ನನ್ನ ಹಿಂದಿನ ಬರೆಹದಲ್ಲಿ ಬರೆದ ಹಾಗೆ ನಾನು ಕಳೆದ ಕೆಲವು ದಿನಗಳಲ್ಲಿ ಒಂದು ವಾರದ ಕಾಲ ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಿದೆ. ಅದರ ಬಗ್ಗೆ ಒಂದೆರಡು ಕಂತುಗಳಲ್ಲಿ ಬರೆಯುವ ಆಸೆಯಾಯ್ತು.ಕನ್ನಡದಲ್ಲಿ ಬರೆಯುವುದೋ ಆಂಗ್ಲದಲ್ಲೋ ಎಂಬ ದ್ವಂದ್ವ ಎದ್ದಿತ್ತು. ಆದರೆ ಕೆಲವು ಮಾತುಗಳು ಕನ್ನಡ ನಾಡು ಮತ್ತು ಮಹಾರಾಷ್ಟ್ರಗಳ ಹೋಲಿಸುವುದರ ಬಗ್ಗೆ ಇರುವುದರಿಂದ ಕನ್ನಡದ ಬರೆಹವೇ ಒಳಿತೆಂದು ಬಗೆದೆ.
ಅಮೇರಿಕೆಯಿಂದ ವಾಪಸಾದ ಬಳಿಕ ನಾನೆಂದೂ ಒಂದು ವಾರದ ಮಟ್ಟಿಗೆ ವಿರಾಮ ತೆಗೆದುಕೊಂಡಿರಲಿಲ್ಲ. ಬಹಳಷ್ಟು ವಿರಾಮದಿನಗಳು ಸೇರಿದ್ದುವು, ಇನ್ನೂ ಇವೆ. ಆದರೆ ಇವನ್ನು ಖರ್ಚು ಮಾಡಲು ಅವಕಾಶಗಳಿಲ್ಲದ ಕಾರಣ ಹೊರಗೆಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ. ವಾರದ ಕೆಲಸದಲ್ಲಿ ಸೋಮ-ಶುಕ್ರರ ನಡುವೆ ಸುತ್ತುವ ಒಂದೇ ಏಕತಾನತೆ. ಹಬ್ಬ ಬಂದರೂ ಒಂದು ದಿನ ಮಾತ್ರ. ಅದೂ ಮನೆಯಲ್ಲೇ! ಮನಸ್ಸಿಗೆ ತುಕ್ಕು ಹಿಡಿದ ಹಾಗಿತ್ತು. ಮನಸ್ಸು-ದೇಹಗಳಲ್ಲಿ ಲವಲವಿಕೆಯೇ ಕಾಣದಿದ್ದರೆ ಕೆಲಸವನ್ನು ಕುಶಲವಾಗಿ ಹೇಗೆ ಮಾಡಲು ಸಾಧ್ಯ? ಇದೇ ಮೊದಲಾದ ನನ್ನ ಅಂತರಂಗದ ಮಾತು ದೇವರಿಗೂ ಕೇಳಿಸಿರಬೇಕು. ಅದಕ್ಕೆ ಅವನೇ ಈ ವ್ಯವಸ್ಥೆ ಮಾಡಿಸಿದ್ದು ಎಂದು ನನ್ನ ನಂಬಿಕೆ.
