Friday, January 19, 2007

ಭೈರಪ್ಪನವರ ಪರ್ವ: ಚಿಂತನೆಗಳು : ಭಾಗ ೨

ಎಷ್ಟು ದಿವಸಗಾಳದವು ಬರೆದು ಎಂದೆನಿಸುತ್ತಿದೆ. ಪರ್ವ ಬುದ್ಧಿಯಿಂದ ಮನಸ್ಸಿನಿಂದ ಸ್ವಲ್ಪ ಜಾರುತ್ತಾ ಇದೆ. ಆದರೂ ಅದರಲ್ಲಿ ಬಂದ ಹಲವು ವಿಷಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ಭಾಗದಲ್ಲಿ ಮುಖ್ಯವಾಗಿ ಮಹಾಭಾರತದ ಮುಖ್ಯ ವ್ಯಕ್ತಿತ್ವಗಳನ್ನು ಭೈರಪ್ಪನವರು ಹೇಗೆ ಚಿತ್ರಿಸಿದ್ದಾರೆನ್ನುವ ಬಗೆಗೆ ನನಗೆ ಕಂಡಿದ್ದನ್ನು ಬರೆಯುತ್ತೇನೆ.

ಕಥೆಯ ಹೆಣೆಯುವಿಕೆಯನ್ನು ಅದ್ಭುತವಾಗಿ ಭೈರಪ್ಪನವರು ಮಾಡಿದ್ದಾರೆ ಅನ್ನುವುದು ಸವಕಲು ಮಾತಾದೀತು. ಭಾರತದ ಕಥೆಯನ್ನ್ಜು ಸಿಂಹಾವಲೋಕನದ ರೀತಿಯಲ್ಲಿ ನಿರೂಪಿಸಿದ್ದಾರೆಂಬುದನ್ನು ಹಿಂದಿನ ಭಾಗದಲ್ಲಿಯೇ ಬರೆದಿದ್ದೆ. ಇದರೊಂದಿಗೆ ಕಥೆಯನ್ನು ಸ್ಮರಿಸುತ್ತಿರುವ ಪಾತ್ರಗಳು ಕಥೆಯ ಆ ಭಾಗವನ್ನು ಹೇಗೆ ನೋಡಿದ್ದರು ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಅತೀಂದ್ರಿಯ ಶಕ್ತಿಗಳ ಉಲ್ಲೇಖ ಇದರಲ್ಲಿ ಲವಲೇಶದಷ್ಟೂ ಇರದಿದ್ದರೂ ಭಾರತೀಯ ಸಂಸ್ಕೃತಿಯ ಚಿಂತನಾಲಹರಿಯನ್ನು ಕ್ವಚಿದಪಿ ಬಿಟ್ಟಿಲ್ಲ.

