ಗಣೇಶನ ಹಬ್ಬ ಕಳೆದು ಇನ್ನೇನು ಪಕ್ಷವಾಗುತ್ತಾ ಬಂದಿತು. ಅವನ ಬಗ್ಗೆ ಈಗ ಬರೆಯಲು ಬಯಕೆ ಬಂದಿದೆ. ಆದರೆ ಗಣೇಶನ ಪೂಜೆ ಗಣೇಶನ ಹಬ್ಬದ ದಿನ ಮಾತ್ರ ಮಾಡುವುದಿಲ್ಲವಲ್ಲ? ನಾವು ನೋಡುವ ಹಾಗೆ ನಿತ್ಯವೂ ಗಣೇಶನ ದೇವಸ್ಥಾನಗಳಲ್ಲಿರುವ ಜನಜಂಗುಳಿ ಬೇರಾವ ದೇವಳಗಳಲ್ಲಿಯೂ ಇರುವುದಿಲ್ಲ. ಇಷ್ಟು ಜನಪ್ರಿಯನಾಗಿರುವ ಗಣೇಶನ ನೆನೆಸಿಕೊಳ್ಳಲೋಸುಗ ಇದನ್ನು ಬರೆಯಲು ಮೊದಲುಗೊಂಡಿರುವುದು. ಋಷಿಮೂಲ-ನದೀಮೂಲಗಳನ್ನು ಕೇಳಬಾರದೆನ್ನುತ್ತಾರೆ ಹಿರಿಯರು. ಈ ಪಟ್ಟಿಗೆ ದೇವರುಗಳನ್ನೂ ಧಾರಾಳವಾಗಿ ಸೇರಿಸಬಹುದು. ಆದರೂ ನನ್ನ ಗಣೇಶಾನ್ವೇಷಣೆ ಆ ರೀತಿಯದಲ್ಲ. ಪ್ರೀತಿಯಿಂದ ನನ್ನ ಮಿತ್ರನೊಬ್ಬನನ್ನು ಕುರಿತು ತಿಳಿಯುವ ಹಾಗಿರುವ ಹುಡುಕಾಟ.
ಹಿಂದಿನ ಕಾಲದಿಂದ ಗಣೇಶ ಕೃಷಿಕರ ದೇವತೆ ಎಂದು ಪ್ರಸಿದ್ಧಿ ಹೊಂದಿದವನು. ಆನೆಗಳು ಬಂದು ಬೆಳೆಯನ್ನು ಧ್ವಂಸ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾಲವದು ಎಂದು ತೋರುತ್ತದೆ. ನಮ್ಮ ದೇಶ ತಲತಲಾಂತರಗಳಿಂದ ಕೃಷಿ ಪ್ರಧಾನವಾದ ದೇಶ. ಹಾಗೆ ನೋಡಿದರೆ ವೈದಿಕ ದೇವತೆಗಳಾದ ಇಂದ್ರ, ವರುಣ, ಸೂರ್ಯ ಮೊದಲಾದ ದೇವತೆಗಳೆಲ್ಲರೂ ಕೃಷಿಗೆ ತಮ್ಮಿಂದಾಗುವ ಪ್ರಯೋಜನದಿಂದಲೇ ಪೂಜನೀಯರೂ ಆದರು. ಗಣೇಶನ ಬಗ್ಗೆಯೂ ಹಾಗೆಯೇ ಆಗಿರಬೇಕು. ತೊಂದರೆಗಳನ್ನು ನಿವಾರಿಸಲು ಆನೆಯಲ್ಲೇ ವಿಘ್ನೇಶ್ವರನು ಕಂಡಿರಬೇಕು.
