Wednesday, April 13, 2005

ದುರ್ಗಾ ಸಪ್ತಶತೀ ಮತ್ತು ಶ್ರೀಮದ್ಭಗವದ್ಗೀತೆ

ಈಚೆಗೆ ನಾನು ಡಿ.ವಿ.ಜಿಯವರ "ಜೀವನಧರ್ಮಯೋಗ"ವೆಂಬ ಭಗವದ್ಗೀತಾತಾತ್ಪರ್ಯಗ್ರಂಥವನ್ನು ಓದಿದೆ. ಡಿ.ವಿ.ಜಿಯವರ ಶೈಲಿ ಸುಂದರ. ಇದರ ಬಗ್ಗೆ ಹಿಂದೊಮ್ಮೆ ಬರೆದಿದ್ದೇನೆ. ಆದರೆ ಅದಕ್ಕಿಂತ ದೊಡ್ಡ ಪ್ರಯೋಜನವೆಂದರೆ ಈ ಗ್ರಂಥವು ಭಗವದ್ಗೀತೆಗೆ ನನಗೆ ಒದಗಿಸಿದ ಪ್ರವೇಶ. ನಮ್ಮ ಮನೆಯಲ್ಲಿ ಗೀತೆಯ ಇಪ್ಪತ್ತು -ಮೂವತ್ತು ಪ್ರತಿಗಳಿವೆ. ಇಷ್ಟು ವರ್ಷಗಳಲ್ಲಿ ಒಮ್ಮೊಮ್ಮೆ ಕುತೂಹಲ ಹೆಚ್ಚಿ ಕಣ್ಣಾಡಿಸಿದ್ದುಂಟು. ಆದರೆ ಈಗಲೇ ಅದರ ಮಹತ್ತ್ವವನ್ನು ಜೀವನಕ್ಕೆ ಅದರ ಉಪಯುಕ್ತತೆಯನ್ನೂ ಕಂಡುಕೊಂಡದ್ದು. ಈಗಂತೂ ನಾನು ನನ್ನೊಡನೆ ಗೀತೆಯ ಒಂದು ಚಿಕ್ಕಪುಸ್ತಕವನ್ನು ಇಟ್ಟುಕೊಂಡಿರುತ್ತೇನೆ. ಮೊದಲಿನಿಂದ ಪ್ರತಿ ಅಧ್ಯಾಯವನ್ನೂ ಓದುತ್ತಾ ಬರುವುದು. ಮಧ್ಯೆ ಹಿಂದೆ ಓದಿದ ಶ್ಲೋಕಕ್ಕೆ ಹೊಸ ಅರ್ಥ ಸ್ಫುರಿಸುತ್ತದೆ. ಹೀಗೆ ಕೂಡ ಇದನ್ನು ಅರ್ಥ ಮಾಡಬಹುದು - ಇದರೊಡನೆ ಹೊಂದಿಸಬಹುದು ಎಂದೆಲ್ಲಾ ತೋರುತ್ತದೆ. ಜೀವನದ ನನ್ನ ಅನುಭವವನ್ನು ತಾಳೆ ಹಾಕಿ ಸತ್ಯಪರೀಕ್ಷೆ ಮಾಡುವ ಯತ್ನ ಮಾಡುತ್ತೇನೆ. ಇದರ ಜೊತೆಗೆ ಹಲವು ಸಲಹೆಗಳನ್ನು ಅನುಸರಿಸುವುದಕ್ಕೆ note ಮಾಡಿಕೊಳ್ಳುತ್ತೇನೆ. (ಎಲ್ಲವನ್ನು ಅನುಸರಿಸಲು ಆಗಿಲ್ಲ ಎಂದು ಬೇರೆ ಹೇಳಬೇಕಿಲ್ಲ, ಅಲ್ಲವೇ?). ಎಲ್ಲ ಮುಗಿದ ಮೇಲೆ ಮತ್ತೊಮ್ಮೆ ಆರಂಭಿಸುವುದು.
ಭಾರತೀಯರಿಗೆ ವಿಶೇಷವಾದ ಗ್ರಂಥರತ್ನ ಭಗವದ್ಗೀತೆ. ಇದರಲ್ಲಿ ಏಳು ನೂರು ಶ್ಲೋಕಗಳಿವೆ. ಗೀತೆಯ ಮಹತ್ತ್ವವನ್ನು ಹಾಡಿ ಹೊಗಳಿರುವ ಅನೇಕರಿದ್ದಾರೆ. ಪುರಾಣದ ಭಾಗಗಳೇ ಗೀತಾಮಾಹಾತ್ಮ್ಯವೆಂದು ಕರೆಯಲ್ಪಟ್ಟಿವೆ.

