Monday, January 29, 2007

ಭೈರಪ್ಪನವರ "ಪರ್ವ": ಚಿಂತನೆಗಳು: ಭಾಗ ೩

ಎಲ್ಲರಿಗೂ ತಿಳಿದ ಹಾಗೆ ಮಹಾಭಾರತದಲ್ಲಿ ಪಾಂಡವರದೇ ಮುಖ್ಯ ಸ್ಥಾನ. ಇವರ ವಿಚಿತ್ರದ ಹುಟ್ಟಿನ ಬಗ್ಗೆ ನನಗನಿಸಿದ್ದನ್ನು ಹಿಂದೆಯೇ ಬರೆದಿದ್ದೆ. ಪರ್ವದಲ್ಲಿ ಇದನ್ನು ಹೇಗೆ ನೋಡಲಾಗಿದೆ ಎನ್ನುವುದರ ಬಗ್ಗೆ ಕೂಡ ಹಿಂದಿನ ಭಾಗಗಳಲ್ಲಿಯೇ ಬರೆದದ್ದಾಯ್ತು. ಈಗ ಪರ್ವದಲ್ಲಿನ ಪಾಂಡವರು ನನಗೆ ಹೇಗೆ ಕಂಡರು ಅನ್ನುವುದರ ಬಗ್ಗೆ ಸ್ವಲ್ಪ ಬರೆಯುತ್ತೇನೆ.

ಚಿಕ್ಕಂದಿನಿಂದ ನನಗೆ ಮಹಾಭಾರತವೆಂದರೆ ಹೊಳೆಯುತ್ತಿದ್ದ ಹೆಸರು ಭೀಮನದು. ರಾಮಾಯಣವೆಂದರೆ ಆಂಜನೇಯನದು. ಇದು ನನ್ನ ವೈಯಕ್ತಿಕ ವಿಷಯವೋ ಅಥವಾ ಎಲ್ಲ ಮಕ್ಕಳಲ್ಲೂ ಹಾಗೆಯೋ ಎನ್ನುವುದನ್ನು ಅರಿಯೆ. ಭೀಮನ ನಂತರದ ಹೆಸರು ಅರ್ಜುನನದು. ಧರ್ಮರಾಯ ಮತ್ತು ಯಮಳರ ಬಗ್ಗೆ ಯೋಚನೆ ಸಹ ಬರುತ್ತಿರಲಿಲ್ಲ. ವಯಸ್ಸಾಗುತ್ತಾ ಭಾರತದ ಅರ್ಜುನನ ಪರಾಕ್ರಮವು ಮತ್ತು ಯುಧಿಷ್ಠಿರನ ಧರ್ಮಪ್ರಜ್ಞೆ ನನ್ನನ್ನು ಭೀಮನನ್ನು ಸ್ವಲ್ಪ ನೇಪಥ್ಯಕ್ಕೆ ತಳ್ಳುವ ಹಾಗೆ ಮಾಡಿತ್ತು. ಆದರೆ "ಪರ್ವ" ಓದಿದ ಮೇಲೆ ನನ್ನ ಚಿಕ್ಕಂದಿನ ಆಲೋಚನೆಯನ್ನು ಮತ್ತೊಮ್ಮೆ ನೋಡುವಂತಾಯ್ತು.

"ಪರ್ವ"ದಲ್ಲಿಯೂ ನನ್ನ ಚಿಕ್ಕಂದಿನಲ್ಲಿ ಹೇಗೋ ಹಾಗೆಯೇ! ಪಾಂಡವರಲ್ಲಿ ಭೀಮನಿಗೆ ಅಗ್ರ ಸ್ಥಾನ. ನಂತರದ್ದು ಅರ್ಜುನನದು. ಧರ್ಮ-ನಕುಲ-ಸಹದೇವರದು ನಾನು ಹಿಂದೆಯೇ ಬರೆದ ಹಾಗೆ ಒಂದು ರೀತಿಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಬಗೆಯವರು.