ತ್ರಯೀವೇದದಲ್ಲಿ (ಅಂದರೆ ಋಗ್ಯಜುಸ್ಸಾಮಗಳಲ್ಲಿ) ನಾವೀಗ ಕಾಣುವ ಚತುರ್ಭುಜನಾದ ಮೋದಕಪ್ರಿಯನಾದ ಶಿವ-ಗಿರಿಜೆಯರ ಪುತ್ರನಾದ ಗಣೇಶನು ಇಲ್ಲವೆಂದು ನನ್ನ ಭಾವನೆ (ಇದು ತಪ್ಪಾದರೆ ತಿದ್ದಿಕೊಳ್ಳಲು ಬಯಸುತ್ತೇನೆ). ಅರ್ವಾಚೀನವಾದ ಅಥರ್ವವೇದದಲ್ಲಿ ಗಣೇಶಾಥರ್ವಶೀರ್ಷೋಪನಿಷತ್ತು ಮುಂತಾದ ಭಾಗಗಳನ್ನು ಕಾಣಬಹುದು. "ಗಣಾನಾಂತ್ವಾ" ಅಥವಾ "ನಿಷುಸೀದ" ಎಂದು ಬರುವ ತ್ರಯೀವೇದದ ಮಂತ್ರಗಳು ಬಹುಶಃ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿಯನ್ನುದ್ದೇಶಿಸಿದ್ದಾಗಿವೆ.
ಆದರೆ ವೇದದಲ್ಲಿರುವುದಕ್ಕೂ ಜನಪ್ರಿಯತೆಗೂ ಸಂಬಂಧವಿಲ್ಲವಷ್ಟೆ? ಪೌರಾಣಿಕ ದೇವತೆಗಳ ಕಲ್ಪನೆಗೂ ವೈದಿಕ ದೇವತೆಗಳ ಕಲ್ಪನೆಗೂ ಅಜಗಜಾಂತರದ ವ್ಯತ್ಯಾಸ. ಈಗ ಹೆಚ್ಚು ಪೂಜಿಸಲ್ಪಡುವ ದೇವತೆಗಳೆಂದರೆ ಶಿವ-ವಿಷ್ಣು-ಶಕ್ತಿ-ಗಣೇಶ-ಸುಬ್ರಹ್ಮಣ್ಯ ಮೊದಲಾದ ಪೌರಾಣಿಕ ದೇವತೆಗಳೇ! ಈಗ ಒಂದು ಪ್ರಶ್ನೆ ಏಳಬಹುದು. "ವೇದಗಳೇ ಪರಮಗ್ರಂಥಗಳಾದ ಹಿಂದುಗಳಿಗೆ ಪೌರಾಣಿಕದೇವತೆಗಳ ಪೂಜೆ ಸರಿಯಲ್ಲವಲ್ಲ?" ಎಂದು. ಆದರೆ ಈ ದೇವತೆಗಳ ಸ್ವರೂಪಗಳು ದೇವರಲ್ಲ ಎಂದು ಎಲ್ಲಿಯೂ ಹೇಳಿಲ್ಲವಲ್ಲ? "ಏಕಂ ಸದ್ವಿಪ್ರಾ ಬಹುಧಾ ವದಂತಿ, ಅಗ್ನಿಂ ಯಮಂ ಮಾತರಿಶ್ವಾನಮಾಹುಃ" ಎಂದು ವೇದವೇ ಹೇಳಿದೆಯಾದ್ದರಿಂದ ಜನಗಳಿಂದ ಪೂಜ್ಯವಾದ ಒಂದು ರೂಪವು ದೇವರೆಂದೆನಿಸಿಕೊಳ್ಳಲು ಕಷ್ಟವೇನಲ್ಲ. ಈಗ ಶಿರಡಿಯ ಸಾಇ (ಸಾಯಿ ಬಾಬಾ ಎಂದು ಕನ್ನಡಿಗರು ಬರೆಯದಿದ್ದರೆ ಒಳ್ಳೆಯದು) ಬಾಬಾರವರ ವೃತ್ತಾಂತವನ್ನೇ ತೆಗೆದುಕೊಳ್ಳೋಣ. ಎಲ್ಲೆಡೆ ದೇವರೆಂದೇ ಪೂಜೆಗೊಳ್ಳುವ ಬಾಬಾರವರು ಇನ್ನೂರು ವರ್ಷಗಳ ಹಿಂದೆ ಭೌತಿಕವಾಗಿ ಇರಲೇ ಇಲ್ಲ! ಈಗ ಅವರನ್ನು ಸಾಕ್ಷಾತ್ ದೇವರು ಎಂದು ಪರಿಗಣಿಸುವಷ್ಟು ನಮ್ಮ ಹಿಂದೂ ಧರ್ಮ ವಿಶಾಲವಾಗಿರುವಾಗ, ಪೌರಾಣಿಕದೇವತೆಗಳನ್ನು ಹೇಗೆ ತಾನೆ ಒಪ್ಪಿಕೊಳ್ಳದೆ ಇದ್ದೀತು? ಗಣೇಶನದು ಇತ್ತೀಚಿನ ಕಥೆಯಾಗದಿದ್ದರೂ ಒಂದಾನೊಂದು ಕಾಲದಲ್ಲಿ ಈ ರೀತಿ ಪೂಜೆಗೊಳ್ಳುತ್ತಿರಲಿಲ್ಲ ಎಂದು ಹೇಳಬಹುದು ಅಲ್ಲವೇ? ಗಣೇಶನು ಅನಾದಿಯಾದರೂ ಅವನ ಪೂಜೆಗೆ ಆರಂಭ ಇರಬೇಕಲ್ಲ?
ಸಾಯಣಾಚಾರ್ಯರು ತಮ್ಮ ವೇದಭಾಷ್ಯದ ಆರಂಭದಲ್ಲಿ -
"ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ |
ಯಂ ನತ್ವಾ ಕೃತಕೃತ್ಯಾಃ ಸ್ಯುಸ್ತಂ ನಮಾಮಿ ಗಜಾನನಮ್ ||"
ಎಂದು ಗಣೇಶನನ್ನು ಸ್ತುತಿಸಿದ್ದಾರೆ. ಸಾಯಣರು ವಿದ್ಯಾರಣ್ಯರೆಂದು ಖ್ಯಾತರಾದ ಮಾಧಾವಾಚಾರ್ಯರ ಅಣ್ಣಂದಿರು. ಇವರು ಹದಿನಾರನೆಯ ಶತಮಾನದಲ್ಲಿದ್ದದ್ದು. ಅವರ ಸ್ತುತಿಯಿಂದ ತಿಳಿಯುವುದು ಗಣೇಶನ ಆಗಲೇ ಇದ್ದ ಜನಪ್ರಿಯತೆ ಮತ್ತು ಅವನೆಡೆ ಇದ್ದ ಭಕ್ತಿ.
ಅಷ್ಟೇ ಏಕೆ? ವೇದ ವ್ಯಾಸರ ಮಹಾಭಾರತಕ್ಕೆ ಲೇಖಕನಾಗಿದ್ದವನು ಗಣೇಶ. ಮಹಾಭಾರತದ ಲೇಖಕ ಗಣೇಶನೆಂಬ ಕಥೆ ಎಷ್ಟು ಹಳೆಯದೋ ತಿಳಿಯೆ. ಅದರೆ ಜನಮನ್ನಣೆಯನ್ನೇ ಅಲ್ಲ ಗಣೇಶ ಗಳಿಸಿದ್ದು. ಶಂಕರಾಚಾರ್ಯರೇ ಸ್ವತಃ ತಮ್ಮ ಗೀತಾಭಾಷ್ಯದಲ್ಲಿ "ಯಾಂತಿ ದೇವವ್ರತಾ ದೇವಾನ್ ಪಿತೄನ್ಯಾಂತಿ ಪಿತೃವ್ರತಾಃ" ಎಂಬ ಶ್ಲೋಕಕ್ಕೆ (೯-೨೫) ಭಾಷ್ಯ ಬರೆಯುತ್ತ "ವಿನಾಯಕಮಾತೃಗಣಚತುರ್ಭಗಿನ್ಯಾದೀನಿ" ಎಂದು ಭೂತಗಳ ಅಥವಾ ಕ್ಷುದ್ರಶಕ್ತಿಗಳ ಬಗ್ಗೆ ಇರುವ ಮಾತಿನಲ್ಲಿ ವಿನಾಯಕ ಅಥವಾ ಗಣೇಶನನ್ನು ಸೇರಿಸಿದ್ದಾರೆ. ವಿನಾಯಕನೂ ಕೂಡ ಒಂದು ಕ್ಷುದ್ರಶಕ್ತಿಯೋಪಾದಿಯಲ್ಲಿ ಪೂಜೆಗೊಳ್ಳುತ್ತಿದ್ದ ಎಂದು ತಿಳಿಯುತ್ತದೆ. ಇಂದು ಕೂಡ ವಾಮಾಚಾರದ ಪೂಜೆಯಲ್ಲಿ ಗಣೇಶನ ಪೂಜೆ ಮಾಡುತ್ತಾರಂತೆ. ಇದನ್ನು ಏಕೆ ಹೇಳಿದೆನೆಂದರೆ ಗಣೇಶನ ಈ ರೂಪವೂ ಇದೆ ಎಂದು ತೋರುವುದಕ್ಕೆ. ಈ ಉಗ್ರರೀತಿಯಿಂದ ಪೂಜೆಗೊಳ್ಳುವ ಗಣೇಶನನ್ನು ಬಿಟ್ಟು ನಮ್ಮೆಲ್ಲರ ಪ್ರಿಯನಾದ ಸೌಮ್ಯರೂಪನಾದ ಗಣೇಶನೆಡೆ ಮತ್ತೊಮ್ಮೆ ಬರೋಣ.
ಗಣೇಶನದು ಆಗಮಪ್ರಕಾರವೇ ಬಹಳಷ್ಟು ರೂಪಗಳಿರುತ್ತವೆ. ಶಕ್ತಿಗಣಪತಿ (ಮುತ್ತುಸ್ವಾಮಿ ದೀಕ್ಷಿತರು ಈ ಗಣೇಶರೂಪಗಳ ಬಗ್ಗೆ ಬಹಳ ಕೃತಿಗಳನ್ನು ರಚಿಸಿದ್ದಾರೆ), ವಲ್ಲಭಾಂಬಾ ಗಣಪತಿ, ಬಾಲಗಣಪತಿ, ಭಕ್ತಗಣಪತಿ, ನೃತ್ಯಗಣಪತಿ, ಮಹಾಗಣಪತಿ, ಉಚ್ಛಿಷ್ಟಗಣಪತಿ - ಹೀಗೆ ಬಹಳಷ್ಟು ರೂಪಗಳಿವೆ. ಸಾಮಾನ್ಯವಾಗಿ ಬ್ರಹ್ಮಚಾರಿಯೆಂದು ಪರಿಗಣಿಸಲ್ಪಡುವ ಗಣೇಶನಿಗೆ ಸಿದ್ಧಿಬುದ್ಧಿಯರೇ ಅಲ್ಲ, ವಲ್ಲಭಾಂಬೆ, ಲಕ್ಷ್ಮೀ (ನಾರಾಯಣಿಯಾದ ಲಕ್ಷ್ಮಿಯಲ್ಲದೇ ಬೇರೆಯವಳು ಈಕೆ), ಮುಂತಾದವರು ಪತ್ನಿಯರಾಗಿದ್ದಾರೆ.
ಶಿವನ ಮಗನಾದರೂ ತಂದೆಯನ್ನೂ ಮೀರಿಸಿದವ ಗಣಪತಿ. ಗಾಣಪತ್ಯರಿಗಂತೂ ಗಣೇಶನೇ ಅತ್ಯುಚ್ಚ ಪರಬ್ರಹ್ಮ ಸ್ವರೂಪ. ಶಂಕರಾಚಾರ್ಯರದೆಂದು ಖ್ಯಾತವಾದ ಸ್ತೋತ್ರದಲ್ಲಿ "ಅಜಂ ನಿರ್ವಿಕಲ್ಪಂ... ಅದ್ವೈತರೂಪಮ್" ಎಂದು ಸ್ತುತಿಸಿರುವುದು ಗಣೇಶನ ಈ ಅವಾಙ್ಮನಸಗೋಚರರೂಪವನ್ನೇ! ಅಥರ್ವಶೀರ್ಷದಲ್ಲೂ "ಪ್ರಕೃತೇಃ ಪುರುಷಾತ್ ಪರಮ್" ಎಂದು ಹೇಳಿದಾಗ - ಪ್ರಕೃತಿಪುರುಷರೆಂಬ (ಅಥವಾ ಜೀವ-ಜಗತ್ತೆಂಬ) ದ್ವೈತವನ್ನು ಮೀರಿದ ಪರಮಸತ್ಯ ಎಂದು ಗಣೇಶನನ್ನು ಸ್ತುತಿಸಿದೆ. ಅಥರ್ವಶೀರ್ಷದಲ್ಲಿ "ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್" ಎಂದು ಆತ್ಮಸ್ವರೂಪವೇ ಗಣೇಶನೆಂದು ಹೇಳಿದೆ.
ಈ ರೂಪಗಳಿದ್ದರೂ ಈಚೆಗೆ ನಮ್ಮವರು ಗಣೇಶಹಬ್ಬ ಬಂದದ್ದೇ ತಡ - ಅವನನ್ನು ಡೈನೋಸಾರ್ ಮೇಲೆ ಕೂಡಿಸುವುದು, ಸೂಟ್ ಹಾಕಿಸುವುದು, ಕನ್ನಡಕ ಹಾಕಿಸುವುದು, ಮುಂತಾದ ಆಧುನಿಕ (ಡೈನೋಸಾರ್ ಆಧುನಿಕವಲ್ಲದಿದ್ದರೂ ಜ್ಯುರಾಸಿಕ್ ಪಾರ್ಕ್ ಆಧುನಿಕ ತಾನೆ!) ವೇಷಗಳನ್ನು ಪಾಪ ಗಣೇಶನಿಗೆ ಹಾಕುತ್ತಾರೆ. ಇದೂ ಸಾಲದೆ ಬೃಹದಾಕಾರನಾದ ಅವನನ್ನು ಸಣ್ಣ ಇಲಿಯ ಮೇಲೆ ಕೂಡಿಸಿ ಅಲ್ಲಿಲ್ಲಿ ಬೀಳಿಸಿದ ಹಾಸ್ಯಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಬ್ರಹ್ಮಾಂಡವನ್ನು ಉದರದಿ ಪೊರೆಯುವ ದೇವದೇವನಿಗೆ ಅಪಚಾರವೇ? ಹಾಗೆ ಅಪಚಾರ ಮಾಡಿದವರ ಮೇಲೆ ಕೋಪವೂ ಬರುತ್ತದೆ. ಆದರೆ ಇನ್ನೊಂದು ಕಡೆಯಿಂದ ನೋಡಿದರೆ ಇದು ನಮ್ಮ ದೇವರ ದೊಡ್ಡತನವೇ ಎಂದು ಕಾಣುತ್ತದೆ. ಭಕ್ತರಿಂದ ಇಷ್ಟೆಲ್ಲ ಮಾಡಿಸಿಕೊಂಡರೂ ಅವರಿಗೇ ಒಲಿಯುವ ಭಕ್ತಪರಾಧೀನ ನಮ್ಮ ಗಣಪ ! ಅವನು ನಮಗೆ ಎಂಥ ಸ್ನೇಹಿತನಲ್ಲವೇ? ಆದರೂ ಸ್ನೇಹಿತನೆಂದು ಬಹಳ ಹಿಂಸಿಸುವುದು ಒಳ್ಳೆಯದಲ್ಲ. ಆದರೂ ಇಲ್ಲಸಲ್ಲದ ಉಡುಪುಗಳನ್ನು ಗಣೇಶನಿಗೆ ತೊಡಿಸಿದಾಗ ನನಗೆ ಬೇಜಾರಾಗದೆ ಇರುವುದಿಲ್ಲ.
