Friday, May 12, 2006

ದೇಶೀಯ ಜೀವನ ಪದ್ಧತಿ

In search of a sustainable lifestyle - Deccan Herald - Internet Edition

ಮೇಲಿನ ಕೊಂಡಿ ಕ್ಲಿಕ್ಕಿಸಿದರೆ "ದೇಶಿ ಜೀವನ ಪದ್ಧತಿ" ಎಂಬ ಪುಸ್ತಕದ ಒಂದು ವಿಮರ್ಶೆ ಸಿಗುವುದು. ಪುಸ್ತಕ ಬರೆದವರು ಪ್ರಸನ್ನ ಎಂಬುವವರು.

ಲೇಖನ ಓದಿದಾಗ ನನಗನ್ನಿಸಿದ ಕೆಲವು ವಿಷಯಗಳನ್ನು ಇಲ್ಲಿ ಸಂಗ್ರಹಿಸುತ್ತಿದ್ದೇನೆ.

ಮೊದಲನೆಯದೆಂದರೆ ಇಂಧನ ಉಳಿತಾಯ. ಪ್ರತಿದಿನ ಕಾರಿನಲ್ಲಿ ಸಾಕಷ್ಟು ಓಡಾಡುವ ನಾನು ದಿನಕ್ಕೆ ಸ್ವಲ್ಪ ಹೆಚ್ಚು ಇಂಧನವನ್ನೇ ವ್ಯಯಿಸುತ್ತೇನೆ ಎಂದು ಹೇಳಬೇಕು. ಇದನ್ನು ಮಾಡುವಾಗ ನನಗೆ ನಿತ್ಯದ ಅಳುಕು. ಪರಿಸರದ ಬಗ್ಗೆ ಸ್ವಲ್ಪ ಕಾಳಜಿ ಇರುವವ ನಾನು ಎಂದು ನನ್ನ ಅನಿಸಿಕೆ. ಆದರೆ ನಾನೇ ಈ ರೀತಿ ಮಾಡಿದಾಗ ಕಾಳಜಿಯಿಲ್ಲದವರು ಇನ್ನೇನು ಮಾಡಿಯಾರು? ಮನೆಯೊಂದು ದಿಕ್ಕಿನಲ್ಲಿ ಕಛೇರಿ ಇನ್ನೊಂದು ದಿಕ್ಕಿನಲ್ಲಿರುವುದು ಸಾಮಾನ್ಯ. ಅದೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಮನೆ ಇರುವ ಜಾಗ ಬದಲಾಯಿಸಲು ಇಷ್ಟವಿಲ್ಲ. ಸದ್ಯಕ್ಕಿರುವ ಕೆಲಸವನ್ನು ಬಿಟ್ಟು ಬೇರೆಡೆ ಸೇರುವ ಮನಸ್ಸೂ ಇಲ್ಲ. ಸಾರ್ವಜನಿಕ ಬಸ್ಸಿನಲ್ಲಿ ಓಡಾಡಲು ಸಾಕಷ್ಟು ಸಮಯವೇ ಬೇಕಾಗುವುದು. ಹೀಗೆ ಕಾರೇ ನನಗೆ ಗತಿ. ಮನೆಮಂದಿಯೆಲ್ಲರೂ ಒಟ್ಟಿಗೆ ಓಡಾಡಬೇಕು ಎನ್ನುವ ಕಾರಣದಿಂದ ಸ್ವಲ್ಪ ದೊಡ್ಡ ಯಾನವನ್ನೇ ಕೊಂಡದಾಯ್ತು. ಹೀಗೆ ಸಂನ್ಯಾಸಿಯ ಸಂಸಾರದ ಹಾಗೆ ಗೃಹಸ್ಥನಾದ ನನ್ನ ಕಾರಿನ ಪುರಾಣ. ಇಂಧನವ್ಯಯವನ್ನು ಕಡಿಮೆ ಮಾಡಲು ಸಾಧ್ಯವಾಗುವುದು ಮನೆಯಿಂದಲೇ ಕೆಲಸ ಮಾಡುವುದರಿಂದ. ವಾರಕ್ಕೆ ಒಂದು ದಿನ ಮನೆಯಿಂದ ಕೆಲಸ ಮಾಡಲು ಯತ್ನಿಸುತ್ತೇನೆ. ಆದರೂ ಇಂಥ ಪುಸ್ತಕಗಳ ಮತ್ತು ಅಭಿಯಾನಗಳ ಬಗ್ಗೆ ಓದಿದಾಗ ಮನಸ್ಸಿನಲ್ಲಿ ಏನೋ ಅಳುಕು. ನನ್ನ ಜೀವನ ಶೈಲಿಯನ್ನು ಹೇಗೆ ಬದಲಾಯಿಸಬಹುದು ಅನ್ನುವುದರ ಬಗ್ಗೆ ಸ್ವಲ್ಪ ಗಂಭೀರವಾದ ಆಲೋಚನೆ ನಡೆಸಬೇಕಾಗಿದೆ.

