ಬೆಂಗಳೂರಿಗೆ ಮರಳಿ ಎರಡು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಈಗ ಸ್ವಲ್ಪ ಹೊಂದಿಕೊಂಡಿರಬಹುದು ಎಂದು ಎಲ್ಲರ ಭಾವನೆ. ಮನೆಯ ಒಳಗೇನೋ ಸರಿ. ಕಛೇರಿಯಲ್ಲೂ ಸರಿ. ಆದರೆ ಮನೆಯಿಂದ ಕಛೇರಿಗೋ ಬೇರೆಡೆಯೆಲ್ಲೋ ಹೊರಡಬೇಕಾದಾಗ ಮಾತ್ರ ದೊಡ್ಡ ಸಮಸ್ಯೆ.
ಸಮಸ್ಯೆ ಹೇಳಲು ಬಹಳ ಸುಲಭ. ಬೇರೆಡೆಯೆಲ್ಲಾದರೂ ಹೋಗಬೇಕೆಂದರೆ ರಸ್ತೆಯ ಮೇಲೆ ಪಯಣಿಸಬೇಕು. ಈ ರಸ್ತೆಗಳಲ್ಲೇ ಇರುವುದು ತೊಂದರೆ. ಎಂಟು ವರ್ಷದ ಹಿಂದಿನ ಊರಿಗೂ ಈಗಿನ ಊರಿಗೂ ಅಜಗಜಾಂತರ ವ್ಯತ್ಯಾಸ ಮಾತ್ರ ಅಲ್ಲ. ಅಮೀಬಕ್ಕೂ ತಿಮಿಂಗಿಲಕ್ಕೂ ಇರುವ ವ್ಯತ್ಯಾಸ ಎಂದು ಹೇಳಿದರೆ ಉತ್ಪ್ರೇಕ್ಷೆ ಖಂಡಿತ ಆಗುವುದಿಲ್ಲ. ಆಗ ತೂತು ಕೊರೆದ ರಸ್ತೆಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಈಗ ಎಲ್ಲೆಲ್ಲೂ ರಸ್ತೆಯವ್ಯವಸ್ಥೆ! ತೂತು ಕೊರೆದ ರಸ್ತೆಗಳ ಮೇಲೂ ಅಸಂಖ್ಯಾತ ವಾಹನಗಳ ಸಂಚಾರ. ಸಣ್ಣ ರಸ್ತೆಯಲ್ಲಿ ಅಷ್ಟು ವಾಹನಗಳನ್ನು ಬಿಟ್ಟರೆ ಏನಾಗುತ್ತದೆ ? ಟ್ರ್ಯಾಫಿಕ್ ಜಾಂ. ಇದನ್ನು ನಮ್ಮ ತಾಯಿಗೆ ಹೇಳಿದಾಗ - "ಸ್ವಲ್ಪ ಬ್ರೆಡ್ ತೊಗೊಂಡು ಹೋಗು" ಅನ್ನಬೇಕೆ ? ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ.
ಅಮೇರಿಕೆಯಲ್ಲಿ ಹತ್ತಿಪ್ಪತ್ತು ನಿಮಿಷಗಳಲ್ಲಿ ಮನೆಯಿಂದ ಆಫೀಸಿಗೆ ಹೋಗಲು ಸಾಧ್ಯವಿತ್ತು. ಇಲ್ಲಿ ಒಂದು ಘಂಟೆಯೊಳಗೆ ಸೇರಿದರೆ ಪುಣ್ಯ. ನನ್ನ ಮನೆಯ ಸ್ಥಾನವೂ ಕಛೇರಿಯ ಸ್ಥಾನವೂ ಹೇಳಿ ಮಾಡಿಸಿದ ಹಾಗಿವೆ. ನಗರದ ಮಧ್ಯದಲ್ಲಿ ಹಾದು ಹೋಗಬೇಕು. ಕಾರಿನಲ್ಲಿ ಅಷ್ಟು ಹೊತ್ತು ಕೂತಿರುವುದು ಬಹಳ ಕಷ್ಟ. ನಾನೂ ಪ್ರಯತ್ನ ಪಟ್ಟೆ - ಪುಸ್ತಕ ಓದೋಣ - ಸಂಗೀತ ಕೇಳೋಣ ಎಂದೆಲ್ಲ. ಪುಸ್ತಕಗಳು ಮುಗಿದವು - ಕ್ಯಾಸೆಟ್ಗಳು ಮುಗಿದವು. ಆದರೆ ಜನ ಮತ್ತು ವಾಹನಸಮ್ಮರ್ದ ಕಡಿಮೆ ಆಗಿಯೇ ಇಲ್ಲ.
ಬರೇ ಸಮ್ಮರ್ದದ ಸಮಸ್ಯೆ ಮಾತ್ರವಲ್ಲ. ರಸ್ತೆಗಳ ಗುಣಮಟ್ಟವನ್ನೂ ಗಮನಿಸಬೇಕು. ನೀವು ಬೆಂಗಳೂರಿನಲ್ಲಿ ಈಚೆಗೆ ಓಡಾಡಿದ್ದರೆ ತಿಳಿಯುತ್ತದೆ - ಅದನ್ನು ಗಮನಿಸುವುದೇನೂ ಬೇಡ - ಹಾಗೇ ತಿಳಿಯುತ್ತದೆ ಎಂದು. ಬೀದಿಗಳೆಲ್ಲದರ ಮಧ್ಯದಲ್ಲಿ ಅಗೆದುಬಿಟ್ಟಿದ್ದಾರೆ. ಯಾರು ? ನೀರಿನವರು, ಕರೆಂಟಿನವರು, ಫೋನಿನವರು, ಸುಮ್ಮನೆ ಬೇರೆ ಕೆಲಸವಿಲ್ಲದವರು - ಇನ್ನೂ ಮುಂತಾದವರು. ಬೆಂಗಳೂರಿನಲ್ಲಿ ಜನರಿಗೇನಾದರೂ ಕೊರತೆಯೇ ? ಇದರಿಂದ ಒಳ್ಳೆಯ ವೇಗದಲ್ಲಿ ವಾಹನಗಳು ಚಲಿಸಲು ಸಾಧ್ಯವಿಲ್ಲ.
ಇದರ ಜೊತೆಗೆ - ಸ್ಥಗಿತಗೊಂಡಿರುವ ಫ್ಲಯ್-ಓವರ್ ನಿರ್ಮಾಣ. ಕೃಷ್ಣನ ಸರಕಾರದ ನಿರ್ಗಮನದ ನಂತರ ಕೆಲಸವೂ ನಿಂತಿದೆ. ಇದರಿಂದ ಚೆನ್ನಾಗಿದ್ದ ರಸ್ತೆಗಳನ್ನು ಸುಮ್ಮನೆ ಹಾಳುಮಾಡಿ ಹೆಚ್ಚು-ಹೆಚ್ಚು ತೊಂದರೆ ಮಾಡುತ್ತಿದ್ದಾರೆ. ಇದನ್ನು ಯಾರಿಗೆ ಹೇಳಬಹುದು ಎಂದು ನೋಡುತ್ತಾ ಇದ್ದೇನೆ. ಹೇಳಿದರೆ ಏನಾದರೂ ಆಗುವುದೆಂಬ ಅಂಧವಿಶ್ವಾಸವೇನೂ ಇಲ್ಲ. ಆದರೂ ಏನೂ ಮಾಡದೆ ಇರುವುದು ಹೇಗೆ?
ಇದರೊಂದಿಗೆ - ಅಸಂಖ್ಯಾತ ದ್ವಿಚಕ್ರಿಕೆಗಳು. ಅವೆಷ್ಟು ಹೆಚ್ಚ್ಗಿವೆ ಎಂದರೆ ಅಬ್ಬಬ್ಬಾ! ಸ್ವಲ್ಪವೂ ನೀತಿ-ನಿಯಮವಿಲ್ಲದೆ ಎಲ್ಲೆಲ್ಲಿಯೋ ಗಾಡಿ ನುಗ್ಗಿಸುತ್ತಾರೆ. ಪೋಲಿಸರು ಪಾಪ - ಆ ಹೊಗೆಯನ್ನೇ ಉಸಿರಾಡಿ - ವಾಹನ ನಿಯಂತ್ರಣ ಮಾಡುವ ಯತ್ನ ಮಾಡುತ್ತಾರೆ. ಆದರೆ ಹೇಳಿದೆನಲ್ಲಾ - "ಅಯ್ಯೋ ಪಾಪ!" - ಎಂದು... ಯತ್ನದಲ್ಲಿ ಸಫಲರಾಗುವುದಿಲ್ಲ.
