Tuesday, March 08, 2005

Responses to 'Nodalare Naa Kannada Chitra'

Kannada Responses to 'Nodalare Naa Kannada Chitra'

ನನ್ನ ಹಿಂದಿನ ಬ್ಲಾಗಿನ ಬಗ್ಗೆ ಸ್ವಲ್ಪ ಟಿಪ್ಪಣಿಸಬೇಕಾಗಿದೆ. ಕನ್ನಡದಲ್ಲಿ ಒಳ್ಲೆಯ ಚಿತ್ರಗಳ ಭಾಗ ಶೇಕಡ ಹತ್ತಕಿಂಥ ಹೆಚ್ಚಿದೆಯಂತೆ. ಬೇರೆ ಭಾಷೆಗಳ success rate ಕೂಡ ಇಷ್ಟೇ ಇದೆಯಂತೆ. ಅಂಕಿ ಅಂಶಗಳನ್ನು ಕೊಟ್ಟರೆ ಅವುಗಳನ್ನು ನಂಬಲೇಬೇಕು. ಇರಲಿ.

ನಿನ್ನೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರಾಗಿರುವ ಒಬ್ಬರೊಡನೆ ಸಂಭಾಷಣೆಯಾಯಿತು. ಅವರ ಪ್ರಕಾರ ರಾಜಕುಮಾರ್ ಕುಟುಂಬದ ಕನ್ನಡ ಚಿತ್ರರಂಗದ ಮೇಲಿನ ಹಿಡಿತ ಅಷ್ಟೊಂದು ಇಲ್ಲವಂತೆ. ಒಂದು ಸಂಗತಿಯನ್ನು ಸಹ ನನ್ನೊಡನೆ ಹಂಚಿಕೊಂಡರು. ರಣರಂಗ ಚಿತ್ರದ ಪ್ರದರ್ಶನದ ವೇಳೆಯಲ್ಲಿ - ಅದೇನೋ ಚೆನ್ನಾಗಿಲ್ಲದ ದೃಶ್ಯ ಸೇರಿಸಿದ್ದರಂತೆ. ರಾಜಕುಮಾರ್ ಇದನ್ನು ನೋಡಿ - "ಈ ರೀತಿಯ ದೃಶ್ಯಗಳನ್ನೆಲ್ಲ ಹಾಕಿ ದುಡ್ಡು ಮಾಡೋದು ನಮಗೆ ಬೇಡ" ಎನ್ನುವ ಅರ್ಥದಲ್ಲಿ ಹೇಳಿದರಂತೆ. ಆ ದೃಶ್ಯವನ್ನು ಕಿತ್ತು ಹಾಕಿದರಂತೆ. ಇದರಿಂದ ಪ್ರಭಾವಿ ನಿರ್ದೇಶಕರಾದ ಸೋಮಶೇಖರ್ (ಚಕ್ರವ್ಯೂಹ - ಮುಂತಾದ ಚಿತ್ರಗಳ ನಿರ್ದೇಶಕ) ರಾಜಕುಮಾರ್ ತಂಡದೊಂದಿಗೆ ಕೆಲಸ ಮಾಡುವುದು ಬಿಟ್ಟರಂತೆ. ಅಂಥ ಸದಭಿರುಚಿಯ ಒಳ್ಳೆಯ ಮನಸ್ಸಿನವರು ರಾಜಕುಮಾರ್.

ವೀರಪ್ಪನ್ ಜೊತೆ ನಡೆದ ವಿಷಯದ ಮಾತೆತ್ತಿದರೆ ನಾನು ಅವರನ್ನು ಕೇಳುತ್ತೇನೆ - 'ನೀವು ಅದೇ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂದು ನಿಮ್ಮೊಳಗೇ ಯೋಚಿಸಿರಿ. ಉತ್ತರ ಹೊಳೆಯುತ್ತದೆ'. ರಾಜಕುಮಾರ್ ಒಬ್ಬ ಮನುಷ್ಯರು, ೭೫ಕ್ಕೂ ಹೆಚ್ಚು ವಯಸ್ಸಿನ ಚಿತ್ರನಟರು. ಅವರೇನು ವೀರಪ್ಪನ ತಲೆ ಚೆಂಡಾಡಲು ರಣಧೀರ ಕಂಠೀರವ ಆಗಿರಲಿಲ್ಲ. ಅಥವಾ ಅವನ ಮನಸ್ಸನ್ನು ಬದಲಾಯಿಸುವ ಶಕ್ತಿಯಿರುವ ಭಕ್ತ ಕನಕದಾಸರೂ ಅಲ್ಲ. ಇವೆರಡೂ ಪಾತ್ರಗಳನ್ನು ಸಮರ್ಥವಾಗಿ ಜೀವಂತ ಮಾಡಿದ ಮಹಾನಟರು. ನಮ್ಮ ಜನ (ನಾನೂ ಸೇರಿದಂತೆ) ಬೇಗನೆ ಪ್ರೆಸ್ಸಿಗೆ ಮರುಳಾಗಿ ಬೇಗ ಒಂದು ರೀತಿ ಯೋಚಿಸಲು ತೊಡಗುತ್ತೇವೆ.

