Monday, May 08, 2006

ತಮಿಳು ತಲೆಗಳ ನಡುವೆ

ಮೊನ್ನೆ ಬೆಂಗಳೂರಿನ ಸಪ್ನಾ ಪುಸ್ತಕ ಭಂಡಾರಕ್ಕೆ ಹೋಗಿದ್ದೆ. ನನಗೆ (ನಮ್ಮ ಮನೆಯ ಎಲ್ಲರಿಗೂ ಸಹ) ಯಾವುದೇ ಸಮಾರಂಭವಾಗಲಿ, ಆದಷ್ಟು ಪುಸ್ತಕಗಳನ್ನೇ ಕೊಡಬೇಕೆನ್ನುವ ಪರಿಪಾಟ (ಮತ್ತೊಮ್ಮೆ - "ಪರಿಪಾಠ" ತಪ್ಪು ಪ್ರಯೋಗ). ಸರಿ, ಜೊತೆಗೆ ಹೊಸ "book mall" ಉದ್ಘಾಟನೆಯ ಬಗ್ಗೆ ವಾರ್ತಾಪತಿಕೆಗಳಲ್ಲಿ ಸಮಾಚಾರ ಮೂಡಿತ್ತು. ಸರಿಯೇ ನೋಡಿಬಿಡೋಣವೆಂದು ಹೋದೆ. ಅಲ್ಲಿ ಎರಡನೆ ಅಂತಸ್ತಿನಲ್ಲಿ ಕನ್ನಡ ಪುಸ್ತಕಗಳ ವಿಭಾಗವನ್ನು ಇಟ್ಟಿದ್ದಾರೆ. ಈ ಅಂಗಡಿಯ ವೈಶಿಷ್ಟ್ಯವೆಂದರೆ ಕನ್ನಡ ಪುಸ್ತಕಗಳು. ಆಂಗ್ಲಪುಸ್ತಕಗಳ ಅಂಗಡಿಗಳು ಬೆಂಗಳೂರಿನಲ್ಲಿ ಬೇರೆಯವೂ ಇವೆ. ಆದರೆ ಬಹಳಕಡೆಗಳಿಂದ ಕನ್ನಡಪುಸ್ತಕಗಳನ್ನು ಒಂದೆಡೆ ಸೇರಿಸಿರುವುದು ಸಪ್ನಾ ದಲ್ಲಿ. ಇದರ ಜೊತೆ ಶೇಖಡಾ ಹತ್ತರ ರಿಯಾಯ್ತಿ. ಕೊಳ್ಳದಿರಲು ಹೇಗೆ ಸಾಧ್ಯ? ಅಂದ ಹಾಗೆ ಗಾಂಧಿಬಜಾರಿನ ಅಂಕಿತ ಪುಸ್ತಕಾಲಯವೂ ಒಳ್ಳೆಯ ಪುಸ್ತಕಗಳಿಂದ ಕೂಡಿದೆ.

ಅದಿರಲಿ. ಬೇರೆಯವರಿಗೆ ಪುಸ್ತಕ ಕೊಳ್ಳಲು ಹೋದ ನನಗೆ ಒಂದೆರಡು ಪುಸ್ತಕಗಳು ಬೇಡವೇ? ಸರಿ ಹುಡುಕುತ್ತಿದ್ದೆ. ಬಹಳ ದಿನಗಳಿಂದ ಓದಬೇಕೆಂದುಕೊಂಡಿದ್ದ ಪುಸ್ತಕಗಳು ಡಾ|| ಬಿ.ಜಿ.ಎಲ್ ಸ್ವಾಮಿಯವರವು. ಅವರ "ಹಸುರು ಹೊನ್ನು" ಮತ್ತು "ತಮಿಳು ತಲೆಗಳ ನಡುವೆ" ಕೊಂಡೆ. "ಪಂಚಕಲಶಗೋಪುರ"ವೆಂಬ ಅವರ ಪುಸ್ತಕವನ್ನು ಎರವಲು ಪಡೆದು ಒಂದೆರಡು ಭಾಗ ಓದಿದ್ದೆ. ಸ್ವಾಮಿಯವರ ಶೈಲಿ ತಿಳಿಹಾಸ್ಯದಿಂದ ಕೂಡಿದೆ. ತಿಳಿ ಮಾತ್ರ ಅಲ್ಲ - ಹಾಸ್ಯದಲ್ಲಿ ಸಿಹಿ, ಕಹಿ, ಖಾರ, ಹುಳಿ ಇವೆಲ್ಲ ರಸಗಳನ್ನು ಇವರು ಚೆನ್ನಾಗಿ ಸೇರಿಸಿದ್ದಾರೆ. ಆದ್ದರಿಂದ ಇವರ ಪುಸ್ತಕವನ್ನು ಓದಲು ಇಷ್ಟ. ಜೊತೆಗೆ ಡಿವಿಜಿಯವರ ಮಗ ಬೇರೆ. ತಂದೆ ಮಕ್ಕಳು ಒಂದೇ ಅಲ್ಲದಿದ್ದರೂ ಅವರ ಮಧ್ಯೆ ಇರುವ ವ್ಯತ್ಯಾಸವನ್ನಾದರೂ ನೋಡಬೇಕಲ್ಲಾ ಎಂಬ ಕುತೂಹಲ. ಇನ್ನೂ ಒಂದು ಆಶ್ಚರ್ಯಕರ ಸಂಗತಿಯೆಂದರೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಮೊದಲನೆಯ ತಂದೆ-ಮಕ್ಕಳ ಜೋಡಿಯೆಂದರೆ ಡಿವಿಜಿ-ಬಿಜಿಎಲ್ ಅವರದು. ಹಸುರು-ಹೊನ್ನು ಎಂಬ ಇವರ ಪುಸ್ತಕಕ್ಕೆ ಸಂದ ಗೌರವ. ಅದನ್ನು ಮನಗೆ ಹೋದ ತಕ್ಷಣ ನನ್ನ ಪತ್ನಿ ನನ್ನಿಂದ ಕಿತ್ತುಕೊಂಡಳು. ಸರಿ ನನಗಿದ್ದದ್ದು "ತಮಿಳು ತಲೆಗಳ ನಡುವೆ" ಎಂಬುದು.

