ಹಿಂದಿನ ವಾರ ಒಂದು ಮದುವೆಯ ಸಮಾರಂಭಕ್ಕೆ ಹೋಗಿದ್ದೆವು. ಮದುವೆಗಳಲ್ಲಿ ಒಂದು ರೀತಿಯ ಸೊಗಸಿರುತ್ತದೆ. ಆ ಹರುಷ, ಸಂಭ್ರಮಗಳು. ಮಕ್ಕಳಿಗೆಲ್ಲ ಓಡುವ ಅಥವಾ ಐಸ್-ಪೈಸ್ ಆಟ. ದೊಡ್ಡವರಿಗೆ ಮಾತಿನ ಆಟ. ಬಹಳ ದಿನಗಳಿಂದ ನೋಡಿರದಿದ್ದ ಬಂಧು-ಮಿತ್ರರನ್ನು ಸಂದರ್ಶಿಸುವ ಕಾಲ. ಹೆಂಗಸರು ಸೀರೆಗಳ ಕಂತೆಯನ್ನೇ ಒಯ್ಯುತ್ತಾರೆ. ವಧುವಿಗೆ ಸಮಾನವಾಗಿ ತಾವೂ ಅಲಂಕಾರ ಮಾಡಿಕೊಳ್ಳದಿದ್ದರೆ ಹೇಗೆ? ಹೀಗೆ ವರಪೂಜೆಗೆ ಒಂದು ಸೀರೆಯಾದರೆ, ಊಟಕ್ಕೆ ಇನ್ನೊಂದು. ಧಾರೆಯ ಸಮಯಕ್ಕೆ ಒಂದಾದರೆ, ಮಧ್ಯಾಹ್ನದ ಊಟಕ್ಕೆ ಮತ್ತೊಂದು. ಆರತಕ್ಷತೆ (ಈ ಪದ ಸ್ವಲ್ಪ ಸರಿಯಿಲ್ಲದಿದ್ದರೂ ಇದನ್ನೇ ಉಪಯೋಗಿಸಿದ್ದೇನೆ) ಅಥವಾ ರಿಸೆಪ್ಷನ್-ಕಾರ್ಯಕ್ರಮದಲ್ಲಂತೂ ಬಿಡಿ! ಆ ಮಿಣಮಿಣ ಬೆಳಕು. ಒಂದೊಂದು ಮದುವೆಯಲ್ಲಿ ಕೇಳಿ ಬರುವ ಅಬ್ಬರದ ಸಂಗೀತ. ಅಲ್ಲಂತೂ ಝಗಝಗಿಸುವ ಉಡುಪುಗಳೇ. ಯೋಚನೆ ಎಲ್ಲೋ ಹೋಯಿತು. ಇರಲಿ. ಮದುವೆಗೆ ಹೋಗಿದ್ದೆವು ಅಂದಿದ್ದೆ.
ಅಲ್ಲಿ ಹೋಗಿದ್ದು ನಮ್ಮ ಮನೆ ಮಂದಿಯೆಲ್ಲ. ಗಾಡಿ ನಡೆಸಿದ್ದು ನಾನೇ. ಅದೇ ಕ್ಲಚ್, ಅದೇ ಗೇರ್, ಅದೇ ಆಕ್ಸೆಲೆರೇಟರ್, ಅವೇ ದಾರಿಯ ವಾಹನಗಳು, ಅವೇ ರಸ್ತೆಗಳು. ಕುಳಿತ ಜನರೂ ಅವರೇ. ಆದರೆ ಮದುವೆಗೆ ಹೊರಟವರ ಹಾಗೆ ಉಡುಪು ಧರಿಸಿದ್ದೆವು. ಮದುವೆಗೆ ಕೆಟ್ಟದಾಗಿ ಬಟ್ಟೆ ಧರಿಸಿ ಹೋದರೆ ಏನೂ ಚೆನ್ನಾಗಿರುವುದಿಲ್ಲ, ಅಲ್ಲವೇ? ದೇವಸ್ಥಾನದ ಮದುವೆ ಮಂಟಪದಲ್ಲಿ ಕಾರನ್ನು ನಿಲ್ಲಿಸಿದ್ದೆ. ಕಾರು ನಿಲ್ಲಿಸುವಾಗ, ಹತ್ತುವಾಗ ದೇವರ ಬಗ್ಗೆ ಸ್ವಲ್ಪ ಯೋಚನೆ.