ಈ ಸಂಗತಿ ನನಗೆ ತಿಳಿಸಿದ್ದೇನೆಂದರೆ - ನಾವು ಒಮ್ಮೆಲೆ ಒಬ್ಬರ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ನಿರ್ಧಾರವನ್ನು ಮಾಡಬಾರದು. ಅಥವಾ ಒಬ್ಬರ ಒಳ್ಳೆಯತನವನ್ನೂ ಕೆಟ್ಟತನವನ್ನೂ ಅಳೆಯಲು ಬೇರೆಯವರಿಗೆ ಯೋಗ್ಯತೆಯಿಲ್ಲ. ಒಬ್ಬ ಕೆಟ್ಟವ ಅಥವಾ ಒಳ್ಳೆಯವ ಎಂದು ನಮಗೆ ಹೇಳಲು ಹೇಗೆ ಸಾಧ್ಯವಾದೀತು ? ಈ ವಿಷಯವನ್ನು ನಾನು ಚೆನ್ನಾಗಿ ರೂಢಿಸಿಕೊಳ್ಳಬೇಕು.

ಮಾಡಬಾರದೆಂದು ನಾನು ಹೇಳಿರುವ ಈ ತಪ್ಪನ್ನೇ ಎಂ. ಎಸ್. ನಟರಾಜ್ ಮಾಡಿರುವರೆಂದು ತೋರುತ್ತದೆ (ಮೇಲಿನ ಲಿಂಕ್ ನೋಡಿ). ಒಂದು ಕೆಟ್ಟ ಚಿತ್ರವನ್ನು ನೋಡಿದ ನಟರಾಜರು ಕನ್ನಡ ಚಿತ್ರರಂಗವನ್ನೇ ಬೈದು ಅನೇಕರ ಮನಸ್ಸನ್ನು ನೋಯಿಸಿರುವ ಹಾಗೆ ಕಾಣುತ್ತದೆ.

ಈ ಹಠಾತ್ತನೆ ನಿರ್ಧಾರಕ್ಕೆ ಬರುವುದು ಮನುಷ್ಯರ ಜಾಯಮಾನವೇ? (ನನ್ನ ಅನುಭವದಿಂದ ಹೌದೆಂದು ತೋರುತ್ತಿದೆ). ಎಷ್ಟೇ ಕಷ್ಟ ಪಟ್ಟರು ಒಂದು ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಗುಣಾವಗುಣಗಳ ಬಗ್ಗೆ ನಾವು ನಮಗೆ ತಿಳಿಯದ ಹಾಗೆಯೇ ತೀರ್ಮಾನ ಮಾಡಿಬಿಟ್ಟಿರುತ್ತೇವೆ. ಅನಂತರ ಅದೇ ವಿಷಯ ಅಥವಾ ವ್ಯಕ್ತಿಯನ್ನು ನಾವು ಇಷ್ಟ ಪಡುವುದಿಲ್ಲ. ಏಕೆಂದರೆ ನಾವೇ ಮೊದಲು ಮಾಡಿದ ತಪ್ಪು ತೀರ್ಮಾನ. ಇದನ್ನು ತಿದ್ದಲು ಬಹಳ ಕಷ್ಟ. ಆದರೂ ಯತ್ನಿಸಬೇಕು.

ಆದರೆ ಈ ರೀತಿ - "ಅಗುಳನ್ನು ನೋಡಿ ಅನ್ನ ಆಗಿದೆಯೋ ಇಲ್ಲವೋ ಎಂದು ನಿರ್ಧರಿಸಬಹುದು" ಎಂಬ ನೀತಿಯ ವಿರುದ್ಧವಾಗಿರುವ ಹಾಗೆ ತೋರುತ್ತದೆ. ಆದರೆ ಅನ್ನ ಮಾಡುವ ಸಮಯದಲ್ಲಿ ಎಲ್ಲ ಅಗುಳುಗಳನ್ನೂ ಸರಾಸರಿಯಾಗಿ ಅಳೆಯುತ್ತೇವೆ. ಒಂದು ವ್ಯಕ್ತಿತ್ವದ ಒಳಗೆ ನಮಗೆ ನೋಡಲು ಅನ್ನದ ಪಾತ್ರೆಯೊಳಗೆ ಕೈ ಹಾಕುವ ಹಾಗೆ ಹಾಕಲು ಸಾಧ್ಯವಾಗುವುದಿಲ್ಲ. ಜೊತೆಗೆ ಒಂದು ಅನ್ನದ ಪಾತ್ರೆ ನೋಡಿದರೆ ಸಾಕು - ಅದು ಭೌತಿಕವಾದ ಕ್ರಿಯಯಾದ್ದರಿಂದ - ಪ್ರತಿಯೊಂದು ಸಲವೂ ಸರಾಸರಿ ಹಾಗೆಯೇ ಆಗಬಹುದು. ಆದರೆ ವ್ಯಕ್ತಿಯೊಬ್ಬನ ಮನದೊಳಗೆ ಆ ರೀತಿ ಹೊಗುವುದು ದುಸ್ಸಾಧ್ಯ.

ಒಟ್ಟಿನಲ್ಲಿ ಒಂದು ವಿಷಯದ ಸಮ್ಯಗ್-ಜ್ಞಾನವಿದ್ದರೆ ಮಾತ್ರ ಅದರ ಗುಣಾವಗುಣಗಳನ್ನು ತಿಳಿಯಬಹುದು. ಅಸಂಪೂರ್ಣವಾಗಿ ವಿಷಯವನ್ನು ತಿಳಿದು ಅದೃಷ್ಟವಶಾತ್ ಸರಿಯಾದ ನಿರ್ಧಾರ ಮಾಡಿದರೆ ಸರಿ (accidentally erring on the right side). ಇಲ್ಲವೆಂದರೆ ತಪ್ಪು ನಿರ್ಧಾರವನ್ನು ಮಾಡಿ ಅನುಭವಿಸಬೇಕಾದವರು ನಾವೇ!

|| ಇತಿ ಶಮ್ ||

No comments: