ಕಳೆದ ವಾರ ಬಹಳ ಒಳ್ಳೆಯ ಸಂಗತಿ ನಡೆಯಿತು. ಕಳೆದ ನನ್ನ ಬ್ಲಾಗುಗಳಲ್ಲಿ - ಬೆಂಗಳೂರಿನಲ್ಲಿ ಅಷ್ಟು ಒಳ್ಳೆಯ ಕಾರ್ಯಕ್ರಮಗಳನ್ನಿಡುತ್ತಾರೆ ಆದರೆ ಕಾರ್ಯವಶಾತ್ ಅವುಗಳಿಗೆ ಹೋಗಲಾಗುವುದಿಲ್ಲ - ಎಂದು ಹಲುಬುತ್ತಿದ್ದೆ. ಆಗಲಿ ನೋಡಿಯೇ ಬಿಡೋಣ ಎಂದು ಬಸವನಗುಡಿಯ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ನಡೆಯುತ್ತಿದ್ದ ಶತಾವಧಾನಿ ಆರ್ ಗಣೇಶ ಅವರಿಂದ 'ಮಹಾಭಾರತದ ಉಪಾಖ್ಯಾನಗಳು' ಎಂಬ ವಿಷಯದ ಮೇಲಿನ ಉಪನ್ಯಾಸಕ್ಕೆ ಹೋಗಲೇ ಬೇಕು ಎಂದು ನಿರ್ಧರಿಸಿದೆ. ನಾನೂ ನನ್ನ ಹೆಂಡತಿಯೂ ಅಲ್ಲಿ ಹೋಗಿ ಕುಳಿತೆವು. ಗಣೇಶ್ ರವರು ಬಹಳ ಚೆನ್ನಾಗಿ ವಿಷಯ ತಿಳಿದುಕೊಂಡು ಸಂಸ್ಕೃತದ ಮಹಾಭಾರತದಲ್ಲಿನ ನಳನ ಕಥೆಯ ಜೊತೆಗೆ ಕನಕದಾಸರ 'ನಳಚರಿತ್ರೆ' ಗ್ರಂಥವನ್ನು ಅಲ್ಲಿಲ್ಲಿ ತುಲನೆ ಮಾಡುತ್ತಾ ನಳೋಪಾಖ್ಯಾನವನ್ನು ತಿಳಿಯ ಹೇಳಿದರು. ನಳನ ಕಥೆ ಎಂಬುದನ್ನು ನೆಪಮಾಡಿಕೊಂಡು ಭಾರತೀಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿದರು. ಉದಾಹರಣೆಗೆ - ಭಾರತದ ಅಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಾರ್ಥವಾಹನಗಳ ದೊಡ್ಡ ಪಾತ್ರವನ್ನು ವಿವರಿಸಿದರು. ಇದರ ಜೊತೆಗೆ ಸಾರ್ಥಗಳ ದೇವತೆಗಳಾದ ಯಕ್ಷರ ವಿಷಯವನ್ನು ಹೇಳಿದರು. ಭೈರಪ್ಪನವರ ಸಾರ್ಥ ಕಾದಂಬರಿಯ ಬಗ್ಗೆ ಮಾತನಾಡಿದರು. ಋಗ್ವೇದದಲ್ಲಿಯೇ ಸಾರ್ಥದ ಉಲ್ಲೇಖವಿದ್ದು ಇಂದ್ರ ಮತ್ತು ಅಶ್ವಿನೀ ದೇವತೆಗಳು ಸಾರ್ಥವಾಹನರ ದೇವತೆಗಳಾಗಿದ್ದರು ಎಂಬುದನ್ನೂ ತಿಳಿಸಿದರು. ನಳನು ಬಾಹುಕನಾಗಿ ಋತುಪರ್ಣನ ಸಾರಥಿಯಾಗಿ ದಮಯಂತಿಯ ಸ್ವಯಂವರದ ಕಡೆಗೆ ರಥವನ್ನೋಡಿಸುವ ವರೆಗೆ ಕಥೆ ಮುಂದುವರೆದಿತ್ತು.
ಅದೃಷ್ಟವಶಾತ್ ಉಪನ್ಯಾಸ ಮುಗಿದ ಮೇಲೆ ಗಣೇಶ್ ರವರು ನಮ್ಮೊಂದಿಗೆ ನಮ್ಮ ಕಾರಿನಲ್ಲಿ ಅವರ ಮನೆಯ ಕಡೆಗೆ ಪಯಣಿಸಿದರು. ದಾರಿಯಲ್ಲಿ ಶಾಂಕರಾದ್ವೈತದಲ್ಲಿನ ಕವಲುಗಳ ಬಗ್ಗೆ ಮಾತು ಪ್ರಾರಂಭವಾಗಿ ಗಣೇಶ್ ರವರು ಬಹಳ ಒಳ್ಳೆಯ ವಿವರಣೆಯನ್ನು ನೀಡಿದರು. ಇದರ ನಂತರ ಮುಂದಿನ ದಿನ ಗಣೇಶ್ ರವರು ಪಾಠ ಮಾಡುವ ಕಾಲಿದಾಸನ ರಘುವಂಶದ ಪಾಠವಾಯಿತು. ಇನ್ನು ಮುಂದೆ ಪ್ರತಿ ವಾರವೂ ಪಾಠವನ್ನು ಕೇಳುವ ಲಾಭವಾಗಿದೆ. ಎಂಥ ಒಳ್ಳೆಯ ಲಾಭ ಎಂದು ಬಲ್ಲವರೇ ಬಲ್ಲರು.
ನಂತರ ಮುಂದಿನ ದಿನ ಜಯನಗರ ನ್ಯಾಷನಲ್ ಕಾಲೇಜಿನ ಸಂಸ್ಕೃತ ಭಾಗದ ಮುಖ್ಯಸ್ಥರಾದ ಕಣ್ಣನ್ ರವರೊಡನೆ ಸಂವಾದ ನಡೆಯಿತು. ಬಹಳ ಚೆನ್ನಾಗಿ ಸಂಸ್ಕೃತಾಂಗ್ಲಗಳನ್ನು ಮಹನೀಯರು ಅಭ್ಯಸಿಸಿದ್ದಾರೆ. ನಮ್ಮ ವಿಚಾರಗಳು ಹೇಗೆ ಪರಸ್ಪರ ಹೊಂದಿಕೊಂಡವು ಎಂದು ಕೇಳಿ ಆಶ್ಚರ್ಯಾನಂದಗಳು ಒಂದು ಬಾರಿಗೇ ಆದವು.
ಜೊತೆಗೆ ಎರಡು ಸಂಬಂಧಿಕರ ಮನೆಗೆ ಭೇಟಿ ಕೊಟ್ಟೆವು. ಬಹಳ ದಿನಗಳಿಂದ ನೋಡಿರದೆ ಇದ್ದೆ. ಅವರನ್ನು ನೋಡಿ ಮನಸ್ಸಿಗೆ ಸಂತೋಷವಾಯಿತು. ಒಟ್ಟಿನಲ್ಲಿ ಒಳ್ಳೆಯ ವಾರಾಂತ್ಯವನ್ನು ಕಳೆದುದರ ಸದ್ಭಾವನೆ ಮನಸ್ಸನ್ನು ತುಂಬಿದೆ.
No comments:
Post a Comment