Wednesday, September 14, 2005

ವಿಶ್ವೇಶ್ವರಯ್ಯನವರನ್ನು ಕುರಿತ ಲೇಖನ

Memories of a scientist - Deccan Herald - Internet Edition

ಇಲ್ಲಿ ಬ್ಲಾಗಿಸಿ ಬಹಳ ದಿನಗಳೇ ಕಳೆದಿದ್ದವು. ಇಂದು ಪತ್ರಿಕೆ ಓದುವಾಗ ವಿಶ್ವೇಶ್ವರಯ್ಯನವರ ಜನ್ಮದಿನ ಇಂದು ಎಂದು ತಿಳಿದು ಬಂದಿತು. ಮೇಲಿನ ಲಿಂಕ್ ಒಳ್ಳೆಯ ಲೇಖನವನ್ನು ಹೊಂದಿದೆ. ಈಚೆಗೆ ಡಾ ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ "ಉದಾರಚರಿತರು ಉದಾತ್ತಪ್ರಸಂಗಗಳು" ಎಂಬ ಪುಸ್ತಕವನ್ನು ಸ್ವಲ್ಪ ನೋಡಿದೆ. ಈ ಪುಸ್ತಕದಲ್ಲಿ ಸರ್. ಎಮ್. ವಿಯವರನ್ನು ಕುರಿತು ಐದಾರಾದರೂ ಪ್ರಸಂಗಗಳಿರಬೇಕು.

ವಿಶ್ವೇಶ್ವರಯ್ಯನವರ ವ್ಯಕ್ತಿತ್ವ ಇಂದಿಗೂ ಕನ್ನಡಿಗರಲ್ಲಿ ಭಾರತೀಯರಲ್ಲಿ ಅಚ್ಚರಿ ಗೌರವಗಳನ್ನು ಮೂಡಿಸುವಂಥದ್ದು. ಈಗಿನ ಪರಿಸ್ಥಿತಿಗಳನ್ನು ಗಮನಿಸಿದಾಗ ಇಂಥವರು ನಮ್ಮೊಡನಿದ್ದರೆ ಎಂಬ ಅನುಮಾನ ಮೂಡುತ್ತದೆ. ಇವರ ಬೀದಿದೀಪದ ಕೆಳಗಿನ ಅಧ್ಯಯನ. ಇಂಜಿನಿಯರ್ ಪದವಿ ಗಳಿಕೆ. ದಿವಾನರಾದದ್ದು. ದಿವಾನರಾಗಿ ನಮ್ಮ ನಾಡಿಗೆ ಸೇವೆ ಸಲ್ಲಿಸಿದ್ದು. ಇವರ ನಿಷ್ಠುರರೆನ್ನುವಷ್ಟರ ಮಟ್ಟಿನ ಪ್ರಾಮಾಣಿಕತೆ. ಆದರೆ ಇದರ ಜೊತೆಗಿದ್ದ ದೇಶಪ್ರೇಮ. ವಿಶ್ವೇಶ್ವರಯ್ಯ ಎಂಬ ಹೆಸರು ಮನದಲ್ಲಿ ಮೂಡಿದಾಗ ಈ ವಿಚಾರಗಳು ಹಾಗೇ ಹಾದುಹೋಗುತ್ತವೆ.

