ನಿನ್ನೆ ರಾತ್ರಿ ನಮ್ಮ ಊಟವಾಗಲು ಸ್ವಲ್ಪ ತಡವಾಗಿತ್ತು. ಆಗ ದೂರವಾಣಿ ಕರೆಯೊಂದು ಬಂದಿತು. ನನ್ನ ಚಿಕ್ಕಮ್ಮನ ಮಗಳದಾಗಿತ್ತು. ಊಟವಾಯ್ತೆ ಎಂದು ವಿಚಾರಿಸಿದಳು. ಇವಳೇನು ಈಗ ಕರೆ ನೀಡಿರುವಳಲ್ಲಾ ಎಂದು ಯೋಚಿಸಿದೆ. ನಮ್ಮಮ್ಮನೊಡನೆ ಮಾತಾಡಬೇಕಾಗಿ ಕೇಳಿದಳು. ನಮ್ಮಮ್ಮ ಫೋನೆತ್ತಿಕೊಂಡರು. ನಾನು ಇನ್ನೂ ಮತ್ತೊಂದು ಫೋನನ್ನು ಕೆಳಗಿಟ್ಟಿರಲಿಲ್ಲ. ಆಗ ಬಂತು ನೋಡಿ ಸಮಾಚಾರ. "ತಿರುಪತಿಯ ದೇವರ ಮುಂದಿನ ನಂದಾದೀಪ ಈಚೆಗೆ ಶಾಂತವಾಗಿತ್ತಂತೆ. ಜೊತೆಗೆ ಕಾಳಹಸ್ತಿಯ ಗುಡಿಯೊಳಗೆ ನಾಯಿ ನುಗ್ಗಿತ್ತಂತೆ. ಉಲ್ಕೆಗಳು ಕಾಣಿಸಿಕೊಂಡವಂತೆ". ಇವೆಲ್ಲವೂ ಆಪತ್ತಿನ ಸಂಕೇತ. ವಿಶೇಷವಾಗಿ ಒಬ್ಬನೇ ಗಂಡು ಮಗನಿರುವ ಮನೆಗೆ ಕಷ್ಟ. ಇದನ್ನು ನಿವಾರಿಸಲು ಮನೆಯ ಹೊಸಿಲ ಮುಂದೆ ದೀಪವೆರಡನ್ನುರಿಸಿ ಮೇಲೆ ಕರ್ಪೂರವನ್ನಿಡಬೇಕು ಎಂದೆಲ್ಲಾ ವಿಧಿ ಹೇಳಿದಳು.
ನನಗೆ ಒಂದು ಮುವ್ವತ್ತು ಸೆಕೆಂಡ್ ದಿಗ್ಭ್ರಮೆಯಾಯ್ತು. ಕಾರಣ ನಾನು ನಮ್ಮ ಮನೆಯ ಒಬ್ಬನೇ ಮಗ. ಇದರ ಜೊತೆಗೆ ಮೊನ್ನೆ ತಾನೆ ಸುನಾಮಿ ಸಂಭವಿಸಿ ಅಪಾರ ಹಾನಿಯಾಗಿತ್ತಲ್ಲ. ಇವೆರಡು ಯೋಚನೆ ಮನಸ್ಸಿಗೆ ಬಂದಿತ್ತು. ಅಷ್ಟೆ. ನಂತರ ಸ್ವಲ್ಪ ಕೋಪವೇ ಬಂದಿತು - ನಮ್ಮ ಚಿಕ್ಕಮ್ಮನ ಮಗಳ ಮೇಲೆ. ಈ ಅವೇಳೆಯಲ್ಲಿ ಇವಳ ರಾದ್ಧಾಂತ ಬೇರೆಯೆಂದು. ಜೊತೆಗೆ ಇವೆಲ್ಲ ಮೂಢನಂಬಿಕೆಯೆಂದು ಒಮ್ಮೆಲೇ ಮನದಟ್ಟಯ್ತು. ಅಲ್ಲ, ದೇಗುಲದಲ್ಲಿ ದೀಪವಾರುವುದಕ್ಕೂ ಒಬ್ಬನೇ ಗಂಡು ಮಗನಿರುವ ಮನೆಗಳಿಗೂ ಏನು ಸಂಬಂಧ ? ಇದಕ್ಕೆ ಯಾಕೆ ನಮ್ಮಲ್ಲಿ ಹೆದರಿಕೆ ? ನಾನು ನಮ್ಮ ತಾಯಿಗೆ ಹೇಳಿದೆ "ಬೇಡಮ್ಮ ಈ ದೀಪವನ್ನೇನು ಹಚ್ಚಬೇಡಿ" ಎಂದು. ಆದರೆ ಅವರ ಚಿಂತೆ ಅವರಿಗೆ. ಹಚ್ಚಿದರು.