ಮತಾಂಧತೆ ತಾಂಡವವಾಡುತ್ತಿರುವ ಈ ಕಾಲದಲ್ಲಿ ಗಣೇಶ ನಮಗೆ ಒಳ್ಳೆಯ ಪಾಠ ಕಲಿಸಿದ್ದಾನೆ. ಇದೇ ರೀತಿಯ ಹಾಸ್ಯ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ದೇವತೆಗಳಿಗೆ ಮಾಡಿದ್ದರೆ? ಮೊನ್ನೆ ತಾನೆ ಡೆನ್ಮಾರ್ಕಿನಲ್ಲಿ ನಡೆದ ಸಂಗತಿಯ ಪುನರಾವೃತ್ತಿಯಾಗುತ್ತಿತ್ತು. ಹಿಂದು ಧರ್ಮವು ಅವುಗಳಿಗಿಂತ ಸಹಿಷ್ಣು ಎಂದು ಗಣೇಶ ನಿರೂಪಿಸಿದ್ದಾನೆ.
ಭಕ್ತಿಯ ಒಂದು ಸ್ನೇಹದಲ್ಲಿ ಸ್ವಲ್ಪ ಅಪಚಾರ ಮಾಡಿದರೆ ತೊಂದರೆ ಇಲ್ಲ. ಈಗ ಕೃಷ್ಣನಿಗೆ ವಿದುರ ಭಕ್ತಿಭಾವದಲ್ಲಿ ಬಾಳೆಯ ಹಣ್ಣನ್ನು ಕೊಡುವ ಬದಲು ಸಿಪ್ಪೆಯನ್ನು ಕೊಡಲಿಲ್ಲವೇ? ಆದರೆ ಗಣೇಶನ ಬಗ್ಗೆ ಕೆಟ್ಟದಾಗಿ ಕೆಲವು ಆಧುನಿಕ ವಿದ್ವಾಂಸರು ಹೇಳುತ್ತಿದ್ದಾರೆ. ಪಾಲ್ ಕೋರ್‍ಟ್ರೈಟ್ ಎಂಬುವನು ಗಣೇಶನನ್ನು "psycho-analyze" ಮಾಡುವೆ ಹೇಯ ಪ್ರಯತ್ನ ಮಾಡಿರುತ್ತಾನೆ. ಇದು ಎರಡು ವರ್ಷಗಳ ಹಿಂದೆ ದೊಡ್ಡ ರಾದ್ಧಾಂತವನ್ನೇ ಮಾಡಿತ್ತು. ಅದರಲ್ಲಿ ಮುದ್ದಾದ ಗಣೇಶನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬರೆದಿರುತ್ತಾರೆ. ಇಲ್ಲಿ ಬರೆಯಲಾಗದಷ್ಟು ಅಶ್ಲೀಲ ಸಂಗತಿಗಳನ್ನು ಸೇರಿಸಿದ್ದಾರೆ. ಈ ಪುಸ್ತಕದಿಂದ ಖೇದಗೊಂಡ ಭಕ್ತರು ಆ ಪುಸ್ತಕದ ಮುದ್ರಣವನ್ನು ಸ್ಥಗಿತಗೊಳಿಸಿದರು. (ನಾನು ಪುಸ್ತಕ ban ವಾದಿಯಲ್ಲ, ಆದರೆ ಈ ರೀತಿಯ ಅಸಹ್ಯವಾದ ಬರವಣಿಗಳನ್ನು ಖಂಡಿಸಲೇಬೇಕು) ಸತ್ಯವಿದ್ದಿದ್ದರೆ ಸರಿ ಎನ್ನಬಹುದಿತ್ತು. ಆದರೆ ವಸ್ತುತಃ ಆ ಪುಸ್ತಕದಲ್ಲಿರುವ ಸತ್ಯಾಂಶ ಕಡಿಮೆ. ಪಾಲ್ ಮಹಾಶಯ ಉಪಯೋಗಿಸಿದ ಕ್ರಮವೂ ತಪ್ಪು. ಅವನ ವಿದ್ವತ್ತೂ ಸರಿಯಿಲ್ಲ ಎಂದು ಈ ಕೊಂಡಿಯಲ್ಲಿ ಸಿಗುವ ದೀರ್ಘಲೇಖನದಲ್ಲಿ ಚೆನ್ನಾಗಿ ನಿರೂಪಿಸಿರುತ್ತಾರೆ ವಿಶಾಲ್ ಅಗರ್ವಾಲ್ ಮತ್ತು ಕಲವೈ ವೆಂಕಟ್ ಎಂಬುವರು.
