Law bows its head, you bow your head to the Law
ಈ ಬ್ಲಾಗ್ ಕೂಡ ಸ್ವಾಮಿಗಳ ಸೆರೆಯ ಬಗ್ಗೆಯೇ. ಒಂದು ಬಾರಿ ಸುಮ್ಮನೆ ಹಾಗೇ ಓದಿದರೆ ಹಿಂದುವಾದ ನನ್ನಲ್ಲಿ ಕೋಪೋದ್ರೇಕಗಳು ಕಾಣಿಸಿಕೊಂಡವು. ಏಕೆ ಹೀಗಾಗುತ್ತದೆ ನಮ್ಮ ದೇಶದಲ್ಲಿ ಎಂಬ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತಿದೆ.
ಕ್ಷುದ್ರ ರಾಜಕಾರಣದಲ್ಲಿ ಸ್ವಾಮಿಗಳಂಥ ಪ್ರತಿಷ್ಠಿತ ಆದರೆ ಶಕ್ತಿಯಿಲ್ಲದ ವ್ಯಕ್ತಿಗಳು ಹೇಗೆ ಆಟದ ವಸ್ತುವಾಗಿದ್ದಾರೆ ಎಂದು ಯೋಚಿಸಿದಾಗ ಮನಸ್ಸು ಖಿನ್ನವಾಗುತ್ತದೆ. ಈ ಲೇಖನದಲ್ಲಿ "ಬಹುಸಂಖ್ಯಾತರ ಗುರುಗಳನ್ನೇ ಹೀಗೆ ಸೆರೆಯಿಡಲು ಸಾಧ್ಯವಿರುವುದು ಭಾರತದಲ್ಲೇ" ಎಂದು ಬರೆದಿದ್ದಾರೆ. ಈ ವಿಷಯ ಮೇಲ್ನೋಟಕ್ಕೆ ಸರಿಯಾಗಿ ಕಂಡರೂ ಸ್ವಲ್ಪ ವಿಶ್ಲೇಷಣೆಯನ್ನು ಅಪೇಕ್ಷಿಸುತ್ತದೆ. ಹಿಂದೂ ಧರ್ಮವು ಕ್ರೈಸ್ತ/ಇಸ್ಲಾಂ/ಯಹೂದ್ಯ ಪಂಗಡಗಳ ಹಾಗೆ ಒಂದಲ್ಲ. ಹೌದು,ಈ ಮತಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಕ್ರೈಸ್ತರ ಬೈಬಲ್, ಕ್ರಿಸ್ತ ಮತ್ತು ಆಚರಣೆಗಳು ಬಹಳಷ್ಟು ಒಂದು ರೀತಿಯವೇ ಆಗಿವೆ.
ಹಿಂದೂ ಧರ್ಮದಲ್ಲಿ ಹಾಗಿಲ್ಲ. ಸಹಸ್ರಾರು ಜಾತಿಗಳನ್ನೊಳಗೊಂಡ ನಮ್ಮ ಧರ್ಮದಲ್ಲಿ ಎಲ್ಲಿಯೂ ಐಕ್ಯ ಕಾಣುವುದಿಲ್ಲ. ಆಯಾ ಜಾತಿಗೆ ಅದರದೇ ಆದ ನಿಯಮನಿಷ್ಠೆಗಳಿವೆ ನಂಬಿಕೆಗಳಿವೆ. ಆದರೂ ಅದೇನೋ ಸೂಕ್ಷ್ಮ ತಂತು ಎಲ್ಲರನ್ನೂ ಹಿಡಿದಂತಿದೆ. ಈ ತಂತು ಯಾವಾಗ ಹರಿದು ಹೋಗುತ್ತದೆಯೋ ತಿಳಿಯದು. ಆದರೆ ಶಿಥಿಲವಾಗಿಯಂತೂ ಇದೆ.
ಉದಾಹರಣೆಗೆ - ವೀರಶೈವರು ಶಿವನ ಭಕ್ತರಾಗಿಯೂ ಸಹ ತಾವು ಹಿಂದುಗಳಲ್ಲವೆಂದೇ ಈ ನಡುವೆ ಗುರುತಿಸಕೊಳ್ಳತೊಡಗಿದ್ದಾರೆ. ಇದು ಕೇವೆಲ ಮತಶಕ್ತಿಗೋಸ್ಕರ ಎಂದು ನನ್ನ ಈಗಿನ ತಿಳಿವಳಿಕೆ. ಏಕೆಂದರೆ ಅದೇ ಶಿವನ ಕಲ್ಪನೆ, ಅವೇ ಮಂತ್ರಗಳು, ಅದೇ ವಿಭೂತಿ - ಹಿಂದುಗಳ ಶಿವನನ್ನು ಮತ್ತು ಲಿಂಗವಂತರ ಶಿವನನ್ನೂ ಸೇರಿಸಿವೆ. ವ್ಯತ್ಸಾಸಗಳಿವೆ - ಆದರೆ ಇಷ್ಟು ಸಮೀಪದ ಕಲ್ಪನೆಯಿದ್ದು ಬೇರೆ ಮತವೆಂದು ಹೇಳಿಕೊಳ್ಳಬೇಕು ಎಂದರೆ ಬಲವಾದ ಕಾರಣಗಳೇ ಇರಬೇಕು.
