Sunday, July 15, 2007

ಆಷಾಢಸ್ಯ ಪ್ರಥಮದಿವಸೇ

ಇಂದು ಆಷಾಢಮಾಸದ ಮೊದಲ ದಿನ.

"ಆಷಾಢವೆಂದರೆ ಯಾವ ಶುಭಕಾರ್ಯಕ್ರಮವೂ ಇರದ ತಿಂಗಳು. ಯಾವ ದೊಡ್ಡ ಹಬ್ಬವೂ ಇಲ್ಲದ ಮಾಸ." ಎಂದು ಎಲ್ಲರೂ ತಿಳಿಯುವ ವಿಷಯ. ಆದರೆ ಕೆಲವರಿಗೆ ಇದು ಹಬ್ಬ. ಅದೂ ಈ ಮಾಸದ ಮೊದಲ ದಿವಸ.

"ಟಾಟಾ ಇಂಡಿಕಾಮ್" ನ ಜಾಹಿರಾತಿನಲ್ಲೊಬ್ಬಳು "ಐ ಲವ್ ಯೂ" ಎಂದು ಮೂರು ಬಾರಿ ಹೇಳಿದ ಬಳಿಕ ಆ ಕಡೆ ಕೇಳಿಸದಿದ್ದರಿಂದ ಆ ಫೋನಿಗೆ "ಐ ಹೇಟ್ ಯೂ" ಎಂದು ಜುಗುಪ್ಸೆಯಿಂದ ಹೇಳುತ್ತಾಳೆ. "ನಾ ನಿನ್ನ ಪ್ರೀತಿಸುವೆ" ಅನ್ನುವ ಮಾತನ್ನು ಹೇಳಲು ಕೂಡ ತಾಳ್ಮೆಯಿಲ್ಲದ ಜನಾಂಗವಾಗಿದ್ದೇವೆ.

ಈ-ಮೈಲ್ ಯುಗದ ಈ ಕಾಲದಲ್ಲಿ ಸಂದೇಶಗಳು ನಿತ್ಯನಿರಂತರ ಪ್ರವಹಿಸುತ್ತಿರುತ್ತವೆ. ನಮಗೆ ಸಂವಹನವೆಂದರೆ ಎಷ್ಟು ಸುಲಭ! ಮನಸ್ಸಿಗೆ ಬಂದವರನ್ನು ಮನಸ್ಸಿಗೆ ಬಂದಾಗ ಸಂಪರ್ಕಿಸಬಹುದು. ಈ ಕಡೆಯಲ್ಲಿ ಅವರ ಸೆಲ್, ಆ ಕಡೆ ಇನ್ನೊಬ್ಬರದ್ದು. ಮಾತಿಗೆ ಮೊದಲಿಡುವುದು ಬಹಳ ಸುಲಭ. ಆದರೆ ಇಪ್ಪತ್ತು ವರ್ಷಗಳ ಹಿಂದೆ ಹಾಗಿರಲಿಲ್ಲವಲ್ಲ! ಫೋನ್ ಎಂದರೆ ಕಷ್ಟ. ಎಲ್ಲ ಪತ್ರವ್ಯವಹಾರವೇ! ಇನ್ನೂರು ವರ್ಷಗಳ ಹಿಂದೆ? ಹೋಗಲಿ, ಸಾವಿರ ವರ್ಷಗಳ ಹಿಂದೆ?

ಸಂವಹನದ ಅಗತ್ಯ ಎಲ್ಲರಿಗೂ ಇದೆ. ಆದರೆ ಇದರ ಅಗತ್ಯ ಆಗುವುದು ವಿಶೇಷವಾಗಿ ಪ್ರೇಮಿಗಳಿಗೆ. ಈಗಿನ ಕಾಲದಲ್ಲಿ ನಾನು ಮೊದಲೇ ಹೇಳಿದ ಹಾಗೆ ಸಂವಹನದ ಭೌತಿಕ ಕಂದಕವನ್ನು ನಾವು ದಾಟಿದ್ದೇವೆ. ಏನನ್ನು ಹೇಳಲು ಬಯಸುತ್ತಾರೋ - ಅದೇ ಮಾನಸಿಕ ಮತ್ತು ಬೌದ್ದಿಕ ಕಂದಕಗಳು - ಅದನ್ನು ಮೀರಿಸುವ ಕಷ್ಟ ಇದ್ದೇ ಇದೆ. ನಾವಿರುವವರೆಗೂ ಇರುತ್ತದೆ.