ಬಿ.ಜಿ.ಎಲ್ ಅವರು (ಇನ್ನು ಮುಂದೆ ಸ್ವಾಮಿಯವರು ಅಥವಾ ಬಿಜಿಎಲ್ ಅನ್ನುತ್ತೇನೆ) ಮದರಾಸಿನಲ್ಲಿ ಪ್ರೆಸಿಡೆನ್ಸಿ ಮಹಾವಿದ್ಯಾಲಯದಲ್ಲಿ ಬಾಟನಿಯ ಪ್ರಾಧ್ಯಾಪಕರಾಗಿ ಕೆಲವು ದಶಕಗಳ ಸೇವೆ ಸಲ್ಲಿಸಿದ್ದರು. ಅಲ್ಲಿ ನಡೆದ ಅವರ ತಮಿಳಿಗರೊಡನೆಯ ತಮಿಳಿನ ಬಗ್ಗೆಯಾದ ಅನುಭವದ ಸಂಗ್ರಹವೇ "ತಮಿಳು ತಲೆಗಳ ನಡುವೆ". ಸ್ವಾಮಿಯವರ ಮನೆ ಮಾತು ತಮಿಳು. ಆದರೂ ತಮ್ಮನ್ನು ತಾವು ಕನ್ನಡಿಗರೆಂದು ಕಂಡುಕೊಳ್ಳುತ್ತಿದ್ದರು. ಇದರೊಡನೆ ಅಪ್ಪಟ ವೈಜ್ಞಾನಿಕ ಮನೋಭಾವನೆ ಇವರದು. ಜೊತೆಗೆ ತಮಿಳಿನ ಬಗ್ಗೆ ಸಹಜವಾಗಿ ಮೂಡಿದ ಕುತೂಹಲ.

ಸರಿ ಪುಸ್ತಕಕ್ಕೆ ಬರೋಣ. ತಮಿಳು ಸಾಹಿತ್ಯವನ್ನು ಸ್ವಾಮಿಯವರು ಚೆನ್ನಾಗಿ ಅಭ್ಯಾಸ ಮಾಡಿದ್ದರೆಂದು ತೋರುತ್ತದೆ. ಮೊದಲಿಗೆ ತಮಿಳಿನ "ಚಂಗ" (ಸಂಘ) ಕಾವ್ಯಗಳ ಕಾಲದ ಹಾಸ್ಯಲೇಪಿತ ಪರಿಚಯವಾಗುತ್ತದೆ.
"ತಮಿಳು ಸಂಸ್ಕೃತಕ್ಕಿಂತಲೂ ಹಳೆಯದು. ಬೇರೆ ದ್ರಾವಿಡ ಭಾಷೆಗಳಾದ ಕನ್ನಡ, ಮಲೆಯಾಳ, ತೆಲುಗುಗಳ ತಾಯಿಸ್ಥಾನದಲ್ಲಿ ನಿಲ್ಲಲು ತಕ್ಕದ್ದು. ಈ ಭಾಷೆಯ ಸಾಹಿತ್ಯ ಕ್ರಿ.ಪೂ. ೨ ನೆಯ ಶತಮಾನಕ್ಕಿಂತ ಹಳೆಯದು. ವಾಸ್ತವವಾಗಿ ಇನ್ನೂ ಹಳೆಯದು - ಆದರೆ ಬೇರೆ ಭಾಷೆಯವರು ನಾಚಿಕೆಯಿಂದ ತಲೆತಗ್ಗಿಸಬಾರದೆಂಬ ಒಂದೇ ಕಾರಣದಿಂದ ಎರಡನೆಯ ಶತಮಾನಕ್ಕೇ ನಿಲ್ಲಿಸಿದ್ದಾರೆ."
ಇದು ತಮಿಳರ ತಮ್ಮ ಭಾಷೆಯ ಬಗೆಗಿನ ವಿಚಾರದ ಒಂದು ಸ್ಥೂಲ ನಿರೂಪಣೆ. ತಮಿಳರ ಅತಿರೇಕಗಳನ್ನು ಪುಸ್ತಕದ ಸುಮಾರು ಇನ್ನೂರು ಪುಟಗಳವರೆಗೂ ಸ್ವಾಮಿಯವರು ವರ್ಣಿಸಿದ್ದಾರೆ. ಎಷ್ಟು ಹಾಸ್ಯ ತುಂಬಿದೆಯೆಂದರೆ ನನಗಂತೂ ನಕ್ಕು ನಕ್ಕು ಹೊಟ್ಟೆ ನೋವು ಬಂದಿತು (ಇದು ತೀರಾ ಸಾಮಾನ್ಯದ ಕ್ಲೀಷೆಯಾದರೂ ಈ ಪುಸ್ತಕಕ್ಕೆ ಸರಿಯಾಗಿ ಹೊಂದುತ್ತದೆ). ಪಾಪ, ಅವರು ಅನುಭವಿಸಿದ ಅನನುಕೂಲಗಳು ಮತ್ತು ಯಾತನೆಗಳನ್ನು ನೆನೆಸಿಕೊಂಡರೆ ಅಯ್ಯೋ ಎನ್ನಿಸದೇ ಇರುವುದಿಲ್ಲ.

