ನಿನ್ನೆ ನಾನು ಒಬ್ಬರ ಭಾಷಣವನ್ನು ಕೇಳಿದೆ. ಕನ್ನಡ ಸಾಹಿತ್ಯದ ಸ್ಥೂಲಪರಿಚಯ ಮಾಡಿಸಲು ಏರ್ಪಡಿಸಿದ್ದ ಭಾಷಣವದು. ಭಾಷಣಾಕಾರರು ತಿಳಿದವರು. ಕನ್ನಡಸಾಹಿತ್ಯವನ್ನು ಆಮೂಲಾಗ್ರವಾಗಿ ಅಭ್ಯಸಿಸಿ ಕೃಷಿ ಮಾಡಿದಂಥವರು. ಮಾತೆಲ್ಲವೂ ಚೆನ್ನಾಗಿತ್ತು. ಭಾಷಣದ ನಂತರ ಅವರೊಡನೆ ಮಾತಾಡುವಾಗ ಅವರು ಹೇಳಿದ ಒಂದು ಮಾತು ಹೀಗಿತ್ತು. ಅವರ ಪ್ರಕಾರ - 'ಮಾನವನು ಪೂರ್ಣ ವೈಚಾರಿಕತೆಯನ್ನು ಮೊರೆಹೊಕ್ಕರೆ ಅವನು ಕಾಣುವುದು ನಾಸ್ತಿಕತೆಯನ್ನು'. ಅವರು ಸಮರ್ಥಿಸಿದ್ದು ಚಾರ್ವಾಕರನ್ನು ಲೋಕಾಯತರನ್ನು. ಅದನ್ನು ಕೇಳಿ ನಾನು ಚಕಿತನಾದೆ. ವಿಚಾರಮಾಡಿದರೆ ನಾಸ್ತಿಕರಾಗುವರೆ ? ನಾನೊಬ್ಬ ವಿಚಾರವಂತನೆಂದು ನನ್ನ ಭಾವನೆ. ಇನ್ನೂ ಇವರ ಮಟ್ಟಕ್ಕೆ ವಿಚಾರವಂತನಾಗದೆ ಇರಬಹುದು. ಆದರೆ ಮೇಲ್ನೋಟಕ್ಕೆ ಮತ್ತು ಸ್ವಲ್ಪ ಒಳಗೆ ನೋಡಿದರೂ ಸಹ ನಾಸ್ತಿಕತೆಯೇ ಎಲ್ಲಕ್ಕೂ ಉತರವಲ್ಲ ಎಂದು ತಿಳಿಯುತ್ತದೆ.
ನಾಸ್ತಿಕನೆಂದರೆ ನನ್ನ ಪ್ರಕಾರ ನಮಗಿಂತ ದೊಡ್ಡ ಶಕ್ತಿಯಲ್ಲಿ ನಂಬಿಕೆಯಿಲ್ಲದಿರುವುದು. ಕೇವಲ ನಂಬಿಕೆಯಿಲ್ಲದಿರುವುದಲ್ಲ, ಇಲ್ಲವೇ ಇಲ್ಲ (ನಾಸ್ತಿ) ಎಂದು ದೃಢವಾಗಿ ತಿಳಿಯುವುದು. ಎಷ್ಟರ ಮಟ್ಟಿಗೆ ಇದು ಸಮಂಜಸ ಎಂದು ವಿಚಾರಿಸಬೇಕು. ಲೋಕಾಯತ ಎಂಬುದು ಪ್ರತ್ಯಕ್ಷವನ್ನು ಮಾತ್ರ ನಂಬುವಂಥ ದರ್ಶನ. ಅನುಮಾನವನ್ನು ಸಹ ನಿರಾಕರಿಸುತ್ತದೆ. ಅಗ್ನಿ, ಪೃಥ್ವಿ, ವಾಯು ಮತ್ತು ಜಲ ತತ್ತ್ವಗಳ ಸಮ್ಮಿಲನದಿಂದ ಉಂಟಾಗುವ ಜೀವವು ಅಥವಾ ದೇಹವು ಅಂತ್ಯದಲ್ಲಿ ಅಯಾ ತತ್ತ್ವಗಳಲ್ಲೇ ಲೀನವಾಗಿಹೋಗುತ್ತದೆ. ಈ ಸಿದ್ಧಾಂತದ ಪ್ರಕಾರ ದೇಹಾತಿರಿಕ್ತವಾದ ಜೀವವಿಲ್ಲ. ದೇಹಾಂತ್ಯದ ಜೊತೆಗೆ ಜೀವಾಂತ್ಯ. ಜನ್ಮಾಂತರಗಳನ್ನು ದೇವರನ್ನು ಅತೀಂದ್ರಿಯಶಕ್ತಿಗಳನ್ನು ನಂಬದ ಈ ಸಿದ್ಧಾಂತ ಪಾಪಪುಣ್ಯಗಳನ್ನೂ ನಂಬುವುದಿಲ್ಲ. ಋಣಂ ಕೃತ್ವಾ ಘೃತಂ ಪಿಬೇತ್ ಎಂಬುದು ಈ ಸಿದ್ಧಾಂತದ ಸಾರ. ಹೇಗೇ ಇರಲಿ ದೈಹಿಕ ಸುಖಗಳನ್ನು ಅನುಭವಿಸುವುದೇ ಜೀವನದ ಪರಮ ಗುರಿ. ಅರ್ಥಕಾಮಗಳನ್ನು ಮಾತ್ರ ನಂಬುತ್ತದೆ ಈ ಸಿದ್ದಾಂತ.