ಕುಂತಿಯ ಸಿಂಹಾವಲೋಕನದಲ್ಲಿ ಹಿಮಾಲಯದ ತಪ್ಪಲಿನ ಜೀವನದ ಬಗ್ಗೆ, ಸಂಸಾರವನ್ನು ನಡೆಸಲು ಅಶಕ್ತನಾದ ಪಾಂಡುವಿನ, ದೇವ ಜನಾಂಗದ ಜನರ ಜೊತೆ ಆದ ಸಂಪರ್ಕದ ವಿಷಯಗಳು ಬರುತ್ತವೆ. ಕಥೆಯ ಆ ಭಾಗದಲ್ಲಿ ಕುಂತಿಯದೇ ಮುಖ್ಯ ಪಾತ್ರ ಎಂಬುದು ತಿಳಿದ ಮಾತೇ. ಭಾರತದಲ್ಲಿ ಕುಂತಿ ದೈಹಿಕವಾಗಿ ಹೇಗಿದ್ದಳು ಎಂಬ ವಿವರ ಬಂದಿದೆಯೋ ಇಲ್ಲವೋ ತಿಳಿಯದು. ಆದರೆ ಪರ್ವದಲ್ಲಂತೂ ಕುಂತಿಯ ವ್ಯಕ್ತಿತ್ವ ಮಾನಸಿಕವಾಗಿಯೂ ದೈಹಿಕವಾಗಿಯೂ ದೊಡ್ಡದು. ಅದರಿಂದಲೇ ಅವಳ ಮಕ್ಕಳು ಅಷ್ಟು ಶಕ್ತಿವಂತರಾದುದು. ಪಾಂಡವರಲ್ಲಿ ಮೊದಲ ಮೂವರು ಇವಳ ಮಕ್ಕಳು - ಮತ್ತು ಹೆಚ್ಚು ಖ್ಯಾತರು. ಯಮಳರಾದ ನಕುಲ-ಸಹದೇವರು ಮಾದ್ರಿಯ ಮಕ್ಕಳು, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಷ್ಟರ ಮಟ್ಟಿಗಿನ ಪಾತ್ರದವರು. ಧರ್ಮ ಭೀಮಾರ್ಜುನರ ಶಕ್ತಿ ತಾಯಿಂದ ಬಂದದ್ದು ಎಂದು ಚೆನ್ನಾಗಿ ಭೈರಪ್ಪನವರು ಕಾಣಿಸಿದ್ದಾರೆ. ಕುಂತಿಯ ಪಾತ್ರ ಮತ್ತೆ ಕರ್ಣನ ಪ್ರಸಕ್ತಿಯೊಂದಿಗೆ ಬರುತ್ತದೆ. ಕೊನೆಯಲ್ಲಿ ಯುದ್ಧಾನಂತರವೂ ಅವಳ ಪಾತ್ರ ಬರುತ್ತದೆ. ಒಟ್ಟಿನಲ್ಲಿ ಕುಂತಿಯ ಪಾತ್ರ ನೋಡಿದಾಗ ಮನಸ್ಸಿಗೆ ಬಂದ ಮಾತು - ದೊಡ್ಡ ಜೀವ ಎಂಬುದು. ರಾಜ ವೈಭವಗಳನ್ನೂ ಪತಿಯಿದ್ದರೂ ಅನುಭವಿಸಿದ ವೈಧವ್ಯವನ್ನೂ ವಯಸ್ಸಿಗೆ ಸಹಜವಾಗಿ ಬಂದ ಕಾಮನೆಗಳನ್ನೂ ಕಾಡಿನಲ್ಲಿ ಮಕ್ಕಳೊಂದಿಗೆ ಪಟ್ಟ ಪಾಡನ್ನೂ ಕೊನೆಯಲ್ಲಿ ಆದ ಮಾರಣಹೋಮವನ್ನೂ - ಇವುಗಳಿಗಿಂತ ಹೆಚ್ಚಿನದನ್ನೂ ಕುಂತಿ ಅನುಭವಿಸಿದಳು. ದೊಡ್ಡ ಜೀವ ಅನ್ನದೇ ಬೇರೆಯ ಮಾತಿಲ್ಲ. ಕುಂತಿಗೆ ಭೈರಪ್ಪನವರು ಕರ್ಣನ ಪ್ರಸಂಗದಲ್ಲಿ ಸ್ವಲ್ಪ ಕುಂದು ತಂದಂತೆ ಕಂಡರೂ ಆಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದನ್ನು ಅನಿವಾರ್ಯವೆಂಬಂತೆ ಕಾಣಿಸಿ ಅವಳ ಘನತೆಯನ್ನು ಎತ್ತಿಯೇ ಹಿಡಿದಿದ್ದಾರೆ ಎಂದು ಹೇಳಬೇಕು.