ಹಾಸ್ಯದ ಜೊತೆಗೆ ತಮಿಳು ಸಾಹಿತ್ಯ ಮತ್ತು ಅದರ ಬಗೆಗಿನ ಸಂಶೋಧನೆಯ ಬಗ್ಗೆ ಒಂದು ಸ್ಥೂಲ ಪರಿಚಯ ಈ ಪುಸ್ತಕದಿಂದ ದೊರೆಯುತ್ತದೆ. ಚಂಗ ಸಾಹಿತ್ಯದ ವಿಂಗಡಣೆಯ ಬಗೆ. ಶಿಲಪ್ಪದಿಕಾರಂ ನ ಸ್ಥಾನ. ತಮಿಳರ ಲೆಮ್ಯೂರಿಯಾ ಅಥವಾ ಕುಮಾರಿಖಂಡದ ದಂತಕಥೆಯ ನಿರೂಪಣೆ. ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಅತಿಯಾದ ಪ್ರೇಮ. "ತಮಿಳ್ ಇಸೈ" (ತಮಿಳು ಸಂಗೀತ)ನ ಬಗ್ಗೆ ಒಂದಷ್ಟು ಮಾಹಿತಿ. ತಮಿಳನ್ನು ಬಿಟ್ಟು ಬೇರೇನೂ ಬೇಡ ಅನ್ನುವ ವೀರತಮಿಳರ ಹಠ. ಅಲ್ಲಿನ ರಾಜ್ಯ ಸರ್ಕಾರ ತಮಿಳಿನ ಬಗ್ಗೆ ತೋರುವ ಒಲವು - ಗ್ರಂಥಗಳನ್ನು ಬದಲಾಯಿಸಿ ಸಂಶೋಧನೆಯ ದಿಕ್ಕನ್ನು ತಿರುಗಿಸುವ ಪ್ರಯತ್ನ. ತಿರುಕ್ಕುರಲಿನ ಬಗ್ಗೆಯ ಸಂಶೋಧನೆ. ತಮಿಳು ಹೇಗೆ ಬೇರೆ ದ್ರಾವಿಡ ಭಾಷೆಗಳ ಸಮವೇ ಆಗಿದೆ (ತಮಿಳೇತರ ಸಂಶೋಧಕರ ಪ್ರಕಾರ) ಎಂಬ ವಿಚಾರ. ಶೈಕ್ಷಣಿಕ ಕ್ಷೇತ್ರದಲ್ಲಿ ಹೇಗೆ ತಮಿಳನ್ನು ಕ್ರಮವಾಗಿ ತಂದು "ಆರ್ಯ" ಮತ್ತು "ಬ್ರಾಹ್ಮಣ" ಧರ್ಮಗಳ ಬಗ್ಗೆ ತಪ್ಪು ವಿಚಾರವನ್ನು ಹರಡುತಿದ್ದಾರೆಂಬುದರ ಬಗ್ಗೆ. ತಮಿಳೇತರ ಕ್ಷೇತ್ರಗಳಲ್ಲಿಯೂ ತಮಿಳು ಸಂಸ್ಕೃತಿಯನ್ನು ಬಿಡಬಾರದೆಂಬುದರ ಬಗ್ಗೆ ಸರ್ಕಾರದ ಕಟ್ಟಾಜ್ಞೆಯ ಬಗ್ಗೆ. ಹೇಗೆ ಚರ್ವಿತಚರ್ವಣವಾಗಿರುವ ವಿಷಯಗಳನ್ನೇ ಆಧರಿಸಿ ಇಂದಿಗೂ ವಿದ್ಯಾರ್ಥಿಗಳು ಪಿ.ಎಚ್.ಡಿಯನ್ನು ಪಡೆಯುತ್ತಾರೆಂಬುದರ ಬಗ್ಗೆ. ಇವೆಲ್ಲದರ ಮಧ್ಯೆ ಸರಿಯಾದ ರೀತಿಯಲ್ಲಿ ಸಂಶೋಧನೆ ನಡೆದಿಲ್ಲವಲ್ಲಾ ಎಂಬ ಸ್ವಾಮಿಯರ ಅವ್ಯಕ್ತ ಖೇದ. ಇವೇ ಮೊದಲಾದ ಸಂಗತಿಗಳನ್ನು ಈ ಪುಸ್ತಕ ಹೊಂದಿದೆ.

ಹೀಗೆ ನೋಡಿದಾಗ ಮೊದಲು ನನಗನ್ನಿಸಿದ್ದು - ನಾನು ಕನ್ನಡಿಗನಾಗಿ ಹುಟ್ಟಿದ್ದು ನನ್ನ ಪುಣ್ಯವೆಂದು. ನಮಗೆ ಕಣ್ಣು ಕಾಣುವುದೇ ಸ್ವಲ್ಪವಾಗಿದ್ದಾಗ ಅದರ ಮೇಲೆ ಮತಾಂಧತೆ, ಭಾಷಾಂಧತೆ ಮುಂತಾದ ಅಂಧತೆಗಳೂ ಸೇರಿದರೆ ಲೋಕವೇ ಕಾಣದೆ ಹೋಗುವುದಿಲ್ಲವೇ? ಕನ್ನಡಿಗರು ನಿರಭಿಮಾನಿಗಳು ಎಂದು ಹಿಂದೆ ಈ ಬ್ಲಾಗಿನಲ್ಲಿಯೇ ಬರೆದಿದ್ದೇನೆ. ಆದರೆ ತಮಿಳರ ಈ ರೀತಿಯ ಸತ್ಯದ ತಲೆಯ ಮೇಲೆ ಹೊಡೆದ ಹಾಗಿರುವ ಬರೇ ಸುಳ್ಳಿನ ಅಡಿಪಾಯದ ಮೇಲೆ ನಿಂತಿರುವ ದುರಭಿಮಾನ ನಮಗೆಂದಿಗೂ ಬರುವುದಿಲ್ಲವೆಂದು ಹೆಮ್ಮ ಕೂಡ ಆಯ್ತು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಕನ್ನಡಿಗರ ಸಮಯಪ್ರಜ್ಞೆ ಮತ್ತು ಮನೋವೈಶಾಲ್ಯ ನಮ್ಮನ್ನು ಕಾಪಾಡುತ್ತದೆ ಎಂದು ಅನ್ನಿಸಿತು. ಇದರ ಬಗ್ಗೆ ಒಂದು ಸಂಗತಿಯನ್ನು ಸ್ವಾಮಿ ನಿರೂಪಿಸುತ್ತಾರೆ. ಒಮ್ಮೆ ಬೀ.ಎಂ.ಶ್ರೀಕಂಠಯ್ಯನವರು ತಮಿಳಿನ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿ "ಕನ್ನಡದಲ್ಲೇನಿದೆ ಮಣ್ಣು" ಅನ್ನುವ ಹಾಗೆ ಹೇಳಿದರು. ಇದನ್ನು ಕೇಳಿದ್ದ ಸಭಿಕರೆಲ್ಲರೂ ಕನ್ನಡಿಗರೇ. ಆದರೆ ಯಾವ ಸಂದರ್ಭದಲ್ಲಿ ಶ್ರೀಕಂಠಯ್ಯನವರು ಹೀಗೆ ಮಾತನಾಡಿದರು ಎಂದು ತಿಳಿದಿದ್ದರು. ಅದಕ್ಕೆ ಸಭೆಯಲ್ಲಿ ನಡೆದ ಅಚಾತುರ್ಯವೆಂದರೆ ಶ್ರೀಯವರ ಆರ್ಭಟ ಮಾತ್ರ. ಕನ್ನಡಿಗರದು ನಿರಭಿಮಾನವೆಂದು ಹೇಳಬಹುದು. ಆದರೆ ತಮಿಳರ ದುರಭಿಮಾನವನ್ನು ತಿಳಿಯಲು ಈ ಪುಸ್ತಕವನ್ನೋದಿ. ನಿಮಗೇ ಅನ್ನಿಸುತ್ತದೆ - ನಮ್ಮದು ಹಾಗಾಗುವುದೇ ಬೇಡಪ್ಪಾ ಎಂದು!

ತಮಿಳಿನ ಪ್ರಚಾರದ ಬಗ್ಗೆ ಈ ಪುಸ್ತಕದಲ್ಲಿ ಓದಿದಾಗ ನನಗೆ ಕಮ್ಯೂನಿಸ್ಟ್ ರಷ್ಯಾ, ಚೈನಾ ಮತ್ತು ತಾಲಿಬಾನ್ ಗಳ ನೆನಪಾಯ್ತು. ಕಮ್ಯೂನಿಷ್ಟರು ತಮ್ಮ ಸಿದ್ಧಾಂತಕ್ಕೆ ಎಂದೂ ಕುಂದು ಬರಬಾರದೆಂದು ಹಾರಾಡಿದ್ದವರು. ಸಿದ್ಧಾಂತಕ್ಕೆ ವಿರುದ್ಧ ಬರೆದವರನ್ನು ಸೆರೆಮನೆಗೆ ತಳ್ಳಿದವರು. ತಮ್ಮದು ಎಷ್ಟೇ ತಪ್ಪಿದ್ದರೂ ಒಪ್ಪದಿರುವ ಭಂಡರು. ಕಟ್ಟಾ ಇಸ್ಲಾಮಿಗಳ ಕಥೆಯೂ ಅದೆ. ಮೊನ್ನೆ ಆದ ಪ್ರವಾದಿ ಮಹಮ್ಮದರ ಕಾರ್ಟೂನಿನ ರಾದ್ಧಾಂತ ನಮಗೆ ತಿಳಿಯದೇ? ಇದಕ್ಕೇನೂ ಕಡಿಮೆಯಿಲ್ಲದ್ದು ತಮಿಳರ ಭಾಷಾಪ್ರೇಮ.

ವೀರತಮಿಳರ ವಿಚಾರಲಹರಿಯನ್ನವಲಂಬಿಸದೆ ಬೇರೆಯ ವಿಚಾರವನ್ನು ಬರೆದ ಗೋವಿಂದನ್ ಎಂಬವರ ಪುಸ್ತಕವನ್ನು ಕೊಳ್ಳಬಾರದೆಂಬ ಆಗ್ರಹ ಮಾಡಿದರು ತಮಿಳು ವಾದ್ಯಾರರು. ಒಬ್ಬಿಬ್ಬರು "ತಮಿಳುನಾಡಿನಲ್ಲಿ ಕಾಲಿಟ್ಟೀಯೆ ಜೋಕೆ" ಎಂದು ಪತ್ರಗಳನ್ನೂ ಬರೆದರು. ತಮ್ಮ ಭಾಷೆಯ ಬಗ್ಗೆ (ಅದು ಭಾಷೆಯ ಬಗ್ಗೆಯೂ ಅಲ್ಲ - ಅದರ ಕಾಲದ ಬಗ್ಗೆ) ಐನೂರು ವರ್ಷ ಈಚಿನದು ಎಂದು ಬರೆದವರನ್ನು ಖಂಡಿಸಲು - ಚಿಂಬೋಚಿಯಮ್ (symposium) ಗಳನ್ನು ಏರ್ಪಡಿಸಿ ಖಂಡನೆಯ ಠರಾವುಗಳನ್ನು ಹೊರಡಿಸುವ ರೀತಿ ಇವರದು - ಅದೂ ಪುಸ್ತಕವನ್ನು ಅಥವಾ ಲೇಖನವನ್ನು ಓದದೆಯೇ!! ಹಳೆಯದ್ದಾದಷ್ಟೂ ಒಳ್ಳೆಯದು ಎಂಬುದು ಇವರ ನಂಬಿಕೆ. ಕಾಲಿದಾಸನ "ಪುರಾಣಮಿತ್ಯೇವ ನ ಸಾಧು ಸರ್ವಮ್" ಎಂಬ ಕಿವಿಮಾತು ಬೇರೆ ಭಾಷೆಗಳ ಬಗ್ಗೆ ಹತ್ತಿಯನ್ನು ತುಂಬಿಕೊಂಡ ಕಿವಿಗಳನ್ನುಳ್ಳ ಈ ತಮಿಳರ ಕಿವಿಯನ್ನು ಹೇಗೆ ತಾನೆ ಸೇರೀತು? ಋಗ್ವೇದವನ್ನು ಓದುವಷ್ಟು ಸಂಸ್ಕೃತ ತಿಳಿಯದ "ವಿದ್ವಾ(ಧ್ವ?)೦ಸ"ನ ಅಂಬೋಣ ಏನು ಗೊತ್ತೇ ? ಋಗ್ವೇದವು ತಮಿಳರು ರಚಿಸಿದ ಪಂಚಾಂಗವಂತೆ!! ಇದನ್ನು ನಂಬುವ ಜನರೂ ಇದ್ದಾರಲ್ಲ!