ಭೀಮನ ಪ್ರಸಕ್ತಿ ಬಂದಾಗ ಅವನು ತನ್ನ ಹಿಂದಿನ ಹೆಂಡತಿಯಾದ ಹಿಡಿಂಬೆಯನ್ನು ನೋಡಲು ಹೋಗುತ್ತಿರುತ್ತಾನೆ. ಅದು ಯುದ್ಧದಲ್ಲಿ ತನ್ನ ಮಗನಾದ ಘಟೋತ್ಕಚನ ಸಾಹಾಯ್ಯವನ್ನು ಕೇಳಲು. ಹಿಂದೆ ಹಿಡಿಂಬೆಯನ್ನು ಮಗುವಾದ ಘಟೋತ್ಕಚನನ್ನೂ ಹಾಗೆಯೇ ಬಿಟ್ಟು ಹೊರಟದ್ದರ ಬಗ್ಗೆ ಅಳುಕು ಭೀಮನಿಗೆ ಸಹಜವಾಗಿರುತ್ತದೆ. ತಿಳಿದೂ ತಿಳಿದೂ ದೇವಸೇನಾನಿಯಾದ ವಾಯುವಿನಿಂದ ತನ್ನನ್ನು ಪಡೆದ ತಾಯಾದ ಕುಂತಿಯ ಮಾತನ್ನು ಕೇಳಿ ಹೆಂಡತಿಯನ್ನು ಬಿಟ್ಟದ್ದರ ಬಗ್ಗೆ ಪಶ್ಚಾತ್ತಾಪವೂ ಇರುತ್ತದೆ. ನಾನೆಂದಿಗೂ ಹಿಡಿಂಬೆಯೊಂದಿಗಿನ ಭೀಮನ ಪುನಃಸಮಾಗಮದ ವಿಷಯವಾಗಿ ಯೋಚಿಸಿರಲಿಲ್ಲ. "ಪರ್ವ" ಅದು ಹೇಗಾಗಿದ್ದಿರಬಹುದು ಅನ್ನುವುದನ್ನು ಮನೋಜ್ಞವಾಗಿ ತೋರುತ್ತದೆ. ಪತ್ನೀ-ಸುತರನನ್ನು ಬಿಟ್ಟು ಯಾವ ನೈತಿಕ ಅಧಿಕಾರದಿಂದ ಮಗನ ನೆರವನ್ನು ಕೇಳಲು ಭೀಮನಿಗೆ ಸಾಧ್ಯವಿದ್ದಿರಬಹುದು? ಘಟೋತ್ಕಚನಿಗೂ ಹೆಂಡತಿ ಮಕ್ಕಳಿರುತ್ತಾರೆ. ಮಗ ಯುದ್ಧದಲ್ಲಿ ಸಾಯುವನು ಎಂದು ಮೊದಲೇ ತಿಳಿದ ಪರ್ವದ ಓದುಗನಿಗೆ ಈ ಸಂಗತಿ ಸ್ವಲ್ಪ ದುಃಖವುಂಟಾಗುವ ಹಾಗೆ ಮಾಡುತ್ತದೆ.

ಭೀಮನದು ಭೌತಿಕ ಸ್ತರದಲ್ಲಿ ಮೂಡಿದ ಪಾತ್ರ. ತಿಳಿದವರೊಬ್ಬರು ಈ ಸಂಗತಿಯನ್ನು ಹೇಗೆ ಭೈರಪ್ಪನವರು ಧ್ವನಿಸಿದ್ದಾರೆ ಎಂಬುದರ ಬಗ್ಗೆ ಹೇಳಿದರು. "ಪರ್ವ"ದಲ್ಲಿ ಭೀಮನಿಗೆ ತನ್ನ ದೇಹದ ಅವಯವಗಳ ಬಗ್ಗೆಯೇ ಚಿಂತೆ. ಬೆವರು, ಹಸಿವು, ಬಿಸಿಲು ಇತ್ಯಾದಿ. ಜೊತೆಗೆ ಅವನ ಚಿಂತನೆಗಳೂ ಹಾಗೆ. ಧರ್ಮರಾಯನ ಧರ್ಮಕ್ಕೆ ಕಟ್ಟು ಬೀಳಲು ಭೀಮನಿಗೆ ಎಂದಿಗೂ ಸುತರಾಂ ಇಷ್ಟವಿರುವುದಿಲ್ಲ. ಜೂಜಾಡುವ ತನ್ನ ಅಣ್ಣನ ಕೈಗಳನ್ನೇ ಸುಟ್ಟು ಹಾಕುವ ಮಟ್ಟಿಗೆ ಕೋಪ ಅವನಿಗೆ. ದ್ರೌಪದಿಗಾದ ಅವಮಾನಕ್ಕೆ ಸರಿಯಾಗಿ ಪ್ರತಿಕ್ರಯಿಸಿದವನೇ ಭೀಮ. ಇವನೂ ದ್ರೌಪದಿಯೂ ಸಮಾನಮನಸ್ಕರು. ನನಗೆ "ಪರ್ವ"ದ ಭೀಮ ಬಹಳ ಹಿಡಿಸಿದ. ಪ್ರಾಯಃ ಏಕೆಂದರೆ, ಮೂಲದ ಭೀಮನಿಗೂ ಇವನಿಗೂ ಕಡಿಮೆ ಅಂತರವಿರುವ ಕಾರಣವಿರಬಹುದು.