ಏಳು ನೂರು ಎಂದು ಸಂಸ್ಕೃತದಲ್ಲಿ ಹೇಳಬೇಕಾದರೆ ಸಪ್ತಶತ. ಅದನ್ನು ಹೊಂದಿದ ಒಂದು ಗ್ರಂಥವನ್ನು ಸಪ್ತಶತೀ ಎಂದು ಸ್ತ್ರೀಲಿಂಗಕ್ಕೆ ತಂದು ಹೆಸರಿಸಬಹುದು. ಈ ರೀತಿಯ ಗ್ರಂಥಗಳಲ್ಲಿ ಹೆಚ್ಚಿನ ಪ್ರಮುಖತೆಯನ್ನು ಪಡೆದ ಪೂಜ್ಯಗ್ರಂಥ ದುರ್ಗಾಸಪ್ತಶತೀ ಅಥವಾ ಚಂಡೀ.
ಚಂಡೀಯ ಬಗ್ಗೆ ಬರೆಯಲು ನನಗೆ ಆನಂದವೇ ಆಗುತ್ತಿದೆ. ಮಾರ್ಕಂಡೇಯ ಪುರಾಣದಲ್ಲಿ ಬರುವ ಈ ಏಳು ನೂರು ಶ್ಲೋಕದ ವಿಷಯದ ಸ್ಥೂಲನಿರೂಪಣೆ ಹೀಗಿದೆ :

ಸುರಥ ಸಮಾಧಿ ಎಂಬ ರಾಜ-ವೈಶ್ಯರ ಜೋಡಿ ಮನೆಮಠಗಳನ್ನು ಕಳೆದುಕೊಂಡು ಋಷ್ಯಾಶ್ರಮಕ್ಕೆ ಬಂದು ಸೇರುತ್ತದೆ. ಮನೆಯವರು ತುಚ್ಛೀಕರಿಸಿ ಇವರನ್ನು ಅಟ್ಟಿದರೂ ಮನೆಯ-ಮನೆಯ ಜನಗಳ ಮೇಲಿನ ವ್ಯಾಮೋಹವನ್ನು ಬಿಡಲು ಮನವೊಲ್ಲದ ಇವರು ಶೋಕತಪ್ತರಾಗಿ ಕಿಂಕರ್ತವ್ಯತಾಮೂಢರಾಗಿ ಋಷಿಯನ್ನು ಮೊರೆ ಹೊಕ್ಕುತ್ತಾರೆ. ಅದೇ ವ್ಯಾಮೋಹದ ಸಮಸ್ಯೆಯನ್ನು ಮುನಿಯ ಮುಂದಿಡುತ್ತಾರೆ. ಜ್ಞಾನಿಗಳಾದ ಋಷಿವರೇಣ್ಯರು - ಇವರ ಸ್ಥಿತಿಗೆ ಭಗವಂತನ ಮಾಯೆಯೆಂಬ ಶಕ್ತಿಯೇ ಕಾರಣವೆಂದು, ಮಾಯೆಯಿಂದ ಮುಕ್ತರಾದವರು ಮುಕ್ತಿಯನ್ನೇ ಪಡೆಯುವರೆಂಬುವ ವೇದಾಂತದ ಉತ್ತರ ನೀಡುತ್ತಾದೆ. ಆಗ ಪೃಚ್ಛಕದ್ವಯವು - ಮಾಯೆಯೆಂದರೇನು ? ಅದರ ಸ್ವರೂಪವೇನು ? ಅದರ ಮಹಿಮೆಯೇನು ಎಂದೆಲ್ಲಾ ಕೇಳಿದಾಗ - ಋಷಿವರ್ಯರು ಭಗವತಿಯ ಅಂದರೆ ವೈಷ್ಣವೀ ಮಾಯೆಯ ಲೀಲೆಯ ವರ್ಣನೆಗೆ ತೊಡಗುತ್ತಾರೆ. ಅದರಲ್ಲಿ ಪ್ರಮುಖವಾಗಿ ಲೋಕಪೀಡಕ-ರಾಕ್ಷಸರ ಸಂಹಾರದ ಪ್ರಕರಣತ್ರಯವಿದೆ. ಮೊದಲ ಪ್ರಕರಣ - ಮಧು-ಕೈಟಭರದು. ಎರಡನೆಯದು - ಮಹಿಷಾಸುರನ ಮರ್ದನ. ಮೂರನೆಯದು - ಶುಂಭ-ನಿಶುಂಭರ ಸಂಹಾರ.

ಈ ಗ್ರಂಥದ ಮಹಿಮೆ ಅಪಾರವೆಂಬುದಕ್ಕೆ ಇದನ್ನು ನಂಬಿರುವ ಭಕ್ತರೇ ಸಾಕ್ಷಿ. ಈ ಭಾಗವನ್ನು ಪಾರಾಯಣ ಮಾಡುವುದು, ಇದರಿಂದ ಹೋಮಮಾಡುವುದೇ ಮುಂತಾದ ಕಾರ್ಯಗಳಿಂದ ದೇವೀಭಗವತಿಯು ಪ್ರೀತಳಾಗಿ ಅನುಗ್ರಹಿಸುವಳು ಎಂದು ಗ್ರಂಥದ ಫಲಶ್ರುತಿಯಲ್ಲೇ ಬರುತ್ತದೆ. ಈ ಗ್ರಂಥದ ನಿಯಮಬದ್ಧವಾದ ಪಾರಾಯಣಕ್ರಮ ಎಲ್ಲರಿಗೂ ಅಲ್ಲ. ದೀಕ್ಷೆ ದೊರೆತವರು ಮಾತ್ರ ಹಾಗೆ ವಿಧ್ಯುಕ್ತವಾಗಿ ಇದನ್ನು ಪಾರಾಯಣ ಮಾಡಬಲ್ಲರು.

ಶಾಕ್ತರಿಗೆ ಈ ಗ್ರಂಥ ಬಹಳ ಮುಖ್ಯವಾದದ್ದು. ಇತರರಿಗೆ ಗೀತೆ ಹೇಗೆ ಮುಖ್ಯವೋ ಶಾಕ್ತರಿಗೆ ಹಾಗೆ ಸಪ್ತಶತಿಯೂ ಮುಖ್ಯ. ಹಲವು ಸಾಮ್ಯಗಳು ಈ ಗ್ರಂಥಗಳ ನಡುವೆ ಕಾಣಸಿಗುತ್ತವೆ. ಅರ್ಜುನನ ಕಾರುಣ್ಯ ಮತ್ತು ಸುರಥಸಮಾಧಿಗಳ ವ್ಯಾಮೋಹ-ಕಾರ್ಪಣ್ಯ ಎದ್ದು ಕಾಣುತ್ತದೆ. ಭಗವಾನ್ ಶ್ರೀಕೃಷ್ಣ್ನನು ಗೀತೆಯಲ್ಲಿ ಹೇಳುವಂತೆ ದೇವಿಯು ಸಪ್ತಶತಿಯಲ್ಲಿ ಅಭಯವನ್ನು ಕೊಡುವ ಹಲವು ಶ್ಲೋಕಗಳಿವೆ. ಭಗವದ್ವೈಭವ ವರ್ಣನೆಯೂ ಉಭಯಗ್ರಂಥಗಳಲ್ಲಿ ಕಾಣಸಿಗುತ್ತವೆ.

ಗೀತೆಯು ಪ್ರಕೃತಿ-ಕರ್ಮ-ಭಕ್ತಿ-ಜ್ಞಾನ ಇವೇ ಮುಂತಾದ ವಿಚಾರಗಳ ವಿವರಣೆಯನ್ನು ಹೊಂದಿದೆ. ಸಪ್ತಶತಿಯೂ ಇವೇ ವಿಚಾರಗಳನ್ನು ಬೇರೆಯ ರೀತಿ ನೀಡುತ್ತದೆ. ಎರಡು ಶ್ಲೋಕಗಳನ್ನು ಇಲ್ಲಿ ಸ್ಮರಿಸಲೇ ಬೇಕು.

ಸಪ್ತಶತಿಯಲ್ಲಿ -
ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ
ಬಲಾದಾಕೃಶ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ
ಎಂಬ ಶ್ಲೋಕ ಬರುತ್ತದೆ.