ನಮ್ಮ ಹೆಂಡತಿಯ ತವರಿನವರು ಶಿರಡಿಯ ಸಂತಶ್ರೇಷ್ಠರಾದ ಸಾಈ ಬಾಬಾರವರ ಭಕ್ತರು. (ಕನ್ನಡದಲ್ಲಿ ಇವರ ಹೆಸರನ್ನು ಪಾಪ - ಸಾಯಿಬಾಬಾ ಎಂದು ಮಾಡಿ ದಿನವೂ ಇವರ ಭಕ್ತರು ಇವರನ್ನು ಸಾಯಿಸುತ್ತಾರಲ್ಲ! ಸಾಈ ಸರಿಯಾದ ಪ್ರಯೋಗ. ಮರಾಠಿಯಲ್ಲಿ ಹೇಗೆ ಬರೆಯುತ್ತಾರೋ ನೋಡಿ.).ಇವರು ವರ್ಷಕ್ಕೆ ಒಂದು ಬಾರಿಯಾದರೂ ಶಿರಡಿಯ ದರ್ಶನ ಮಾಡುತ್ತಾರೆ. ಅವರ ಮಗಳಾದ ನನ್ನ ಹೆಂಡತಿಗೂ, ಅಳಿಯನಾದ ನನಗೂ ಕೃಪೆಮಾಡಿ ರೈಲು ಚೀಟಿ ಮೊದಲೇ ಕಾದಿರಿಸಿದ್ದರು. ಹೂವಿನ ಜೊತೆಗೆ ನಾರು ಕೂಡ ದೇವರ ಮೇಲೇರುವ ಹಾಗೆ, ಇವರೊಡನೆ ನಾನೂ ಪಯಣಿಸಿದೆ. ಜೊತೆಗೆ ಸ್ವಲ್ಪ ದೀರ್ಘವಾದ ಪ್ರವಾಸಗಳನ್ನು ಮಾಡದೆ, ಒಂದೇ ಕಡೆ ನೆಲೆಸಿದ್ದರಿಂದ ಮನಸ್ಸು ನಿರಂತರ ಹಿಂದೇಟು ಹಾಕುತ್ತಿತ್ತು. ಹೊರಡುವ ದಿನವೂ ನನಗೆ ಜ್ವರ ಬಂದಿತ್ತು! ಅಂತೂ ಇಂತೂ, ದೇವರ ಅದೃಷ್ಟವೋ, ನನ್ನ ಅದೃಷ್ಟವೋ ತಿಳಿಯದು - ರೈಲನ್ನಂತೂ ಏರಿದೆವು. ರೈಲೂ ಹೊರಟಿತು.
ರೈಲಿನ ಪ್ರಯಾಣ ನನಗೆ ಬಹಳ ಇಷ್ಟ. ಆದರೆ ರೈಲಿನಲ್ಲಿ ಕುಳಿತಿರುವುದೇ ಬೆರಳೆಣಿಕೆಯಷ್ಟು. ರಾತ್ರಿಯ ಹೊತ್ತು ರೈಲುಪ್ರಯಾಣವನ್ನು ಮಾಡಿರಲೇ ಇಲ್ಲ. ಬೆಂಗಳೂರಿನ ಟ್ರಾಫಿಕ್ ಭೂತದಿಂದ ಬೆಂದ ನನ್ನಂಥವರಿಗೆ ಬೆಂಗಳೂರಿನ ಕೇಂದ್ರದ ರೈಲ್ದಾಣದಿಂದ ಕಂಟೋನ್ಮೆಂಟಿಗೆ ಅಷ್ಟು ಬೇಗ ಹೋಗಲು ಸಾಧ್ಯವೇ ಎಂಬ ಆಶ್ಚರ್ಯ! ಅದೇ ನೋಡಿ ರೈಲಿನ ದೊಡ್ಡ ಗುಣ. ದಾರಿಯಲ್ಲೆಲ್ಲೂ ಜ್ಯಾಮ್ ಇರುವುದಿಲ್ಲ. ಆದರೆ ಕ್ರಾಸಿಂಗ್ ಇದ್ದಾಗ ಸಾಕಷ್ಟೇ ಹೊತ್ತು ಕಾಯಬೇಕಾಗಿಬರಬಹುದೆಂಬ ವಿಷಯ ನನಗೆ ತಿಳಿದಿರಲಿಲ್ಲ.
