ದಿನದ ಆರಂಭದಲ್ಲಿ ಅದರ ಮುಗಿವೆಲ್ಲೆಂಬುದನ್ನು ಬಲ್ಲವರು ಯಾರು? ಆ ದಿನ ನನ್ನ ಕತ್ತು ತನ್ನ ನೋವಿನಿಂದ ಮನೆಯಿಂದಲೇ ಕೆಲಸ ಮಾಡುವಂತೆ ಪ್ರೇರೇಪಿಸಿತು. ಒಂದೆರಡು ದಿನಗಳಿಂದ ನನ್ನ ವಾಹನದ ಪೀಠಗಳ ಹೊದಿಕೆಗಳು ಸಾಕಷ್ಟು ಕೊಳೆಯಾಗಿ ಕಾಣುತ್ತಿದ್ದವು. ಜೆ.ಸಿ.ರೋಡಿನ ಬಳಿ ಹೋಗಿ ಅಲ್ಲಿರುವ ಹಲವಾರು ಮಳಿಗೆಗಳೊಂದರಲ್ಲಿ ಸೀಟ್-ಕವರನ್ನು ಬದಲಾಯಿಸೋಣ ಎಂದು ಮನಸ್ಸಾಯ್ತು. ಅಂದ ಹಾಗೆ, ಈ ಕಾರ್ಯಕ್ರಮ ಹಲವು ದಿನಗಳಿಂದ ಮಾಡಬೇಕು ಎಂದು ಅಂದುಕೊಂಡಿದ್ದೆ. ಅಂತೂ ನನ್ನ ಕಾರಿಗೆ ಕಾಲ ಕೂಡಿ ಬಂದಿತ್ತು. ಸಂಜೆಯಾಯ್ತು.
ಬೆಂಗಳೂರು ಮಹಾನಗರದ ವಾಹನಮಹಾಪ್ರವಾಹದಲ್ಲಿ ಈಸಿ ನಮ್ಮ ಸ್ಥಲ ಸೇರುವ ವೇಳೆಗೆ ಸುಮಾರು ಆರು ಘಂಟೆಯಾಗಿತ್ತು. ನನ್ನ ಚಾಲಕನ ಪರಿಚಯದವನ ಅಂಗಡಿಯಲ್ಲಿ ಎಷ್ಟು ಬೆಲೆ ಮೊದಲಾದ ಮಾತು ಕತೆಯ ನಂತರ ಸೀಟ್ ಕವರ್ ಹೊದಿಸಲು ಸುಮಾರು ಎರಡು ಘಂಟೆಯಾಗಬಹುದೆಂದು ಅಂದಾಜು ಮಾಡಿದೆ. ಆದರೆ ಅಷ್ಟು ಹೊತ್ತು ಅಲ್ಲೇನು ಮಾಡುವುದು? ಅದೃಷ್ಟವಶಾತ್ ನಾನಿದ್ದದ್ದು ಊರ್ವಶಿ (ವಸ್ತುತಃ "ಉರ್ವಶೀ" ಎಂದಿರಬೇಕಿತ್ತು, ಬಿಡಿ) ಚಿತ್ರಮಂದಿರದ ಎದುರಿನಲ್ಲಿ. ಹಳೆಯ ಬೆಂಗಳೂರಿನವರಿಗೆ ಇದು ಎಂಥ ಒಳ್ಳೆಯ ಜಾಗವೆಂದು ನಾನು ವರ್ಣಿಸಬೇಕಿಲ್ಲ. ಎದುರಿನಲ್ಲೇ ಖ್ಯಾತ ಮಾವಳ್ಳಿ ಉಪಾಹಾರ ಕೇಂದ್ರವಿದೆಯಲ್ಲ. ಆದರೆ ಎಡಕ್ಕೆ ವಿಶ್ವವಿಖ್ಯಾತವೇ ಆದ ಕೆಂಪು ತೋಟದ ಮುಖ್ಯದ್ವಾರ (ಲಾಲ್ ಬಾಗ್ ಮೈನ್ ಗೇಟ್) ಕರೆಯುತ್ತಿತ್ತು. ಕುವೆಂಪುರವರ ಕವಿವಾಕ್ಕೂ ಈ ಕರೆಯನ್ನು ಸೇರಿದ್ದರಿಂದ ಸಸ್ಯಕಾಶಿಯೆಡೆಗೇ ನಡೆದೆ.