ಇದಾದ ನಂತರ ಅರ್ಜುನನದು. ಅರ್ಜುನನು ಪರ್ವದಲ್ಲೂ ಅಪ್ರತಿಮ ಬಿಲ್ಲುಗಾರ. ಆದರೆ ಇದರ ಬಗ್ಗೆ ಅವನಿಗೆ ಮೂಲದಲ್ಲಿ ಇರುವ ಹಾಗೆ ಒಂದು ಜಂಭ. ಜೊತೆಗೆ ವಿಲಾಸಿ ಪುರುಷ ಬೇರೆ. ಇವನಿಗೆ ಹಲವರು ಹೆಂಡತಿಯರು. ದ್ರೌಪದಿಯನ್ನು ಗೆದ್ದ ಅರ್ಜುನ ಅವಳಿಂದ ಬಹಳಷ್ಟು ಪ್ರೀತಿಯನ್ನು ಗಳಿಸಿಯೂ ಅದನ್ನು ಉಳಿಸಿಕೊಳ್ಳಲಾರದೆ ಹೋಗುತ್ತಾನೆ. ದ್ರೌಪದಿಗೂ ಅರ್ಜುನನಿಗೂ ನಿರಂತರ ಶೀತಲ ಸಮರ. ಅರ್ಜುನನು ಸುಭದ್ರೆಯೊಡನೆ ದ್ವಾರಕೆಗೆ ತೆರಳುವಾಗ ಹುಣ್ಣಿಮೆಯ ರಾತ್ರಿಯಿರುತ್ತದೆ. ಇದು ಅವನ ರಸಿಕ ಮನೋಭಾವವನ್ನು ತೋರುತ್ತದೆಯೆಂದು ಪರ್ವದಲ್ಲಿ ಧ್ವನಿಸಿದೆ ಎಂದು ತಿಳಿದವರೊಬ್ಬರು ಸೂಕ್ತವಾಗಿ ತೋರಿದರು. ಅರ್ಜುನನದು ಇನ್ನೊಂದು ಗುಣವೆಂದರೆ ಅವನ "ಧರ್ಮಪರಾಯಣತೆ". ಧರ್ಮದ ಬಾಹ್ಯ ಆಚರಣೆಗಳಿಗೆ ಬಹಳ ಮನ್ನಣೆ ಕೊಡುವ ಪಾತ್ರ ಅರ್ಜುನನದು. ಮೂಲದಲ್ಲೂ ಹಾಗೆಯೇ! ಆದರೆ ಪರ್ವದಲ್ಲಿ ಇದನ್ನು ಅವಗುಣವೆಂಬಂತೆ ಭೈರಪ್ಪನವರು ತೋರಿದ್ದಾರೆ. ಧರ್ಮದ ಅಂತರಂಗವನ್ನು ತಿಳಿಯುವ ಕುತೂಹಲ ಅರ್ಜುನನಿಗಿರುವುದನ್ನು ನಾನು ಪರ್ವದಲ್ಲಿ ನೋಡಲಿಲ್ಲ. ಧರ್ಮಜನ ಬಲಗೈ ಭಂಟನೆಂದರೆ ಅರ್ಜುನನೇ! ಮೂಲದ ಉತ್ತರಗೋಗ್ರಹಣ ಪ್ರಸಂಗದಲ್ಲಿ ಅನಿತರಸಾಧಾರಣವಾಗಿ ಮೆರೆಯುವ ಅರ್ಜುನ ಪರ್ವದಲ್ಲಿ ಕಾಣುವುದಿಲ್ಲ. ಮೂಲದಲ್ಲಿ ಯುದ್ಧಸಮಯದಲ್ಲಿ ಅರ್ಜುನ ವಿಷಾದದಿಂದ ಕೂಡಿ ಕೃಷ್ಣನಿಂದ ಗೀತೋಪದೇಶ ಪಡೆಯುತ್ತಾನೆ. ಆದರೆ ಪರ್ವದಲ್ಲಿನ ಅರ್ಜುನ ಅದನ್ನು ಪಡೆಯುವಷ್ಟು ವಿನಯಸಂಪನ್ನನಾಗಿ ನನಗೆ ಕಾಣಲಿಲ್ಲ.

ಇತರ ಕಾವ್ಯಗಳಲ್ಲಿ ಭುಜಕೀರ್ತಿ-ಕಿರೀಟಗಳ ಹೊತ್ತ ಅತೀಂದ್ರಿಯ ಶಕ್ತಿ ಸಂಪನ್ನರಾದ ಪಾಂಡವರು ಇಲ್ಲಿ ಎಲ್ಲ ಮನುಷ್ಯರ ಹಾಗೆ ಕಾಣಿಸುತ್ತಾರೆ. ಭೀಮಾರ್ಜುನರ ಪಾತ್ರಗಳ ಬಗೆಗಂತೂ ಹಾಗೆ ಪ್ರತಿ ನಿಮಿಷಕ್ಕೂ ಅನ್ನಿಸುತ್ತಿತ್ತು. ಎಲ್ಲಿ ಆ ಭೀಮಸೇನ? ಎಲ್ಲಿ ಇಲ್ಲಿನ ಭೀಮ? ನಾರಾಯಣನ ಸಹಚರನಾದ ನರನ ಅವತಾರನಾದ ಮೂಲದ ಅರ್ಜುನನೆಲ್ಲಿ? ಪರ್ವದ ಅಹಂಕಾರಿ ವಿಲಾಸಿ ಪುರುಷ ಅರ್ಜುನನೆಲ್ಲಿ? ಆದರೂ ಕುರುಕ್ಷೇತ್ರಯುದ್ಧದಲ್ಲಿ ಗೆಲುವಿಗೆ ಕಾರಣರು ಈ ಇಬ್ಬರೆ! ಪರ್ವದಲ್ಲಿಯೂ ಹೀಗೇ ಇರುವುದು.

