Sunday, October 22, 2006

ನಮ್ಮ ಸಿನಿಮಾ ಸಂಗೀತದ ಸ್ಪರ್ಧೆಗಳು

ಈ ನಡುವೆ ಜೀಟಿವಿ ಮತ್ತು ಈಟಿವಿ ವಾಹಿನಿಗಳಲ್ಲಿ ಕ್ರಮವಾಗಿ "ಸರಿಗಮಪ" ಮತ್ತು "ಎದೆ ತುಂಬಿ ಹಾಡುವೆನು" ಎಂಬ ಕಾರ್ಯಕ್ರಮಗಳು ಬಹಳ ಜನಪ್ರಿಯವಾಗಿವೆ. ಅದೂ ಈಚೆಗಂತೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಚಿಕ್ಕ ಮಕ್ಕಳು. ತಮ್ಮ ಮಕ್ಕಳಾಗಲಿ ಅಥವಾ ಪರರ ಮಕ್ಕಳಾಗಲಿ - ಏನಾದರೂ ಮಾಡಿದರೆ ನೋಡುವವರಿಗೆ ಸಂತೋಷವುಂಟಾಗುತ್ತದೆ. ಇದನ್ನರಿತ ಟಿವಿಯವರು ಮಕ್ಕಳ ಸಂಗೀತದ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಇದರಿಂದ ನೋಡುವವರ ಸಂಖ್ಯೆ ಹೆಚ್ಚಿರುವುದರಲ್ಲಿ ಸಂದೇಹವೇ ಇಲ್ಲ.

ಈ ಸಂಗೀತದ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಹಾಡುವುದು ಸಿನೆಮಾಗಳ ಗೀತೆಗಳನ್ನು. ಜೀ ಯಲ್ಲಿ ಹಿಂದೀ ಗೀತೆಗಳಾದರೆ, ಈಟಿವಿ ಯಲ್ಲಿ ಕನ್ನಡ ಗೀತೆಗಳು. ಈ ಕಾರ್ಯಕ್ರಮಗಳು ಎಷ್ಟು ಜನಪ್ರಿಯವೇ ಆಗಿರಲಿ ನನ್ನಲ್ಲಿ ಒಂದು ಬಗೆಯ ವಿಷಾದಕ್ಕೆ ಕಾರಣವಾಗುತ್ತವೆ.

ಸಿನಿಮಾ ಗೀತೆಗಳು ಎಲ್ಲ ಕಡೆ ಕೇಳುತ್ತವೆ. ರೇಡಿಯೋದಲ್ಲಾಗಲಿ ಟಿವಿಯಲ್ಲಾಗಲಿ ಸರ್ವದಾ ಇದೇ ಬರುತ್ತಿರುವುದು. ಎಲ್ಲ ಸಿನಿಮಾ ಗೀತೆಗಳು ಮಧುರವಲ್ಲದಿದ್ದರೂ ಕೆಲವಾದರೂ ಬಹಳ ಸುಂದರ ಮತ್ತು ಮಧುರವಾಗಿರುವುದರಲ್ಲಿ ಸಂದೇಹವಿಲ್ಲ. ಈ ಗೀತೆಗಳಲ್ಲಿ ಕೆಲವನ್ನು ಆಯ್ದು ಹಾಡುವುದು ಇಲ್ಲಿನ ಸ್ಪರ್ಧಿಗಳಿಗಿರುವ ಸ್ಪರ್ಧೆ. ಆಯ್ದು ಹಾಡುವುದು ಎಂದರೆ ಏನರ್ಥ? ಮೂಲದ ಚಲನಚಿತ್ರದಲ್ಲಿ ಅಲ್ಲಿನ ಹಿನ್ನೆಲೆ ಗಾಯಕ ಅಥವಾ ಗಾಯಕಿ ಹೇಗೆ ಹಾಡಿದ್ದರೋ ಅಲ್ಲಿನ ಯಥಾವತ್ತಾದ ಅನುಕರಣೆ ಮಾಡುವುದು. ಅಲ್ಲೇನಾದರೂ ತಪ್ಪು ಮಾಡಿದ್ದರೆ ಈ ಸ್ಪರ್ಧಿಗಳೂ ಅದೇ ತಪ್ಪು ಮಾಡಬೇಕು. ಮಖ್ಖಿ ಕಾ ಮಖ್ಖಿ ಎಂಬುದು ಎಲ್ಲರಿಗೂ ತಿಳಿದದ್ದೇ ಅಲ್ಲವೇ? ಇದರ ಉಪಯೋಗವನ್ನು ಇಲ್ಲಿ ಮಾಡುತ್ತಾರೆ.

