ ದುರಭಿಮಾನಿಗಳಲ್ಲವಲ್ಲ ಎಂದು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದೆ. ಆದರೆ ನನ್ನ ನಿಟ್ಟುಸಿರು ಆ ಕಾಲಕ್ಕೆ ಮಾತ್ರ. ಈಚೆಗೆ ಅಂತರ್ಜಾಲದಲ್ಲಿ ಒಂದು ಬಗೆ ಕಾಣುತ್ತಿದೆ. ಕೆಲವು "ಕಟ್ಟಾ" ಕನ್ನಡಾಭಿಮಾನಿಗಳು ಕನ್ನಡದ ಉದ್ಧಾರ ಕನ್ನಡೇತರ ವಿಷಯಗಳ ಹಗೆಯಿಂದಲೇ ಸಾಧಿಸಬಹುದು ಎಂದು ತಿಳಿದುಕೊಂಡ ಹಾಗಿದೆ. ಕನ್ನಡ ಬೇರೆಯ ಭಾಷೆಗಳಿಂದ ಉಪಕೃತವಾಗಿದೆ ಎಂಬ ತಥ್ಯವನ್ನು ಒಪ್ಪಿದರೂ ಹಲುಬುವವರೇ ಹೆಚ್ಚು. ಒಪ್ಪುವವರೂ ಆ ಭಾಷೆಗಳ ಪ್ರಭಾವವನ್ನು ಕನ್ನಡದಿಂದ ಕಿತ್ತು ಹಾಕಬೇಕೆಂಬ ಹುನ್ನಾರದಲ್ಲಿರುವವರು. ಅಚ್ಚಗನ್ನಡದ ಪ್ರವರ್ತಕರಿವರು. ಉದಾಹರಣೆಗೆ: "ಭಾಷೆ" ಎಂದರೆ ಇಂಥವರಿಗೆ ಮೈಲಿಗೆ. ಉಲಿ ಅಥವಾ ನುಡಿಯೆನ್ನಬೇಕು. ಧನ್ಯವಾದವೆನ್ನದೆ "ನನ್ನಿ" (ತಮಿಳಿನ ನನ್ರಿಯ ಹಾಗೆ)ಯೆನ್ನಬೇಕು. ಒಂದು ಶಬ್ದ ಕನ್ನಡದಲ್ಲಿಲ್ಲವೆಂದರೆ ಅದರ ತದ್ಭವವನ್ನಾದರೂ ಉಪಯೋಗಿಸಬೇಕು - "ಹೊತ್ತಿಗೆ"ಯೆಂದೇ ಹೇಳಬೇಕೇ ಹೊರತು "ಪುಸ್ತಕ"ವೆಂದಲ್ಲ. ಹೀಗೆ ವೀರವ್ರತಿಗಳಿವರು. ಆದರೆ "ಇಂಜಿನಿಯರು" ಎಂದೆನ್ನಬಹುದು. ಜೊತೆಗೆ ಕನ್ನಡಕ್ಕೆ ಅದರದೇ ವಿಜ್ಞಾನವಿರಬೇಕು, "ನಾನು ಮೊದಲು ಕನ್ನಡಿಗ, ಆಮೇಲೆ ಭಾರತೀಯ" ಮುಂತಾದ ವಿಚಾರಗಳು ಈ ಗಣಕ್ಕೆ ಸೇರಿವೆ. ಇವನ್ನು ನೋಡಿದಾಗ "ತಮಿಳು-ದುರಭಿಮಾನ"ವೇ ಮೊದಲಾದ ವಿಷಯಗಳು ಮನಸ್ಸಿಗೆ ಬಂದುವು. ನಮ್ಮ ಜನರಲ್ಲಿ ಸಹಿಷ್ಣುತೆ ಕಡೆಮೆಯಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿತು. ಕನ್ನಡವನ್ನೇ ಉಪಯೋಗಿಸಬೇಕೆಂಬ ಇವರ ಧೋರಣೆ ಶ್ಲಾಘನೀಯವೇ ಆದರೂ ಇವರ ದ್ವೇಷ-ಪೂರ್ಣ-ಆಗ್ರಹ ಸರಿಯೇ ಎಂಬುದು ನನ್ನ ಪ್ರಶ್ನೆ. ನುಡಿಯೊಲುಮೆಯಿಂದ ನುಡಿಗಳನ್ನುಲಿಯಬೇಕೇ ಹೊರತು ಬೇರೆಯದರ ಹಗೆಯಿಂದಲ್ಲ. ಭಾಷೆಯ ಜೊತೆ ಜಾತಿ-ಧರ್ಮ-ಸಮಾಜವಾದಗಳ ಸಂಕರವನ್ನು ಇವರು ತಿಳಿದೋ ತಿಳಿಯದೆಯೋ ಮಾಡಿರುವಂತಿದೆ. ಆದರೆ ಒಂದು ಮಾತನ್ನು ಇವರು ನೆನಪಿಡಬೇಕು.ಭಾಷೆಯ ಗತಿಯನ್ನು ಒಂದು ಸಮುದಾಯ ಕಾಲ ನಡೆದ ಹಾಗೆ ನಿರ್ಧರಿಸುತ್ತದೆ. ಹಠಾತ್ತನೆ ಚುನಾವಣೆ ಮಾಡಿ ಅಲ್ಲ. ಈ ಗಣದ ಆ ಬಣದ ಕನ್ನಡವೆಂದೇನೂ ಇಲ್ಲ.
ಒಬ್ಬರದಂತೂ ಒಂದು ಭಾಷೆಯ ಗತಿಯನ್ನು ಚುನಾವಣೆ ಮಾಡಿ ನಿರ್ಧರಿಸಬಹುದೆಂಬ ಗಟ್ಟಿ ನಿಲುವು. ಜನರ ಚುನಾವಣೆಯ ತೀರ್ಪು ಭಾಷೆಯ ಗತಿಯನ್ನು ನಿರ್ಧರಿಸಬೇಕೇ ಹೊರತು ಹಳೆಯ ವ್ಯಾಕರಣವಲ್ಲ ಎಂಬುದು ಇವರ ಅಂಬೋಣ. ಇದು ನಾನೊಪ್ಪದ ಮಾತು. ಒಂದನೆಯ ತರಗತಿಯ ಮಕ್ಕಳನ್ನು ಕರೆದು - ನಿಮಗೆ ಗಣಿತದ ವಿಷಯ ಬೇಕೇ ಬೇಡವೇ ಎಂದು ತೀರ್ಪು ಕೇಳಿದರೆ, ಇದರಲ್ಲಿ ಬಹುಮಟ್ಟಿಗೆ ಮಕ್ಕಳು ಗಣಿತ ಬೇಡವೆಂದೇ ಹೇಳುತ್ತಾರೆ. ಆದ್ದರಿಂದ ಗಣಿತ ಆ ಒಂದನೆಯ ತರಗತಿಯ ಮಕ್ಕಳಿಗೆ ಯಾವಾಗಲೂ ಬೇಡವೆಂದೇ? ಅಥವಾ ನಮ್ಮ ಈಗಿನ ಚುನಾವಣೆಗಳು ಮಾಡುತ್ತಿರುವ ಅನರ್ಥ ಇವರಿಗೆ ಕಾಣಿಸುತ್ತಿಲ್ಲವೇ? ಸಂಸ್ಕೃತ-ವ್ಯಾಕರಣ ಬೇಡವೇ ಬೇಡ, ಕೇಶಿರಾಜನ ಶಬ್ದಮಣಿದರ್ಪಣವೂ ಸಂಸ್ಕೃತದ ಜಾಡನ್ನನುಸರಿಸುವುದರಿಂದ ಬೇಡ. ಅವೆಲ್ಲವೂ ಗೊಡ್ಡು, ಅವರನ್ನನುಸರಿಸುವರು ಪ್ರತಿಗಾಮಿಗಳು ಎಂದೆಲ್ಲ ವಾದ ಇವರಂಥ ಕೆಲವರದು. "ವೈಯುಕ್ತಿಕ", "ಇಂತಿ", "ಅಂತಃಶಿಸ್ತೀಯ","ಆಂತರ್ರಾಷ್ಟ್ರೀಯ" - ಇವೇ ಮೊದಲಾದ ಶಬ್ದಗಳು ವ್ಯಾಕರಣ-ರೀತ್ಯಾ ತಪ್ಪಾದರೂ ಕೆಲವು ಜನರು ಬಳಸುವುದರಿಂದ ಸರಿ ಎನ್ನುವ ಹಠ ಅವರದು. ನನ್ನ ಉತ್ತರ : ಜನಸಮುದಾಯ ಭಾಷೆಯ ಗತಿಯನ್ನು ನಿರ್ಧರಿಸಿದರೂ ಅದು ಹಠಾತ್ತನೆ ನಡೆಯುವುದಿಲ್ಲ. ಈ ವಿಷಯದಲ್ಲಿ ಒಂದು ಕಾಲಮಾನವನ್ನೂ ಹೇಳಲು ಬರುವುದಿಲ್ಲ. ಒಂದು ಹೊಲದಲ್ಲಿ ಬೆಳೆಗೂ ಕಳೆಗೂ ವ್ಯತ್ಯಾಸವಿಲ್ಲದೇ ಹೋಗಿ ಕಳೆಯೇ ಬೆಳೆ ಎಂದು ನಿರ್ಧರಿಸಲು ಏಕಾಏಕಿ ಆಗುವುದಿಲ್ಲ. ಅಥವಾ ಬೆಳೆದವರು ಬೆಳೆಯನ್ನು ಬಿಟ್ಟು ಕಳೆಯನ್ನೇ ತಿನ್ನಲು ಪ್ರಾರಂಭಿಸಿದರೆ ಆಗಬಹುದೋ ಏನೋ!
ಸಂಸ್ಕೃತದ ವ್ಯಾಕರಣವನ್ನು ಮಹರ್ಷಿ-ಪಾಣಿನಿಯು ಮಾಡಿದ್ದು. ಈತ ತನ್ನ ಕಾಲದ ಭಾಷೆಯನ್ನು ಸೆರೆಹಿಡಿದು ಅದನ್ನು ವರ್ಣಿಸುವ ನಿಯಮಗಳನ್ನು ಸೂತ್ರರೂಪದಲ್ಲಿ ನೀಡಿ ಸಂಸ್ಕೃತ-ವಾಙ್ಮಯಕ್ಕೆ ಉಪಕಾರವನ್ನು ಗೈದಿದ್ದಾನೆ. ಭಾಷೆಯ ಸಾಧ್ವಸಾಧುತನಗಳನ್ನು ಇದಮಿತ್ಥಮ್ ಎಂದು ನಿರೂಪಿಸಬಲ್ಲುದು ಈತನ ವ್ಯಾಕರಣ. ಈ ವ್ಯಾಕರಣಕ್ಕೆ ಸಂಸ್ಕೃತ ಸಾಹಿತ್ಯ ಬದ್ಧವಾದದ್ದರಿಂದಲೇ ನಮಗೆ ಈಗಲೂ ಕಾಲಿದಾಸನ, ವಾಲ್ಮೀಕಿಯ, ವ್ಯಾಸರ ವಚನಗಳು ಅರ್ಥವಾಗುವುದಕ್ಕೆ ಸಾಧ್ಯ. ಇದನ್ನು "ನಿಂತ ನೀರು" ಎಂದು ಕರೆಯುವವರೂ ಇದ್ದಾರೆ. ಇರಬಹುದು. ಆದರೆ ಆ ನಿಂತ ನೀರು ಕೊಳವಲ್ಲ, ಅಗಾಧ-ಸಮುದ್ರವೆಂದು ಹೇಳುತ್ತೇನೆ. ಸಂಸ್ಕೃತದಲ್ಲಿ ಅನಂತ-ನೂತನ-ಶಬ್ದೋತ್ಪಾದನದ ಅಂತಃಶಕ್ತಿಯಿದೆ. ಬೇರೆ ಭಾಷೆಯ ನೆರವನ್ನು ಕೋರದೆ ಹೊಸ ಪದವನ್ನು ಆವಿಷ್ಕರಿಸಬಹುದು. ಇರಲಿ. ಇದರ ಬಗ್ಗೆ ಆಮೇಲೆ ಮಾತಾಡೋಣ. ಗೀರ್ವಾಣಭಾಷೆಯ ವ್ಯಾಕರಣದಲ್ಲಿ ನಾವು ಕನ್ನಡಿಗರು ಪಂಡಿತರಾಗಬೇಕೆಂದೇನಿಲ್ಲ. ಆದರೆ ಸ್ಥೂಲವಾದ ಅರಿವನ್ನಾದರೂ ಕನ್ನಡಿಗರಾದ ನಾವು ಪಡೆಯಬೇಕು. ನಾವು ಸಾಮಾನ್ಯವಾಗಿ ಮಾತಾಡುವ ಭಾಷೆಯೆಡೆ ಗಮನ ಹರಿಸಿದರೆ ಸ್ವಲ್ಪ ಅದರ ಮಹತ್ತ್ವ ತಿಳಿಯುತ್ತದೆ. ಉದಾಹರಣೆಗೆ - "ಶಂಕರ" ಮತ್ತು "ರುದ್ರ" ಇವೆರಡೂ ಪದಗಳು ಶಿವನ ಪರ್ಯಾಯಶಬ್ದಗಳಾದರೂ ಶಂಕರನೆಂದರೆ ಮಂಗಲವನ್ನುಂಟು ಮಾಡುವವನು, ರುದ್ರನೆಂದರೆ - "ಹೋ ಎಂದು ಅಳುವವನು, ಲಯಕರ್ತಾ" ಎಂಬ ಅರ್ಥಗಳಿವೆ. ಆಯಾ ಸಂದರ್ಭಗಳಲ್ಲಿ ಶಬ್ದಗಳನ್ನು ಬಳಸಬೇಕಾದಾಗ ಅದರ ಅರ್ಥವ್ಯಾಪ್ತಿಯ ಕಡೆ ದೃಷ್ಟಿಯಿರಬೇಕೆಂಬುದಷ್ಟೆ ನನ್ನ ವಿಚಾರ. ಅಷ್ಟಕ್ಕೆಷ್ಟು ಸಂಸ್ಕೃತ ಬೇಕೋ ಅಷ್ಟನ್ನು ಕಲಿತರೆ ತಪ್ಪೇನಿಲ್ಲವಲ್ಲ? ಸಂಸ್ಕೃತಶಬ್ದಗಳನ್ನುಪಯೋಗಿಸುವಾಗ ಆ ಭಾಷೆಯ ಮರ್ಯಾದೆಯನ್ನು ಕನ್ನಡದಲ್ಲಿ ತರುವುದು ಸರಿಯೋ ತಪ್ಪೋ? ಈಗ, ಫ್ರೆಂಚಿನ "Bourgeois" ಅನ್ನು ಕನ್ನಡದಲ್ಲಿ ಆಂಗ್ಲದ ಮೂಲಕ ತಂದಾಗ ಅದನ್ನು ಬೂರ್ಝುವಾ ಅಂದೆವೋ ಅಥವಾ ಬೌರ್ಜಿಯಾಯಿಸ್ ಎಂದೆವೋ? ನೀವೇ ಯೋಚಿಸಿ ನೋಡಿ. ಇದನ್ನೇ ಸಂಸ್ಕೃತಮೂಲದ ಶಬ್ದಗಳಿಗೆ ಮಾಡಬೇಕೆಂಬುದು ನನ್ನ ಆಶಯ. "ಜ್ಞಾನ"ವನ್ನು ಗ್ನಾನವೆಂದು ಆಡುಭಾಷೆಯಲ್ಲಿ ಹೇಳಬಹುದೇ ಹೊರತು ಬರೆವಣಿಗೆಯಲ್ಲಿ ಯೋಗ್ಯವಲ್ಲ. ಹಾಗೆ ಬಂದಾಗ ಕೃತಜ್ಞತೆ-ಕೃತಘ್ನತೆಗಳಿಗೆ ಭೇದವಿಲ್ಲದೇ ಹೋಗಿ ಕೃತಗ್ನತೆ ಆಗಬಹುದು - ಇಲ್ಲೂ ಇಲ್ಲ, ಅಲ್ಲೂ ಇಲ್ಲ! ಸಂಸ್ಕೃತ-ವ್ಯಾಕರಣವನ್ನು ಕನ್ನಡಿಗರು ಆದ್ಯಂತವಾಗಿ ಅಧ್ಯಯನ ಮಾಡಬೇಕೆಂಬುದೇನೂ ನನ್ನ ಧೋರಣೆಯಲ್ಲ. ಅದೇ ಸಮಯದಲ್ಲಿ ಸಂಸ್ಕೃತ-ಭೂಯಿಷ್ಠವಾದ ಕನ್ನಡದಲ್ಲಿ ವ್ಯವಹರಿಸಬೇಕೆಂಬ ಧೋರಣೆಯೂ ನನ್ನದಲ್ಲ. ಈಗ್ಗೆ ಐವತ್ತು-ವರ್ಷಗಳ ಹಿಂದೆ ಬಂದ ಪುಸ್ತಕಗಳಲ್ಲಿ ಅದರ ಹದವಿದೆ. ಈಗಲೂ ಬಹಳಷ್ಟು ಪುಸ್ತಕಗಳಲ್ಲಿ ಅದನ್ನು ಕಾಣಬಹುದು. ಕೆ.ಎಸ್.ನರಸಿಂಹಸ್ವಾಮಿಗಳ ಭಾಷೆ ಆ ಹದಕ್ಕೆ ಒಂದು ಪ್ರತೀಕ (ನನ್ನ ಪ್ರಕಾರ). ಅಲ್ಲೋ ಇಲ್ಲೋ ತಪ್ಪು ಬಂದರೆ ವ್ಯಾಕರಣದ ದುರ್ಬೀನಿನಿಂದ ಪರೀಕ್ಷೆ ಮಾಡಬೇಕೆಂದೂ ಅಲ್ಲ. ಶಬ್ದಗಳ ಸಾಧುತ್ವದ ಬಗ್ಗೆ ಬುದ್ಧಿಯ ಒಂದು ಕೋಣೆಯಲ್ಲಿ ಯೋಚನೆಯಿರಲಿ ಎಂದು ಮಾತ್ರ ಹೇಳಲು ಬಯಸುವೆ. ವಸ್ತುತಃ ಹಲವು ಸಾಹಿತಿಗಳ ಭಾಷೆ ನೋಡಿದಾಗ ಹದದಿಂದಲೇ ಅವರು ಸಾಹಿತ್ಯನಿರ್ಮಾಣಮಾಡುವುದನ್ನು ನೋಡುತ್ತೇವೆ.