ತಮಾಷೆಯೆಂದರೆ ನಾನು ಬೆಂಗಳೂರಿನವನಾದರೂ ಲಾಲ್-ಬಾಗಿಗೆ ಐದಾರು ಸಲಕ್ಕಿಂತ ಹೆಚ್ಚಾಗಿ ಹೋಗಿಲ್ಲ. ಹಿತ್ತಲ ಗಿಡ ಮದ್ದಲ್ಲದ ಹಾಗೆ ನಮ್ಮ ಸುತ್ತಲಿನ ಜಾಗವನ್ನು ನೋಡಲು ಹೋಗುವುದಿಲ್ಲವೆಂಬುದು ನನಗಂತೂ ಜೀವನದ ಸತ್ಯಗಳಲ್ಲೊಂದು. ಹೀಗಾಗಿ ಒಬ್ಬನೇ ಲಾಲ್ ಬಾಗಿಗೆ ಇದಕ್ಕೆ ಮೊದಲು ಎಂದೂ ಹೋದವನಲ್ಲ. ಇದು ನನ್ನ ಪತ್ನಿಗೂ ಇಷ್ಟವಾದ ಜಾಗವಾದ್ದರಿಂದ ಅವಳನ್ನು ಬಿಟ್ಟು ಒಬ್ಬನೇ ಹೋಗುವುದು ಹೇಗೆ? ಫೋನಿಸಿ ತಪ್ಪೊಪ್ಪಿಗೆ ಮಾಡಿಕೊಂಡೆ. ಹೀಗೆ ಅಳುಕನ್ನಳಿಸಿ ಧೈರ್ಯವಾಗಿ ಟಿಕೇಟಿನ ಕೌಂಟರೆಡೆಗೆ ಹೆಜ್ಜೆ ಹಾಕಿದೆ. ಪ್ರವೇಶಶುಲ್ಕ ಹತ್ತು ರೂಪಾಯಿ. ಸುಂದರವಾದ ಸಸ್ಯಗಳ ನಡುವೆ ವಾಯುವಿಹಾರ ಮಾಡಲು ಹತ್ತು ರೂಪಾಯೇನೂ ಹೆಚ್ಚಲ್ಲ. ಆದರೆ ಚಿಕ್ಕಂದಿನಲ್ಲಿ ಇಲ್ಲಿ ದುಡ್ಡು ಕೊಡದೇ ಬಂದದ್ದು ನೆನಪಿನಲ್ಲಿ ಸುಳಿಯಿತು.
ಒಳಗೆ ಹೆಜ್ಜೆಯಿಡುತ್ತಲೇ ಬೇರೊಂದು ಪ್ರಪಂಚದೊಳು ನಡೆದ ಹಾಗಾಯ್ತು. ಹೊರಗೆ ಬೊಬ್ಬಿಡುವ ವಾಹನಗಳ ಸಂದಣಿಯ ಜೊತೆ ಎಲ್ಲೆಲ್ಲೂ ಹೊಗೆ. ಹೆಜ್ಜೆಯಿಡಲೂ ಜಾಗವಿಲ್ಲ. ಆದರೆ ಒಳಗೆ? ಎಷ್ಟು ಹಸಿರು! ಬಿಸಿಲಲ್ಲಿ ಬಸವಳಿದ ಬಡವನಿಗೆ ಆಸರೆಯ ನೆರಳು ಸಿಕ್ಕಹಾಗಾಯ್ತು. ಬಾಗಿಲ ಬಳಿಯೇ ಕುದುರೆಸವಾರನೊಬ್ಬನ ಭವ್ಯ ಶಿಲ್ಪ ನನ್ನನ್ನು ಎದುರುಗೊಂಡಿತ್ತು. ಅದು ಚಾಮರಾಜ ಒಡೆಯರದ್ದು ಎಂದು ಆಮೇಲೆ ತಿಳಿಯಿತು. ಐರೋಪ್ಯ ಮಾದರಿಯನ್ನು ನೆನಪಿಸುವ ಈ ಶಿಲ್ಪದ ಕುದುರೆಯ ನಾಲ್ಕೂ ಕಾಲುಗಳು ನೆಲದ ಮೇಲಿದ್ದವು. ಅಂದರೆ ಈತ ಸಹಜವಾಗಿಯೇ ಮಡಿದದ್ದು, ಯುದ್ಧದಲ್ಲಲ್ಲ ಎಂದು ತಿಳಿಯುತ್ತದೆ. ಮುಂಗಾಲೆರಡು ಮೇಲೇರಿದ್ದರೆ ಅದು ಅಶ್ವಾರೋಹಿಯ ವೀರಮರಣದ ಸಂಕೇತ. ಇದು ಐರೋಪ್ಯರ ಒಂದು ರೀತಿ. ಪಕ್ಕದಲ್ಲಿ ಧರ್ಮದೇವತೆಯ ಮತ್ತು ಕಲಾದೇವತೆಯ ಮೂರ್ತಿಗಳು. ಈ ರಾಜರ ಆಳ್ವಿಕೆಯಲ್ಲಿ ಇವೆರಡೂ ಸಮವಾಗಿದ್ದವು ಎಂಬುದರ ಪ್ರತೀಕ.
