Tuesday, February 16, 2010

ನಿನ್ನ ನೀನು ಮರೆತರೇನು ಸುಖವಿದೆ? ತನ್ನತನವ ತೊರೆದರೇನು ಸೊಗಸಿದೆ?

ಮೊನ್ನೆ ವೋಲ್ವೋ ಬಸ್ಸಿನಲ್ಲಿ ಪಯಣಿಸುತ್ತಿದ್ದಾಗ ನಮ್ಮ ಹೊಚ್ಚ ಹೊಸ ಆರ್.ಜೆ ನಟ/ನಿರ್ದೇಶಕ ಉಪೇಂದ್ರರ ಮಾತು ಕೇಳಲು ಸಿಕ್ಕಿತು.ಕನ್ನಡ ಚಿತ್ರರಂಗದ ದುಃಸ್ಥಿತಿಯ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತ - ಕನ್ನಡ ಚಿತ್ರರಂಗ ಸಶಕ್ತವಾಗಿದೆ; ಬೇರೆ ಭಾಷೆಗಳ ಚಿತ್ರಗಳ ಪೈಪೋಟಿ ಕನ್ನಡಕ್ಕೆ ಬಂದ ಬಾಬ್ತು; ಇದಿಲ್ಲದಿದ್ದರೆ ಕನ್ನಡ ಚಿತ್ರಗಳು ಹೆಚ್ಚು ಗೆಲ್ಲುತ್ತಿದ್ದವು ಎಂಬಂತೆ ನುಡಿದರು. ನನಗೆ ಇವರ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಹೊರನೋಟದಲ್ಲಿ ನಿಜವಾಗಿ ಕಂಡರೂ - ಕನ್ನಡದ ಚಿತ್ರಗಳು ಬಹುತೇಕ ಬೇರೆ ಭಾಷೆಗಳ ಚಿತ್ರಗಳ ಮರುಮೇಕುಗಳೇ! ಉಪೇಂದ್ರ ಗಮನಿಸಬೇಕಾದ್ದು - ಅವರು ಮತ್ತವರ ಹೆಂಡತಿಯೇ ನಟಿಸಿರುವಂಥ "ಶ್ರೀಮತಿ" ಚಿತ್ರ - ಹಿಂದಿಯ ಐತ್ರಾಜ್ ಚಿತ್ರದ ಮರುಮೇಕು ಎಂದು. (ಆ ಹಿಂದಿ ಚಿತ್ರವೂ ಇಂಗ್ಲೀಷಿನ "ದಿಸ್-ಕ್ಲೋಷರ್" ನ ರೀಮೇಕು - ಬಿಡಿ). ಕನ್ನಡಿಗರಿಗೆ, ಅದೂ ಬೆಂಗಳೂರಿಗರಿಗೆ ಬೇರೆ ಭಾಷೆಗಳೂ ಬರುತ್ತವೆ ಅನ್ನುವ ವಿಷಯ ಈ ಚಿತ್ರರಂಗದವರಿಗೆ ತಿಳಿದಿಲ್ಲವೋ ಏನೋ! ಒಳ್ಳೆಯ ಚಿತ್ರಗಳನ್ನು ದುಡ್ಡಿತ್ತು ನೋಡುವ ಜನರು ಕನ್ನಡದಲ್ಲಿ ಮರುಮಾಡಿದ್ದಾರೆ ಎಂದು ಮತ್ತೊಮ್ಮೆ ಅದೇ ಕಥೆಯನ್ನು ಕಾಣಲೆಳಸುವರೇ? ಈ ಸಾಮಾನ್ಯ ಪರಿಜ್ಞಾನವೂ ಬೇಡವೇ?

ಕನ್ನಡದಲ್ಲಿ ಹೊಸ ಕಥೆಗಳಿಲ್ಲ, ಆದ್ದರಿಂದ ಸ್ವಂತ ಚಿತ್ರಗಳು ಕಡಿಮೆಯೆಂದರೆ ಅದು ನಾನೊಪ್ಪದ ಸಂಗತಿ! ಏಳೇಳು ಜ್ಞಾನಪೀಠಿಗಳ ಸಾಹಿತ್ಯ ಭಂಡಾರ, ಅಷ್ಟೊಂದು ಕಥೆಗಾರರು, ಕವಿಗಳಿರುವ ಕನ್ನಡದಲ್ಲಿ ಹೊಸಕತೆಗಳಿಗೆ ಬಡತನವೇ? ಇದು ನಮ್ಮ ಚಿತ್ರರಂಗದವರ ಸೋಮಾರಿತನ ಮತ್ತು ಬುದ್ಧಿಗೇಡಿತನಗಳ ಪರಿಣಾಮ. ಇದೇ ಜಾಡ್ಯ ನಮ್ಮ ಬಾನ್ನೋಟದ (ದೂರದರ್ಶನಕ್ಕೆ ಬದಲಿಗೆ ನನಗೀಗ ತಾನೆ ಹೊಳೆದ ಪದ) ಚ್ಯಾನಲ್ಲುಗಳಿಗೂ ತಗುಲಿದೆ. ಇದು ಹೇಗೆಂದು ಮುಂದೆ ನೋಡೋಣ.

ಈಗ ಕನ್ನಡದ ಚ್ಯಾನಲ್ಲುಗಳಲ್ಲಿ ಬರುವ ಕಾರ್ಯಕ್ರಮಗಳೆಡೆಗೆ ಕಣ್ಣು ಹಾಯಿಸೋಣ. ವಾರ್ತೆಗಳು, ಧಾರಾವಾಹಿಗಳು, ಚಲನಚಿತ್ರಗಳು - ಇದನ್ನು ಬಿಟ್ಟ ಬೇರೆ ಬಗೆಯ ಕಾರ್ಯಕ್ರಮಗಳೆಂದರೆ "ರಿಯಾಲಿಟಿ" ಷೋಗಳು. ಇವು ಕೆಲವು ಬಗೆಯವು - ಹಾಡು, ಕುಣಿತ, ಪ್ರಶ್ನೋತ್ತರ ಹೀಗೆ. ನನ್ನ ಸದ್ಯದ ಗುನುಗು ಈ ಹಾಡು-ಕುಣಿತಗಳ ಬಗ್ಗೆ. ಎಲ್ಲ ಹಾಡು ಅಥವಾ ಕುಣಿತದ ಕಾರ್ಯಕ್ರಮಗಳು ಚಲನಚಿತ್ರಗಳನ್ನಾಧರಿಸಿದ್ದು.

ನನ್ನನ್ನು ವಿಶೇಷವಾಗಿ ಚುಚ್ಚಿದ ಎರಡು ಕಾರ್ಯಕ್ರಮಗಳು - ಜೀ ಕನ್ನಡದ "ಸ ರಿ ಗ ಮ ಪ ಚ್ಯಾಲೆಂಜ್" ಮತ್ತು ದೂರದರ್ಶನದ "ಮಧುರ ಮಧುರವೀ ಮಂಜುಳ ಗಾನ". (ಈ ಟಿ.ವಿ. ಯ ಎದೆ ತುಂಬಿ ಹಾಡುವೆನು ಕೂಡ ಇದೇ ಜಾತಿಗೆ ಸೇರಿದ್ದು). ಈ "ಸ ರಿ ಗ ಮ ಪ" ದಲ್ಲಿ ಕುಳಿತ ನಾಲ್ವರು ದಿಗ್ದಂತಿಗಳು - ಇವರು ಆ ಎಳೆಯರ ಹಾಡಿಕೆಯನ್ನು ಅಳೆಯುವವರು. ಈ ಹುಡುಗ ಹುಡುಗಿಯರು ಬಣ್ಣ ಬಣ್ಣದ ಬಟ್ಟೆ ಧರಿಸಿ ತಮಗೆ ತಿಳಿದ ಮಟ್ಟಿಗೆ ಸಾಕಷ್ಟು ಚೆನ್ನಾಗಿ ಹಾಡುವುದು. ಈ ದಿಗ್ದಂತಿಗಳು (ಇವರ ಖ್ಯಾತಿ ಯಾವ ಮಟ್ಟದ್ದು?) ಅವರಲ್ಲಿ ಸಣ್ಣ ಸಣ್ಣ ತಪ್ಪುಗಳನ್ನು ಹುಡುಕಿ ಅವರನ್ನು ಕಾರ್ಯಕ್ರಮದಿಂದ ಹೊರದೂಡುವುದು. ಇವರು ಅಳೆಯುವ ಹಾಡಿಕೆ ಎಂಥದ್ದು? ಎಲ್ಲ ಸಿನಿಮ ಸಂಗೀತ. ಸಿನಿಮಾ ಸಂಗೀತ ಚೆನ್ನಾಗಿಲ್ಲವೆಂದಲ್ಲ. ಆದರೆ ಅಲ್ಲಿನ ರಸ ಚಿತ್ರದ ನಿರ್ಮಾಣವಾದಾಗ ಆ ಚಿತ್ರಗೀತೆಗಳು ಪೂರ್ಣವಾದವು. ಅವುಗಳಲ್ಲಿನ ಪ್ರತಿಭೆ ಸಂಗೀತನಿರ್ದೇಶಕರದು; ವಾದ್ಯ ವೃಂದದ್ದು, ಹಾಡಿದ ಕಲಾವಿದರದು. ಆ ಧ್ವನಿಮುದ್ರಣಗಳನ್ನು ಕೇಳಿದರೆ ಸಾಲದೆ? ಈ ಹಾಡುಗಾರರು ಆ ಹಾಡುಗಳ ಅನುಕರಣೆಯನ್ನು ಮಾಡಿದ್ದೂ ಮಾಡಿದ್ದೇ! ಅನುಕರಣೆ ಮನೋರಂಜನೆಯನ್ನು ನೀಡುತ್ತಾದರೂ ಶುದ್ಧವಾದ ಕಲೆಯಾಗಿ ಎಂದೆಂದಿಗೂ ನಿಲ್ಲಲಾರದು. ಹಾಡುಗಾರರ ಸಂಗೀತದ ಮಟ್ಟವನ್ನು ಅಳೆಯುವ ಕಾರ್ಯಕ್ರಮವೇ ಇದು? ಇಲ್ಲಿ ಹಾಡುವವರ ಬಾಯಲ್ಲಿ ಒಂದೊಂದು ಧ್ವನಿಸುರುಳಿಯನ್ನು ತುರುಕಿದ್ದರೆ ಅವರೇ ವಿಜೇತರು. "ಮಖ್ಖಿ ಕಾ ಮಖ್ಖಿ" ಕಾಪಿಗಳು ಸಂಗೀತದ ಮಟ್ಟವನ್ನು ಅಳೆಯಲಾರವು. ಸಂಗೀತ ನಿರ್ದೇಶಕರು ಎಂದೋ ಮಾಡಿಟ್ಟ ಹಾಡನ್ನು ಸುಶ್ರಾವ್ಯವಾಗಿ ಹಾಡಿದರೆ ಮುಗಿಯಿತು ಕಥೆ. ಅಲ್ಲಿರುವ ವಾದ್ಯ ನುಡಿಸುವವರು, ಆ ಸಂಗೀತ ರಚನೆ - ಇವೆಲ್ಲ ಹಿಂದಕ್ಕೆ ಸರಿದು ಕೇವಲ ಹಾಡುಗಾರ ದೊಡ್ಡವನಾಗಿ ನಿಲ್ಲುತ್ತಾನೆ. ಇದು ಶುದ್ಧ ಅನ್ಯಾಯ.

ಇದೇ ರೀತಿಯ ಇನ್ನೊಂದು ಜುಗುಪ್ಸೆ ಕೊಡುವ ಕಾರ್ಯಕ್ರಮ "ಮಧುರ ಮಧುರವೀ ಮಂಜುಳ ಗಾನ". ನಾಡಿನ ಊರೂರು ತಿರುಗಿ ಹಾಡಿದ ಹಾಡುಗಳನ್ನೇ ಮತ್ತೆ ಮತ್ತೆ ಕೆಟ್ಟಕೆಟ್ಟದಾಗಿ ಹಾಡಿಸಿ ತಲೆ ಚಿಟ್ಟು ಹಿಡಿಸುವ ಕಾರ್ಯಕ್ರಮವಿದು. ಮತ್ತಲ್ಲಿ ಹಾಡುವವರು ಕೇವಲ ಅನುಕರಣಶೀಲರು - ಸಂಗೀತದ ಶಕ್ತಿ ಇವರಲ್ಲಿ ಇದ್ದರೂ ಅದು ನಮಗೆ ತಿಳಿಯದ ಹಾಗೆ ಬಚ್ಚಿಡಬಲ್ಲವರು.

