ಗದುಗಿನ ನಾರಣಪ್ಪ ತನ್ನ ಕರ್ಣಾಟಭಾರತಕಥಾಮಂಜರಿಯಲ್ಲಿ - "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದು ಟೀಕಿಸಿದ್ದಾನೆ. ರಾಮಾಯಣವು ಹಿಂದಿನ ಅನೇಕ ಕವಿಗಳಿಗೆ ಕಾವ್ಯಸ್ಫೂರ್ತಿಯನ್ನೊದಗಿಸಿದ್ದರೂ ಆಧುನಿಕರಿಗೆ ಅದರಲ್ಲಿನ ಕಥೆ ಚರ್ವಿತ-ಚರ್ವಣವಾಗಿ ಕಂಡಿದೆ ಎಂದು ನನ್ನ ಅನಿಸಿಕೆ. ರಾಮಾಯಣದ ಕಥೆಯ ಮುಖ್ಯ ಧಾರೆ ಉಪಕಥೆ ಉಪಾಖ್ಯಾನಗಳೆಂಬ ಹೆಚ್ಚು ಕವಲುಗಳಿಂದ ಕೂಡಿರದೆ ನೇರವಾಗಿ ನಿರೂಪಿಸಲ್ಪಟ್ಟಿದೆ. ಭಾರತ ಹಾಗಲ್ಲ. ರಾಮಾಯಣ ದೊಡ್ಡ ನದಿಯಾದರೆ ಭಾರತ "ಮಹಾ" ಎಂಬ ಅನ್ವರ್ಥ ಬಿರುದನ್ನೂ ಸೇರಿಸಿಕೊಂಡು ಸಾಗರಸದೃಶವೆನಿಸಿದೆ, ಜೊತೆಗೆ ನಿತ್ಯನೂತನವಾಗಿ ಕೂಡ ಕಂಡಿದೆ. ರಾಮಾಯಣ ಭಾರತಗಳ ಮೇಲೆ ಮಾಡಿದ ಚಲನಚಿತ್ರಗಳ ಸಂಖ್ಯೆಯನ್ನೇ ಗಮನಿಸಿದರೆ ತಿಳಿಯುತ್ತದೆ. ಗಾತ್ರದಲ್ಲೂ ವಿಷಯವ್ಯಾಪ್ತಿಯಲ್ಲೂ ಮಹಾಭಾರತಕ್ಕೆ ಮಹಾಭಾರತವೇ ಸಾಟಿ.
ಇಷ್ಟು ದೊಡ್ಡದಾದ ಭಾರತವನ್ನು ಸ್ವಂತ ಕಾವ್ಯಪ್ರತಿಭೆಯಿಂದ ಅಲಂಕರಿಸುವುದು ಕಷ್ಟಸಾಧ್ಯವೇ. ಆದರೂ ಕುಮಾರವ್ಯಾಸ ಪಂಪರಾದಿಯಾಗಿ ಹಲವು ಕವಿಗಳು ಕನ್ನಡದಲ್ಲೂ, ಕಾಲಿದಾಸ, ಭಾರವಿ, ಮಾಘ, ರಾಜಶೇಖರ, ಭಾಸ, ಭಟ್ಟನಾರಾಯಣ ಮೊದಲಾದ ಸಂಸ್ಕೃತ ಕವಿ-ನಾಟಕಕಾರರೂ ಮಹಾಭಾರತದಿಂದ ಸಾಮಗ್ರಿಯನ್ನು ಪಡೆದಿದ್ದಾರೆ. ಮಹಾಭಾರತದಿಂದ ಪ್ರೇರಿತವಾದ ಉತ್ತಮ ಕೃತಿಗಳ ಸಾಲಿಗೆ ನಮ್ಮ ಭೈರಪ್ಪನವರ ಪರ್ವವನ್ನು ಅವಶ್ಯವಾಗಿ ಸೇರಿಸಬಹುದು, ಸೇರಿಸಲೇ ಬೇಕು.
ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿರುವಂಥದು. ಅದನ್ನಾಧರಿಸಿ ಕೃತಿನಿರ್ಮಾಣ ಮಾಡುವವರು ಸಾಮಾನ್ಯವಾಗಿ ಇಡಿಯ ಕಥೆಯ ನಿರೂಪಣೆಗೆ ಹೋಗದೆ ಕೆಲವು ಭಾಗಗಳನ್ನು ವಿಸ್ತರಿಸಿ ಅದಕ್ಕೆ ತಮ್ಮ ಮಾತಿನ ಚಮತ್ಕಾರವನ್ನೂ ಸೇರಿಸಿ ಹೆಚ್ಚು ರಂಜಕವಾಗಿ ಮಾಡುತ್ತಾರೆ. ಭೈರಪ್ಪನವರ ಪರ್ವ ಈ ಸಾಮಾನ್ಯ ಮಾರ್ಗಕ್ಕೆ ಹೋಗದ ಭಿನ್ನ ಕೃತಿ.