ಈಗ ಊಹಿಸಿಕೊಳ್ಳಿ. ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಕಾಲ. ಅವನು ಬೇಸಿಗೆಯ ಬೇಗೆಯಲ್ಲಿ ತಪ್ತನಾಗಿ ಈಗಿನ ಆಂಧ್ರಪ್ರದೇಶದ ಆಸುಪಾಸಿನಲ್ಲಿದ್ದಾನೆ. ಅವಳು ಹಿಮಾಲಯದ ತಣ್ಣನೆಯ ವಾತಾರವರಣದಲ್ಲಿದ್ದರೂ ವಿರಹದ ಬೇಗೆಯಿಂದ ಬೇಯುತ್ತಿದ್ದಾಳೆ. ಈ ಪ್ರೇಮಿಗಳ ಸಂಪರ್ಕ ಹೇಗೆ ತಾನೆ ಸಾಧ್ಯ? ಒಳ್ಳೆಯ ಕಾವ್ಯಕ್ಕೆ ವಸ್ತುವಾಗಬಲ್ಲುದು ಈ ಸಂಪರ್ಕ. ಆಗಿದೆ ಕೂಡ.

ಈ ವಸ್ತುವನ್ನೇ ನಮ್ಮ ಕವಿಕುಲಕ್ಕೆ ಗುರುವೆನಿಸಿಕೊಂಡ ಕಾಲಿದಾಸನು ತನ್ನ ಮೇಘದೂತದಲ್ಲಿ ವಿಸ್ತರಿಸಿದ್ದಾನೆ. ಮುಂಚೆ ವರ್ಣಿಸಿದ ಪರಿಸ್ಥಿತಿಯಲ್ಲಿ ಸಿಲುಕಿದ ಆ ಪ್ರೇಮಿಗೆ ಯಾವ ದಾರಿಯೂ ಕಾಣದೆ - ಹಾಗೆ ಕಂಡ ಮೋಡವೊಂದನ್ನು ತನ್ನ ದೂತನನ್ನಾಗಿ ಮಾಡಿ ತನ್ನ ಪ್ರಿಯತಮೆಗೆ ಸಂದೇಶ ನೀಡುವುದೇ ಈ ಕಾವ್ಯದ ವಸ್ತು.

ಆ ಮೋಡವನ್ನು ನಮ್ಮ ನಾಯಕ ಕಂಡದ್ದು ಆಷಾಢದ ಮೊದಲನೇ ದಿವಸ. ಆ ಕಾವ್ಯದ ರಸವನ್ನನುಭವಿಸಿದ, ಕಾಲಿದಾಸನ ಅಭಿಮಾನಿಗಳಿಗೆ ಈ ದಿನ ಹಬ್ಬವಲ್ಲದೇ ಮತ್ತೇನು? ಸುಮಾರು ನೂರಹತ್ತು ಮಂದಾಕ್ರಾಂತಾ ಛಂದಸ್ಸಿನ ಪದ್ಯಗಳಲ್ಲಿ ಯಕ್ಷನ ಸಂದೇಶವನ್ನು ಮೇಘಕ್ಕೆ ತಿಳಿಸುತ್ತಾನೆ.