ಇನ್ನೊಂದು ವಿಷಯ - ಬಟ್ಟೆ ಒಗೆಯುವ ಪುಡಿಯ ಬಗ್ಗೆಯದು. ಈಗ ಪ್ರಸನ್ನ ಒಂದು ಕುತೂಹಲದ ಸಂಗತಿಯನ್ನು ನಮ್ಮ ಮುಂದಿಡುತ್ತಾರೆ. ವಾಸ್ತವವಾಗಿ ನಮಗೆ ಬಟ್ಟೆ ಶುದ್ಧವಾಗಿರಬೇಕು ಮತ್ತು ಮೆತ್ತಗಿರಬೇಕೆಂಬುದೇ ಆವಶ್ಯಕವಂತೆ. ಹೊಳೆಯುವ ಬಿಳುಪು ಇತ್ಯಾದಿಯೆಲ್ಲವೂ ಬೇಕಾಗಿದೆ ಎಂದರೆ ಅದು ಜಾಹಿರಾತು ಮಾಡುವವರ ಮೋಡಿಯಂತೆ! ಇದು ಸ್ವಲ್ಪ ಅಶ್ಚರ್ಯದ ವಿಷಯವಲ್ಲವೇ? ಈಗ ನಿಮಗೆ ನಿಮ್ಮ ಬಟ್ಟೆ ಹೊಸದರಂತಿರಬೇಕು ಎಂಬ ಆಸೆಯೇ ಇರುವುದಿಲ್ಲವೇ? ನನಗಂತೂ ಇದೆ. ಆದರೆ ಬಟ್ಟೆ ಹೊಸದಾಗಿರುವಂತಿಡಲು ಸ್ವಲ್ಪ ತೀಕ್ಷ್ಣವಾದ ರಾಸಾಯನಿಕಗಳೇ ಬೇಕು ಅನ್ನುವ ಹಾಗೆ ಪ್ರಸನ್ನ ಬರೆದಿದ್ದಾರೆ. ರಸಾಯನ ಶಾಸ್ತ್ರವನ್ನು ಹೆಚ್ಚಾಗಿ ಓದದ ನನಗೆ ಈ ವಿಷಯದ ಸತ್ಯಾಂಶ ಎಷ್ಟು ಅನ್ನುವುದು ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಬೇರೆಯವರು ನಿಮ್ಮನ್ನು "ಸ್ವಚ್ಛ ಆದರೆ ಸ್ವಲ್ಪ ಮಾಸಲು ಬಣ್ಣದ ಅಂಗಿಯನ್ನು ಧರಿಸಿರುವವನು(ಳು)" ಎಂದು ಗುರುತಿಸಿದರೆ ತೊಂದರೆ ಇಲ್ಲವೇ? ನೀವೂ ನನ್ನ ಮಾತನ್ನು ಅನುಮೋದಿಸುತ್ತೀರಾ? ನಾವು ಆ ಮಟ್ಟಿಗೆ ಜಾಹಿರಾತುಗಳಿಂದ ಪ್ರಭಾವಿತರಾಗಿದ್ದೇವೆಯೇ?