ಇದರ ಅರ್ಥ ಹೀಗಿದೆ :
ಜ್ಞಾನಿಗಳಾದವರ ಮನಸ್ಸು-ಬುದ್ದಿಗಳನ್ನೂ ಮಹಾಮಾಯೆಯಾದ ದೇವೀ ಭಗವತಿಯು ಬಲದಿಂದ ಸೆಳೆದು ಮೋಹಕ್ಕೆ ಕೊಡುತ್ತಾಳೆ. (ಅಂದರೆ ಜ್ಞಾನಿಗಳ ಮನೋಬುದ್ಧಿಗಳನ್ನೂ ಮೋಹಾವಿಷ್ಟಳಾಗಿ ದೇವಿಯ ಮಾಯಾಶಕ್ತಿಯು ಮಾಡಬಲ್ಲುದು ಎಂದು)

ಗೀತೆಯಲ್ಲಿ ಇದಕ್ಕೆ ಹತ್ತ್ತಿರದ ಶ್ಲೋಕ :
ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ (೩-೩೩)
(ಅನ್ವಯ : ಜ್ಞಾನವಾನ್ ಅಪಿ ಪ್ರಕೃತೇಃ ಸ್ವಸ್ಯಾಃ ಸದೃಶಂ ಚೇಷ್ಟತೇ, ಭೂತಾನಿ ಪ್ರಕೃತಿಂ ಯಾಂತಿ, ನಿಗ್ರಹಃ ಕಿಂ ಕರಿಷ್ಯತಿ )
ಅರ್ಥ : ಜ್ಞಾನವುಳ್ಳವನೂ ಕೂಡ ತನ್ನ ಪ್ರಕೃತಿಯ ಗುಣಗಳಿಗನುಗುಣವಾಗಿ ನಡೆದುಕೊಳ್ಳುತ್ತಾನೆ. ಜೀವಿಗಳು ಪ್ರಕೃತಿಯನ್ನು ಅನುಸರಿಸುತ್ತವೆ. ಹೀಗಿರುವಲ್ಲಿ, ಮನೋನಿಗ್ರಹವು ಏನು ತಾನೇ ಮಾಡೀತು?

ಇವೆರಡೂ ಶ್ಲೋಕಗಳಲ್ಲಿ ಅದೇ ಧ್ವನಿ ಸಿಗುತ್ತದೆ. ಪ್ರಕೃತಿಯ ಶಕ್ತಿಯನ್ನು ಮನಗಂಡು ವರ್ತಿಸಬೇಕು ಎಂದು ಎಚ್ಚರಿಕೆಯಿದೆ. ಜೊತೆಗೆ ಪ್ರಕೃತಿಯ ಜೊತೆಗಿನ ನಿತ್ಯದ ಸೆಣಸಾಟದಲ್ಲಿ ಸೋತಾಗ ಸಾಂತ್ವನವನ್ನೂ ಇವೆರಡೂ ಶ್ಲೋಕಗಳು ಕೊಡುತ್ತವೆ. ಅಂಥ ದೊಡ್ದವರಿಗೇ ಹೀಗಾಗಿರುವಾಗ ನಮ್ಮಂಥವರಿಗೆ ಪರವಾಗಿಲ್ಲ, ಕೆಲಸವಿನ್ನೂ ಕೆಟ್ಟಿಲ್ಲ ಎಂದು ಹೇಳುತ್ತವೆ.

ಇನ್ನೂ ಆಳವಾಗಿ ಅಧ್ಯಯನ ಮಾಡುವವರಿಗೆ ಇನ್ನೂ ಹೆಚ್ಚು ಸಾಮ್ಯತೆಗಳು ಸಿಗಬಹುದೇನೋ ! ನನಗೇ ಇದು ಸಿಕ್ಕಿರುವಾಗ ಹೆಚ್ಚು ತಿಳಿದವರು ಇನ್ನು ಎಷ್ಟೊಂದನ್ನು ಗುರುತಿಸಬಲ್ಲರೋ!

ಒಟ್ಟಿನಲ್ಲಿ ಗೀತಾಸಪ್ತಶತಿಗಳು ನಮ್ಮ ಸನಾತನಧರ್ಮದ ರತ್ನಗಳು. ಇವೆರಡು ನಮ್ಮೊಂದಿಗಿದ್ದು ಮಾರ್ಗದರ್ಶನ ಮಾಡಿ ಅಭಯ ನೀಡುತ್ತಿವೆ ಎನ್ನುವುದೇ ನಮ್ಮ ಪುಣ್ಯ.

ಇತಿ ಶಮ್

3 comments:

Sandeepa said...

hi,
it's not a comment on ur post....
i 've a problem and i guess u may b willing 2 help..
the thing is i started blogging recently and i want to post something in Kannada..
i donno how to do that!
if u wish 2 help
u can mail me @ snadahalli@gmail.com
inthi,
Sandeepa Nadahalli

nIlagrIva said...

Use baraha 6.0's BarahaDirect feature. Go to baraha.com for details.

Venkat said...

ಚೆನ್ನಾಗಿದೆ