Sunday, August 06, 2006

ವಿರಾಟಪರ್ವ, ನಳೋಪಾಖ್ಯಾನ ಮತ್ತು ಸೂಪರ್ ಮ್ಯಾನ್

ವಿರಾಟ ಪರ್ವ, ನಳನ ಕಥೆ ಮತ್ತು ಸೂಪರ್ ಮ್ಯಾನ್ - ಈ ಮೂರೂ ಕಥೆಗಳು ನನಗೆ ಪ್ರಿಯವಾದವು. ನನಗಷ್ಟೇ ಅಲ್ಲದೆ ಬಹಳಷ್ಟು ಜನರಿಗೆ ಪ್ರಿಯವಾದವು. ಈ ಮೂರು ಭಾಗಗಳಲ್ಲೂ ಮೂಲಭೂತ ರೀತಿಯಲ್ಲಿ ಒಂದು ಸಮಾನವಾದ ಅಂಶ ನನಗೆ ಕಾಣಿಸಿತು. ವಸ್ತುತಃ ಅದೇ ನನ್ನ ಈ ಭಾಗಗಳ ಬಗೆಗಿನ ಪ್ರೀತಿಗೆ ಕಾರಣ ಎಂದೂ ಅನ್ನಿಸಿತು. ಏನೀ ಕಾರಣವೆಂಬುದನ್ನೇ ಇಲ್ಲಿ ವಿಶದಗೊಳಿಸಲು ಯತ್ನಿಸಿದ್ದೇನೆ.

ವಿರಾಟಪರ್ವಕ್ಕೂ ನಲೋಪಾಖ್ಯಾನಕ್ಕೂ ಥಟ್ಟನೆ ಹೊಳೆಯುವ ಒಂದು ಸಂಬಂಧವುಂಟು. ಇವೆರಡೂ ಭಾಗಗಳು ಭಾರತೀಯರ ಕಾವ್ಯಕಥಾಸ್ರೋತಸ್ಸಿಗೆ ಮೂಲವಾದ ಇತಿಹಾಸಪುರಾಣವೆಂಬ ಪರ್ವತದ ಶಿಖರಪ್ರಾಯವಾಗಿರುವ ಮಹಾಭಾರತದವು. ಮಹಾಭಾರತವೆಂದರೆ "ಪಂಚಮೋ ವೇದಃ" ಎಂದು ಖ್ಯಾತವಾದುದು. ಮಹಾಭಾರತದ ಗುಣಗಾನ ಎಷ್ಟು ಮಾಡಿದರೂ ಸಾಲದಾದರೂ, ಇಲ್ಲಿನ ಉದ್ದೇಶ ಅದಲ್ಲವಾಗಿದ್ದರೂ, ಅದರ ಬಗ್ಗೆ ಒಂದು ಒಳ್ಳೆಯ ಮಾತು ಹೇಳದೇ ಇರಲು ಸಾಧ್ಯವಾಗದೆ ಪಂಚಮೋ ವೇದಃ ಎಂದು ಹೇಳಿದೆ ಅಷ್ಟೆ.