ಈಗಿನ ಕಾಲಕ್ಕೆ ಬಂದಾಗ ತಮಿಳಿಗೆ ಶಾಸ್ತ್ರೀಯ ಸ್ಥಾನದ ಬಗ್ಗೆ ನಡೆದ ತಕರಾರು ನೆನಪಿಗೆ ಬರಬಹುದು. ಅವೆಲ್ಲಕ್ಕೂ ಸ್ಫೂರ್ತಿ ಇವರಿಗೆ ಎಲ್ಲಿಂದ ದೊರೆಯಿತು ಎಂದು ನೋಡಲು ಈ ಪುಸ್ತಕವನ್ನು ಓದಿಯೇ ಓದಬೇಕು.

ಭಾಷೆಯ ಬಗ್ಗೆಯ ಈ ದುರಭಿಮಾನ ಅತಿರೇಕಕ್ಕೆ ಹೋಗಿ ಅಪಾಯಕ್ಕೆ ಕಾರಣವಾಗಬಹುದು. "ತಮಿಳರು ಭಾರತದಾದ್ಯಂತ ಇದ್ದ ಆದಿವಾಸಿಗಳು. ಇವರನ್ನು ದಕ್ಷಿಣಕ್ಕೆ ಓಡಿಸಿದ್ದು ಬೇರೆಯ ಕಡೆಯಿಂದ ಬಂದ ಆರ್ಯರು" ಎಂಬ ಕಟ್ಟುಕತೆಯನ್ನು ಪರಮಸತ್ಯವೆಂದು ತಮಿಳುನಾಡಿನಲ್ಲಿ ಇಂದಿಗೂ ಪಾಠಹೇಳುತ್ತಾರಂತೆ. ಕಲಪ್ಪಿರರು (ಕಳಭ್ರರು) ಎಂಬ ಆರ್ಯ ರಾಜರು ಹೇಗೆ ತಮಿಳನ್ನು ತುಳಿದು ಹಾಳುಗೆಡವಿದರು ಎಂದೆಲ್ಲ ಇಲ್ಲಸಲ್ಲದ್ದು ಹೇಳಿ ಮಕ್ಕಳ ಮನಸ್ಸಿನಲ್ಲಿ ಬೇರೆ ಸಂಸ್ಕೃತಿಗಳ ಬಗ್ಗೆ ವಿಷದ ಬೀಜ ಬಿತ್ತುವ ಇವರ ದುರ್ಬುದ್ಧಿಗೂ, ಮದರಸಾಗಳಲ್ಲಿ ನಡೆಯುವ ಕ್ರಮವಾದ brainwashಗೂ ಏನು ವ್ಯತ್ಯಾಸ? ಎರಡೂ ಕಡೆ ಹಗೆಯೇ! ಎರಡು ಕಡೆ "ನಮ್ಮನ್ನು ಇನ್ನೊಬ್ಬರು ಹಾಳು ಮಾಡಿದರು. ನಮ್ಮ ಈ ದುಃಸ್ಥಿತಿಗೆ ಕಾರಣರು ಬೇರೆಯವರು" ಎಂಬ ಮಹಾ ಅಪಾಯಕಾರಿ ವಿಷ ತುಂಬುತ್ತಿದ್ದಾರೆ. ಎರಡೂ ಕಡೆ ಇದಕ್ಕೆ ಸರ್ಕಾರ ಕುಮ್ಮಕ್ಕು ಕೊಟ್ಟಿದೆ. ಇದು ರಾಜಕೀಯವ್ಯಕ್ತಿಗಳಿಗೆ ಸುಗ್ಗಿಯ ಹಾಗೆ. ತಮಗೆ ತೋಚಿದಾಗ ತಮಗೆ ತೋಚಿದ ರೀತಿಯಲ್ಲಿ ವಿಷಯವನ್ನು ಅಡ್ಡಾದಿಡ್ದಿ ಎಳೆದು ಲಾಭಮಾಡಿಕೊಳ್ಳುವುದರಲ್ಲಿ ನಿಸ್ಸೀಮರಲ್ಲವೇ ಇವರು?
ಒಟ್ಟಿನಲ್ಲಿ ಈ ಪುಸ್ತಕದಿಂದ ಮನೋರಂಜನೆಯ ಜೊತೆಗೆ ನನಗೆ ದೊರೆತ ದೊಡ್ಡ ಪಾಠವೆಂದರೆ - ಮನಸ್ಸು-ಬುದ್ಧಿಗಳನ್ನು ಆದಷ್ಟೂ ಮುಕ್ತವಾಗಿ (open) ಇಡಬೇಕೆಂಬುದು. ಅದಿಲ್ಲದಿದ್ದರೆ ಏನಾಗುವುದೆಂದು ತಿಳಿಯಲು ಈ ಪುಸ್ತಕವನ್ನೋದಿ.

|| ಇತಿ ಶಮ್ ||

12 comments:

Anonymous said...

ನಿಮ್ಮ ಈ ಲೇಖನ ಓದಿ "ತಮಿಳು ತಲೆಗಳ ನಡುವೆ" ಪುಸ್ತಕ ಓದುವ ಬಯಕೆ. ಆದರೆ ಇಲ್ಲಿ ಸಿಗುವುದಿಲ್ಲ, ಯಾಕೆಂದರೆ ನಾನಿರುವುದು "ಆಂಗ್ಲ ಜನರ ನಡುವೆ" :). ಈ ಪುಸ್ತಕದ ಕೆಲವು ಭಾಗಗಳನ್ನು ಬ್ಲಾಗಿನಲ್ಲಿ ಹಾಕಲು ಸಾಧ್ಯವೇ?

nIlagrIva said...

copyright ಉಲ್ಲಂಘನೆಯಾಗದಿದ್ದರೆ ಒಂದೆರಡು ಭಾಗಗಳನ್ನು ನಂತರ ಹಾಕುತ್ತೇನೆ.

ತಮಿಳು ಮಾಧ್ವ ಸಂಗೀತಗಾರನೊಬ್ಬ ಸಂಗೀತಕೃತಿಗಳನ್ನು ಹಾಡುವ ಒಂದು ಪ್ರಸಂಗವಿದೆ - "ಬಾಚಾವಿ ಕಣಬದಿಂ ಪಚೇಕಂ ಬಾರಣ್ಣಾ..." ಇದು ತಮಿಳು ನಾಲಗೆಯಲ್ಲಿ ನರ್ತಿಸಿದ ಯಾವ ಖ್ಯಾತ ಕೃತಿಯಿರಬಹುದೋ ಹೇಳಿ!!

