Tuesday, August 17, 2004

ತಾಳಲಾರೆ!

ಅಮೇರಿಕಕ್ಕೆ ಬಂದು ಏಳು ವರ್ಷಗಲಾದವು. ಇನ್ನೂ ನಿನ್ನೆ ಹತ್ತನೇ ಕ್ಲಾಸಿನ ಪರೀಕ್ಷೆಯ ಫಲಿತಾಂಶಗಳನ್ನು ನೋಡಿದ ಹಾಗಿದೆ. ಅದಾದ ಮೇಲೆ ಪಿ ಯು ಸಿ, ಬಿ ಇ ಇವೆಲ್ಲ ಮುಗಿಸಿ ಒಂದು ವರ್ಷ ಭಾರತದಲ್ಲಿ ಕೆಲಸ ಮಾಡಿ ಅಮೇರಿಕಕ್ಕೆ ಬಂದದ್ದು. ಇಲ್ಲಿ ಸ್ನಾತಕೋತರ ಪದವಿ ಪಡೆದ ನಂತರ ಕೆಲಸವನ್ನು ಗಳಿಸಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮಧ್ಯದಲ್ಲಿ ನನ್ನ ಆಶ್ರಮದಲ್ಲಿ ಬಡ್ತಿ ಬೇರೆ ದೊರೆಯಿತು. (ಅಂದರೆ ಮದುವೆಯಾಯಿತೆಂದು) ನಮ್ಮ ದೇಶಕ್ಕೆ ಮರಳಲು ಅವಕಾಶಗಳಿದ್ದರೂ, ಅದೇ ಹೇಳುತ್ತಾರಲ್ಲ, ಕಾಲ ಕೂಡಿ ಬರಬೇಕು ಅಂತ, ಹಾಗೇ ನನಗೂ ಈಗ ಕಾಲ ಕೂಡಿ ಬಂದಿದೆ. ಇನ್ನು ಮೂರು ವಾರಗಳಲ್ಲಿ ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ! ನನಗಂತೂ ಮಹದಾನಂದ.

ಆದರೆ ಈ ಕಾಯುವ ಕೆಲಸವಿದೆಯಲ್ಲ! ಅಬ್ಬ! ಟಿಕೆಟ್ ಖರೀದಿಸಿದ್ದಾಗಿದೆ. ಎಂದು ಹೊರಡುವೆನೋ ತಿಳಿದಿದೆ. ಕೆಲವೇ ದಿನಗಳು ಎಂದು ತಿಳಿದಿದ್ದರೂ ಅದೇನೋ ಮನದಲ್ಲಿ ಉದ್ವೇಗ. ಏಳು ವರ್ಷ ಇಲ್ಲಿದ್ದ ನಂತರ ಈ ಜಾಗಕ್ಕೆ ಸ್ವಲ್ಪ ಹೊಂದಿಕೊಂಡಿದ್ದೇನೆ. ಆದರೆ ನಮ್ಮೂರಿನಲ್ಲಿರುವ ಮಜ ಇಲ್ಲಿಲ್ಲ. ನಮ್ಮ ನಾಡು, ನಮ್ಮ ಜನ, ನಮ್ಮ ಮಣ್ಣು, ನಮ್ಮ ಬಾಷೆ! ಇವೆನ್ನೆಲ್ಲ ಬಿಟ್ಟು ಎಷ್ಟು ಕಾಲ ಕಳೆದಿದ್ದೇನೆ! ಕೆಲಸದ ಮಧ್ಯೆ ಕೂತು ಇದರ ಬಗ್ಗೆ ಯೋಚಿಸುತ್ತಾ ತಲೆ ಕೆಡಿಸಿಕೊಳ್ಳುವುದಕ್ಕಿಂತ ಇದರ ಬಗ್ಗೆ ಸ್ವಲ್ಪ ಬರೆದರೆ ನೆಮ್ಮದಿ ಬಂದು ಸಮಯ ಸ್ವಲ್ಪ ಕಳೆಯುತ್ತದೆ ಎಂದು ನನ್ನ ಈ ಬರಹ. ಕಾಯುವಾಗಂತೂ ಒಂದೊಂದು ದಿನವೂ ಒಂದೊಂದು ವರ್ಷದಂತೆ. (ಯುಗದಂತಲ್ಲ ಬಿಡಿ).

ಅಮೇರಿಕ ಸ ಸಂ ಒಂದು ಮಹಾನ್ ದೇಶ. ಆದರೆ ಅದು ನನ್ನ ದೇಶವಲ್ಲ. ನನ್ನ ದೇಶದಲ್ಲಿ ನನಗೆ ಪ್ರೀತಿ ದೊರೆತಿದೆ. ದೊರೆಯದೇ ಹೋಗಿದ್ದರೆ ಬೇರೆ ದೇಶದಲ್ಲಿದ್ದರೆ ಸರಿಹೋಗುತ್ತಿತ್ತೋ ಏನೊ. ಆದರೆ ಸ್ಥಿತಿ ಹಾಗಿಲ್ಲ. ನಾನೂ ನನ್ನ ದೇಶವನ್ನು ಪ್ರೀತಿಸುತ್ತೇನೆ. ನನಗೂ ಕರ್ತವ್ಯವಿದೆ. ಬೇರೆಯ ದೇಶದಲ್ಲಿದ್ದುಕೊಂಡು ಮಾಡುವುದಕ್ಕಿಂತ ನಮ್ಮ ದೇಶದಲ್ಲಿರುವುದೇ ನನಗೆ ಲೇಸು. ನನ್ನ ಪರಿವಾರವೆಲ್ಲವೂ ಭಾರತದಲ್ಲೇ ಇರುವುದು. ಆದ್ದರಿಂದ ಅವರೊಡನೆ ಇರುವುದೇ ನನಗೆ ಸರಿ.