ಇದರ ಮೊದಲ ಪದ್ಯ :
ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ ಪ್ರಮತ್ತಃ
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇನ ಭರ್ತುಃ
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಚ್ಛಾಯಾತರುಷು ವಸತಿಂ ರಾಮಗಿರ್ಯಾಶ್ರಮೇಷು ||

ಇದರ ಸ್ಥೂಲಾರ್ಥ: ಒಬ್ಬ ಯಕ್ಷನು ತನ್ನ ಸ್ವಾಮಿಯಿಂದ ಕೊಟ್ಟ ಶಾಪದಿಂದ ತನ್ನ ಮಹಿಮೆಯನ್ನು ಕಳೆದುಕೊಂಡವನಾಗಿ ಒಂದು ವರ್ಷ ತನ್ನ ಪ್ರೇಯಸಿಯಿಂದ ದೂರನಾಗಿ ಜನಕನ ಮಗಳ (ಸೀತೆಯ) ಸ್ನಾನದಿಂದ ಪಾವನವಾದ ಝರಿಗಳ ಮರಗಳ ಸ್ನಿಗ್ಧವಾದ ನೆರಳಿನಿಂದ ಕೂಡಿದ ರಾಮಗಿರಿಯ ಪ್ರದೇಶದಲ್ಲಿ ವಸತಿಯನ್ನು ಮಾಡಿದನು.

ಇದರ ಹಿಂದಿನ ಕಥೆ ಹೀಗೆಂದು ಊಹಿಸಲಾಗಿದೆ. ಈ ಯಕ್ಷನು ಯಕ್ಷರ ರಾಜಧಾನಿಯಾದ ಅಲಕಾಪುರಿಯಲ್ಲಿ ಕುಬೇರನ ತೋಟದ ಮಾಲಿ. ಒಮ್ಮೆ ಇಂದ್ರನು ಐರಾವತವನ್ನು ತೋಟಕ್ಕೆ ತಂದಾಗ ತನ್ನ ಒಡೆಯನ ಮಿತ್ರನ ವಾಹನವನ್ನು ತೋಟದೊಳಗೆ ಬಿಡಲಾರದೆ ಬಿಟ್ಟಾಗ ತೋಟಕ್ಕೆ ಹಾನಿಯಾಗುತ್ತದೆ. ಕುಬೇರನು ಇದನ್ನು ತಿಳಿದು ಒಂದು ವರ್ಷದ ಮಟ್ಟಿಗೆ ತನ್ನ ಮಾಲಿಯನ್ನು ಗಡೀಪಾರು ಮಾಡುತ್ತಾನೆ. ಈ ಗಡೀಪಾರು ಓದುಗರಾದ ನಮಗೆ ಒಳ್ಳೆಯ ಕಾವ್ಯಾಸ್ವಾದವನ್ನು ಮಾಡಿಸುತ್ತದೆ.

ಒಂದು ವರ್ಷ ತನ್ನ ಹೆಂಡತಿಯಿಂದ ದೂರವಿದ್ದ ಯಕ್ಷನ ವಿರಹದ ಬೇಗೆ ರಾಮಗಿರಿಯ ಬಿಸಿಲನ್ನೂ ಮೀರಿತ್ತು. ತಾಳಲಾರದ ವಿರಹದಿಂದ ನಮ್ಮ ಯಕ್ಷನೇನು ಮಾಡಿದ?

ತಸ್ಮಿನ್ನದ್ರೌ ಕತಿಚಿದಬಲಾವಿಪ್ರಯುಕ್ತಃ ಸ ಕಾಮೀ
ನೀತ್ವಾ ಮಾಸಾನ್ ಕನಕವಲಯಭ್ರಂಶರಿಕ್ತಪ್ರಕೋಷ್ಠಃ |
ಆಷಾಢಸ್ಯ ಪ್ರಥಮದಿವಸೇ ಮೇಘಮಾಶ್ಲಿಷ್ಟಸಾನುಮ್
ವಪ್ರಕ್ರೀಡಾಪರಿಣತಗಜಪ್ರೇಕ್ಷಣೀಯಂ ದದರ್ಶ ||

ಸ್ಥೂಲಾರ್ಥ: ಆ ರಾಮಗಿರಿಯಲ್ಲಿ ತನ್ನ ಸ್ತ್ರೀಯ ವಿರಹದಲ್ಲಿ ತಿಂಗಳುಗಳನ್ನು ಕಳೆದ ಆ ಪ್ರೇಮಿಯ ಮಣಿಕಟ್ಟಿನ ಪ್ರದೇಶ ಚಿನ್ನದ ಕಂಕಣ ಅದನ್ನು ಬಿಟ್ಟು ಜಾರಿದ್ದರಿಂದ ಬರಿದಾಗಿತ್ತು. ಆಗ ಆಷಾಢ ಮಾಸದ ಮೊದಲ ದಿವಸ ಬೆಟ್ಟವನ್ನಾಲಿಂಗಿಸಿದ, ಆನೆಯು ತಿವಿದು ಆಡುತ್ತಿರುವಂತೆ ಮನೋಹರವಾಗಿ ಕಂಡ ಮೇಘವನ್ನು ಕಂಡನು.

ಆ ಮಣಿಕಟ್ಟಿನ ಪ್ರದೇಶ ಎಷ್ಟು ವಿರಹವನ್ನು ತನ್ನ ಬರಿದಾಗುವಿಕೆಯಿಂದ ಹೇಳುತ್ತದೆ!

ಕನ್ನಡದಲ್ಲಿ ಬೇಂದ್ರೆಯವರು ಮೇಘದೂತದ ಪದ್ಯಾನುವಾದ ಮಾಡಿದ್ದಾರೆ. ಅದರಲ್ಲಿ "ಕನಕವಲಯಭ್ರಂಶರಿಕ್ತಪ್ರಕೋಷ್ಠಃ" ದ ಅನುವಾದ ಹೇಗೆ ಮಾಡಿದ್ದಾರೋ ತಿಳಿಯದು. ಆದರೆ ಸಂಸ್ಕೃತದ ಹಲವು ಶಕ್ತಿಗಳಲ್ಲಿ ಇಂಥ ಪದವನ್ನು ನಾಮಪದವನ್ನಾಗಿ ಮಾಡುವುದೂ ಒಂದು. ಹೆಚ್ಚು ಅಕ್ಷರಗಳನ್ನು ತೆಗೆದುಕೊಳ್ಳದೆಯೇ ಅಷ್ಟನ್ನು ಹೇಳುವುದು ಸಂಸ್ಕೃತದ ಜಾಡು.

ಮೇಘದೂತದ ಮೊದಲ ಐದು ಪದ್ಯಗಳು ಮಾತ್ರ ಕವಿ ಹೇಳುವವು. ಇದಾದ ಮೇಲೆ ಎಲ್ಲ ಯಕ್ಷ ಮೇಘವನ್ನುದ್ದೇಶಿಸಿ ಹೇಳುವುದೇ. ಅಚೇತನವಾದ ಮೇಘವನ್ನೇ ಏಕೆ ದೂತನ್ನನಾಗಿ ಮಾಡಿದನೆಂಬುದಕ್ಕೆ ಐದನೆ ಪದ್ಯ ಹೀಗೆ.

ಧೂಮಜ್ಯೋತಿಃಸಲಿಲಮರುತಾಂ ಸನ್ನಿಪಾತಃ ಕ್ವ ಮೇಘಃ
ಸಂದೇಶಾರ್ಥಾಃ ಕ್ವ ಪಟುಕರಣೈಃ ಪ್ರಾಣಿಭಿಃ ಪ್ರಾಪಣೀಯಾಃ |
ಇತ್ಯೌಸುಕ್ಯಾದಪರಿಗಣಯನ್ ಗುಹ್ಯಕಸ್ತಂ ಯಯಾಚೇ
ಕಾಮಾರ್ತಾ ಹಿ ಪ್ರಕೃತಿಕೃಪಣಾಶ್ಚೇತನಾಚೇತನೇಷು ||

