Tuesday, May 02, 2006

ಶ್ರೀಶಂಕರಜಯಂತಿ

ಶ್ರುತಿ-ಸ್ಮೃತಿ-ಪುರಾಣಾನಾಮಾಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||

ವೈಶಾಖ-ಶುದ್ಧ-ಪಂಚಮಿಯಂದು ಶಂಕರಾಚಾರ್ಯರ ಜಯಂತಿ ಆಚರಿಸುವುದು. ಈ ವರ್ಷ ಅದು ಇಂದಿನ ದಿನ ಬಂದಿದೆ.

ಶ್ರೀಶಂಕರಾಚಾರ್ಯರಷ್ಟು ಪ್ರಭಾವಶಾಲಿ ದಾರ್ಶನಿಕರು ಭಾರತದಲ್ಲಿ ಮತ್ತೊಬ್ಬರಿಲ್ಲ. ಅವರನ್ನು ಒಪ್ಪಲಿ ಬಿಡಲಿ, ಅವರು ಹಾಕಿಕೊಟ್ಟ ಮಾರ್ಗವನ್ನೇ ನಂತರದ ದಾರ್ಶನಿಕರಾದ ರಾಮಾನುಜಾಚಾರ್ಯರು ಮಧ್ವಾಚಾರ್ಯರೂ ಅವಲಂಬಿಸಿದರು. ಪ್ರಸ್ಥಾನತ್ರಯಗಳಾದ ಬ್ರಹ್ಮಸೂತ್ರ-ಉಪನಿಷತ್ತು-ಭಗವದ್ಗೀತೆಗಳಿಗೆ ಭಾಷ್ಯ ಬರೆಯುವ ಕ್ರಮವನ್ನು ತೋರಿಸಿದ್ದೇ ಶಂಕರಾಚಾರ್ಯರು. ಇವರು ಪ್ರತಿಪಾದಿಸಿದ್ದು ಅದ್ವೈತವಾದವೆಂದು ಖ್ಯಾತವಾಯ್ತು. ಆದರೆ ತಮ್ಮನ್ನು ತಾವು ಉಪನಿಷದ್ವಾದಿಗಳೆಂದೂ ಔಪನಿಷದರೆಂದು ತಮ್ಮನ್ನು ತಾವೇ ಬಗೆದಿದ್ದರು. ಅದ್ವೈತಿಗೆಳೆಂದು ತಮ್ಮನ್ನು ಎಲ್ಲಿಯೂ ಕರೆದುಕೊಂಡಿಲ್ಲ. ಶಂಕರರು ಮಠಸ್ಥಾಪನೆಯನ್ನು ಮಾಡಿ ಭಾರತದ ಎಲ್ಲೆಗಳನ್ನು ನಿರೂಪಿಸಿದರೆಂದು ಎಲ್ಲರ ನಂಬಿಕೆ. ಇದರಿಂದ ಭಾರತ ಎಂಬ ಒಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರದೇಶದ ಸಮ್ಯಗ್ನಿರೂಪಣೆಯಾಯ್ತೆಂದರೆ ಅತಿಶಯೋಕ್ತಿಯೇನಲ್ಲ.