"ಪರ್ವ" ಎಂಬ ಹೆಸರಿನಲ್ಲೇ ಸಾಕಷ್ಟು ಅರ್ಥ ಅಡಗಿದೆ. ಮಹಾಭಾರತದ ಪರ್ವಗಳನ್ನು ಜ್ಞಾಪಿಸುವಂಥ ಈ ಪದ ಎರಡು ಯುಗಗಳ ಮಧ್ಯೆ, ಆ ಯುಗಗಳ ಧರ್ಮಗಳ ಮಧ್ಯೆ ಇರುವ ಸಂಧಿಕಾಲ ಅನ್ನುವುದನ್ನು ಕೂಡ ತನ್ನ ಅರ್ಥವ್ಯಾಪ್ತಿಯ ಒಳಗೆ ಸೇರಿಸಿಕೊಳ್ಳಲು ಸಮರ್ಥವಾಗಿದೆ. ಈ ಅರ್ಥವು ಇಡೀ ಕಥೆಯಲ್ಲಿ ಸ್ಫುಟವ್ಯಕ್ತವಾಗಿದೆ. ದ್ವಾಪರ ಮತ್ತು ಕಲಿಗಳ ನಡುವೆ ಇದ್ದ ಕಾಲವನ್ನು ಮಹಾಭಾರತ ತೋರಿಸುತ್ತದೆ ಎನ್ನುವುದು ತಿಳಿದ ಸಂಗತಿಯೇ. ಯುಗಗಳನ್ನು ಹೆಸರಿಸದೆ ಆ ಅರ್ಥ ಚೆನ್ನಾಗಿ ತಿಳಿಯುವ ಹಾಗೆ ಕಥೆ ಹೆಣೆಯಲ್ಪಟ್ಟಿದೆ.
ಮದ್ರ ದೇಶದ ಶಲ್ಯ ಮಹಾರಾಜನ ಮಗ ರುಕ್ಮರಥನ ಚಿಂತನೆಗಳಿಂದ ಕಥೆಯ ಆರಂಭ. ಆ ಹೊತ್ತಿಗೆ ಪಾಂಡವರು ತಮ್ಮ ಅಜ್ಞಾತವಾಸದ ನಂತರ ತಮ್ಮ ರಾಜ್ಯವನ್ನು ಪಡೆಯಲು ಯುದ್ಧಸನ್ನಾಹದಲ್ಲಿರುತ್ತಾರೆ. ಕೌರವರು ಪಾಂಡವರು ತಮ್ಮ ಸುತ್ತಣ ಪ್ರದೇಶಗಳ ರಾಜರನ್ನು ಓಲೈಸುವ ಯತ್ನ ನಡೆದಿರುತ್ತದೆ. ಅಲ್ಲಿಂದ ಮೊದಲ್ಗೊಂಡು ಸಿಂಹಾವಲೋಕನ ರೀತಿಯಲ್ಲಿ ಕಥೆಗೆ ಬೇಕಾಗುವ ಹಿನ್ನೆಲೆಯನ್ನು ಅದೇ ಒದಗಿಸಿಕೊಡುತ್ತದೆ.
ಒಂದು ಸಂಗತಿಯನ್ನು ಇಲ್ಲಿ ಹೇಳಲೇಬೇಕು. ಮಹಾಭಾರತದ ಕಥೆಯನ್ನು ಸುಮಾರು ಚೆನ್ನಾಗಿಯೇ ತಿಳಿದ ನನಗೆ "ಪರ್ವ" ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ತೋರಿಸಿದ್ದು ಚೆನ್ನಾಗಿತ್ತು. ಆದರೆ ಮಹಾಭಾರತದ ಕಥೆಯನ್ನು ತಿಳಿಯದೆ ಅಂದರೆ ಅದರ ಕಥೆಯ ಕಿಂಚಿತ್ತೂ ಪರಿಚಯವಿಲ್ಲದೆ "ಪರ್ವ"ವನ್ನು ಸವಿಯಬಹುದೇ? ನನ್ನ ಪ್ರಕಾರ : ಸಾಧ್ಯವಿಲ್ಲ. ಭಾರತೀಯರು ಯಾರಾದರೂ ಮಹಾಭಾರತದ ಸ್ಥೂಲಪರಿಚಯವನ್ನಾದರೂ ಹೊಂದಿರುತ್ತಾರೆ. ಭೈರಪ್ಪನವರಿಂದ ನಿರ್ಧರಿಸಲು ಕೂಡ ಇದು ಸ್ವಲ್ಪ ಕಷ್ಟವೇ ಇರಬಹುದು.
ಧರ್ಮದ್ವಯದ ನಡುವೆ ಇರುವ ಸಂಗ್ರಾಮವೆಂಬುದಾಗಿ ಪಾಂಡವ-ಕೌರವರ ಯುದ್ಧ ಕಾಣುತ್ತದೆ. ಇದು ಯಾವ ಧರ್ಮವೆಂದರೆ ಕಥೆಯ ಮೊದಲಿಗೆ ಹೋಗಬೇಕು. ಅಂದಿನ ಕಾಲದಲ್ಲಿ "ನಿಯೋಗ" ವೆಂಬುದು ಸಂತಾನೋತ್ಪತ್ತಿಗೆ ಸರ್ವರಿಂದಲೂ ಮಾನ್ಯವಾದ ಪದ್ಧತಿ. ಇಂದು "In vitro fertilization" ಅನ್ನು ಎಷ್ಟು ಸಹಾನುಭೂತಿಯಿಂದ ನೋಡುತ್ತೇವೆಯೋ ಅಷ್ಟೇ ಮಾನ್ಯತೆ ಆ ಕಾಲದಲ್ಲಿ ನಿಯೋಗ ಪದ್ಧತಿ ಕೂಡ ಪಡೆದಿತ್ತೆಂಬಂತೆ ಕಾಣುತ್ತದೆ. ಪತಿ ಅಶಕ್ತ ಅಥವಾ ಮೃತನಾದಾಗ ವಂಶವನ್ನು ಮುಂದುವರೆಸಲು ಒಬ್ಬ ಶುದ್ಧಚಾರಿತ್ರ್ಯದ ವ್ಯಕ್ತಿಯಿಂದ ವೀರ್ಯದಾನ ಪಡೆದು ಗರ್ಭಧರಿಸುವುದೇ ಈ ಪದ್ಧತಿ. ಈಗ ಇದರ ಮತ್ತೊಂದು ರೂಪ ವೀರ್ಯ"bank" ಗಳಾಗಿ ಕಾಣಿಸುತ್ತಿದೆ.
ನಿಯೋಗ ಮಹಾಭಾರತದ ಕಥೆಗೆ ಎಷ್ಟು ಮುಖ್ಯವೆಂಬುದನ್ನು ನಾನು ಅಷ್ಟು ಮನಗಂಡಿರಲಿಲ್ಲ. ಆದರೆ ಭೈರಪ್ಪನವರಿಗೆ ಇದು ಮೂಲಭೂತವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಭೀಷ್ಮನು ಸತ್ಯವತಿಯನ್ನು ತನ್ನ ತಂದೆಗೆ ಕೊಡಿಸಿ ಮದುವೆ ಮಾಡಿಸುವಾಗ ಮಾಡಿದ ಬ್ರಹ್ಮಚರ್ಯ ಪ್ರತಿಜ್ಞೆಯೇ ಮುಂದಿನ ಕಥೆಗೆ ಕಾರಣ. ನಂತರ ಸತ್ಯವತಿಯ ಮಕ್ಕಳಿಬ್ಬರೂ ಮಡಿದಾಗ ಅವಳು ಭೀಷ್ಮನನ್ನೇ ತನ್ನ ಸೊಸೆಯರನ್ನು ಕೈಹಿಡಿಯಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ಪ್ರತಿಜ್ಞಾಬದ್ಧನಾದ ಭೀಷ್ಮನು ಹಾಗೆ ಮಾಡುವುದಿಲ್ಲ. ಸತ್ಯವತಿ ತನ್ನ ಮದುವೆಗೆ ಮುಂಚೆ ಹುಟ್ಟಿದ ಮಗನಾದ ವ್ಯಾಸಮಹರ್ಷಿಯನ್ನೇ ಸೊಸೆಯರೊಂದಿಗೆ ನಿಯೋಗಕ್ಕಾಗಿ ಕರೆಯುತ್ತಾಳೆ. ಇದು ನಿಯೋಗದ ಮೊದಲ ಸಂಗತಿಯಾದರೆ ಕುಂತೀ-ಮಾದ್ರಿಯರದು ಇನ್ನೆರಡು.