ಈ ಮಾತನ್ನೇಕೆ ಹೇಳಿದೆನೆಂದರೆ - ನಮ್ಮಲ್ಲಿ ಜನರಿಗೆ ಮಾಡಲು ಬೇರೆ ಕೆಲಸವಿಲ್ಲ - ಎಂಬ ಮಾತನ್ನು ಹೇಳಲು. ಅಲ್ಲ, ಅಸಂಖ್ಯಾತ ಜನರು ಹಸಿದು ಬೀದಿಯಲ್ಲಿರುವಾಗ - ಲಕ್ಷಾಂತರ ಜನರು ಮನೆಮಠಗಲನ್ನು ಕಳೆದುಕೊಂಡಿರುವಾಗ - ಅಲ್ಲಿ ಕೆಲಸ ಮಾಡುವುದು ಸರಿ. ಇಂಥ ಕಿಂವದಂತಿಗಳನ್ನು ಅಷ್ಟು ಸಂತೋಷದಿಂದ ಹಬ್ಬಿಸುತ್ತಾರಲ್ಲಾ ! ಸುನಾಮಿಯ ಭಯದಿಂದ ಚೇತರಿಸಿಕೊಳ್ಳುತ್ತಿರಬೇಕಾದರೆ ಇದೇನು ಈ ಬೇಜವಾಬ್ದಾರಿ ವರ್ತನೆ ? ಇವರ ಮನಸ್ಸು ಎಂಥ ವಿಕೃತದ್ದಾಗಿರಬೇಕು? ನನಗಂತೂ ಇಂಥ ಕಿಂವದಂತಿಗಳನ್ನು ಹಬ್ಬಿಸುವವರ ಹುಟ್ಟಡಗಿಸಬೇಕೆನ್ನುವಷ್ಟು ಕೋಪ ಬಂದಿತು.
ಸರಿ ತಿಳಿಯದವರಂತೂ ತಿಳಿಸಿದರು. ಆದರೆ ತಿಳಿದುಕೊಂಡಿರುವ ನಾವು ಈ ರೀತಿಯೆ ಗಾಳಿಮಾತಿಗೆ ಸೊಪ್ಪು ಹಾಕಬಹುದೇ ? Educated ಜನ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತೇವೆ. ನಮ್ಮ ತಾಯಿ ಹಾಗೆ ಮಾಡಿದ್ದಿರಲಿ, ನನಗೂ ಮುವ್ವತ್ತು ಸೆಕೆಂಡುಗಳಷ್ಟು ಅಚಾತುರ್ಯ ಬಂದಿತ್ತು. ನನಗೆ ನನ್ನ ಮೇಲೆಯೇ ಅಸಹ್ಯವಾಗುತ್ತಿದೆ. ಇಷ್ಟೂ ಧೈರ್ಯವಿಲ್ಲದಿದ್ದರೆ ಹೇಗೆ ?
ಒಂದು ದೃಷ್ಟಿಯಿಂದ ಈ ವದಂತಿಗಳು ಹರಡುವುದಕ್ಕೆ ನಾವೇ ಕಾರಣ. ನಮ್ಮಲ್ಲಿ ಪ್ರಾಣಭಯವಿದೆಯಲ್ಲ! ಅದೇನನ್ನೋ ಮಾಡಿದರೆ ಉಳಿಯುವೆವು ಎಂದರೆ ಅದನ್ನು ಮಾಡಿಬಿಡುತ್ತೇವೆ. ಇಂದಿನ ಪತ್ರಿಕೆಯಲ್ಲಿ ಇದೇ ವಿಚಾರ ಬರೆದಿದ್ದರು. ಕೂಗುಮಾರಿಯ ಹಾವಳಿ - ಅಜ್ಜಿ ಹಬ್ಬದ ಆಚರಣೆ - ಧರ್ಮಸ್ಥಳದಲ್ಲಿ ಸರ್ಪ ಮನುಷ್ಯನಾದ ಸಂಗತಿ - ಇವೆಲ್ಲ ಸರ್ವೇ ಸಾಧಾರಣ. ಅದೂ ತಿರುಪತಿಯ ದೇವಾಲಯದಲ್ಲಿ ದೀಪವೂ ನಂದಿರಲಿಲ್ಲವಂತೆ. ಸರಿ ದೀಪ ಸ್ವಲ್ಪ ಶಾಂತವಾದರೂ ಏನು? ನಮ್ಮಲ್ಲಲ್ಲವೇ ದೈವವಿರುವುದು ? ಈ ತಿಳಿವಳಿಕೆಯಿದ್ದರೆ ಇಷ್ಟು ಪಾಡು ಪಡುವ ಅವಶ್ಯಕತೆ ಎಲ್ಲಿತ್ತು ? ಯೋಚನಾಶಕ್ತಿ ರೂಢಿಸಿಕೊಳ್ಳಬೇಕು. ಎಲ್ಲವನ್ನೂ ಪ್ರಶ್ನಿಸಬೇಕು. ಒಮ್ಮೆ ಇದನ್ನು ನೋಡುತ್ತಿದ್ದರೆ - ಧೈರ್ಯವಾಗಿ ನಾಸ್ತಿಕಾರದವರೇ ವಾಸಿ ಎನ್ನಿಸಿತು.
ಹೊಸವರ್ಷದ ಕೆಲಸದ ಮೊದಲ ದಿನದಂದು ಒಳ್ಳೆಯ ಪಾಠವಾಯಿತು, ಬಿಡಿ. ಇನ್ನೂ ಇಡೀ ಜೀವಮಾನ ಈ ಪಾಠವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
|| ಇತಿ ಶಮ್ ||
No comments:
Post a Comment