ಪುಸ್ತಕದ ಕಪಾಟಿನಲ್ಲಿ ಕೈಯಾಡಿಸುತ್ತಿದ್ದಾಗ ಶ್ರೀ ಏ. ಆರ್. ಕೃಷ್ಣಶಾಸ್ತ್ರಿಗಳ ವಚನಭಾರತ ಸಿಕ್ಕಿತು. ಸೊಗಸಾದ ಗ್ರಂಥ. ಪುಟ ತಿರುವಿದಾಗ ವಿರಾಟಪರ್ವದ ಉತ್ತರಗೋಗ್ರಹಣ ಪ್ರಸಂಗ ಸಿಕ್ಕಿತು. ಅದನ್ನು ಓದಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಪಾಂಡವರ ಹದಿಮೂರು ವರ್ಷಗಳ ಅರಣ್ಯ ಮತ್ತು ಅಜ್ಞಾತವಾಸದ ನಂತರ ಅವರಿಗಾದ ಬಿಡುಗಡೆಯ ಆನಂದ ನಮ್ಮನ್ನು ತಟ್ಟದೇ ಇರುವುದಿಲ್ಲ. ಇಲ್ಲಿ ವಿಶೇಷತಃ ನನಗೆ ಹಿಡಿಸಿದ್ದು ಅರ್ಜುನನ ಶೌರ್ಯದ ವರ್ಣನೆ. ಅರ್ಜುನನು ಬೃಹನ್ನಳೆಯಾಗಿ ನಾಟ್ಯಾಚಾರ್ಯನಾಗಿದ್ದರೂ ವಿರಾಟಪುತ್ರನಾದ ಉತ್ತರಕುಮಾರನ ಸಾರಥ್ಯ ಅವನಿಗೆ ಒದಗಿ ಬರುತ್ತದೆ. ಅಲ್ಲಿ ರಣಹೇಡಿಯಾಗಿ ಓಡುವ ಉತ್ತರನನ್ನು ಯುದ್ಧಕ್ಕಾಗಿ ಹುರಿದುಂಬಿಸಲು ಮಾಡುವ ವ್ಯರ್ಥಪ್ರಯತ್ನ ವಿನೋದಮಯವಾಗಿದೆ. ಇದಾದ ನಂತರ ಸ್ವತಃ ಅರ್ಜುನನೇ ರಥಿಯಾಗಿ ಭೀಷ್ಮದ್ರೋಣಾದಿಗಳ ಎದುರು ಒಬ್ಬನೇ ನಿಲ್ಲುತ್ತಾನೆ. ಹದಿಮೂರು ವರ್ಷಗಳ ಅವಮಾನ, ದುಃಖ, ಕಷ್ಟಗಳು ಒಮ್ಮೆಯೇ ನೆನಪಿಗೆ ಬಂದು, ಅದಕ್ಕೆ ಕಾರಣಭೂತರಾದವರು ಎದುರಿಗೇ ಇದ್ದಾಗ ಅಸಹಾಯಶೂರನಾದ ಅರ್ಜುನನ ಸಾಮರ್ಥ್ಯ ವಿಜೃಂಭಿಸುತ್ತದೆ. ಎಲ್ಲರನ್ನೂ ಲೀಲಾಜಾಲವಾಗಿ ಧೂಳೀಪಟಮಾಡಿಬಿಡುತ್ತಾನೆ. ಕರ್ಣನ ಮಾತುಗಳು ಕೇವಲ ವ್ಯರ್ಥಪ್ರಲಾಪಗಳಾಗಿಯೇ ಉಳಿಯುವ ಹಾಗೆ ಮಾಡುತ್ತಾನೆ. ಅರ್ಜುನನ ಶೌರ್ಯಸಾಮರ್ಥ್ಯಗಳನ್ನು ವೈರಿಗಳ ಮೂಲಕ ಹೇಳಿಸಿರುವುದು ಬಹಳ ಚೆನ್ನಾಗಿ ಮೂಡಿಬರುತ್ತದೆ. ಭೀಷ್ಮ - "ಗಾಳಿಯು ಬೀಸುತ್ತಿದೆ. ಕುದುರೆಗಳು ಕಣ್ಣೀರಿಡುತ್ತಿವೆ. ಉತ್ಪಾತಗಳು ಕಾಣಿಸುತ್ತಿವೆ. ಇಂದು ಅವಶ್ಯವಾಗಿ ಹೆಚ್ಚಿನ ಹಿಂಸೆ ನಡೆಯುವ ಹಾಗಿದೆ. ಬಂದಿರುವವನು ಅರ್ಜುನನೇ ಇರಬೇಕು" ಎಂಬ ಮೊದಲಾದ ಮಾತುಗಳಲ್ಲಿ ವೀರರಸ ತುಂಬಿ ತುಳುಕುತ್ತದೆ. ಅಶ್ವತ್ಥಾಮನೂ ಕೃಪಾಚಾರ್ಯನೂ ದ್ರೋಣನೂ ಅರ್ಜುನನನ್ನು ಹೊಗಳುವವರೇ. ಇಲ್ಲಿನ ಯುದ್ಧವನ್ನು ಕುರುಕ್ಷೇತ್ರ ಯುದ್ಧಕ್ಕಿಂತಲೂ ಬಹಳ ಸುಲಭವಾಗಿ ಅರ್ಜುನ ನಿರ್ವಹಿಸುತ್ತಾನೆ.

ನಂತರ ಇದೇ ಭಾಗವನ್ನು ಕುಮಾರವ್ಯಾಸಭಾರತದಲ್ಲಿ ಓದಲು ನೋಡಿದೆ. ಉತ್ತರಗೋಗ್ರಹಣದ ಒಂದು ಸಂಧಿಯನ್ನು ಓದಿದಾಗ ಅಲ್ಲಿ ಕುಮಾರವ್ಯಾಸನ ವರ್ಣನೆ ಅದ್ಭುತವಾಗಿ ಕಂಡಿತು. ಅಬ್ಬ! ಕುವೆಂಪುರವರು ಹೇಳಿದ "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು" ಎಂಬ ಮಾತು ಎಷ್ಟು ಸತ್ಯವೆಂದು ಮತ್ತೊಮ್ಮೆ ಮನಗಂಡೆ.

ಕೌರವರ ಪರಾಜಯದ ಬಳಿಕ ಪಾಂಡವರ ನಿಜಸ್ವರೂಪದ ಜ್ಞಾನ ವಿರಾಟಾದಿಗಳಿಗಾಗುತ್ತದೆ. ಇದಾದಾಗ ಮನಸ್ಸಿಗೆ ಏನೋ ಒಂದು ಸಂತಸ; ಜೊತೆಗೆ ನೆಮ್ಮದಿ ಕೂಡ.

ಅಂತೂ ನನಗೆ ಭಾರತದಲ್ಲಿ ಪ್ರಿಯವಾದ ಭಾಗ ವಿರಾಟಪರ್ವ. ಸರಿ, ಮನಯಲ್ಲಿ ನಮ್ಮ ತಂದೆಯವರನ್ನೂ ತಾಯಿಯವರನ್ನೂ ಭಾರತದಲ್ಲಿನ ನಿಮ್ಮ ಪ್ರಿಯವಾದ ಭಾಗ ಯಾವುದೆಂದು ಕೇಳಿದೆ. ಅವರೂ ವಿರಾಟಪರ್ವವೆನ್ನುವುದೇ? ಆಗ ನನ್ನ ಕುತೂಹಲ ಇನ್ನೂ ಕೆರಳಿತು. ಇದು ಹೀಗೆ ಏಕಿರಬಹುದೆಂದು.

ನಲನ ಕಥೆಯೂ ಹಾಗೆ. ಬಹಳ ಇಷ್ಟ ನನಗೆ. ವಿಶೇಷತಃ ದಮಯಂತಿ ಮಾಡುವ ಉಪಾಯದಿಂದ ಬಾಹುಕ ರೂಪದಲ್ಲಿರುವ ನಳನನ್ನು ಕುಂಡಿನಾಪುರಕ್ಕೆ ಮೋಸದ ಸ್ವಯಂವರಕ್ಕೆ ಕರೆಯುವ ಭಾಗ ಚೆನ್ನಾಗಿದೆ. ಬಾಹುಕನು ತನ್ನ ದೊರೆಯಾದ ಋತುಪರ್ಣನಿಗೆ ಬೋಧಿಸುವ ಅಕ್ಷವಿದ್ಯೆ, ಅಶ್ವವಿದ್ಯೆ - ಇವೆಲ್ಲವೂ ಕುತೂಹಲಕಾರಿಯಾಗಿದೆ. ತನ್ನ ಪತ್ನಿಯಾದ ದಮಯಂತಿಯನ್ನು ತನ್ನ ಮುದ್ದಿನ ಮಕ್ಕಳನ್ನೂ ಕಂಡಿಯೂ ಸಹ ಏನು ಮಾಡಲಾರದ ನಳನ ಸ್ಥಿತಿ ಕರುಣಾಜನಕವಾಗಿದೆ. ಒಟ್ಟಿನಲ್ಲಿ ಕಥೆಯು ಸುಖಾಂತ್ಯಗೊಳ್ಳುತ್ತದೆ.