ಜೊತೆಗೆ - ಮೂರ್ನಾಲ್ಕು ವರ್ಷಗಳ ಕೆಳಗೆ ರಾಮಕೃಷ್ಣಾಶ್ರಮವು ಕೋರ್ಟಿಗೆ ಮೊರೆ ಹೋಗಿತ್ತು. ನಾವು ಹಿಂದುಗಳಲ್ಲದ ಅಲ್ಪಸಂಖ್ಯಾತರು - ಆದ್ದರಿಂದ ನ್ಯಾಯಾಲಯವು ಅಲ್ಪಸಂಖ್ಯಾತರಿಗೆ ವಿದ್ಯಾಸಂಸ್ಥೆಗಳನ್ನು ನಡೆಸಲು ಕೊಟ್ಟಿರುವ ಸೌಲಭ್ಯಗಳನ್ನು ತನಗೂ ನೀಡಬೇಕೆಂದು ಅದರ ಆಶಯವಾಗಿತ್ತು. ಹಿಂದುಗಳ ಕುರಿತು ಅಪಾರ ಕಳಕಳಿಯನ್ನು ಹೊಂದಿದ್ದ ಇಂದಿಗೂ ಹಿಂದುಗಳಿಗೆ ಆದರ್ಶವಾಗಿರುವ ವಿವೇಕಾನಂದರು ಆರಂಭಿಸಿದ ಸಂಸ್ಥೆಯ ಗತಿಯೇ ಹೀಗಾದರೆ ಸಣ್ನ-ಪುಟ್ಟ ಪಂಗಡಗಳೇನು ಮಾಡಬೇಕು? ನ್ಯಾಯಾಲಯ ಇದನ್ನು ತಳ್ಳಿ ಹಾಕಿತು. ಆದರೆ ಈ ಸಂಗತಿ ನಮ್ಮ ಧರ್ಮದ ಅವಸ್ಥೆ ಹೇಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.
ಈಗ ಆಗಿರಿವುದೇ ಅದು - ಒಂದೊಂದು ಜಾತಿ-ಜನಾಂಗಕ್ಕೂ ಒಂದು ಮಠ- ಒಂದು ಪೀಠ - ಒಬ್ಬ ಸ್ವಾಮಿ. ಜೊತೆಗೆ ಅದೇ ಗಲಾಟೆ. ಹಿಂದು ಯಾರು ? ವೇದಗಳನ್ನು ನಂಬುವವರೇ ? ಆದರೆ ಶೂದ್ರರಿಗೆ, ದಲಿತರಿಗೆ ವೇದಾಧಿಕಾರ ಇರುವುದಿಲ್ಲ. ಪುರಾಣಗಳನ್ನು ನಂಬುವವರೇ ? ಹದಿನೆಂಟು ಪುರಾಣಗಳಲ್ಲಿ ಹತ್ತು ಶಿವಪರ ಎಂಟು ವಿಷ್ಣುಪರ. ಶೈವರನ್ನು ಕಂಡರೆ ವೈಷ್ಣವರು ಉರಿದು ಬೀಳುತ್ತಾರೆ. ವೈಷ್ಣವರನ್ನು ಕಂಡರೆ ಶೈವರೂ ಕೂಡ. ಇದರ ಬಗ್ಗೆ ಯುದ್ಧಗಳೇ ನಡೆದಿವೆ. ನಾನೇನನ್ನು ಹೇಳಲು ಹೊರಟೆಯೆಂದರೆ - ಬಹುಸಂಖ್ಯಾತರು ನಾವು ಎಂದು ಕಾಗದದ ಮೇಲೆ ಹೇಳಿಕೊಂಡರೂ ವಾಸ್ತವವಾಗಿ ನಾವು ಹಲವು ಅಲ್ಪಸಂಖ್ಯಾತ ಮತಗಳ ಸಮೂಹವಾಗಿದ್ದೇವೆ. ಆದರೂ ಸಹ ಒಂದು ನಂಟು ನಮ್ಮೆಲ್ಲರನ್ನೂ ಒಟ್ಟುಗೂಡಿಸಿದೆ. ಅದೇನು ಎಂದು ನಿಖರವಾಗಿ ಹೇಳಲು ಕಷ್ಟ. ಮಾಡಿದ್ದುಣ್ಣೋ ಮಹರಾಯ ಎಂಬ ಕರ್ಮಸಿದ್ಧಾಂತವೇ ? ಜನ್ಮಾಂತರಗಳಲ್ಲಿ ನಂಬಿಕೆಯೇ ? ಬದುಕಿನ ಬಗೆಗಿನ ದೃಷ್ಟಿಯೇ ? ಆ ದೃಷ್ಟಿಯಲ್ಲಿ ಏನು ಎಲ್ಲಾ "ಹಿಂದು"ಗಳಲ್ಲಿ ಸಮಾನವಾಗಿರುವುದು ? ಯಾರಾದರೂ ತಿಳಿದವರು ಎಲ್ಲವನ್ನೂ ಎಲ್ಲರನ್ನೂ ಒಂದು ಸಾಮಾನ್ಯ-ಧರ್ಮದ ಕಟ್ಟಿನಲ್ಲಿ ಕಟ್ಟಬೇಕು. ನನಗೆ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲದಿದ್ದರೂ ನಾವು ಹಿಂದುಗಳು ಎಂಬುದರಲ್ಲಿ ವಿಶ್ವಾಸವಿದೆ.
