ಡಿ.ವಿ.ಜಿ ಎಂಬ ಈ ಮೂರಕ್ಷರಗಳು ಇಪ್ಪತ್ತನೆಯ ಹಾಗೂ ಮುಂದಿನ ಶತಮಾನಗಳಲ್ಲಿ ಸಾರಸ್ವತ ಕನ್ನಡಿಗರು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದಂಥವು.
ಈಚಗೆ ಡಿ.ವಿ.ಗುಂಡಪ್ಪನವರ ಸಾಹಿತ್ಯಕ್ಕೆ ಅವರ ಯೋಚನಾಲಹರಿಯೆಂಬ ಆಹ್ಲಾದಕರವಾದ ಗಾಳಿಗೆ ಮನೋಬುದ್ಧಿಯೆಂಬ ಶರೀರವನ್ನು ಒಡ್ಡಿದ್ದೇನೆ. ಇವರನ್ನು ಓದಿದಷ್ಟೂ ಅವರ ಸಾಹಿತ್ಯದಲ್ಲಿ ಮುಳುಗಬೇಕು ಎಂದಷ್ಟೇ ಅಲ್ಲ, ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉತ್ಕಟ ಇಚ್ಛೆ ಮೂಡುತ್ತಿದೆ.
ಇವರ ಕೃತಿದೇವಾಲಯಕ್ಕೆ ಕಳಸಪ್ರಾಯವಾಗತಕ್ಕಂಥ ಕೃತಿ "ಮಂಕುತಿಮ್ಮನ ಕಗ್ಗ". ಕಗ್ಗದ ಬಗ್ಗೆ ನನ್ನ ಅನುಭವ ಹೀಗಿದೆ. ಎಂಟನೇ ತರಗತಿಯಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯವರು ಒಂದು ಕಂಠಪಾಠ ಸ್ಪರ್ಧೆ ಏರ್ಪಡಿಸಿದ್ದರು. ನಮ್ಮ ಶಾಲೆಯಿಂದ ನನ್ನನ್ನೂ ಕಳಿಸಿದ್ದರು. ಕಗ್ಗದಲ್ಲಿ ಆಯ್ದ ನಲವತ್ತು ಪದ್ಯಗಳು ಸ್ಪರ್ಧೆಯಲ್ಲಿದ್ದವು. ಅವುಗಳಲ್ಲಿ ನಲವತ್ತನ್ನೂ ನಾನು ಕಂಠಪಾಠ ಮಾಡಿದ್ದೆ. ಆದರೆ ನೆನಪಿಗೆ ಉಳಿದಿರುವುದು ಇಪ್ಪತ್ತಿರಬಹುದು. ಆ ವಿಷಯ ಹಾಗಿರಲಿ. ಹೆಚ್ಚು ಅರ್ಥವಾಗುವ ವಯಸ್ಸಲ್ಲ ಅದು. ಆದರೂ ನನಗೆ ಆ ಪದ್ಯಗಳಲ್ಲಿ ಏನೋ ಒಂದು ಆತ್ಮೀಯತೆ ಕಂಡಿತು. "ಮಂಕುತಿಮ್ಮ" ಎಂಬ ಸಂಬೋಧನೆ ನನಗೆ ಬಹಳ ಹಿಡಿಸಿತ್ತು. ನಂತರ ಓದದೇ ಬಿಟ್ಟಿದ್ದೆ. ಮಧ್ಯದಲ್ಲಿ ಆಗೊಂದು ಪದ್ಯ ಈಗೊಂದು ಪದ್ಯ ಓದಿದ್ದುಂಟು - ಆದರೆ ಕಗ್ಗದ ಅಭ್ಯಾಸಕ್ಕೆ ಯೋಗ್ಯವಾದಂಥ ಶ್ರದ್ಧೆ ಸಮಾಧಾನಗಳು ಭಾಷೆಯಲ್ಲಿ ಸಾಧನೆಯೂ ಮತ್ತು ಎಲ್ಲದಕ್ಕಿಂಥ ಮುಖ್ಯವಾದ ಜೀವನಾನುಭವ ಇರಲಿಲ್ಲ.