ಬೆಂಗಳೂರು ದೂರದರ್ಶನದ ಹಿಂದಿನೊಂದು ಕಾರ್ಯಕ್ರಮದ ಮೊದಲಿನಲ್ಲಿ ಕೆಲವೊಮ್ಮೆ ಕಾಣುತ್ತಿದ್ದ ಆ ಹೂಗಡಿಯಾರ ಕಾಣಿಸಿತು. ಬಣ್ಣ ಕಾಣದ ಸ್ನೋವೈಟ್ ಮತ್ತವಳೇಳು ಕುಳ್ಳರ ಬೊಂಬೆಗಳು ಕಂಡವು. ಇಕ್ಕೆಡೆ ನೋಡಿದಾಗ ಸಸ್ಯಕಾಶಿಯ ಸಸ್ಯರಾಶಿ ಶ್ಯಾಮಲವಾಗಿ ಪ್ರಕಾಶಿಸುತ್ತಿತ್ತು. ಪ್ರವೇಶಕ್ಕೆ ದುಡ್ಡು ತೆಗೆದುಕೊಂಡರೂ ಅದರ ಉಪಯೋಗವಾಗಿದೆಯೆಂದು ತಿಳಿಯುವಷ್ಟು ತೋಟದ ಅಂದಕ್ಕೆ ಕಪ್ಪಿಡದೆ ಕಾಪಿಟ್ಟಿದ್ದಾರೆ.
ಒಬ್ಬನೇ ಅಡ್ಡಾಡುವುದರಲ್ಲಿ ಒಂದು ಅವರ್ಣನೀಯ ಆನಂದವಿದೆ. ಯಾರ ಹಂಗೂ ಇಲ್ಲ. ನಮ್ಮ ಜೊತೆಯವರಿಗೆಲ್ಲಿ ಬೇಜಾರಾಗಬಹುದೋ ಎಂಬ ಕಳವಳವಿಲ್ಲ. ನಮ್ಮನ್ನು ಕಾಯುವವರ ಕಾಳಜಿಯ ಬಂಧವಿಲ್ಲ. ಇಲ್ಲಿಗೆ ಹೋಗೋಣ, ಅಲ್ಲಿಗೆ ಹೋಗೋಣ ಎಂದು ನಮ್ಮ ಗಣದವರು ಹೇಳಿದಾಗ ದಾಕ್ಷಿಣ್ಯ ತಾಳಿ ಇಷ್ಟವಿಲ್ಲದೆಯೂ ಹಿಂ"ಬಾಲಿ"ಸುವ ಪರಿಯಿಲ್ಲ. ಬೇಕಾದೆಡೆ ಕುಳಿತು, ಬೇಕಾದಾಗ ಅಡ್ಡಾಡಿ ನಿರಂಕುಶರಾಗಿ ಮೆರೆಯಬಹುದು.
