ಸ್ನಾನದ ಮನೆಯ ಕಿಟಕಿಯಿಂದ ಮಿಣಿಮಿಣಿ ಮಿಂಚುವ ಹಸುರೆಲೆಗಳ ನಡುವೆ ರವಿರಶ್ಮಿಗಳ ಆಟ ಮನಸ್ಸನ್ನು ಸೂರೆಗೊಂಡಿತ್ತು. ಮೈಮೇಲೆ ಬೀಳುವ ಸುಖೋಷ್ಣದ ನೀರು ಆಹ್ಲಾದಕರವಾಗಿತ್ತು. ಸ್ವಲ್ಪ ನೀರನ್ನು ಬೊಗಸೆಯಲ್ಲಿ ಹಿಡಿದು ದಿಟ್ಟಿಸಿದೆ. ಕಾವೇರಿನದಿಯ ಆ ಸ್ವಚ್ಛ ಸುಂದರಾರ್ದ್ರತೆಯನ್ನು ಮುಖಕ್ಕೆ ಎರಚಿ ಮುದಗೊಂಡಿದ್ದೆ. ಕಾವೇರಿ ನದಿಯದು ಈ ನೀರೆಂದು ಒಟ್ಟಿಗೆ
"ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||" ಎಂಬ ಸರ್ವವಿದಿತ ಶ್ಲೋಕ ಮನಃಪಟಲದಲ್ಲಿ ಮೂಡಿ ಮಾಯವಾಯ್ತು. ಒಮ್ಮೆಲೆ ಆ ನೀರಿನ ಮೇಲೆ ಭಕ್ತಿಯೇ ಉಕ್ಕಿತು.
ನೀರು ನಮಗೆ ನಿತ್ಯ ಸಿಗುವ ವಸ್ತುವಾದರೂ ನಮ್ಮಲ್ಲಿಲ್ಲದಿದ್ದರೆ ನಾವು ಅಸ್ವಸ್ಥರು. ಪಾನ-ಪಾಕ-ಪಾನಕ-ಪಾವನ ಮಾಡುವುದಕ್ಕೆ ಪ್ರಾಣಪ್ರಾಯವಾದ ಆಪೋದೇವಿಯರ ಕೃಪೆಯಿರಬೇಕು. ನಮ್ಮಲ್ಲಿ ತಕ್ಕ ಮಟ್ಟಿನ ತೇವದ ಅಂಶವಿಲ್ಲದಿದ್ದರೆ ನಾವು ಮೃತರೇ! ನಾವು ಅದರಿಂದ ಮಜ್ಜನ ಮಾಡದಿದ್ದರೆ ಮಡಿಯಿರದೇ ಮಡಿಯಬೇಕಾಗುತ್ತದೆ. ಅದಿಲ್ಲದೆ ಅಡುಗೆಯಿಲ್ಲ. ಸುಡುಬಿಸಿಲಿನಲ್ಲಿ ಬಾಯಾರಿ ಬೆಂಡಾದವನ ಬಾಯಿಗೆ ಎಂಥ ರಸಪಾಕ ಕೊಟ್ಟರೂ ಬೇಡ, ಒಂದೆರಡು ಗುಟುಕು ನೀರೇ ಸಾಕು.
ನಮ್ಮ ಹಿಂದಿನವರು ಪ್ರಕೃತಿಯ ಎಲ್ಲ ಅಂಶಗಳನ್ನೂ ಗೌರವಿಸಿದ್ದರು. ಆ ಕೃತಜ್ಞತೆಯೇ ಸ್ತವ-ಮಂತ್ರ-ಸ್ತುತಿಗಳಲ್ಲಿ ತುಂಬಿದೆ. ಅದರ ಮಹತ್ತ್ವದ ಅರಿವು ಪ್ರಾಣಿಮಾತ್ರಕ್ಕೂ ಇರುವಾಗ ಹೋಮೋ ಸೇಪಿಯೆನ್ಸ್ ಎಂದು ನಮ್ಮನ್ನು ನಾವೇ ಕರೆದುಕೊಂಡ ಮಾನವರಿಗೆ ಇದರ ಅರಿವು ಎಷ್ಟಿರಬೇಡ. ಇಲ್ಲೇ ನನಗೆ ಸಂಶಯ. ಆ ಕ್ಷಣಕ್ಕೆ ಕುಡಿಯಲು-ಕುಳಿಯಲು ನೀರಿದ್ದರೆ ಸಾಕು. ಮುಂದಣ ಕಾಲದ ಬಗ್ಗೆ ಇರಬೇಕಾದ ಜಾಗ್ರತೆ ನಮಗಿದ್ದ ಹಾಗಿಲ್ಲ.
