Friday, July 02, 2004

FrontPage magazine.com :: How the West Grew Rich by Dinesh D'Souza

FrontPage magazine.com :: How the West Grew Rich by Dinesh D'Souza

ಈ ಲೇಖನವನ್ನು ಓದಿ ನೋಡಿ. ಪಾಶ್ಛಾತ್ಯ ಪ್ರಪಂಚದಿಂದ ಇತರ ಹಿಂದುಳಿದ ಪ್ರಪಂಚದ ಉದ್ಧಾರವಾಯಿತು ಎಂಬಂತೆ ಬರೆದಿದ್ದಾನೆ. ಲೇಖಕ ದಿನೇಶ್ ಡಿಸೂಜಾ ಎನ್ನುವ ಭಾರತೀಯ ಮೂಲದವನು. ಈತ ಅಮೇರಿಕಕ್ಕೆ ಬಂದದ್ದೇ ತಡ, ಇಲ್ಲಿನ ಗುಣಗಾನ ಮಾಡಲು ತೊಡಗಿದ. ಗುಣಗಾನ ಮಾಡುತ್ತಾ ಪುಸ್ತಕವನ್ನೇ ಬರೆದಿದ್ದಾನೆ - What's so great about America ಎಂದು ಇದರ ಹೆಸರು.

ಈ ಲೇಖನವು ಸತ್ಯಕ್ಕೆ ಬಹಳ ದೂರವಾಗಿ ಪಾಶ್ಛಾತ್ಯರನ್ನು ತಿಳಿವಳಿಕೆಯಿಲ್ಲದೆಯೇ ಹೊಗಳಿದೆ. ಈ ಲೇಖನದಲ್ಲಿ ಮೂರು ಪ್ರಮುಖ ವಿಚಾರಗಳಿವೆ. ಪಾಶ್ಛಾತ್ಯ ಪ್ರಪಂಚವು (ಪ. ಪ್ರ)
೧. ವಿಜ್ಞಾನದಿಂದ
೨. ಪ್ರಜಾಪ್ರಭ್ಹುತ್ವದಿಂದ ಮತ್ತು
೩. ಆರ್ಥಿಕ ವ್ಯವಸ್ಥೆಯ ನಿರ್ಮಾಣದಿಂದ

ಇಡೀ ಜಗತ್ತಿಗೆ ಉಪಕಾರಮಾಡಿದೆ ಎಂದು. ಪ ಪ್ರವು ಸಂಪದ್ಭರಿತವಾದದ್ದು ಹೀಗೆಯಂತೆ. ನಾವು ಸಾಮಾನ್ಯವಾಗಿ ತಿಳಿದ ಹಾಗೆ, ಹಾಗೂ ಪಾಶ್ಚಾತ್ಯರೂ ಸಾಮಾನ್ಯವಾಗಿ ತಿಳಿದ ಹಾಗೆ ವಸಾಹತುಶಾಹಿಯಿಂದ ಅಲ್ಲವಂತೆ. ವಸಾಹತುಶಾಹಿಯೇ ಆಧುನಿಕ ಪಾಶ್ಚಾತ್ಯ ವಿಚಾರಗಳು ಹರಿಯುವ ಕಾಲುವೆಗಳಾಗಿ ಹಿಂದುಳಿದ ಪ್ರಪಂಚದ ಏಳ್ಗೆಗೆ ಕಾರಣವಾಯಿತಂತೆ. ಗುಲಾಮಗಿರಿಯು ಎಲ್ಲ ಕಡೆ ಇದ್ದದ್ದರಿಂದ ಪರವಾಗಿಲ್ಲವಂತೆ.

ವಿಜ್ಞಾನವು ಬೇರೆಡೆಗಳಲ್ಲಿಯೂ ಇದ್ದಿತು. ಆದರೆ ಆ ವ್ಯವಸ್ಥೆಯು ಪ.ಪ್ರ ದ ಕೊಡುಗೆಯಂತೆ.