ಅದರ ಮುಂದಿನ ದಿನ ನಮ್ಮ ಸಂಬಂಧಿಕರೊಬ್ಬರನ್ನು ನೋಡಲು ಹೋದೆವು. ವಯಸ್ಸಿನಿಂದ ಕೃಶಾಂಗರಾಗಿದ್ದಾರೆ ಆಕೆ. ಇಳಿ ವಯಸ್ಸು. ಅದರೊಡನೆ ಮುಂದೇನಾಗುವುದೋ ಅನ್ನುವ ಭಯ ಅವರಿಗೆ. ಬಹಳ ದಿನಗಳಿಂದ ನಮ್ಮನ್ನು ನೋಡಿರಲಿಲ್ಲ. ಪಾಪ ನಮ್ಮನ್ನು ನೋಡಿ ಅತ್ತುಬಿಟ್ಟರು. ಅವರಿಗೆ ಕಿವಿ ಬೇರೆ ಸರಿಯಾಗಿ ಕೇಳದಿದ್ದರಿಂದ, ಸಮಾಧಾನವನ್ನು ಮೆಲ್ಲನೆ ಹೇಳದೆ, ಅರಚಬೇಕಾಯ್ತು. "ಅಳಬೇಡಿ" ಎಂದು ಅರಚುತ್ತಿದ್ದುದ್ದನ್ನು ಕೇಳಿ ಬೀದಿಯ ಜನ ಬಗ್ಗಿ ನೋಡುತ್ತಿದ್ದರು. ಅವರು "ಇಲ್ಲೇನು ಪಾಪ ಇಳಿ ವಯಸ್ಸಿನಾಕೆಯನ್ನು ಬೈಯುತ್ತಿದ್ದಾರಲ್ಲ" ಎಂದು ಕುತೂಹಲದಿಂದ ನೋಡುತ್ತಿರುವಂತೆ ಆಯ್ತು.
ಅಲ್ಲಿ ಕೂಡ ನಾವೆಲ್ಲ ಹೋಗಿದ್ದೆವು. ನಾನೇ ಕಾರೋಡಿಸಿದ್ದು. ಅದೇ ಕಾರು. ಅವರೇ ಜನಗಳು. ಈ ಬಾರಿ ಉಡುಪು ಬೇರೆ ಇತ್ತು! ರಸ್ತೆಯಲ್ಲಿ ನಿಲ್ಲಿಸಿದ್ದೆ. ಯಾರೋ ಒಬ್ಬರು ಜೋರಾಗಿ ಹಾರ್ನ್ ಮಾಡಿ - "ನಿಮ್ಮದೇನಾ ಗಾಡಿ" ಎಂದು ನಾವು ಹೊರಡಲು ಅನುವಾದಾಗ ಕೇಳಿದರು. "ಹೌದು, ಇನ್ನೇನು ಹೊರಟೆವು" ಎಂದು ಅಲ್ಲಿಂದ ಹೊರಟೆವು. ರಸ್ತೆಯಲ್ಲಿ ನಿಂತಿದ್ದ ಕಾರು. ರಸ್ತೆಯ ಜನರೊಂದಿಗೆ ಮಾತು.