ಪಾಂಡು ಮಹಾರಾಜನು ಸಂತಾನೋತ್ಪತ್ತಿಯಲ್ಲಿ ಅಶಕ್ತನಾದಾಗ ಕುಂತಿಯು ದೇವತೆಗಳಿಂದ ಮಕ್ಕಳನ್ನು ಪಡೆಯುವುದು ಮಹಾಭಾರತದಲ್ಲಿ ಹೇಳಿದೆ. ಭೈರಪ್ಪನವರು ತಮ್ಮ ಕೃತಿಯಲ್ಲಿ "ದೇವ" ಎಂಬ ಜನಾಂಗದ ಮುಖ್ಯರಿಂದ ಕುಂತಿಗೆ ನಿಯೋಗ ನಡೆದ ಹಾಗೆ ತೋರಿಸಿದ್ದಾರೆ. ಹೆಂಡತಿಯಲ್ಲದಿದ್ದರೂ ಹೆಂಡತಿಯಾಗಿ ಕುಂತಿ "ದೇವ" ಜನಾಂಗದ ಪ್ರಮುಖರನ್ನು ಸಂತಾನಕ್ಕಾಗಿ ಸೇವಿಸುತ್ತಾಳೆ. ಮಾದ್ರಿಯೂ ಹೀಗೇ ಮಾಡುತ್ತಾಳೆ. ಈ ಸಂಗತಿ ನಮ್ಮಲ್ಲಿನ ಮಡಿವಂತರಿಗೆ ಸ್ವಲ್ಪ ಕಷ್ಟವಾಗಿ ಕಾಣಬಹುದು. ಇದನ್ನು ನಮ್ಮ ಸಂಸ್ಕೃತಿಯ ಅವಹೇಳನವೆಂದೂ ಕೆಲವರು ಹೇಳಬಹುದು. ವೈಯಕ್ತಿಕವಾಗಿ ನನಗೆ ಇದು ಸ್ವಲ್ಪ ಸಾಮಾನ್ಯವಲ್ಲದ್ದೆಂದು ಅನಿಸಿದರೂ ತೀರ ಅಸ್ವಾಭಾವಿಕವಲ್ಲವೆಂದೆನಿಸುತ್ತದೆ. ವಾಸ್ತವತೆಯನ್ನು ಭೈರಪ್ಪನವರು ಕೈಬಿಡದೆ ಕಥೆಯ ಮುಂದಿನ ಗೊಂದಲಕ್ಕೆ ಇದು ಹೇಗೆ ಕಾರಣವಾಯ್ತೆಂದು ತೋರಿಸುತ್ತಾರೆ.
"ಪರ್ವ"ದಲ್ಲಿ ದುರ್ಯೋಧನ ಈ ಸಂಗತಿಯನ್ನುಪಯೋಗಿಸಿ ಪಾಂಡವರು ತಂದೆಗೆ ಹುಟ್ಟಿದ ಮಕ್ಕಳಲ್ಲವೆಂಬುದನ್ನೇ ಯುದ್ಧದ ಮುಖ್ಯಕಾರಣ ಮಾಡುತ್ತಾನೆ. ತನ್ನ ತಂದೆಯ ಹುಟ್ಟಿನ ಕಥೆಯನ್ನು ಜಾಣತನದಿಂದ ಮರೆಸುತ್ತಾನೆ. ಅವನಿಗೆ ಪಾಂಡವರ ಬಗ್ಗೆ ಇದ್ದ ಮತ್ಸರವೇ ಯುದ್ಧಕ್ಕೆ ಮೂಲಕಾರಣವಾದರೂ ನಿಯೋಗಪದ್ಧತಿಯ ಬಗ್ಗೆ ಅವನು ಮಾಡುವ (ಅಪ?)ಪ್ರಚಾರ ಅವನ ಸೈನ್ಯಕ್ಕೆ ಬಲವನ್ನಂತೂ ಒದಗಿಸುತ್ತದೆ. ಹೀಗೆ ನಿಯೋಗಪದ್ಧತಿ ಧರ್ಮವೋ ಅಧರ್ಮವೋ ಎಂಬುದು ದೊಡ್ಡ ಯುದ್ಧಕ್ಕೆ ಹೊರಗಿನ ಹಾಗೂ ಸ್ವಲ್ಪ ಮಟ್ಟದ ಒಳಗಿನ ಕಾರಣವೂ ಆಗುತ್ತದೆ.
