ನನಗೆ ಬಹಳ ದಿನಗಳಿಂದ ಸಮಯ ದೊರೆತಿರಲಿಲ್ಲ. ನಾನು ಒಂದು ಬ್ಲಾಗ್ ಬರೆಯುತ್ತೇನೆ ಎಂಬ ಪರಿಜ್ಞಾನ ಇರದೆ ಹೋಗಲಿಲ್ಲವಾದರೂ ಬರೆಯಲು ಏಕೋ ಮನಸಾಗಲಿಲ್ಲ. ಮನಸ್ಸಿಗೆ ಏನಾದರೂ ಹೊಳೆದಾಗಲೆಲ್ಲಾ "ಹೌದು ಇದರ ಬಗ್ಗೆ ಬರೆಯಬೇಕು" ಎಂದು ಮನಸ್ಸಿನಲ್ಲಿಯೇ ಅಂದುಕೊಂಡದ್ದೂ ಆಯ್ತು ಮತ್ತು ಮರೆತದ್ದೂ ಆಯ್ತು. ಅಬ್ಬ! ಒಂದು ತಿಂಗಳಿಗಿಂತ ಹೆಚ್ಚಾಗಿದೆಯಲ್ಲಾ ಬ್ಲಾಗ್ ಬರೆದು!
ಇರಲಿ. ನನ್ನ ಬ್ಲಾಗಿನಲ್ಲಿ ಕೆಲವು ಬೆಂಗಳೂರಿನ ಚಿತ್ರಗಳನ್ನು ಹಾಕಬೇಕು ಎಂದು ಅಂದುಕೊಂಡಿದ್ದೆ. ಕೆಲವು ಚಿತ್ರಗಳನ್ನು ನನ್ನ ಛಾಯಾಗ್ರಾಹಿಕೆಯಲ್ಲಿ ಹಿಡಿದಿದ್ದೇನೆ ಕೂಡ! ಆದರೆ ಇನ್ನೂ ಹಾಕಬೇಕು. ಒಂದೆರಡು ದಿನವಾದ ಮೇಲೆ ನೋಡೋಣ.
ಇಂದು ವಿವಿಧಭಾರತಿಯಲ್ಲಿ ಸಿರಿಗನ್ನಡ ಕಾರ್ಯಕ್ರಮದಲ್ಲಿ ಸುಸ್ವಾಗತ ಎಂಬ ಪದದ ಬಗ್ಗೆ ಮಾಹಿತಿಯಿತ್ತು. ಇದರ ಬಗೆಗೆ ನನಗೆ ಮೊದಲೇ ತಿಳಿದಿತ್ತಾದರೂ ಇದರ ಬಗ್ಗೆ ಸ್ವಲ್ಪ ಬ್ಲಾಗಿಸುವ ಎಂದು ಬರೆಯುತ್ತಿದ್ದೇನೆ. ಸ್ವಾಗತ ಎಂಬುದು ಸಂಸ್ಕೃತ ಪದ. ಸು + ಆಗತ (ಯಣ್ ಸಂಧಿ) - ಒಳ್ಳೆಯ ಆಗಮನ ಎಂದು ಅರ್ಥ. ಸು ಎಂದರೆ ಒಳ್ಳೆಯದು. ಸುಸ್ವಾಗತ ಎಂದರೆ ಸು ಸು ಆಗತ ಎಂದಾಗುತ್ತದೆ. ಅರ್ಥವೇನೂ ಬದಲಾಗದಿದ್ದರೂ ಭಾಷೆಯಲ್ಲಿ ತಪ್ಪಾಗುತ್ತದೆ. ಶ್ರೀ ವೆಂಕಟಸುಬ್ಬಯ್ಯನವರ ಮಾತಿನಲ್ಲಿ "ಭಾಷೆಯೆಂಬ ಗದ್ದೆಯಲ್ಲಿ ಬೆಳೆಯುವ ಕಳೆಯ ಹಾಗೆ ಈ ರೀತಿಯ ಶಬ್ದಗಳು. ಗದ್ದೆಯಲ್ಲಿ ಕಳೆಯನ್ನು ಕೀಳುತ್ತಲೇ ಇರುವ ಹಾಗೆ ಭಾಷೆಯಿಂದಲೂ ಈ ರೀತಿಯ ಪದಗಳನ್ನು ತೆಗೆಯುತ್ತಲೇ ಇರಬೇಕು." ಇದೇ ಜಾತಿಗೆ ಸೇರುವ ಮತ್ತೊಂದು ಪದ - ಪ್ರಪ್ರಥಮ!
