Friday, March 17, 2006

ಗುಂಡವರ್ಯನಮನಮ್

ಸಾಮಾನ್ಯವಾಗಿ ಬದುಕಿರುವವರ ಹುಟ್ಟಿದ ದಿನವನ್ನು ವರ್ಧಂತಿ ಎನ್ನುತ್ತಾರೆ. ಉದಾಹರಣೆಗೆ - ಶೃಂಗೇರಿಯ ಸ್ವಾಮಿಗಳ ಹುಟ್ಟಿದ ದಿನವನ್ನು ವರ್ಧಂತಿಯೆಂದಾಚರಿಸುತ್ತಾರೆ. ಬದುಕಿರದವರಿಗೆ ಹುಟ್ಟಿದ ದಿನವನ್ನು ಜಯಂತಿ ಎಂದು ಆಚರಿಸುತ್ತಾರೆ. ಶ್ರೀಕೃಷ್ಣಜಯಂತಿ, ಶಿವಾಜಿ ಜಯಂತಿ, ಗಾಂಧಿ ಜಯಂತಿ ಮುಂತಾದವು ನೆನಪಿಗೆ ಬರುತ್ತವೆ. ಇಂದು ಡಿವಿಜಿಯವರ ನೂರಹತ್ತೊಂಭತ್ತನೆಯ ಜಯಂತಿ. ಈ ದಿನದಂದು ಅವರ ನೆನಪನ್ನು ಮಾಡಿಕೊಂಡು ಸಂತೋಷಪಡುವದಕ್ಕೋಸ್ಕರವಾಗಿ ನನ್ನ ಬಹುಕಾಲಾನಂತರದ ಕನ್ನಡ ಬ್ಲಾಗ್ ಬರವಣಿಗೆ.

ಮೊದಲೇ ಬಹಳಷ್ಟು ಸಲ ಹೇಳಿದ ಹಾಗೆ ನನಗೆ ಡಿವಿಜಿಯವರ ಭಾಷೆ, ಸಾಹಿತ್ಯ ಮತ್ತು ಜೀವನದ ಬಗೆಗಿನ ದೃಷ್ಟಿಗಳು ಬಹಳ ಪ್ರಿಯವಾದವು. ಅವರು ನಡೆಸಿದ ಹಾಗೆ ಜೀವನವನ್ನು ನಡೆಸಬೇಕು. ಸಕ್ರಿಯರಾಗಿ ಸಾಮಾಜಿಕ ಜೀವನದ ನಾನಾ ಭಾಗಗಳಲ್ಲಿ ಪಾಲ್ಗೊಂಡವರು. ಆಧ್ಯಾತ್ಮದ ತುದಿಯಿಂದ ರಾಜಕೀಯದ ಕೊನೆಯವರೆವಿಗೂ ವ್ಯಾಪಿಸಿತ್ತು ಇವರ ಜೀವನಪ್ರೀತಿ. ಇವರು ನಿಶ್ಚಯವಾಗಿ ನಿರಾಶಾವಾದಿಗಳಲ್ಲ. ಹಾಗೆಂದು ಮಿತಿಮೀರಿದ ಆಶಾವಾದವು ಇವರದಲ್ಲ. ಬುದ್ಧ ಮತ್ತು ಕೃಷ್ಣರ ಮಧ್ಯಮಮಾರ್ಗದಲ್ಲಿ ತಮ್ಮ ಜೀವನವನ್ನು ನಡೆಸಿದ ಧೀರರು ಡಿ.ವಿ.ಜಿ. ಅವರ ಅಂತರ್ದೃಷ್ಟಿಯನ್ನು ತಿಳಿಯಲು ಅವರ ಕಗ್ಗವೇ ಸಾಕು. ಅಷ್ಟೇಕೆ ? ಕಗ್ಗದ ಒಂದು ಪದ್ಯ ಸಾಕು.