ಸೂಪರ್ ಮ್ಯಾನ್ ೧೯೩೦ರ ಆಸುಪಾಸಿನಲ್ಲಿ ಸೃಷ್ಟಿಸಲ್ಪಟ್ಟ ಕಾಮಿಕ್ ಕಥಾಸರಣಿಯ ನಾಯಕ. ಅಮೇರಿಕದಲ್ಲೇ ಅಲ್ಲದೆ ಪ್ರಪಂಚದಾದ್ಯಂತ ಬಹಳಷ್ಟು ದೇಶಗಳಲ್ಲಿ ಇವನ ಅಭಿಮಾನಿಗಳಿದ್ದಾರೆ. ಚಿಕ್ಕಂದಿನಲ್ಲಿ ನಾನು ಕೂಡ! ಈಗಲೂ ಸೂಪರ್-ಮ್ಯಾನ್ ಎಂದರೆ ನನಗೆ ಬಹಳ ಇಷ್ಟ.

ಇವು ಮೂರರಲ್ಲೂ ಕಾಣುವ ಸಮಾನ ಅಂಶವೊಂದು ನನಗೆ ಹೊಳೆಯಿತು. ಇದೇ ಇವುಗಳ ಯಶಸ್ಸಿಗೂ ಜನಪ್ರಿಯತಗೂ ಕಾರಣವೇ? ನನಗೆ ಹೌದು ಎಂದೆನಿಸುತ್ತದೆ. ನಿಮಗೇನೋ ಹೇಳಿ ತಿಳಿಸಿರಿ.

ಸಮಾನ ಅಂಶವೆಂದರೆ - ಇವುಗಳಲ್ಲಿನ ನಾಯಕಪಾತ್ರವು ಸಶಕ್ತವಾಗಿದ್ದರೂ ಕಾರಣಾಂತರಗಳಿಂದ ಬದ್ಧವಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ. ವಿರಾಟನ ಅರಮನೆಯಲ್ಲಿ ರಾಜ್ಯಾಧಿಪತಿಗಳಾಗಿದ್ದ ಪಾಂಡವರು ಸಾಮಾನ್ಯ ಕೆಲಸದವರಾಗಿ ಸೇರಿರುತ್ತಾರೆ. ಚಕ್ರವರ್ತಿಯಾಗಿದ್ದ ನಲನು ಋತುಪರ್ಣನ ಆಸ್ಥಾನದಲ್ಲಿ ಸಾರಥಿಯ ಕೆಲಸ ಮಾಡುತ್ತಾನೆ. ಸೂಪರ್ ಮ್ಯಾನ್ ಕ್ರಿಪ್ಟಾನ್ ಎಂಬ ಗ್ರಹದಿಂದ ಭೂಮಿಗೆ ಬಂದು, ಇಲ್ಲಿನ ವಾತಾವರಣದಲ್ಲಿ ಅತಿಬಲನಾಗಿದ್ದರೂ ಕ್ಲಾರ್ಕ್ ಕೆಂಟ್ ಎಂಬ ಮಾರುವೇಷದಲ್ಲಿ ಸಾಮಾನ್ಯರ ಹಾಗೆ ವರ್ತಿಸಬೇಕಾಗಿ ಬರುತ್ತದೆ.

