Sathyu opposes subsidy to Kannada films
ಈ ಮನುಷ್ಯನ ಮಾತಿನಲ್ಲಿ ಸತ್ಯವಿದೆ. ಸತ್ಯು ಸ್ವಲ್ಪ serious ನಿರ್ದೇಶಕ. ಅವರು ಈಚೆಗೆ ರಾಜಕುಮಾರ್ ಮತ್ತು ಇತರ ನಟರ ಮೇಲೆ ಮಾತಾಡಿ ವಿವಾದ ಸೃಷ್ಟಿಮಾಡಿದ್ದಾರೆ. ಆದರೆ ಜನರ ಮನಸ್ಸುಗಳನ್ನು ಈ ಕಡೆ ತಿರುಗಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆಂದು ಹೇಳಬೇಕು.
ರೈತರಿಗೆ ಮತ್ತು ಕುಶಲಕರ್ಮಿಗಳಿಗೆ ಸಿಗದ ಸಬ್ಸಿಡಿ ಚಿತ್ರರಂಗಕ್ಕೆ ಏಕೆ ? ಅದೂ ಶುದ್ಧ ರೀಮೇಕು ಮಾಡುವ ಕನ್ನಡ ಚಿತ್ರರಂಗಕ್ಕೆ ? ಒಂದು ಸಿನಿಮವೂ ಸ್ವಂತದ್ದಲ್ಲ. ಎಲ್ಲ ಬಾಡಿಗೆಯದೆ. ನಟ ಸುದೀಪ ಸ್ವಾತಿ ಮುತ್ತು ಎಂಬ ಚಿತ್ರದಲ್ಲಿ ಮಾಡಿದ್ದಾನೆ. ಸುಮಾರು ಇಪ್ಪತ್ತು ವರ್ಷ ಹಳೆಯ ತೆಲುಗಿನ ಸ್ವಾತಿ ಮುತ್ಯಂ ಚಿತ್ರದ ಅನುಕರಣೆ ಇದು. ಆ ಚಿತ್ರ ಅದ್ಭುತವಾಗಿದೆ. ಬೇಕಾದವರು ಅದೇ ಚಿತ್ರವನ್ನು ನೋಡುತ್ತಾರೆ. ಹೋದರೆ ಹೋಗಲಿ ತೀರಾ ಅರ್ಥವಾಗದ ಜಪಾನಿ ಅಥವಾ ಚೀನೀ ಭಾಷೆಯಲ್ಲಿ ಚಿತ್ರವಿದ್ದಿದ್ದರೆ ರೀಮೇಕಿಗೆ ಓಕೆ ಅನ್ನಬಹುದಿತ್ತು. ಪಕ್ಕದ ಆಂಧ್ರದ ಚಿತ್ರವನ್ನು ಕನ್ನಡದಲ್ಲಿ ಮಾಡುವ ದರಿದ್ರ ಬುದ್ಧಿ ನಮ್ಮ ಚಿತ್ರರಂಗಕ್ಕೆ ಯಾಕೆ ? ಅದೇ ಹಾಡಿನ ಅನುವಾದ, ಅದೇ ಹಾಡಿನ ರಾಗ - ಸ್ವಲ್ಪವಾದರೂ ವ್ಯತ್ಯಾಸವಿರಬೇಡವೇ ? ವ್ಯತ್ಯಾಸವಿದೆ - ಮೂಲ ಚಿತ್ರದಲ್ಲಿ ಕಮಲಹಾಸನ್ನಿನ ಅದ್ಭುತ ನಟನೆಯಿತ್ತು. ಕನ್ನಡದ ರೀಮೇಕಿನಲ್ಲಿ ಸುದೀಪನ ಹಳಸಲು ಅಭಿನಯವಿದೆ. ಇದೊಂದೇ ಚಿತ್ರವಲ್ಲ - ನಲ್ಲ, ಕಿಚ್ಚ - ಇವೆಲ್ಲವೂ ರೀಮೇಕುಗಳೇ! ಜೊತೆಗೆ ಈಗ ದುಡ್ಡು ಮಾಡಿರುವ ಜೋಕ್ ಫಾಲ್ಸ್ ಮತ್ತು ಆಪ್ತಮಿತ್ರ ಕೂಡ ಚುಪ್ಕೆ ಚುಪ್ಕೆ (ಹಿಂದಿ) ಮತ್ತು ಮಣಿಚಿತ್ರತಾಳು (ಮಲಯಾಳ) ದ ರೀಮೇಕುಗಳೇ ! ಸ್ವಂತ ಬುದ್ಧಿ ನಮ್ಮಲ್ಲಿ ಏಕಿಲ್ಲ ? ಸ್ವಂತ ಬುದ್ಧಿಯಿರುವವರನ್ನು ಮುಂದೆ ಬರಲು
ಏಕೆ ಬಿಡುತ್ತಿಲ್ಲ ?