ಇಲ್ಲಿ ಬರುತ್ತದೆ ನನ್ನ ಪ್ರಶ್ನೆ. ಯಥಾವತ್ತಾಗಿ ಹಾಡನ್ನು ಅನುಕರಿಸಿ ಹಾಡಿದರೆ ಬಹುಮಾನವನ್ನು ಗಿಟ್ಟಿಸುವ ಹಾಡುಗಾರರಿಗೆ ಅವರ ಸಂಗೀತ-ಶಕ್ತಿಯ ಅಳೆಯುವ ಸ್ಪರ್ಧೆಯೇ ಇದು? ಮಧುರವಾದ ಕಂಠ, ಒಟ್ಟಾರೆ ಮೂಡುವ ಅಭಿಪ್ರಾಯ ಮತ್ತು ಹಾಡಿನ ಸ್ಮರಣೆ - ಇವನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತದೆ. ಇಷ್ಟು ಮಾತ್ರವಿದ್ದರೆ ಒಂದು ನಿರ್ಜೀವವಾದ ಕ್ಯಾಸೆಟ್ ಮತ್ತು ಅಷ್ಟೇ ನಿರ್ಜೀವವಾದ ಟೇಪ್ ಪ್ಲೇಯರ್ ಇದೇ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತದಲ್ಲ?

ಕಾರ್ಯಕ್ರಮಕ್ಕೆ ಬರುವ ಮಕ್ಕಳು ಮತ್ತು ಅವರ ಪಾಲಕರನ್ನು ನೋಡಬೇಕು - ಘನವಾದ ಸಾಧನೆ ಮಾಡಿದ್ದೇವೆ ಎಂದು ಅವರ ನಂಬಿಕೆ. ಮಕ್ಕಳಿಗೆ ತಿಳಿಯುವುದಿಲ್ಲ ಸರಿ, ಅವರ ಪಾಲಕರಿಗೆ ತಿಳಿಯಬೇಡವೇ? ಸಂಗೀತವಿರುವುದು ಅನುಕರಣೆಯಲ್ಲೇ? ಈ ಮಕ್ಕಳ ನಿಜವಾದ ಪ್ರತಿಭೆಯನ್ನು ಇಲ್ಲಿ ವ್ಯಕ್ತಗೊಳಿಸಲಾಗುತ್ತಿದೆಯೇ?