ಭಾಷ್ಯಗಳನ್ನೇ ಪ್ರಮುಖವಾಗಿ ಬರೆದರೂ ಸಾಮಾನ್ಯರಿಗೆ ಮತ್ತು ಮಂದಾಧಿಕಾರಿಗಳಿಗೆ ಉಪಯೋಗವಾಗಲೆಂದು ಹಲವು ಲಘು ಪ್ರಕರಣಗ್ರಂಥಗಳನ್ನೂ ರಚಿಸಿದ್ದಾರೆಂದು ಪ್ರತೀತಿ. ಇವರದೆಂದು ಹೇಳಲ್ಪಟ್ಟ ಸ್ತೋತ್ರಗಳು (ಸೌಂದರ್ಯಲಹರೀ, ಶಿವಾನಂದಲಹರೀ ಮೊದಲಾದವು) ಇವರವಲ್ಲವೆಂಬುದು ಆಧುನಿಕ ವಿದ್ವಾಂಸರ ಮತ. ನನ್ನ ವೈಯಕ್ತಿಕ ದೃಷ್ಟಿಯೂ ಹಾಗೆ ಇದೆ. ಶಂಕರರ ಹೆಸರನ್ನುಪಯೋಗಿಸಿ ತಮ್ಮ ಕೃತಿಗಳನ್ನು ಪ್ರಚುರಪಡಿಸಬೇಕೆಂಬ ಆಸೆಯೊಂದಿಗೆ ಕಾಲಾಂತರದಲ್ಲಿ ಬಂದ ಕವಿಗಳು ಮಾಡಿದ ಕೃತ್ಯಗಳಿವೆಂಬುದನ್ನು ಹೇಳಬಹುದು.

ಆದರೆ ಶಂಕರರು ಎಷ್ಟು ಪ್ರಭಾವಶಾಲಿಗಳೋ ಅವರ ಹೆಸರು ಅಷ್ಟೇ ವಿವಾದಗಳಲ್ಲಿ ದುರದೃಷ್ಟವಶಾತ್ ಕೇಳುತ್ತದೆ. ಶೃಂಗೇರಿ ಮತ್ತು ಕಾಂಚೀಪುರದ ಮಠಗಳ ನಡುವಿನ ತಗಾದೆ ಬಹಳ ದೊಡ್ಡದು. ಇದಕ್ಕೆ ಅಂಗವಾಗಿ ಶಂಕರರ ಕಾಲವನ್ನು ಕ್ರಿ.ಪೂ ಆರನೆ ಶತಮಾನಕ್ಕೆ ತಳ್ಳಲು ಇತಿಹಾಸಜ್ಞ(ಘ್ನ?)ರ ಗುಂಪು ಯತ್ನಿಸಿದೆ. ಸಾಮಾನ್ಯವಾಗಿ ಕ್ರಿ.ಶ.ಏಳನೇ ಶತಮಾನದವರೆಂದು ಪರಿಗಣಿಸಲಾದ ಆಚಾರ್ಯರರ ಕಾಲವನ್ನು ಒಂದು ಸಾವಿರವರ್ಷಗಳ ಹಿಂದೆ ತಳ್ಳುವ ಸ್ವಾರ್ಥಿಗಳ ಯತ್ನ ನಡೆದಿದೆ. ಇದರ ಬಗ್ಗೆ ನಂತರದ ಒಂದು ಬ್ಲಾಗಿನಲ್ಲಿ ಬರೆಯುತ್ತೇನೆ. ಒಟ್ಟಿನಲ್ಲಿ ಕಾಂಚೀಪುರದ ಅಥವಾ ಕುಂಭಕೋಣದ ಮಠದ ಶಂಕರಾಚಾರ್ಯರ ಕ್ರಿ.ಪೂ.ಕಾಲದ ಮತ ಸತ್ಯಕ್ಕೆ ಸಾವಿರವರ್ಷ ದೂರವೆಂದು ಹೇಳಿ ಇದರ ಬಗ್ಗೆ ಇಲ್ಲಿಯೇ ನಿಲ್ಲಿಸುತ್ತೇನೆ.

ಶಂಕರರು ಭಾರತೀಯ ದಾರ್ಶನಿಕತೆಯ ದಿಗ್ಗಜರಲ್ಲಿ ಒಬ್ಬರು. ಅವರು ಹೇಳಿದ ಕೆಲವು ಸಂಗತಿಗಳನ್ನು ಇಲ್ಲಿ ಸ್ಮರಿಸಬಹುದು.