ಇವರಿಬ್ಬರ ನಂತರ ಧರ್ಮರಾಯನ ಪಾತ್ರ. ನನ್ನ ಪ್ರಕಾರ ಭೈರಪ್ಪನವರು ಈ ಪಾತ್ರವನ್ನು ಸರಿಯಾಗಿ ಬೆಳೆಸಲಿಲ್ಲ. ಪರ್ವದ ಧರ್ಮರಾಜ ಒಬ್ಬ ಶಕ್ತಿಹೀನನಾದ "ಧರ್ಮಪರಾಯಣ"ನಾದ ನಿಷ್ಕ್ರಿಯನಾದ ರಾಜ. ದ್ರೌಪದಿ-ಭೀಮರಿಗಂತೂ ಇವನನ್ನು ಕಂಡರೆ ಆಗದ ಹಾಗೆ ಪರ್ವ ತೋರಿದೆ. ದ್ರೌಪದಿಯ ಸ್ವಯಂವರದ ನಂತರ ಇವಳನ್ನು ಗೆದ್ದು ತಂದ ಅರ್ಜುನನ ಮುಂದೆ ಅವಳ ಮೇಲೆ ಆಸೆಯನ್ನು ಧರ್ಮರಾಯ ತೋರುತ್ತಾನೆ. ಪಾಂಡವರಲ್ಲಿ ಒಡಕು ಮೂಡದಿರಲೆಂದೇ ಕುಂತಿ ಪಾಂಚಾಲಿಯನ್ನು ಪಂಚಪತಿಗಳ ಪತ್ನಿಯಾಗೆಂದು ಒಪ್ಪಿಸುತ್ತಾಳೆ. ಆದರೆ ಇದಕ್ಕೆ ಬೀಜ ಧರ್ಮರಾಯನೇ! ದ್ರೌಪದಿಯನ್ನು ಗೆಲ್ಲಲು ಅಸಮರ್ಥನಾಗಿದ್ದೂ ಅವಳ ಮೇಲೆ ಆಸೆಯನ್ನು ಪಟ್ಟು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕಿದವನಾಗಿ ಧರ್ಮರಾಯ ಪರ್ವದಲ್ಲಿ ಕಾಣುತ್ತಾನೆ. ದ್ರೌಪದಿಯಂತೂ ಇವನ ಬಗ್ಗೆ "ಧರ್ಮದ ಗಬ್ಬು" ಬರುವ ಬಾಯವನೆಂದು ತನ್ನಲ್ಲಿಯೇ ಬೈದುಕೊಳ್ಳುತ್ತಾಳೆ.

ಇಡೀ ಭಾರತದಲ್ಲಿ ಧರ್ಮಜ ತಪ್ಪು ಮಾಡುವುದು ನನಗೆ ಕಂಡ ಹಾಗೆ ಎರಡು ಬಾರಿ. ಒಂದು ದ್ಯೂತದ ಆಮಂತ್ರಣವನ್ನು ಅಂಗೀಕರಿಸಿ ಪಟ್ತದ ರಾಣಿಯನ್ನೂ ತಮ್ಮಂದಿರನ್ನೂ ಪಣವಾಗಿಡುವುದು. ಎರಡನೆಯದು ದ್ರೋಣನನ್ನು ಕೊಲ್ಲುವಾಗ ಸುಳ್ಳು ಹೇಳುವುದು. ಎರಡನೆಯದು ತಪ್ಪಲ್ಲ ಬಿಡಿ. ಆದರೂ ಇವೆರಡೆ ನನಗೆ ಕಾಣಿಸುವುವು. ಯಕ್ಷಪ್ರಶ್ನೆಯ ಪ್ರಸಂಗದಲ್ಲಿ ತಮ್ಮಂದಿರೆಲ್ಲರನ್ನು ಉಳಿಸುವುದು ಧರ್ಮಜ ಅಲ್ಲವೇ? ಸ್ವರ್ಗಾರೋಹಣದಲ್ಲಿಯೂ ನೇರವಾಗಿ ಸ್ವರ್ಗಕ್ಕೆ ಹೋಗಲು ಅನುಮತಿ ದೊರೆತದ್ದು ಧರ್ಮಜನಿಗೇ ಅಲ್ಲವೇ? ಆದರೂ ಪರ್ವದಲ್ಲಿ ಇವೆರಡು ಸಂಗತಿಗಳು ಧರ್ಮರಾಯನ ಪರವಾಗಿ ವಕಾಲತ್ತಿನಲ್ಲಿ ಸೋತ ಹಾಗೆ ಕಾಣುತ್ತವೆ. ತೀರ ದುರ್ಬಲ ಪಾತ್ರವಾಗಿ ಕಂಡಿದೆ. ನನಗೆ ಪರ್ವದಲ್ಲಿನ ಧರ್ಮಜನ ಪಾತ್ರ ಹಿಡಿಸಲೇ ಇಲ್ಲ.

ನಕುಲ-ಸಹದೇವರನ್ನು ಬಿಡಿ, ಅಯ್ಯೋ ಪಾಪವೆನಿಸುತ್ತದೆ. ಇವರ ಪಾತ್ರಗಳನ್ನು ಯಾರೂ ದೊಡ್ಡದಾಗಿ ಚಿತ್ರಿಸಿಲ್ಲ. ಪರ್ವದಲ್ಲಿಯೂ ಹಾಗೆಯೇ !

ಪಾಂಡವರ ಶಕ್ತಿಗೆ ಅವರ ಧರ್ಮವೇ ಕಾರಣವೆಂದು ಭೈರಪ್ಪನವರು ತೋರಿದ್ದಾರೆ. ಉದಾಹರಣೆಗೆ ಎಂದಿಗೂ ದಾಸೀಗಮನವನ್ನು ಮಾಡದವಾರು ಪಾಂಡವರು. ಹೀಗೆ ಇಂದ್ರಿಯ ಲೋಲುಪರಾಗದೆ ತಮ್ಮಲ್ಲಿನ ಶಕ್ತಿಯನ್ನುಳಿಸಿಕೊಂಡು, ಸೋಲಿನ ಬೆಂಕಿಯಿಂದ ತಪ್ತರಾಗಿ ವಿಜಯಗಳಿಸಿದವರು ಪಾಂಡವರು. ಆದರೆ ಎಂಥ ವಿಜಯ ಅದು?

ಮುಂದಿನ ಬಹುಮುಖ್ಯವಾದ ಪಾತ್ರ, ಕುಂತಿಯ ಹಾಗೆಯೇ ಪಾಂಡವರನ್ನು ಒಟ್ಟಾಗಿಯೇ ಇಡುವ ಇನ್ನೊಂದು ಪಾತ್ರ. ಅದು ದ್ರೌಪದಿ! ಮಹಾಭಾರತದಲ್ಲಿ ಹಿಂದಿನ ಜನ್ಮದಲ್ಲಿ ಐದು ಪತಿಗಳ ವರವನ್ನು ಬೇಡಿದ ಕಾರಣ ದ್ರೌಪದಿಯು ಐದು ಜನ ಗಂಡಂದಿರನ್ನು ಪಡೆಯಬೇಕಾಯ್ತು ಎಂದೆಲ್ಲ ಕೇಳಿದ್ದೇವೆ. ಪರ್ವದ ಮಟ್ಟಿಗೆ ಧರ್ಮರಾಯನ ಪ್ರಸಂಗದಲ್ಲಿ ಇದರ ಕಾರಣವೇನೆಂದು ನೋಡಿದ್ದಾಯ್ತು. ಇವಳದ್ದು ಕೂಡ ದೊಡ್ಡ ಪಾತ್ರ.

ಇಲ್ಲಿ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ಭೈರಪ್ಪನವರ ಸ್ತ್ರೀಪಾತ್ರಗಳು ಅವರ ಪುರುಷಪಾತ್ರಗಳಿಗಿಂತ ವಿಭಿನ್ನವಾಗಿ ಉತ್ತಮವಾಗಿ ಮೂಡಿಬರುತ್ತವೆ. ಗೃಹಭಂಗದ ನಂಜಮ್ಮನಾಗಲಿ, ಸಾರ್ಥದ ಚಂದ್ರಿಕೆಯಾಗಲಿ, ಅಥವಾ ಧರ್ಮಶ್ರೀಯ ಲಿಲ್ಲಿಯಾಗಲಿ, ದಾಟುವಿನ ಸತ್ಯೆಯದಾಗಲಿ - ಇವರ ಸ್ತ್ರೀಪಾತ್ರಗಳೆಲ್ಲವೂ ವಿಭಿನ್ನ, ಸುಂದರ, ಮನೋಜ್ಞ. ಇವರ ಅಂತಃಕರಣ ಹೆಂಗಸರಿಗಾಗಿ ಮಿಡಿಯುತ್ತದೆಂದು ಯಾರಾದರೂ ಹೇಳಬಹುದು. ಭೈರಪ್ಪನವರ ತಾಯಿಯವರು ಅವರ ಮೇಲೆ ಗಾಢವಾದ ಪ್ರಭಾವ ಬೀರಿರುವುದನ್ನು ಅವರು ತಮ್ಮ ಆತ್ಮಕಥೆಯಾದ "ಭಿತ್ತಿ"ಯಲ್ಲೇ ಹೇಳಿಕೊಂಡಿದ್ದಾರೆ. ಅದೇ ಮುಂದುವರೆದಿದೆ ಎಂದು ಹೇಳಬಹುದು.