ಧೂಮ, ಜ್ಯೋತಿ, ನೀರು ಮತ್ತು ಗಾಳಿಗಳ ಕೂಡಿಕೆಯಲ್ಲವೇ ಮೋಡ? ಸಂದೇಶಗಳು ಪಟುವಾದ ಕರಣಗಳುಳ್ಳ (ಅಂದರೆ ಜ್ಞಾನೇಂದ್ರಿಯಗಳು ಚೆನ್ನಾಗಿರುವ) ಚೇತನವಾದ ಪ್ರಾಣಿಗಳಿಂದ ತಾನೆ ಒಯ್ಯಲ್ಪಡಬೇಕು? ಆದರೂ ಉತ್ಸುಕತೆಯಿಂದ (ನಮ್ಮ ಯಕ್ಷನಿಗೆ ಬೇರೇನೂ ಕಂಡಿರಲಿಲ್ಲವೇನೋ? ಅಥವಾ ವಿರಹದ ಔತ್ಸುಕ್ಯ ಪರಾಕಾಷ್ಠೆಯನ್ನು ಆಗ ಮುಟ್ಟಿತೋ?) ಇದನ್ನು ಯೋಚಿಸದೆ ಯಕ್ಷನು ಮೋಡವನ್ನೇ ಬೇಡಿದನು. ವಿರಹತಪ್ತರಾದವರು ಚೇತಾನಾಚೇತನಗಳ ನಡುವೆ ಭೇದವನ್ನೆಂದು ಎಣಿಸುವರು?

ಹೀಗೆ ಮೊದಲಾಗುತ್ತದೆ ಯಕ್ಷನ ಸಂದೇಶ. ಮೋಡವನ್ನು ಹೊಗಳಿ ಒಲಿಸಿಕೊಂಡು, ರಾಮಗಿರಿಯಿಂದ ಅಲಕಾಪುರಿಗೆ (ಯಕ್ಷರ ಒಡೆಯನಾದ ಕುಬೇರನ ನಗರ) ಹೇಗೆ ಹೋಗಬೇಕು ಎಂಬುದನ್ನು ವಿವರವಾಗಿ ಹೇಳುವುದೇ ಪೂರ್ವ ಮೇಘ. ಅಲಕಾಪುರಿಯಲ್ಲಿ ನಡೆಯುವ ಸಂಗತಿಯು ಉತ್ತರಮೇಘದ್ದು.

ಒಂದೊಂದು ಪದ್ಯವೂ ಸುಮನೋಹರವಾಗಿದೆ. ಭಾವ ಉಕ್ಕಿ ಹರಿಯುತ್ತದೆ. ಇದನ್ನು ಓದಿಯೇ ಆಸ್ವಾದಿಸಬೇಕು!

ಶತಾವಧಾನಿ ಆರ್. ಗಣೇಶರು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮೇಘದೂತದ ಬಗ್ಗೆ ಉಪನ್ಯಾಸಮಾಲೆಯನ್ನು ಮಾಡಿದ್ದರು. ಎರಡು ಎಂ.ಪಿ.೩ ಸಿ.ಡಿ.ಯಷ್ಟಿರುವ ಈ ಉಪನ್ಯಾಸ ಬಹಳ ಸೊಗಸಾಗಿದೆ. ಇದನ್ನು ಕೇಳಿ, ಮೇಘದೂತವನ್ನು ಕೊಂಡು ತಂದೆ. ಮೇಘದೂತವನ್ನು ಓದಲಾರದೆ ಇರುವವರು ಈ ಸಿ.ಡಿ.ಯನ್ನಾದರೂ ಕೇಳಬೇಕು. ಎಷ್ಟು ಸೊಗಸು! ಕಾರ್ಯಾಲಯಕ್ಕೆ ಕಾರಿನಲ್ಲಿ ಹೋಗುವಾಗ ಈ ಮೇಘದೂತವೂ ನನ್ನೊಂದಿಗೆ ಹಲವು ದಿನಗಳ ಮಟ್ಟಿಗೆ ಜೊತೆ ನೀಡಿತು.