ಈ ಪ್ರವಾಸ ಹೇಳಿ-ಕೇಳಿ ತೀರ್ಥಯಾತ್ರೆಯಾದ್ದರಿಂದ ಅಷ್ಟು romantic ಆದ ಸನ್ನಿವೇಶಗಳೇನೂ ಇರಲಿಲ್ಲ. ನಮ್ಮ ತಂಡದಲ್ಲಿದ್ದವರು ನಮ್ಮ ಮಾವನವರು, ಅತ್ತೆ, ಅವರ ಮಗ ಮತ್ತು ಅಜ್ಜಿ. ನಾನು, ನನ್ನ ಹೆಂಡತಿ ಮತ್ತು ಮಗು, ನನ್ನ ಪತ್ನಿಯ ತಂಗಿ, ಆಕೆಯ ಪತಿ, ಮಾವನವರು ಮತ್ತು ಆಕೆಯ ಕೂಸು. ಒಟ್ಟಿನಲ್ಲಿ ಒಂಭತ್ತು ವಯಸ್ಕರು, ಇಬ್ಬರು ಹಸುಳೆಗಳ ತಂಡ. ಇಷ್ಟು ಜನರಿಗೆ ಸಾಮಾನೆಷ್ಟಿರಬಹುದೆಂದು ಊಹಿಸಿ. ಈ ಕೆಳಗಿನ ಚಿತ್ರದಿಂದ ನೀವೇ ಊಹಿಸಿಕೊಳ್ಳಬಹುದು! ಇದನ್ನು ಹೊತ್ತ ನಮಗೇ ಇದರ ಭಾರ ತಿಳಿಯಲು ಸಾಧ್ಯ!
ರೈಲಿನಲ್ಲಿ ಪಯಣಿಸದ ನಾನು ರೈಲಿನ ಬಗ್ಗೆ ಇನ್ನೂ ಸ್ವಲ್ಪ ಹೇಳುತ್ತೇನೆ. ಸಾವಧಾನವಾಗಿ ಆಲಿಸಬೇಕು. ನಮ್ಮ ಜಾಗವಿದ್ದದ್ದು ಬೋಗಿಯ ಶೌಚಾಲಯದ ಬಳಿ. ಎಷ್ಟು ಸೊಗಸೋ ಊಹಿಸಿ. ಆದರೆ ಅದೃಷ್ಟವಶಾತ್ ರೈಲು ಓಡುವ ಸಮಯದಲ್ಲಿ ಆ ಕಡೆಯಿಂದ ಯಾವ ನಾತವೂ ಬರದಿದ್ದುದು ನಮ್ಮ ಪುಣ್ಯ. ರೈಲು ಹೊರಟಾಗ ರೈಲಿನ ಕೂಗಿನ ಜೊತೆ ನನ್ನ ಎರಡೂವರೆ ವರ್ಷದ ಮಗನೂ ಕೂಗಬೇಕೇ? ರೈಲಿನಲ್ಲಿ ಮೊದಲ ಬಾರಿ ಪಯಣಿಸುತ್ತಿದ್ದ ಅವನಿಗೆ (ಇದರಲ್ಲಿ ನನಗೂ ಅವನಿಗೂ ಹೆಚ್ಚಿನ ಭೇದವಿಲ್ಲ, ಬಿಡಿ) ಏನೋ ಗಾಬರಿಯಾಗಿ ಜೋರಾಗಿ ಅಳಲಾರಂಭಿಸಿದ. ಇವನಿಂದ ನಮಗೂ ಗಾಬರಿ. ಅಲ್ಲಿ ಇಲ್ಲಿ ತೋರಿಸಿ ಮೈಮರೆಸಿ ಅರ್ಧಘಂಟೆಯ ನಂತರ ತನ್ನ ರೋದನವನ್ನು ನಿಲ್ಲಿಸಿದ. ಇದಾದ ಮೇಲೆ ಇವನೇ ಪರಮರೈಲುಪ್ರಿಯನಾದ ಎನ್ನುವುದು ಬೇರೆಯ ಮಾತು! ಈಗೆಲ್ಲಾದರೂ ಹೊರಗೆ ಹೋದರೆ ರೈಲಿನಲ್ಲಿ ಹೋಗೋಣ ಎಂಬ ಹಠ ಅವನದು!