ಅವರ ಜೀವನದಲ್ಲಿ ಕಂಡ ಚಿಕ್ಕದೊಡ್ಡವರ ಬಗ್ಗೆ ತಮ್ಮ ಜ್ಞಾಪಕಚಿತ್ರಶಾಲೆಯಲ್ಲಿ ಸೊಗಸಾಗಿ ಬರೆದಿದ್ದಾರೆ. ಅದರ ಒಂದೊಂದು ಭಾಗವೂ ಬಹಳ ಸಲ ಓದಿಕೊಳ್ಳಬಹುದಾದದ್ದು. ಲಲಿತವಾಗಿ ಆತ್ಮೀಯವಾಗಿರುವ ಶೈಲಿ. ರೋಚಕವಾದ ಸಂಗತಿಗಳು. ಇವೆಲ್ಲವೂ ಸೇರಿದರೆ ಹೇಗಿರಬಹುದು ಎಂದು ಊಹಿಸಿ. ಇದಕ್ಕೂ ಚೆನ್ನಾಗಿರುವುದು ಜ್ಞಾಪಕಚಿತ್ರಶಾಲೆ. ತಮ್ಮ ಊರಾದ ಮುಳಬಾಗಿಲಿನಲ್ಲಿ ಕಂಡ ಆಂಧ್ರ ಬ್ರಾಹ್ಮಣರ ಸಂಗತಿಯಿರಬಹುದು. ಸಜ್ಜನರಾಯರ ಸಜ್ಜನಿಕೆಯ ಬಗ್ಗೆ ಇರಬಹುದು. ವಿಶ್ವೇಶ್ವರಯ್ಯನವರ ನಿಃಸ್ಪೃಹತೆಯ ಬಗ್ಗೆ ಇರಬಹುದು. ಗೋಪೀನಾಥ ಗುರುವಿನ ಮೇಲೆ ಯಾರೋ ಕಟ್ಟಿದಂಥ ಕುಚೋದ್ಯದ ಪದ್ಯವಿರಬಹುದು. ಗುಂಡಪ್ಪನವರ ದೃಷ್ಟಿ ಎಲ್ಲೆಲ್ಲೂ ಹರಡಿದ್ದಿತು. ಆ ಕಾಲದ ಆ ಪ್ರದೇಶದ ಜನಜೀವನದ ಬಗ್ಗೆ ನೈಜವಾಗಿ ಸುಂದರವಾಗಿ ಮೂಡಿಬಂದಂಥ ಪುಸ್ತಕಶ್ರೇಣಿಯೆಂದರೆ ಇದೇ! ಒಳ್ಳೆಯ ವಿಮರ್ಶಕರೆಂದು ಖ್ಯಾತರಾದ ಎಚ್. ಎಸ್. ರಾಘವೇಂದ್ರರಾಯರು ತಾವು ಸ್ವತಃ ನಾಸ್ತಿಕರಾಗಿದ್ದರೂ ಈ ಜ್ಞಾಪಕಚಿತ್ರಶಾಲೆಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅವರ ಮೆಚ್ಚಿಗೆ ಹಾಗಿರಲಿ - ನನಗಂತೂ ಜ್ಞಾಪಕಚಿತ್ರಶಾಲೆಯಲ್ಲಿ ಬರುವ ಒಬ್ಬೊಬ್ಬರ ವಿಷಯವನ್ನು ಎಷ್ಟು ಸಲ ಓದಿದರೂ ತೃಪ್ತಿ ಬರುವುದಿಲ್ಲ.

ಡಿ.ವಿ.ಜಿಯವರ ಸಮಗ್ರ ಕೃತಿ ಶ್ರೇಣಿಯನ್ನು ಸರ್ಕಾರ ಕಡಿಮೆಬೆಲೆಯಲ್ಲಿ - ಆದರೆ ಒಳ್ಳೆಯ ರೀತಿಯಲ್ಲಿ ಹೊರತಂದಿದೆ - ಅದೂ ಎರಡನೆಯ ಸಲ. ನಾನು ಎಲ್ಲ ಪುಸ್ತಕಗಳನ್ನು ಕೊಂಡಿದ್ದೇನೆ - ಒಂದೊಂದಾಗಿ ಓದುತ್ತಿದ್ದೇನೆ. ಅವುಗಳ ಸವಿಯೇ ಸವಿ. ಇಷ್ಟವಿದ್ದವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕಟ್ಟಡದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರನ್ನು ವಿಚಾರಿಸಿ. ಹನ್ನೊಂದು-ಹನ್ನೆರಡು ಪುಸ್ತಕಗಳ ಶ್ರೇಣಿ.

ಡಿವಿಜಿಯವರು ತಮ್ಮ ಜೀವನಧರ್ಮಯೋಗದ ಆರಂಭದಲ್ಲಿ ಬರೆದಿರುವ ಅವರೇ ರಚಿಸಿದ ಉತ್ತಮವಾದ ಶ್ಲೋಕದೊಂದಿಗೆ ನನ್ನ ಕಿರು ನಮನ ಕೊನೆಗೊಳ್ಳುತ್ತದೆ.

ಜಗದ್ರಣಾಂಗಣೇ ಯಸ್ಯ ಸ್ಮರಣಂ ಜಯಕಾರಣಮ್ |
ಪಾರ್ಥಸಾರಥಯೇ ತಸ್ಮೈ ಶ್ರೀಕೃಷ್ಣಬ್ರಹ್ಮಣೇ ನಮಃ ||

ಜಗತ್ತೆಂಬ ರಣಾಂಗಣದಲ್ಲಿ ಯಾರ ಸ್ಮರಣೆಯು ಜಯಕ್ಕೆ ಕಾರಣವೋ, ಅಂಥ ಅರ್ಜುನಸಾರಥಿಯಾದ ಶ್ರೀಕೃಷ್ಣನೆಂಬ ಪರಬ್ರಹ್ಮಸ್ವರೂಪನಿಗೆ ನಮ್ಮ ನಮಸ್ಕಾರಗಳು.
|| ಇತಿ ಶಮ್ ||

1 comment:

Venkatesha Murthy said...

namaste, my name is Venkatesha Murthy and I live in Bangalore. I am a ardent fan of sri DVG. Please visit http:\\marulamuniya.blogspot.in

I would seek your help in understanding DVG literature more, so please let me know how I can contact you sir.