Saturday, September 08, 2007

ಶ್ರಾವಣ, ಮಳೆ, ಬಾಹುಲ್ಯ, ಅಸಡ್ಡೆ, ಕೃತಜ್ಞತೆ

ಭಾರತಕ್ಕೆ ಮರಳಿ ಮೂರು ವರ್ಷಗಳು ಸಂದವು ಈ ಶ್ರಾವಣಕ್ಕೆ. ಕಳೆದೆರಡು ವರ್ಷಗಳ ಶ್ರಾವಣಗಳು ಮಳೆಯಿಲ್ಲದೆ ವರ್ಷಋತುವಿಗೆ ತಪ್ಪು ಹೆಸರನ್ನೇನಾದರೂ ಇಟ್ಟಿದ್ದರೆ ಎಂಬ ಸಂಶಯವನ್ನು ಹುಟ್ಟಿಸಿದ್ದುವು.

ಅದೃಷ್ಟವಶಾತ್ ಈ ವರ್ಷ ಕರ್ಣಾಟಕದಲ್ಲಿ ಬಹು ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತಲಲ್ಲಿ ಶ್ರಾವಣವೆಂದರೆ ಹೀಗಿರಬೇಕು ಅನ್ನುವ ಹಾಗಿದೆ. ಯಾವಾಗಲೂ ಮಳೆ ಅಥವಾ ಮೋಡ ಕವಿದ ವಾತಾವರಣ. ಸೂರ್ಯ ಅಪರೂಪಕ್ಕೆ ಹೊರಗೆ ಬಂದಾಗ ಕಣ್ಣಿಗೆ ಎದುರಿನ ವಾಹನ ಕಾಣಿಸದೆ ನೋಟವನ್ನು ಬಿಳಿ-ಕಪ್ಪು-ಬೂದು ಬಣ್ಣಗಳ ಮೋಡಗಳ ಬೆಳಕಿನಾಟ ಸೆಳೆಯುತ್ತದೆ. ಹಿಮಾಲಯ-ಮಲೆನಾಡುಗಳನ್ನು ಜ್ಞಾಪಿಸುವ ಆಗಸದೆತ್ತರಕ್ಕೇರಿದ ದಿಗಂತದ ಮೋಡಗಳು ಮನಸ್ಸನ್ನೂ ತಮ್ಮೆತ್ತರಕ್ಕೆ ಪ್ರಯಾಸವಿಲ್ಲದೆಯೇ ಏರಿಸಿಬಿಡುತ್ತವೆ. ಶ್ರಾವಣದ ಮದುವೆ-ಲಗ್ನಪತ್ರಿಕೆಗಳಿಂದ ತುಂಬಿದ ಛತ್ರಗಳ ಬಾಗಿಲಲ್ಲಿ ಈಗ ಹಿಂದಿನ ಹಾಗೆಯೇ ಚಪ್ಪಲಿಗಳ ಜೊತೆ ತೊಯ್ದ ಛತ್ರಿಗಳು ಸ್ಥಲಾವಕಾಶಕ್ಕೆ ಸ್ಪರ್ಧಿಸುತ್ತಿರುವ ಹಾಗೆ ಕಾಣುತ್ತದೆ.

ಈ ಎಲ್ಲ ಸುಂದರ ಭಾವನೆಗಳೊಂದಿಗೆ ಜನರ ಶಾಪಗಳೂ ಕೇಳುತ್ತವೆ - "ಈ ಹಾಳು ಮಳೆ!". ಇದೇ ನನ್ನನ್ನು ಆಲೋಚನೆಗೀಡು ಮಾಡಿದ್ದು.

ಮನುಷ್ಯ ಸ್ವಭಾವ ಸ್ವಲ್ಪ ವಿಚಿತ್ರವಾದದ್ದು. ಅಂದ ಹಾಗೆ, ನಾನೂ ಮನುಷ್ಯನಾಗಿರುವುದರಿಂದ ಇದಕ್ಕೆ ಹೊರತಲ್ಲ. ಆದರೆ ಒಮ್ಮೊಮ್ಮೆ ಆಗಾಗ ನಾವೇಕೆ ಹೀಗೆ ಅನ್ನುವ ಜಿಜ್ಞಾಸೆ ಮೂಡುತ್ತದೆ. ಜೊತೆಗೆ ಹೀಗಿರುವುದರಿಂದ ಏನಾದ ಹಾಗಾಯಿತು ಎಂದು ಯೋಚನೆ ಮುಂದುವರೆಯುತ್ತದೆ.