ಸಪ್ನಾದಿಂದ ಇದನ್ನು ಆಂಗ್ಲರಿರುವೆಡೆ ಕೂಡ ತರಿಸಬಹುದು ಎಂದುಕೊಂಡಿದ್ದೇನೆ. ಯತ್ನಿಸಿ ನೋಡಿ. ಎಪ್ಪತ್ತು ರೂಪಾಯಿಯ ಪುಸ್ತಕ. ಆದರೆ ಕಾವ್ಯಾಲಯದವರು (ಈ ಪುಸ್ತಕದ ಪ್ರಕಾಶಕರು) ಮುದ್ರಣಾದೋಷಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹೇಳಬೇಕು. ಅವರ ಈಚಿನ ಪುಸ್ತಕಗಳ ಆವೃತ್ತಿಗಳು ಮುದ್ರಾರಾಕ್ಷಸರಿಂದ ತುಂಬಿ ತುಳುಕುತ್ತಿದೆ. ಅದೊಂದು ಬಿಟ್ಟರೆ ಚೆನ್ನಾಗಿದೆ ಪುಸ್ತಕ.

Satish said...

ನೀವು ಬಿಜಿಎಲ್ ಅವರ ಇತರ ಪುಸ್ತಕಗಳನ್ನೂ ಓದಬೇಕು - ಕಾಲೇಜು ರಂಗ (ಸಿನಿಮಾ ಆಗಿದೆ), ಅಮೇರಿಕದಲ್ಲಿ ನಾನು ಇತ್ಯಾದಿ.

ಓಪನ್ ಮೈಂಡ್ ಬಗ್ಗೆ ಕೊನೆಯಲ್ಲಿ ಚೆನ್ನಾಗಿ ಹೇಳಿ, ಪುಸ್ತಕವನ್ನೋದಲು ಉಳಿದವರನ್ನು ಪ್ರೇರೇಪಿಸಿದ್ದು ಇಷ್ಟವಾಯಿತು.

'ತ.ತ.ನ' ನನ್ನ ಬಳಿಯೂ ಇದೆ, ಅಮೇರಿಕದಲ್ಲಿ ಯಾರಾದರೂ ನನ್ನಿಂದ (ವಾಪಾಸು ಕೊಡುವ ಶಪಥಮಾಡಿ) ಎರವಲು ಪಡೆಯಬಹುದು.

ಅಥವಾ ಕನ್ನಡ ಸಾಹಿತ್ಯ.ಕಾಮ್ ನವರಿಗೆ ಈ ಪುಸ್ತಕವನ್ನು ಅಂತರ್ಜಾಲದಲ್ಲಿ ಪ್ರಕಟಿಸುವಂತೆ ಬರೆಯಬಹುದು.

sritri said...

ಖಂಡಿತ ವಾಪಸ್ ಕೊಡುತ್ತೇನೆ. ಕೊಡಿ :)

sritri said...

ನೀಲಾಗ್ರೀವರೇ,
"ಬಾಚಾವಿ ಕಣಬದಿಂ ಪಚೇಕಂ ಬಾರಣ್ಣಾ" - ಇದು ವಾತಾಪಿ ಗಣಪತಿಂ?? ಇರಬಹುದೇ?

nIlagrIva said...

ತ್ರಿವೇಣಿಯವರೇ,
ಹೌದು. ನಿಮ್ಮ ಉತ್ತರ ಸರಿಯಾಗಿದೆ. "ವತಾಪಿ ಗಣಪತಿಂ ಭಜೇ" ಎಂಬ ಸಂಸ್ಕೃತ ಕೃತಿಯ ತಮಿಳು ಅವತಾರವಿದು.

ನಮ್ಮವರೇ ,("ನಿಮ್ಮವ"ರೇ), (ಇನ್ನು ಹೇಗೆ ಸಂಬೋಧಿಸಬೇಕು?)
ಬಿ.ಜಿ.ಎಲ್ ಅವರ ಪುಸ್ತಕಗಳನ್ನು ಇನ್ನೂ ಓದಬೇಕು. ಸದ್ಯಕ್ಕೆ ನನ್ನ ಹೆಂಡತಿ ಓದಿ ಮುಗಿಸಿದ ಮೇಲೆ - "ಹಸುರು ಹೊನ್ನು" ಓದುತ್ತೇನೆ. ಅದಾದ ಮೇಲೆ "ಕಾಲೇಜು ರಂಗ" ಓದಬಹುದು - ಈ ಹೆಸರಿನ ಸಿನೆಮಾ ನೋಡಿದ ನೆನಪಿದೆ . ಆದರೆ ಕಥೆ ಮರೆತುಹೋಗಿದೆ.

ಸ್ವಾಮಿಯವರು ಸಸ್ಯಶಾಸ್ತ್ರಜ್ಞಾರಾಗಿದ್ದರಿಂದ ನಮ್ಮ ದೇಶದ ಮೂಲದ ಗಿಡಗಳಾವವು, ಬೇರೆ ದೇಶಗಳಿಂದ ಬಂದ ಗಿಡಗಳಾವವು ಎಂದು ಚೆನ್ನಾಗಿ ತಿಳಿದವರು. ತೊಗರಿಬೇಳೆ ಬೇರೆಯ ದೇಶದ್ದು - ಹದಿನೇಳನೆ ಶತಮಾನದ ಮುಂಚೆ ಅದು ನಮ್ಮಲಿರಲಿಲ್ಲ ಎಂಬುದು ನಿಮಗೆ ಗೊತ್ತಿತ್ತೇ? ನನಗಂತೂ ಗೊತ್ತಿರಲಿಲ್ಲ. ಇದರ ಮೇಲೆ ಬರೆದಿರುವ ಪುಸ್ತಕ - "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಎಂಬುದು. ತುಂಬ ಕುತೂಹಲವಿದೆ ಈ ಪುಸ್ತಕ ಓದಬೇಕೆಂದು. ಸಮಯ ಸಿಕ್ಕಾಗ ಓದಬೇಕು.

