Wednesday, April 12, 2006

ಅಣ್ಣಾವ್ರ "ಅಭಿಮಾನಿ"ಗಳು

ನಿನ್ನೆ ಆಫೀಸಿನಲ್ಲಿಯೇ ತಿಳಿಯಿತು ರಾಜಕುಮಾರ್ ಅವರ ನಿಧನದ ವಾರ್ತೆ. ಅವರ "ಅಭಿಮಾನಿ"ಗಳೆಂದು ಹೇಳಿಕೊಂಡು ತಿರುಗುವವರು ಏನಾದರೂ ಅನಾಹುತ ಮಾಡಿಯೇ ತೀರುತ್ತಾರೆ ಎಂಬ ಅನುಮಾನ ಮನದಂಚಿನಲ್ಲಿ ಮೂಡುವ ಹೊತ್ತಿಗೆ ನನ್ನ ಸಹೋದ್ಯೋಗಿಯೊಬ್ಬ ಮೈಲ್ ಕಳಿಸಿದ್ದ. ಶಿವಾಜಿನಗರದಲ್ಲಿ ಬಸ್ಸುಗಳನ್ನು ಸುಟ್ಟರೆಂಬ ವಾರ್ತೆ. ಮತ್ತೊಬ್ಬರು ಹೌದೆಂಬಂತೆ ಹೇಳಿದರು. ಮನೆಯಿಂದಲೂ ದೂರವಾಣಿ ಕರೆ ಬಂದಿತು. ಸರಿಯೆಂದು ನೇರ ಮನೆಗೆ ಹೊರಟೆ.

ದಾರಿಯಲ್ಲಿ ಜನಸಮ್ಮರ್ದ ಹೆಚ್ಚಿರಲಿಲ್ಲ. ಆದರೆ ಮಾಗಡಿ ರಸ್ತೆಯ ಬಳಿ ಬಂದಾಗ ಅಲ್ಲಲ್ಲಿ ಬೆಂಕಿಗಳು ಕಾಣಿಸಿದವು. ಅಲ್ಲಲ್ಲಿ ಟೈರಿಗೋ; ಯಾರೋ ಪಾಪದವರ ವಾಹನಗಳಿಗೋ ಇಟ್ಟ ಬೆಂಕಿ. ಆದರೆ ಸ್ವಲ್ಪದರಲ್ಲಿಯೇ ಪೋಲೀಸ್ ವ್ಯಾನ್ ಕಂಡಿತು. ಅಲ್ಲಿ ನಿಂತು ನೋಡಲು ಯತ್ನಿಸಲಿಲ್ಲ. ಮನೆಯೆಡೆಗೆ ಗಾಡಿಯೋಡಿಸಿದೆ. ಅಲ್ಲಲ್ಲಿ ಕಲ್ಲು ಹೊಡೆಸಿಕೊಂಡ ಬಸ್ ಕಾಣಿಸಿತು. ವಾಹನದ ಮುಂದಿನ ಗಾಜನ್ನು ಸಂಪೂರ್ಣವಾಗಿ ಕಳೆದುಕೊಂಡರೂ ಬದುಕಿದೆಯಾ ಬಡಜೀವವೆಂಬ ಸಂತಸದಿಂದ ಗಾಡಿ ನಡೆಸಿದ್ದ ಒಬ್ಬಿಬ್ಬ ಬಸ್ ಚಾಲಕರೂ ಕಂಡರು. ಸಾರ್ವಜನಿಕ ಬಸ್ ಚಲನೆ ಸ್ಥಗಿತಗೊಂಡದ್ದರಿಂದ ಬಹಳಷ್ಟು ಜನರಿಗೆ ಅನನುಕೂಲವಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದ್ದ ಜನಸರಣಿ ಕಂಡಿತು. ಬಸ್ ನಿಲ್ದಾಣಗಳಲ್ಲಿ ಇದೋ ಬರುವುದೆಂಬ ಆಸೆ ಹೊತ್ತು ನಿಂತ ಹಲವರು ಕಂಡರು. ಅಲ್ಲಲ್ಲಿ ಎಬ್ಬಿಸಿದ್ದ ಶಾಮಿಯಾನಗಳಿಂದ ರಾಜಕುಮಾರ್ ಅವರ ಹಾಡುಗಳು ಕೇಳಿಬರುತ್ತಿದ್ದವು. "ಹೊಸ ಬೆಳಕೂ... ಮೂಡುತಿದೇ..". ಧೀಮಂತ ನಟ-ಗಾಯಕನ ಸಂತಸದ ದನಿ ಆತನ ನಿಧನದ ಸಂಗತಿಯನ್ನೂ ಮರೆಸುವ ಹಾಗೆ ಕೇಳಿಸುತ್ತಿತ್ತು. ಆ ಹಾಡುಗಳ ಗುಂಗಿನಲ್ಲಿಯೇ ಮನೆ ಸೇರಿದೆ.

ರಾಜಕುಮಾರ್ ಅವರು ನಟಿಸಿದ್ದ ಚಿತ್ರಗಳ ನೆನಪಿನ ಜೊತೆಗೆ ಎದುರಿಗೆ ಕಾಣುವ ಸುಟ್ಟ ಟೈರಿನ ಸುಟ್ಟ ವಾಹನದ ವಾಸ್ತವ. ಅವರ ಹಾಡಿನ ನಾದದೊಂದಿಗೆ ಸರಿಯಾಗಿ ಸೇರದ ರಾಜಕುಮಾರರಿಗೆ ಮಾಡಿದ್ದ ಜಯಕಾರ.

ಮನೆಗೆ ಬಂದು ನೋಡಿದಾಗ ದೂರದರ್ಶನದ ಹಲವು ವಾಹಿನಿಗಳಲ್ಲಿ ಇದೇ ಸುದ್ದಿ. ಉದಯ ವಾರ್ತೆ ಮತ್ತು ಈ ಟಿವಿ ವಾಹಿನಿಗಳಲ್ಲಿ ವರನಟನ ವಾಸ್ತವ್ಯದ ಎದುರು ಸೇರಿದ್ದ ಜನಸಂದಣಿಯ ನಿರಂತರ ನೋಟ. ಮಧ್ಯೆ ರಾಜಕುಮಾರ್ ಅವರಿಗೆ ಭಾರತರತ್ನ ಕೊಡಬೇಕೆಂಬುದರ ಜೊತೆಗೆ ಏಳು ದಿನಗಳ "ಶ್ಲೋ"ಕಾಚರಣೆಯನ್ನು "ಕಟ್ಟುನಿಟ್ಟಿನಿಂದ" ನಡೆಸಬೇಕೆಂಬ "ಅಭಿಮಾನಿ"ಯ ಆಗ್ರಹ. ವಾಹನಗಳನ್ನು ಮುಗುಚಿ ಅದಕ್ಕೆ ಕಲ್ಲು ಹೊಡೆದು ಬೆಂಕಿಯಿಟ್ಟ ಕೆಲಸದ ನೇರ ಪ್ರಸಾರ. ಶ್ರದ್ಧಾಂಜಲಿಯನ್ನು ಸಲ್ಲಿಸಬಂದ ಗಣ್ಯ ವ್ಯಕ್ತಿಗಳ ಮುಖಗಳಲ್ಲಿ ರಾಜಕುಮಾರ್ ಅವರ ನಿಧನವನ್ನು ಕುರಿತ ಶೋಕ ಅವ್ಯಕ್ತವಾಗಿದ್ದು ಸ್ವಲ್ಪ ಪ್ರಚಾರ ಗಳಿಸಬಹುದೇನೋ ಎಂಬ ಉತ್ಸಾಹವೇ ಸುವ್ಯಕ್ತವಾದ ಹಾಗೆ ಕಾಣುತ್ತಿತ್ತು.

ಒಪ್ಪಿದೆ. ವಿಖ್ಯಾತ ನಟರು ಒಳ್ಳೆಯ ಮನುಷ್ಯರು ಆದ ಒಬ್ಬರ ನಿಧನವಾದಾಗ ದುಃಖವಾಗದೆ ಇರುವುದಿಲ್ಲ. ಅದೂ ರಾಜಕುಮಾರ್ ಅವರಂಥ ಅಪಾರವಾದ ಜನಮನ್ನಣೆಯನ್ನು ಗಳಿಸಿದ ನಟರು ಅಗಲಿದರೆ ದುಃಖ ಕಷ್ಟಸಹ್ಯವಾಗುವುದು. ಆದರೆ ಈ ದುಃಖಸಹನೆಯನ್ನೇ ನೆಪಮಾಡಿ ವಾಹನಗಳನ್ನು ಸುಡುವುದೇ? ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದೇ? ಪ್ರಪಂಚದ ಯಾವೆಡೆ ಈ ರೀತಿಯ ದುಃಖಪ್ರದರ್ಶನವಿರುವುದು? ಅಗಲಿದ ನಟರ ನೆನಪಿಗೆ ಮಸಿಯನ್ನು ಬಳಿಯುತ್ತಿದೇವೆಂಬ ಪರಿಜ್ಞಾನವೂ ಇಲ್ಲದೇ ಹೋಯ್ತೆ? ಇನ್ನು ಮುಂದೆ ರಾಜಕುಮಾರ್ ಅವರ ನೆನಪು ಬಂದಾಗ ಅವರ "ಅಭಿಮಾನಿ"ಗಳಿಂದಾದ ಅನನುಕೂಲದ ಕಹಿನೆನಪೂ ಸೇರಬೇಕೆ? ನಮಗೆಲ್ಲ ಗೊತ್ತು - ರಾಜಕುಮಾರ್ ಅವರು ಅವರ "ಅಭಿಮಾನಿ"ಗಳ ಈ ರೀತಿಯ ಕೆಲಸಗಳಿಗೆ ಎಂದೂ ಪ್ರೋತ್ಸಾಹ ನೀಡಿದವರಲ್ಲ. ಯಾರೋ ಕಿಡಿಗೇಡಿಗಳು ರಾಜಕುಮಾರ್ ಅವರ ಒಳ್ಳೆಯ ಹೆಸರಿಗೆ ಕಲಂಕ ತರಲು ಮಾಡಿದ ಪ್ರಯತ್ನವೇ ಇದು ಎಂದು ಮನಸ್ಸು ಹೇಳುತ್ತಿದೆ. ನಾನು "ಅಭಿಮಾನಿ" ಎಂದು " " ಗಳ ನಡುವೆ ಅಭಿಮಾನಿಯೆಂಬ ಪದವನ್ನು ಸೇರಿಸಿದ್ದು ಈ ರೀತಿ ಹಿಂಸೆ ಮಾಡುವ ಪ್ರವೃತಿಯುಳ್ಳ ರಾಜಕುಮಾರ್ ಅವರನ್ನೇ ಅವರ ಹಿಂಸೆಗೆ ನೆಪಮಾಡಿದಂಥವರನ್ನು ತೋರಿಸಲು. ನಿಜವಾದ ಅಭಿಮಾನಿಗಳಿಗೆ "" ಇರುವುದಿಲ್ಲ.