ಏನೋ ಬರೆಯಬೇಕೆನ್ನಿಸಿತು. ಬರೆದೆ. ಇನ್ನು ಕೆಲವೇ ದಿನಗಳು. ಅದಾದ ಮೇಲೆ ನಾನು ನಮ್ಮ ಮನೆಯಲ್ಲಿ ! ನಮ್ಮ ದೇಶದಲ್ಲಿ ! ಆದರೆ ಈ ಬಾರಿ ಬರುವ ವಿಮಾನಯಾತ್ರೆಯ ತಾರೀಖು ನೋಡಬೇಕಿಲ್ಲ! ಅಯ್ಯೋ ಹೊರಡಬೇಕಲ್ಲಪ್ಪ ಅನ್ನುವ ತಳಮಳವಿಲ್ಲ! ಅಷ್ಟು ಸಂತೋಷ ನನಗಿದೆ! ಇದನ್ನು ನೆನೆಸಿಕೊಂಡರೆ ಸಂತೋಷ.

ಇರಲಿ, ದೂರದ ಬೆಟ್ಟ ನುಣ್ಣಗೆ ಎನ್ನುವರು. ಮೊನ್ನೆ ನನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಬೆಂಗಳೂರಿನ ಕ್ಲಬ್ಬಿನೊಂದರಲ್ಲಿ ತೆಗೆದ ಚಿತ್ರಗಳನ್ನು ನೋಡಿದೆ. ನಾನು ಕ್ಲಬ್ಬಿಗೆ ಹೋಗುವವನಲ್ಲ. ಆದರೆ ಆ ಚಿತ್ರಗಳನ್ನು ನೋಡಿದಾಗ, ಚಿತ್ರದಲ್ಲಿರುವವರ ಉಡುಪುಗಳನ್ನು ನೋಡಿದಾಗ ಇದು ಯಾವುದೋ ಬೇರೆ ದೇಶ ಎಂದೇ ಅನ್ನಿಸಿತು.

ನನಗೇನು ಗೊತ್ತು ? ಬೆಂಗಳೂರು ಹೀಗೇ ಇತ್ತೇನೋ ? ದೇಶ ಬಿಟ್ಟಿದ್ದು ವಿದ್ಯಾರ್ಥಿಯಾಗಿ. ಮರಳುವುದು ಅಭಿಯಂತಾರನಾಗಿ. ಈಗ ಸ್ವಲ್ಪ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈಗ ನನ್ನ ಕಣ್ಣಿಗೆ ನಮ್ಮ ನಗರ ಹೇಗೆ ಕಾಣುವುದೋ ? ನನ್ನದೋ ತೀರ middle class sensibilities. ಈಗ ಸ್ವಲ್ಪ ಮೇಲಿನ ಸ್ತರದಲ್ಲಿದ್ದೇನೆ ಅನ್ನಿಸುತ್ತದೆ. ಆದರೂ ಅದೇ ಭಾವನೆಗಳು. ಅವೇ ಬೇಕು ಬೇಡಗಳು.

ಇರಲಿ, ಪ್ರತಿದಿನವೂ ಹೊಸದು, ಪ್ರತಿಜಾಗವೂ ಹೊಸದು. ಮನಸ್ಸಿಗೆ ಬುದ್ಧಿಗೆ ಆಗುವ ಜೀವನ ಪಾಠ ನಿರಂತರ. ಮತ್ತೆ ಮನೆಗೆ ಹೊಸ ಪಾಠ ಕಲಿಯಲು ಹೊರಟಿದ್ದೇನೆ. ಅದೃಷ್ಟವಿದ್ದರೆ ಸ್ವಲ್ಪ ದೇಶಸೇವೆ ಮಾಡುವ ಅವಕಾಶ ದೊರೆಯುತ್ತದೆ. ಮುಂದೆ ಓದುವ ಅವಕಾಶವೂ ದೊರೆಯಬಹುದು. ಆದರೆ ಇದಕ್ಕೆ ಸರಿಯಾಗಿ ಜವಾಬ್ದಾರಿಯೂ ಹೆಚ್ಚುವುದು. ಹಿಂದಿನ ವಿದ್ಯಾರ್ಥಿಯಲ್ಲವಲ್ಲ ನಾನು ! ವಯಸ್ಸಾಗಿದೆಯಾದರೂ ಬುದ್ಧಿ ಬಂದಿಲ್ಲ. ನೋಡೋಣ. ಜೀವನ ಮನಃಪ್ರವಾಸದಿ ಒಂದು ದೊಡ್ಡ ಪ್ರವಾಸ.

|| ಎಲ್ಲರಿಗೂ ಶುಭವಾಗಲಿ ||

1 comment:

Anonymous said...

Your sentence "...I belong to the middle-class sensibilities." very much appealed to me.

You know most Indians (those who get to USA) forget their humble past very quickly. Being "not ambitious" is considered a negative quantity in US, and we get caught up in the *rat race*.