ನನಗೆ ಈ ರೀತಿಯ ಲೇಖನಗಳ ಕಂಡರೆ ಅಸಹ್ಯವಾಗುತ್ತದೆ. ಸ್ಪೈನ್ ದೇಶದವರು ಲ್ಯಾಟಿನ್ ಅಮೇರಿಕಾವನ್ನು ನಿರ್ನಾಮ ಮಾಡುವ ಮೂಲಕ ತಾನೆ 'ನಿರ್ಮಾಣ' ಮಾಡಿದ್ದು ? ಮಾಯ ಮತ್ತು ಇಂಕ ಸಂಸ್ಕೃತಿಗಳ ಸರ್ವನಾಶ ಮಾಡಿದ ಬಗೆಯನ್ನು ಕೇಳಿದರೆ ಎಂಥವರೂ ಕಣ್ಣೀರು ಮಿಡಿಯದೇ ಇರುವುದಿಲ್ಲ. ಆಗ ಅಮೇರಿಕಾ ಖಂಡವು ಇನ್ನೂ ಐರೋಪ್ಯ ರೋಗಗಳಿಂದ ಬಾಧಿತವಾಗಿರಲಿಲ್ಲ. ಆದರೆ ಈ ದರಿದ್ರಜನರಿಂದ ರೋಗಗ್ರಸ್ತರಾಗಿ, ದಬ್ಬಾಳಿಕೆಗೊಳಗಾದವು ಈ ಜನಾಂಗಗಳು. ಈ ಜನಾಂಗಗಳ ಸ್ತ್ರೀಯರನ್ನು ಮಕ್ಕಳನ್ನೂ ದಾಸ್ಯಕ್ಕೆ ದಬ್ಬಿ ಪುರುಷರನ್ನು ಕೊಂದ ಈ ಜನಾಂಗ ಪ್ರಗತಿಪರವೇ ?

ಉತ್ತರ ಅಮೇರಿಕಾದಲ್ಲೂ ಅಲ್ಲಿದ್ದ ರೆಡ್ ಇಂಡಿಯನ್ (ಇಲ್ಲಿ ಎಂಥ ವಿಪರ್ಯಾಸ ನೋಡಿ - ಕೊಲಂಬಸನು ಭಾರತವನ್ನು ಹುಡುಕುತ್ತಾ ಹೊರಟು ಹೊಸನಾಡನ್ನು ಕಂಡು ಅಲ್ಲಿದ್ದವರನ್ನೇ 'ಇಂಡಿಯನ್ಸ್' ಎಂದು ಕರೆದ. ಅದೇ ಹೆಸರಿನಿಂದ ಈಗಲೂ ಕರೆಯಲ್ಪಡುತ್ತಾರೆ. native americans ಎಂದು politically correct ಆಗಿ ಕರೆಯಬೇಕು. ಆದರೆ ಅಮೇರಿಕಾ ಎನ್ನುವ ಹೆಸರೂ ಅಮೇರಿಗೊ ವೆಸ್ಪುಚಿ ಎಂಬ ದಾಳಿಕೋರನಿಂದ ಬಂದದ್ದು.) ಜನಾಂಗವನ್ನು ನಿರ್ನಾಮ ಮಾಡಿ ಇವರು ತಮ್ಮ ಆಳ್ವಿಕೆಯನ್ನು ಮೊದಲಿಟ್ಟರು.

ಭಾರತದ ಮೇಲಿನ ಆಕ್ರಮಣವನ್ನು ಇಲ್ಲಿ ಹೇಳುವುದೇ ಬೇಡ. ಎಲ್ಲರಿಗೂ ತಿಳಿದ ವಿಷಯವೇ ! ಭಾರತದಿಂದ ಉತ್ಪತ್ತಿಯಾದ ತೆರಿಗೆ ಹೋಗುತಿದ್ದುದು ಬ್ರಿಟನ್ನಿಗೆ. ಆಹಾರ ಸಾಮಗ್ರಿಯಿಲ್ಲದೇ ಕೃತಕ ಬರವನ್ನು ಮಾಡಿ ಬಂಗಾಳದಲ್ಲಿ ಸಾವಿರಗಟ್ಟಲೆ ಜನರನ್ನು ಕೊಂದವರು ಪ ಪ್ರ ದವರು. ಕೊನೆಗೆ ಭಾರತ - ಪಾಕಿಸ್ತಾನ ಎಂಬ ಭಾಗವನ್ನು ಮಾಡಿ ದೊಡ್ಡ ತೊಂದರೆಗಳ ಪರಂಪರೆಗೆ ಕಾರಣರಾದವರು ಇವರೇ.

ಮಧ್ಯ-ಪ್ರಾಚ್ಯದಲ್ಲಿ ಈ ಇಡೀ ರಾದ್ದಾಂತಕ್ಕೆ ಕಾರಣ ಪ. ಪ್ರವೇ. ಮಾಡಿದ್ದುಣ್ಣೋ ಮಹರಾಯ ಅನುವ ಗಾದೆ ಇವರಿಗೆ ಚನ್ನಾಗಿ ತಿಳಿಯುತ್ತಿರಬೇಕು. ಮುಸ್ಲಿಂ ಮತಾಂಧರು ಮಾಡುವ ಕೆಲಸವೇನೂ ಒಳ್ಳೆಯದಲ್ಲ. ಆದರೆ ಅವರನ್ನು ಹೀಗೆ ಮಾಡಲು ಪ್ರೇರೇಪಿಸಿದ್ದು ಇವರ ಅತಿ ಆಸೆಯೇ !

ಅರವತ್ತು ವರ್ಷಗಳ ಹಿಂದೆ ಅಮೇರಿಕದ ಹೆಣ್ಣುಮಕ್ಕಳಿಗೆ ತಮ್ಮ ನಾಯಕರನ್ನು ಚುನಾಯಿಸುವ ಹಕ್ಕಿರಲಿಲ್ಲ. ಆದರೆ ಈಗ ಬೇರೆಯ ದೇಶಗಳಲ್ಲಿ ನಡೆಯುವ ಹಿಂಸೆಯೆಡೆ ಬೆಟ್ಟು ತೋರಿಸಿ ಎಚ್ಚರಿಸುವವರು ಇವರೇ!

ಪ .ಪ್ರ ದಲ್ಲಿ ಒಳ್ಳೆಯದ್ದಿಲ್ಲವೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಅವರ ವೈಜ್ಞಾನಿಕ ಪರಂಪರೆ ಬಹಳ ಮಹತ್ವಪೂರ್ಣವಾದದ್ದು. ಅವರ ಆರ್ಥಿಕಕೊಡುಗೆಯೂ ಅಪಾರ. ನಾನು ಈಗ ಟೈಪಿಸುವ ವ್ಯವಸ್ಥೆ - ಈ ಗಣಕ ಇವೆಲ್ಲದರ ನಿರ್ಮಾಣದ ಕೀರ್ತಿ ಇವರಿಗೇ ಸಲ್ಲಬೇಕು. ಆದರೆ ಇವರಿಂದಲೇ ಜಗತ್ತೆಲ್ಲ, ಇವರಿಗೆ ಎಲ್ಲರೂ ಕೃತಜ್ಞರಾಗಿರಬೇಕು ಎಂದು ಹೇಳಿದರೆ ಒಪ್ಪಲು ಸಾಧ್ಯವಿಲ್ಲ. ಅದೂ ನಾನು ತೋರಿಸಿದ ಲೇಖನದಂತೆ ಮಾನ ಬಿಟ್ಟು ಅವರನ್ನು ಹೊಗಳಿದರೆ ಈ ದಿನೇಶನಿಗೆ ಬುದ್ಧಿಯಿಲ್ಲವೇ ಎನ್ನುವ ಅನುಮಾನ ಕೂಡ ಹೊರಟುಹೋಗಿ ಇವನಿಗೆ ಬುದ್ದಿಯೇ ಇಲ್ಲ ಎಂಬುದು ನಿಶ್ಚಯವಾಗುತ್ತದೆ. ಈಗಿನ ಅಮೇರಿಕಾ ಸ್ವಲ್ಪ ವಾಸಿ ಎಂದು ಹೇಳಬಹುದಾದರೂ ಇದರ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ಇವರು ಮಾಡಿದ ಅಕೃತ್ಯಗಳು ಕಂಡು ಬೇಸರವಾಗುತ್ತದೆ. ಆದರೆ ಸಂತೋಷವೇನೆಂದರೆ -ಇವರು ತಪ್ಪೊಪ್ಪಿಕೊಂಡು ಮುಂದೆ ಹೀಗೆ ತಪ್ಪಾಗದೆ ಇರುವ ಹಾಗೆ ಮಕ್ಕಳಿಗೆ ಪಠ್ಯದಲ್ಲಿ ಈ ವಿಷಯ ಸೇರಿಸಿದ್ದಾರೆ.