ಕನ್ನಡ ಚಿತ್ರರಂಗ ನನಗೆ ಬಹಳ ಇಷ್ಟವಾದದ್ದು. ಏಕೆಂದರೆ ನನಗೆ ಕನ್ನಡವೆಂದರೆ ಇನ್ನೂ ಹೆಚ್ಚು ಇಷ್ಟ. ಚಿತ್ರರಂಗದ ಈ ರೀತಿಯ ನಡೆವಳಿಕೆ ಕನ್ನಡದ ಮತ್ತು ಕನ್ನಡಿಗರ ಮೇಲೆಸಗಿದ ದ್ರೋಹ. ಅದಕ್ಕೇ ಈ ರೀತಿಯ ವಾರ್ತೆ ಓದಿದಾಗಲೆಲ್ಲಾ ನನಗೆ ಮೈಮನಸ್ಸುಗಳು ಉರಿಯುತ್ತವೆ.
ಕನ್ನಡದಲ್ಲಿ ಪುಸ್ತಕ ಕೊಳ್ಳುವವರಿಲ್ಲ. ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಕನ್ನಡದಲ್ಲಿ ಮಾತಾಡಿದರೆ ಮಾರುತ್ತರ ಕನ್ನಡದಲ್ಲಿ ಬರುವುದಿಲ್ಲ. ಕನ್ನಡ ಬರುವವರೂ ಸಹ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಅದೇ ಬಂಗಾಳಿಗಳು ತಮ್ಮ ಭಾಷೆಯನ್ನು ಎಷ್ಟು ಗೌರವಿಸುತ್ತಾರೆ! ಈ ದರಿದ್ರ ಕನ್ನಡಿಗರಿಗೇ ಈ ರೋಗ ಬಡಿದಿದೆ. ಮೊನ್ನೆ ಯಾರೋ ಹೇಳುತ್ತಿದ್ದರು -ತೆಲುಗಿಗೆ ಇನ್ನು ಕೇವಲ ೮೦ ವರ್ಷಗಳ ಆಯುಷ್ಯವಿದೆಯಂತೆ. ಇದರ ನಂತರ ತೆಲುಗು ಹೇಳುಹೆಸರಿಲ್ಲದಂತಾಗುವುದಂತೆ. ತೆಲುಗಿಗೇ ಹಾಗಾದರೆ ಕನ್ನಡ ಇನ್ನು ೫೦ ವರ್ಷಗಳಲ್ಲಿ ಸಾಯಬಹುದು ಎಂದು ಅವರು ತರ್ಕಿಸಿದರು. ಕನ್ನಡ ತಾಯಿ ತನ್ನ ಮಕ್ಕಳಿಂದ ಈ ರೀತಿಯ ಹಿಂಸೆಗೊಳಗಾಗುವುದರಿಂದ ನಿತ್ಯ ಸಾಯುವ ಬದಲು ಒಂದೇ ಬಾರಿ ಗೌರವದಿಂದ ಸಾಯುವುದು ಮೇಲು ಅನ್ನಿಸುತ್ತದೆ. ಇಂಥ ಕೃತಘ್ನ ಮಕ್ಕಳಿಗೆ ಕನ್ನಡದಂಥ ಮಹಾತಾಯನ್ನು ಗೌರವಿಸುವ ಭಾಗ್ಯವಿಲ್ಲ.
ಎಂಥ ಪ್ರತಿಭಾಶಾಲಿ ಕವಿಗಳ, ಮಹಾರಾಜರುಗಳ, ಸಜ್ಜನರ ಮನಸ್ಸು-ಬಾಯಿಗಳಲ್ಲಿ ಮೂಡಿದ ಭಾಷೆ! ಕನ್ನಡ ಸಾಯುತ್ತದೆಯೆಂದು ನೆನೆಸಿದರೆ ಸೂತಕದ ಭಾವನೆ ನನ್ನನ್ನಾವರಿಸುತ್ತದೆ. ಹಾಗಾಗದೆ ಹೋಗಲಿ, ಏನಾದರೂ ಮಾಡಲೇಬೇಕು ಎಂದು ಆಶಿಸುವ ಆಶಾವಾದ ನನ್ನಲ್ಲಿನ್ನೂ ಇದೆ.
ಕನ್ನಡ ತಾಯಿ ನಮ್ಮನ್ನು ಕಾಪಾಡಲಿ ! ನಾವು ಕನ್ನಡತಾಯಿಯನ್ನು ಕಾಪಾಡೋಣ!
|| ಇತಿ ಶಮ್ ||
No comments:
Post a Comment