ಸರಿ ಮತ್ತೊಮ್ಮೆ ದ್ರೌಪದಿಯ ಕಡೆ ಬರೋಣ. ದ್ರೌಪದಿ ಐದು ಗಂಡಂದಿರನ್ನು ಪಡೆದ ಹೆಂಗಸು. ಯುವತಿಯಾಗಿ ಪಾಂಡವರ ಮನೆ ಸೇರಿದ ಕೃಷ್ಣೆ (ಪರ್ವದ ಉದ್ದಕ್ಕೂ ಇದೇ ಹೆಸರಿನಲ್ಲೇ ದ್ರೌಪದಿಯ ಸಂಬೋಧನೆ ಆಗುವುದು) ತನ್ನ ಅತ್ತೆಯಾದ ಕುಂತಿಯಿಂದ ಐದು ಬಲಿಷ್ಠರಾದ ಗಂಡಂದಿರನ್ನು ಒಟ್ಟಿಗೆ ನಿಭಾಯಿಸುವುದು ಹೆಮ್ಮೆಯ ಸಂಗತಿಯೆಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾಳೆ. ಆದರೆ ಕುಂತಿಗೆ ಒಮ್ಮೆ ಒಬ್ಬರ ಸಂಪರ್ಕವಿದ್ದರೆ ದ್ರೌಪದಿಗೆ ಐದೂ ಜನರ ಸಂಪರ್ಕವೂ ಒಟ್ಟಿಗೆ. ನಂತರ ದ್ರೌಪದಿಯು ಅದು ಎಂಥ ತಪ್ಪಾಗಿತ್ತು ಎಂದು ನೆನೆಸಿಕೊಳ್ಳುತ್ತಾಳೆ. ಪ್ರತಿದಿನ ಒಬ್ಬ ಗಂಡನಿಗೆ ಮೀಸಲಾದ ದ್ರೌಪದಿ ಹಸಿದ ಹೆಬ್ಬುಲಿಗಳಿಗೆ ಹುಲ್ಲೆ ಸಿಗುವ ಹಾಗೆ ಸಿಕ್ಕಿಹೋಗುತ್ತಾಳೆ. ಇದು ನನ್ನ ಮಾತಲ್ಲ - ದ್ರೌಪದಿಯೇ ತನ್ನ ಸ್ವಗತದಲ್ಲಿ ಈ ರೀತಿಯ ಮಾತಾಡಿಕೊಳ್ಳುತ್ತಾಳೆ. ಅವಳ ಪರಿಸ್ಥಿತಿಗೆ ಎಂಥವರಾದರೂ ಅನುಕಂಪವ್ಯಕ್ತಪಡಿಸಬಹುದು. ನಂತರ ಒಂದು ವರ್ಷ ಒಬ್ಬ ಗಂಡನೊಂದಿಗೆ ಸಂಸಾರ ಎಂದು ಒಪ್ಪಂದವಾಗುತ್ತದೆ. ಈ ಸಂಗತಿ ಮಡಿವಂತರಿಗೆ ಕಷ್ಟವೆಂದೆನಿಸಬಹುದು. ಆದರೆ ಇದು ಮಹಾಭಾರತದ ಕಥೆಯನ್ನು ಗಮನಿಸಿದಾಗ ಅಸಮಂಜಸ ಸಂಗತಿಯೆಂದೇನೂ ಅನ್ನಿಸುವುದಿಲ್ಲ. ಅಂದ ಹಾಗೆ, "ಪರ್ವ" ಚಿಕ್ಕ ಮಕ್ಕಳಿಗಲ್ಲ!

ಭಾರತದ ಸ್ಥೂಲಕಥೆಯನ್ನೋದುವವರಿಗೆ ಇಂಥ ಒಂದು ಸಮಸ್ಯೆಯ ಅರಿವೇ ಆಗುವುದಿಲ್ಲ. ಭೈರಪ್ಪನವರ ಪ್ರತಿಭೆ ಅಂಥ ಕತ್ತಲೆಯ ಕೋಣೆಗಳಲ್ಲಿ ಬೆಳಕು ಚೆಲ್ಲುವುದೇ ಆಗಿದೆ.

ದ್ರೌಪದಿಯು ಬಹಳ ರೂಪವತಿಯೆಂದು ಮಹಾಭಾರತದಲ್ಲಿರುವಂತೆ ಪರ್ವದಲ್ಲಿಯೂ ಸಹ ತೋರಿಸಿದೆ. ಅವಳ ಮಟ್ಟಿಗಂತೂ ಅವಳ ರೂಪವೇ ಅವಳ ಶತ್ರು! ಹೆಚ್ಚು ವಯಸ್ಸಾದರೂ ತನಗಿಂತ ಕಿರಿಯರಾದ ಕೀಚಕ ಮತ್ತು ಜಯದ್ರಥರು ಕೂಡ ಅವಳಲ್ಲಿ ಆಸೆ ಪಡುತ್ತಾರೆ, ಅವಳನ್ನು ವ್ಯಥೆಗೀಡು ಮಾಡುತ್ತಾರೆ. ದ್ರೌಪದಿ ಈ ಅನರ್ಥಗಳಿಗೆ ಕಾರಣವಾದ ತನ್ನ ವಯಸ್ಸಾದರೂ ಮಾಸದ ಸುಂದರ ರೂಪವನ್ನೇ ಶಪಿಸಿಕೊಳ್ಳುತ್ತಾಳೆ. ಇವಳಿಗೆ ನಿಜವಾದ ಆಸರೆಯಾಗುವುದು ಭೀಮ. ತನ್ನ ಮನಸ್ಸಿಗೆ ಸ್ಪಂದಿಸಿ, ಕೋರಿಕೆಗಳನ್ನು ತೀರಿಸುವ ಭೀಮನೇ ಇವಳಿಗೆ ಅತ್ಯಂತ ಪ್ರಿಯನಾಗುತ್ತಾನೆ.