ಪಾಂಡವರ ತಾಯಿಯ ಪಾತ್ರ ಹೀಗಾದರೆ ಕೌರವರ ತಾಯಿಯ ಪಾಡು ಹೇಗೆ? ಮೂಲದ ಭಾರತದಲ್ಲಿ ಗಾಂಧಾರಿ ಪತಿವ್ರತಾಧರ್ಮದ ಪಾಲನೆಗೋಸ್ಕರ ಕಣ್ಣುಪಟ್ಟಿ ಕಟ್ಟಿಕೊಂಡರೆ ಇಲ್ಲಿ ಸ್ವಲ್ಪ ದೊಡ್ಡಸ್ತಿಕೆ ತೋರಲು ಮಾಡಿದ ಕೆಲಸವೆಂಬಂತೆ ಭೈರಪ್ಪನವರು ತೋರಿದ್ದಾರೆ. ಇಲ್ಲಿಯೂ ಗಾಂಧಾರಿ ಪತಿವ್ರತೆಯೇ! ಆದರೆ ಅಕೆಯ ಕಣ್ಣುಪಟ್ಟಿಯನ್ನು ಧರಿಸುವುದಕ್ಕೆ ಕಾರಣ ಬೇರೆ. ಕುರುಡನಾದ ಧೃತರಾಷ್ಟ್ರನಿಗೆ ಹೆಣ್ಣನ್ನು ಯಾರು ತಾನೇ ಕೊಡುತ್ತಿದ್ದರು? ಕನ್ಯಾಶುಲ್ಕವನ್ನು ಕೊಟ್ಟ ನಂತರವೇ ಭೀಷ್ಮರು ಗಾಂಧಾರಿಯನ್ನು ಕರೆತಂದದ್ದು. ಶುಲ್ಕಕ್ಕಾಗಿ ಬಂದ ಹೆಣ್ಣು, ಕುರುಡನನ್ನು ಮದುವೆಯಾಗುತ್ತಿದ್ದೇನೆ, ಇನ್ನು ಪ್ರಪಂಚವನ್ನು ನೋಡಿದರೇನು, ಬಿಟ್ಟರೇನು ಎಂಬ ವೈರಾಗ್ಯದ ಭಾವನೆ ಗಾಂಧಾರಿಯ ಈ ವರ್ತನೆಗೆ ಕಾರಣ (ಭೈರಪ್ಪನವರ ಪ್ರಕಾರ). ಹಸ್ತಿನಾವತಿಗೆ ಬಂದ ಮೇಲೆ ಎಲ್ಲರೂ ಈ ಕೆಲಸ ಮಾಡಿದ ಗಾಂಧಾರಿಯನ್ನು ದೊಡ್ಡವಳು, ಪರಮ ಸಾಧ್ವಿ ಎಂದೆಲ್ಲಾ ಬಗೆದಾಗ ಇವಳಲ್ಲೂ ಇದನ್ನು ಮುಂದುವರೆಸಿದರೆ ಚೆನ್ನ ಎಂಬ ಭಾವನೆ ಬಲಿತು ಹಾಗೆಯೇ ಮಾಡುತ್ತಾಳೆ. ಭೈರಪ್ಪನವರು ಇಲ್ಲಿ ಮೂಲದ ಭಾರತದಲ್ಲೂ ಅಸಂಗತವೆಂದು ಕಾಣದೆ ಇರುವ ಹಾಗೆ ಕಥೆಯನ್ನು ಹೆಣೆದಿದ್ದಾರೆ. ಕುಂತಿಯ ಮೇಲೆ ಈರ್ಷ್ಯೆ ಈಕೆಗೆ ಇದ್ದದ್ದೇ! ಯುದ್ಧಾನಂತರ ಕಣ್ಣುಪಟ್ಟಿ ಬೇಕೆಂದೇ ತೆಗೆಸುತ್ತಾಳೆ. ಯುದ್ಧರಂಗವನ್ನು ಕೃಷ್ಣಕುಂತಿಯರೊಡನೆ ನೋಡಿ ಬರುತ್ತಾಳೆ. ಮತ್ತೆ ಪಟ್ಟಿ ಧರಿಸುತ್ತಾಳೆ. ಇಲ್ಲಿ ಒಂದು ಕರುಣಾಜನಕವಾದ ಸಂದರ್ಭ ಸ್ಮರಿಸಲು ಯೋಗ್ಯ. ಕೌರವರೆಲ್ಲರೂ ಹತರಾದಾಗ ಪಾಂಡವರ ಕಡೆಯವರೆಲ್ಲರೂ ಅಂಧದಂಪತಿಗಳನ್ನು ನೋಡಲು ಹೋಗುತ್ತಾರೆ. ಬಲವಂತವಾಗಿ ನೋಡುವುದನ್ನು ಬಿಟ್ಟ ಗಾಂಧಾರಿಗೆ ತನ್ನ ಮಕ್ಕಳ ಮುಖಪರಿಚಯವಿರಲಿಲ್ಲವೆಂಬುದನ್ನು ಭೈರಪ್ಪನವರು ಜ್ಞಾಪಿಸುತ್ತಾರೆ. ಆಗ ಅವಳು ಪಾಂಡವರ ಕಡೆಯವರನ್ನು "ನನ್ನ ಮಕ್ಕಳು ನೋಡಲು ಚೆನ್ನಾಗಿದ್ದರೇ?" ಎಂದು ಕೇಳಿದಾಗ ಕರುಳು ಕಿವುಚಿಬರುತ್ತದೆ. ಎಂಥ ಕಲ್ಲೆದೆಯವರೂ ಇಲ್ಲಿ ಸ್ವಲ್ಪ ಸಹಾನುಭೂತಿಯನ್ನು ಗಾಂಧಾರಿಗೆ ನೀಡಿಯೇ ನೀಡುತ್ತಾರೆ.