ಭೈರಪ್ಪನವರಿಗೆ ಕ್ಷೇತ್ರ ಮತ್ತು ಬೀಜಗಳ ವಿಷಯ ಬಹಳ ಚಿಂತನೆಯನ್ನೊದಗಿಸಿದೆ. ಸಂತಾನ ಸೇರುವುದು ಕ್ಷೇತ್ರಕ್ಕೋ ಬೀಜಕ್ಕೋ? ವಂಶವೃಕ್ಷದಲ್ಲೂ ಇದೇ ಜಿಜ್ಞಾಸೆ. ಪರ್ವದಲ್ಲಿ ಹಲವು ಕಡೆಗಳಲ್ಲಿ ಇದೇ ಕಾಣುತ್ತದೆ. ಭೀಷ್ಮನಿಂದ ಮೊದಲ್ಗೊಂಡು ಧೃತರಾಷ್ಟ್ರ, ಪಾಂಡುಗಳ ಹುಟ್ಟು, ಪಾಂಡವರ ಹುಟ್ಟು, ಘಟೋತ್ಕಚನ ಹುಟ್ಟು, ಕರ್ಣನ ಹುಟ್ಟು - ಹೀಗೆ ಬರುವ ಕಥೆಯ ಹಲವು ಭಾಗಗಳಲ್ಲಿ ಇದೇ ಚಿಂತನೆಯನ್ನು ನಡೆಸುತ್ತಾರೆ. ಹಾಗೆ ನೋಡಿದಾಗ ವಸ್ತುತಃ ಪಾಂಡು ಮೊದಲ್ಗೊಂಡು ಬರುವ ಸಂತಾನವೆಲ್ಲಕ್ಕೂ ವ್ಯಾಸರೇ ಕಾರಣ! ವ್ಯಾಸರ ಮೊಮ್ಮಕ್ಕಳೇ ಪರಸ್ಪರ ಯುದ್ಧವಾಡಿ ಸಾಯುತ್ತಾರೆ!
ಜೊತೆಗೆ ನಿಯೋಗವನ್ನು ಒಂದು ಉದಾಹರಣೆ ಮಾಡಿಕೊಂಡು ಧರ್ಮದ ಆಚರಣೆಯ ಸ್ವರೂಪ ಹೇಗೆ ಕಾಲದಲ್ಲಿ ಬದಲಾಗುತ್ತದೆ ಎಂದೂ ತೋರಿದ್ದಾರೆ. ವ್ಯಾಸರ ನೆನಪಿನಲ್ಲಿ ತಮ್ಮ ಪೂರ್ವಜರು ಮಾಡಿದ ನಿಯೋಗದಲ್ಲಿ ಹೇಗೆ ರಾಣಿಯ ಅಲಂಕಾರವನ್ನು ಸಂತಾನಾಪೇಕ್ಷಿಯಾದ ರಾಜನೇ ಮಾಡುತ್ತಾನೆ ಎಂದು ಬರುತ್ತದೆ. ಆದರೆ ವ್ಯಾಸರೇ ನಿಯೋಗ ಮಾಡುವ ಸಮಯಕ್ಕೆ ಭೀಷ್ಮ - "ನಿಯೋಗವು ಕೇವಲ ದೈಹಿಕ ಕ್ರಿಯೆಯಾಗಬೇಕು, ಮನಸ್ಸು ಅಚಲವಾಗಿರಬೇಕು. ಅದರಲ್ಲಿರುವ ಇಬ್ಬರೂ ತಮ್ಮ ದೇಹಗಳನ್ನು ಆದಷ್ಟು ಕುರೂಪಮಾಡಿಕೊಳ್ಳಬೇಕು" ಎಂಬ ಕಟ್ಟಳೆ ಮಾಡುತ್ತಾನೆ. ಕುಂತಿಯದು ಸ್ವಲ್ಪ ಭಿನ್ನವಾಗುತ್ತದೆ. ಕೊನೆಯಲ್ಲಿ, ಯುದ್ಧದ ನಂತರ, ಉತ್ತರೆ(ಅರ್ಜುನನ ಸೊಸೆ)ಯ ಮಗು ಹುಟ್ಟುವುದಕ್ಕೆ ಮುಂಚೆಯೇ ಸತ್ತಾಗ ವಂಶಕ್ಕೆ ಬೇರೆ ಗತಿಯಿರುವುದಿಲ್ಲ. ಆಗ ದ್ರೌಪದಿ ಮತ್ತೆ ಗರ್ಭ ಧರಿಸಲು ನಿರಾಕರಿಸಿದಾಗ ಉತ್ತರೆಗೆ ನಿಯೋಗಮಾಡಿಸುವ ವಿಚಾರ ಬರುತ್ತದೆ. ಕುಂತಿಯೇ ಸ್ವಯಂ ನಿಂತು ನಿಯೋಗವನ್ನು ನಿಷೇಧಿಸುತ್ತಾಳೆ. ಇದು ಅಲ್ಲಿ ಕಾಣುವ ಸಂಗತಿ. ಹಲವು ಧರ್ಮಾಚರಣೆಗಳು ಹೇಗೆ ರೂಪಗೊಳ್ಳಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಇದು ಒಂದು ನಿದರ್ಶನ.
ಇಂಥ ದೊಡ್ಡ ಕೃತಿಯನ್ನು ಕುರಿತು ಬರೆಯುವಾಗ ಮೂಲ ಮಹಾಭಾರತದ ಹಿನ್ನೆಲೆ ಅನಿವಾರ್ಯ. ಆದ್ದರಿಂದ ಒಂದೇ ಭಾಗದಲ್ಲಿ ಮುಗಿಸಲು ಸಾಧ್ಯವಾಗದಿರುವಷ್ಟು ವಿಚಾರಗಳನ್ನು ನನ್ನಲ್ಲಿ "ಪರ್ವ" ಪ್ರಚೋದಿಸಿದೆ.
ನನಗನ್ನಿಸಿದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಬರೆದಿದ್ದೇನೆ. ಮುಂದಿನ ಭಾಗಗಳಲ್ಲಿ ಹಲವು ಪಾತ್ರಗಳ, "ಪರ್ವ"ದಲ್ಲಿ ನನಗೆ ಕಾಣಿಸಿದ ಚಿಂತನೆಗಳ ಬಗ್ಗೆ ಬರೆಯುತ್ತೇನೆ. ಈ ಲೇಖನವನ್ನು ಓದಿದವರು ಪ್ರತಿಕ್ರಯಿಸಿದರೆ ಸಂತೋಷ.
5 comments:
ಆತ್ಮೀಯ ನೀಲಗ್ರೀವರಿಗೆ,
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
ನಿಮ್ಮ ಈ ವ್ಯಾಖ್ಯಾನ ಓದಿ ಬಹಳ ಸಂತೋಷವಾಯಿತು. ನಾನು 'ಪರ್ವ' ಇನ್ನೂ ಓದಿಲ್ಲ. ನಿಮ್ಮ ಲೇಖನ ಓದಿದ ನಂತರ ಇನ್ನು ತಡ ಮಾಡಕೂಡದು ಎಂದು ಮನಸ್ಸು ಹೇಳಿದೆ.
ಮುಂದಿನ ಭಾಗಗಳ ನಿರೀಕ್ಷೆಯಲ್ಲಿ,
ನಿಮ್ಮವ
ಬೆಳ್ಳೂರ್
ಸರ್,
ಪರ್ವ ನಾನು ಓದಿದ ಅತುತ್ತಮ ಕೃತಿಗಳಲ್ಲಿ ಒಂದು. ಅದನ್ನು ಓದುತ್ತಿದ್ದ ಕಾಲದಲ್ಲಿ, ಓದಿಯಾದಮೇಲೆ ಮೂಡಿ ನಿಲ್ಲುವ ಭಾವ ನಿಜಕ್ಕೂ ಭೈರಪ್ಪರೆಡೆಗೆ ಬೆರಗು. ಅಷ್ಟೊಂದು ವಿಶ್ಲೇಷಣಾತ್ಮಕವಾಗಿ, study ಮಾಡಿ ಬರೆದಿದ್ದಾರಲ್ಲ; ನಿಜಕ್ಕೂ he is great.
ಪರ್ವದ ಬಗ್ಗೆ ನಾನೂ ಒಂದು ಟಿಪ್ಪಣಿ ಬರೆದಿದ್ದೇನೆ ನನ್ನ ಬ್ಲಾಗಿನಲ್ಲಿ. 'Parva in short' ಅನ್ನಬಹುದೇನೋ. ಆದರೆ ಅದನ್ನು ಪೂರ್ತಿ ಮಾಡಲು ಇನ್ನೂ ಪುರುಸೊತ್ತು ಆಗಿಲ್ಲ. ಪುರುಸೊತ್ತಾದರೆ ಓದಿ:
http://hisushrutha.blogspot.com/2006/08/blog-post_28.html
ನಿಮ್ಮ ಮಾತು ಒಪ್ಪುವಂಥದ್ದು. ಭೈರಪ್ಪನವರ ಮತ್ತೊಂದು ಕಾದಂಬರಿಯಲ್ಲಿ(ಬಹುಶಃ ಧರ್ಮಶ್ರೀ ಇರಬೇಕು) ಒಂದು ಮಾತು ಬರುತ್ತದೆ, ಯಾವುದೇ ಸಂಸ್ಕೃತಿಯಾಗಲೀ ಕಾಲಕಳೆದಂತೆ ಉತ್ತಮಗೊಳ್ಳುತ್ತಾ ಹೋಗುತ್ತದೆ ಎಂಬುದಾಗಿ. ಈ ಮಾತನ್ನು ಪರ್ವದಲ್ಲಿ ಬರುವ ನಿಯೋಗಕ್ಕೆ ಹೊಂದಿಸಿರುವಂತೆ ಕಾಣುತ್ತದೆ.