ಮಳೆಗಾಲದಲ್ಲಿ ಬಿಸಿಲಿಗೆ ಹಾತೊರೆದು, ಗ್ರೀಷ್ಮದಲ್ಲಿ ಛಳಿಯನ್ನಿಷ್ಟ ಪಟ್ಟು, ಛಳಿಯಲ್ಲಿ ಮತ್ತೆ ಬಿಸಿಲನ್ನಪೇಕ್ಷಿಸುವ ಜನ ನಾವು. ಆಯಾ ಕಾಲದಲ್ಲಿ ಆ ಋತು ಬಂದಾಗ ತಾನೆ ಸೊಗಸು? ನಮಗೆ ತಡೆಯಲು ಸುಖವಾಗಿರುವಷ್ಟು ಪ್ರಮಾಣದಲ್ಲಿ ಬಂದರೆ ಮಾತ್ರ ಸುಖವೇ?

ಇದಕ್ಕೂ ಮಿಗಿಲಾಗಿ, ಒಂದು ವಸ್ತುವು ಸುಲಭವಾಗಿ ಸಿಕ್ಕಾಗ, ನಮಗೆ ಅದರೆ ಪ್ರಮುಖತೆಯ ಅರಿವು ಹಿಂದೆ ಸರಿದು, ಅದರ ಬಗ್ಗೆ ಅಸಡ್ಡೆ ಮುಂದೆ ಬರುತ್ತದೆ.

ಮಾನವನ ಜೀವನಕ್ಕೆ ಏನೇನು ಬೇಕು ಎಂದು ಯೋಚಿಸಿದಾಗ ಆಹಾರ, ಗಾಳಿ, ನೀರು - ಇವೆಲ್ಲ ಬೇಕೆಂಬುದು ಸರ್ವವಿದಿತ. ಆದರೆ ಬಹಳ ಸುಲಭವಾಗಿ ಲಭ್ಯವಿರುವುದರಿಂದ ಇವುಗಳ ಬಗ್ಗೆ ನಮಗೆ ಸಾಮನ್ಯವಾಗಿ ಒಂದು ದಿವ್ಯ ನಿರ್ಲಕ್ಷ್ಯ. ಹಾತೊರೆಯುವುದು ಏತಕ್ಕಾಗಿ? ಹೊನ್ನು, ಅಧಿಕಾರ, ಅಂತಸ್ತು - ಇವೇ ಮೊದಲಾದವು. ಇವು ಯಾವುದೂ ಬೇಡವೆಂದಲ್ಲ, ಆದರೆ ಜೀವನಕ್ಕೆ ಇವು ಗಾಳಿ ಮತ್ತು ನೀರಿನಷ್ಟು ಮೂಲಭೂತವೇ? "ಗಾಳಿ, ನೀರು - ಇರುವವೇ ಅಲ್ವೇ? ಅದಕ್ಯಾಕೆ ಸುಮ್ನೆ ಚಿಂತೆ?" ಅನ್ನುವ ಜಾಯಮಾನ ನಮ್ಮದು.