"ಉದಾರಚರಿತರು ..." ಪುಸ್ತಕದಲ್ಲಿ ಒಂದು ಪ್ರಸಂಗ ವಿಶ್ವೇಶ್ವರಯ್ಯನವರ ದೇಶಬಾಂಧವರೆಡೆ ಇದ್ದ ಅಭಿಮಾನವನ್ನು ತೋರಿಸುತ್ತದೆ. ನವರಾತ್ರಿಯ ಸಂದರ್ಭದ ಐರೋಪ್ಯ ದರ್ಬಾರಿನ ಮಹೋತ್ಸವದಲ್ಲಿ ಐರೋಪ್ಯರು ಆಹ್ವಾನಿತರಿದ್ದರು. ಇವರೊಡನೆ ನಮ್ಮ ನಾಡಿನವರೂ ದರ್ಬಾರಿನಲ್ಲಿ ಪಾಲ್ಗೊಳ್ಳಬೇಕಿತ್ತು. ಐರೋಪ್ಯರಿಗೋಸ್ಕರ ಮಾತ್ರ ಇನ್ನೂರು ಪೀಠೋಪಕರಣಗಳನ್ನು ತರಿಸುವ ತೀರ್ಮಾನವಾಗಿತ್ತು. ಹಾಗೆ ನೋಡಿದಾಗ ನಮ್ಮ ದೇಶದವರೆಲ್ಲರೂ ನೆಲದ ಮೇಲೆ ಕುಳಿತು, ಐರೋಪ್ಯರು ಮಾತ್ರ ಕುರ್ಚಿಗಳ ಮೇಲೆ ಕೂರುವಂಥ ಸಂದರ್ಭವೇರ್ಪಟ್ಟಿತ್ತು. ವಿಶೇಷವೇನೆಂದರೆ ಐರೋಪ್ಯ ಅಧಿಕಾರಿಗಳು ತಾವು ಮಾತ್ರವಲ್ಲದೆ ತಮ್ಮ ಕುಟುಂಬದವರನ್ನು ತಮ್ಮ ಸೇವಕರನ್ನೂ ಕರೆತರುತ್ತಿದ್ದರು. ಇವರೆಲ್ಲರೂ ಅವರ ತೊಗಲಿನ ಬಣ್ಣದ ದೆಸೆಯಿಂದ ಮೇಲೆ ಕೂರಲು ಸಾಧ್ಯವಾಗುತ್ತಿತ್ತು. ಇದು ಎಂಥಾ ಆಭಾಸವನ್ನು ಮಾಡಬಹುದೆಂದು ಮನಗಂಡ ಅಂದಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಜೊತೆ ಇದರ ಬಗೆಗಿನ ಮಾತೆತ್ತಿದರು. ಮಹಾರಾಜರು ಇದು ಹಿಂದಿನಿಂದ ನಡೆದು ಬಂದ ರೀತಿಯೆಂದು ಏನೂ ಮಾಡಲಾರದೇ ಹೋದರು. ದರ್ಬಾರಿನ ದಿನ ನೋಡಿದಾಗ ಅಲ್ಲಿ ಕೇವಲ ಇನ್ನೂರಲ್ಲ - ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿತ್ತು. ಇದರಿಂದ ಎಲ್ಲ ಸಭಿಕರೂ ಸಮಾನರಾಗಿ ಕುಳಿತು ದರ್ಬಾರಿನಲ್ಲಿ ಪಾಲ್ಗೊಳ್ಳಬಹುದಿತ್ತು. ಆಗಬಹುದಾಗಿದ್ದಂಥ ಆಭಾಸ ತಪ್ಪಿತು. ಮಹಾರಾಜರಿಗೆ ಸಂತೋಷವಾಗಿ ತಮ್ಮ ದಿವಾನರಿಗೆ ಒಳ್ಳೆಯ ಬಹುಮಾನ ನೀಡಿದರೆಂದು ಕಥೆ.