ಪ್ಲಾಸ್ಟಿಕ್ಕಿನ ಅತಿ ಹೆಚ್ಚಿನ ಉಪಯೋಗದ ಬಗ್ಗೆ ನನ್ನ ವಿರೋಧವಿದೆ. ಇನ್ನು ಮುಂದೆ ಮನೆಯಲ್ಲಿ ಬಟ್ಟೆಯ ಚೀಲದ ಉಪಯೋಗ ಹೆಚ್ಚು ಮಾಡಲು ನಿರ್ಧರಿಸಿದ್ದೇನೆ. ಕ್ರಮೇಣ ಪ್ಲಾಸ್ಟಿಕ್ ಚೀಲಗಳ ಉಪಯೋಗ ನಿಲ್ಲಿಸಬೇಕು.

ಆಧುನಿಕ ಸೌಲಭ್ಯಗಳ ಸಾಮಾಜಿಕ ಆಯಾಮವನ್ನೂ ಪ್ರಸನ್ನ ನಮ್ಮ ಮುಂದಿಡುತ್ತಾರೆ. ಕಾಂಡೋಮುಗಳು ಹೆಚ್ಚು ಹೆಚ್ಚು ಲಭ್ಯವಿರುವುದರಿಂದ casual ಲೈಂಗಿಕ ಸಂಬಂಧಗಳಿಗೆ ದಾರಿ ಮಾಡಿ ಸಮಾಜದ ಶೈಥಿಲ್ಯಕ್ಕೆ ಕಾರಣವಾಗಿದೆಯಂತೆ. ಒಂದು ಕಡೆ ಜನಸಂಖ್ಯೆಯನ್ನು ಹತ್ತಿಕ್ಕುವಲ್ಲಿ ಸಹಾಯ ಮಾಡುವ ಈ ಸೌಲಭ್ಯ ಹೀಗೆ ಕೂಡ ಸಮಾಜದ ಅಧಃಪತನಕ್ಕೆ ಕಾರಣವಂತೆ. ನನಗೆ ಅಂಕಿ-ಅಂಶಗಳಿಲ್ಲದೆ ಇದನ್ನು ನಂಬಲು ಸಾಧ್ಯವಿಲ್ಲ. ಸಂಬಂಧಗಳನ್ನು ಅಂಕಿಗಳ ಮೂಲಕ ಅಳೆಯಲು ಸಾಧ್ಯವೇ? ಕಾಂಡೋಮುಗಳ ಬಳಕೆಯಿಂದ ಲೈಂಗಿಕ ರೋಗಗಳನ್ನು ತಡೆದ ಹಾಗಾಗಿಲ್ಲವೆ? ಹೀಗೆ ಇದರ ಬಗ್ಗೆ ಮನಸ್ಸು ದುವಿಧದಲ್ಲಿದೆ. ನಿಮಗೇನನ್ನಿಸುತ್ತದೆ?

ಒಂದು ದಿಕ್ಕಿನಿಂದ ಯೋಚಿಸಿದಾಗ - ಮಾನವ ಪ್ರಕೃತಿಯ ಕೂಸು. ಪ್ರಕೃತಿಗೂ ತನಗೂ ಕುಂದು ಬಾರದ ಹಾಗೆ ಜೀವನ ನಡೆಸುವುದು ಧರ್ಮ. ಪ್ರಕೃತಿಯನ್ನು ಮೀರಿ ಅದನ್ನು ಲೂಟಿ ಮಾಡಿದರೆ ನಮಗೇ ಹಾನಿ. ಪರಿಸರಕ್ಕೆ ಹಾನಿಯುಂಟು ಮಾಡುವ ಯಾವ ಕೆಲಸವನ್ನೂ ಮಾಡಬಾರದು.