ಇಂಥ ಪರಿಸ್ಥಿತಿಯ ವೈಪರೀತ್ಯಗಳು ಓದುಗರಲ್ಲಿ ಒಂದು ತಾದಾತ್ಮ್ಯವನ್ನು ಒದಗಿಸಲು ಸಹಾಯಮಾಡುತ್ತದೆ. ಇಂಥ ಸರ್ವಶಕ್ತರೂ ಸಾಮಾನ್ಯರ ಹಾಗಿರುವರಲ್ಲಾ ಎಂಬ ಆಶ್ಚರ್ಯ. ಓದುಗ ತಾನು ಸಾಮಾನ್ಯನಾಗಿದ್ದರೂ ತನ್ನಲ್ಲಿ ಅಲೌಕಿಕ ಶಕ್ತಿಯಿರಬಹುದೆಂಬ ಭಾವನೆಗೂ ಕಾರಣವಾಗುತ್ತದೆ. ಓದುಗ ತಾನೂ ಒಂದು ಬೂದಿ ಮುಚ್ಚಿದ ಕೆಂಡದ ಹಾಗೆಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಒಂದು ಕಥಾಭಾಗ ರುಚಿಸಬೇಕೆಂದರೆ ಅಲ್ಲಿನ ಪಾತ್ರಗಳಲ್ಲಿ ಓದುಗನು ಸಹಮತಿಯನ್ನುಳ್ಳವನಾಗಿರಬೇಕು, ತನ್ನನ್ನು ತಾನೇ ಅವುಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ತಾನೇ ಆ ಪಾತ್ರವಾಗದಿದ್ದರೆ ಆ ಪಾತ್ರಕ್ಕೆ ಸಹಾನುಭೂತಿಯನ್ನು ತೋರಿಸುವ ಇನ್ನೊಂದು ಪಾತ್ರವಾಗಿದ್ದರೂ ಪರವಾಗಿಲ್ಲ. ಖಲನ ಪಾತ್ರಗಳಲ್ಲಿ ಸಾಮಾನ್ಯ ಓದುಗರು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಕಷ್ಟ. ಉತ್ತಮ ಪಾತ್ರಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾದರೆ ಕಥೆಯೂ ಹೆಚ್ಚು ಜನಪ್ರಿಯವಾಗುತ್ತದೆ. ಪಾತ್ರಗಳು ಉತ್ತಮವಾಗಿದ್ದರೂ, ಸಶಕ್ತವಾಗಿದ್ದರೂ ಸಂದರ್ಭವಶಾತ್ ಆಕಾಶದಲ್ಲಿ ಹಾರಾಡದೆ ತಮ್ಮಂತೆಯೇ ಭೂಮಿಯ ಮೇಲೆ ಇದ್ದರೆ ಅಥವಾ ಇರಲೇ ಬೇಕಾಗಿದ್ದರೆ? ಸ್ವಲ್ಪ ಹೆಚ್ಚಿನ ತಾದಾತ್ಮ್ಯ ದೊರೆಯಲು ಇದು ಪ್ರಾಯಃ ಸಹಾಯ ಮಾಡಬಹುದು, ಅಲ್ಲವೇ?

ಬೇರೆ ಕಥೆಗಳಲ್ಲೂ ಹಾಗೆಯೇ. ರಾಜನೊಬ್ಬ ಮಾರುವೇಷದಲ್ಲಿ ಸಂಚರಿಸುವ ಕಥೆಗಳು ಮನಸ್ಸಿಗೆ ರುಚಿಸುತ್ತವೆ. ಬಾಷಾ ಎಂಬ ತಮಿಳು ಚಿತ್ರದಲ್ಲಿ ರಜನಿಕಾಂತ್ ಗೆ ಇಂಥದೇ ಪಾತ್ರ. ಆಮೇರಿಕದಲ್ಲಂತೂ ಪ್ರತಿಯೊಬ್ಬ "ಸೂಪರ್ ಹೀರೋ"ವಿಗೂ ಒಂದು ಸಾಮಾನ್ಯ ನಾಗರಿಕನ ಪಾತ್ರವಿರುತ್ತದೆ. ಹೀಗೆಯೇ ಬಹಳಷ್ಟು ಕಥೆ ಚಲನಚಿತ್ರಗಳಿವೆ. ಇವುಗಳ ವಿಶೇಷ ಜನಪ್ರಿಯತೆಗೆ ನಾನು ಹೇಳಿದ ಸಂಗತಿಯೂ ಕಾರಣವಿರಬಹುದೇ?