ಈಗೊಂದು ಐದಾರು ತಿಂಗಳುಗಳಿಂದ ಕಗ್ಗವನ್ನು ಸ್ವಲ್ಪ ಗಟ್ಟಿಯಾಗಿ ಹಿಡಿದಿದ್ದೇನೆ. ಡಿ.ವಿ.ಜಿಯವರ ಸಾಹಿತ್ಯವನ್ನು ಎರಡು ವರ್ಷಗಳಿಂದ ಹಿಡಿದಿದ್ದೇನೆ. ಶತಾವಧಾನಿ ಶ್ರೀ ಗಣೇಶರ ವ್ಯಾಖ್ಯಾನದ ಸಹಿತ ಮೂಡಿದ ಕಗ್ಗದ ಧ್ವನಿಮುದ್ರಿಕೆ ಕೇಳಿದಾಗ ನನಗೆ ಕಗ್ಗದ ಹಿರಿಮೆ ಮತ್ತು ಆಳದ ಬಗ್ಗೆ ಸ್ವಲ್ಪ ತಿಳಿಯಲು ಸಾಧ್ಯವಾಯಿತು. ಕಗ್ಗದ ಯಾವುದೇ ಪದ್ಯವನ್ನು ತೆಗೆದುಕೊಂಡರೂ ನಮಗೆ ಕಾಣುವುದು ಛನ್ದೋಬದ್ಧತೆ - ಲಲಿತವಾದ ಭಾಷೆ - ಮತ್ತು ಆಳವಾದ ಲೋಕಾನುಭವದಿಂದ ಹುಟ್ಟಿದ ತತ್ವಮೌಕ್ತಿಕ.
ಕಗ್ಗದಲ್ಲಿ ಹೇಳಿದ ವಿಷಯವನ್ನು "Self improvement" ಪುಸ್ತಕ ರೂಪದಲ್ಲಿ ಬರೆದಿದ್ದರೂ ಅದಕ್ಕೆ "ಬದುಕಲು ಕಲಿಯಿರಿ" ಎಂಬ ಸ್ವಾಮಿ ಜಗದಾತ್ಮಾನಂದರ ಗ್ರಂಥದ ಹಾಗೆ ಜನಾದರಣೆಗೆ ಪಾತ್ರವಾಗುತ್ತಿತ್ತು ಎಂಬುದು ನಿರ್ವಿವಾದ. ಆದರೂ ಡಿ.ವಿ.ಜಿ. ಯವರು ದೊಡ್ಡ ಮನಸ್ಸು ಮಾಡಿ ಲಲಿತಪದ್ಯಗಳ ಮೂಲಕ ತಮ್ಮ ಅಪಾರ ಲೋಕಾನುಭವವನ್ನು ಸಾರಗಟ್ಟಿಸಿ ನಿರೂಪಿಸಿದ್ದಾರೆ. ಇದು ಎಷ್ಟು ಮುಖ್ಯವೆಂದು ಹೇಳುತ್ತೇನೆ. ಡಿವಿಜಿ ಯವರೇ ಹೇಳಿದ ಹಾಗೆ - "ಕವನ ನೆನಪಿಗೆ ಸುಲಭ". ಈ ಅನುಭವದ ಮುತ್ತುಗಳನ್ನು ನೆನಪಿಡಲು ಪದ್ಯವೇ ಸೂಕ್ತರೂಪ. ಒಂದು ಪದ್ಯವನ್ನು ಇಲ್ಲೇ ಬರೆಯುತ್ತೇನೆ. -
"ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ |
ಸಾಮುಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ ? ||
ಮುಟ್ಟಿನೋಡವನ ಮೈಕಟ್ಟು ಕಬ್ಬಿಣಗಟ್ಟಿ |
ಗಟ್ಟಿತನ ಗರಡಿಫಲ - ಮಂಕುತಿಮ್ಮ ||
ವಿಷಯನಿರೂಪಣೆ ಹೇಗಿದೆ ? ಇದನ್ನು ವಿವರಿಸಿ ಪದ್ಯಕ್ಕೆ ನಾನು ಅವಮಾನ ಮಾಡುವುದಿಲ್ಲ. ಎಂಥ ಅನುಭವ ! ಎಂಥ ಹುರಿದುಂಬಿಸುವಂಥ ಪದ್ಯ! ಜೀವನದ ಒಂದು ಸತ್ಯವನ್ನು ಲೀಲಾಜಾಲವಾಗಿ ವಿವರಿಸಿದ್ದಾರೆ. ಅಲ್ಲವೇ ?
