Tuesday, July 12, 2005

ತಮಿಳು ಪುರಾಣ

ನನ್ನ ಹಿಂದಿನ ಬ್ಲಾಗ್-ಲೇಖನ ಸುಲೇಖ ಜಾಲತಾಣದಲ್ಲಿ ಪ್ರಕಟವಾದ ಲೇಖನದ ಬಗ್ಗೆ ಆಗಿತ್ತು. ಇದು ಸ್ವಲ್ಪ ಅದರ ಮೇಲೆಯೇ ಆಗಿದೆ. ಆದರೂ ಕನ್ನಡದಲ್ಲಿ ಬರೆದು ಸ್ವಲ್ಪ ದಿನಗಳಾದ್ದರಿಂದ ಕನ್ನಡದಲ್ಲೇ ಬರೆಯುತ್ತಿದ್ದೇನೆ.

ಈ ರಾಜೀವ ಮಲ್ಹೋತ್ರಾ ಎಂಬುವರ ಲೇಖನದ ಮೇಲೆ ಪ್ರತಿಕ್ರಿಯೆಗಳು ಬಂದವು. ತಮಾಷೆಯ ವಿಷಯವೇನೆಂದರೆ ಇವರಲ್ಲಿ ಯಾರೋ ಪಾರ್ತಿಬ ಎಂಬುವನು ತಮಿಳಿಗೆ ಆದ ಕಾಲ್ಪನಿಕ ಅವಮಾನವನ್ನು ಮನಸ್ಸಿಗೆ ಹಚ್ಚಿಕೊಂಡು ಬಹಳ ಗಲಾಟೆ ಎಬ್ಬಿಸಿದ್ದ. ಒಂದು ವಿಷಯವನ್ನು ಮಾತ್ರ ಹೇಳಬೇಕು - ತಮಿಳರಿಗೆ ವಿಷಯ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು. ಆದರೆ ಅವರೊಡನೆ ಅರ್ಥಪೂರ್ಣವಾಗಿ ವಾದ ಮಾಡುವುದು ಬಹಳ ಕಷ್ಟ.

ತಮಿಳನ್ನು ದಲಿತರ ಜೊತೆಗೆ ಸಂಸ್ಕೃತ ತುಳಿದಿದೆಯಂತೆ. ಎಷ್ಟು ತಮಾಷೆಯಾಗಿ ಈ ವಿಷಯ ಕಂಡರೂ ಬಹಳಷ್ಟು ಜನ ಇದನ್ನು ನಂಬಿದ್ದಾರೆ. ಈ ರೀತಿ ವಾದ ಮಾಡಿದ ಪಾರ್ತಿಬನಿಗೆ ತನ್ನ ಹೆಸರು ಸಂಸ್ಕೃತದ ಪಾರ್ಥಿವದಿಂದ ಬಂದದ್ದು ಎಂದು ಕೂಡ ತಿಳಿಯದೇ ಹೋದ. ಇರಲಿ - ಈ ರೀತಿಯ ಜನಗಳ ಒಂದು ವಿಚಾರ ಸರಣಿಯಿದೆ. ಅದೇನೆಂದರೆ -
೧. ಆರ್ಯ ಎಂಬ ಜನಾಂಗವೊಂದು ಬೇರೆ ದೇಶದಿಂದ ಬಂದಿದೆ.
೨. ಅದು ಬಂದು ಭಾರತದ (ಅಲ್ಲ, ಅಲ್ಲ, ಪ್ರಾಚೀನ ಇಂಡಿಯಾದ) ಮೂಲನಿವಾಸಿಗಳಾದ ದ್ರಾವಿಡರನ್ನು ದಕ್ಷಿಣಕ್ಕೆ ಅಟ್ಟಿತು. ಅವರ ಮತ್ತು ಅವರ ಭಾಷೆಯ ಮೇಲೆ ಅಧಿಕಾರ ನಡೆಸಿತು.
೩. ಆರ್ಯರ ಭಾಷೆಯಾದ ಸಂಸ್ಕೃತವು ಈ ದಬ್ಬಾಳಿಕೆಯ ಸಂಕೇತ.
೪. ಆದ್ದರಿಂದ ಸಂಸ್ಕೃತವನ್ನು ನಾಶಮಾಡಬೇಕು.
೫. ತಮಿಳು ಶುದ್ಧವಾದ ತಾನೇ ತಾನಾಗಿ ಉದ್ಭವಿಸಿದ ಭಾಷೆ. ಇದು ಸಂಸ್ಕೃತಕ್ಕಿಂತಲೂ ಉತ್ಕೃಷ್ಟ.
೬. ನಮ್ಮ ಸಂಘದ ಕಾವ್ಯಗಳು ಎಲ್ಲ ನಷ್ಟವಾಗಿವೆ -(ಅದಕ್ಕೆ ಪ್ರತಿಕೂಲ ವಾತಾವರಣ ಮತ್ತು ಸಂಸ್ಕೃತಗಳೇ ಕಾರಣ!). ಇಲ್ಲದಿದ್ದರೆ ಸಂಸ್ಕೃತಕಾವ್ಯಗಳಿಗಿಂತ ಚೆನ್ನಾಗಿ ನಮ್ಮ ಕಾವ್ಯಗಳೇ ಇವೆ.
೭. ಮೇಲಿನ ಆರು ಅಂಶಗಳು ಆಕ್ಷರಶಃ ನಿಜ. ಯಾರು ಏನೇ ಹೇಳಿದರು, ಎಷ್ಟು ಸಾಕ್ಷಿ ತೋರಿಸಿದರೂ ನಾವು ಅವರ ಮಾತನ್ನು ನಂಬುವುದಿಲ್ಲ.

