Thursday, March 17, 2005

'I appreciate Rajkumar and his work'

'I appreciate Rajkumar and his work'

ಹೀಗೆ ಸೂರ್ಯನಾರಾಯಣ ಶರ್ಮಾ ಎಂಬುವರರೊಬ್ಬರು thatskannada ಪತ್ರಿಕೆಗೆ ಒಂದು ಖಾರವಾದ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ - ಸತ್ಯುರವರನ್ನು ಬೆಂಬಲಿಸುವುದು ರಾಜಕುಮಾರನ್ನು ತೆಗಳುವುದು.

ಮೊದಲಿಗೆ ಸತ್ಯುರವರ ಪ್ರತಿಕ್ರಿಯೆಯನ್ನೋದಿ ಅನುಮೋದಿಸಿದ್ದೆ. ಆದರೆ ಚಿತ್ರರಂಗದ ಜನರೊಡನೆ ಮಾತಾಡಿದ ಮೇಲೆ ಸ್ವಲ್ಪ ವಿಚಾರ ಬದಲಾಗಿದೆ. ಹೌದು ಚಿತ್ರರಂಗ ಕುಶಲಕರ್ಮ, ಕೃಷಿ ಅಥವಾ ಸಾಹಿತ್ಯದಷ್ಟು ಮುಖ್ಯವಲ್ಲ. ಆದರೂ ಇಂದಿನ ಪ್ರಪಂಚದಲ್ಲಿ ಚಿತ್ರರಂಗಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಇವರು ಯಾರೋ ಚಿತ್ರವನ್ನು ನೋಡದೆ ಇದ್ದರೆ ಚಿತ್ರರಂಗವನ್ನು ಬೈಯುವುದು ಅಷ್ಟು ತರವಲ್ಲ. ಅದೂ ಇವರ ಆ ಲೇವಡಿ ಮಾಡುವ ಶೈಲಿ ನನಗೆ ಸ್ವಲ್ಪ ಕೋಪವನ್ನುಂಟು ಮಾಡಿದೆ. ಸತ್ಯುರವರು "ಬೆತ್ತಲೆಯವರ ರಾಜ್ಯದಲ್ಲಿ ಓಡಾಡುವ ಅಂಬರಧರ" ನ ಹಾಗೇನೂ ಇಲ್ಲ. ಬಹಳಷ್ಟು ಬೇರೆಯ ಜನ ಸಹಾ ಸತ್ಯು ಹೇಳಿದ್ದನ್ನೇ ಹೇಳಿದ್ದಾರೆ.

ಸತ್ಯು ತಿಳಿಯದೇ ಕನ್ನಡ ಚಿತ್ರರಂಗದ ಕಳಪೆ ಗುಣಮಟ್ಟಕ್ಕೆ ರಾಜಕುಮಾರನ್ನು ಹೆಸರಿಸಿದ್ದಾರೆ. ವಸ್ತುತಃ ಹಾಗಲ್ಲ. ರಾಜಕುಮಾರ್ ಒಳ್ಳೆಯ ನಟರಾಗಿ ಹಲವು ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಅವರ ತಾರಾವರ್ಚಸ್ಸಿನಿಂದ ಜನರ ಸಿನಿಮೀಯ ರುಚಿಯನ್ನು ಒಳ್ಳೆಯ ಕಡೆಗೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಚಿತ್ರರಂಗದ ಅಧಃ ಪತನ ಪ್ರಾರಂಭವಾಗಿದ್ದು ರಾಜಕುಮಾರ್ ಸಕ್ರಿಯವಾಗಿ ನಟಿಸದೇ ಇದ್ದಾಗ. ಕ್ರೇಜಿ ಸ್ಟಾರ್ ಅನಿಸಿಕೊಂಡ ರವಿಚಂದ್ರನ್ ಮಹಾ ಸದಭಿರುಚಿಯ ಚಿತ್ರ ನೀಡಿದ್ದಾರೋ ? ಸುಮ್ಮನೆ ರಾಜಕುಮಾರನ್ನು ಬೈದು ಪ್ರಯೋಜನವಿಲ್ಲ. "ತುಂಟಾಟ", ಮುಂತಾದ ಹಲವು ಪಡ್ಡೇ ಹುಡುಗರಿಗೆಂದೇ ಮಾಡಿದ ಚಿತ್ರಗಳು ಅಸಹ್ಯವಾಗಿವೆ ನಿಜ. ಆದರೆ ರಾಜಕುಮಾರ್ ಗು ಅವಕ್ಕೂ ಏನು ಸಂಬಂಧ ? ಪಾಪ - ಚಿಗುರಿದ ಕನಸು ಎಂಬ ಒಳ್ಳೆಯ ಚಿತ್ರವನ್ನು ಮಾಡಿ ರಾಜಕುಮಾರ್ ಕುಟುಂಬ ಕೈ ಸುಟ್ಟಿಕೊಂಡಿರುವುದು. ಒಂದು ಆಸೆ ಎಲ್ಲರಿಗೂ ಇರುತ್ತದೆ - ತಮ್ಮ ಮಕ್ಕಳು ಮುಂದೆ ಬರಲಿ ಎಂದು. ಅದರಿಂದ ರಾಜಕುಮಾರ್ ತನ್ನ ಮಕ್ಕಳಾದ ಶಿವಣ್ಣ , ಪುನೀತ್ ರನ್ನು ಚಿತ್ರರಂಗಕ್ಕೆ ಹಾಕಿದ್ದಾರೆ. ಇವರೇನೂ ಉನ್ನತ ಮಟ್ಟದ ನಟರೆಂದೇನೂ ಹೇಳುತ್ತಿಲ್ಲ. ಆದರೆ ಇವರ ಚಿತ್ರ ಬೇಡವೆಂದರೆ ಬೇಡ. ನೋಡುವುದನ್ನು ಬಿಟ್ಟರೆ ಒಳ್ಳೆಯ ಬುದ್ಧಿ ಇವರಿಗೇ ಬರುತ್ತದೆ.