ಭಗವದ್ಗೀತೆಯ ಬಗ್ಗೆ - "ಸಮಸ್ತವೇದಾಂತಾರ್ಥ-ಸಾರ-ಸಂಗ್ರಹಭೂತಂ ದುರ್ವಿಜ್ಞೇಯಾರ್ಥಮ್"
ಗೀತೆಯು ಸಮಸ್ತ ವೇದಾಂತದ ಅರ್ಥದ ಸಾರಸಂಗ್ರಹಭೂತವಾದರೂ ಇದರ ಅರ್ಥ ತಿಳಿಯುವುದು ಕಷ್ಟ.

"ಸರ್ವಶಾಸ್ತ್ರವಿದ್-ಅಸಂಪ್ರದಾಯವಿತ್-ಮೂರ್ಖವದುಪೇಕ್ಷಣೀಯಃ"
ಎಲ್ಲ ಶಾಸ್ತ್ರಗಳನ್ನು ಬಲ್ಲವನಾದರೂ ಸಂಪ್ರದಾಯದ ಅರ್ಥ-ಮರ್ಯಾದೆಗಳನ್ನು ತಿಳಿಯದವನನ್ನು ಮೂರ್ಖನಂತೆ ಉಪೇಕ್ಷೆ ಮಾಡಬೇಕು.

ಇವರು ಹೇಳಿದ ಮತ್ತೊಂದು ದೊಡ್ಡ ಸಂಗತಿಯೆಂದರೆ - ವೇದಾಧಿಕಾರ ಮತ್ತು ಮೋಕ್ಷಾಧಿಕಾರಗಳನ್ನು ಬೇರ್ಪಡಿಸಿ - ಸ್ತ್ರೀಯರಾಗಲಿ, ಶೂದ್ರರಾಗಲಿ ಸಮಾಜದ ಯಾವುದೇ ಸ್ತರದವರಾದರೂ ಅವರಿಗೆ ಮೋಕ್ಷಕ್ಕೆ ಅಧಿಕಾರವಿದೆ. ಮೋಕ್ಷಾಧಿಕಾರಕ್ಕೂ ವೇದಾಧಿಕಾರಕ್ಕೂ ಸಂಬಂಧವಿಲ್ಲ. ಇದು ಆಗಿನ ಎಂಥ ಒಂದು ಕ್ರಾಂತಿಕಾರಕ ಮಾತೆಂದು ತೋರಬಹುದು. ಆದರೆ ವಸ್ತುತಃ ಉಪನಿಷತ್ತುಗಳ ಸಂಪ್ರದಾಯದಲ್ಲಿ ಮೋಕ್ಷಕ್ಕೆ ಅಧಿಕಾರ ಎಲ್ಲರಿಗೂ ಇದ್ದಿತು. ಬ್ರಾಹ್ಮಣರ ದಬ್ಬಾಳಿಕೆ ಎಂದೆಲ್ಲಾ ಹೇಳುವವರು ಪರಮ-ಪುರುಷಾರ್ಥವಾದ ಮೋಕ್ಷಕ್ಕೆ ಎಲ್ಲರಿಗೂ ಅಧಿಕಾರವನ್ನು ಶಾಸ್ತ್ರ ಮೊದಲೇ ನೀಡಿದೆ - ಎಂದು ಗಮನಿಸಬೇಕು. ಅಂಥವರ ಹೋರಾಟ ಇದನ್ನು ತಿಳಿದ ಬಳಿಕೆ ಸ್ವಲ್ಪವಾದರೂ ಕಡಿಮೆಯಾಗಬಹುದು ಅಲ್ಲವೇ?