ಇನ್ನೊಂದು ನನಗೆ ಇಷ್ಟವಾಗದ ಸಂಗತಿಯೇನೆಂದರೆ ಚಿಕ್ಕವಯಸ್ಸಿನ ಈ ಮಕ್ಕಳಿಂದ ಅಸಂಬದ್ಧ ಗೀತೆಗಳನ್ನು ಹಾಡಿಸುವುದು. ಇಂದು ನೋಡಿದ ಕಾರ್ಯಕ್ರಮದಲ್ಲೇ ಒಬ್ಬ ಸುಮಾರು ಹತ್ತು ವರ್ಷದ ಹುಡುಗ ಒಬ್ಬ ಭಗ್ನಪ್ರೇಮಿ ಹಾಡುವ - "ನಲಿವಾ ಗುಲಾಬಿ ಹೂವೆ,.... ನಿನಗೇ ನನ್ನಲ್ಲಿ ಒಲವೋ, ಅರಿಯೆ ನನ್ನಲ್ಲಿ ಛಲವೋ" ಎಂದು ಹಾಡಿದ. ಅರ್ಥವೂ ತಿಳಿಯದ ವಯಸ್ಸಿನ ಆ ಬಾಲನ ಬಾಯಲ್ಲಿ ಬಂದ ಈ ಹಾಡು ಎಷ್ಟು ಸಮಂಜಸ? ಈ ರೀತಿಯ ಅಸಂಬದ್ಧ ಹಾಡುಗಳೇ ಕಾರ್ಯಕ್ರಮದಲ್ಲೆಲ್ಲ. ಇಲ್ಲಿ ನಮ್ಮ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಸ್ಪರ್ಧಿಗಳನ್ನು ವಯಸ್ಸಿಗೆ ಮೀರಿದ ಹಾಡುಗಳನ್ನು ಹಿಡಿದಿರುವುದು ತಪ್ಪೆಂದು ಎಚ್ಚರಿಸುತ್ತಿದ್ದರು. ಹಿಂದಿಯ ಜೀಯಲ್ಲಂತೂ ಬಿಡಿ, ಬಪ್ಪಿ ಲಹಿರಿ, ಅಲ್ಕಾ ಯಾಗ್ನಿಕ್ ಮತ್ತು ಅಭಿಜಿತ್ ಅವರಿಗೆ ಇದರ ಪರಿವೆಯೇ ಇಲ್ಲದಂತೆ ಮಕ್ಕಳನ್ನು ಆ ಹಾಡುಗಳನ್ನು ಹಾಡುವಂತೆ ಹುರಿದುಂಬಿಸುತ್ತಿದ್ದರು. ಇದರಿಂದ ಒಂದಂತೂ ಖಾತ್ರಿ - ಇನ್ನೂ ಹೆಚ್ಚು ಮಾತಾಪಿತೃಗಳು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಗಳಿಗೆ ಕಳಿಸುತ್ತಾರೆಂಬುದು.

ಈ ಸಿನಿಮಾ ಸಂಗೀತ ಒಳ್ಳೆಯ ಮನೋರಂಜನೆಯನ್ನೊದಗಿಸಿದ್ದರೂ ಇದನ್ನೇ ಸಂಗೀತ ಪ್ರತಿಭೆಗೆ ಮಾನದಂಡವಾಗಿ ಉಪಯೋಗಿಸುವುದು ಎಷ್ಟು ಸರಿ? ಮಕ್ಕಳ ಅದ್ಭುತಪ್ರತಿಭೆಗಳನ್ನು ವ್ಯಕ್ತಗೊಳಿಸಲು ಬೇರೆ ಮಾರ್ಗಗಳಿದ್ದೇ ಇವೆ.

ಒಂದು ರಾಗವನ್ನು ಎಷ್ಟು ಚೆನ್ನಾಗಿ ಹಾಡಬಲ್ಲರು, ಒಂದು ಪದ್ಯದ ಅಥವಾ ಶ್ಲೋಕದ ಗಮಕವಾಚನವನ್ನು ಹೇಗೆ ಮಾಡಬಲ್ಲರು, ಇವರ ತಾಲಜ್ಞಾನ ಹೇಗೆ - ಇವೇ ಮುಂತಾದ ವಿಚಾರಗಳನ್ನು ಪರೀಕ್ಷಿಸಿದರೆ ಒಂದು ಮಟ್ಟಕ್ಕೆ ಸಂಗೀತಪ್ರತಿಭೆಯನ್ನು ಪ್ರಕಟಿಸುವುದಕ್ಕೆ ಸಹಾಯವಾಗುತ್ತದೆ. ಮಕ್ಕಳಿಗೇ ಅಲ್ಲ, ಯುವಜನರಿಗೂ, ದೊಡ್ಡವರಿಗೂ ಈ ಸ್ಪರ್ಧಾಕಾರ್ಯಕ್ರಮಗಳನ್ನು ಇಡಬಹುದು. ಈ ರೀತಿಯ ಕಾರ್ಯಕ್ರಮಗಳು ಶ್ರೋತೃಗಳಲ್ಲಿಯೂ ಸಂಗೀತದ ಶಿಕ್ಷಣವನ್ನು ಕೊಡುವುದಲ್ಲದೆ, ಸಂಗೀತದ ಕಲಿಕೆಗೂ ಸ್ಫೂರ್ತಿ ನೀಡುತ್ತದೆ. ರಾಜ್ ಟಿವಿ ಎಂಬ ತಮಿಳಿನ ವಾಹಿನಿಯಲ್ಲಿ ಸುಮಾರು ವರ್ಷಗಳ ಹಿಂದೆ ಈ ರೀತಿಯ ಕಾರ್ಯಕ್ರಮವಿದ್ದ ನೆನಪು ನನಗೆ. ನಮ್ಮ ಕನ್ನಡದ ವಾಹಿನಿಗಳಲ್ಲಂತೂ ಈ ರೀತಿಯ ಕಾರ್ಯಕ್ರಮ ತಪ್ಪಿಯೂ ಕೂಡ ಮೂಡಿಬರುವುದಿಲ್ಲ. ಮೂಡಿದರೆ ನೋಡುವುದು ಯಾರು ಎಂದು ಅವರು ಕೇಳುತ್ತಾರೆ. ನೀವು ವೀಕ್ಷಕರ ಮಟ್ಟವನ್ನು ಏರಿಸಬೇಕೆಂದು ನಾನು ಹೇಳುತ್ತೇನೆ. ನೀವೇನನ್ನುತ್ತೀರಿ?