ಮೇಲಿನ ೭ ಅಂಶಗಳು ಇವರ ವಾದದ ಸಾರಂಶವನ್ನು ಹೊಂದಿವೆ. ನೀವು ಏನೇ ಸಾಕ್ಷಿ ತೋರಿಸಿದರೂ ಅವರ ಏಳನೇ point ಇದೆಯಲ್ಲಾ, ಅದನ್ನು ಮೀರಲು ಸಾಧ್ಯವಾಗುವುದಿಲ್ಲ. ಇಲ್ಲಿ ತಮಿಳಿನ ಪ್ರೇಮಕ್ಕಿಂತ ಹೆಚ್ಚಾಗಿ ಸಂಸ್ಕೃತದ ಬಗೆಗಿನ ದ್ವೇಷ ಎದ್ದು ಕಾಣುತ್ತದೆ. ಈ ರೀತಿ ವಾದ ಮಾಡುವ ಜನರೊಂದಿಗೆ ವಾದ ಮಾಡಲು ಸಾಧ್ಯವಾಗುವುದಿಲ್ಲ.

ಇಂದು ಕಛೇರಿಗೆ ಬರುವ ಸಮಯದಲ್ಲಿ - ಪಂಡಿತರೂ ಸಜ್ಜನರೂ ಆದ ಮಹನೀಯರೊಡನೆ ಇದರ ಬಗ್ಗೆಯೇ ದೂರವಾಣಿ ಚರ್ಚೆ ನಡೆಸಿದೆ. ಅವರು ಹೇಳುವ ಪ್ರಕಾರ - ತಮಿಳಿಗೂ ಸಂಸ್ಕೃತವೇ ಮೂಲ. ಅಥವಾ - ತಮಿಳಿಗೂ ಸಂಸ್ಕೃತಕ್ಕೂ ವೈಷಮ್ಯಕ್ಕಿಂತ ಹೆಚ್ಚಾಗಿ ಸಾಮ್ಯವೇ ಕಾಣುತ್ತದೆ ಎಂದು. ಇದರ ಜೊತೆಗೆ ನಮಗೇ ತಿಳಿದಂತೆ ತಮಿಳಿನ ಮಹಾಕಾವ್ಯವೆನಿಸಿಕೊಂಡ ಸಿಲಪ್ಪದಿಕಾರಂ ಗ್ರಂಥದಲ್ಲಿ ವೇದಗಳ ಉಲ್ಲೇಖ, ವಿಷ್ಣುಪೂಜೆಯ ಉಲ್ಲೇಖವೆಲ್ಲವೂ ಇದೆ. ಇದರ ಜೊತೆಗೆ ಭರತಮುನಿಯ ನಾಟ್ಯಶಾಸ್ತ್ರದ ಉಲ್ಲೇಖವೂ ಹಾಗೆಯೇ ಬರುತ್ತದೆಯಂತೆ. ಹೀಗಿರುವಾಗ ತಮಿಳು ಎಂದು ಸಂಸ್ಕೃತವನ್ನು ದ್ವೇಷಿಸಿತ್ತು?