ಇವರ ಇನ್ನೊಂದು ಧೀರವಾಕ್ಯ ಹೀಗಿದೆ - "ನೂರು ಶ್ರುತಿಗಳು ಬೆಂಕಿ ತಣ್ಣಗಿದೆಯೆಂದು ಹೇಳಿದರೂ ಅದರಿಂದ ಬೆಂಕಿ ತಣ್ಣಗಾಗುವುದಿಲ್ಲ". ಇಲ್ಲಿನ ಸ್ವಾರಸ್ಯ ಗಮನಿಸಲು ಶ್ರುತಿಪ್ರಾಮಾಣ್ಯದ ಬಗ್ಗೆ ತಿಳಿಯಬೇಕು. ಶಂಕರರು ಅನುಭವದ ಪಾರಮ್ಯವನ್ನೇ ಹಿಡಿದವರು. ಇದರ ಜೊತೆಗೆ - ಮುಕ್ತಿ ಜೀವನಾನಂತರ ಕಾಣುವ ಒಂದಾನೊಂದು ಅವಸ್ಥೆಯಲ್ಲ - ಈ ಜೀವನದಲ್ಲೇ ಮುಕ್ತಿ ಸಾಧ್ಯ - ಅದೇ ಜೀವನ್ಮುಕ್ತಿಯೆಂದು ಸಾರಿದರು.

ಶಂಕರರನ್ನು ಈಗಿನ ಕಾಲದವರು ಪಟದಲ್ಲಿರಿಸಿ ಪೂಜೆ ಮಾಡುತ್ತೇವೆ. ಅವರು ಏನು ಹೇಳಿದ್ದಾರೆಂಬುದರ ಕಡೆಗೆ ಗಮನ ಹರಿಸುವುದಿಲ್ಲ. ಅವರ ಮೂರ್ತಿಗೆ ರುದ್ರಾಭಿಷೇಕ ಮಾಡಿ ಹೂವೇರಿಸುವುದಕ್ಕಿಂತ ಅವರು ಹೇಳಿದ ವಿಚಾರದೆಡೆ ಗಮನ ಹರಿಸುವುದೇ ಅವರಿಗೆ ನಾವು ಮಾಡಬಹುದಾದ ನಿಜವಾದ ಪೂಜೆಯೆಂದು ನನ್ನ ವಿಚಾರ.

|| ಇತಿ ಶಮ್ ||

3 comments:

ಅಸತ್ಯ ಅನ್ವೇಷಿ said...

ನಮಸ್ಕಾರಗಳು,
'ಅರ್ಥ ತಿಳಿಯದೆ ಸಂಪ್ರದಾಯ ಆಚರಿಸುವವರು ಮೂರ್ಖರಂತೆ' ಎಂಬ ವಾಣಿ ನೀಡುವ "ಅದರ ಅರ್ಥ ತಿಳಿದುಕೊಳ್ಳಿ, ತಿಳಿದೇ ಆಚರಿಸಿ" ಎಂಬ ಸಂದೇಶವನ್ನು ಪಾಲಿಸಲು ಈಗಿನ ಕಾಲದಲ್ಲಿ ಯಾರಿಗೂ ವ್ಯವಧಾನವಿರುವುದಿಲ್ಲ.

ಆಮೇಲೆ, ನೀಳಗ್ರೀವ ಎಂಬುದರ ಅರ್ಥ ವಿವರಿಸಬಹುದೆ?

nIlagrIva said...

