ಬೆಂಗಳೂರಿನ ಬೀದಿಯಲ್ಲಿ ನಡೆದುಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಒಂದು ಪಾರ್ಕಿನಲ್ಲಿನ ಹುಲ್ಲು ಹಾಸಿತ್ತು. ಗಾಳಿಯು ತಂಪಾಗಿ ಬೀಸುತ್ತಿದ್ದು ಬಿಸಿಲಿನ ಝಳ ಅಷ್ಟಿರಲಿಲ್ಲ. ಆಹ್ಲಾದಕರವಾದ ವಾತಾವರಣ. ನೆಲದೆಡೆ ದಿಟ್ಟಿಸುತ್ತಾ ನಡೆದ ನನಗೆ ಒಮ್ಮೆ ಮೇಕೆಮರಿಯೊಂದರ "ಮ್ಯಾ" ದನಿ ಕೇಳಿತು. ಹಿತವಾದ ವಾತಾವರಣದಲ್ಲಿ ಮುಳುಗಿದ್ದ ನನ್ನನ್ನು ಆ ದನಿ ಎಲ್ಲಿಗೋ ಒಯ್ಯಿತು. ಒಮ್ಮೆಲೇ ಪರ್ವತದ ಮೇಲಿನ ತಂಪಾದ ಗಾಳಿಗೆ ಮೈಯೊಡ್ಡಿದವನಾಗಿ ನಾನು; ಕುರುಬನೊಬ್ಬನು ಒಂದು ಮೇಕೆ ಕುರಿಗಳ ದಿಂಡನ್ನು ಮೇಯಿಸುತ್ತಿದ್ದ ಹಾಗೆ; ಈ ಪ್ರಾಣಿಗಳೆಲ್ಲವೂ ಆನಂದದಿಂದ ನಲಿಯುವ ಹಾಗೆ ಆಗಿತ್ತು. ನನ್ನಲ್ಲಿಯೂ ಒಂದು ಆನಂದ, ತೃಪ್ತಿ ತುಂಬಿತ್ತು. ಈ ತೃಪ್ತಭಾವನೆಯ ಮೂಡಿಸಿದ ಮೇಕೆಯ ಕೇಕೆಯ ದನಿಯೆಡೆ ಕಣ್ಣು ಹಾಯಿಸಿದೆ.
ಆದರೆ ಕಂಡದ್ದೇನು? ಅಲ್ಲೊಂದು ವಿಕಾರವಾದ ಲಾರಿಯಿದ್ದು ಅದರಲ್ಲಿ ಮೇಕೆಗಳನ್ನು ಹಿಂಡು ಹಿಂಡು ತುಂಬಿದ್ದರು. ಒಂದರ ಮೇಲೊಂದು ಮೇಕೆಯಿದ್ದು ಅವುಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಹೇಗೆ ಉಸಿರಾಡುತ್ತಿದ್ದವೋ! ಆ ಮೇಕೆಯ ದನಿ ಆನಂದದಿಂದ ಕೂಡಿದ್ದಾಗಿರದೆ ಆ ಮೂಕ ಪ್ರಾಣಿಗಳ ಹಾಹಾಕಾರವಾಗಿದ್ದಿತು. ಕಟುಕರ ಬಳಿ ಒಯ್ಯಲ್ಪಡುತ್ತಿದ್ದ ಆ ಮುಗ್ಧ ಮೇಕೆಗಳ ದನಿ ಹಿಂದಿನ ಘಳಿಗೆಯಲ್ಲಿ ಎಷ್ಟು ಮುದ ನೀಡಿತ್ತೋ, ಈಗ ಅಷ್ಟೇ ಕಠೋರವಾಗಿ ಕೇಳಿಸಿತ್ತು. ನನ್ನ ಕರುಳನ್ನು ಕಿವುಚಿದ ಹಾಗಾಗಿತ್ತು.
ಕೇಳಿದ್ದು ಅದೇ ದನಿ. ಆ ದನಿ ಬಿದ್ದದ್ದು ಅದೇ ಕಿವಿಗೆ. ಕೇಳಿದವನೂ ನಾನೇ. ಸಂತೋಷ ನೀಡುವ ಅದೇ ದನಿ ಮರುಘಳಿಗೆಯಲ್ಲಿ ವಿಪರೀತಕ್ಕೆ ತಿರುಗಿತ್ತು.
