Wednesday, August 29, 2007

ಚಂದ್ರಗ್ರಹಣ ಮೂಡಿಸಿದ ಚಿಂತನೆ

ಇಂದು ಬೆಳಗ್ಗೆ ಪತ್ರಿಕೆಯನ್ನೋದುವಾಗ ಎರಡು ವಿಷಯಗಳು ಒಮ್ಮೆಲೆ ದೃಷ್ಟಿಗೋಚರವಾದುವು. ಮೊದಲೆನಯದು ಚಂದ್ರಗ್ರಹಣದ ಬಗ್ಗೆ ವಿಜ್ಞಾನಿಗಳು ಮಾಡುವ ಸಂಶೋಧನೆಯನ್ನು ಕುರಿತದ್ದು. ಇನ್ನೊಂದು - ಅದರ ಪಕ್ಕದಲ್ಲೇ ಕಂಡದ್ದು - ಖ್ಯಾತ ಜ್ಯೋತಿಷಿಗಳೆಂದು ಕರೆಸಿಕೊಂಡ ಎಸ್. ಕೆ. ಜೈನ್ ಅವರ ವಿಶ್ಲೇಷಣೆ. ಅವರ ಪ್ರಕಾರ ಚಂದ್ರಗಹಣ ಸೂರ್ಯಗ್ರಹಣಗಳು ಒಂದೇ ಪಕ್ಷದಲ್ಲಿ (ಹದಿನೈದು ದಿನಗಳೊಳಗೆ) ನಡೆಯುವ ಕಾರಣದಿಂದ ಇದು ಅವಲಕ್ಷಣವಾದ ನಿಮಿತ್ತ. ಪ್ರಪಂಚದಲ್ಲಾಗುವ ದುರಂತಗಳ ಸೂಚನೆ ಇದು ಎಂಬಂತೆ ಹೇಳಿದ್ದರು. ಇದೇ ರೀತಿಯ ಗ್ರಹಣದ್ವಯ ಮಹಾಭಾರತದ ಕುರುಕ್ಷೇತ್ರ ಯುದ್ಧದ ಮುಂಚೆಯೂ ಆಗಿತ್ತು (ಹದಿಮೂರು ದಿನಗಳು ಈ ಗ್ರಹಣಗಳ ನಡುವಣ ಅಂತರ) ಎಂದು ಮಹಾಭಾರತದಲ್ಲಿಯೇ ಬಂದಿದೆ. ಗ್ರಹಣಗಳು ಮನುಷ್ಯನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ ಎಂದು ಚರಿತ್ರೆಯನ್ನು ನೋಡಿದಾಗ ಕಂಡು ಬರುವ ಸಂಗತಿ.

ಆದರೆ ಇದು ನನ್ನನ್ನು ಯೋಚನೆಗೀಡು ಮಾಡಿತು. ಇದೇ ಜ್ಯೋತಿಷಿಗಳು ಸೆಪ್ಟೆಂಬರ್ ೧೧, ೨೦೦೧ ರ ದುರಂತದ ಬಗ್ಗೆ ಮುಂಚಿನ ಸೂಚನೆಯನ್ನೇನಾದರೂ ನೀಡಿದ್ದರೇ? ಒಂದೊಂದು ದುರಂತವಾದ ಮೇಲೂ ಈ ಜ್ಯೋತಿಷಿಗಳು - "ಆಹಾ ನೋಡಿದಿರಾ ಈ ಗ್ರಹಗತಿಗಳಲ್ಲಿ ನನಗೆ ಮೊದಲೇ ಕಂಡಿತ್ತು. ಎಂಥ ಒಳ್ಳೆ ಜ್ಯೋತಿಷಿ ನಾನು" ಎಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರೇ! ಇಲ್ಲವೇ ಸ್ಥೂಲವಾಗಿ ಏನಾದರೂ ಆಗುವಂತೆ ಕಾಣುವ ಒಂದು ವಿಷಯವನ್ನು ತಾವು ಜ್ಯೋತಿಃಶಾಸ್ತ್ರದ ಮೂಲಕ ನಿರ್ಧಾರ ಮಾಡಿದ ಹಾಗೆ ಹೇಳುತ್ತಾರೆ. ಆದರೆ ಒಮ್ಮೆಯಾದರೂ ಆ ಸುನಾಮಿಯ ದುರಂತದ ಬಗ್ಗೆಯೋ ಅಥವಾ ಈಚೆಗೆ ಹೈದರಾಬಾದಿನ ಬಾಂಬ್ ಸ್ಫೋಟದ ಬಗ್ಗೆಯೋ ಮೊದಲೇ ಹೇಳಿದ್ದರೇ? ಊಹೂಂ.