ಅಷ್ಟೇ ಅಲ್ಲದೆ ತಮಿಳಿನ ಕಾವ್ಯಗಳಲ್ಲಿ ಸಂಸ್ಕೃತಕ್ಕಿಂತ ಭಿನ್ನವಾದ ಅಂಶಗಳು ಕಡಿಮೆಯೇ ಎಂದು ಹೇಳಬಹುದು. ತಮಿಳುನಾಡಿನಲ್ಲೇ ಹಲವು ದೇವಾಲಯಗಳಿರುವುದು. ಸಂಸ್ಕೃತಕ್ಕೂ ಸನಾತನ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಪೂಜೆ ನಡೆಸುತ್ತಿರಲಿಲ್ಲವೇ? ಹೌದು, ಶ್ರೀವೈಷ್ಣವರ ನಾಲಾಯಿರ ದಿವ್ಯಪ್ರಬಂಧವನ್ನು ವೇದಸಮವಾಗಿಯೇ ಕಾಣುತ್ತಾರೆ. ಆದರೆ ಅವರು ಸಂಸ್ಕೃತ ದ್ವೇಷಿಗಳೇ? ಅರವತ್ತುಮೂರು ನಾಯನ್ಮಾರ್ (ಶಿವಭಕ್ತರ) ಗಳ ಚರಿತ್ರೆಯನ್ನೊಳಗೊಂಡ "ಪೆರಿಯಪುರಾಣ" ಕೂಡ ಶಿವನನ್ನು ವೇದಪ್ರಿಯನೆಂದೇ ಹೊಗಳುತ್ತದೆ. ವೇದಗಳು ತಮಿಳಿನವೇ?

ಹೀಗೆ ನೋಡಿದಾಗ ತಮಿಳಿಗೂ ಸಂಸ್ಕೃತಕ್ಕೂ ನಡುವೆ ದ್ವೇಷವನ್ನು ಕಲ್ಪಿಸಿದ್ದು ಹತ್ತೊಂಭತ್ತನೆಯ ಶತಮಾನದ ಮಧ್ಯದಲ್ಲಿ. ಕ್ರೈಸ್ತ ಮತ ಪ್ರಚಾರಕರಾದ ಹಲವು ಪಾದ್ರಿಗಳು ತಮಿಳಿನ ಕೆಲಸವನ್ನು ಕೈಗೊಳ್ಳುವಂತೆ ಮಾಡಿ ಸನಾತನ ಧರ್ಮದಲ್ಲಿ ಒಡಕು ಮೂಡಿಸಲು ಯತ್ನಿಸಿದ್ದಾರೆ. ಇವರ ಕೆಲಸವೇ ನಂತರ ಬಂದ ಮತಿಗೇಡಿ ದ್ರಾವಿಡಪಕ್ಷದವರಿಗೆ ಮೂಲಸಾಮಗ್ರಿಯನ್ನು ಒದಗಿಸಿದ್ದು. ದೇಶವಿಭಜನೆಯನ್ನು ಮತ್ತೆ ಮಾಡುವಷ್ಟು ಮಟ್ಟಕ್ಕೆ ಈ ಮೂಢಾಂದೋಲನ ಬಂದಿತ್ತು.

ಒಂದು ಮಾತನ್ನು ಇಲ್ಲಿ ಹೇಳಬೇಕು. ನಾನು ತಮಿಳಿನ ವಿರುದ್ಧವಲ್ಲ. ಎಲ್ಲ ಭಾಷೆಗಳ ಹಾಗೆ ಅದೂ ಒಂದು. ಒಳ್ಳೆಯ ಕಾವ್ಯಗಳನ್ನು ಹೊಂದಿದೆ. ಹಲವು ತಮಿಳು ಜನರು ನನ್ನ ಮಿತ್ರರು. ಹಲವು ತಮಿಳು ಚಿತ್ರಗಳನ್ನು ನಾನು ನೋಡಿದ್ದೇನೆ, ಮೆಚ್ಚಿದ್ದೇನೆ ಕೂಡ. ತಮಿಳುನಾಡಿನಲ್ಲಿ ಓಡಾಡಿದ್ದೇನೆ. ಜನರೆಲ್ಲ ಒಳ್ಳೆಯವರೇ. ಆದರೆ ಈ ರೀತಿಯ ದುರಭಿಮಾನವನ್ನು ಸಹಿಸುವುದು ಕಷ್ಟ. ಯಾರೇನೇ ಹೇಳಿದರು "ಉಲಘಮೆಲ್ಲಾ ತಮಿಳ್" ಎಂದು ತಮ್ಮ ಮಾತನ್ನೇ ಹೇಳುತ್ತಾರೆ. ಈ ದುರಭಿಮಾನವನ್ನು ತೊರೆದರೆ ತಮಿಳು ತಾಯಿಗೇ ಸಂತೋಷವಾಗುವುದು.

ನಾನು ಸಂಸ್ಕೃತದ ಕಟ್ಟಾಭಿಮಾನಿಯೂ ಅಲ್ಲ. ಆದರೆ ಆ ಭಾಷೆಯ ಸವಿಯನ್ನು ಬಲ್ಲವರೇ ಬಲ್ಲರು. ಎಲ್ಲ ಭಾಷೆಗಳಿಗೂ ಅವುಗಳವೇ ಆದ ಪ್ರಯೋಜನಗಳಿವೆ. ಇಲ್ಲದಿದ್ದರೆ ಸಂಸ್ಕೃತ ಮತ್ತು ತಮಿಳಿನ ಬಗ್ಗೆ ಕನ್ನಡದಲ್ಲೇಕೆ ಬರೆಯಬೇಕಿತ್ತು?

4 comments:

Anonymous said...

Very true , I read this kind of mentality many a books. they write only "Hate" , not logic.

Prashanth M said...

Your post reminded me of BGL's 'Tamilu talegala naduve' :)

nIlagrIva said...

I had written this post quite before I read TamiLu talegaLa naDuve. (TTN)

Then I read TTN (I have a post on it in the book review section also). I felt glad that Dr. BGL Swamy felt just like me.

Anonymous said...

ಏನೇ ಇದ್ದರೂ..

ಕನ್ನಡ ಮತ್ತು ತಮಿಳು ಸಂಸ್ಕೃತದಿಂದ ಬಂದಿಲ್ಲ ಎಂಬುದಕ್ಕೆ ಸಾಕಶ್ಟು ಪುರಾವೆಗಳಿವೆ.

ತಮಿಳರ ಹುಚ್ಚಾಟದಂತೆ ಸಂಸ್ಕೃತವನ್ನು ಹೇರಿದ ಸಂಗತಿಗಳು ಇವೆ.

ದಿಟವಾದ ಸಂಗತಿ ಏನು ಅಂದರೆ, ತಮಿಳು ನಾಡಲ್ಲಿ ಆದ ’ದ್ರಾವಿಡ ಚಳುವಳಿ’ಯಲ್ಲಿ ಕಂಗೆಟ್ಟು ವಲಸೆ ಬಂದ ಕೆಲವು ತಮಿಳು-ತೆಲುಗು ಬ್ರಾಹ್ಮಣರು ನಮ್ಮ ಕನ್ನಡ ನೆಲದಲ್ಲಿ ತಮಿಳು-ಹಗೆಯನ್ನು ಚನ್ನಾಗಿ ಬಿತ್ತಿದ್ದಾರೆ ( ಬಿ ಜಿ ಎಲ್ ಸ್ವಾಮಿ ಮತ್ತು ಡಿವಿಜಿ ತೆಲುಗು ಬ್ರಾಹ್ಮಣರು ). ಹಾಗೂ ತಮಿಳುನಾಡಲ್ಲಿ ಆದ ಚಳುವಳಿ ಕನ್ನಡ ನೆಲದಲ್ಲೂ ಆಗಬಹುದೆಂಬ ಹೆದರಿಕೆಯಿಂದ ತಮಿಳರನ್ನು ಎಷ್ಟು ಕೀಳಾಗಿ ನೋಡಿಸಬಹುದು ಅಷ್ಟು ಕೀಳಾಗಿ ನೋಡಿಸಿದ್ದಾರೆ.

ತಮಿಳರ ಸಂಗತಿ ಬಿಟ್ಟರೂ, ಸಂಸ್ಕೃತದಿಂದ ಕನ್ನಡಕ್ಕೆ ತೊಂದರೆ ಇರುವುದನ್ನು ನಮ್ಮ ಹಿಂದಿನ ಕನ್ನಡ ಕಿವಿಗಳಾದ ಕವಿರಾಜಮಾರ್ಗ ಬರೆದ ಶ್ರೀವಿಜಯ, ಅಂಡಯ್ಯ, ನಯಸೇನ, ಈಗಿನ ಕೊಳಂಬೆ ಗೌಡರು, ಶಂಕರಭಟ್ಟರು ತಿಳಿಸಿದ್ದಾರೆ.

ಮಿಕ್ಕಿದ್ದು ಅವರವರ ತಿಳುವಳಿಕೆಗೆ ಬಿಟ್ಟಿದ್ದು!