ಸ್ಲೀಪರ್ ನಲ್ಲಿ ಮಲಗಿ ಹೇಗೆ ನಿದ್ದೆ ಮಾಡುತ್ತಾರೋ ಎಂದು ಕೇವಲ ಊಹೆ ಮಾಡಿದ್ದ ನನಗೆ ನಿದ್ದೆ ಹಿಡಿಯಲು ಹೆಚ್ಚುಕಾಲವಾಗಲಿಲ್ಲ. ಎದ್ದಾಗ ಸುಮಾರು ಏಳು ಘಂಟೆಯಾಗಿತ್ತು. ಆಫೀಸಿಗೆ ಹೋಗುವ ತರಾತುರಿಯಿಲ್ಲವೆಂಬ ನೆಮ್ಮದಿಯಿಂದ ಇನ್ನೂ ಸ್ವಲ್ಪ ಹೊತ್ತು ನಿರಾಳವಾಗಿ ಮಲಗಲು ಸಾಧ್ಯವಾಯ್ತು. ಹಡಗಿನಲ್ಲಿ ಎಂದೂ ಪಯಣಿಸದೇ ಒಮ್ಮೆ ಪಯಣಿಸುವವನನ್ನು ಪ್ರೀತಿಯಿಂದ Land-lubber ಅನ್ನುವ ಹಾಗೆ ನಾನೂ ಒಬ್ಬ home-lubber. ಮನೆಯ ಪ್ರಾಣಿಯಾಗಿರುವ ನನಗೆ ಸ್ನಾನ ಮಾಡದೆ ತಿಂಡಿ ತಿನ್ನಲು ಬಹಳ ಮುಜುಗರ. ದಂತಧಾವನದ ನಂತರ ಕಷ್ಟಪಟ್ಟು ಎರಡು ಮೂರು ಬ್ರೆಡ್ಡಿನ ತುಂಡುಗಳನ್ನು ತಿಂದದ್ದಾಯ್ತು. ನಮ್ಮ ಗುಂಪಿನ ಎಲ್ಲರೂ ಹಾಗೇ ಮಾಡಿದರು, ಮಡಿವಂತರಾದ ಅಜ್ಜಿಯವರನ್ನು ಬಿಟ್ಟು. ರೈಲಿನಲ್ಲಿ ಅದೆಷ್ಟು ಸಲ ಕಾಫಿಯನ್ನೋ ಟೀಯನ್ನೋ ತಿಂಡಿಯನ್ನೋ ಹೊರುತ್ತಾರೆ! ಅವರ ಅಡುಗೆ ಮನೆ ನೋಡಿದ ನಂತರ ನನಗೆ ಅದನ್ನು ತಿನ್ನುವ ಆಸೆ ಸಾಕಷ್ಟು ಕಡಿಮೆಯಾಯ್ತು. ಟೀ-ಕಾಫಿಗಳಿಗೆ ಆ ದೋಷವಿರದ ಕಾರಣ ಹಾಗೆಯೇ ಸ್ವೀಕರಿಸಲ್ಪಟ್ಟವು.
ರಾಯಚೂರಿನ ಕಡೆಗೆ ಹೋದದ್ದು ನಾನು ಹತ್ತು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಹೋದಾಗ. ಆ ಜಾಗದಲ್ಲಿ ಋತು ಎಂಬ ವಿಚಾರ ಇರಲಿಲ್ಲವೆಂಬ ಭಾವನೆ ನನ್ನದು, ಏಕೆಂದರೆ ನಿರಂತರದ ಗ್ರೀಷ್ಮ ಅಲ್ಲಿ. ಜಾಲಿ ಮರಗಳದ್ದೇ ಹಸಿರು. ನೆಲವೆಲ್ಲ ಬರಡಾಗಿ ಕಾಣುವಂಥ ಸಸ್ಯಸಂಪತ್ತಲ್ಲಿ. ಹೀಗೆ ನನ್ನ ಮನಸ್ಸಿನಲ್ಲಿ ದಾರಿಯಲ್ಲಿನ ಸಸ್ಯಶ್ಯಾಮಲತೆಯ ಬಗ್ಗೆಯಿದ್ದ ವಿಚಾರ. ಆದರೆ ಬೆಳಗ್ಗೆ ನನ್ನ ಕಲ್ಪನೆಯನ್ನೇ ತಿರುಗುಮುರುಗು ಮಾಡುವ ದೃಶ್ಯ ಕಾಣಿಸಿತು. ಎಷ್ಟು ಸೊಂಪಾದ ಹಸಿರು! ಅಂಥ ಉಷ್ಣತೆ ಹೆಚ್ಚಿರುವ ಜಾಗಗಳಲ್ಲಿ ಎಂಥ ಹಸಿರು. ಈ ವರ್ಷ ಈಯೆಡೆಗಳಲ್ಲಿ ಸೊಗಸಾಗಿ ಪರ್ಜನ್ಯನ ಕೃಪೆಯಾಗಿದೆ. ಮಹಾರಾಷ್ಟ್ರದಲ್ಲಿ ನಮ್ಮ ರೈಲು ಚಕ್ರವಿಟ್ಟಾಗ ಕಪ್ಪುನೆಲ ಅಲ್ಲಲ್ಲಿ ಮಾತ್ರ ಕಂಡಿತ್ತು; ಎಲ್ಲೆಲ್ಲೂ ಹಸಿರೇ! ಬಂಕಿಮ ಚಂದ್ರರ - "ಸುಜಲಾಂ ಸುಫಲಾಂ.... ಸಸ್ಯಶ್ಯಾಮಲಾಂ ಮಾತರಂ.. ವಂದೇ ಮಾತರಮ್" ಹಾಡಿನ ಸಾಲುಗಳನ್ನು ಅಲ್ಲಲ್ಲಿ ಕಂಡ ನದಿಗಳು, ಮಾವಿನ ಹಣ್ಣಿನ ಕಾಲವಲ್ಲದಿದ್ದರೂ ಹಸಿರಾಗಿ ಕಂಗೊಳಿಸುತ್ತಿದ್ದ ಮಾವಿನ ತೋಪುಗಳು, ಎಲ್ಲೆಲ್ಲೂ ಕಾಣುವ ಹಸಿರು ಗೋಷ್ಠಿಗಾನ ಮಾಡುವ ಹಾಗೆ ಕಂಡವು.
ಅಂತೂ ಶಿರಡಿಯ ಬಳಿಯಲ್ಲಿರುವ ಕೋಪರಗಾಂವ್ ತಲುಪಿದೆವು. ಅಲ್ಲಿಂದ ಶಿರಡಿ ಇಪ್ಪತ್ತು ನಿಮಿಷಗಳ ದೂರದಲ್ಲಿದೆ. ದೊಡ್ಡ ರಿಕ್ಷಾಗಳಲ್ಲಿ ನಮ್ಮ ಸಾಮಾನನ್ನು ಹಾಕಿ "ಭಕ್ತ ನಿವಾಸ" ಎನ್ನುವ ಸ್ಥಲ ತಲುಪುವ ವೇಳೆಗೆ ನಮಗೆಲ್ಲ ಸುಸ್ತಾಗಿತ್ತು. ದಾರಿಯಲ್ಲಿನ ಅಂಗಡಿಗಳನ್ನು ನೋಡುತ್ತಿದ್ದಾಗ ಮಹಾರಾಷ್ಟ್ರದ ಮಧ್ಯೆ ಇದೇನಪ್ಪ ಆಂಧ್ರ ಅನ್ನುವ ಹಾಗೆ ಕಂಡಿತು. ಎಲ್ಲೆಲ್ಲೂ ತೆಲುಗು ಭಾಷಾ ಫಲಕಗಳೇ! ಅಂದು ರಾತ್ರಿ ಕಷ್ಟ ಪಟ್ಟು ಕೋಣೆ ಗಿಟ್ಟಿಸಿಕೊಂಡೆವು. ಆಗಷ್ಟೆ ಜ್ವರ ಬಿಟ್ಟಿದ್ದ ನನಗೆ ಆಂಧ್ರದ ಊಟ ಅಷ್ಟು ರುಚಿಸಲಿಲ್ಲ. ಹಾಗೂ ಹೀಗೂ ಸಾಈ ಬಾಬಾರವರ ಸಮಾಧಿಸ್ಥಾನದ ದೂರದರ್ಶನ ಮಾಡಿ ಬಂದೆವು. ಕೋಣೆ ಸೇರಿ ದಿಂಬಿಗೆ ತಲೆ ಇಟ್ಟದ್ದೇ ತಡ, ನಿದ್ರಾದೇವಿ ಮೈಮನಗಳನ್ನು ಆವರಿಸಿಬಿಟ್ಟಳು.