ಆದರೂ ಜನರು ಇವರನ್ನು ನಂಬುತ್ತಾರೆ. ಇವರು ಹೇಳಿದ್ದು ವೇದವಾಕ್ಯಕ್ಕೂ ಮಿಗಿಲು ಎಂಬಂತೆ ಇವರ ನಂಬಿಕೆ. ನಮ್ಮ ಸಮಾಜ ಹೆಚ್ಚೆಚ್ಚು ಆಧುನಿಕವಾಗಿದ್ದೂ ಈ ಹಿಂದಿನ ಅಷ್ಟೇನೂ ಪ್ರಗತಿದಾಯಕವಾಗದ (ಜೊತೆಗೆ ಅಷ್ಟು ವಿಚಾರಪೂರ್ಣವಲ್ಲದ) ಒಂದು ನಂಬಿಕೆಗೆ ತಮ್ಮ ಶ್ರದ್ಧಾಭಕ್ತಿಗಳನ್ನು ಕೊಟ್ಟು ಕೊರಗುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ನಾನಿನ್ನೂ ಬಾಲಕ. ಆದರೆ ಈ ಮಟ್ಟದ ಜ್ಯೋತಿಷ್ಯದ ತಾಂಡವವನ್ನು ಕಂಡಿರಲಿಲ್ಲ. ಇದರ ಹಿಂದೆಯೂ ಹಾಗೆ ನನ್ನ ತಿಳಿದ ಮಟ್ಟಿಗೆ ಇರಲಿಲ್ಲ. ಉದಾಹರಣೆಗೆ, ನಮ್ಮ ತಾತ-ಅಜ್ಜಿಯವರ ಮದುವೆ ಈಗಿನ ಹಾಗೆ ಜಾತಕ ನೋಡಿ ನೋಡಿ ಮಾಡಿದ್ದಲ್ಲ! ಆದರೂ ಅವರು ಐವತ್ತು-ಅರವತ್ತು ವರ್ಷಕ್ಕೂ ಹೆಚ್ಚಿನ ಕಾಲ ಸಂಸಾರ ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಂದಕ್ಕೂ ಜ್ಯೋತಿಷ್ಯದ ಉಪಯೋಗ! ಬೆಳಗ್ಗೆ ಕೆಲಸಕ್ಕೆ ಹೋಗುವ ಮುಂಚೆ ರಾಹುಕಾಲದ ಪರೀಕ್ಷೆ! ಯಾವುದೇ ಕೆಲಸದ ಸಮಯದಲ್ಲಿ ಈ ಗುಳಿಕ-ರಾಹು-ಯಮಗಂಡಗಳ ಪರಿಶೀಲನೆ! ಹಲವು ಹಳೆಯ ಮನೆಗಳು ಈಗಿನ "ವಾಸ್ತು" ಪ್ರಕಾರ ಕಟ್ಟಿದ್ದಲ್ಲ. ಆದರೂ ಆ ಮನೆಗಳು ನೂರಾರು ವರ್ಷಗಳ ಕಾಲ ಬಾಳಿ ಬೆಳಗಿವೆ. ಆದರೆ ಈಗ ಪ್ರತಿಯೊಂದು ಕಟ್ಟಡವೂ "ವಾಸ್ತು ಪ್ರಕಾರ" ಇರಬೇಕು. ಅದಿಲ್ಲವೆಂದರೆ ಯಾರೋ ಬಂದು - ನಿಮ್ಮ ವಾಸ್ತು ಸರಿಯಿಲ್ಲ ಅನ್ನುವುದು, ನಿಮಗೆ ಮನಸ್ಸಿಗೆ ಬೇಜಾರಾಗುವುದು ಎಲ್ಲ ಸಾಮಾನ್ಯ ಸಂಗತಿಗಳು. ಆಧುನಿಕ ಕಾಲದಲ್ಲಿ "ಮೂಢನಂಬಿಕೆ" ಎಂದು ಮೂಲೆಗುಂಪು ಮಾಡಬಹುದಾದಂಥ ನಂಬಿಕೆಗಳಿಗೇಕೆ ಮೊರೆ ಬೀಳುತ್ತಾರೆ ನಮ್ಮ ಜನ?

ಆಧುನಿಕತೆ ಭೌತಿಕವಾಗಿ ಐಶಾರಾಮವನ್ನು ಒದಗಿಸಿದ್ದರೂ ಮನಸ್ಸಿನಿಂದ ಶಾಂತಿಯನ್ನು ಕಿತ್ತುಕೊಂಡಿದೆಯೆಂದೇ ಹೇಳಬೇಕು. ಭೌತಿಕದ ಆರಾಮದಿಂದ ಮನಸ್ಸಿಗೆ ಹಾರಾಡುವುದಕ್ಕೆ ರೆಕ್ಕೆ ಬಂದ ಹಾಗಾಗಿದೆ. ಆದರೂ ಪ್ರಯೋಜನವಿಲ್ಲ. ಹಿಂದೆಯಾದರೋ ಊಟಕ್ಕೆ ಮತ್ತು ನೀರಿಗೆ ಪರದಾಟವಿರುತ್ತಿತ್ತು. ಈ ರೀತಿಯ ವಿಷಯಗಳನ್ನು ಕುರಿತು ಯೋಚಿಸಲು ಸಹ ಸಮಯವಿರುತ್ತಿರಲಿಲ್ಲ. ಆದರೆ ಈಗ ಓಡಾಡಲು ಕಾರು-ಪ್ಲೇನು, ಮನೆಯಲ್ಲಿ ಟಿವಿ, ಮಿಕ್ಸಿ, ತಂಗಳು ಪೆಟ್ಟಿಗೆ ಮುಂತಾದ ಉಪಕರಣಗಳು ಎಲ್ಲೆಲ್ಲೂ ಇವೆ. ದೇಹಕ್ಕೆ ಸುಖ ಸಿಕ್ಕಿದೆ. ಆದರೆ ಮನಸ್ಸು "idle" ಆಗಿಬಿಟ್ಟಿದೆ. ಖ್ಯಾತವಾದ ಇಂಗ್ಲಿಷ್ ಗಾದೆ ಎಲ್ಲರಿಗೂ ಗೊತ್ತಲ್ಲ? "An idle mind is the devil's workshop". ನಮ್ಮಲ್ಲಿ ಬಹಳ ಜನರಿಗೆ ಇದೇ ಆಗಿರುವುದು ಎಂದು ನನ್ನ ಅನಿಸಿಕೆ (ನಾನೂ ಇದಕ್ಕೆ ಹೊರತಲ್ಲ). ಬೇರೆ ಕೆಲಸವಿಲ್ಲವಲ್ಲ? ಅದಕ್ಕೆ ಪಕ್ಕದ ಮನೆಯ ಟಿವಿ ದೊಡ್ಡದಾದರೆ ನಮ್ಮ ಮನೆಯದು ಇನ್ನೂ ದೊಡ್ಡದಾಗಬೇಕೆಂಬ ಹಂಬಲ ಬರುತ್ತದೆ. ಕೆಲಸ ಹೆಚ್ಚು ಮಾಡದೆ ವರ್ಷಕ್ಕೆ ಶೇಕಡಾ ಮುವ್ವತ್ತರಷ್ಟು ಸಂಬಳ ಹೆಚ್ಚಬೇಕು ಎಂಬಂಥ ನಿರೀಕ್ಷೆಗಳು ಬೇರೆ. ಕೆಲಸ ಆದಷ್ಟು ಕಡಿಮೆ ಮಾಡಿ ಆದಷ್ಟು ಹೆಚ್ಚು ಭೋಗಗಳನ್ನು ಸವಿಯಬೇಕೆಂಬುದು ಬಹಳ ಕಾಲದಿಂದ ಮಾನವನ ಹಂಬಲವಾದರೂ ಈಗ ಅದು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದೆ ಎಂದು ಹೇಳಬೇಕು. ಇವೆಲ್ಲ ಮತ್ತು ಇದಕ್ಕೂ ಹೆಚ್ಚಿನ ಕಾರಣಗಳಿಂದ ಮನುಷ್ಯಸಮಾಜ ಅತಂತ್ರತೆ ಮತ್ತು ಅಶಾಂತಿಯನ್ನು ಹೊಂದಿದೆ. ಇದಕ್ಕೆ ಪರಿಹಾರ ಬೇಕಾದದ್ದೇ. ಪರಿಹಾರದ ಆಭಾಸವಾಗಿ ಸಾಂಖ್ಯಶಾಸ್ತ್ರ (numerology), ಜ್ಯೋತಿಷ್ಯ, ಮಂತ್ರ/ತಂತ್ರ ಮುಂತಾದವು ನಗರಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ನಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನ ಪಡದೆ ಯಾರಿಗೋ ದುಡ್ಡು ಕೊಟ್ಟು "ಶಾಂತಿ" ಮಾಡಿಸಿಕೊಂಡರೆ ತಮ್ಮ ತೊಂದರೆ ಪರಿಹಾರವಾದ ಹಾಗೆ ಅನ್ನುವ ಯೋಚನೆ ಗಟ್ಟಿಯಾಗಿ ನಮ್ಮ ಜನರ ಮೆದುಳುಗಳಲ್ಲಿ ಬೇರೂರಿದೆ. ಸುಖ ದುಃಖಗಳ ಮೂಲಸ್ವರೂಪಕ್ಕೆ ಹೋಗಿ ನಿಷ್ಕರ್ಷೆ ಮಾಡುವ ಬುದ್ಧಿ ನಮ್ಮ ಜನರಲ್ಲಿದ್ದಿದ್ದರೆ ಈಗ ಕಾಣುವ ಜ್ಯೋತಿಷ್ಕರಲ್ಲಿ ಅರ್ಧಕ್ಕರ್ಧ ಬೇರೆ ವೃತ್ತಿಗಳನ್ನು ಅವಲಂಬಿಸುತ್ತಿದ್ದರು.