ಆದರೆ ಇನ್ನೊಂದು ಕಡೆಯಿಂದ ಹೀಗೆ - ಪ್ರಕೃತಿಯಿರುವುದು ತನ್ನ ಪಾಡಿಗೇ ಆದರೂ ಮಾನವ ಅದನ್ನು ಉಪಯೋಗಿಸಬಹುದು, ಉಪಯೋಗಿಸಲೇ ಬೇಕು. ತನ್ನ ಆರಾಮಗಳನ್ನು ಹೆಚ್ಚು ಮಾಡಿಕೊಂಡರೆ ಬೌದ್ದಿಕವಾಗಿ ಮನುಷ್ಯ ಬೆಳೆಯುತ್ತಾನೆ; ಸಮಾಜವೂ ಬೆಳೆಯುತ್ತದೆ. ಪ್ರಗತಿ ಪ್ರಕೃತಿಯನ್ನು ಮೀರಿದ ಮೇಲೆ ತಾನೆ ಸಾಧ್ಯ? ಈಗ, ಆದಿ ಮಾನವ ಬೇಟೆಯಾಡುತ್ತಿದ್ದವನು ಕ್ರಮೇಣ ವ್ಯವಸಾಯವನ್ನು ಕಲಿತು ಒಂದೆಡೆ ಜೀವಿಸಲು ಪ್ರಾರಂಭಿಸಿದ್ದರಿಂದ ಅವನ ಬುದ್ದಿಯ ಬೆಳವಣಿಗೆ ಆಗಲಿಲ್ಲವೇ? ಈ ರೀತಿಯ ಬೆಳವಣಿಗೆಯಿಂದ ತಾನೆ ಈಗ ನಮ್ಮಂಥವರು ಗಣಕದಲ್ಲಿ ಕೀಲಿ ಮಾಡುತ್ತಿರುವುದು? ಈ ರೀತಿಯ ಆಲೋಚನಾಕ್ರಮದಿಂದ ತಾನೆ ಸಾಂಕ್ರಾಮಿಕ ರೋಗಗಳ ನಾಶವಾದದ್ದು? ಇದರಿಂದ ತಾನೆ ನದಿಗಳ ಮೇಲೆ ಅಣೆಕಟ್ಟುಗಳನ್ನು ಕಟ್ಟಿ ನೆರೆಯನ್ನು ಹತೋಟಿಯಲ್ಲಿಡಲು ಸಾಧ್ಯವಾಗಿದ್ದು?

ಪ್ರಕೃತಿಯನ್ನು ತೀರ ಅಲಕ್ಷ್ಯಮಾಡಲು ನನ್ನಿಂದ ಸಾಧ್ಯವಿಲ್ಲ. ಆದರೆ ಎಷ್ಟರ ಮಟ್ಟಿಗೆ ಆ ರೀತಿಯ ಜೀವನ ಸಾಧ್ಯ? ನಾವೆಲ್ಲರೂ ಕಾಡಿಗೆ ಹೋಗಿ ಮರದಿಂದ ಬಿದ್ದ ಹಣ್ಣುಗಳನ್ನು ಮಾತ್ರ ಸೇವಿಸಿ ಬದುಕಲು ಸಾಧ್ಯವೇ? ಈಗ ಭಾರತದಲ್ಲಿ ನರ್ಮದಾ ನದಿಯ ಮೇಲೆ ಅಣೆಕಟ್ಟು ಕಟ್ಟಬಾರದೆಂಬುದರ ಬಗ್ಗೆ ಚಳವಳಿ ನಡೆದಿದೆ. ಅಂಕಿ-ಅಂಶಗಳನ್ನು ಕಟ್ಟುವುದರ ಪರವಾಗಿರುವವರೂ ಮತ್ತು ವಿರೋಧಿಗಳೂ ಉಪಯೋಗಿಸುತ್ತಾರೆ. ಆದರೆ ಯಾರು ಸರಿ?

ಆದರೆ ಒಂದು ಮಾತು ಸತ್ಯ - yesterday's luxury becomes today's necessity. ಇದನ್ನು ನಾನು ಕಂಡುಕೊಂಡಿದ್ದೇನೆ. ಮೊಬೈಲುಗಳ ಉದಾಹರಣೆ ತೆಗೆದುಕೊಳ್ಳಿ. ಮೊಬೈಲುಗಳಿಲ್ಲದೆ ಆರಾಮವಾಗಿದ್ದವನು ನಾನು. ಆದರೆ ಅದನ್ನು ಕೊಂಡು ಉಪಯೋಗಿಸಿದ ನಂತರ ಮನೆಯನ್ನು ಬಿಟ್ಟೂ ಒಂದು ಘಳಿಗೆ ಹೋಗಬೇಕಾದರೂ ಸೆಲ್ ಫೋನ್ ನನ್ನ ಜೊತೆಯಲ್ಲಿರಬೇಕು. ಇಷ್ಟರ ಮಟ್ಟಿನ ಗುಲಾಮನಾಗಿದ್ದೇನೆ. ಈ ಗುಲಾಮಗಿರಿಯಲ್ಲಿ ನನ್ನದು ಮಾತ್ರವಲ್ಲದೆ ಸಮಾಜದ ಪಾತ್ರವೂ ಇದೆ. ಹಿಂದಾದರೆ ಯೋಜನೆ ಹಾಕಿ ನಂತರ ಕೆಲಸ ಮಾಡುತ್ತಿದ್ದರು. ಈಗ ಆಗ ಬೇಕಾಗಿರುವುದನ್ನು ಆಗಲೇ ಕಂಡುಕೊಳ್ಳುವುದು. ಛಕ್ಕನೆ ಸೆಲ್ ಫೋನಿಸುತ್ತಾರೆ. ಮಾಮೂಲಿ ಫೋನಿನಲ್ಲಿ ನಮಗೆ ಬೇಕಾದ ವ್ಯಕ್ತಿ ಸಿಗದಿರುವ ಸಾಧ್ಯತೆಯಿತ್ತು. ಆದರೆ ಈಗ "ಫೋನ್ ಯಾಕೋ ಆಫ್ ಮಾಡಿದ್ದೆ?" ಎಂದು ನಂತರ ಸಿಕ್ಕಿದ ಮೇಲೆ ಗದರುತ್ತೇವೆ. ಅಥವಾ "ಇನ್ನೂ ಸೆಲ್ ಫೋನ್ ಇಲ್ಲವಾ? ನಿನ್ನನ್ನು ನಾವು ಹೇಗೆ ಸಂಪರ್ಕಿಸುವುದು?" ಎಂದು ಪ್ರಶ್ನಿಸುತ್ತೇವೆ. ಈ ಲಕ್ಷುರಿಗಳು ಆವಶ್ಯಕತೆಗಳಾಗಿ ಮಾರ್ಪಡುವುದೇ ಪ್ರಗತಿಯ ಸಂಕೇತವೇ?

ಒಟ್ಟಿನಲ್ಲಿ ಎಲ್ಲಿ ನಿಲ್ಲಬೇಕು ಅನ್ನುವುದೇ ಪ್ರಶ್ನೆ. ವಾನಪ್ರಸ್ಥರ ಹಾಗೆ ಅಪರಿಗ್ರಹ ಹಿಡಿಯಬೇಕೆ? ಅಥವಾ ಪ್ರಕೃತಿಯ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಬಾರದೆ? ಮೊದಲು ಎಲ್ಲಿದ್ದೆನೋ ಅಲ್ಲಿಗೇ ಬಂದಿದ್ದೇನೆ.

ನನ್ನ ಸದ್ಯದ ವಿಚಾರ ಹೆಸರು ತಿಳಿಯದ ಒಬ್ಬ ಕವಿ ಹಾಡಿದ ಹಾಗಿದೆ:

ಅವರವರಿಗೆ ಅವರ ಹಾದಿ, ಅವರ ಹಾದಿ...

3 comments:

Satish said...
This comment has been removed by a blog administrator.
Satish said...