ಸಂಪದ್ಭರಿತ ಸಾಹಿತ್ಯವನ್ನು ಹೊಂದಿದ ಕನ್ನಡಕ್ಕೆ ಇಂಥ ದ್ರೋಹವಾಗಬಾರದು. ಚಲನಚಿತ್ರಗಳದೇ ಸಂಗೀತವೆ?

ಶಾಸ್ತ್ರೀಯ ಸಂಗೀತ - ಅದೂ ಕರ್ಣಾಟಕ ಶಾಸ್ತ್ರೀಯ ಸಂಗೀತ ಎಂದು ನಾಡಿನ ಹೆಸರನ್ನಿಟ್ಟುಕೊಂಡಿರುವ ಸಂಗೀತ. ಯಾವ ಸಂಗೀತಕ್ಕೆ ಕನ್ನಡಿಗರಲ್ಲಿ ಅಗ್ರೇಸರರಾದ ದಾಸಶ್ರೇಷ್ಥ ಶ್ರೀ ಪುರಂದರದಾಸರು ಪಿತಾಮಹರೋ ಆ ಸಂಗೀತಕ್ಕೆ ತನ್ನ ನಾಡಿನಲ್ಲೇ ಗೌರವವಿಲ್ಲವೇ? ಜಯ ಟಿ.ವಿ (ತಮಿಳು ವಾಹಿನಿ) ಯಲ್ಲಿ ಹೋದ ವಾರ ಮೂಡಿದ "ಕರ್ಣಾಟಿಕ್ ಮ್ಯೂಸಿಕ್ ಐಡಲ್" ಕಾರ್ಯಕ್ರಮವನ್ನು ನೋಡಿದ್ದರೆ ಮನೋಧರ್ಮದ ಸಂಗೀತವನ್ನು ಹೇಗೆ ಪ್ರೋತ್ಸಾಹಿಸಬಹುದು ಎಂದು ಚೆನ್ನಾಗಿ ತಿಳಿಯುತ್ತಿತ್ತು.

ಅದಿಲ್ಲದಿದ್ದಲ್ಲಿ ಭಾವಗೀತೆ? ಈ ಸುಂದರ ಪ್ರಕಾರ ಕನ್ನಡಕ್ಕೆ ವಿಶೇಷವಾದದ್ದು - ಇದೂ ತನ್ನ ನ್ಯಾಯವಾದ ಗೌರವವನ್ನು ಪಡೆದಿಲ್ಲ.

ಒಟ್ಟಿನಲ್ಲಿ ಸ್ವಂತಿಕೆಯನ್ನು ಮರೆಸುವ ಅನುಕರಣೆಯನ್ನು ಮೆರೆಸುವ ಕಾರ್ಯಕ್ರಮಗಳಿಗೆ ನನ್ನ ಈ ಧಿಕ್ಕಾರ!

1 comment:

Sathya said...

ತುಂಬಾ ನಿಜ. ನಮ್ಮತನ ಉಳಿಸೋ ಕಾರ್ಯಕ್ರಮಗಳು, ನಮ್ಮ ಪ್ರತಿಭೆಗಳಿಗೆ ಅವಕಾಶ ಕೊಡಿಸೋ ಚಲನಚಿತ್ರಗಳು ಕನ್ನಡದಲ್ಲಿ ಅತಿ ವಿರಳ. ಕಥೆ ಜೊತೆ ಹಿನ್ನೆಲೆ ಗಾಯಕರುಗಳನ್ನೂ ಈಗ ಆಮದು ಮಾಡಲಾಗುತ್ತಿದೆ.