ಎಷ್ಟು ಹದೆಗೆಟ್ಟಿದೆಯೆಂದರೆ - ಮೊನ್ನೆ ಶನಿವಾರದ ರಾತ್ರಿ ಹನ್ನೊಂದು ಘಂಟೆಯಲ್ಲಿ - ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಅರ್ಧ ಘಂಟೆ ಟ್ರಾಫಿಕ್ ಜಾಂ. ಹೌದು ಸ್ವಾಮಿ - ರಾತ್ರಿ ಹತ್ತಲ್ಲ - ಹನ್ನೊಂದು ಘಂಟೆಗೆ - ಅದೂ ಶನಿವಾರ ರಾತ್ರಿ. ಹಬ್ಬವೂ ಇಲ್ಲ ಏನೂ ಇಲ್ಲ. ಸುಮ್ಮನೆ ಇರಲಿ ಎಂದು ಜಾಮ್. ನನಗೆ ಖೇದಾಶ್ಚರ್ಯಗಳು ಒಮ್ಮೆಲೆ ಆದವು.
ಇದರ ಬಗ್ಗೆ ಯಾರಲ್ಲಾದರೂ ದೂರು ಸಲ್ಲಿಸಬೇಕು. ಬೇಗಬೇಗ ಈ ಅಗೆತಗಳನ್ನು ನಿಲ್ಲಿಸಿ ಕಲಸ ಮುಗಿಸಿದರೆ ಒಳಿತಾದೀತು. ಇದರ ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ ಮಾಡುತ್ತಾರಂತೆ. ಇನ್ನೂ ಐದು ವರ್ಷಗಳ ನಂತರ ಇದರ ಆರಂಭ. ಇದು ಮುಗಿಯಲು ಹತ್ತು ವರ್ಷಗಳೇ ಹಿಡಿದಾವು. ಆದರೂ ಅಷ್ಟು ದಿನ ಕಾಯಲು ನಾನು ಸಿದ್ಧ. ಎಂದು ಬೆಂಗಳೂರಿನಲ್ಲಿ ಬೇರೆ ವಾಹನವಿಲ್ಲದೆ ಸಾರ್ವಜನಿಕ ವಾಹನಗಳಲ್ಲಿ ಆರಾಮವಾಗಿ ಸಂಚಾರ ಮಾಡುವೆನೋ ಎಂಬ ಮಹದಾಸೆ ನನ್ನ ಮನದಲ್ಲಿದೆ. ನೋಡೋಣ - ನೋಡುವ ಭಾಗ್ಯವಿದ್ದರೆ!
ಒಂದು ಮಾತನ್ನು ಇಲ್ಲಿ ಹೇಳಲೇಬೇಕು - BMTC ವಾಹನಗಳು ಚೆನ್ನಾಗಿ ಓಡುತ್ತಿವೆ. ಮುಂಚಿನ ಹಾಗಿನ BTS - ಬಿಟ್ಟರೆ ತಿರುಗ ಸಿಗೋಲ್ಲ - ಎಂಬ ಕಥೆ ಈಗ ನಡೆಯಲ್ಲ. ಕಾರಿನಲ್ಲಿ ಓಡಾಡುವುದಕ್ಕಿಂತ ಈಗ ಬಸ್ಸು ಲೇಸಾಗಿ ಕಾಣತೊಡಗಿದೆ. ಆದರೆ ಹೆಚ್ಚು ಕಾಲ ಪ್ರಯಾಣ ಮಾಡಬೇಕು. ನನ್ನ lifestyle ಅನ್ನೇ ಬದಲಾಯಿಸಿಕೊಳ್ಳಬೇಕು - ಈಗಿನ ಬೆಂಗಳೂರಿನಲ್ಲಿ ಸುಖವಾಗಿರಬೇಕೆಂದರೆ.
|| ಶುಭಂ ಭೂಯಾತ್ ||
No comments:
Post a Comment