ನೀಲಗ್ರೀವರೇ,

ಈ ಪುಸ್ತಕ ವಿಮರ್ಶೆಯ ಬಗ್ಗೆ ಬರೆದು ಮೂಲ ಪುಸ್ತಕವನ್ನೋದುವ ಆಸೆ ಹುಟ್ಟಿಸಿಬಿಟ್ಟಿರಿ, ಆದರೆ ನಿಮ್ಮ ಹಾಗೆ ನಾವು ಬೆಂಗಳೂರಿನಲ್ಲಿಲ್ಲವಲ್ಲಾ? ಮುಂದೆ ನೀವು ಹೀಗೇ ಮಾಡಿದರೆ 'ಅನ್ವೇಷಿ'ಗಳ ಬ್ಯೂರೋಗೆ ದೂರು ಕೊಡಬೇಕಾಗಿ ಬಂದೀತು ನೋಡಿ!

ಮೈಲ್ಡ್ ಡಿಟರ್ಜೆಂಟ್‌ನಲ್ಲಿ ನನಗೂ ನಂಬಿಕೆ ಇದೆ, ಆದರೆ ಪ್ರಾಡಕ್ಟ್‌ಗಳ ಬಗ್ಗೆ ಹೇಗೆ ಅಡ್ವರ್‌ಟೈಸ್‌ಮೆಂಟ್ ಕೊಟ್ಟರೂ, ನಾನು ಭಾರತದಲ್ಲಿದ್ದಾಗ ಅಂಗಿಯ ಕಾಲರಿಗೆ, ಬನಿಯನ್‌ನ ಕಂಕುಳಿಗೆ ಅಂಟಿದ ಕೊಳೆಯನ್ನು ತೆಗೆದು ಹಾಕಲು ಸಾಕು ಬೇಕಾಗಿ ಹೋಗುತ್ತಿತ್ತು. Sparkling white ಕಥೆಗೆ ಕಲ್ ಹಾಕ್ತು, ಮೇಲೆ ಇದ್ದ ಕೊಳೆ ಹೋದ್ರೆ ಅಷ್ಟೇ ಸಾಕು!

ಪ್ರಸನ್ನರು ಹೇಳಿದಂತೆ ಗಾಂಧಿ ಮತ್ತು ಅಂಬೇಡ್ಕರ್ ಅವರುಗಳು ಬಟ್ಟೆ ಅದಲು ಬದಲು ಮಾಡಿದರೆ ಅವರವರ ಗುಂಪುಗಳಲ್ಲಿ ಕಳೆದುಕೊಂಡು ಬಿಡುತ್ತಾರೆ ಎಂಬುದು ಸತ್ಯ. ನಿನ್ನೆ ಕಾಕತಾಳೀಯವಾಗಿ "Twenty Bucks" ಸಿನೆಮಾ ನೋಡಿದೆ, ಅದರಲ್ಲಿ ಒಂದು ಮಾತು ಬರುತ್ತದೆ "... man has no face, he is recognized by his clothes" .

ಪ್ರಸನ್ನರು ಹೆಗ್ಗೋಡಿನಲ್ಲಿ ದೇಸಿ ಶೈಲಿಯನ್ನೇನೋ ಅವರು ಸುಲಭವಾಗಿ ಅನುಸರಿಸುತ್ತಾರೆ, ವರ್ಷದ ಆರು ತಿಂಗಳು ಕೆಟ್ಟ ಛಳಿ ಇರುವಾಗ ನಾವೆಲ್ಲಿ ನಡೆದುಕೊಂಡು ಹೋಗೋಣ ಹೇಳಿ?

nIlagrIva said...

ಅಂತರಂಗಿಗಳೇ,
ನಿಮಲ್ಲಿ ಈ ಪುಸ್ತಕ ಓದುವ ಅಸೆ ಹುಟ್ಟಿತೆ? ನಾನು ಬ್ಲಾಗ್ ಬರೆದದ್ದು ಸಾರ್ಥಕವಾಯ್ತು ಬಿಡಿ.