ಈ ಸಿಧ್ಡಾಂತದ ಉದಯಕ್ಕೆ ಕಾರಣವಿರಲೇಬೇಕು. ಸಮಾಜದಲ್ಲಿ ಧರ್ಮಾಂಧತೆ ಹರಡಿ ದೇವರು ಹಾಗೂ ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ ನಡೆದಾಗ ಸ್ವಾಭಾವಿಕವಾದ ದಂಗೆಯಂತೆ ಎದ್ದಿರಬೇಕು ಈ ಸಿದ್ಧಾಂತ. ಆದರೆ ಜನಪ್ರೀತಿ ಇದರಲ್ಲಿದ್ದಿತೆಂದು ಮರೆಯಬಾರದು. ಈ ಸಿದ್ಢಾಂತವು ಬೇರೆಲ್ಲ ಜೀವನದರ್ಶನಗಳ ಹಾಗೆ ಮಾನವನ ಪರಮಸುಖವನ್ನೇ ತನ್ನ ಗುರಿಯಾಗಿರಿಸಿಕೊಂಡಿದೆ. ತತ್ತ್ವೋಪಪ್ಲವಸಿಂಹ ಎಂಬ ಜಯರಾಶಿಭಟ್ಟ ವಿರಚಿತ ಗ್ರಂಥವು ಈ ದರ್ಶನದ ಉದ್ಗ್ರಂಥಗಳಲ್ಲೊಂದು. ಈ ದರ್ಶನವನ್ನು ಬೇರೆಲ್ಲ ದರ್ಶನಕಾರರು ಖಂಡಿಸಿದ್ದಾರೆ. ಆಯಾ ದರ್ಶನಗಳ ಜೊತೆ ಸಹಮತ ಇರದಿರುವಿಕೆಯೊಂದೇ ಕಾರಣವಲ್ಲ. ಸಮಾಜವೊಂದರ ನಿರ್ಮಾಣವಾಗಬೇಕಾದರೆ ಮಾನವನು ತನಗಿಂತ ಹಿರಿದಾದ ಒಂದನ್ನು ನಂಬಲೇಬೇಕು. ಅದು ದೇವರೇ ಇರಬೇಕೆಂಬುದೇನಿಲ್ಲ. ಸಮಾಜವಿರಬಹುದು ಅಥವಾ ದೇಶವಿರಬಹುದು. ತನಗಿಂತ ದೊಡ್ಡದಿದ್ದರೆ ಸಾಕು. ಇದು ಚಾರ್ವಾಕಪಂಥದಲ್ಲಿ ಇದ್ದ ಹಾಗಿಲ್ಲ. ಇದರಿಂದ ಇದಕ್ಕೆ ರಾಜಾಶ್ರಯ ದೊರೆಯದೆ ಹೋಗಿ ಕ್ರಮೇಣ ನಶಿಸಿಹೋಗಿರಬೇಕು.