ಗಾಂಧಾರಿಯನ್ನು ನೋಡಿದ ಮೇಲೆ ಧೃತರಾಷ್ಟನ ಸರದಿ. ಇವನ ಕುರುಡುತನ ಎರಡು ಬಗೆಯದು. ಭೌತಿಕ ಪ್ರಪಂಚವನ್ನು ಕಾಣದೆ ಇರುವುದು ಒಂದಾದರೆ ಧರ್ಮವನ್ನು ಕಾಣದೆ ಇರುವುದು ಇನ್ನೊಂದು. ಭೈರಪ್ಪನವರು ಇದನ್ನು ಹೀಗೆಯೇ ತೋರಿದ್ದಾರೆ. ಆಗಿನ ಕ್ಷತ್ರಿಯರು ಲೋಲುಪರು. ಸೂತಜಾತಿಯ ಪರಿಚಾರಿಕೆಯರನ್ನು ತಮ್ಮ ಕಾಮಾಗ್ನಿಯನ್ನು ಆರಿಸಲು ಬಳಸಿಕೊಳ್ಳುತ್ತಿದ್ದರು. ಧೃತರಾಷ್ಟ್ರನೂ ಇದಕ್ಕೆ ಹೊರತಲ್ಲ! ಕುರುಡನಾದರೂ ಲೋಲುಪತೆ ಬಿಟ್ಟಿರಲಿಲ್ಲವೆಂದು ಭೈರಪ್ಪನವರು ಸ್ಪಷ್ಟವಾಗಿ ತೋರಿದ್ದಾರೆ. ಪರ್ವದಲ್ಲಿ ಗಾಂಧಾರಿಯಿಂದ ಹದಿನಾಲ್ಕು ಮಕ್ಕಳನ್ನು ಧೃತರಾಷ್ಟ್ರ ಪಡೆದರೆ, ಮಿಕ್ಕ ಎಂಭತ್ತಾರನ್ನು ದಾಸಿಯರಲ್ಲಿ ಪಡೆದದ್ದು. ಇವನ ಒಂದು ಪಾತ್ರದ ವಿಶೇಷವನ್ನು ಇಲ್ಲಿ ಸ್ಮರಿಸಬೇಕು. ಕುರುಡನಾದರೂ ಅವನಿಗೆ ಕತ್ತಲೆಯ ಭಯ! ಉರಿಯುತ್ತಿರುವ ಎಣ್ಣೆಯ ವಾಸನೆಯಿಂದ ದೀಪ ಬೆಳಗುತ್ತಿದೆಯೋ ಇಲ್ಲವೋ ಎಂದು ಊಹಿಸುವ ಕುರುಡನಿಗೆ ಆ ಬೆಳಕು ಬೇಕು! ಆ ಬೆಳಕಿನ ಸೌಖ್ಯ ಬೇಕು! ಸಲಸಲವೂ ದಾಸಿಯನ್ನು "ದೀಪ ಉರಿಯುತ್ತಿದೆಯೇ" ಎಂದು ಕೇಳುತ್ತಾನೆ. ಅವನ ಪಾತ್ರವನ್ನು ಈ ಒಂದು ನಡೆವಳಿಕೆಯಿಂದ ಭೈರಪ್ಪನವರು ಚೆನ್ನಾಗಿಯೇ ಸೆರೆಹಿಡಿದಿದ್ದಾರೆ.