ಒಂದು ಮಾತನ್ನು ಹೇಳಲು ಇಚ್ಛಿಸುವೆ. ನನಗೆ ಜ್ಯೋತಿಷ್ಯದ ಶಕ್ತಿಯ ಬಗ್ಗೆ ಅಷ್ಟು ತಿಳಿದಿಲ್ಲ. ಆದ್ದರಿಂದ ಅದರಲ್ಲಿ ದೋಷವಿದೆ ಎಂದು ನಾನು ಹೇಳಲಾರೆ. ಆದರೆ ಸಮಾಜದ ಈ ಹೊಸ ಬೆಳವಣಿಗೆ ಮಾತ್ರ ಒಳ್ಳೆಯದಲ್ಲ.

"ಇವೆಲ್ಲ ಗೊಡ್ಡು ಹಿಂದು ಧರ್ಮದ ಕೆಟ್ಟತನ. ಕರ್ಮ ಸಿದ್ಧಾಂತದ ಬುನಾದಿಯಿರುವುದರಿಂದ ಜನರು ಅದನ್ನು ನಂಬಿ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಇದನ್ನು ಬಿಟ್ಟರೆ ಸಮಾಜ ಉದ್ಧಾರವಾಗುತ್ತದೆ", ಎನ್ನುವುದು "ಪ್ರಗತಿಪರ" ರೆಂದು ತಮ್ಮನ್ನು ತಾವೇ ಬಣ್ಣಿಸಿಕೊಳ್ಳುವ ಒಂದು ಬಣ. ಈ ಮಾತು ಸತ್ಯಕ್ಕೆ ಬಹಳ ದೂರವಾಗಿದೆ. ಧರ್ಮದ ಸರಿಯಾದ ತಿಳಿವಳಿಕೆಯಿಲ್ಲದ ಜನರು ಈ ರೀತಿ ಮಾತಾಡುತ್ತಾರೆ. ಜಾತಕ ನೋಡುವ, ಮುಹೂರ್ತ ಇಡುವ, ಹಸ್ತ ಸಾಮುದ್ರಿಕೆ ಮೊದಲಾದುವೇ ಹಿಂದು ಧರ್ಮ ಎಂದು ಇಂಥವರ ತಪ್ಪು ಕಲ್ಪನೆ. ಪುರಾಣಗಳ ಕಥೆಗಳಲ್ಲಿ ಬರುವ ರಾಮ-ಸೀತೆಯರ, ಕೃಷ್ಣ-ರುಕ್ಮಿಣಿಯರ, ಶಿವ-ಪಾರ್ವತಿಯರ ಮದುವೆಗಳನ್ನು ಜಾತಕ ನೋಡಿಯೇ ಮಾಡಿದ್ದರೆ? ಹೋದರೆ ಹೋಗಲಿ, ದ್ರೌಪದಿಯ ಮದುವೆಯನ್ನು? ದುಷ್ಯಂತ-ಶಕುಂತಲೆಯ ಮದುವೆಗೆ ಮುಹೂರ್ತ ಇಟ್ಟಿದ್ದರೆ? ಈ ದೇವಾಧಿದೇವತೆಗಳ, ನಾಯಕನಾಯಿಕೆಯರ ಚಿತ್ರಪಟಗಳನ್ನಿಟ್ಟು ಪೂಜೆ ಮಾಡುವವರು ಅಥವಾ ಅಭಿಮಾನಿಸುವವರು ಅವರಿಂದ ಕಲಿಯುವುದು ಇಷ್ಟನ್ನೇ?

ನಮ್ಮ ವೇದಗಳಲ್ಲಿ ಜ್ಯೋತಿಷ್ಯದ ಪರಿಚಯ ಇತ್ತೆಂದು ತಿಳಿದುಬಂದರೂ, ಪುರುಷ ಪ್ರಯತ್ನಕ್ಕೆ ಬಹಳ ಪ್ರಾಮುಖ್ಯ ಅಲ್ಲಿ ಕೊಟ್ಟೇ ಇದೆ. ಜೀವನವನ್ನು ಕುರಿತು ಜುಗುಪ್ಸೆಯಿಲ್ಲ; ಅದರ ಬದಲಿಗೆ ಆದರವಿದೆ, ಪ್ರೀತಿಯಿದೆ. "ಪಶ್ಯೇಮ ಶರದಶ್ಶತಂ ಜೀವೇಮ ಶರದಶ್ಶತಂ ನಂದಾಮ ಶರದಶ್ಶತಂ ಮೋದಾಮ ಶರದಶ್ಶತಮ್" ಅನ್ನುವುದು ನಮ್ಮ ವೇದಗಳ ಉತ್ಸಾಹಭರಿತ ಉದ್ಗಾರ. (ನೂರು ಶರತ್ಕಾಲಗಳನ್ನು ನೋಡೋಣ, ನೂರು ಶರತ್ಕಾಲಗಳ ಜೀವನ ಮಾಡೋಣ, ನೂರು ಶರತ್ಕಾಲಗಳ ಆನಂದ ಹೊಂದೋಣ, ನೂರು ಶರತ್ಕಾಲಗಳ ಮುದವನ್ನು ಹೊಂದೋಣ).

ಇನ್ನೊಂದು ಯೋಚನೆ ಕೂಡ ನನಗೆ ಬರುತ್ತದೆ. ಕಷ್ಟಸಹಿಷ್ಣುತೆ ಕಡಿಮೆಯಾಗಿರುವುದೇ ಈ ಸಾಮಾಜಿಕ ದೌರ್ಬಲ್ಯಕ್ಕೆ ಕಾರಣವಿರಬಹುದೇ? ಹಿಂದೆ ಸವಲತ್ತುಗಳು ಸರಿಯಾಗಿರಲಿಲ್ಲ. ಆದ್ದರಿಂದ ಜನರು ಕಷ್ಟ ಪಡುತ್ತಿದ್ದರು. ಕಷ್ಟ ಪಡಲು ಹೇಸುತ್ತಿರಲಿಲ್ಲ. ಈಗ ಕಷ್ಟ ಬಂದರೆ ಅದನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದೇ ಮೊದಲು ನೋಡುತ್ತೇವೆ. ನಾವು ಸುಮ್ಮನೆ ಕಷ್ಟ ಪಡಬೇಕು ಎಂದು ಹೇಳುತ್ತಿಲ್ಲ. ಆದರೆ ಸ್ವಲ್ಪ ಕಷ್ಟವನ್ನಾದರೂ ಪಡುವುದಕ್ಕೆ ಸಿದ್ಧರಿರಬೇಕು. ಈ ಸಹಿಷ್ಣುತೆ ಮನಸ್ಸಿನಲ್ಲಿ ಮತ್ತು ದೇಹದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಎಂಥ ಕಷ್ಟ ಬಂದರೂ ಸಹಿಸಿಕೊಳ್ಳುವ ಶಕ್ತಿಯನ್ನು ರೂಢಿಸುತ್ತದೆ. ಈ ಗುಣದ ಕಡಿಮೆಯಾಗುವಿಕೆಯೇ ಈ "ನಕ್ಷತ್ರಜೀವಿಗಳ" (ಜ್ಯೋತಿಷ್ಕರು, ಮಂತ್ರ/ತಂತ್ರ ಮಾಡುವ ಮೊದಲಾದವರು) ಹೆಚ್ಚುವಿಕೆಗೆ ಕಾರಣವೇ?

ಅಂದ ಹಾಗೆ, ಎಲ್ಲ "ಪ್ರಗತಿಪರರೂ" ಹೇಯವೆಂದು ತೆಗಳುವ ಮನುಸ್ಮೃತಿಯಲ್ಲಿ ಈ ರೀತಿಯ ನಕ್ಷತ್ರಜೀವಿಗಳು ಪಂಕ್ತಿಭೋಜನಕ್ಕೆ (ಅಂದರೆ ಮನೆಯಲ್ಲಿ ಕರೆದು ಒಟ್ಟಿಗೆ ಕುಳಿತು ಊಟ ಮಾಡುವುದು) ಯೋಗ್ಯರಲ್ಲ ಎಂದು ಹೇಳಿದೆ. ಹಿಂದು ಧರ್ಮದ ಆಭಾಸ ಹೀಗೆ ಕಂಡರೆ, ನಮ್ಮ ಸನಾತನ ಧರ್ಮದ ವಾಸ್ತವದ ಪರಿಚಯಕ್ಕೆ ಯಾವುದನ್ನು ನೋಡಬೇಕು? ಗೀತಾಚಾರ್ಯನಾದ ನಮ್ಮ ಶ್ರೀಕೃಷ್ಣನು ಹೇಳಿದ ಈ ಮಾತುಗಳೇ! ಸಮಸ್ತ ಹಿಂದೂ ಜನಾಂಗಕ್ಕೆ ಆದರಣೀಯವಾದುದು ಗೀತೆ. ಅದೇನು ಹೇಳುತ್ತದೆ ಎಂದು ನೆನಪಿಟ್ಟರೆ ಹಿಂದು ಧರ್ಮದ ಸ್ಥೂಲ ಪರಿಚಯವಾಗುತ್ತದೆ. ಜೊತೆಗೆ ಜೀವನ ನಡೆಸಲು ಸುಲಭವಾಗುತ್ತದೆ. ಇವುಗಳಲ್ಲಿ ಎಲ್ಲಾದರೂ ನಕ್ಷತ್ರಗಳ, ಮಂತ್ರ/ತಂತ್ರದ ಪ್ರಸಕ್ತಿ ಬರುವುದೇ ನೋಡಿ!

ನನಗೆ ಮನಸ್ಸಿಗೆ ಬಂದ ಕೆಲವು ಬಹಳ ಪ್ರಿಯವಾದ ಗೀತೆಯ ಶ್ಲೋಕ ಮತ್ತು ಶ್ಲೋಕಾರ್ಧಗಳೊಂದಿಗೆ ಈ ಬರವಣಿಗೆಯನ್ನು ಮುಗಿಸುತ್ತೇನೆ.

"ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ |
ಆಗಮಾಪಾಯಿನೋನಿತ್ಯಾಃ ತಾನ್ಸ್ ತಿತಿಕ್ಷಸ್ವ ಭಾರತ ||"

ಸ್ಥೂಲ ಅನುವಾದ : "ಶೀತ-ಉಷ್ಣ, ಸುಖ-ದುಃಖ ಮೊದಲಾದ ದ್ವಂದ್ವಗಳು ಕೇವಲ ಇಂದ್ರಿಯಜನ್ಯಗಳು. ಬಂದು ಹೋಗುವ ಇವು ಅನಿತ್ಯಗಳು. ಆದ್ದರಿಂದ ಅವನ್ನು ತಡೆದುಕೋ, ಅರ್ಜುನ".

"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ"

ಸ್ಥೂಲ ಅನುವಾದ : "ಅರ್ಜುನ: ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಇದರ ಫಲದಲ್ಲಲ್ಲ. ನೀನು ಕರ್ಮಫಲಕ್ಕೆ ಆಸೆ ಪಡಬೇಡ. ಅದೇ ಹೊತ್ತಿಗೆ ಕರ್ಮ ಮಾಡುವುದನ್ನೂ ಬಿಡಬೇಡ"

"ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ" - ತನ್ನ ಕರ್ಮದಿಂದ ಭಗವಂತನನ್ನು ಅರ್ಚಿಸಿ ಮನುಜ ಸಿದ್ಧಿಯನ್ನು ಹೊಂದುತ್ತಾನೆ.

"ಯೋಗಃ ಕರ್ಮಸು ಕೌಶಲಮ್ " - ಚೆನ್ನಾಗಿ ಕೆಲಸ ಮಾಡುವುದೇ ಯೋಗ.

"ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ||"

"ಎಲ್ಲ ಧರ್ಮಗಳನ್ನು ಬಿಟ್ಟು ನನ್ನನ್ನು ಮಾತ್ರ ಶರಣು ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ. ದುಃಖಿಸಬೇಡ". - ಈ ಮಾತು ಕೊನೆಯದು. ಏನನ್ನೂ ಮಾಡಲು ಆಗದಾಗ ಶರಣು ಹೊಂದುವುದೊಂದೇ ಮಾರ್ಗ.

|| ಇತಿ ಶಮ್ ||

5 comments:

Anonymous said...

ಜ್ಯೋತಿಷ್ಯವನ್ನು ನಂಬುವವರಿಗೆ ಮನುಷ್ಯಪ್ರಯತ್ನದ ಮಹತ್ವ ತಿಳಿಯದು.

Even God helps only those who help themselves ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ.

Anonymous said...

ಕೆಲವು ದಿನಗಳ ಹಿಂದೆ, ಉದಯ ಟಿವಿಯಲ್ಲೊಬ್ಬರ ಜೊತೆ ಮಾತುಕತೆ ಕಾರ್ಯಕ್ರಮವನ್ನು ನೋಡಿದೆ. ಅವರ ಹೆಸರು ಮರೆತುಬಿಟ್ಟಿದ್ದೇನೆ. ಜ್ಯೋತಿಷಿಗಳ ಕುಟುಂಬದಿಂದ ಬಂದ ಅವರು, ಫಲಜ್ಯೋತಿಷ್ಯಕ್ಕೆ ಸವಾಲು ಹಾಕಿದ್ದಾರಂತೆ - ಇನ್ನೂ ಯಾರೂ ಆ ಸವಾಲನ್ನು ತೆಗೆದುಕೊಂಡಿಲ್ಲ - quite predictably :)

ಅವರು ಹೇಳಿದ ಮೇಲೇ ನನಗೆ ಈ ಫಲಜ್ಯೋತಿಷ್ಯ ಅನ್ನುವ ಪದದ ಅರಿವಾಯಿತು. astronomy ಯನ್ನು ಜ್ಯೋತಿಷ್ಯ ಶಾಸ್ತ್ರವೆಂದಿಟ್ಟುಕೊಂಡರೆ, ಫಲಜ್ಯೋತಿಷ್ಯವನ್ನು atrology ಎನ್ನಬಹುದು. ನಮ್ಮ ಜ್ಯೋತಿಷ್ಯ್ಸ್ ಶಾಸ್ತ್ರದ ಮೂಲ ಹಂದರ (ನಕ್ಷತ್ರ,ತಿಥಿ ಮೊದಲಾದ ಲೆಕ್ಕಾಚಾರಗಳು) ಚೆನ್ನಾಗಿದೆ. ಆದರೆ, ಅದರಿಂದ ಭವಿಷ್ಯವನ್ನು predict ಮಾಡುವುದು ಮಾತ್ರ ಕೆಲಸವಿಲ್ಲದ ಕೆಲಸ!