ಪ್ರತ್ಯಕ್ಷವನ್ನೇ ಪ್ರಮಾಣವನ್ನಾಗಿ ನಂಬುವ ಈ ಪಂಥ ಅನುಮಾನ ಮುಂತಾದ ಬೇರೆ ಪ್ರಮಾಣಗಳನ್ನು ಸ್ವೀಕರಿಸದೆ ಪ್ರಪಂಚದಲ್ಲಿ ನಡೆಯುವ ವ್ಯಾಪಾರಗಳನ್ನು ಸರಿಯಾಗಿ ನಿರೂಪಿಸದೇ ಹೋಗಿ, ಈ ಸಿದ್ಧಾಂತ ಅಪೂರ್ಣವೆನಿಸಿಕೊಳ್ಳುತ್ತದೆ. ಹೇಗೆ ಎಂದು ನೋಡೋಣ. ಭೂಮಿಯು ಸೂರ್ಯನನ್ನು ಸುತ್ತುತ್ತದೆ ಎಂಬ ಸಾಮಾನ್ಯ ಜ್ಞಾನದ ವಿಷಯ ತೆಗೆದುಕೊಳ್ಳೋಣ. ಅನುಮಾನವೆಂಬ ಪ್ರಮಾಣವಿರದ ಹೊರತು ಈ ಸತ್ಯವನ್ನು ಗ್ರಹಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿಯಾಗಿ ಹಲವು ಉಪಯೋಗಿ ವಸ್ತುಗಳನ್ನು ಮಾನವ ಸೃಷ್ಟಿಸಲು ಸಮರ್ಥನಾಗಿರುವನು. ಉಪಗ್ರಹಗಳನ್ನು ಗಗನದೆಡೆ ಹಾರಿಸಿ ಅವುಗಳಿಂದ ಬಂದ ಮಾಹಿತಿಯನ್ನು ಗ್ರಹಿಸಿ ಉಪಯೋಗಿಸುವನು. ಅನುಮಾನವನ್ನು ನಂಬದೆ ಈ ಪ್ರಗತಿ ಅಸಾಧ್ಯ. ಭೌತಿಕಜಗತ್ತಿಗೆ ಸಂಬಂಧಪಟ್ಟಂಥ ಈ ವಿಷಯದ ವರ್ಣನೆಗೆ ಎಡೆಗೊಡದಿರುವ ಈ ಪಂಥ ಇಂದ್ರಿಯಗಳಿಗೂ ಎಟುಕದ ಆತ್ಮ, ಪರಮಾತ್ಮರ ವಿಶ್ಲೇಷಣೆ ಮಾಡಲು ಸಮರ್ಥವಾದರೂ ಹೇಗಾಗುತ್ತದೆ ? ಇಷ್ಟು ವಿಚಾರವನ್ನು ಮಾಡದೆ ಇರುವವರು ವಿಚಾರವಂತರೆ ? ದೇವರು ಅಜ್ಞೇಯ ಎಂದು ಹೇಳಿದರೆ ಒಪ್ಪಬಹುದು. ಆದರೆ ಇಲ್ಲವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವ್ಕಿಲ್ಲ. ಹಾಗೆಯೇ ಇದೆ ಎಂದು ಸತ್ಯವನ್ನು ಗ್ರಹಿಸದವರು ಹೇಳಲು ಕಷ್ಟ.
ಧರ್ಮದ ದಬ್ಬಾಳಿಕೆ ಸಾಕಷ್ಟಿದ್ದಿರಬೇಕು. ಅದರಿಂದಲೇ ಮಾರ್ಕ್ಸನು 'religion is the opium of the masses' ಎಂದು ಹೇಳಿರಬೇಕು. ಜನಸಾಮಾನ್ಯರ ಜೀವನಕ್ಕೆ ಒಂದು ಹಂತದಲ್ಲಿ ಬೇಡವಾದ ವಿಚಾರ ಧರ್ಮವಿಚಾರ. ಒಣಹೊಟ್ಟೆಯಲ್ಲಿ ವೇದಾಂತ ಎಂದೂ ಸಲ್ಲದು ಎಂದು ಶ್ರೀರಾಮಕೃಷ್ಣಪರಮಹಂಸರೂ ಎಚ್ಚರಿಸಿದ್ದರು. ಇದನ್ನು ನಾವು ಮನಗಾಣಲೇಬೇಕು. ಹೊಟ್ಟೆಗೆ ಹಿಟ್ಟಿಲ್ಲದೆ ಧರ್ಮದ ವಿಚಾರದಲ್ಲಿ ಹೋರಾಡಲು ಹೋಗುವುದು ಯಾವ ವಿವೇಕದ ಮಾತು ? ಊಟ,ವಸತಿ, ವಸನ ಮುಂತಾದ ಅತ್ಯವಶ್ಯಕ ವಸ್ತುಗಳು ದೊರೆತ ನಂತರವೇ ಮನುಷ್ಯನಿಗೆ ಬೇರೆಯ ವಿಚಾರಗಳ ಬಗ್ಗೆ ವಿಚಾರಮಾಡಲು ಸಾಧ್ಯವಾಗಬೇಕು. ಆದರೆ ಧರ್ಮದ ಹೆಸರಿನಲ್ಲಿ ಜನರನ್ನು ಎಳೆದಾಡಿ ಗೋಳಾಡಿಸುವುದನ್ನು ಚರಿತ್ರೆಯಲ್ಲೆಡೆ ನೋಡುತ್ತಾ ಬಂದಿದ್ದೇವೆ. ಇದಕ್ಕೆ ವಿರುದ್ಧಾವಾಗೆದ್ದ ಪಂಥ ಚಾರ್ವಾಕ ಪಂಥ.
ಸಮಾಜದಲ್ಲಿ ಜನರ ಬಗೆ ಹತ್ತು ಹಲವು. ಅವರ ಮನಸ್ಸಿನ ಹಾಗೆ ಅವರ ಅವಶ್ಯಕತೆಗಳಿರುತ್ತವೆ. ಆದರೆ ಒಂದು ಸಮಾಜದಲ್ಲಿ ಸಹಬಾಳ್ವೆ ನಡೆಸಲು ಬಿಡದ ಸಿದ್ಧಾಂತಗಳು ಮನುಷ್ಯನಿಗೆ ಹಾನಿಕಾರಕವೆಂದು ನನ್ನ ಭಾವನೆ. No man is an island ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದಾಗ 'ಒಟ್ಟಿಗೆ ಬಾಳುವ ತೆರದಲಿ ಹರಸು' ವ ಸಿದ್ಧಾಂತಗಳು ನಮಗೆ ಬೇಕಾದವು. ಚಾರ್ವಾಕ ಪಂಥವು ಒಂದು ಕುತೂಹಲಕ್ಕೋಸ್ಕರ ತಿಳಿಯಬಹುದಾದ ದರ್ಶನ. ಆದರೆ ಉತ್ತಮ ಜೀವನಕ್ಕೆ ಎಡೆಗೊಡುವ ದರ್ಶನವಲ್ಲ.
ವಿಚಾರಶಕ್ತಿ ಒಬ್ಬರ ಬುದ್ಧಿಯನ್ನವಲಂಬಿಸಿದ್ದು. ವಿಚಾರ ಮಾಡುವವರ ಅನುಭವವನ್ನವಲಂಬಿಸಿದ್ದು. ಶತಪ್ರತಿಶತ ವಿಚಾರವಾದಿ ಎನ್ನುವರು ಯಾರೂ ಇಲ್ಲ. ಹಾಗಂದುಕೊಂಡವರು ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ ! 'ನಾನೇ ಎಲ್ಲರಿಗಿಂತ ವಿಚಾರವಂತ' ಎಂದು ತಿಳಿಯುವವನು ಅಸಲು ವಿಚಾರವಂತನಲ್ಲ. ವಿಚಾರ ಎಲ್ಲರಲ್ಲೂ ನಾಸ್ತಿಕ್ಯದಲ್ಲಿ ಪರ್ಯವಸಾನಗೊಳ್ಳುವುದಿಲ್ಲ. ಆಸ್ತಿಕ್ಯದಲ್ಲೂ ಅಲ್ಲ! ವಿಚಾರವು ಸೋಪಾನವಾದರೂ ಅದೇ ನೇರವಾಗಿ ಪರಮಾರ್ಥಕ್ಕೆ ಕೊಂಡುಯ್ಯುವುದಿಲ್ಲ ! ಏಕೆಂದರೆ ಪರಮಾರ್ಥವು ಕೇವಲ ವಿಚಾರದಿಂದ ದೊರೆಯುವುದಲ್ಲ!
No comments:
Post a Comment