ಅನಂತದ ವಿಶ್ವದಲ್ಲಿ ಜೀವಕ್ಕೆ ಸೌಕರ್ಯವಿರುವ ಪ್ರಾಯಶಃ ಒಂದೇ ಒಂದು ಗ್ರಹವೆಂದರೆ ನಮ್ಮ ಪೃಥ್ವಿ. ಭೂಮಿಯು ತಣ್ಣಗೆ ಕೊರೆಯುವ ಹಾಗಿದ್ದರೆ ಇದರಲ್ಲಿ ಜೀವಾಣುಗಳ, ಪ್ರಾಣಿಗಳ ಉತ್ಪತ್ತಿಯಾಗಲು ಸಾಧ್ಯವೇ ಇರುತ್ತಿರಲಿಲ್ಲ. ಭೂಮಿಯ ಈ ಮಟ್ಟದ ಸಹಿಸುವ ಉಷ್ಣಾಂಶಕ್ಕೆ ದೊಡ್ಡ ಕಾರಣ ನಮ್ಮ ಸೂರ್ಯ ಮತ್ತು ಅವನಿಂದ ಭೂಮಿಯಿರುವ ಸರಿಯಾದ ದೂರ. ಇನ್ನು ಸ್ವಲ್ಪ ಹತ್ತಿರವಿದ್ದಿದ್ದರೆ ಸುಟ್ಟು ಬೂದಿಯಾಗಿರುತ್ತಿದ್ದೆವು. ಸ್ವಲ್ಪ ದೂರವಿದ್ದಿದ್ದರೆ ತಣ್ಣಗೆ ಕೊರೆಯುವ ಶೀತಲವಾದ ಸಾವು ನಮ್ಮ ಭೂಮಿಯ ಜೀವಜಂತುಗಳದ್ದಾಗಬೇಕಿತ್ತು. ಇವೆಲ್ಲ ಸರಿಯಾಗಿರುವುದು ದೊಡ್ಡ ಅಚ್ಚರಿಯಲ್ಲವೇ?

ಈ ನೈಸರ್ಗಿಕ ಜೀವಕಾರಣಗಳಿಗೆ ನಾವೆಂದಾದರೂ ಕೃತಜ್ಞತೆಯನ್ನಿತ್ತಿದ್ದೇವೆಯೇ? ಕೊಡಲು ಸಾಧ್ಯವಿಲ್ಲ, ಆದರೆ ಮನಸ್ಸಿನಲ್ಲಿ ಆ ಭಾವನೆಯಾದರೂ ಇದೆಯೇ? ನಾವು ಸಮಾಜದಲ್ಲಿ ದೈನಂದಿನ ಜೀವನದಲ್ಲಿ ಕಾಣುವ ಮನುಷ್ಯರ, ವಸ್ತುಗಳ, ಪ್ರಾಣಿಗಳ ಬಗ್ಗೆಯೂ ಇದೇ ರೀತಿಯ ನಡೆವಳಿಕೆಯೇ.

ನಮ್ಮ ಹಿರಿಯೊಬ್ಬರು ಹೇಳುತ್ತಿದ್ದ ಮಾತು ಜ್ಞಾಪಕಕ್ಕೆ ಬರುತ್ತದೆ. "ಇರುವಾಗ ತಾಯಿ-ತಂದೆಯರನ್ನು ಸರಿಯಾಗಿ ನೋಡಿಕೊಳ್ಳದೆ, ಅವರ ವಾರ್ಷಿಕ ಶ್ರಾದ್ಧಕಾರ್ಯವನ್ನು ಮಾತ್ರ ಭಕ್ತಿಯಿಂದ ಮತ್ತು ದುಃಖದಿಂದ ಮಾಡುತ್ತಾರೆ". ಇದ್ದಾಗ ಅವರ ಬೆಲೆಯನ್ನರಿಯದವರು ಅಗಲಿದಾಗ ಮಾತ್ರ ತಿಳಿದುಕೊಳ್ಳುತ್ತಾರೆ, ತಮ್ಮನ್ನು ತಾವೇ ಪಶ್ಚಾತ್ತಾಪದಿಂದ ಹಳಿದುಕೊಳ್ಳುತ್ತಾರೆ.

ಪ್ರೇಮದಲ್ಲೂ ವಿರಹದ ಭಾವನೆಯದೇ, ವಿಪ್ರಲಂಭ ಶೃಂಗಾರದ್ದೇ ಮೇಲುಗೈ. ಪ್ರೇಮಿಗಳು ಕೂಡಿದ್ದರೆ,ಹೇಳುವವರು ಯಾರು? ಬರೆಯುವವರು ಯಾರು? ತಮ್ಮ ಹೆಂಡತಿ ತೌರಿಗೆ ಹೋದಾಗಲೇ ಇರಬೇಕು, ನಮ್ಮ ಕೆ.ಎಸ್.ನರಸಿಂಹಸ್ವಾಮಿಗಳು - "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ" ಎಂಬ ಕವನ ಬರೆದದ್ದು, ಅಲ್ಲವೇ?

