Dhananjoy Chatterjee takes comfort in bhajans
ಈ ಲೇಖನವನ್ನೋದಿದವರಿಗೆ ಧನಂಜಯ ಚಟರ್ಜಿ ಎಷ್ಟು ಬದಲಾಯಿಸಿದ್ದಾನೆ ಎಂದು ತಿಳಿಯಬೇಕು. ಹಾಗೆ ಬರೆದಿದ್ದಾರೆ. ಇವನ ಹೆಂಡತಿ ಮತ್ತು ತಾಯಿ ಸಹ ರಾಷ್ಟ್ರಪತಿಗಳಿಗೆ ನಿವೇದನೆಯನ್ನು ಕಳಿಸಿದ್ದಾರಂತೆ. ನಿವೇದನೆಯನ್ನು ತಿರಸ್ಕರಿಸಿದ್ದಾಯ್ತು. ಆದರೂ ನೇಣು ಹಾಕಿದರೆ ಸಾಮೂಹಿಕ ಆತ್ಮಹತ್ಯ ಮಾಡಿಕೊಳ್ಳುವುದಾಗಿ ಈ ಅಪಾದಿತನ ಕುಟುಂಬವು ಬೆದರಿಕೆ ಹಾಕಿದೆ.
ನನ್ನದೊಂದು ಯೋಚನೆ - ಅಲ್ಲ, ಇವನು ಬಾಲಿಕೆಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಕೊಂದಂಥವನು. ಅದೆಷ್ಟು ನೋವನ್ನು ಆ ಹುಡುಗಿ ಅನುಭವಿಸಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ. ಮದುವೆಯಾಗಿದ್ದ ಯುವಕನೊಬ್ಬನು ಹೀಗೆ ಅತ್ಯಾಚಾರ ನಡೆಸಿದರೆ ಅವನಲ್ಲಿ ಏನೋ ಸಭ್ಯತೆಯ ಮತ್ತು ಮಾನವತೆಯ ಕೊರತೆಯಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಹೀಗೆ ಅಪಾದನೆ ಸಾಬೀತಾದ ಮೇಲೂ ಇವನ ಕುಟುಂಬದವರು ಮಾಡಿರುವ ನಿವೇದನೆ ತೀರಾ ಮೋಸದ್ದು. ಈ ರೀತಿಯ ಅತ್ಯಾಚಾರಿಯನ್ನು ಮನೆಯಲ್ಲಿ ಹೇಗೆ ತಾನೇ ಸೇರಿಸಿಕೊಂಡಾರು ? ಆ ಹೇಯ ಕೃತ್ಯಕ್ಕೆ ಎಂಥ ಶಿಕ್ಷೆಯೂ ಕಠಿಣವಲ್ಲ! ಕ್ಷಮೆಯನ್ನು ವಿರೋಧಿಸಿದವರು ಎಲ್ಲ ಪಕ್ಷದವರೂ ! ಇಲ್ಲಾದರೂ ಐಕಮತ್ಯ ಕಂಡಿತಲ್ಲಾ!
ಇದರ ಮಾತು ಹಾಗಿರಲಿ. ಆದರೆ ನನಗೆ ಅಪರಾಧ ಮತ್ತು ಶಿಕ್ಷೆಯ ಸ್ವಭಾವದ ಬಗ್ಗೆಯೇ ಯೋಚನೆ ಬರುತ್ತದೆ. ಈಗ ಒಬ್ಬ ಅಪರಾಧಿಯಿದ್ದಾನೆ ಎಂದು ಬಗೆಯೋಣ. ಒಂದು ಕೆಟ್ಟ ಘಳಿಗೆಯಲ್ಲಿ ಒಂದು ಕೆಟ್ಟ ಕೆಲಸ ನಡೆಯಿತು ಅಂದುಕೊಳ್ಳೋಣ. ಏಕೆ ನಡೆಯಿತು ಎನ್ನುವುದು ಆಳವಾದ ಮನಶ್ಸಾಸ್ತ್ರದ ವಿಷಯ. ಆದರೆ ಈ ಕೃತ್ಯವು ಅಪರಾಧಿಯ ಮನಃ ಪರಿವರ್ತನೆ ಮಾಡಿತು ಎಂದುಕೊಳ್ಳೋಣ. ಹಲವರಿಗೆ ಹಾಗೆಯೇ ಆಗುತ್ತದೆ. ಕೋಪದಲ್ಲಿ ಕತ್ತರಿಸಿದ ಮೂಗಿನ ಹಾಗೆ. ಮನಃ ಪರಿವರ್ತನೆಯಾದರೆ ಅಪರಾಧಿಯಲ್ಲಿನ ಅಪರಾಧ ಸತ್ತಿತೆಂದಲ್ಲವೇ ? ನಾವು ಶಿಕ್ಷೆಯನ್ನು ಕೊಡುವುದೂ ಅದಕ್ಕೇ ಅಲ್ಲವೆ ? ಸಮಾಜದಲ್ಲಿ ನೆಲೆಸಲು ಯೋಗ್ಯತೆಯಿಲ್ಲದ ಜನರನ್ನು ಜೈಲಿಗೆ ತಳ್ಳುತ್ತೇವೆ. ಮರಣದಂಡನೆಯನ್ನೂ ವಿಧಿಸುತ್ತೇವೆ. ಶಿಕ್ಷೆಯ ದೊಡ್ಡ ಅಂಶ ಅಪರಾಧದ ಕೊನೆ, ಅಪರಾಧಿಯ ಕೊನೆಯೇ ಅಲ್ಲ. ಹೌದು - ಕೆಲವು ಅಪರಾಧಿಗಳು ತಮ್ಮ ಕೆಲಸ ತಪ್ಪು ಎಂದು ಭಾವಿಸುವುದಿಲ್ಲ. ಏಕೆಂದರೆ ಅವರಿಗೆ ಅರ್ಥವಾಗುವುದಿಲ್ಲ. ಮಾನಸಿಕ ರೋಗಿಗಳ ಮಾತನ್ನಲ್ಲ ಹೇಳುತ್ತಿರುವುದು. ಅಪರಾಧವನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡವರ ಬಗ್ಗೆ. ಅವರ ಮಾತಿರಲಿ. ಸಮಾಜದ ಮುನ್ನಡೆಗೆ ಇಂಥವರು ಹೊರಗಿದ್ದರೇ ವಾಸಿ.
ಆದರೆ ಎಷ್ಟು ಯೋಚಿಸಿದರೂ ಅಪರಾಧದ ಮೂಲವನ್ನು ಕಿತ್ತೊಗೆಯುವುದೇ ಶಿಕ್ಷೆಯ ಮೊದಲ ಕೆಲಸ ಎಂದು ನನಗೆ ತೋರುತ್ತದೆ.
ಆದರೆ ಮನುಷ್ಯರಾದ ನಮ್ಮಲ್ಲಿ ನ್ಯಾಯದ ಭಾವನೆ ಓಂದಿದೆಯಲ್ಲಾ, ಅದು ಕೇವಲ ಅಪರಾಧದ ಸಾವನ್ನು ಬಯಸುವುದಿಲ್ಲ. ಮುಯ್ಯಿಗೆ ಮುಯ್ಯನ್ನು ಕೇಳುವದೇ ನಮ್ಮ ನ್ಯಾಯಪ್ರಜ್ಞೆಯ ಗುಣ. ಅಪರಾಧಿ ಸಂಪೂರ್ಣವಾಗಿ ಬದಲಾದರೂ ನಮ್ಮ ಮನಸ್ಸಿಗೆ ಅಪರಾಧಿಗೆ ಸರಿಯಾದ ಶಿಕ್ಷೆ ದೊರೆತಿಲ್ಲವೆಂದೇ ಭಾವನೆ. ಅಪರಾಧಿಯನ್ನು ಕೊಂದರೆ ತಮ್ಮ ಮಗಳು ಅಥವಾ ಬೇಕಾದವರು ಮರಳಿ ಬರುವುದಿಲ್ಲ ಎಂದು ತಿಳಿದೇ ಇದೆ. ಆದರೂ ನ್ಯಾಯ ದೊರೆಯಬೇಕು. ಈ ಪ್ರಜ್ಞೆ ಎಲ್ಲ ಸ್ತರಗಳಲ್ಲೂ ಇದೆ. ಅದಕ್ಕೆ ನನಗೂ ಈ ಘಟನೆಯ ಬಗ್ಗೆ ಓದಿದಾಗ ಅವನ ಜೀವದಾನಕ್ಕಾಗಿ ಬೇಡಿದ ಧನಂಜಯನ ಪರಿವಾರದ ಬಗ್ಗೆ ತೀವ್ರತರವಾದ ತಿರಸ್ಕಾರವುಂಟಾದದ್ದು. ಆದರೂ -- ನಮ್ಮ ಮನೆಯವರೇ ಈ ರೀತಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ನ್ಯಾಯಕ್ಕೊಪ್ಪಿಸುವಷ್ಟು ನಾವು ನ್ಯಾಯಪರರೇ ?
ಎಲ್ಲರೂ ಅವರ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಆದರೆ ಈ ಘಟನೆ ಎಂಥವರನ್ನೂ ಯೋಚನೆಗೆ ಪ್ರೇರೇಪಣೆಯನ್ನೊದಗಿಸದೇ ಇಲ್ಲ.
No comments:
Post a Comment