ನಮಸ್ಕಾರ,
ನಿಮ್ಮ ಟಿಪ್ಪಣಿ ಶಂಕರಾಚಾರ್ಯರ ಮೇಲಿನ ಲೇಖನದ ಬಗ್ಗೆ ಎಂದು ತಿಳಿದಿದ್ದೇನೆ. ಶಂಕರರ ಸಂಪ್ರದಾಯದ ಬಗ್ಗೆಯ ಈ ಮಾತು ಗೀತಾಭಾಷ್ಯದಲ್ಲಿ ಬರುತ್ತದೆ. ಶಾಸ್ತ್ರವನ್ನು ತಿಳಿದೂ ಸಂಪ್ರದಾಯವನ್ನು ತಿಳಿಯದವರು ಮೂರ್ಖರೆಂದು ಆಚಾರ್ಯರು ಹೇಳಿರುತ್ತಾರೆ. ಇಲ್ಲಿ ಶಾಸ್ತ್ರಜ್ಞಾನವೆಂದರೆ ಶಾಸ್ತ್ರದ ಬೌದ್ಧಿಕ ಜ್ಞಾನ - ಡಿ.ವಿ.ಜಿ.ಯವರ ಮಾತಿನಲ್ಲಿ ಹೇಳುವುದಾದರೆ - "ಶಾಸ್ತ್ರಿತನ"ವೆಂದು. "ವಸ್ತುಸಾಕ್ಷಾತ್ಕಾರದಂತರೀಕ್ಷಣೆಯಿಂದ" ಮೂಡಿದ ಸ್ವರೂಪ ಜ್ಞಾನವಲ್ಲ. ಸಂಪ್ರದಾಯದ ಮಹತ್ತ್ವವನ್ನು ಶಂಕರರು ಎತ್ತಿ ಹಿಡಿದಿದ್ದಾರೆ. ಉಪನಿಷತ್ತುಗಳನ್ನು ಹೇಗಾದರೂ ಅರ್ಥೈಸಬಹುದಾದರೂ ಅದಕ್ಕೆ ಸತ್ಸಂಪ್ರದಾಯದ ಕೀಲಿ ಬೇಕು. ಈಗ cryptography ಯಲ್ಲಿ public ಮತ್ತು private key ಇದ್ದ ಹಾಗೆ. ಸಂಪ್ರದಾಯ private key ಇದ್ದ ಹಾಗೆ. ಅದಿಲ್ಲದೆ encrypted ತತ್ತ್ವವಾದ ಉಪನಿಷತ್ತಿನ ದೆಸೆಯಿಂದ ಉಂಟಾಗುವ ಬ್ರಹ್ಮವಿದ್ಯೆ ದೊರೆಯುವುದಿಲ್ಲ. ನೀವು ಹೇಳಿದ್ದಕ್ಕೆ ಇನ್ನೇನೋ ಹೇಳಿದ್ದೇನೆ. ಇರಲಿ.

ಅರ್ಥ ತಿಳಿದು ಸಂಪ್ರದಾಯವನ್ನು ಆಚರಿಸುವ ವ್ಯವಧಾನವಿಲ್ಲ ಈಗಿನ ಕಾಲದವರಿಗೆ ಎಂದು ಹೇಳಿರುತ್ತೀರಿ. ಇದು ಬಹುಮಟ್ಟಿಗೆ ಸತ್ಯವಾದರೂ ಪೂರ್ಣ ಸತ್ಯವಲ್ಲ. ಹಾಗಾಗುವುದು ಬೇಡ ಎಂದು ನನ್ನ ಹಾರೈಕೆ.

ನೀಲಗ್ರೀವ ಎಂದರೆ - ನೀಲಾ ಗ್ರೀವಾ ಯಸ್ಯ ಸಃ. ನೀಲಿಯ ಕತ್ತುಳ್ಳವನೆಂದು. ಅಂದರೆ ನೀಲಕಂಠನಾದ ಶಿವನೆಂದು.

ತಮಗೆ ನನ್ನಿಂದ ಒಂದು ಪ್ರಶ್ನೆ. ಏಕೆ ತಾವು ಅಸತ್ಯವನ್ನು ಹುಡುಕುತ್ತಿದ್ದೀರಿ? ಸುಲಭವಾಗಿ ದೊರೆತರೂ ದೊರೆಯದ ವಸ್ತು ತಾನೆ ಆದು?

ಇತಿ,
-ನೀಲಗ್ರೀವ

ಅಸತ್ಯ ಅನ್ವೇಷಿ said...

ನೀಲಗ್ರೀವರೆ,
ಎಲ್ರೂ ಅಸತ್ಯವನ್ನೇ ಹುಡುಕೋದು. ಆದ್ರೆ ನಾನು ಮಾತ್ರ ಹೇಳಿಕೊಂಡಿದ್ದೇನೆ ಅಷ್ಟೆ. ಎಲ್ಲಾ ಬರೀ ಬೊಗಳೆ.