ನನ್ನ ಸ್ವಾತಂತ್ರ್ಯದ ಗಡಿ ಒಂದೂವರೆ ಘಂಟೆಗಳ ಕಾಲ ಮಾತ್ರ. ಲಂಡನ್ನಿನಲ್ಲಿರುವ ಗಾಜಿನ ಮನೆಯ ಮಾದರಿಯ ಲಾಲ್-ಬಾಗಿನ ಅನುಕರಣೆ ಬೆಂಗಳೂರಿಗರೆಲ್ಲಿರಿಗೂ ಚಿರಪರಿಚಿತ. ಅದರ ಸುತ್ತಲೂ ತರಾವರಿ ಜನರ ಓಡಾಟ. ಆರೋಗ್ಯದ ಕಾಳಜಿಯನ್ನು ವಹಿಸಿ "ವಾಕಿಂಗ್" ಮಾಡುವ ಪ್ರೌಢವಯಸ್ಕರು ಹಲವರಿದ್ದರೆ, ತಮ್ಮ ಮುಖಗಳ ನಾಚಿಕೆಯ ಕೆಂಪಿನಿಂದ ಉದ್ಯಾನರಾಜಿಯ ಕಿಸಲಯದ ಕೆಂಪಿನೊಂದಿಗೆ ಸ್ಪರ್ಧಿಸುವ ಯುವಪ್ರೇಮಿಗಳು ಅಲ್ಲಲ್ಲಿ ಕಂಡರು. ವಸಂತವಿರದಿದ್ದರೂ ಈ ಜೋಡಿಗಳಿಂದ ಲಾಲ್-ಬಾಗಿಗೆ ನಿತ್ಯವಸಂತ! "ಈ ಪ್ರೇಮದ ಚಿಗುರೇ ನೋಡಿ, ಹೂವಾಗಿ ಹಣ್ಣಾಗುವುದು!" ಎಂಬ ನಿದರ್ಶನವನ್ನು ತೋರುವ ಹಾಗೆ ಕಂದಮ್ಮಗಳನ್ನೆತ್ತಿಕೊಂಡು ಓಡಾಡುವ ತಾಯಿತಂದೆಯರ ಜೋಡಿಗಳೂ ಕಂಡವು. ಓಡುವ ಮಕ್ಕಳ ವಿಷಯ ಹೇಳಲೇ ಬೇಕಿಲ್ಲ. ನನಗೆ ಜ್ಞಾಪಕಕ್ಕೆ ಬಾರದ ಹೆಸರಿನ ಕವಿಯೊಬ್ಬರ ಹಾಡಿನ ಸಾಲು ನೆನಪಿಗೆ ಬಂದಿತು - "ಹೂಬನದಲಿ ಹಸುಮಕ್ಕಳು ಹಾಕುತ್ತಿಹ ಕೇಕೆಗೆ...".
ಅದೇನು ಆ ಮರಗಳ ಎತ್ತರ! ಆ ದಟ್ಟನೆಯ ಹಸಿರು ಬಣ್ಣ! ಊರದಾರಿಗಳ ಇಬ್ಬದಿಗಳಲ್ಲಿ ಕಂಡೂ ಕಾಣದ ಸೇವಕರ ಹಾಗೆ ನಿಂತಿರುವ ಮರಗಳ ಬಂಧುಗಳು ಲಾಲ್-ಬಾಗೆಂಬ ವೃಕ್ಷರಾಜ್ಯದಲ್ಲಿ "ನೋಡು, ಹೀಗೆ.. ನಾವಿರುವುದು" ಎಂದು ಸಹಜವಾದ ರಾಜಗಾಂಭೀರ್ಯದಿಂದ ಬೀಗುತ್ತಿದ್ದವು. ಈಗ ಕಂಡೂ ಕಾಣದ ಹಾಗಿರುವ ಸರದಿ ನಮ್ಮದು.