ಇಷ್ಟು ಸೊಗಸಾಗಿ ವಿಷಯನಿರೂಪಣೆ ಮಾಡಬಲ್ಲಂಥ ಬರಹಗಾರರು ನಮ್ಮ ನಿತ್ಯದ ನೆನಪಿನಲ್ಲಿಲ್ಲ ಎಂಬುದು ನನಗೆ ನಿಜವಾಗಿಯೂ ಆಶ್ಚರ್ಯಕರ.

ಅಸತ್ಯ ಅನ್ವೇಷಿ said...

ನಾನು ಕೂಡ ಇರುವುದು ತಮಿಳು ತಲೆಗಳ ನಡುವೆ. ಅನಿವಾರ್ಯ ಕರ್ಮ... ಆದರೂ....
ಅವರು ನಮ್ಮ ಪ್ರೀತಿಯ ಭಾಭಿಯನ್ನು ಪಾಪಿ ಅಂತ ಕರೆಯೋದು ನನಗೆ ಚೂರೂ ಇಷ್ಟವಾಗೋದಿಲ್ಲ ನೋಡಿ.
ಅಸತ್ಯಾನ್ವೇಷಿಯನ್ನು ಅಸಾಧ್ಯಾನ್ವೇಸಿ ಅಂತ ಅನ್ವಯಿಸಿಯಾರೆಂಬ ಚಿಂತೆ ನನಗೆ.

nIlagrIva said...

ಅಸತ್ಯಾನ್ವೇಷಿಗಳೇ,
:) :)

ನಮ್ಮ ಪಾಪಿ, ಅಲ್ಲ ! ಕ್ಷಮಿಸಿ! ನಿಮ್ಮ ತಿರುಮತಿಯವರು ಚೆನ್ನಾಗಿದ್ದಾರೆ ತಾನೆ? :)

ಅಂದ ಹಾಗೆ, ನಾನಿರುವುದೂ ತಮಿಳು ತಲೆಗಳ ನಡುವೆ. ಆದರೆ ಬೆಂಗಳೂರಿನಲ್ಲಿ!! ಅದಕ್ಕೆ adjust ಮಾಡಿಕೊಳ್ಳಲು ಅಲ್ಪ-ಸ್ವಲ್ಪ ತಮಿಳು ಕಲಿಯಬೇಕಾಗಿ ಬಂದಿದೆ!

Satish said...

sritri ಅವರೇ

ನಿಮಗೆ ನಿಜವಾಗಿ ತ.ತ.ನ. ಬೇಕಾಗಿದ್ದರೆ ನಮ್ಮಿಬ್ಬರಿಗೂ ಪರಿಚಯವಿದ್ದು, 'ನಿಮ್ಮವ'ನ ಸುಳಿವನ್ನು ಬಿಟ್ಟುಕೊಡದ ಒಬ್ಬರಿಂದ ಈ ಪುಸ್ತಕವನ್ನು ನಿಮಗೆ ರವಾನಿಸಬಲ್ಲೆ - ದಯವಿಟ್ಟು ತಿಳಿಸಿ.

Satish said...

ನೀಲಗ್ರೀವರೇ,

'ನಿಮ್ಮವ'ನನ್ನು ಹೇಗಾದರೂ ಸಂಬೋಧಿಸಿಕೊಳ್ಳಿ - ತಮಿಳು ಆಕ್ಸೆಂಟಿನಲ್ಲಿ 'ನಿಮ್ಮವಾವಾ' ಎನ್ನದಿದ್ದರೆ ಸಾಕು!

ನಾನು ಮದ್ರಾಸಿನಲ್ಲಿರುವಾಗ ಭಾಷೆಯ ಉಪಯೋಗ ಹಾಗೂ ಬೆಳವಣಿಗೆಯ ಕುರಿತು ಯೋಚನೆ ಮಾಡಿದಷ್ಟು ಎಲ್ಲೂ ಮಾಡಿಲ್ಲವೆಂದುಕೊಂಡಿದ್ದೇನೆ - ಅದನ್ನೆಲ್ಲ ಪಬ್ಲಿಷ್ ಮಾಡಿದ್ದರೆ ಒಂದು ಥೀಸೀಸ್ ಆಗುತ್ತಿತ್ತೇನೋ...

ಪೂರಕ ಓದಿಗೆ ನನ್ನ ಹಳೆಯ ಪೋಸ್ಟ್ ಒಂದರಿಂದ ಬರೆದ ಈ ಸಾಲುಗಳನ್ನು ಓದಿ:

...

ನಾನು ಮದ್ರಾಸ್‌ನಲ್ಲಿದ್ದಾಗ (ನನ್ನ ಸಹೃದಯೀ ತಮಿಳು ಸ್ನೇಹಿತರಿಗೆ) ಈ ಮಾತನ್ನು ಪದೇ-ಪದೇ ಹೇಳ್ತಿದ್ದೆ: 'ಯಾವ ಭಾಷೆಯಲ್ಲಿ ನನ್ನ ಪೂರ್ಣ ಹೆಸರನ್ನು, ನನ್ನ ದೇಶದ ಹೆಸರನ್ನು, ನಮ್ಮ ಊರುಗಳ ಹೆಸರನ್ನು ಬರೆದು ಉಚ್ಚರಿಸಲಾಗದೋ ಅಂತಹ ಭಾಷೆಯನ್ನು ನಾನು ಕಲಿಯುವುದಿಲ್ಲ' ಎಂಬುದಾಗಿ. ಅವರು ಅದಕ್ಕೆ ಯಾವ ವಿರೋಧವನ್ನೂ ತೋರುತ್ತಿರಲಿಲ್ಲ (ಅದಕ್ಕೇ ಸಹೃದಯಿಗಳು ಎಂದದ್ದು!) - ಇಲ್ಲವೆಂದಾದರೇ ನೀವೇ ಯೋಚಿಸಿ, ಬರೆದಾಗ 'ಪರೋಠಾ'ಕ್ಕೂ 'ಬರೋಡಾ'ಕ್ಕೂ ವ್ಯತ್ಯಾಸವಿರಲೇಬೇಕಲ್ಲವೇ?

http://antaranga.blogspot.com/2006/04/blog-post_114538447236408684.html
...

nIlagrIva said...