ಅಮೇರಿಕದಲ್ಲಿದ್ದಾಗ ನನ್ನ ಕಥೆಯೂ ನಿಮ್ಮ ಹಾಗೆಯೇ ಇತ್ತು. ಒಂದು ಪುಸ್ತಕದ ಬಗ್ಗೆ ಅವರಿಂದ ಇವರಿಂದ ತಿಳಿಯುವುದು - ಅದೂ ಭಾರತೀಯ ಮೂಲದ ಪುಸ್ತಕದ ಬಗ್ಗೆ. ಆದರೆ ನನ್ನ ಬಳಿ ಇರದಿದ್ದರಿಂದ ತರಿಸಲು ಇಂಟರ್ನೆಟ್ ನಲ್ಲಿ ಹುಡುಕುವುದು. ಅದು ಸಾಕಷ್ಟು ಬೇಗ ಸಿಗುತ್ತಿರಲಿಲ್ಲವಾದ ಕಾರಣದಿಂದ ನಿಮ್ಮ ಸ್ಥಿತಿಯೇ! ಈ ರೀತಿ ಮತ್ತೆ ಆಗಬಾರದೆಂದೇ ಬೆಂಗಳೂರಿಗೆ ಮತ್ತೆ ಮರಳಿದ್ದು ಅಂತಲೂ ಹೇಳಬಹುದು! ಈಗ ಪುಸ್ತಕಗಳ ಕೊಳ್ಳುವಿಕೆ ಸ್ವಲ್ಪ ಭರದಿಂದಲೇ ಸಾಗಿದೆಯೆನ್ನಬೇಕು!

ಆದರೆ ಪ್ರಸನ್ನರು ಹೇಳಿದ್ದೆಲ್ಲವನ್ನು ಬೆಂಗಳೂರಿನಲ್ಲಿ ಅನುಸರಿಸುವುದೂ ಕಷ್ಟ. ಮನೆಯಿಂದ ಇಪ್ಪತ್ತೈದು ಮುವ್ವತ್ತು ಕಿ.ಮೀ. ದೂರದಲ್ಲಿರುವ ಕಛೇರಿಗೆ ನಡೆದು ಹೋಗಲಾಗುವುದೇ? ಜೊತೆಗೆ white ಧರಿಸಿ sparkling white ಧರಿಸದಿದ್ದರೆ ಅದು ಬಿಳಿಯೇ ಅಲ್ಲವೆನ್ನುತ್ತಾರೆ! ಸಮಾಜ ಪ್ರಸನ್ನರು ಮಾಡುವ ಬದಲಾವಣೆಯನ್ನು ಒಪ್ಪಲು ಕಷ್ಟ ಮಾಡುತ್ತದೆ. ಆದರೂ ಕೈಲಾದ್ದು ಮಾಡಬೇಕು. ಏನಂತೀರಿ?

ಅಮೇರಿಕದಲ್ಲಿ ಹಲವು ಅಂಗಡಿಗಳಲ್ಲಿ plastic or paper ಎಂದು ಕೇಳುತ್ತಾರಲ್ಲಾ, ಆಗ paper ಎಂದರೆ ಪರಿಸರಕ್ಕೆ ಒಂದಷ್ಟು ಒಳ್ಳೆಯದನ್ನು ಮಾಡಿದ ಹಾಗಲ್ಲವೇ? ಅಮೇರಿಕದಲ್ಲಿ ಬಿಡಿ. ಒಳ್ಳೆಯದನ್ನು ಮಾಡಿ ತಮ್ಮ ಋಣಭಾವ ಕಳೆದುಕೊಳ್ಳಲು ಬಹಳಷ್ಟು ದಾರಿಗಳಿವೆ. (ಇದು ಒಳ್ಳೆಯದರ ಜೊತೆಗೆ ಅಷ್ಟು ಒಳ್ಳೆಯದಲ್ಲ, ಅಲ್ಲವೇ? ) ಇರಲಿ, ಈ ಚರ್ಚೆಯನ್ನು ನಂತರ ಮುಂದುವರೆಸೋಣ. ಆಫೀಸಿಗೆ ಹೊರಡಬೇಕು!