ಮಾಗಡಿಯ ಕೆಂಪೇಗೌಡರು ಆಗಿನ ಬೆಂಗಳೂರಿನ ಸೀಮೆಯನ್ನು ನಾಲ್ಕು ಗೋಪುರಗಳನ್ನು ಸ್ಥಾಪಿಸುವ ಮೂಲಕ ನಿರ್ಧರಿಸಿದ್ದರಂತೆ. ಆ ನಾಲ್ಕರಲ್ಲಿ ಒಂದು ಲಾಲ್-ಬಾಗಿನ ಡಬ್ಬಲ್ ರೋಡ್ ಬಾಗಿಲಿನ ಬಳಿ ಇದೆ. ಸಣ್ಣ ಗುಡ್ಡದ ಮೇಲಿರುವ ಈ ಗೋಪುರ ಪ್ರಾಚ್ಯ ಇಲಾಖೆಯವರ ಸಂರಕ್ಷೆಯ ಸೋಗನ್ನು ಮಾತ್ರ ಧರಿಸಿದೆ. ಅದಕ್ಕೆ ಅಸಹ್ಯವಾದ ಬಣ್ಣ ಬಳಿದು ಅದರ ಮರ್ಯಾದೆಯನ್ನು ಕುಂದಿಸಿದ ಹಾಗೆ ಕಂಡಿತು. ಆ ಗೋಪುರದ ಬಳಿ ಹೋಗುವ ವೇಳೆ ನಮ್ಮ ಉಡುಗಣವೇಷ್ಟಿತ-ಅಂಬರಸಂಚಾರಿಯ ಉದಯವಾಗಿತ್ತು. ಗೋಪುರದ ಜೊತೆಯಲ್ಲೇ ಬೆಂಗಳೂರನ್ನು ಕಂಡೆ. ಕೆಂಪೇಗೌಡರ ಊರಿಗೂ ಈಗಿನದಕ್ಕೂ ಎತ್ತಣಿಂದೆತ್ತ ಸಂಬಂಧವೆಂದು ಆಲೋಚನೆಯಲ್ಲಿ ಸ್ವಲ್ಪ ಹೊತ್ತು ಲೀನನಾದೆ. ನೂರಾರು ವರ್ಷಗಳ ಗೋಪುರಕ್ಕೆ ಸವಾಲೆಸೆದು ಗೆದ್ದೆವೆಂಬ ಠೀವಿಯಿಂದ ನಿಂತ ಹಲವು ಅಂತಸ್ತುಗಳ ಹೊಸ ಹರ್ಮ್ಯಗಳು ಕಣ್ಣುಕೋರೈಸುತ್ತಿದ್ದವು. ಆದರೂ ಪಕ್ಕದ ಮೂಕಮಂಟಪದ ಸಖ್ಯವೇ ನನ್ನಂಥ ಹಲವರಿಗೆ ಬೇಕಾಗಿತ್ತು.
ಕೊನೆಯ ಗೆಲುವು ಯಾರದಿರಬಹುದೆಂದು ಚಿಂತಿಸುತ್ತ್ತತಣ್ಣನೆಯ ಗಾಳಿಗೆ ಮೆಯ್ಯೊಡ್ಡಿ ಅಲ್ಲೇ ಕುಳಿತಿದ್ದೆ. ಅಷ್ಟರಲ್ಲಿ ಮನೆಯಿಂದ ಫೋನು. "ಎಲ್ಲಿದ್ದೀಯ?". ಗಡಿಯಾರವನ್ನು ಗಮನಿಸಿದಾಗ ನನ್ನ ನಿರಂಕುಶತೆಯ ಕಾಲಕ್ಕೂ ಒಂದು ಗತಿ ಕಂಡಿತ್ತು.
ಇಷ್ಟವಿರದಿದ್ದರೂ ಹೊರಗೆ ಕಾರಿನಂಗಡಿಯ ಕಡೆಗೆ ನಡೆದೆ. ಕೆಲಸ ಮುಗಿದಿರಲಿಲ್ಲ. ಎದುರಿನಲ್ಲೇ ಎಮ್.ಟಿ.ಆರಿನ ತಿಂಡಿಗಳು ಕರೆಯುತ್ತಿದ್ದವು. ಈ ಖ್ಯಾತನಾಮವಾದ ತಾಣ ಸರ್ವಕಾಲವೂ ಜನಭರಿತ ಎಂದು ಜನಶ್ರುತಿ. ಸ್ಥಲಾವಕಾಶ ಇರುವುದೋ ಇಲ್ಲವೋ ಎಂದು ಶಂಕಿಸುತ್ತ ಒಳ ನಡೆದೆ.