ಸಂಸ್ಕೃತಾಂಗ್ಲಗಳನ್ನು ಕನ್ನಡಕ್ಕೆ ಹಾನಿಕಾರಕ ಎಂದು ಪರಿಗಣಿಸಿ ಅವೆರಡನ್ನು ಸಮೀಕರಿಸುವುದನ್ನು ಕೂಡ ಕಂಡಿದ್ದೇನೆ. "ಎರಡೂ ಕನ್ನಡಕ್ಕೆ ಪರಕೀಯ. ಆದ್ದರಿಂದ ಅವೆರಡೂ ತ್ಯಾಜ್ಯ" ಎಂಬ ಭಾವನೆ ಕೂಡ ಇದೆ. ನನ್ನ ಪ್ರಕಾರ ಅದು ಅವಿವೇಕ. ಏಕೆಂದರೆ ಆಂಗ್ಲವಿಲ್ಲದೆ ಕನ್ನಡದ ಸಾಕಷ್ಟು ಸಾಹಿತ್ಯವಿದೆ. ಆದರೆ ಸಂಸ್ಕೃತವಿಲ್ಲದೆ ಕನ್ನಡಸಾಹಿತ್ಯ ಇರಲಿಲ್ಲ. ಆಂಡಯ್ಯ ಬರೆದ ಅಚ್ಚಗನ್ನಡಗಬ್ಬದಲ್ಲಿ ಕೂಡ ಸಂಸ್ಕೃತದಿಂದ ಪಡೆದ ಕನ್ನಡೀಕರಿಸಿದ ಶಬ್ದಗಳೇ ಇದ್ದುವು. ಹಿಂದೆಯೇ ಬರೆದ ಹಾಗೆ ಸಂಸ್ಕೃತಶಬ್ದಗಳ ಹಿತ-ಮಿತವಾದ ಬಳಕೆ ಕನ್ನಡದಲ್ಲಿರಬೇಕು. ಪಿತಾಶ್ರೀ ಅಥವಾ ಮಾತ್ರೃಶ್ರೀ ಎಂದು ತಂದೆ-ತಾಯಿಯರನ್ನು ಸಂಬೋಧಿಸುವುದು ಹಾಸ್ಯಾಸ್ಪದವೇ ಬಿಡಿ. ತೆಲುಗಿನ ಹಾಗೆ ಅತಿ ಮಾಡಬಾರದು. ತಮಿಳಿನ ಹಾಗೆ ತೊರೆಯಲೂ ಬಾರದು. ಆದರೂ ತಮಿಳಿನಲ್ಲಿ ಅವೆಷ್ಟೋ ಸಂಸ್ಕೃತಶಬ್ದಗಳಿವೆ. ಅವನ್ನು ನಿವಾರಿಸಲು ಸಾಧ್ಯವಿಲ್ಲ. ಎಲ್ಲ ಅನಿಷ್ಟಗಳಿಗೂ ಶನೈಶ್ಚರ ಮೂಲವೆಂಬಂತೆ ಸಂಸ್ಕೃತವನ್ನು ದೂರುವುದು ಸರಿಯಲ್ಲ. ಇದನ್ನು ಒತ್ತಿ ಹೇಳುತ್ತಿರುವುದೇಕೆಂದರೆ ಜಾತಿ ರಾಜಕಾರಣ ಭಾಷೆಯಲ್ಲಿ ನುಸುಳುತ್ತಿದೆ. ಅದು ಭಾಷೆಯ ಒಳಿತಿಗೆ ಅಷ್ಟು ಒಳ್ಳೆಯ ಸಂಗತಿಯಲ್ಲ.