ಇಷ್ಟೇ ಅಲ್ಲ, ಯಾವುದಾದರೂ ಉತ್ಕೃಷ್ಟವಸ್ತುವೇ ದೊರೆಯಲಿ, ಅದು ಸುಲಭವಾಗಿ ದೊರೆತಾಗ, ಅದರೆ ಬಗ್ಗೆ ನಿರ್ಲಕ್ಷ್ಯ ಬರುವುದು ಸಾಮಾನ್ಯ. ಶ್ರೀಕೃಷ್ಣನು ಪೂರ್ಣಾವತಾರನಾದರೂ, ಅರ್ಜುನ ಅವನನ್ನು ತಿಳಿದೋ ತಿಳಿಯದೆಯೋ ಸಲಿಗೆಯಿಂದ ಕಾಣುತ್ತಾನೆ, ದುರ್ಯೋಧನಾದಿಗಳು ಅವನ ಬಗ್ಗೆ ತಾತ್ಸಾರವನ್ನೇ ತಾಳುತ್ತಾರೆ. "ಒಬ್ಬ ಸಾಮಾನ್ಯ ಗೋಪ" ಎಂದು ಜರೆದವರೇ ಹೆಚ್ಚು. ಆದರೆ ಅದೇ ಗೋಪಾಲ ಗೀತಾಚಾರ್ಯನಾಗಿ ತನ್ನ ದುರ್ಲಭ ವಿಶ್ವರೂಪವನ್ನು ತೋರಿದಾಗ, ಅರ್ಜುನ ತನ್ನ ತಪ್ಪನ್ನರಿತು - "ಸ್ವಾಮಿ, ನಿನ್ನನ್ನು ಕೇವಲವಾಗಿ ಕಂಡೆ, ನನ್ನನ್ನು ಕ್ಷಮಿಸೆಂ"ದು ಕೇಳಿಕೊಳ್ಳುತ್ತಾನೆ. ಭಕ್ತ-ಭಗವಾನರ ನಡುವಣ ಇರುವ ಬಾಂಧವ್ಯವನ್ನು ಕುರಿತಲ್ಲ ಇಲ್ಲಿ ಹೇಳಿದ್ದು. ಹೇಗೆ ಅಪರೂಪವಾದ ಒಂದು ವಸ್ತುವೇ ನಮಗೆ ಸುಲಭವಾಗಿ ದೊರೆತಾಗ, ಅದನ್ನು ಅಸಡ್ಡೆ ಮಾಡುತ್ತೇವಲ್ಲ, ಎಂಬುದರ ಬಗ್ಗೆ.

ಈ ರೀತಿಯ ಕುರಿತಾಗಿಯೇ ಸಂಸ್ಕೃತದ ಒಂದು ಜನಪ್ರಿಯ ಸುಭಾಷಿತವಿದೆ.
"ಅತಿಪರಿಚಯಾದವಜ್ಞಾ ಸಂತತಗಮನಾದನಾದರೋ ಭವತಿ |
ಮಲಯೇ ಭಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನಂ ಕುರುತೇ||"

ಅತಿಪರಿಚಯದಿಂದ ಅಸಡ್ಡೆಯೂ, ಸತತ ಒಬ್ಬರ ಮನೆಗೆ ಹೋಗುವುದರಿಂದ ಅನಾದರವೂ ಉಂಟಾಗುತ್ತದೆ. ಬೆಟ್ಟಗಳಲ್ಲಿ ಬೇಡಿತಿ ಚಂದನ (ಗಂಧದ) ಮರದ ತುಂಡುಗಳನ್ನೇ ತನ್ನ ಒಲೆಗೆ ಇಂಧನವಾಗಿ ಬಳಸುತ್ತಾಳೆ.

ನಮ್ಮ ಸ್ವಭಾವ ಹೇಗಾದರೂ ಇರಲಿ. ಆದರೆ ನಾವು ನಮ್ಮ ಸುತ್ತಣ ಸೃಷ್ಟಿಯನ್ನೂ, ನಮಗೆ ಉಪಕಾರ ಮಾಡಿದ ವಸ್ತುಗಳನ್ನು, ಪರಿಸರವನ್ನೂ, ಜನರನ್ನೂ ಕೃತಜ್ಞತೆಯಿಂದ ಸ್ಮರಿಸುವುದು ಯೋಗ್ಯವಾಗಿ ಕಾಣುವುದಿಲ್ಲವೇ? ನಮ್ಮ ವೇದಗಳಲ್ಲಿ ಈ ಸಮಗ್ರ ದೃಷ್ಟಿಯಿದ್ದ ಹಾಗೆ ಕಾಣುತ್ತದೆ. ಅದರ ಹಲವು ಮಂತ್ರಗಳಲ್ಲಿ ಆ ಕೃತಜ್ಞತೆಯ ಭಾವನೆ ಉಕ್ಕಿ ಹರಿಯುತ್ತದೆ. ನೀರಿನ ಬಗ್ಗೆ "ಆಪೋ ಹಿ ಷ್ಠಾ" ಮಂತ್ರ ಎಷ್ಟು ಸೊಗಸಾದದ್ದು! ಎಷ್ಟು ಅರ್ಥಗರ್ಭಿತವಾದದ್ದು! ಸೂರ್ಯನ ಸ್ತುತಿಯಾದ ಮಂತ್ರಗಳಿವೆ. ಪವನನನ್ನು ಕುರಿತಾದ ಮಂತ್ರಗಳಿವೆ. ಭೂಮಿಯನ್ನು ಅನೇಕ ಕಡೆ ಹಾಡಿ ಹೊಗಳಿದೆ. ಪ್ರಕೃತಿಯ ಅಂಗ-ಅಂಗವನ್ನೂ ಕೃತಜ್ಞತೆಯಿಂದ, ಆದರದಿಂದ ಸ್ಮರಿಸಲಾಗಿದೆ. ತಂದೆ-ತಾಯಿಯರನ್ನು, ಗುರುವನ್ನು ಕೂಡ ಅಷ್ಟೇ ಗೌರವಾದರಗಳಿಂದ ಸ್ಮರಿಸಿದೆ.

ಎಷ್ಟು ವಸ್ತುಗಳಿಂದ, ಪ್ರಾಣಿಗಳಿಂದ, ಜನಗಳಿಂದ, ನಾವು ಉಪಕೃತರಾಗಿದ್ದೇವೆ ಎಂದು ಯೋಚಿಸಿದಾಗ, ನಾವೇನೇನೂ ಅಲ್ಲ ಎಂಬ ಭಾವನೆಯೊಂದಿಗೆ ಕೃತಜ್ಞತೆಯೂ ಮೂಡುತ್ತದೆ. ಈ ಕೃತಜ್ಞತೆಯಿಂದ ಜೀವನ ನಡೆಸಿದರೆ ಎಷ್ಟು ಸೊಗಸಾಗಿರುತ್ತದೆ, ಅಲ್ಲವೇ?

|| ಇತಿ ಶಮ್ ||

3 comments:

Anonymous said...

"ಈ ಕೃತಜ್ಞತೆಯಿಂದ ಜೀವನ ನಡೆಸಿದರೆ ಎಷ್ಟು ಸೊಗಸಾಗಿರುತ್ತದೆ.."

ಸುಂದರ್, ಅತಿ ಸುಂದರ್....

Anonymous said...

ಚೆನ್ನಾಗಿದೆ ಬರಹ..

ಓದಲು ಶುರುಮಾಡುತ್ತಿದ್ದ್ದಂತೆಯೇ, ನನಗೆ ಅತಿಪರಿಚಯಾದವಜ್ಞಾ ... ನೆನಪಾಯಿತು. ಓದುತ್ತಾ ಹೋದಂತೆ, ಅಲ್ಲೇ ಅದು ಪ್ರತ್ಯಕ್ಷ!

ನಾನು, ನೀವು ಏಕೆ ಒಂದೇ ತರಹ ಯೋಚಿಸುತ್ತೇವೆ ;-) ತಿಳಿಯುತ್ತಿಲ್ಲ! ನಮ್ಮಿಬ್ಬರ ಹೆಸರು ಒಂದೇ ರೀತಿ ಇರುವುದಕ್ಕೇ ಇರಬಹುದೇ?

-ನೀಲಾಂಜನ

musafir said...

ಕೆ ಎಸ್ ನ ಅವರದೊಂದು ಕವನ:

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!