ಪರ್ವತದ ಗಾಳಿ ನೀಡಿದ್ದ ಆಹ್ಲಾದವು ನಿಜವಾಗಿರಲಿಲ್ಲವೇ? ಅನುಭವಿಸಿದ ಮನಸ್ಸು ಅದನ್ನು ಆ ಕ್ಷಣಕ್ಕೆ ಸತ್ಯವೆಂದು ಒಪ್ಪಿರಲಿಲ್ಲವೇ?
ಕನಸಿನಲ್ಲಿನ ಸತ್ಯವೂ ಹೀಗೆಯೇ ಅಲ್ಲವೇ? ನನಗಂತೂ ಪರೀಕ್ಷೆಯ ಕನಸುಗಳು ಯಾವಾಗಲೂ ಬರುತ್ತಿದ್ದುವು. ನಾನು ಪರೀಕ್ಷೆಯಲ್ಲಿ ಉತ್ತರಿಸಲಾಗದ ಪ್ರಶ್ನೆಗಳು; ಶಾಲೆಗೆ ಪರೀಕ್ಷೆಯ ವೇಳೆಗೆ ಸರಿಯಾಗಿ ತಲುಪದಿರುವುದು; ಎಲ್ಲ ಹೀಗೆಯೇ! ಎದ್ದ ಮೇಲೂ ಸ್ವಲ್ಪ ಹೊತ್ತು ಬೇಕಾಗುತ್ತಿತ್ತು ನಿಜವಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು.
ಇವೆಲ್ಲ ಸಂಗತಿಗಳಲ್ಲಿ; ಇನ್ನೂ ಹಲವು ಸಂಗತಿಗಳಲ್ಲಿ ಅರಿವಾಗುವುದು ಒಂದು ವಿಷಯ. ಇವೆಲ್ಲವೂ ಮನಸ್ಸಿನ ಕಲ್ಪನೆಗಳೆಂಬುದು. ಇರುವ ನಿಜದ ಮೇಲೆ ನಮ್ಮ ಅಪೇಕ್ಷೆ-ಭಯಗಳ ಇಷ್ಟ-ಅನಿಷ್ಟಗಳ ಲೇಪವನ್ನು ಮಾಡಿ ನೋಡುವುದನ್ನು ನಾವು ಸದಾಕಾಲವೂ ನಮಗೆ ತಿಳಿಯದ ಹಾಗೆ ಮಾಡುತ್ತಿರುತ್ತೇವೆ; ನಮಗೆ ತೀರ ಅಭ್ಯಾಸವಾಗಿಬಿಟ್ಟಿದೆ. ಈ ರೀತಿಯ ಅನುಭವಗಾಳಾದಾಗ ಒಮ್ಮೊಮ್ಮ ಒಳ ಸರಿದು ನೋಡುವ ಅವಕಾಶ ಸಿಗುತ್ತದೆ.
ಇಷ್ಟು ನೈಜ ಅನುಭವ ಕೊಡುವ ಮನಸ್ಸು ಎಷ್ಟು ಶಕ್ತಿವಂತವಾದುದೋ ಊಹಿಸಿ ನೋಡಿದರೆ ಆಶ್ಚರ್ಯವೇ ಆಗುವುದು. ಸಂತೋಷದ ಸಮಯದಲ್ಲಿ ದುಃಖವನ್ನೂ, ಏನೂ ಇರದ ಸಮಯದಲ್ಲಿ ಆತಂಕವನ್ನೂ, ಒಂದನ್ನು ಇನ್ನೊಂದಾಗಿ ಕಾಣುವುದನ್ನು; ಇನ್ನೂ ಹಲವು ಪರಿಸ್ಥಿತಿಗಳಲ್ಲಿ ಮನಸ್ಸಿನ ಶಕ್ತಿಯ ಅರಿವಾಗುವುದು. ಆ ರೀತಿಯಲ್ಲಿ ನೋಡಿದರೆ ಈ ಜಗತ್ತೇ ಮನೋಮಯ.
ಇದರ ಬಗ್ಗೆಯೇ ದೊಡ್ದವರ ಮಾತು ಹೇಳಿರುವುದು. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂದು. ಮನಸ್ಸೇ ಬಂಧಕ್ಕು ಮೋಕ್ಷಕ್ಕೂ ಕಾರಣ. ಬಂಧವನ್ನು ಕಲ್ಪಿಸುವುದು ಮನಸ್ಸು. ಕಲ್ಪಿತಬಂಧದಿಂದ ಮುಕ್ತವಾಗುವುದೂ ಮನಸ್ಸೇ!
No comments:
Post a Comment