ಹೀಗೆ ಗಣೇಶನಿಂದ - ಯಾವ ಸಂದರ್ಭದಲ್ಲಿ ಸಹಿಷ್ಣುವಾಗಿರಬೇಕು, ಯಾವ ಸಂದರ್ಭದಲ್ಲಿ ಹೋರಾಡಬೇಕು ಎಂಬ ಇನ್ನೊಂದು ಪಾಠವೂ ಆಗಿದೆ.
ಗಣೇಶಚತುರ್ಥಿಯು ಕೇವಲ ಭಕ್ತಿಭರಿತ ವ್ರತವಾಗಿರದೆ ಸಾಮಾಜಿಕ ಐಕ್ಯಕ್ಕೆ ಸಾಧನವಾಗಿ ಕೂಡ ಬಳಸಿಕೊಳ್ಳಬಹುದೆಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ನಿರೂಪಿಸಿದ್ದಾರೆ. ಇವರ ಈ ಪ್ರಯತ್ನವೇ ಈಗ ರಸ್ತೆ ರಸ್ತೆಗಳಲ್ಲಿ ಸಿಗುವ ಗಣೇಶ ಮಿತ್ರ ಮಂಡಲಿಗಳಿಗೆ ಕಾರಣ. ಅಂದು ಮನೆಮನೆಗಳಲ್ಲಿ ವರ್ಣಮಯ ಗೌರೀ-ಗಣೇಶರ ಮೂರ್ತಿಗಳು ಕಂಗೊಳಿಸುತ್ತಿರುತ್ತವೆ. ಮೋದಕ, ಕಡುಬುಗಳು ಮುಂತಾದ ಸಿಹಿತಿನಿಸುಗಳನ್ನು ವಿನಾಯಕನಿಗೆ ನಿವೇದಿಸಿ ಭಕ್ತಿಯಿಂದ ಪೂಜೆ ನೆರವೇರುತ್ತದೆ. ಮನೆಗ ಬಂದ ತಾಯಿ-ಮಗನ ಹಾಗೆ ಭಕ್ತರ ಪೂಜಾತಿಥ್ಯಗಳನ್ನು ಸ್ವೀಕರಿಸುತ್ತಾರೆ. ಪ್ರತಿಯೊಂದು ಮನೆಯ ಆತ್ಮೀಯ ಸದಸ್ಯರೇ ಆಗುತ್ತಾರೆ. ಅವರ ಮೃಣ್ಮಯ ಮೂರ್ತಿಗಳನ್ನು ನೀರಿನಲ್ಲಿ ಬಿಡುವಾಗ ಭಕ್ತರಿಗೆಲ್ಲ ದುಃಖ. ನಮ್ಮ ಆತ್ಮೀಯರನ್ನು ಬೀಳ್ಕೊಡುವಾಗ ಆಗುವ ದುಃಖವೇ ಇಲ್ಲಿಯೂ ಆಗುತ್ತದೆ. ಈ ವಿಸರ್ಜನೆಯೂ ಒಂದು ಪಾಠವನ್ನು ಹೇಳಿಕೊಡುತ್ತದೆ. ಸಂತಸದ ಘಳಿಗೆಗಳೇ ಶಾಶ್ವತವಲ್ಲವೆಂದೂ ಜೀವನದ ಅನಿವಾರ್ಯಗಳನ್ನು ಮರೆಯಬಾರದೆಂದು ಆ ಸಂಭ್ರಮದಲ್ಲಿಯೇ ಗಣಪ ನಮಗೆ ಮೆಲ್ಲನೆ ಕಿವಿಮಾತು ಹೇಳುತ್ತಾನೆ.
ಗಣೇಶನ ವ್ಯಾಪ್ತಿ ಎಲ್ಲ ಕ್ಷೇತ್ರಗಳಲ್ಲೂ ಕಾಣುತ್ತದೆ. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಂತೂ ಪಿಳ್ಳಾರಿ ಗೀತೆಗಳಿಂದ ಶಿಕ್ಷಣ ಆರಂಭವಾಗುತ್ತದೆ. ಅದೂ "ಲಂಬೋದರ ಲಕುಮಿಕರ" ಎಂಬ ಗಣೇಶಸ್ತುತಿಯಿಂದ. ಕಾವ್ಯನಾಟಕಾದಿಗಳಲ್ಲೂ ಆರಂಭದಲ್ಲಿ ಗಣೇಶಸ್ತುತಿಯೇ. ಈಗಿನ ಚಲನಚಿತ್ರಗಳಲ್ಲೂ ಹಾಗೆಯೇ! ಮನೆಗಳ ಮುಂದೆ ಗಣೇಶನ ಮೂರ್ತಿಯೊಂದು ಸಾಮಾನ್ಯವಾಗಿ ಕಾಣುತ್ತದೆ. ಅದು ಗಣೇಶನ ಸಂಕೇತವಾಗಿರುವುದರಿಂದ ವಿಘ್ನಗಳನ್ನು ನಿವಾರಿಸುವುದು ಎಂದು ನಂಬಿಕೆ. ಅದಕ್ಕೆ ಒಂದೆಡೆ "ಕಲೌ ದುರ್ಗಾವಿನಾಯಕೌ" ಅಂದರೆ ಕಲಿಯುಗದಲ್ಲಿ ದುರ್ಗೆ ಮತ್ತು ವಿನಾಯಕರ ಪೂಜೆಯನ್ನು ವಿಶೇಷವಾಗಿ ಮಾಡಬೇಕೆಂದು ಹೇಳಿದೆ. ಸಂತಸದ ಸಮಯದಲ್ಲಿ ಮತ್ತು ಆಪತ್ತಿನ ಸಮಯದಲ್ಲೂ ಪ್ರೀತಿಯಿಂದ ಸಲಹುವ ಮಿತ್ರನಾಗಿ, ಸರ್ವಕಾಲವೂ ಭಕ್ತರನ್ನು ಕಾಯುವ ದೇವರಾಗಿ ಗಣೇಶ ಎಲ್ಲರ ಪ್ರೀತಿಭಕ್ತಿಗಳಿಗೆ ಪಾತ್ರನಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಕೆಲಸದ ಆರಂಭದಲ್ಲಿ ಕೋಟ್ಯಂತರ ಜನಗಳು ನೆನೆಯುವ ಆ ಗಣೇಶನು ನಮ್ಮ ವಿಘ್ನಗಳನ್ನು ನಿವಾರಿಸಿ ವಿದ್ಯಾಬುದ್ಧ್ಯಾಯುರಾರೋಗ್ಯೈಶ್ವರ್ಯಗಳನ್ನೂ ಚತುರ್ವಿಧಪುರುಷಾರ್ಥಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಇಲ್ಲಿಗೆ ನನ್ನ ಗಣೇಶಾಲೋಕನವನ್ನು ಸಂಪನ್ನಗೊಳಿಸುವೆ.
|| ಇತಿ ಶಮ್ ||
No comments:
Post a Comment