2 comments:

Anonymous said...

I completely agree. Film music should be just a part of the overall package. It's harmless to have film music as one of the many.

But, I rememebr "TVS sa ri ga ma" days when there were quality judges and a quality presenter in Sonu Nigam. They were very particular about rhythm, tune and pitch. Infact, one of the rounds had the competitors sing a film song in whatever pitch the orchestra provided. Such things do help the development and creativity, even though bulk of the songs were from movies and required "as is" reproduction.

I also agree with the lyrics thingy. I was a judge for a childrens music competition and my God , an 8 year old girl comes on stage and sings "sihi muttu sihi muttu innoMdu". That was OK, but then the girl literally kept on making the kissing "noise" forever, throughout the song...you know..like "sihi muttu sihi muttu innoMdu...mmmmcc....kennege gallake mattoMdu...mmmmcc...innoMdu...mmmmcc...mattoMdu...mmmmcc..." etc.

You are very right in suggesting that we need increase the viewers bar. The real question to be answered is...how ?

I will give you a simple example....M.D.pallavi is touring America now. She is an excellent singer, no doubt. I love her music. But, she sang the samle OLD songs....she sings the same songs everywhere. That is NOT because she does not know anything new. It's just because that's what people want...and thus kill the creativity in an artiste like pallavi. People are very happy to listen to the same 'nityOtsava' and 'ede tuMbi hADidenu' a thousand times. Mind you, some of these people are very learned, musically speaking. If we cannot educate them, it is much harder to educate the masses and bring the level up.

I am not saying we can't, but I am confused as to how...If you have ideas, please let me know...I would love to implement it, as much as I can.

Oh, and read my blog here, it speaks volumes about "vIkShakara maTTa" :

http://decemberstud.wordpress.com/2006/09/20/whats-in-a-name

I digressed a little, but just to expand on the "problem" a little more.

Very apt and required blog. Thanks !

Unknown said...

ನಾವು ಚಿಕ್ಕವರಿದ್ದಾಗ ಮಕ್ಕಳ ಹಾಡುಗಳು ಎಂದೇ ಇರ್ತಿತ್ತು..
ನಂಗೆ ಇನ್ನೂ ನೆನಪಿದೆ, ಬಿ ಕೆ ಸುಮಿತ್ರಾ ಮತ್ತು ಅವರ ಮಕ್ಕಳು(ಸುನಿಲ್ ಮತ್ತು ಸೌಮ್ಯ) ಹಾಡಿದ ಧ್ವನಿ ಸುರುಳಿ "ಆನೆ ಬಂತೊಂದಾನೆ".ನಾವೆಲ್ಲ ಆ ಹಾಡುಗಳನ್ನು ಕೇಳುತ್ತಿದ್ದೆವು..ಈಗ ಆ ತರದ ಪ್ರಯೋಗಗಳೇ ನಡೆಯುತ್ತಿಲ್ಲ ಅನ್ನಿಸುತ್ತಿದೆ..:-(