ನನ್ನ ನಿರೀಕ್ಷೆ ತಪ್ಪಿರಲಿಲ್ಲ. ಬಹಳಷ್ಟು ಜನರು ಪ್ರವೇಶದ್ವಾರದ ಬಳಿಯೇ ಕುಳಿತಿದ್ದರು. ಇವರೆಲ್ಲರೂ ತಿಂಡಿಗಾಗಿ ಹಾತೊರೆಯುತ್ತಿರುವ ನನ್ನಂಥವರೆಂದು ಬಗೆದು ಪಕ್ಕದಲ್ಲಿದ್ದ ನೀಲಿ ಉಡುಗೆಯ ಆರಕ್ಷಕನನ್ನು ಪ್ರಶ್ನಾತ್ಮಕವಾಗಿ ದಿಟ್ಟಿಸಿದೆ. ಅದಕ್ಕವನು "ಇವರೆಲ್ಲ ಬಿಡಿ ಸಾರ್. ದಿನಾ ಕೂತು ಗಲಾಟೆ ಮಾಡ್ತಾರೆ. ಜಾಗ ಇದೆ. ಒಳಗೆ ಹೋಗಿ" ಎಂದ. ಆಗ ಆ ಗುಂಪನ್ನು ಸರಿಯಾಗಿ ನೋಡಿದೆ. ಎಲ್ಲ ಪ್ರೌಢವಯಸ್ಕರೇ (ವೃದ್ಧರೆಂದರೆ ಕೋಪವಲ್ಲವೇ ಅವರಿಗೆ?)! ತಿಂಡಿಯನ್ನು ಹೊಡೆಯುವ ಮುನ್ನ ಹರಟೆ ಹೊಡೆಯುತ್ತಾ ತಮ್ಮ ಗುಂಪಿನ ಮಿಕ್ಕಿದ ಮಂದಿಗಾಗಿ ಕಾಯುತ್ತಿದ್ದುದು ಕಾಣಿಸಿತು.
ನನ್ನ ದಾರಿ ಸುಗಮವಾಯ್ತಲ್ಲ! ಧೈರ್ಯವಾಗಿ ಒಳ ನಡೆದೆ. ಖಾಲಿಯಿದ್ದ ಒಂದು ಮೇಜಿನ ಬಳಿ ಕುಳಿತೆ. ಮಾಣಿಗಳೆಲ್ಲರೂ ನನ್ನನ್ನು ಕಂಡೂ ಕಾಣದ ಹಾಗೆ ಓಡಾಡುತ್ತಿದ್ದರು. ಎರಡು ನಿಮಿಷ ಕಾದೆ. ಆಗ ಹೊಳೆಯಿತು. ಸುಮ್ಮನೆ ಕುಳಿತಿರುವ ಮಂದಿ ಅಲ್ಲಿ ಹೆಚ್ಚಿರುವುದರಿಂದ ಎಲ್ಲರೂ ತಿಂಡಿಗೋಸ್ಕರವೇ ಅಲ್ಲಿ ಬರುವುದಿಲ್ಲ ಎಂದು. ನನ್ನನ್ನೂ ಅವರಲ್ಲಿ ಒಬ್ಬನೆಂದು ತಿಳಿದರೋ ಏನೋ ಎಂದು ಕೈಸನ್ನೆ ಮಾಡಿ ಕರೆದೆ. ಹಿಂದೊಮ್ಮೆ ಅಲ್ಲೇ ತಿಂದಿದ್ದ ಭರ್ಜರಿ ರವೆ ಇಡ್ಲಿಯ ರುಚಿ ಮರುಕಳಿಸಿ "ರವೆ ಇಡ್ಲಿ" ಎಂದು ನನ್ನ ಅರಿವಿಲ್ಲದೆಯೇ ನಾಲಗೆ ನುಡಿದಿತ್ತು.
ಅಷ್ಟರಲ್ಲಿ ನನ್ನ ಮೇಜಿನಲ್ಲೇ ನನ್ನೆದುರು ಯಾರೋ ಇಬ್ಬರು ವಯಸ್ಸಾದವರು ಬಂದರು. ಸುಮಾರು ಅರುವತ್ತರ ಆಸುಪಾಸಿನ ವಯಸ್ಸಿನವರು; ತಲೆಗೂದಲು ಬೆಳ್ಳಿಕಪ್ಪುಗಳ ಮಿಶ್ರಣ. ಅವರಲ್ಲೊಬ್ಬರು ದೇಶಾವರಿ ನಗೆ ನಗುತ್ತ ಇರುವವರೆಲ್ಲರನ್ನೂ (ನನ್ನನ್ನು ಬಿಟ್ಟು, of course) ಮಾತಾಡಿಸಿದರು. ನನ್ನೆದುರಿಗೇ ಕುಳಿತೂ ಬಿಟ್ಟರು. ಎಮ್.ಟಿ.ಆರ್ ನಲ್ಲಿ ಒಬ್ಬರು ಮೇಜಿನಲ್ಲಿ ಕುಳಿತರೆ ಅವರನ್ನು ಕೇಳಾದರೂ ಕೂರಬೇಕೆಂಬ ನಿಯಮವಿಲ್ಲವೆಂದು ಕಾಣುತ್ತದೆ.
ನೋಡಲು ಮರ್ಯಾದಸ್ಥರ ಹಾಗೆ ಕಾಣುತ್ತಿದ್ದರೂ ಮಾತಿನಲ್ಲೆಲ್ಲ ಬರೀ ತರಲೆತನವೇ ಕಾಣುತ್ತಿತ್ತು. ರಿಯಲ್ ಎಸ್ಟೇಟ್ ಗುಂಗಿಗೆ ಸಿಕ್ಕ ಹಾಗೆ ಕಂಡರು. ಎಂಥ ಜನರಿಂದ ಹೇಗೆ ಹೆಚ್ಚಿನ ಕಮಿಷನ್ ಹೊಡೆಯಬಹುದೆಂಬ ಚರ್ಚೆಯನ್ನು ಅವರ ಜೊತೆಯವರೊಡನೆ ನಡೆಸಿದರು. ಅಷ್ಟರಲ್ಲಿ ತಿಂಡಿಯನ್ನು ಮಾಣಿ ತಂದಿಟ್ಟ. ಹೋಟೆಲಿನವರು ಕೊಟ್ಟ ತುಪ್ಪದ ಚಿಕ್ಕಬಟ್ಟಲನ್ನು ಈತ ಪಕ್ಕದಲ್ಲಿಟ್ಟರು. ಕೊಲೆಸ್ಟ್ರಾಲ್ ತೊಂದರೆ ಇರಬೇಕೆಂದುಕೊಂಡೆ. ಜೊತೆಗೆ ದಿನಕ್ಕೆರಡು ಬಾರಿ ಲಾಲ್-ಬಾಗಿಗೆ ಬಂದು ನಡೆದಾಡುವ ಅಭ್ಯಾಸದವರು ಈ ಈರ್ವರು ಎಂದು ಆವರ ಮಾತಿನಿಂದ ತಿಳಿಯಿತು.
ನಂತರ ಅವರಾಡಿದ ಮಾತು ಬರೆಯಲು ಯೋಗ್ಯವಲ್ಲ. ಸಿನಿಮಾ ನಟರು, ಅವರ ಹಳೆಯ ಪರಿಚಯದವರು, ಕ್ರಿಕೆಟ್ ಪಟುಗಳು - ಇವರೆಲ್ಲರ ವೈಯಕ್ತಿಕ ಜೀವನಗಳನ್ನೂ ಜಾಲಾಡಿದರು. ಇದನ್ನಾಡುವಾಗ ಅವರ ಮುಖದಲ್ಲಿ ಅದೆಷ್ಟು ಸಂಭ್ರಮ! ಅದೇನು ಸಂತಸ! ಅವರ ಜೊತೆಗಾರನ ಜೊತೆ ನಕ್ಕಿದ್ದೂ ನಕ್ಕಿದ್ದೆ. ಇಂಥ ಕಿಂವದಂತಿಗಳು ಹಳೆಯವೇ. ಆದರೆ ಹತ್ತುಜನರ ಮುಂದೆ ನಿಂತು ಮಾತಾಡುವ ವಿಷಯವಲ್ಲ ಎಂದು ನನ್ನ ಅಭಿಮತ. ಎದುರಿನಲ್ಲಿಯೇ ಕುಳಿತ ನನಗೋ ಮುಜುಗರ. ಇದೇನು ನಮ್ಮಪ್ಪನ ವಯಸ್ಸಿನವರು ಹೀಗೆಲ್ಲ ಕಂಡವರ ಮುಂದೆ ಬಾಯಿಗೆ ಬಂದ ಹಾಗೆ ಮಾತಾಡಬಹುದೇ ಎಂದು ಆಶ್ಚರ್ಯ ಜುಗುಪ್ಸೆಗಳು ಒಟ್ಟಿಗೇ ಆದವು. "ನಾನೇನಾದರೂ ಅಷ್ಟು ಮಡಿವಂತನೇ?" ಎಂಬ ಸಂಶಯ ಬೇರೆ ಬಂದಿತು. ಅವರ ಮನೆಯಲ್ಲಿ ಮಿತ್ರರೊಡನೆ ಮಾತನಾಡಿದ್ದರೆ ಪರವಾಯಿಲ್ಲವೋ ಏನೋ. ಆದರೆ ಸಾರ್ವಜನಿಕ ಸ್ಥಲಗಳಲ್ಲಿ ಅಪರಿಚಿತರೆದುರು ಹೀಗೆಲ್ಲ ಒದರಿದರೆ ಬೇರೆಯವರಿಗೆ ಏನನ್ನಿಸಬಹುದು ಎಂಬ ಪರಿವೆ ಅವರಿಗಿದ್ದ ಹಾಗೆ ಕಾಣಿಸಲಿಲ್ಲ. ತಿಂಡಿ ಚೆನ್ನಾಗಿಯೇ ಇದ್ದರು ಅಷ್ಟು ರುಚಿಸಲಿಲ್ಲ. ಅವರ ಮಾತನ್ನು ಕೇವಲ ಸಾಕ್ಷಿಭಾವದಲ್ಲಿ ಮೊದಲು ಕೇಳಿದನಂತರ ಕ್ರಮೇಣ ಅಸಹ್ಯಭಾವನೆ ಆವರಿಸಿತು. ಅವಸರವಸರವಾಗಿ ತಿಂದು ಬಿಲ್ಲಿಗಾಗಿ ಮಾಣಿಯನ್ನು ಕರೆದೆ.
ಎದ್ದು ಹೊರಡಲು ಅಣಿಯಾಗುತ್ತಿದ್ದಾಗ ನನ್ನೆದುರಿನವರ ಇನ್ನೊಬ್ಬರು ಮಿತ್ರರು ಆಗಮಿಸಿದ್ದರು. ಇವರು ಪೂರಿ ತಿನ್ನುವುದನ್ನು ಮೊದಲು ಮಾಡಿದ್ದರು. ಜಾಗ ಖಾಲಿ ಮಾಡುವ ವೇಳೆ ಘೊಳ್ಳೆಂಬ ನಗೆಯ ಗುಳ್ಳೆ ಒಡೆದದ್ದು ಕೇಳಿಸಿತು. ತಿರುಗಿ ನೋಡದೆ ಹೊರನಡೆದೆ. ನನ್ನದೇ ಮಡಿಯೆ? ಅಥವಾ ಹೀಗೆಯೇ ಲೋಕ ಇರುವುದು? ಎಂಬ ಜಿಜ್ಞಾಸೆಯೊಂದಿಗೆ ರಸ್ತೆ ದಾಟಿದ್ದೆ. ಇವರ ಗುಣಾವಗುಣಗಳನ್ನು ಗಣಿಸಲು ನಾನ್ಯಾರು ಎಂಬ ನಿಶ್ಚಯವಾಗಿ ಮನಸ್ಸು ಶಾಂತವಾಯಿತು. ಕಾರಿನ ಸೀಟಿಗೆ ಕವರ್ ಹಾಕಿಸಿ ಮನೆ ಸೇರುವಲ್ಲಿ ಹತ್ತುಘಂಟೆಯಾಗಿತ್ತು. ಕತ್ತುನೋವು "ನಾನಿಲ್ಲೇ ಇದ್ದೇನೆ" ಎಂದು ಮತ್ತೆ ನೆನಪಿಸಿತ್ತು.

1 comment:
ಉಡುಗಣವೇಷ್ಟಿತ artha yenu?
Post a Comment