ಇನ್ನೊಂದು ಸಂಗತಿ - ನನಗೆ ಹಿಡಿಸದಿರುವುದು - "ರಾಜಕುಮಾರ್ ಅಭಿಮಾನಿಗಳ ಸಂಘ" ದ ಹೆಸರಿನಲ್ಲಿ ನಡೆಯುವ ಗಲಾಟೆ-ಘರ್ಷಣೆಗಳು. ಆದರೆ ಇದಕ್ಕೂ ರಾಜಕುಮಾರ್ ಅವರಿಗೂ ಸಂಬಂಧವೇ ಇಲ್ಲವೆಂದು ಬಲ್ಲವರಿಂದ ತಿಳಿದಿದ್ದೇನೆ. ಸ್ವಾರ್ಥಪರರು ರಾಜಕುಮಾರ್ ಹೆಸರನ್ನುಪಯೋಗಿಸಿ ದುಡ್ಡು ಮಾಡಲು ಹವಣಿಸಿದ್ದಾರೆ. ಇದರಲ್ಲೂ ರಾಜಕುಮಾರ್ ತಪ್ಪಿಲ್ಲ.

ಜೊತೆಗೆ ಹೆಚ್ಚು ಕೋಪ ತರಿಸಿದ್ದು ವೀರಪ್ಪನ ಸೆರೆಯಲ್ಲಿ ರಾಜಕುಮಾರ್ ನಡೆವಳಿಕೆಯ ಬಗೆಗಿನ ಚುಚ್ಚು ಮಾತು. ಈ ಲೇಖಕ - "ಕರ್ನಾಟಕಕ್ಕೆ ಕೊಟ್ಟ ಕೊಡುಗೆ ವೀರಪ್ಪನ್ ಪ್ರಕರಣದಲ್ಲಿ ಬಹಿರಂಗಗೊಳ್ಳಲಿಲ್ಲವೇ ?" ಎಂದು ರಾಜಕುಮಾರನ್ನು ಲೇವಡಿ ಮಾಡಿದ್ದಾರೆ. ಇದು ಅವಿವೇಕವೇ ಸರಿ. ಅಲ್ಲ - ಇದೇ ಸೂರ್ಯನಾರಾಯಣ ಶರ್ಮರನ್ನು ವೀರಪ್ಪನ್ ಎಳೆದೊಯ್ದಿದ್ದರೆ ಏನಾಗುತ್ತಿತ್ತು ? ಧೈರ್ಯವಾಗಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದರೋ ? ರಾಜಕುಮಾರ್ ಒಬ್ಬ ನಟ. ಅವರನ್ನು ಕನ್ನಡದ ಕಣ್ಮಣಿ ಎಂದೆಲ್ಲ ಹೊಗಳಿದ್ದು ನಮ್ಮ ಮೂರ್ಖತನದ ಪರಮಾವಧಿ. ಚೆನ್ನಾಗಿ ಮಯೂರ ವರ್ಮನ ಪಾತ್ರವನ್ನು ಮಾಡಿದ ಮಾತ್ರಕ್ಕೆ ಮಯೂರನ ಹಾಗೆ - "ನಿನ್ನ ಶಿರವನ್ನು ಚೆಂಡಾಡಿಬಿಡುತ್ತೇನೆ " - ಎಂದು ವೀರಪ್ಪನ್ ಮುಂದೆ ಡೈಲಾಗ್ ಹೊಡೆದು fight ಮಾಡಲು ಸಾಧ್ಯವಾಗುವುದೇ ? ಸ್ವಲ್ಪ ವಿವೇಕಸಹಿತವಾಗಿ ಯೋಚನೆ ಮಾಡಿದ್ದೇ ಆದರೆ ನಮ್ಮ ಆ expectation ಏ ತಪ್ಪು ಎಂದು ಅರ್ಥವಾಗುತ್ತದೆ.

ಮುಖ್ಯವಾಗಿ ನಾವು ಮಾಡಬೇಕಾದ ಕೆಲಸ ಹೀಗಿದೆ. ನಟರನ್ನೂ ಕೇವಲ ಮನುಷ್ಯರೆಂದು ನೋಡುವುದು. ತೆರೆಯ ಮೇಲಿನ ವೈಭವ ಅಥವಾ ದಾರಿದ್ರ್ಯ ನಟರದ್ದಲ್ಲ. ಅವರ ಪಾತ್ರಗಳದು. ಒಳ್ಳೆಯ ನಟನೆ ಪ್ರಶಂಸಾರ್ಹ ಆದರೆ ಅದನ್ನು ಅಲ್ಲಿಗೇ ಬಿಟ್ಟರೆ ಎಲ್ಲರಿಗೂ ಒಳ್ಳೆಯದು. ಈ ಬುದ್ದಿ ಯಾವಾಗ ಎಲ್ಲರಿಗೂ ಬರುತ್ತದೋ !

No comments: