ನಿನ್ನೆ ಆಫೀಸಿನಿಂದ ಮನೆಗೆ ಹೋಗುವಾಗ ದಾರಿಯಲ್ಲಿ ಒಂದು ವಿಚಿತ್ರ ದೃಷ್ಟಿ ನೋಡಿದೆ. ಉದ್ಯಾನವನದ ಬಳಿ ಓಡಾಡುವ ವ್ಯಕ್ತಿಯ ತಲೆಯ ಮಧ್ಯದಲ್ಲಿ ಒಂದು ಸ್ವಲ್ಪವೂ ಕೂದಲಿಲ್ಲದೆ ಪೂರ್ಣವಾಗಿ ಬೊಕ್ಕಾದ (completely bald) ಭಾಗ ಕಂಡಿತು. ಆ ಭಾಗದ ತ್ವಚೆ ಹೊಳೆಯುತ್ತಿತ್ತು. ಈ ವರ್ತುಲಾಕಾರದ ಚರ್ಮದ ಸುತ್ತಲೂ ಬಾಚಿರದ, ಅ ಗೌರವರ್ಣದ ಚರ್ಮವನ್ನು ಕಂಡು ಭಯಪಟ್ಟು ಹಿಂದೆಸರಿಯುತ್ತಿದ್ದ ಹಾಗೆ ಕಂಡ, ಬಿಳಿ-ಕಪ್ಪು-ಬೆಳ್ಳಿಯ ಕುರುಚಲುಗೂದಲುಗಳ ಕಾಡು. ಹಿಂದಿನಿಂದ ನೋಡುತ್ತಿದ್ದ ನನಗೆ ಇದು ಮಾತ್ರವೇ ಕಂಡಿತು. ಕಾರ್ ಓಡಿಸುತ್ತಿದ್ದ ನಾನು ಆ ವ್ಯಕ್ತಿ ಧರಿಸಿದ ಉಡುಪನ್ನು ಗಮನಿಸಿರಲಿಲ್ಲ. ನನ್ನ ದಾರಿಯಲ್ಲಿ ನಾನು ಅವರ ಪಕ್ಕದಲ್ಲೇ ಹಾದು ಹೋದೆ. ಆಗಲೇ ತಿಳಿದಿದ್ದು ಅದು ಪುರುಷನಲ್ಲ, ಮಹಿಳೆಯೆಂದು! ಒಮ್ಮೆ ನನಗೆ ದಿಗ್ಭ್ರಾಂತಿಯಾಯ್ತು; ಕಸಿವಿಸಿಯೂ ಆಯ್ತು.
ಬೊಕ್ಕತಲೆಯಾಗಿರುವ ಗಂಡಸರು ಹೇರಳವಾಗಿ ಸಿಗುತ್ತಾರೆ. ಅವರು ತಲೆಯನ್ನು ಸಿಂಗಾರ ಮಾಡಿಕೊಳ್ಳುವ ಅವಶ್ಯಕತೆಯನ್ನು ಹೆಚ್ಚಾಗಿ ಕಾಣುವುದಿಲ್ಲ. ಸ್ವಲ್ಪ ಬೊಕ್ಕಾದವರು ಸ್ವಲ್ಪ ಸಿಂಗಾರ ಮಾಡುವ ಪ್ರಯತ್ನವಾದರೂ ಪಡಬಹುದು. ಆದರೆ ಈ ರೀತಿ ಎಲ್ಲ ಕೂದಲುಗಳು ಸಮೂಹ ಮುಷ್ಕರ ಹೂಡಿಬಿಟ್ಟರೆ ಇವರಾದರೂ ಏನು ಮಾಡುವರು? ಅದಕ್ಕೆ "ಬಾಂಡ್ಲಿ" ಯೆಂದೋ "ತಾಮ್ರದ ಬಿಂದಿಗೆ" ಯೆಂದೋ ಹಾಸ್ಯಕ್ಕೆ ಗುರಿಯಾದರೂ ತಲೆಕೆಡಿಸಿಕೊಳ್ಳದೆ ಇರುತ್ತಾರೆ. ಅಫ್ ಕೋರ್ಸ್, ಮೊದಲ ಸಲ ಅವರನ್ನು ಯಾರಾದರೂ ಹೀಗೆ ಕರೆದಾಗ ಬಹಳ ಬೇಜಾರಾಗಿರುತ್ತದೆ. ಆದರೆ ಕ್ರಮೇಣ, ಬಹಳಷ್ಟು ಮಹನೀಯರಿಗೆ, ಅಭ್ಯಾಸವಾಗುತ್ತದೆ. ಅಂದ ಹಾಗೆ.. ಖಲ್ವಾಟ (ಬೊಕ್ಕತಲೆಯವರ)ರ ಬಗ್ಗೆ ಇಷ್ಟು ಸಹಾನುಭೂತಿಯಿಂದ ಮಾತನಾಡುತ್ತಿರುವ ನನ್ನ ತಲೆಯ ಮೇಲೆ ಕೂದಲು, ದೈವವಶಾತ್, ಇನ್ನೂ ಇದೆ! ಒಂದು ಪ್ಯಾಚೂ ಇಲ್ಲದೆ ಚೆನ್ನಾಗಿ ಬಾಚುವಷ್ಟು! ಆದರೆ ಈಗಿನಿಂದಲೇ ಅದರ ಮೇಲೆ ಅಷ್ಟು ಆಸೆ ಇಟ್ಟುಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದೇನೆ ಅಷ್ಟೆ!
ಗಂಡಸರ ವಿಷಯ ಹೀಗಿದ್ದರೂ ದುರದೃಷ್ಟವಶಾತ್(?) ಸ್ತ್ರೀಯರದ್ದು ಹೀಗಲ್ಲವಲ್ಲ! ಪರಿಸ್ಥಿತಿ ಹೇಗಿದ್ದರೂ ಹೆಂಗಸರು ಚೆನ್ನಾಗಿ ಉಡುಪು ಧರಿಸಿ ಸಿಂಗರಿಸಿಕೊಂಡಿರಬೇಕೆಂಬುದು ಅವರಲ್ಲಿರುವ ಅಲಿಖಿತ ನಿಯಮವೆಂದು ಕಾಣುತ್ತದೆ. ಬಹುತೇಕ ಸ್ತ್ರೀಯರಿಗೆ ಇದು ಇಷ್ಟವಾಗಿರುವ ಹಾಗೆಯೂ ಕಾಣುತ್ತದೆ. ಅಥವಾ ಇದು ನನಗೆ ಕಂಡು ಬಂದ ಒಂದು ಸ್ಟೀರಿಯೋಟೈಪೆ? ಸೌಂದರ್ಯ ಪ್ರಸಾಧನ ಸಂಸ್ಥೆಗಳಂತೂ ಇದನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿದ್ದಾರೆ. ಇದೇ ಸ್ಟೀರಿಯೋಟೈಪನ್ನು ಒಂದೊಂದು ಮಹಿಳಾಕುಲದಲ್ಲೂ ಪ್ರಸಾರ ಮಾಡುವುದು ಆ ಸಂಸ್ಥೆಗಳ ಉಳಿವಿಗಾಗಿ ಅಲ್ಲವೇ? ಸೌಂದರ್ಯವನ್ನು ಕಾಪಾಡಿಕೊಳ್ಳಲು ಹವಣಿಸುತ್ತಿರುವ ಸ್ತ್ರೀಯರಲ್ಲಿ ಬೊಕ್ಕತನ ಕಂಡರೆ ?! ಇದನ್ನು ಯುವತಿಯರ ಮುಂದೆ ಹೇಳಿದರಂತೂ ಭಯಗ್ರಸ್ತರೇ ಆಗಿಬಿಡಬಹುದು!
ಈಗಂತೂ, ಎಂಭತ್ತು ವರ್ಷದ ಆಸುಪಾಸಿನ ಜನರು ಕೂಡ ತಲೆಗೆ ಡೈ ಹಚ್ಚಿ, ಕೃತಕ ಹಲ್ಲು ಕಟ್ಟಿಸಿ, ಯುವಜನರ ಹಾಗೆ ಕಷ್ಟ ಪಟ್ಟು ವರ್ತಿಸಲು ಯತ್ನಿಸುವುದನ್ನು ನೋಡುತ್ತೇವೆ. ಇದು ಹೇಗೆ ಕಾಣುತ್ತದೆ? ನನಗಂತೂ ದೇವಾನಂದ್ (ಖ್ಯಾತ ಹಿಂದೀ ಚಿತ್ರನಟ) ನನ್ನು ನೋಡಿದಾಗ ಈ ನಡುವೆ ಅನುಕಂಪದ ಭಾವನೆಯೇ ಮೂಡುತ್ತದೆ. ಇನ್ನೂ ಏಕೆ ಹೀಗೆ ಮಾಡುತ್ತಿದ್ದಾನೆ ಎಂದು ನನಗಾಗ ಅನ್ನಿಸುತ್ತದೆ. ಯೋಚಿಸಿದಾಗ ಚೆನ್ನಾಗಿ ಬೇರೆಯವರಿಗೆ ನಾವೇಕೆ ಚೆನ್ನಾಗಿ ಕಾಣಬೇಕು ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಅದು ಬೇರೆಯ ದಿನದ ಮಾತು. ಇರಲಿ.
ದಾರಿಯಲ್ಲಿ ಕಂಡ ಬೊಕ್ಕತಲೆಯಾಕೆ ಇವಿಷ್ಟೂ ಮತ್ತು ಇನ್ನೂ ಹೆಚ್ಚು ವಿಚಾರ ಮೂಡಿಸಿದರು. ಆದರೆ ನನಗೆ ಆಕೆಯ ಬಗ್ಗೆ ಉಳಿದ ಭಾವನೆ ಗೌರವದ್ದು. ಈ ರೀತಿಯ ಸ್ಟೀರಿಯೋಟೈಪುಗಳನ್ನು ಧಿಕ್ಕರಿಸಿ, ವಯಸ್ಸಿಗೆ ಅನುಗುಣವಾಗಿ ಬಂದದ್ದನ್ನು ತಿರಸ್ಕರಿಸದೆ, ಅದಕ್ಕೆ ಬದಲಾಗಿ ಸ್ವಾಗತಿಸಿ ಜೀವನವನ್ನು ನಡೆಸುವುದನ್ನು ನಿಜವಾಗಿಯೂ ಗೌರವಿಸಬೇಕಾದದ್ದು. ಅಲ್ಲವೇ?
3 comments:
ಬೊಕ್ಕತನದ ಹೊಳಪು- ಲೇಖನದ ಬಗ್ಗೆ, ಅದರ ಕೊನೆಯ ಸಾಲಿನ ಬಗ್ಗೆ ನನ್ನ ಸಹಮತವಿದೆ. ನಿಜ, ವಯೋಗುಣಕ್ಕೆ ಸಹಜವಾದುದನ್ನು ಸ್ವೀಕರಿಸಿ ಸಹಜವಾಗಿಯೇ ಇದ್ದರೆ ಇತರರ ಗೌರವ ಸಿಗದಿದ್ದರೂ ನಮ್ಮ ನಮ್ಮ ಆತ್ಮಗೌರವ ಉಳಿಸಿಕೊಳ್ಳಬಹುದು (ಅಥವಾ ಕೆಲವರಿಗೆ ಮೆರುಗಿನಲ್ಲಿಯೇ ಆತ್ಮವಿದ್ದರೆ...! ಅಯ್ಯೋ, ಪಾಪ!!). ನಿಮ್ಮ ಲೇಖನಗಳಲ್ಲಿರುವ ವೈಚಾರಿಕತೆ ನನ್ನ ಕವನಗಳಲ್ಲಿ ಕಾಣುವುದಿಲ್ಲ. ಇಂಥದ್ದನ್ನು ಕಾವ್ಯಾತ್ಮಕವಾಗಿ ಮೂಡಿಸುವ ಕೌಶಲ್ಯ ನನಗಿನ್ನೂ ಸಿದ್ಧಿಸಿಲ್ಲ. ಅಲ್ಲಿಯವರೆಗೆ ನೀವೆಲ್ಲ ಬರೆದದ್ದನ್ನಾದರೂ ಓದುತ್ತೇನೆ.