-ನೀಲಾಂಜನ

nIlagrIva said...

ಆರಾಮ್,
ಪುರುಷಪ್ರಯತ್ನಕ್ಕೂ ದೈವಕ್ಕು ತಿಕ್ಕಾಟ (ನಮ್ಮ ಮನಸ್ಸಿನಲ್ಲಿ ಮಾತ್ರ) ಇದ್ದೇ ಇದೆ. ನನಗೆ ಇದರ ಬಗ್ಗೆ ಒಳ್ಳೆ ಪಾಠ ಹೇಳಿಕೊಟ್ಟಿದ್ದು "ಯೋಗವಾಸಿಷ್ಠ" (ಸ್ವಾಮಿ ವೇಂಕಟೇಶಾನಂದರ ಆಂಗ್ಲಅನುವಾದ). ಅಲ್ಲಿನ ಒಂದೊಂದು ಕಥೆಯೂ ತಲೆಯ ಮೇಲೆ ಹೊಡೆದ ಹಾಗೆ ಪರಿಣಾಮಕಾರಿ!

ನೀಲಾಂಜನ,
ಫಲಜ್ಯೋತಿಷ್ಯ ಎಂಬ ಪದದ ಅರಿವು ಈ ಲೇಖನ ಬರೆಯುವ ಹಿಂದೆಯೂ ನನಗಿತ್ತು. (ಆದರೆ ಬಹಳ ಹಿಂದೆ ಅಲ್ಲ, ಈಗ್ಗೆ ಒಂದು ನಾಲ್ಕೈದು ವರ್ಷಗಳ ಹಿಂದಿನಿಂದ).

ನನ್ನ ಮಾತಿರುವುದು ಫಲಜ್ಯೋತಿಷ್ಯದ ಕುರಿತಾಗಿಯೇ. ಈಗಿನ ಕಾಲದಲ್ಲಿ ಜ್ಯೋತಿಷ್ಯ ಅನ್ನುವ ಬದಲು ಖಗೋಲಶಾಸ್ತ್ರ ಅಂದುಬಿಡುತ್ತೇವೆ. ಆದ್ದರಿಂದ ಜ್ಯೋತಿಷ್ಯವೆಂದರೆ ಎಲ್ಲರೂ ಹೇಳುವುದು ಫಲಜ್ಯೋತಿಷ್ಯದ ಕುರಿತಾಗಿಯೇ! ಆದ್ದರಿಂದ ಲೇಖನದಲ್ಲಿ ಎಲ್ಲೆಲ್ಲ ಜ್ಯೋತಿಷ ಎಂದಿದೆಯೋ ಅಲ್ಲೆಲ್ಲ ಫಲಜ್ಯೋತಿಷ್ಯ ಎಂದು replace ಮಾಡಿ ಓದಿ.

ನಿಮ್ಮ ಮಾತಿನೊಂದಿಗೆ ನನ್ನ ಸಹಮತಿ ಇದೆ.

ಪ್ರತಿಕ್ರಯಿಸಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು.

Anonymous said...

Very nice post...certainly my take as well.

But in general, where do you draw the line? What is past and what is relevant? Is it different for each of us?

nIlagrIva said...

DS, I didn't quite understand your comment. Anyway, I will try to respond.

If you're talking about dharma, you will figure out what is relevant and what is not after a while. That is why all of the gItA is treasured so much and not several parts of, say, the manu-smriti. Of course, there are many valuable parts there also.

Humans will be humans. Because of that we can be more or less sure that most of whatever applied to somebody during Krishna's time will apply to us also.