ಹೀಗೆಯೇ ಅವರ ಅನೇಕ ಪದ್ಯಗಳು. ಈಗಂತೂ ನಾನು ಕಗ್ಗದ ಪ್ರತಿಯನ್ನು ನನ್ನೊಡನೆ ಸದಾಕಾಲ ಇಟ್ಟುಕೊಂಡಿರುತ್ತೇನೆ. ಬೇಕಾದಾಗ ಅದರಲ್ಲಿ ಮುಳುಗಿ ಒಂದು ಮುತ್ತನ್ನು ತರುವೆನು. ಮೊನ್ನೆ ನೋಡಿದ ಮುತ್ತು ಹೀಗಿದೆ -
ಎಡರು ತೊಡರೆನಲೇಕೆ ? ಬಿಡಿಸು ಮತಿಗಾದನಿತ |
ದುಡಿ ಕೈಯಾದನಿತು; ಪಡು ಬಂದ ಪಾಡು ||
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |
ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||
ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂಥ ತತ್ವಗಳನ್ನು ಅಪೂರ್ವವಾಗಿ ಒಂದು ಪದ್ಯದಲ್ಲಿ ಹೆಣೆದಿದ್ದಾರೆ. ಕರ್ಮಯೋಗದ ತಿರುಳನ್ನು ಇದರಲ್ಲಿಟ್ಟಿದ್ದಾರೆ. ಮೋಕ್ಷದ ಉಪಾಯವನ್ನೂ ಇಲ್ಲೇ ಸೂಚಿಸಿದ್ದಾರೆ. ಹೀಗೆಯೇ ಅನೇಕ ಪದ್ಯಗಳಿವೆ - ಒಂದೊಂದರಲ್ಲೂ ಜೀವನಪ್ರೀತಿ - ಅವರದೇ ಆದ "ವನಸುಮ"ವೆಂಬ ಪದ್ಯದ ಧ್ವನಿ. ಪದ್ಯಗಳಿಗೆ ಮಾರುಹೋದ ನಂತರ ಜೀವನದಲ್ಲಿ ಅಳವಡಿಸಿಕೊಳ್ಳಲು ಇಚ್ಛ್ಯೆಯಾಗುತ್ತದೆ. ಸುಲಭವಲ್ಲ.
ಇದರ ಜೊತೆಗೆ ಡಿ.ವಿ.ಜಿ.ಯವರ ಬಾಳೇ ಕಗ್ಗಕ್ಕೆ ಉದಾಹರಣೆ. ಸುಮ್ಮನೆ ಯಾರೋ ಬೇಕಾಬಿಟ್ಟಿ ಬರೆದದ್ದಲ್ಲ. ಧರ್ಮಶಾಸ್ತ್ರವನ್ನೂ ವೇದಾಂತವನ್ನೂ ಮತ್ತು ಅವುಗಳ ಸಾಧನೆಗೆ ಪೂರಕವಾಗುವಂಥ ಜೀವನದ ಅನುಭವಗಳನ್ನು ತುಂಬಿಸಿಕೊಂಡವರು ಡಿ.ವಿ.ಜಿ. ಅವರ ಶಬ್ದಗಳಿಗೆ ಅವರ ವ್ಯಕ್ತಿತ್ವದಿಂದಲೇ ಶಕ್ತಿ ಬಂದಿದೆ ಎಂದು ಧಾರಾಳವಾಗಿ ಹೇಳಬಹುದು.
ಸದ್ಯಕ್ಕೆ ಇಲ್ಲಿಯೇ ನಿಲ್ಲಿಸುತ್ತೇನೆ. ಆದಾಗ ಒಂದು ಕಗ್ಗದ ಪದ್ಯವನ್ನು ಬರೆದು ನನಗೆ ತೋರಿದ ಅನುಭವವನ್ನೂ ಅದರಲ್ಲಿ ಸೇರಿಸಿ ತಾಳೆ ಹಾಕಲು ನೋಡುತ್ತೇನೆ.
|| ಇತಿ ಶಮ್ ||
1 comment:
I too am a great fan of DVG. His book "DEVARU" turned me from becoming an Aetheist when I was studing PUC in Mysore. Thence, I purchased 40 copies and presented to my friends. They too were greatly helped
Post a Comment