ಅಮೇರಿಕದ ಸರ್ಕಾರ ಒಪ್ಪಿದರೂ ನಮ್ಮ ದಿನೇಶ ಒಪ್ಪುವುದಿಲ್ಲ ನೋಡಿ!

2 comments:

Karthik said...

ನೀಲಗ್ರೀವ,

ನಿಮ್ಮ ಲೇಖನ ಬಹಳ ಅರ್ಥಭರಿತ ಹಾಗೂ, ಸತ್ಯವಾಗಿದೆ. ನಮ್ಮ ದೇಶದ ಮೇಲೆ ಎಷ್ಟು ಆಕ್ರಮಣವಾಗಿದೆಯೆಂದರೆ ಆ ದಾಸ್ಯ ಇನ್ನೂ ಪೂರ ಹೋಗಿಲ್ಲ. ಈ ದಿನೇಶ ಒಬ್ಬ ಉದಾಹರಣೆ ಅಷ್ಟೆ.
ಇನ್ನೂ ಅನೇಕ ಮಂದಿ ಪಾಶ್ಚಾತ್ಯ ಅಂದರೆ ಹಿರಿಮೆ ಭಾರತ ಅಂದರೆ ಕಿರಿಮೆ ಅನ್ತ್ಲೇ ತಿಳಿದಿದ್ದಾರೆಂಬುದು ಬಹಳ ನೋವುಂಟುಮಾಡುವ ವಿಷಯ. ಆದ್ರೆ ನಮ್ಮಂಥ ಯುವಕರು ಈಗ ಸತ್ಯಾಂಶ ಬಯಲುಗೊಳಿಸಿ ದಾಸ್ಯವನ್ನು ತೊಡೆದುಹಾಕಬೇಕಾಗಿದೆ.

ಹಾಗೆ ಮಾಡಲು ಕಟಿಬದ್ಧರಾಗಿ ನಿಲ್ಲೋಣ

nIlagrIva said...

ಕಾರ್ತಿಕ್,
ನಿಮ್ಮ ಮಾತನ್ನು ಕೇಳಿ ಸಂತೋಷವಾಯಿತು. ನನ್ನ ಹಾಗೆ ಯೋಚಿಸುವವರು ಇನ್ನೊಬ್ಬರಿದ್ದಾರಲ್ಲಾ ಎಂದು. ಇಂದಿಗೂ ಪಾಶ್ಚಾತ್ಯ ಪ್ರಪಂಚದ ಕಾಣದ ದಾಸ್ಯದಲ್ಲಿ ನಾವಿನ್ನೂ ಇದ್ದೇವೆ. ಇದನ್ನು ಬೇಗನೆ ತಿಳಿದು ಎಚ್ಚೆತ್ತುಕೊಂಡರೆ ಒಳಿತು.

ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಯೋಚಿಸಿದರೆ ಇದೇ ನಿರ್ಧಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಆದರೆ ದಾಸ್ಯದ ಶೃಂಖಲೆಯನ್ನು ಚಿನ್ನದ ಸರವೆಂದು ತಿಳಿದು ಹೆಚ್ಚು ಹೆಚ್ಚಿನ ದಾಸ್ಯವನ್ನು ಮೈ ಮೇಲೆ ಹಾಕಿಕೊಂಡ ದಿನೇಶನಂಥ ಅವಿವೇಕಿಗಳಿರುವವರೆಗೆ ಇದು ಕಷ್ಟಸಾಧ್ಯ.

-ನೀಲಗ್ರೀವ