ಅವಳಿಗೆ ಪಾಂಡವರಿಂದ ಐದು ಮಕ್ಕಳು ಹುಟ್ಟುತ್ತಾರಷ್ಟೆ. ಆ ಉಪ-ಪಾಂಡವರು ಯುದ್ಧದ ಕೊನೆಯಲ್ಲಿ ಅಶ್ವತ್ಥಾಮನಿಂದ ಕ್ರೂರವಾದ ರೀತಿಯಲ್ಲಿ ಹತರಾಗುತ್ತಾರೆ. ಆಗ ಮೂಡಿಸುವ ಒಂದು ಪ್ರಸಂಗಕ್ಕೆ ಭೈರಪ್ಪನವರಿಗೆ "hats off" ಹೇಳದೆ ಬೇರೆ ದಾರಿಯಿಲ್ಲ. ಅಭಿಮನ್ಯುವಿನ ಸಾವಿನ ಸಮಯದಲ್ಲಿ ಅರ್ಜುನನು ಬಹಳ ಗೋಳಿಟ್ಟಿರುತ್ತಾನೆ. ಭೀಮನೂ ಘಟೋತ್ಕಚನ ಸಾವಿನಲ್ಲಿ ಹಾಗೆಯೇ ಮಾಡಿರುತ್ತಾನೆ. ಆದರೆ ಉಪಪಾಂಡವರು ಸತ್ತಾಗ - ಅವರನ್ನು ಕುರಿತು ಅವರ ತಂದೆಯರು ಶೋಕಿಸುವುದಿಲ್ಲ. ಯಾರು ಯಾವ ಮಗುವಿನ ತಂದೆಯೋ ಎಂದು ತಿಳಿಯದೆ ಈ ಶೋಕರಾಹಿತ್ಯವೋ ಎಂಬಂತೆ ಪರ್ವದಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಈ ಸಂಗತಿಯನ್ನು ಜ್ಞಾಪಿಸಿದ ಅಶ್ವತ್ಥಾಮನನ್ನು ಬಿಟ್ಟು ಬಿಡಿ ಎಂದು ದ್ರೌಪದಿ ಹೇಳಿದಾಗ ಮನಸ್ಸು ಅವಳ ಅವಸ್ಥೆಗೆ ಮರುಗದೆ ಇರುವುದಿಲ್ಲ.

ಭೈರಪ್ಪನವರ ಪ್ರತಿಭೆಯ ಬಗ್ಗೆ ಇನ್ನೊಂದು ಮಾತು. ಅವರು ಮೂಲಭಾರತದಲ್ಲಿಯೂ ಸಲೀಸಾಗಿ ಸೇರಬಲ್ಲಂಥ ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ. ಇದು ಅಷ್ಟು ಸುಲಭಾವಾದ ಕೆಲಸವಲ್ಲ. ಹಿಂದಿನ ಪ್ಯಾರಾದಲ್ಲಿ ಬಂದ ಸಂಗತಿ ಈ ಬಗೆಯದು. ಪಾತ್ರಗಳ ಒಳ ಹೊಕ್ಕು ನೋಡುವ ಇವರ ಈ ಪ್ರತಿಭೆಯೇ ಈ ಉತ್ಕೃಷ್ಟ ಕೃತಿಗೆ ಕಾರಣವೆಂದು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.

ಒಟ್ಟಿನಲ್ಲಿ, ಕುಂತಿಯ ಹಾಗೆಯೇ ದ್ರೌಪದಿಯದೂ ದೊಡ್ಡ ಪಾತ್ರ.

ಪರ್ವದ ಬಗ್ಗೆ ಬರೆಯಲು ಹೊರಟು ಆಗಲೇ ಮೂರು ಭಾಗಗಳಾಗಿವೆ. ಇದೇನು ಪರ್ವವನ್ನೇ ಮತ್ತೆ ಇಲ್ಲಿ "ಕಾಪಿ" ಮಾಡಬೇಕ ಅನ್ನುವ ಅನುಮಾನ ನನಗೆ. ಆದರೆ ಬರೆಯಲು ಆರಂಭಿಸಿದಾಗ ಅದು ಬರೆಸಿಕೊಂಡೇ ಹೋಗುತ್ತದೆ. "ಪರ್ವ" ಅಷ್ಟು ವಿಚಾರಪ್ರಚೋದಕ ಕೃತಿ. ಇನ್ನು ಹೆಚ್ಚು ಬರೆಯಲಾರೆ. ಮುಂದಿನ ಭಾಗಗಳ ವಿಷಯಗಳನ್ನು ಈಗಲೇ ಹೇಳಿಬಿಡುತ್ತೇನೆ.

ನಾಲ್ಕನೆಯ ಭಾಗದಲ್ಲಿ - ಇನ್ನಷ್ಟು ಪಾತ್ರಗಳ ಬಗ್ಗೆ - ಕೃಷ್ಣ (ಯಾದವ ಕುಲ) ಮತ್ತು ವ್ಯಾಸರ ಬಗ್ಗೆ. ಭೀಷ್ಮಾದಿಗಳನ್ನು ಸೇರಿಸಲು ಯತ್ನಿಸುತ್ತೇನೆ.

ಐದನೆಯ ಹಾಗೂ ಕೊನೆಯ ಭಾಗದಲ್ಲಿ - "ಪರ್ವ"ದ ಸಾಮಾನ್ಯವಾದರೂ ಅಸಾಮಾನ್ಯ ಸಂಗತಿಗಳು - ಆಹಾರ, ಜೀವನ ರೀತಿ, ಸೂಕ್ಷ್ಮ ಸಂಗತಿಗಳು - miscellaneous - ಅನ್ನುತ್ತಾರಲ್ಲ, ಅದರ ಬಗ್ಗೆ.

ಇದನ್ನು ಬರೆಯುತ್ತಿರುವುದು ನನ್ನ ಜ್ಞಾಪಕಕ್ಕೋಸ್ಕರ. ಹೀಗನ್ನಿಸಿತ್ತು ಪರ್ವವನ್ನು ಆಗ ಓದಿದಾಗ ಎಂದು ನನಗೆ ತಿಳಿಸಿಕೊಳ್ಳಲು. ಇತರರಿಗೆ ಇದು ಚಿಂತನೆಗೆ ಗ್ರಾಸವಾಗುವುದಾರದೆ ನನಗೆ ಸಂತೋಷ.

3 comments:

parijata said...

superb post. ಬಹಳ ಚೆನ್ನಾಗಿ ಓದಿಸಿಕೊಂಡು ಹೋಯಿತು.

ಯುಧಿಷ್ಠಿರ ಎಂದರೆ "ಯುದ್ಧೇ ಸ್ಥಿರಃ" ಎಂದು ವ್ಯುತ್ಪತ್ತಿ. ನಮ್ಮ ಮೇಷ್ಟರೊಬ್ಬರು "ಅವನು ಅದು ಯಾವ ಯುದ್ಧ ಮಾಡಿ ಸ್ಥಿರವಾಗಿ ನಿಂತಿದ್ದನೋ ಗೊತ್ತಿಲ್ಲ" ಎಂದು ಹೇಳುತ್ತಿದ್ದರು. ಇನ್ನೊಂದು ತಮಾಷೆಯ ವಿಷಯ - ನಾವು ಚಿಕ್ಕವರಿದ್ದಾಗ ನನ್ನ ತಂಗಿಗೂ ನನಗೂ ಕಲಹವಾದಾಗ ಅವಳು ನನ್ನನ್ನು "ಯುಧಿಷ್ಠಿರನ ಥರ ಆಡುತ್ತೀಯ" ಎಂದು ಬೈಯುತ್ತಿದ್ದಳು. ಭೈರಪ್ಪನವರೂ ಯುಧಿಷ್ಠಿರನನ್ನು ಹೀಗೆ ಚಿತ್ರಿಸಿದ್ದನ್ನು ನೋಡಿ ಸ್ವಲ್ಪ ಸಂತೋಷವಾಯಿತು.

ಇಡೀ ಭಾರತದಲ್ಲಿಯೇ ಸ್ವಲ್ಪ ಸ್ವತಂತ್ರಬುದ್ಧಿಯಿರುವವರು ಎಂದರೆ ಕೃಷ್ಣ, ಕೃಷ್ಣೆ ಮತ್ತು ಭೀಮ (ಮೂಲಭಾರತವನ್ನು ಓದಿದಾಗ ನನಗೆ ಹೀಗನ್ನಿಸಿತು). ಶಕ್ತಿವಂತರಾಗಿದ್ದೂ ಧರ್ಮಪ್ರಜ್ಞೆಯನ್ನು ಉಳಿಸಿಕೊಂಡಿದ್ದಾರೆ. ಮಿಕ್ಕ ಯಾರೂ ಹಾಗಲ್ಲ. ದ್ಯೂತಪ್ರಸಂಗವನ್ನು ನೆನೆದಾಗಲಂತೂ ಧರ್ಮರಾಯನು ಅಧರ್ಮರಾಯನೋ ಎನ್ನಿಸುತ್ತದೆ. ತಮ್ಮನ್ನೂ, ತಮ್ಮ ಹೆಂಡತಿಯನ್ನೂ ಪಣವಾಗಿಟ್ಟರೂ ಅವನನ್ನು ಕಂಡರೆ ಇನ್ನುಳಿದ ಪಾಂಡವರಿಗೆ ವಿಧೇಯತೆ! ಇವರ ಧರ್ಮ ಬಲಹೀನತೆಯಲ್ಲದೆ ಬೇರೇನೂ ಅಲ್ಲ.

ಪರ್ವದ ಬಗೆಗಿನ ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

Anonymous said...

nilagriva,
nimma parvada analysis adhbhutha. waiting for part 4 and 5. after that, i will read the real PARVA. (in a way, nimma review upa-pandavaru idda haage. main pandavaranna (i.e. the book 'parva') amele nodona! ;)

Anonymous said...

Nilagirva ravare

Howdhu I agree with Bellur....

nimma parvadha analysis odhi amele nanu nijavada parva oduttteni..

Nimma analysis odidaaga , nange durga bhagavathara vyasa parva odhidha nenapu baruttidhe, aa kruthi kooda , mahabharathdhalli baruva pathragaLa bagge bahala chennagi chitrisiddare esp Kunti, Vidura, Draupadi, Krishna etc

look forward for other volumes

-Usha