ಹೀಗಿದ್ದಲ್ಲದೆ ಕೊಳವೆಬಾವಿಗಳ ಕೊರೆತದ ನಿರಂತರ ಮೊರೆತ ರಾಜ್ಯಾದ್ಯಂತ ಕೇಳುತ್ತಿರಲಿಲ್ಲ. ಭೂಜಲ ಒಂದು ಆಪದ್ಧನವಿದ್ದ ಹಾಗೆ. ಸಾಮಾನ್ಯದ ಮೋಜಿಗೆ ನಾವೆಂದಾದರೂ ನಮ್ಮ ಆಪದ್ಧನವನ್ನು ಉಪಯೋಗಿಸುವ ಅವಿವೇಕವನ್ನೆಸಗುತ್ತೇವೆಯೇ? ನೀರಿನ ಬಗ್ಗೆ ಅದೇನೋ ಔದಾಸೀನ್ಯ, ತಿರಸ್ಕಾರ. "ನೀರಿನ ಹಾಗೆ ಹಣ ಖರ್ಚುಮಾಡಿಬಿಟ್ಟರು" ಎನ್ನುವುದು ನಮ್ಮ ಜಾಯಮಾನ. ನೀರೆನ್ನುವುದು ಅಷ್ಟು ಅಗ್ಗದ ವಸ್ತು! ಇದರ ಮೌಲ್ಯ ಬರಪ್ರದೇಶದಲ್ಲಿ ಐದಾರುಮೈಲಿ ನಿತ್ಯವೂ ಕುಡಿನೀರು ತರಲು ಸೊಂಟಸವೆಸಿಕೊಂಡ ಸೊರಗಿದವರನ್ನು ಕೇಳಬೇಕು.
ನೀರನ್ನು ಕುರಿತಾದ ವ್ಯಾಜ್ಯಗಳು ಕಾವೇರೀಜನ್ಮಸ್ಥಾನವಾದ ಕರ್ಣಾಟಕಕ್ಕೆ ಹೊಸದೇನಲ್ಲ. ಹಿಂದೆ ಹೆಣ್ಣು-ಹೊನ್ನು-ಮಣ್ಣುಗಳಿಗೆ ನಡೆದ ಯುದ್ಧಗಳು ನಾಳೆ ನೀರಿಗೋಸ್ಕರವೇ ನಡೆದರೂ ಆಶ್ಚರ್ಯವಿಲ್ಲ. ನೀರಿನ ಮೂಲಗಳು - ಗ್ರೀನ್-ಹೌಸ್ ಮುಂತಾದ ಮಾನವನಿರ್ಮಿತ-ಪರಿಸರ-ಘಾತಕಗಳಿಂದ ಬತ್ತುತ್ತಿವೆ. ತಲತಲಾಂತರಗಳಿಂದ ಭಾರತದ ಆಧ್ಯಾತ್ಮಿಕವಾಹಿನಿಯಂತೆ ಪ್ರವಹಿಸುತ್ತಿರುವ ತ್ರಿಪಥಗೆಯಾದ ಗಂಗೆಯ ಉಗಮಸ್ಥಾನವಾದ ಗಂಗೋತ್ರಿ ಬತ್ತುತ್ತಿದೆ. ಕಿಲೋಮೀಟರ್ ಗಳಷ್ಟು ವರ್ಷೇ ವರ್ಷೇ ಕುಗ್ಗುತ್ತಿದೆ. ಈ ಗತಿಯಲ್ಲಿ ಸಾಗಿದರೆ ನೂರು ವರ್ಷದ ನಂತರ ಗಂಗೆಯೂ ಸರಸ್ವತಿಯ ಹಾಗಾಗುತ್ತದೆ. ಕೋಟ್ಯಂತರ ಉತ್ತರಭಾರತೀಯರು ನೆಲೆಸಿದ್ದ ಗಂಗೆಯ ಮೈದಾನದಲ್ಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಜೊತೆಗೆ ಚೀನವೂ ಬ್ರಹ್ಮಪುತ್ರ ನದಕ್ಕೆ (ಇದೊಂದು ನದ - ಅಥವಾ ಗಂಡುನದಿ) ಆಣೆಕಟ್ಟನ್ನು ತನ್ನ ದೇಶದಲ್ಲಿಯೇ ಕಟ್ಟಿಕೊಳ್ಳುತ್ತಿದೆ. ಭಾರತಕ್ಕೆ ಇದರಿಂದೇನಾಗಬಹುದು?
ನೀರಿಗಾಗಿ ಸಾರ್ವಜನಿಕ ನಲ್ಲಿಯ ಬಳಿ ನಡೆಯುತ್ತಿದ್ದ ಹೊಡೆದಾಟಗಳು ಈಗ ಯಾವಾಗಲೂ ನಡೆಯಬಹುದು. ಪರ್ವತದ ಝರಿಗಳ ನೀರನ್ನು ಈಗಾಗಲೇ ಕಂಪನಿಗಳು ಪರ್ವತದಷ್ಟೇ ಎತ್ತರದ ಬೆಲೆಗಳಿಗೆ ಮಾರುತ್ತಿದ್ದಾರೆ (ಎವಿಯನ್, ಹಿಮಾಲಯನ್ ಮುಂತಾದ ನೀರುಗಳು). ಒಳ್ಳೆಯ ಕುಡಿಯುವ ನೀರು ಆಫ್ರಿಕದಲ್ಲೇ ಅಲ್ಲ, ನಮ್ಮ ಭಾರತದಲ್ಲೇ, ಕರ್ಣಾಟಕದ ಎಷ್ಟೋ ಪ್ರದೇಶಗಳಲ್ಲಿ ಈಗಲೇ ದೊರೆಯುವುದಿಲ್ಲ. ನೀರಿನ ಬರ ಬಂದಾಗ ನಮ್ಮ ಅವಸ್ಥೆಯನ್ನು ಊಹಿಸಿಕೊಳ್ಳಬಹುದು.