ಆದರೆ ಈ ಬಂಧಿಸುವ ಕಟ್ಟು ಹೇಗಿರಬೇಕು ? ಈ ಕಟ್ಟು ಮಾನಸಿಕರೂಪದ್ದಾಗಿರಬೇಕು. ಆರ್.ಎಸ್.ಎಸ್, ವಿ.ಎಚ್.ಪಿ ಮುಂತಾದ ಸಂಸ್ಥೆಗಳಿವೆ. ಆದರೆ ಇವುಗಳಿಗೆ ಇವುಗಳದೇ ಆದ ತೊಂದರೆಗಳಿವೆ. ಇದರ ಜೊತೆಗೆ ಮಾರ್ಕ್ಸ್-ವಾದಿ ಕಮ್ಯೂನಿಸ್ಟರು, ಭಾರತವನ್ನು ಒಡೆಯಲು ನಿರ್ಧರಿಸಿರುವ ಮುಲ್ಲಾಗಳು ಮತ್ತು ಉಗ್ರಗಾಮಿಗಳು, ಪಾಶ್ಚಾತ್ಯ ಪ್ರಪಂಚದಿಂದ ಹೇರಳ ಧನ ಸಂಗ್ರಹ ಮಾಡಿ ಮತಾಂತರಿಸುವ ಕ್ರೈಸ್ತರು. ಜೊತೆಗೆ ದ್ರಾವಿಡ ಪಂಗಡವನ್ನು ಬೆಂಬಲಿಸುತ್ತಿದ್ದೇವೆ ಎಂದು ನಂಬಿದ ದಿಕ್ಕುತಪ್ಪಿದ ಮೂರ್ಖರು. ಇವೆಲ್ಲ ತೊಂದರೆಗಳು ಒಟ್ಟಿಗೆ ನಮ್ಮ ಧರ್ಮವನ್ನು ಮೆಟ್ಟಿಕೊಂಡಿವೆ.
ಆದ್ದರಿಂದ ಕಂಚಿ-ಸ್ವಾಮಿಗಳು ಇಡೀ ಹಿಂದು ಮತವನ್ನು ಬೆಂಬಲಿಸುತ್ತಾರೆ ಎಂದು ಮೇಲಿನ ಮಾತಿಗೆ ಸರಿತೋರಿದರೂ - ಇವರು ಕೇವಲ ಒಂದು ಪಂಗಡ ತಮಿಳು ಸ್ಮಾರ್ತ ಬ್ರಾಹ್ಮಣರನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದು ವಾಸ್ತವವಾದ ಸಂಗತಿ. ಇದನ್ನು ಏಕೆ ಹೇಳಿದೆಯೆಂದರೆ - ಶೃಂಗೇರಿ ಮಠದವರು ಕಂಚಿಯ ಮಠವನ್ನು ಶಂಕರಾಚಾರ್ಯ-ಸ್ಥಾಪಿತವೆಂಬುದಾಗಿ ನಂಬುವುದಿಲ್ಲ. ಹೀಗೆ ದಾಕ್ಷಿಣಾತ್ಯ ಸ್ಮಾರ್ತ ಬ್ರಾಹ್ಮಣರಲ್ಲಿಯೇ ಇದರ ವಿಚಾರವಾಗಿ ಒಮ್ಮತವಿಲ್ಲ. ಹಿಂದೂ ಧರ್ಮಕ್ಕೆ ಪೋಪ್-ಇದ್ದ ಹಾಗೆ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ನೋಡಿ ಪರಿಸ್ಥಿತಿ ಹೇಗಿದೆ!
ಇಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಹಿಂದೂ-ಧರ್ಮವು (ಇದು ನಿಶ್ಚಯವಾಗಿಯೂ ಇದೆ ಎಂದು ನನ್ನ ನಂಬಿಕೆ) ಹೇಗೆ ಮುಂದೆ ಉಳಿಯುವುದೋ ಎಂಬುದೇ ಚಿಂತೆಯಾಗಿದೆ. ಆ ಪರಮಾತ್ಮನೇ ಅವತರಿಸಬೇಕು.
|| ಶುಭಂ ಭೂಯಾತ್ ||
No comments:
Post a Comment