ಮೋಡಗಳನ್ನು ಕಾಣುವುದೇ ಈಗ ಬೇರೆಯ ನೋಟದಿಂದ.

ಇಂದು ಆಷಾಢದ ಮೊದಲ ದಿವಸವೆಂದು ತಿಳಿದು ಅದರ ಸಂತಸವನ್ನು ಹಂಚಿಕೊಳ್ಳೋಣವೆಂದು ಈ ಲೇಖನ ಬರೆದೆ.

|| ಇತಿ ಶಮ್ ||

7 comments:

Aram said...

Meghasandeshas were possible only when there were meghas.

The Hindustani romantics were not ones to give up easily if there were no clouds. They were equally at ease in using a papiha or even a bhanvra to send their love mails. (Jaa jaa rey bhanvraa jaa, bhanvraa jaa... sandesaa moraa le jaa.... - Kumar Gandharv).

I don't see such romanticism and fertile imagination in the South.

Perhaps, the Southies prefer to practise romance rather than writing or singing about it.

nIlagrIva said...

kAlidAsa's meghadUta was the precursor to a host of "dUta" literature utilizing among various agents - a swan, a pigeon as you mentioned, a bee and even a frog.

South India has its share of romanticism - but not in its music in the 20th century. Carnatic classical music had its romantic jAvaLis which were popular when kings ruled. But with democracy in India, South Indian music and dance (primarily sadir or bharatanATyam) came to be endowed with lot of "maDi". The love between a man and woman was always stretched to mean the longing of a soul for God.

Are you, by any chance, implying that kAlidAsa is North Indian? Ujjain would belong to North India.

Anyway, being a "South Indian", I resent this infliction of "rules" upon what was once a free society. I suppose karnATaka is freer in this aspect than TN.

Works of kAlidAsa like meghadUta, and shAkuntalaM give us a glimpse of how free Indian society was then. Studying those now almost makes us feel that we are reading about an alien culture, whereas it is really the core of our ethos.

Aram said...

while I would hate to ruin your joyous mood of the first day of Ashadha, I wonder how the name Ashadhabhuti came into popularity.

parijata said...

ಒಳ್ಳೆಯ ಲೇಖನ.
ಮೇಘದೂತದ ಬಹಳಷ್ಟು ಸೌಂದರ್ಯ ಅದರ ಛಂದಸ್ಸಿನಿಂದ ಬಂದಿದ್ದು ಎಂದು ನನ್ನ ಭಾವನೆ. ಮಂದಾಕ್ರಾಂತಾ ವೃತ್ತದಲ್ಲಿ ನಾಲ್ಕು ಗುರುಗಳಾದ ಒಡನೆಯೇ ಐದು ಲಘುಗಳು ಬಂದು, ಆ ಎಳೆತ ಮತ್ತು ಓಟಗಳು ಯಕ್ಷನ ಮನಃಸ್ಥಿತಿಯನ್ನೇ, ಅಂದರೆ ಒಮ್ಮೆ ಮಧುರಸ್ವಪ್ನವನ್ನು ನೋಡುವುದನ್ನು, ಮಗುದೊಮ್ಮೆ ವಿರಹದ ತಾಪದಲ್ಲಿ ಬೇಯುವುದನ್ನು ಬಿಂಬಿಸುತ್ತವೆಯಲ್ಲವೆ?

ಭಾಮಹ ತನ್ನ ಕಾವ್ಯಾಲಂಕಾರದಲ್ಲಿ 'ಮೇಘವು ಪ್ರಿಯರಿಗೆ ಸಂದೇಶವನ್ನು ತಲುಪಿಸುತ್ತದೆಯೆಂಬುದು ಸಾಧ್ಯವಾಗದೆ ಇರುವುದರಿಂದ ಅದು ಅನುಚಿತ' ಎಂಬ ಧೋರಣೆಯನ್ನು ತಾಳಿದ್ದಾನೆ. ಅದನ್ನು ಓದಿದಾಗಿನಿಂದ ನನಗೆ ಭಾಮಹನಲ್ಲಿ ರುಚಿಯೇ ಹುಟ್ಟುತ್ತಿಲ್ಲ !