ಆದರೆ ಇದನ್ನು ಚೆನ್ನಾಗಿ ಉಪಯೋಗಿಸುವುದು ಕಥೆಗಾರನ ಪ್ರತಿಭೆಗೆ ಬಿಟ್ಟಿದ್ದು. ಕಥೆಗಾರನ ಪ್ರತಿಭೆ ಹೆಚ್ಚಿಲ್ಲದಿದ್ದರೆ ಆ ಸಂಗತಿಗಳಲ್ಲಿನ ರಸವನ್ನು ಚೆನ್ನಾಗಿ ಮೂಡಿಸಲು ಸಾಧ್ಯವಾಗುವುದಿಲ್ಲ.

ನಾನು ಹೇಳಿದ್ದರ ಬಗ್ಗೆ ಇದನ್ನು ಓದಿದವರು ಸ್ವಲ್ಪ ಯೋಚಿಸಿ ನೋಡಿದರೆ ಚೆನ್ನಾಗಿರುತ್ತದೆ. ಅಥವಾ ನನಗೆ ಕಾಣದ ಇನ್ನೊಂದು ಪ್ರಬಲವಾದ ಕಾರಣವಿದ್ದರೆ ಅದನ್ನು ತಿಳಿಯಲು ಇಚ್ಛಿಸುತ್ತೇನೆ. ಪ್ರತಿಕ್ರಯಿಸಿದರೆ ಬಹಳ ಸಂತೋಷ.

|| ಇತಿ ಶಮ್ ||

5 comments:

Anonymous said...

ನೀಲಗ್ರೀವರೆ,

ನಿಮ್ಮ ಕಥನವನ್ನು ಓದುವಾಗ, ನನಗೆ ನೀವು ಈ ಮೂರೂ ಆಖ್ಯಾನಗಳಲ್ಲಿ ಯಾವ ಸ್ವಾಮ್ಯವನ್ನು ಕಂಡುಹಿಡಿದಿದ್ದೀರಿ ಎಂಬುದನ್ನು ಕುತೂಹಲವಿತ್ತು. ನಿಮ್ಮ ಬರವಣಿಗೆಯ ಶೈಲಿಯೂ ಕೂಡ, ಎಲ್ಲವನ್ನು ಮೊದಲೆ ಹೇಳದೆ ಓದುಗರಲ್ಲಿ ಕುತೂಹಲವನ್ನು ಮೂಡಿಸುವ ಹಾಗಿರುವದರಿಂದ ಇದರಲ್ಲಿ ಆಶ್ಚರ್ಯವಿಲ್ಲ! ಚೆನ್ನಾಗಿದೆ, ನಿಮ್ಮೀ ಬರಹ.