ಇದುವರೆವಿಗೂ ಹೇಳಿದ್ದು ಎಲ್ಲರಿಗೂ ತಿಳಿದ ವಿಷಯವೇ. ಆದರೂ ನಮ್ಮ ನಿತ್ಯದ ನಡೆವಳಿಕೆಯಲ್ಲಿ ಆ ಕಳಕಳಿಯನ್ನು ನಾವು ತೋರುವುದಿಲ್ಲ.
ನಾನೇನೂ ತಿಳಿದವನಲ್ಲ. ಆದರೂ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಬಗೆದು ಈ ಕೆಲವು ತೋಚಿದ ದೈನಂದಿನ ಜೀವನದಲ್ಲಿ ಬಳಸಬಹುದಾದ ಅಂಶಗಳನ್ನು ಬರೆಯುತ್ತಿದ್ದೇನೆ.
೧. ಸ್ನಾನ ಮಾಡುವಾಗ ಶುದ್ಧಿಗೆ ಬೇಕಾದಷ್ಟು ಮಾತ್ರ ನೀರು ಉಪಯೋಗಿಸುವುದು. ಹಲ್ಲುಜ್ಜುವಾಗ, ಕ್ಷೌರ ಮಾಡುವಾಗ ನಲ್ಲಿಯ ನೀರನ್ನು ತಿರುಗಿಸದೇ ಇರುವುದು.
೨. ಪಾತ್ರೆಯನ್ನು ನಲ್ಲಿಯ ಕೆಳಗಿಟ್ಟ ಮೇಲೆ ನಲ್ಲಿಯನ್ನು ತಿರುಗಿಸುವುದು
೩. ಮನೆಯಲ್ಲಿ ಗಿಡಗಳಿದ್ದರೆ ಅವಕ್ಕೆ ಹನಿ ನೀರಾವರಿ ಉಪಯೋಗಿಸುವುದು
೪. ಮನೆಗೆ ಮಳೆನೀರುಕುಯಿಲಿನ ವ್ಯವಸ್ಥೆ ಅಳವಡಿಸುವುದು
೫. ಮನೆಯ ಮೇಲಣ ಜಲಾಲಯ (ಟ್ಯಾಂಕ್) ಕ್ಕೆ ನೀರನ್ನು ಕೆಳಗಿನ "ಸಂಪ್" ನಿಂದ ಕಳಿಸಲು ಸ್ವಯಂಚಾಲಿತ ನೀರಿನ ಮಟ್ಟದ ನಿಯಾಮಕವನ್ನು ಅಳವಡಿಸಿವುದು. ಇದು ನೀರು ವೃಥಾ ಪೋಲಾಗುವುದನ್ನು ತಪ್ಪಿಸುತ್ತದೆ.
೬. ರಾಸಾಯನಿಕ ಸೋಂಕಿಲ್ಲದ ನೀರಿನ ಮರುಬಳಕೆ. ತರಕಾರಿ ತೊಳೆದ ನೀರು, ಅಕ್ಕಿ ತೊಳೆದ ನೀರು, ಇತ್ಯಾದಿಗಳನ್ನು ಗಿಡಗಳಿಗೆ, ಅಥವಾ ಶುದ್ಧಿಯ ನಂತರ ಭೂಮಿಗೆ ಸೇರಿಸಬಹುದಾಗಿದೆ.
೭. ಶೌಚಾಲಯಕ್ಕೆ ಕಡಿಮೆ ನೀರು ಬಳಸುವ ಫ್ಲಶ್ ಅಳವಡಿಸುವುದು.
ನಾನು ಹೇಳಿದ್ದು ವೀರಪರಿಸರವಾದಿಗಳ ಮಟ್ಟಿನದಲ್ಲ. ಅವರನ್ನು ಕೇಳಿದರೆ ಮತ್ತೂ ಹೇಳಿಯಾರು.
ನೀರು ಪೋಲಾಗುವುದನ್ನು ಕಂಡಾಗ ನಮ್ಮ ಕಣ್ಣುಗಳಿಂದ ನೀರು ಬರುವಷ್ಟು ದುಃಖವಾಗಬೇಕು. ಆಗ ನಮ್ಮ ಜನಾಂಗ ನೀರಿನ ಬರವನ್ನು ತಪ್ಪಿಸಬಹುದು. ಇದಾಗುವವರೆಗೂ ನಮಗೆ ದೇವರೇ ಗತಿ.