ಇದಾದ ಮೇಲೆ ಕಥೆಯ ಆರಂಭದಲ್ಲಿ ಮಾತ್ರ ಬರುವ ಧೃತರಾಷ್ಟ್ರನ ತಮ್ಮ ಪಾಂಡುವಿನ ಪಾತ್ರದ ಬಗ್ಗೆ ನೋಡೋಣ. ಮೂಲದಲ್ಲಿ ಋಷಿಯಿಂದ ಶಪ್ತನಾದ ಪಾಂಡು ಹಿಮಾಲಯದೆಡೆ ಪತ್ನೀಸಮೇತನಾಗಿ ತೆರಳುತ್ತಾನೆ. ಪರ್ವದಲ್ಲಿ ಹಾಗಲ್ಲ. ಯೌವನದ ಹೊಸ್ತಿಲಲ್ಲಿಯೇ ಅತಿಯಾದ ಕಾಮಕೇಳಿಯಿಂದ ತನ್ನ ಶಕ್ತಿಯೆಲ್ಲವನ್ನು ಕಳೆದುಕೊಂಡ ನತದೃಷ್ಟ ಪಾಂಡು. ಇವನು ಕುಂತಿಯ ನೆನಪಾಗಿಯೇ ಪರ್ವದಲ್ಲಿ ಬರುತ್ತಾನೆ. ಅಂದವಾದ ಹೆಂಡತಿಯೊಂದಿಗೆ ಸಂಸಾರ ಮಾಡಲು ಅಶಕ್ತನಾದ ಪಾಂಡುವಿಗೆ ಕುಂತಿ ಹೇಗೆ ತಾಯ ಹಾಗೆ ಕಾಣುತ್ತಾಳೆ ಎಂದು ಭೈರಪ್ಪನವರು ತೋರಿದ್ದಾರೆ. ಸಂತಾನಾಪೇಕ್ಷಿಯಾಗಿ ಅವನು ಹಿಮಾಲಯದ ತಪ್ಪಲಿನಲ್ಲಿ ದೇವ ಜನಾಂಗದ ಮುಖ್ಯರನ್ನು ಸಂತಾನಭಿಕ್ಷೆಗಾಗಿ ಬೇಡುತ್ತಾನೆ. ಕ್ಷೇತ್ರವಂತೂ ಕುಂತಿಯದು. ಪರ್ವದ ಪಾಂಡುವಿಗೆ ಔಷಧೋಪಚಾರಗಳಿಂದ ತನ್ನ ಹಿಂದಿನ ಶಕ್ತಿ ಮರಳಬಹುದೆಂಬ ಆಸೆಯಿರುತ್ತದೆ. ಆದರೆ ಆಸೆ ಚಿಗುರುತ್ತಲೇ ಪಾಂಡು ಮರಣವನ್ನಪ್ಪುತ್ತಾನೆ. ಪಾಂಡವರೂ ವಸ್ತುತಃ ಪಾಂಡುವಿನ ಮಕ್ಕಳಾದರೂ ಕೇವಲ ಹೆಸರಿಗೆ ಮಾತ್ರ ಅವನ ಮಕ್ಕಳು ಎಂದು ಎಲ್ಲರಿಗೂ ತಿಳಿದಿರುತ್ತದೆ. ಕಥೆಯಲ್ಲಿ ಅಲ್ಲಲ್ಲಿ ಕುಂತಿಯ ಮಕ್ಕಳು ಎಂದೇ ಪಾಂಡವರನ್ನು ಹೆಸರಿಸುತ್ತಾರೆ.

ಪಾಂಡವರ ಪಾತ್ರಗಳ ಬಗ್ಗೆ ಬರೆಯಲು ಹೊರಟಿದ್ದೆ. ಅದು ಹೋಗಿ ಅವರ ಮಾತಾಪಿತೃಗಳ ಬಗ್ಗೆ ಆಯ್ತು. ಈಗಿನ ಭಾಗ ಆಗಲೇ ದೊಡ್ಡದಾಗುತ್ತಾ ಬಂದಿದೆ. ಮುಂದಿನ ಭಾಗದಲ್ಲಿ ನನಗೆ ಕಂಡ ಬೇರೆಯ ಸಂಗತಿಗಳ ಬಗ್ಗೆ ಬರೆಯುತ್ತೇನೆ.

3 comments:

parijata said...

ಮಹಾಭಾರತದಲ್ಲಿ ಸಂತಾನ ಕ್ಷೇತ್ರಕ್ಕೆ ಸೇರಿದ್ದು ಎಂಬ ಸೂಚನೆಯಿದೆ. ಅಂದರೆ ಒಬ್ಬನ ಪತ್ನಿ ಬೇರೊಬ್ಬನಿಂದ ಪಡೆದ ಮಗು ಅವಳ ಗಂಡನದೇ ಆಗುತ್ತದೆ. ಇಂತಹುದೇ ವಿಚಾರ ಬೇರೆಡೆಗಳಲ್ಲಿಯೂ ಬಂದಿದೆ. ಕಥಾಸರಿತ್ಸಾಗರದಲ್ಲಿನ ವೇತಾಲಪಂಚವಿಂಶತಿಯ ಒಂದು ಕಥೆ ಹೀಗಿದೆ. ಒಬ್ಬ ವರ್ತಕನ ಪತ್ನಿ ಮತ್ತು ಮಗಳು ದಿಕ್ಕಿಲ್ಲದವರಾಗಿ ದೇಶಾಂತರ ಹೋಗುತ್ತಿದ್ದಾಗ ನೇಣಿಗೆ ಹಾಕಿ, ಇನ್ನೇನು ಸಾಯುವಂತಿದ್ದ ಕಳ್ಳನನ್ನು ಸಂಧಿಸುತ್ತಾರೆ. ಕಳ್ಳನ ಕೋರಿಕೆಯ ಮೇರೆಗೆ ಅವನಿಗೆ ಆ ತಾಯಿಯು ಮಗಳನ್ನು ಧಾರೆಯೆರೆದ ಕೂಡಲೆ ಅವನ ಪ್ರಾಣ ಹೋಗುತ್ತದೆ. ಅವನ ಹಣವನ್ನು ತೆಗೆದುಕೊಂಡು ಇವರಿಬ್ಬರೂ ಬೇರೆ ಊರಿಗೆ ಬಂದು ಜೀವಿಸಿರುತ್ತಾರೆ. ಅಲ್ಲಿ ಒಬ್ಬ ಬ್ರಾಹ್ಮಣನಿಗೆ ಹಣ ಕೊಟ್ಟು ಅವನಿಂದ ಕಳ್ಳನ ಹೆಂಡತಿಯು ಗರ್ಭಿಣಿಯಾಗುತ್ತಾಳೆ. ಹುಟ್ಟಿದ ಮಗುವನ್ನು ಹಣದ ಸಮೇತ ಅಲ್ಲಿಯ ರಾಜನ ಹತ್ತಿರ ಬಿಟ್ಟು ಬರುತ್ತಾಳೆ. ರಾಜನು ಇವನನ್ನು ಬೆಳೆಸುತ್ತಾನೆ. ರಾಜನು ಸತ್ತಾಗ ಈ ಮಗುವೇ ರಾಜನಾಗುತ್ತಾನೆ. ಸಾಕುತಂದೆಯ ಅಂತ್ಯಕ್ರಿಯೆ ಮಾಡಲು ಬಂದವನಿಗೆ ಕಳ್ಳ, ಬ್ರಾಹ್ಮಣ ಮತ್ತು ರಾಜ - ಈ ಮೂವರ ಕೈಗಳು ಕಾಣಿಸುತ್ತವೆ. ಪಿಂಡವನ್ನು ಯಾರ ಕೈಯಲ್ಲಿಡಬೇಕೆಂಬ ಪ್ರಶ್ನೆಯನ್ನು ಬೇತಾಳ ಕೇಳುತ್ತಾನೆ. ಆಗ ರಾಜ ಕೊಟ್ಟ ಉತ್ತರ ಹೀಗಿದೆ. 'ಗರ್ಭವನ್ನು ಕೊಡುವುದಕ್ಕೋಸ್ಕರ ಬ್ರಾಹ್ಮಣನಿಗೆ ಹಣವನ್ನು ಕೊಟ್ಟಿದ್ದರಿಂದ ಈ ರಾಜನು ಬ್ರಾಹ್ಮಣನ ಮಗನಲ್ಲ. ಮಗುವನ್ನು ಸಾಕಲು ಸಹ ಹಣವನ್ನು ಕೊಟ್ಟಿದ್ದರಿಂದ ಮಗುವು ರಾಜನ ಮಗನೂ ಅಲ್ಲ. ಆದ್ದರಿಂದ ರಾಜನು ಕಳ್ಳನ ಮಗ, ಅವನ ಕೈಗೇ ಪಿಂಡವನ್ನು ಹಾಕಬೇಕು' ಎಂದು.

ಮತ್ತೊಂದೆಡೆ "ಗರ್ಭಿಣಿಯನ್ನು ಮದುವೆಯಾದವನು ಆ ಮಗುವಿಗೂ ತಂದೆಯಾಗುವಂತೆ..." ಎಂದು ಓದಿದ ಜ್ಞಾಪಕ. ಇದು ಎಲ್ಲಿ ಓದಿದ್ದು ಎಂಬುದು ಮರೆತುಹೋಗಿದೆ.