ಆದರೆ ಜನರು ಈ ತಪ್ಪನ್ನೇ ಹಿಡಿದಿದ್ದಾರಲ್ಲ! ಸಿರಿಗನ್ನಡ ಕಾರ್ಯಕ್ರಮವನ್ನು ನೀಡುವ ವಿವಿಧಭಾರತಿಯಲ್ಲೇ "ಸುಸ್ವಾಗತ" ಕೇಳಿ ಬರುತ್ತದೆ. ಇನ್ನೊಂದು ವ್ಯಾಕರಣದೋಷದ ಉದಾಹರಣೆ - ರಾಷ್ಟ್ರೀಯ ಎಂಬ ಪದ - ರಾಷ್ಟ್ರಕ್ಕೆ ಸಂಬಂಧ ಪಟ್ಟಿರುವುದಾದ್ದರಿಂದ ಅದು" ರಾಷ್ಟ್ರಿಯ"ವಾಗಬೇಕು ರಾಷ್ಟ್ರೀಯವಲ್ಲ! ಇದರ ಜೊತೆಗೆ "ಅಂತ" ಎಂಬುದು ಸೇರಿದಾಗ "ಅಂತಾರಾಷ್ಟ್ರಿಯ" ಎಂದಾಗಬೇಕು. ಸಂಸ್ಕೃತದ ಪದಗಳೇ ಆಗಿರುವುದರಿಂದ ಅದರ ವ್ಯಾಕರಣವನ್ನೇ ಇಲ್ಲಿ ಅವಲಂಬಿಸಬೇಕು. ವಸ್ತುತಃ ಅಂತಃ + ರಾಷ್ಟ್ರಿಯ - ಅಂತಾರಾಷ್ಟ್ರಿಯವಾಗುತ್ತದೆ - ವಿಸರ್ಗ ಸಂಧಿಯ ನಿಯಮದಿಂದ. ವಿಸರ್ಗ ಪೂರ್ವಪದದ ಅಂತ್ಯದಲ್ಲಿದ್ದು ರ-ಕಾರ ಉತ್ತರಪದದ ಆದಿಯಲ್ಲಿ ಬಂದಾಗ ಹೀಗೆ ವಿಸರ್ಗದ ಹಿಂದಿನ ಸ್ವರದ ದೀರ್ಘ ರೂಪ ಆದೇಶವಾಗಿ ಬರುತ್ತದೆ. ಉದಾಹರಣೆಗೆ - ಪುನಃ + ರಚನೆ - ಪುನಾರಚನೆ ಯಾಗುತ್ತದೆ. ಪುನರ್ರಚನೆಯಲ್ಲ. ದೈನಂದಿನ ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ಈ ರೀತಿಯ ಭಾಷೆಯ ತಪ್ಪುಗಳನ್ನು ನೋಡಿದಾಗ ಸ್ವಲ್ಪ ಖಿನ್ನನಾಗುತ್ತೇನೆ.
ಆದರೆ ರೂಢಿ ಎಂಬುದೊಂದಿದೆಯಲ್ಲ! ಇದು ಎಷ್ಟು ಶಕ್ತ ಎಂದು ಈ ರೀತಿಯ ಅಪಪ್ರಯೋಗಗಳನ್ನು ನೋಡಿದಾಗ ತಿಳಿಯುತ್ತದೆ. ಈಗ ಯಾರನ್ನದರೂ ಕೇಳಿ ನೋಡಿ - ಬಹಳಷ್ಟು ಜನ ಸುಸ್ವಾಗತ ಎಂಬುದು ಸರಿಯಾದ ಪದ ಎಂದೇ ಹೇಳುತ್ತಾರೆ. ಪತ್ರಿಕೆಗಳಲ್ಲಿ ದೂರದರ್ಶನವಾಹಿನಿಗಳಲ್ಲಿ ಸರಿಯಾದ ಪದ ಪರಿಚಯ ಮಾಡಿಸುವ ಅಭ್ಯಾಸ ಮೂಡಿಬರಬೇಕು.
ನಾನೇನೂ ಪಂಡಿತನಲ್ಲ. ಮೊದಲು ಹೇಳಿದ ಶಬ್ದಗಳ ಬಗ್ಗೆ ನಾನೂ ಮೊದಲು ತಪ್ಪು ಮಾಡಿದ್ದವನೇ! ಆದರೆ ಸರಿಯಾದ ಉಪಯೋಗ ತಿಳಿದ ಮೇಲೆ ಆದಷ್ಟು ಸರಿಯಾಗಿಯೇ ಮಾಡೋಣ ಎಂದು ನಿರ್ಧರಿಸಿದ್ದೇನೆ.
ಅರಿ-ಸಮಾಸದ "ದುರ್ಬಳಕೆ"ಯೂ ಇದೆ. ಇದರ ಬಗ್ಗೆ ಇನ್ನೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.
|| ಇತಿ ಶಮ್ ||