ಮೇಘದೂತದ ಒಂದೊಂದು ಪದ್ಯವನ್ನೂ ನೆನೆಯುತ್ತಿದ್ದರೆ ಎಲ್ಲಿಯೋ ಕಳೆದುಹೋಗುವ ಅನುಭವ ಆಗುತ್ತದೆ!

nIlagrIva said...

Aram,
The word AShADhabhUti, meaning hypocrite, refers to those holy-ash wearing unholy-thought thinking people. AShADha-bhUti comes from people wearing bhasma only.

PArijAta,
Thanks for the comment.

bhAmaha, in that statement, has erred to put it mildly.

The observation on the Chandas is very nice. People in navya Kannada literature keep thinking that prosody is an unnecessary impediment to poetic expression. But Chandas in my mind is like the cooking process that goes into the dish. It may be tedious. If you just have rice that is not cooked in the proper manner, will it be as palatable? Different cooking procedures bring out different qualities of the rice. And so it is with Chandas.

Aram said...

I used to love the romance in poetry in my school and college days.

One of my many favorites then was the late John Brough's Poems From The Sanskrit (Penguin Classics 1968 - unavailable now).

I wonder if you had come across the following in the original in Samskruta.

(by an unnamed Indian poet)

"You are pale, friend moon, and do not sleep at night,
And day by day you waste away.
Can it be that you also
Think only of her, as I do?"
<>

Anonymous said...

ನೀಲಗ್ರೀವರೇ,

ಬಹಳ ಚೆನ್ನಾಗಿದೆ ಬರಹ.

ಯಕ್ಷ ಇದ್ದ ರಾಮಗಿರಿಯನ್ನು , ಈಗಿನ ಮಹಾರಾಷ್ಟ್ರದ ರಾಮ್‍ಟೆಕ್ ಎಂದು ಗುರುತಿಸಲಾಗಿದೆ.

ಬೇಂದ್ರೆಯವರ ಮೇಘದೂತ ನನ್ನ ಬಳಿ ಇಲ್ಲ - ಆದರೆ, ಅದರ ಮೊದಲ ಪದ್ಯ ಮಾತ್ರ ಇದೆ ನನ್ನ ಬಳಿ. ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳೋಣವೆನಿಸಿತು:

ಮೂಲ:
ಕಶ್ಚಿತ್ ಕಾಂತಾ ವಿರಹ ಗುರುಣಾ ಸ್ವಾಧಿಕಾರಾತ್ ಪ್ರಮತ್ತಃ
ಶಾಪೇಣ ಅಸ್ತಂಗಮಿತ ಮಹಿಮಾ ವರ್ಷ ಭೋಗ್ಯೇಣ ಭರ್ತುಃ |
ಯಕ್ಷಶ್ಚಕ್ರೇ ಜನಕ ತನಯಾ ಸ್ನಾನ ಪುಣ್ಯೋದಕೇಷು
ಸ್ನಿಗ್ಧಃ ಛಾಯಾ ತರುಷು ವಸತಿಂ ರಾಮಗಿರ್ಯಾಶ್ರಮೇಷು ||

ಬೇಂದ್ರೆಯವರ ಅನುವಾದ:

ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು
ಶಪಿತ ವರುಷವನು ಕಳೆಯಲಾಗದೆ ಮಹಿಮೆ ಕಳೆದುಕೊಂಡು |
ಜನಕತನಯೆ ಮಿಂದುದುದಕಗಳಲಿ ತಣ್ಣೆಳಲ ಅಂಗಳಲ್ಲಿ
ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ ||

-ನೀಲಾಂಜನ