ಹೀಗೆ, ಧರ್ಮನದಿಯ ಹರವು-ಆಳಗಳನ್ನು ತಿಳಿಯುವುದು ಬಹಳ ಕಷ್ಟ. ತಿಳಿದಿದ್ದೇವೆಂದು ತಿಳಿಯುವುದು ಮೂರ್ಖತನ. ಒಂದು ದೇಶ-ಕಾಲಕ್ಕೆ ಸೂಕ್ತವಾದುದು ಮತ್ತೊಂದು ದೇಶ-ಕಾಲಕ್ಕೆ ಸೂಕ್ತವಲ್ಲದೆ ಇರಬಹುದು. ಈಗಿನ ನಮ್ಮ 'ಹಿಂದೂ ಲಾ' ಏನು ಹೇಳುತ್ತದೆಯೆಂಬುದು ನನಗೆ ತಿಳಿಯದು.

ಗಾಂಧಾರಿಯೊಬ್ಬಳೇ ನೂರು ಮಕ್ಕಳನ್ನು ಹಡೆಯಲು ಸಾಧ್ಯವಿಲ್ಲ. ಆದರೆ ಭೈರಪ್ಪನವರು ಕಾಣಿಸಿರುವಂತೆ ಧೃತರಾಷ್ಟ್ರನ ಎಂಭತ್ತಾರು ಮಕ್ಕಳು ದಾಸಿಯರಿಂದ ಪಡೆದವು ಎಂದು ಒಪ್ಪಲು ಸ್ವಲ್ಪ ಕಷ್ಟವಲ್ಲವೇ? ತಂದೆ ಸ್ವಯಂ ರಾಜನಾಗಿದ್ದರೂ (ಧೃತರಾಷ್ಟ್ರನಿಗೆ ಪಟ್ಟಾಭಿಷೇಕವಾಗಿರಲಿಲ್ಲ, ಅದು ಬೇರೆ ವಿಚಾರ) ದಾಸಿಯರ ಮಕ್ಕಳು ರಾಜಕುಮಾರರಿಗೆ ಸರಿಸಮವಾದ ಸ್ಥಾನವನ್ನು ಪಡೆಯಲು ಸಾಧ್ಯವೇ? ದಾಸಿಯರು ಶೂದ್ರರಿರಬಹುದೆಂದು ಅಂದುಕೊಂಡರೆ, ಧೃತರಾಷ್ಟ್ರನಿಂದ ಹುಟ್ಟಿದ ಅವರ ಮಕ್ಕಳು ಕ್ಷತ್ರಿಯರೇ ಅಲ್ಲ! ಕ್ಷತ್ರಿಯರಲ್ಲದವರನ್ನು ಅದು ಹೇಗೆ ವೃದ್ಧರು ಕುರುವಂಶದವರೆಂದು ಒಪ್ಪಿಕೊಂಡರು ಎಂಬುದಕ್ಕೆ ವಿವರಣೆಯಿದೆಯೇ? ನಾನು ಪರ್ವವನ್ನು ಓದಿಲ್ಲ. ಓದಿದವರು ಇದಕ್ಕೆ ಉತ್ತರ ಕೊಟ್ಟರೆ ಸಂತೋಷ.

nIlagrIva said...

ಇದನ್ನು ಹೇಳಲು ಮರೆತಿದ್ದೆ. ದಾಸಿಯರಿಂದ ಹುಟ್ಟಿದ ಮಕ್ಕಳನ್ನು ಪರ್ವದಲ್ಲಿ "ಸೂತ"ರೆಂದೇ ಪರಿಗಣಿಸಲಾಗಿದೆ. ಆದ್ದರಿಂದ ನೀವು ಹೇಳಿದ ಹಾಗೆ ದಾಸಿಯರಲ್ಲಿ ಹುಟ್ಟಿದ ಮಕ್ಕಳಿಗೆ ಕ್ಷತ್ರಿಯರ ಸ್ಥಾನಮಾನಗಳೇನೂ ದೊರೆಯುವುದಿಲ್ಲ. ದುರ್ಯೋಧನ ಮಾತ್ರ ಯುದ್ಧಕಾಲದಲ್ಲಿ ಇವರನ್ನು ತನ್ನ ತಮ್ಮಂದಿರೆಂದೇ ಕರೆಯುತ್ತಾನೆ. ಅದು ಕೇವಲ ಸ್ವಾರ್ಥದಿಂದ.

bellur said...

really loved that line about Dhritarashtra's blindness: Bhouthika and Dharmika.

waiting for the next post! (at the earliest)