ಸಂಪೂರ್ಣ ಮಹಾಭಾರತವನ್ನು ನೋಡಿದಾಗ, ನಮಗೆ ಅದರ ಇನ್ನೊಂದು ಮುಖದ ಪರಿಚಯವೂ ಆಗುತ್ತದೆ. ಅದೇನಂದರೆ, ವಿರಾಟ ಪರ್ವದಲ್ಲಿ, ನೀವು ಎತ್ತಿ ತೋರಿಸಿದಂತೆ, ಮಹಾನ್ ಬಲಶಾಲಿಯಾದ ಪಾಂಡವರಿಗೆ ಪರಿಸ್ತಿತಿಯ ಕಾರಣದಿಂದ ತಮ್ಮ ಶಕ್ತಿಯನ್ನು ಉಳಿದವರೆದುರಿಗೆ ತೋರ್ಪಡಿಸಿಕೊಳ್ಳಲಾಗಲಿಲ್ಲ, ಅದೇ ನೀವು ಮತ್ತೂ ಮುಂದುವರಿದರೆ, ಯುದ್ಧಾನಂತರ ಇದೇ ಪಾಂಡವರು ಪರಿಸ್ತಿತಿಯ ಎದುರು ತಮ್ಮ ಶಕ್ತಿಯನ್ನು ತೋರುವ ಅವಕಾಶವಿದ್ದರೂ, ಹತಾಶವಾಗುವ ಸನ್ನಿವೇಶಗಳಿವೆ! .. ಕಳ್ಳಕಾಕರಿಂದ ದ್ವಾರಕೆಯ ಸ್ತ್ರೀಯರನ್ನು ರಕ್ಷಿಸುವುದರಲ್ಲಿ ಅರ್ಜುನನು ಅಸಫಲನಾಗುವುದು, ಧೃತರಾಷ್ಟ್ರ, ಗಾಂಧಾರಿ, ಮತ್ತು ಕುಂತಿಯರು ಕಾಡ್ಗಿಚ್ಚಿನಲ್ಲಿ ಅವಸಾನವಾಗುವುದು, ಇತ್ಯಾದಿ. ಶಾಂತಿ ಪರ್ವದ ನಂತರದ ಕಥನವನ್ನು ನಾನು ಓದಿದ್ದು ಏ. ಆರ್. ಕೃಷ್ಣಶಾಸ್ತ್ರಿಯವರ ವಚನ ಭಾರತದಲ್ಲೇ. ಸಾಮಾನ್ಯವಾಗಿ ನಾವೆಲ್ಲ ಮಹಾಭಾರತವನ್ನು ಕೇವಲ ಯುದ್ಧದವರೆಗೆ, ಪಾಂಡವರ ಜಯದವರೆಗೆ ಓದುತ್ತೇವೆ, ಆದರೆ ಯುದ್ಧದ ನಂತರದ ಘಟನೆಗಳೂ ಕುತೂಹಲಭರಿತವಾಗಿವೆ. ಎಲ್ಲಾ ಮುಗಿದು ಧರ್ಮಜ ಸ್ವರ್ಗವನ್ನು ಸೇರಿದಾಗ, ಮೊದಲು ನೋಡುವುದು ಯಾರನ್ನು? ತನ್ನ ತಮ್ಮಂದಿರನ್ನೇ, ಪತ್ನಿಯನ್ನೇ, ಬಳಗದವರನ್ನೇ? ವಿಪರ್ಯಾಸವೆಂದರೆ, ಆತನಿಗೆ ಅಲ್ಲಿ ಕಾಣುವುದು ಅವನ ಮೇಲಿ ದೌರ್ಜನ್ಯವೆಸೆಗಿದ ದುರ್ಯೋಧನನ ರೂಪ!

ಪ್ರದೀಪ

nIlagrIva said...

ಪ್ರದೀಪರೇ,
ನಿಮಗೆ ಈ ಲೇಖನ ಹಿಡಿಸಿದ್ದು ಸಂತೋಷ. ಅದನ್ನು ಓದಿದಕ್ಕಾಗಿ ಮತ್ತು ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದಗಳು.

ನೀವು "ಪಾಂಡವರ ಜಯದ ವರೆಗೆ ಮಾತ್ರ ಸಾಮಾನ್ಯವಾಗಿ ಓದುವುದು" ಆಂದಿರಲ್ಲ, ಅದಕ್ಕೆ ಕಾರಣವನ್ನು ಊಹಿಸಲು ಯತ್ನಿಸಿದ್ದೇನೆ.