ನಾನು ಈಗ್ಗೆ ಎರಡು ತಿಂಗಳ ಹಿಂದೆ ಪರ್ವವನ್ನು ಓದಿದ್ದೆ. ಕಾಕತಾಳೀಯವೆಂದರೆ ಅದರ ಮರುದಿನವೇ, ಒಂದು ಉಪನ್ಯಾಸಕ್ಕೆ ಹೋಗಿದ್ದೆ. ಉಪನ್ಯಾಸ ನೀಡುತ್ತಿದ್ದವರು ಮೇಲುಕೋಟೆಯ ಆಚಾರ್ಯರು. ಅವರು ಆ ದಿನ ಪರ್ವದಲ್ಲಿ ಬರುವ ಗಾಂಧಾರಿಯ ಪಾತ್ರದ ವಿವರಣೆ ತಪ್ಪು ಎಂದು ಹೇಳಿದ್ದರು. ಇದರ ಕುರಿತಾಗಿ ನನ್ನ ಬ್ಲಾಗಿನಲ್ಲಿ http://sampada.net/blog/sunil_jayaprakash/13/11/2006/2451 ಪ್ರಸ್ತಾಪಿಸಿದ್ದೆ. ಬಿಡುವಾದಾಗ ಓದಿ ನೋಡಿ.
ನಿಮ್ಮ ಅನಿಸಿಕೆಗಳು ಉತ್ತಮವಾಗಿ ವ್ಯಕ್ತಪಡಿಸಿದ್ದೀರಿ- ಧನ್ಯವಾದಗಳು. ನಿಮ್ಮ ಲೇಖನವನ್ನು ಮುಂದುವರಿಸಿ.
'ಪರ್ವ' ದಂತಹ ಮತ್ತೊಂದು ಕಾದಂಬರಿ 'ನ ಭೂತೋ ನ ಭವಿಷ್ಯತಿ' ಅನ್ಸತ್ತೆ ನನಗೆ. ಪ್ರಾಯಶ: ಇದನ್ನು ನನ್ನ ತಾರುಣ್ಯದ ಪ್ರಾರಂಭದ ದಿನಗಳಲ್ಲಿ ಓದಿದ್ದರೆ ಅಷ್ಟೊಂದು ಪ್ರಭಾವಿತನಾಗಿರ್ತಿರಲಿಲ್ಲ ಅನ್ಸತ್ತೆ. ಏಕೆಂದರೆ ಆಗಿನ್ನೂ ನನ್ನ ಮನಸ್ಸು ಮತ್ತು ಬುದ್ಧಿ ಈ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ನೋಡಲು ಬಿಡುತ್ತಿರಲಿಲ್ಲ (ಆಗಲೂ ಭೈರಪ್ಪನವರ ನಂ. ೧ ಅಭಿಮಾನಿಯಾಗಿದ್ರೂ ಸಹ).
ನಾನು 'ಪರ್ವ' ದ ವಿಮರ್ಶಾ ಕೃತಿಗಳನ್ನು ಪ್ರಯತ್ನಪೂರ್ವಕವಾಗಿ ದೂರ ಇಟ್ಟಿದ್ದೇನೆ. ಈ ಕೃತಿಯಲ್ಲಿ ನಾನು ಮೆಚ್ಚಿದ ಪಾತ್ರಗಳೆಂದರೆ ಕುಂತಿ, ದ್ರೌಪದಿ ಮತ್ತು ಕರ್ಣ. 'ಪರ್ವ' ಪ್ರತಿಯೊಂದು ಸಲ ಓದಿದಾಗಲೂ ಬೇರೆ ಬೇರೆ ರೀತಿಯಾದ ಸ್ತರದಲ್ಲಿ ಕಾಣುತ್ತದೆ!
ಪ್ರತಿಕ್ರಯಿಸಿದವರಿಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಕೊಂಡಿಗಳನ್ನು ನೀಡಿದಕ್ಕಾಗಿ ಧನ್ಯವಾದಗಳು. ಖಂಡಿತ ಓದುತ್ತೇನೆ.
ಆಫೀಸಿನಲ್ಲಿ ಕೆಲಸದ ಹೆಚ್ಚಳದಿಂದ ಒಂದು ಘಂಟೆ ನಿರಾಳವಾಗಿ ಕುಳಿತು ಬರೆಯುವುದಕ್ಕೂ ಸಮಯ ಸಿಗುವುದಿಲ್ಲ. ನನಗೆ ಸಮಯ ಸಿಗುವ ಹೊತ್ತಿಗೆ ಪರ್ವದ ಗುಂಗು ಹೋಗಿಬಿಟ್ಟಿರುತ್ತದೋ ಏನೋ !