ಸುಪ್ತದೀಪ್ತಿಯವರಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
ನಿಮ್ಮ ಸಹಮತ ಈ ವಿಚಾರದೊಂದಿಗೆ ಇರಬಹುದೆಂದು ನಾನು ಊಹಿಸಿದ್ದೆ.
ಆದರೆ ನೀವು ನಿಮ್ಮ ಕವನಗಳಲ್ಲಿ ಈ ವೈಚಾರಿಕತೆ ಏಕೆ ಕಾಣಿಸಬೇಕು ಎಂಬುದನ್ನು ನಾನರಿಯೆ. ಏಕೆಂದರೆ ನಿಮ್ಮ ಕವನಗಳು ಭಾವನೆಗಳಿಂದ ತುಂಬಿವೆ. ವಿಚಾರವನ್ನು ಭಾವನೆಯ ವಿಸ್ತಾರಕ್ಕೆ ಉಪಯೋಗಿಸಿದಾಗ ಚೆನ್ನಿರುತ್ತದೆ. ಕೇವಲ ವೈಚಾರಿಕತೆಯನ್ನು ಮೆರೆದು ಭಾವನೆಗಳನ್ನು ಬಲಿಗೊಡುವ ಲೇಖನಗಳು ಶಾಸ್ತ್ರದ ರೀತಿಯಲ್ಲಿ ಕೇವಲ ಮಾಹಿತಿಗೋಸ್ಕರ ಉಪಯೋಗಿಸಬೇಕಾದಂಥವು. ಆದರೂ ನಿಮ್ಮ ಕವನಗಳು ಭಾವಬಿಂದುಗಳು. ಆ ಭಾವನೆಗಳ ಕೆನೆಹಾಲು ವಿಚಾರವೆಂಬ ನೀರಿನಿಂದ ನೀರು-ನೀರಾಗಬಾರದು. ಆರಗಿಸಿಕೊಳ್ಳಲು ಶಕ್ತಿಯಿಲ್ಲದ ನನ್ನಂಥವರಿಗೆ ನೀರು ಹಾಕಿ ಕೊಡಬೇಕಾಗಬಹುದು ಅಷ್ಟೆ ;)
ವಿಚಾರಪ್ರಚೋದಕ ಲೇಖನ.
ಬೊಕ್ಕತನದ 'ಹೊಳಪು' ಎಂಬಲ್ಲಿ ಬೊಕ್ಕತನದಲ್ಲಿಯೂ ಇರುವ ಸೌಂದರ್ಯವನ್ನು ತೋರಿದ್ದೀರಿ. ಈ ವಿಚಾರ ಚೆನ್ನಾಗಿದೆ.
ಕೂದಲ ಉದ್ದೇಶ ಏನು? ತಲೆಗೆ ರಕ್ಷಣೆ. ಹೆಚ್ಚು ಕೂದಲಿದ್ದರೆ ತಲೆಗೆ ರಕ್ಶಣೆ ಹೆಚ್ಚಿದ್ದು, ಅಂಥವರ chances of survival ಹೆಚ್ಚಿರುವುದರಿಂದ ಅದು ಸೌಂದರ್ಯದ ಒಂದು ಭಾಗವಾಗಿದ್ದಿರಬಹುದೇ?
ಇತ್ತೀಚೆಗೆ ಡಾ. ರಾ. ಗಣೇಶ್ ಅವರ ಒಂದು ಅಷ್ಟಾವಧಾನದಲ್ಲಿ ಅಪ್ರಸ್ತುತಪ್ರಸಂಗಿಯ '"ಜರಾ ಚ ಮೇ" ಎಂಬುದನ್ನು ಹೇಗೆ ಸಮರ್ಥಿಸುತ್ತೀರಿ' ಎಂಬ ಪ್ರಶ್ನೆಗೆ "ಚೆನ್ನಾಗಿ ಜೀವನ ನಡೆಸಿದವರಿಗೆ ಜರೆಯೂ ಸ್ವಾಗತಾರ್ಹ" ಎಂದು ಹೇಳಿದ್ದು ನೆನಪಿಗೆ ಬಂದಿತು.
Post a Comment