ಕೆಲವರು ಆಡುಗನ್ನಡಕ್ಕೇ ಗ್ರಾಂಥಿಕ ಕನ್ನಡಕ್ಕಿಂಥ ಹೆಚ್ಚಾಗಿ ಪ್ರಾಧಾನ್ಯ ಕೊಡಬೇಕು ಎಂದು ವಾದಿಸುವವರಿದ್ದಾರೆ. ಆಡುಗನ್ನಡಕ್ಕೂ ಗ್ರಂಥಗಳ ಕನ್ನಡಕ್ಕೂ ವ್ಯತ್ಯಾಸವಿದೆ. ಅಂತರಜಾಲದ ಬ್ಲ್ಗಾಗುಗಳ ಕನ್ನಡವೂ ಬಹಳಷ್ಟು ಎರಡನೆಯ ಬಗೆಯದೇ. ಆಡುಗನ್ನಡಕ್ಕೆ ಮಾತ್ರ ಮಣೆಹಾಕಿದರೆ ಕಾಲಕ್ರಮೇಣ ನಮ್ಮ ಶಬ್ದಭಂಡಾರ ಕುಸಿದುಹೋಗುತ್ತದೆ. ಕನ್ನಡ ಎಂದು ಹೇಳಲು ಏನುಳಿಯುತ್ತದೆ? ಹಳಗನ್ನಡದ ಎಷ್ಟೋ ಶಬ್ದಗಳು ಈಗ ಕಳೆದುಹೋಗಿವೆ. ಅದರಿಂದ ನಮ್ಮ ಭಾಷೆಯೇ ಬಡವಾಗಿದೆ. ಇದೇ ಮುಂದೆ ಹೋಗಿ ತುಳು-ಕೊಡವ ಭಾಷೆಗಳ ಸ್ಥಿತಿ ಕನ್ನಡದ್ದಾಗಬಾರದು ಎಂದು ನನ್ನ ಆಶಯ.
ಪಂಪ-ರನ್ನ-ಕುಮಾರವ್ಯಾಸ-ವಚನಕಾರ-ದಾಸರ ಕನ್ನಡ ನಮಗೆ ಬೇಕು. ಏಕೆಂದರೆ ಅವುಗಳಲ್ಲಿ ಹಾಸುಹೊಕ್ಕಾಗಿರುವ ಕನ್ನಡ ಸಂಸ್ಕೃತಿ ನಮಗೆ ಬೇಕು. ಆಡುಭಾಷೆಯನ್ನೇ ಗಮನಿಸಿ ಗ್ರಾಂಥಿಕಭಾಷೆಯನ್ನು ಎಣಿಸದೇ ಹೋದರೆ ಅನರ್ಥವಾದೀತು. ಒಂದು ಭಾಷೆ ಏಕೆ ಬೇಕಾಗುತ್ತದೆ? ಮುಖ್ಯವಾಗಿ ಸಂವಹನೆಗೆ. ಇದರದೇ ಇನ್ನೊಂದು ಮುಖ ಭಾವನಾಭಿವ್ಯಕ್ತಿ. ದೈನಂದಿನ ಸಂಪರ್ಕಕ್ಕೆ ಆಡುಭಾಷೆ ಮುಖ್ಯ. ಆದರೆ ಅದರಲ್ಲಿ ಬಳಸುವ ಶಬ್ದಗಳ ಸಂಖ್ಯೆ ಕಡಮೆ. ಇದರ ಜೊತೆಗೆ ಒಂದು ಪ್ರಾಂತ್ಯದ ಆಡುನುಡಿಗೂ ಮತ್ತೊಂದರ ಆಡುನುಡಿಗೂ ಬಹಳಷ್ಟು ವ್ಯತ್ಯಾಸ ಕಾಣುತ್ತದೆ. ಆಡುನುಡಿಯನ್ನು ಇದೇ ಎಂದು ಹೇಳಲು ಆದ್ದರಿಂದ ಕಷ್ಟ. ಇದಕ್ಕೆ ವ್ಯಾಕರಣ ಮಾಡಿದರೂ ನಿತ್ಯ ಬದಲಾಯಿಸುತ್ತಿರಬೇಕು. ಭಾವಾಭಿವ್ಯಕ್ತಿಗೂ ಕಾನೂನು ಮುಂತಾದ ವಿಷಯಗಳಲ್ಲೂ ಆ ಪ್ರದೇಶಗಳ ನಡುವೆ ಸಂಪರ್ಕ ಸಾಧ್ಯವಾಗಬೇಕಾದರೆ ಆ ಕನ್ನಡ ಗ್ರಾಂಥಿಕವೆಂದು ಕರೆಸಿಕೊಳ್ಳುವ ಕನ್ನಡಕ್ಕೆ ಹೆಚ್ಚು ಹತ್ತಿರ ಬರುತ್ತದೆಯಲ್ಲವೇ? ಜೊತೆಗೆ ವಿಜ್ಞಾನ, ವಾಣಿಜ್ಯ, ಕಾನೂನು ಮುಂತಾದ ವಿಷಯಗಳಲ್ಲಿ ಆಡುಭಾಷೆಯೇ ಸಾಕಾಗುತ್ತದೆಯೇ? ಆಮೇಲೆ ರಸಾನಂದ ಕೊಡುವ ಸಾಹಿತ್ಯಕ್ಕೆ? ಕನ್ನಡದ ಅಪಾರಸಾಹಿತ್ಯವನ್ನು ಸವಿಯುವುದಕ್ಕೆ ಆಡುಗನ್ನಡವಷ್ಟೇ ಸಾಲದು. ಕನ್ನಡವೆಂದರೆ ಇವೆಲ್ಲವೂ ಮತ್ತು ಇದಕ್ಕಿಂಥ ಹೆಚ್ಚಿನದು. ಆಡುಗನ್ನಡವನ್ನೇ ಎತ್ತಿಹಿಡಿಯುವವರು ಇದನ್ನು ಗಮನಿಸಲೇಬೇಕು.
"ಹಿಂದೂಸ್ಥಾನದ ಆರು ಕುರುಡರು" ಎಂಬ ಪದ್ಯ ನೆನಪಿಗೆ ಬರುತ್ತದೆ. ಕನ್ನಡ ಅಲ್ಲಿನ ಆನೆಯಿದ್ದ ಹಾಗೆ. ಒಬ್ಬೊಬ್ಬರೂ ತಮಗೆ ಕಂಡದ್ದೇ ಸತ್ಯವೆಂದು ತಿಳಿದು ಹಾಗೆ ವಾದಿಸುತ್ತಾರೆ. ಆದರೆ ಈ ವಿಷಯದಲ್ಲಿ ನಾನು ಅರೆಕುರುಡನೆಂದು ತಿಳಿದೇ ಇದನ್ನು ಬರೆಯುತ್ತಿದ್ದೇನೆ. ಒಂದೇ ವಸ್ತುವಿನಲ್ಲಿ ಆಸಕ್ತರಾಗಿರುವ ಬೇರೆಯವರೂ ಇದೇ ದೃಷ್ಟಿಕೋನದಿಂದ ನೋಡಿದರೆ ಬೇರೆಬೇರೆ ದೃಷ್ಟಿಗಳ ಸಮನ್ವಯ ಸಾಧ್ಯವೋ ಏನೋ. ಅದನ್ನು ಬಿಟ್ಟು ಕುರುಡರೊಬ್ಬರು ಮತ್ತೊಬ್ಬರನ್ನು ಅರೆಕುರುಡನೆಂದು ಜರೆಯುವುದೇ ಇಂದಿನ ಸ್ಥಿತಿಯಾಗಿದೆ. ತಮಗೆ ಸಿಕ್ಕ ಬೈಗುಳಕ್ಕೆ ತಿರುಗಿ ಬೈಯುವುದರಲ್ಲಿ ಶಕ್ತಿಯ ವ್ಯಯವಾಗುತ್ತದೆಯೇ ಹೊರತು ಬೇರೆ ಪ್ರಯೋಜನವಿಲ್ಲ.
ಎಲ್ಲರಿಗೂ ಕನ್ನಡ-ನಾಡಹಬ್ಬದ ಶುಭಾಶಯಗಳು.
|| ಸಿರಿಗನ್ನಡಂ ಗೆಲ್ಗೆ ||