ಇಂದು ಮುಂಜಾನೆ ನಾನು ನನ್ನ ಹೆಂಡತಿ ಗಾಡಿ ಹತ್ತಿದೆವು. ಒಬ್ಬರ ಮನೆಗೆ ಹೋಗಬೇಕಿತ್ತು. ದಾರಿ ಸರಿಯಾಗಿ ತಿಳಿಯದು. ಸುಮಾರಾಗಿ ಜಾಗದ ಪರಿಚಯ ಇತ್ತು, ಅಷ್ಟೆ. ಅಲ್ಲಿ ಇಲ್ಲಿ ಕೇಳಿ, ಕೇಳಿ ಆ ಮನೆಯ ಕಡೆಗೆ ಹೋದೆವು. ಆ ಮನೆಯನ್ನು ಎಂದೂ ಮುಂಚೆ ನೋಡಿರಲಿಲ್ಲ. ಅದೇ ಮನೆಯೆಂದು ತಿಳಿದು, ಒಳಗೆ ಹೋದೆವು. ಒಳಗೆ ಜನ. ಅಲ್ಲಿ ಕೋಣೆಯ ಮಧ್ಯದಲ್ಲಿದ್ದ ಪುಷ್ಪಾಲಂಕೃತ ನಿರ್ಜೀವ ಶರೀರ. ಇಡೀ ರಾತ್ರಿ ಗೋಳಿಟ್ಟಿದ್ದರಿಂದ ದುಃಖವೇ ಸುಸ್ತಾಗಿ ಕೋಣೆಯ ಒಂದು ಕಾಣದೆಡೆ ಕುಳಿತಂತಿತ್ತು. ಸಾಂತ್ವನದ ನುಡಿಗಳು ಇನ್ನು ನಮಗೆ ಸಾಕೆಂಬಂತೆ ಕಂಡ ಮನೆಯವರು. ಮುಂದಿನ ಕಾರ್ಯಕ್ರಮದ ಸಿದ್ಧತೆಗಳು ನಡೆದಿದ್ದವು. ಅಗಲಿದ ಮಹನೀಯರಿಗೆ ನಮನ ಸಲ್ಲಿಸಿ ಹಿಂದಿರುಗಿ ನೋಡದೆ ಕಾರಿನೆಡೆ ಹೆಜ್ಜೆ ಹಾಕಿದೆವು.
ನಮ್ಮ ಕಾರು ಅಲ್ಲಿಯೇ ನಿಂತಿತ್ತು. ಅದೇ ಬಣ್ಣ. ಅದೇ ಕ್ಲಚ್. ಅದೇ ಆಕ್ಸೆಲೆರೇಟರ್. ಅದೇ ಬ್ರೇಕ್. ಅದೇ ಸ್ಟಿಯರಿಂಗ್ ಚಕ್ರ. ನಾವೂ ಅವರೇ.
ಮನೆಯೆಡೆ ಗಾಡಿ ಹೊರಟಿತು.
8 comments:
"What the caterpillar calls the end of the world, the Master calls a butterfly."(Bach)
Very nice! Thanks for a wonderful comment.
Your post is about the contrasting situations of rejoicing and mourning. So, this quote
from Samuel Langhorne Clemens is more apt.
"Why is it that we rejoice at a birth and grieve at a funeral? It is because we are not the person involved."
amar, thank you for your quote. Mark Twain's statement appears frivolous in the beginning, but it is actually not.
What I meant to talk about in my post was the continuity of life itself. Regardless of anything, life goes on, in its own way. The title of my post, of course, is meant to show that.
ನಿಮ್ಮ ಪೋಸ್ಟ್ ಓದಿದ ಮೇಲೆ, ಈ ಶ್ಲೋಕ ಜ್ಞಾಪಕ ಬರುತ್ತೆ -"ಪುನರಪಿ ಜನನಂ, ಪುನರಪಿ ಮರಣಂ... ... ..."
Thanks - I had overlooked the title. Now that you mention it, the theme of your post is indeed very beautiful: life goes on...
Was the title and the post inspired by Mankutimma? .... maduvego, masanako ...
Thank you again for delving deep into the ocean of our old literature and bringing up such priceless pearls of wisdom!
Prashanth and Amar,
Thank you for your comments.
It does remind you of punarapi jananam. And yes, the title and post were inspired by my favorite work - Mankutimmana kagga.
But the events in the post actually happened - which is the real reason for that post.
Post a Comment