ಶಾಂತಿ ಮತ್ತು ಸ್ವರ್ಗಾರೋಹಣಗಳನ್ನೂ ನಾನು ವಚನಭಾರತದಲ್ಲಿ ನೋಡಿದ್ದೇನೆ. ಅಲ್ಲಿ ಅರ್ಜುನನು ಅಸಹಾಯಶೂರನಿಂದ ಅಸಹಾಯಕನಾಗುತ್ತಾನೆ. ಕೃಷ್ಣನ ಅಂತಃಪುರದ ಸ್ತ್ರೀಯರನ್ನೂ ರಕ್ಷಿಸಲು ಸಾಧ್ಯಾವಾಗದೇ ಹೋಗುತ್ತಾನೆ. ಆದರೆ ಈ ಅಂಶಗಳು ನನಗೆ ವೈಯಕ್ತಿಕವಾಗಿ ಕಾವ್ಯಾಸ್ವಾದನೆಗಿಂತ ವೇದಾಂತಚಿಂತನೆಗೆ ಎಡೆ ಮಾಡಿಕೊಡುತ್ತವೆ. ಇದೇ ಕಾರಣದಿಂದ ರಾಮ ಹಾಗು ಕೃಷ್ಣರ ನಿರ್ಯಾಣಪ್ರಸಂಗಗಳನ್ನು ಕಿರಿಯರಿಂದ ಓದಿಸುವುದಿಲ್ಲ. ಪಾಂಡವರ ಸ್ವರ್ಗಾರೋಹಣವೂ ಹಾಗೆಯೇ. ಅಪಕ್ವವೈರಾಗ್ಯ ಬರಬಹುದೆಂಬ ಕಾರಣದಿಂದ ಇವನ್ನು ಸಾಮಾನ್ಯವಾಗಿ ಓದುವುದಿಲ್ಲ ಎನ್ನಿಸುತ್ತದೆ.

ಆದರೆ ಭಾರತ ಪುರುಷಾರ್ಥಚತುಷ್ಟಯವನ್ನೂ ಚೆನ್ನಾಗಿ ಹೇಳಿದ ಸರ್ವಾದರಣೀಯವಾದ ಗ್ರಂಥ. ಆದ್ದರಿಂದ ಪ್ರವೃತ್ತಿಯ ಜೊತೆಗೆ ನಿವೃತ್ತಿಯನ್ನೂ ಹೇಳಿದೆ.

ನಿಮ್ಮ ವಿಪರ್ಯಾಸದ ಗ್ರಹಿಕೆ ಸರಿಯಾಗಿದೆ. ಭಾರತದ ಕೊನೆಯನ್ನು ಓದಿದ ಮೇಲೆ ಭಾರತದ ಪುನರಾಲೋಕನ ಮಾಡಿದಾಗ ಇವೆಲ್ಲ ಮಾಡಿದ್ದು ಇದಕ್ಕಾಗಿಯೇ ಎಂಬ ಶೂನ್ಯದ ಭಾವನೆ ಓದುಗರನ್ನು ಆವರಿಸದೇ ಇರುವುದಿಲ್ಲ.

ಧನ್ಯವಾದಗಳೊಂದಿಗೆ,
-ನೀಲಗ್ರೀವ

bellur ramakrishna said...

Namaskara
I am Ramakrishna. Came here Via Churumuri. Very well written article. The 3 similarities have been brought out really beautifully.
Also, I read the article on Sudharma. I remember my ajji was subscribing to the paper.
This is a great blog.
Blogrolling you. Hope you are ok with it.
Cheers and keep blogging

bellur ramakrishna said...

nilagrivarige mattomme namonnamaha.

nimma blogigu nanna blogigu ajagajanthara vyathyasa. andare, nimmashtu prabhuddhavagi nanu bareyalla.....aadrujust wanted to tell you that the common thing between your blog and my blog is ibru RAMBLING maadkondidhivi.

nIlagrIva said...

namaskAra Ramakrishna avare,

Thanks for the kind words about my blog. And thank you for blogrolling me. Which reminds me - I need to start a blogroll of my own.

nAnu manassige tOchiddannu bareyuvudu. nimage prabuddhavAgi kANisiddare adu nimma abhimAna. nimma blAgigU omme bandidde - chennAgi bareyuttIri.

Rambling mADuvudu nanna haNeya baraha.

It's good to know that there are other people who take pleasure in rambling!

As I am writing this, I just began reading your piece on Mukta Seetaram - very nice! I'll probably comment on that on your blog.

You keep blogging too!