ನಿನ್ನೆ ಇದನ್ನೇ ಬರೆಯಲು ಹೊರಟವನು ಅವರ ನೆನಪನ್ನು ಈ ಅಸಮಾಧಾನದ ವಿಷಯದೊಂದಿಗೆ ಸೇರಿಸದೆ ಬೇರೆಡೆ ಬರೆಯೋಣವೆಂದು ಈಗ ಬರೆಯುತ್ತಿದ್ದೇನೆ. ಒಟ್ಟಿನಲ್ಲಿ ಒಂದು ಯುಗದ ಕೊನೆಯಾಗಿದೆ ಎಂಬ ಭಾವನೆ ಆವರಿಸಿತ್ತು. ಆದರೂ ರಾತ್ರಿ ಈ ಟಿವಿಯಲ್ಲಿ "ಅನುರಾಗ ಅರಳಿತು" ಚಿತ್ರದ ಪ್ರದರ್ಶನ ನಡೆದಿದ್ದಾಗ ಚಿತ್ರದಲ್ಲಿ ಮನಸ್ಸು ತನ್ನನ್ನೇ ಮರೆತಿತ್ತು. ಆದರೆ ಅಲ್ಲಿ ರಾಜಕುಮಾರ್ ಕಾಣಿಸಲಿಲ್ಲ. ಚಿತ್ರದ ನಾಯಕ ಶಂಕರ್ ವಿಜೃಂಭಿಸಿದ್ದ. ಥಟ್ಟನೆ ಅರಿವಾಯ್ತು ರಾಜಕುಮಾರ್ ಅವರ ನೈಜಾಭಿನಯದ ಶಕ್ತಿ. ಅವರು ನಿಧನರಾಗಿದ್ದರೂ ಅವರ ನಟನೆ ಆ ಸಂಗತಿಯನ್ನೇ ಮರೆಸಿತ್ತು. ನಟನೊಬ್ಬನಿಗೆ ಇದಕ್ಕಿಂಥ ಹೆಚ್ಚಿನ ಶಕ್ತಿ ಬೇಕೇ? ಅವರ ಚಿತ್ರಗಳಿರುವವರೆಗೂ ಅವರು ಅಜರಾಮರರೆಂದು ಉಲಿದ ಮನ ಮತ್ತೆ ಆ ಚಿತ್ರದಲ್ಲೇ ತಲ್ಲೀನವಾಯ್ತು. "ಅಭಿಮಾನಿ"ಗಳ ಕುಕೃತ್ಯಗಳ ಕಹಿನೆನಪು ಅಳಿದಿತ್ತು.

2 comments:

Anveshi said...

ನೆಟ್ಟಲ್ಲಿ ಹೀಗೆಯೇ ವಿಹರಿಸುತ್ತಿದ್ದಾಗ ನೀವು ಸಿಕ್ಕಿದಿರಿ.
ಅಣ್ಣಾವ್ರ ನಿಧನಾನಂತರ ನೀವೇನೂ ಬರೆದಿಲ್ಲ.
ಇದಕ್ಕಾಗಿ ಒಂದು ಸಣ್ಣ ನೆನಪೋಲೆ. ಬರೆಯುವುದನ್ನು ಮುಂದುವರಿಸಿ.

nIlagrIva said...

ಬರೆಯಲು ಇನ್ನೂ ಸಮಯ ಸಿಕ್ಕಿಲ್ಲ. ಸಿಕ್ಕಾಗ ಅವಶ್ಯವಾಗಿ ಬರೆಯುತ್ತೇನೆ. ನಿಮ್ಮ ಕೋರಿಕೆಗಾಗಿ ಧನ್ಯವಾದಗಳು.

-ನೀಲಗ್ರೀವ