"ನಿಮ್ಮವ"ರೇ,
ನಿಮ್ಮ ಮತವನ್ನು ಒಪ್ಪಬೇಕಾದದ್ದೇ. ನಮ್ಮ ಊರುಗಳ ಹೆಸರನ್ನು ಬರೆಯಲು ಸಾಧ್ಯವಿಲ್ಲದ ಭಾಷೆಯನ್ನು ಏಕೆ ಕಲಿಯಬೇಕು?

ಆದರೆ, ತಮಿಳಿನಲ್ಲಿ "ಗ್ರಂಥ"ವೆಂಬ ಒಂದು ಲಿಪಿಯಿದ್ದಿತೆಂದು ನಿಮಗೆ ಗೊತ್ತಿರಬಹುದು. ಸಂಸ್ಕೃತಪದಗಳನ್ನೂ ಚೆನ್ನಾಗಿ ಬರೆಯಲು ಸಾಧ್ಯವಿರುವಂಥ ಲಿಪಿಯದು. ಆದರೆ "ಆರ್ಯ" ಮತ್ತು "ದ್ರಾವಿಡ"ರ ಜಗಳದಲ್ಲಿ ಗ್ರಂಥವು ಕಳೆದುಹೋಗಿದೆ. ಈಚೆಗೆ ಅದನ್ನು ಪುನರುಜ್ಜೀವಿಸಲು ವೇದ ಪಾಠಶಾಲೆಗಳು ಯತ್ನಿಸುತ್ತಿವೆಯೆಂದು ಕೇಳಿದ್ದೇನೆ. ಈ ತಮಿಳಿನ (ದುರಭಿಮಾನದ) ರಗಳೆ ಪ್ರಾರಂಭವಾದದ್ದು ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲೆಂದು ಅಲ್ಲಲ್ಲಿ ಅಲ್ಪಸ್ವಲ್ಪ ಓದಿದ ನನಗೆ ಅನ್ನಿಸಿದೆ.

"ಚುಪ್ಕೆ ಚುಪ್ಕೆ" ಎಂಬ ಹಿಂದಿ ಚಲನಚಿತ್ರದಲ್ಲಿ "ಒಬ್ಬ ವ್ಯಕ್ತಿಯನ್ನು ಲೇವಡಿ ಮಾಡಬಹುದಾದರೂ ಒಂದು ಭಾಷೆ ಎಷ್ಟು ದೊಡ್ಡದಾಗಿರುತ್ತದೆಯೆಂದರೆ ಅದನ್ನು ಲೇವಡಿ ಮಾಡಲು ಸಾಧ್ಯವೇ ಇರುವುದಿಲ್ಲ" ಎಂಬ ಮಾತು ಬರುತ್ತದೆ.

ಇಲ್ಲಿ ಬರೆದ ಎಲ್ಲರಿಗೂ ತಮಿಳು ಭಾಷೆಯ ಬಗ್ಗೆ ಬೇಸರವಿಲ್ಲವೆಂದು ನನಗೆ ಗೊತ್ತು. ಬೇಸರವೇನಿದ್ದರೂ ತಮಿಳಿನ ಬಗ್ಗೆ ಇರುವ ದುರಭಿಮಾನದ ಬಗ್ಗೆ. ಅಲ್ಲವೇ?

Satish said...

ನೀಲಗ್ರೀವರೇ,

ಭಾಷೆ ಬಹಳ ದೊಡ್ಡದು, ಅದನ್ನು ದ್ವೇಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ -- ನೀವು ಹೇಳಿದಂತೆ ಆ ಭಾಷೆಯ ದುರಭಿಮಾನಿಗಳೂ, ಭಾಷೆಯನ್ನು ರಾಜಕೀಯ ಲಾಭಕ್ಕೆ ಬಳಸುವವರೂ ಹಾಗೂ ನಮ್ಮ ಕಣ್ಣಿಗೆ ಹೆಚ್ಚು ಹೆಚ್ಚಾಗೇ ಗೋಚರಿಸುವ ಒಂದು ಬಗೆಯ ಆಟ್ಟಿಟ್ಯೂಡ್ ಇರುವ ತಮಿಳು ಜನರೂ - ಇವರೆಲ್ಲರೂ ಸೇರಿ ಭಾಷೆಗೆ ಮಸಿಯನ್ನು ಬಳಿಯುತ್ತಾರೆ. ಭಾರತೀಯರಲ್ಲಿ ಭಾಷಾಂಧತೆ ಯಾರಿಗೆ ಹೆಚ್ಚು, ಏಕೆ ಎಂದು ಪ್ರಶ್ನೆ ಹಾಕಿಕೊಂಡಾಗಲೆಲ್ಲ ಉತ್ತರ ನಿಚ್ಚಳವಾಗಿ ಕಾಣತೊಡಗುತ್ತದೆ.

ಒಂದು ಕಡೆ ಹಲವಾರು ಸರ್ಕಾರ, ಆಡಳಿತಗಳ ವ್ಯವಸ್ಥಿತ ಹೊಂಚು, ಇನ್ನೊಂದೆಡೆ ಭಾಷೆಯ ಹೆಸರಿನಲ್ಲಿ ಎಲ್ಲವೂ ಒಟ್ಟುಗೂಡುವ ಪರಿಪಾಟ ಎದ್ದು ಕಾಣುತ್ತದೆ. ಎಲ್ಲಿಯವರೆಗೆ ತಮ್ಮನ್ನೆಲ್ಲ ಭಾಷೆಯ ಹೆಸರಿನಲ್ಲಿ ಗುರುತಿಸಿಕೊಂಡು ಸುಲಭವಾಗಿ ಸಮೂಹವಾಗುವ ಜನರಿರುತ್ತಾರೋ ಅಲ್ಲಿಯವರೆಗೆ ಹೊರಗಿನ ಸಾಮಾನ್ಯ ಜನರಿಗೆ ಇಂಥಾ ಸಮೂಹಗಳ ಭಾಷೆಯೇ ಕೆಟ್ಟದಾಗಿ ಕಂಡರೆ ತಪ್ಪೇನೂ ಇಲ್ಲ, ಅಲ್ಲವೇ?