ಪರ್ವದಲ್ಲಿ ನನಗಿಷ್ಟವಾಗದ ಸಂಗತಿಗಳೂ, ಮೂಲಭಾರತದೊಂದಿಗೆ ತುಲನೆ ಮಾಡಿದಾಗ ಸ್ವಲ್ಪ ಅಸಮಂಜಸ ವಿಷಯಗಳೂ ಕಾಣಿಸಿದವು. ಆದರೆ ಅದು ಒಂದು ಹಿರಿಯ ಕೃತಿ ಎಂಬುದನ್ನು ನಿಃಸಂಶಯವಾಗಿ ಹೇಳಬಹುದು.
ಎರಕ ಅವರೆ,ನೀವು ಕಾಲಕಳೆದಂತೆ ಸಂಸ್ಕೃತಿ ಉತ್ತಮಗೊಳ್ಳುತ್ತದೆಂಬ ಅಭಿಪ್ರಾಯವನ್ನು ಭೈರಪ್ಪನವರದೆಂದು ಹೇಳುತ್ತೀರಿ. ಆದರೆ ನನಗೆ ಹಾಗನ್ನಿಸುವುದಿಲ್ಲ. "ಪರ್ವ"ದಲ್ಲೂ ಹಾಗೇನು ಕಾಣಿಸಿಲ್ಲ. ಕಾಲಕ್ರಮೇಣ ಧರ್ಮದ ಆಚರಣೆ ನಿಶ್ಚಯವಾಗಿ ಬದಲಾಯಿಸಿದರೂ, ಅದರ ಮೂಲ ಆಶಯ ಬದಲಾಗಲು ಸಾಧ್ಯವಿದೆ. "ನಿಯೋಗ"ದ ಪದ್ಧತಿ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಆದರೆ ಅದು ಈಗ ಇಲ್ಲದೇ ಹೋಗಿರುವುದೇ ಧರ್ಮಾಚರಣೆಗಳಲ್ಲಿನ ಬದಲಾವಣೆ ತೋರಿಸುತ್ತದೆ.
ಇನ್ನೊಂದು ಉದಾಹರಣೆಯೆಂದರೆ - ಮಾಂಸಭಕ್ಷಣೆ. ವೇದ ಕಾಲದದಲ್ಲಿ ಋಷಿಗಳು ಮಾಂಸಾಹಾರಿಗಳಾಗಿದ್ದರು ಎನ್ನುವುದು ಆಶ್ಚರ್ಯ ಪಡುವ ವಿಷಯವೇನಲ್ಲ. ಆದರೆ ಈಗ ಆ ರೀತಿಯ ಜನ ಮಾಂಸ ತಿನ್ನುವುದಿಲ್ಲ. ಈಗ ಮಾಂಸ ಭಕ್ಷಣೆಯನ್ನು ದಕ್ಷಿಣದ ಬ್ರಾಹ್ಮಣರಂತೂ ಅಧರ್ಮವೆಂದಾಗಿ ಕಾಣುತ್ತಾರೆ. ನಾನು ನಿಯೋಗದ ಬಗ್ಗೆ ಬರೆದಿದ್ದು ಈ ಅರ್ಥದಲ್ಲಿ.
ಮಂಜು ಅವರೆ, ನಮ್ಮ ತಂದೆಯವರಿಗೂ ನಿಮ್ಮ ಹಾಗೇ ಅನ್ನಿಸಿತ್ತು. ಅವರು ಪರ್ವ ಮೊದಲ ಬಾರಿ ಓದಿದಾಗ ಕುಮಾರವ್ಯಾಸಭಾರತವನ್ನು ಓದಿದ ಅವರಿಗೆ ಪರ್ವದ ಪಾತ್ರಗಳು ಸಪ್ಪೆಯಾಗಿ ಆಘಾತಕಾರಿಯಾಗಿ ಕೂಡ ಕಂಡವು. ಅವರು ಹೇಳುತ್ತಿದ್ದ ಈ ವಿಷಯವನ್ನು ಹಲವು ಬಾರಿ ಕೇಳಿದ ನಾನು "prepared for the worst" ಆಗಿದ್ದೆ. ಆದ್ದರಿಂದ ನನಗೆ ಅಷ್ಟು ಆಘಾತವೆನ್ನಿಸಲಿಲ್ಲ. :)
Post a Comment