ಈ ಕಥೆ ವಿಶ್ವೇಶ್ವರಯ್ಯನವರ ಅಭಿಮಾನ ಮತ್ತು ಕಾರ್ಯದಕ್ಷತೆಗಳನ್ನು ತೋರಿಸುತ್ತದೆ. ಇವರು ಕಟ್ಟಿಸಿದ ಕೃಷ್ಣರಾಜಸಾಗರ ಇಂದಿಗೂ ಕೋಟಿಕೋಟಿ ಜನರಿಗೆ ಆಧಾರವಾಗಿದೆ. ಇವರು ದಿವಾನಪದವಿಯನ್ನು ಬಿಟ್ಟುಕೊಟ್ಟ ಕಥೆಯನ್ನು ಇದೇ ಪುಸ್ತಕ ನಿರೂಪಿಸುತ್ತದೆ. ಹಿಂದುಳಿದ ವರ್ಗದ ಜನರಿಗೆ ಕೆಲಸದಲ್ಲಿ ಮೀಸಲಾತಿ ನೀಡಬೇಕೆಂಬ ವಿಚಾರದ ಕಮ್ಮಟ ಮದ್ರಾಸಿನಲ್ಲಿ ಏರ್ಪಾಡಾಗಿತ್ತು. ಈ ಕಮ್ಮಟಕ್ಕೆ ದಿವಾನರಿಗೆ ಆಹ್ವಾನ ಬಂದಿರಲಿಲ್ಲ. ಮಹಾರಾಜರಿಗೆ ಮಾತ್ರ ಬಂದಿತ್ತು. ಮಹಾರಾಜರು ಕರೆದರೂ ಆಹ್ವಾನವಿಲ್ಲವೆಂದು ದಿವಾನರು ಹೋಗಲಿಲ್ಲ. ತಮ್ಮ ದಿವಾನರನ್ನು ವಿಚಾರಿಸದೆ ಉದ್ಯೋಗದಲ್ಲಿ ಹಿಂದುಳಿದ ಜಾತಿಯ ಜನರಿಗೆ ಮೀಸಲಾತಿಯ ಘೋಷಣೆಯನ್ನೂ ಮಹಾರಾಜರು ಹೊರಡಿಸಿದರೆಂದು ಕಾಣುತ್ತದೆ. ರಾಜ್ಯದ ದಿವಾನರಾಗಿದ್ದರೂ ತಮ್ಮನ್ನು ಇಂಥ ಮುಖ್ಯ ವಿಚಾರದಲ್ಲಿ ತೊಡಗಿಸದೆ ಇದ್ದುದರಿಂದ ವಿಶ್ವೇಶ್ವರಯ್ಯನವರಿಗೆ ತಮ್ಮ ಸ್ಥಾನದ ಬಗ್ಗೆ ಅಸಮಾಧಾನವಾಯಿತೆಂದು ಕಾಣುತ್ತದೆ. ತಾವೇ ದಿವಾನ ಹುದ್ದೆಗೆ ರಾಜೀನಾಮೆ ನೀಡಿದರು. ಮಹಾರಾಜರೇ ಮೊದಲಾಗಿ ಹಲವರು ಕೇಳಿಕೊಂಡರೂ ವಿಶ್ವೇಶ್ವರಯ್ಯನವರು ತಮ್ಮ ತೀರ್ಮಾನವನ್ನು ಬದಲಾಯಿಸಲಿಲ್ಲ. ಕೆಲಸದ ಕಡೆಯ ದಿನ ಕಛೇರಿಯ ಕಾರಿನಲ್ಲಿ ಮನೆಯಿಂದ ಹೊರಟು ಮರಳುವಾಗ ತಮ್ಮದೇ ವ್ಯವಸ್ಥೆ ಮಾಡಿಕೊಂಡು ಮನೆಗೆ ಬಂದರು.

ಈ ರೀತಿ ಅಗ್ನಿಸದೃಶವ್ಯಕ್ತಿತ್ವವುಳ್ಳವರು ಸರ್. ಎಂ. ವಿಯವರು. ಇವರಿಗೆ ಸಂದ ಭಾರತರತ್ನದಿಂದ ಆ ಪ್ರಶಸ್ತಿಗೇ ಗೌರವಬಂದಿತೆಂದರೆ ಅತಿಶಯೋಕ್ತಿಯೇನಾಗಲಾರದು. ಇಂಥವರ ಸ್ಮರಣೆ ನಮ್ಮ ಜೀವನಗಳಿಗೂ ಸ್ಫೂರ್ತಿ ಸಿಗುತ್ತದೆ.

2 comments:

Anonymous said...

was reading the vishveshwaraiyya episode... and remembered somtings my mothers had hold abt him.. thot of shring it..
its said that when he was offered the osition of diwan..he went to his mother and told her that only if she agrees that she will not ever ask for a favor from him for his relatives he will take up the position..
another thing is that peanuts were his favorite snacks...
may not mean much just wanted to share

Anonymous said...

DVG's book Jnapaka chitrashale has a different version on the same incident. But both show facets of great personality Visheswarayya.