ಮಳೆಯನ್ನು ಸ್ವಲ್ಪ ಭಯದಿಂದ ನಿರೀಕ್ಷಿಸಿದ್ದ ನಮಗೆ ಭಯನಿವಾರಣೆಯಾಯ್ತು. ನಾವಿದ್ದ ಒಂದು ದಿನವೂ ಅಲ್ಲಿ ಮಳೆಯಾಗಲಿಲ್ಲ. ಇದರಿಂದ ಯಾತ್ರೆ ಸುಗಮವಾಗಿ ಸಾಗಿತು.
ಮರುದಿನ ಬೆಳಗ್ಗೆ ನಾವು ಶನೈಶ್ಚರನ ಸ್ಥಾನವಾದ ಶಿಂಗನಾಪುರಕ್ಕೆ ತೆರಳಿದೆವು. ದಾರಿಯಲ್ಲಿ ಅಲ್ಲಲ್ಲಿ "ರಸವಂತಿ" ಕೇಂದ್ರಗಳು ಕಂಡವು. ಇವು ಕಬ್ಬಿನ ಹಾಲಿನ ಕೇಂದ್ರಗಳು. ಗಾಣದ ಹಾಗಿರುವ ವ್ಯವಸ್ಥೆಯಲ್ಲಿ ಎತ್ತುಗಳಿಂದ ಕಬ್ಬನ್ನು ಹಿಂಡಿ ರಸತೆಗೆಯುತ್ತಾರೆ. ನಮ್ಮೂರಿನ ಕಡೆ ಸಿಗುವ ಹಳ್ಳೀಕಾರನ್ನೋ ಸೀಮೆಯ ಹಸುವನ್ನೋ ಕಂಡ ನನಗೆ ಈ ದೇಶೀಯ ತಳಿ ಅಕ್ಕರೆಯುಕ್ಕಿಸಿತು. ಸ್ವಲ್ಪ ಗುಜ್ಜಾಗಿ ಕಂಡ ಆ ಗಾಣದ ಎತ್ತು ತನ್ನ ಪಾಡಿನ ಕೆಲಸವನ್ನು ಚೆನ್ನಾಗಿ ಮಾಡಿ ಮರದ ನೆಳಲಿನಲ್ಲಿ ಆರಾಮವಾಗಿ ನಿಂತಿತ್ತು. ಬೆಂಗಳೂರಿನಲ್ಲಿ ನಾ ಕುಡಿದ ಕಬ್ಬಿನ ರಸಕ್ಕೆ ಶುಂಠಿ ಸೇರಿಸಿದ್ದ ಜ್ಞಾಪಕವಿರಲಿಲ್ಲ. ಅಲ್ಲಿ ನಿಂಬೆ, ಸ್ವಲ್ಪವೇ ಮಸಾಲೆ ಮತ್ತು ಶುಂಠಿಯನ್ನೂ ಸೇರಿಸಿ ಸೊಗಸಾಗಿ ಮಾಡುತ್ತಾರೆ. (ಅಂದ ಹಾಗೆ ರಾಮನಗರದ ಬಳಿ ಇರುವ ಕಾಮತ್ ಲೋಕರುಚಿಯ ಕಬ್ಬಿನ ಹಾಲಿಗೂ ಶುಂಠಿ-ನಿಂಬೆಗಳನ್ನು ಸೇರಿಸಿರುತ್ತಾರೆ. ಅದೂ ಸೊಗಸಾಗಿರುತ್ತದೆ). ನಾವೆಲ್ಲ ಕಬ್ಬಿನ ರಸವನ್ನು ಸವಿದೆವು. ಬೆಲೆಯೂ ಹೆಚ್ಚಿರಲಿಲ್ಲ. ಐದು ರೂಪಾಯಿಗೆ ಒಂದು ಲೋಟ.
ಸದ್ಯಕ್ಕಿಲ್ಲೇ ವಿರಮಿಸುತ್ತೇನೆ. ಮುಂದಣ ಭಾಗದಲ್ಲಿ ಶಿಂಗನಾಪುರದ ಜೊತೆ ಎಲ್ಲೋರ ಮತ್ತು ಶಿರಡಿಯ ಬಗ್ಗೆ ನೋಡೋಣ.
|| ಇತಿ ಶಮ್ ||
4 comments:
ನೀಲಗ್ರೀವರೆ,
ನಿಮ್ಮ ಬರಹದಿಂದ, ನಾನು ಮಹಾರಾಷ್ಟ್ರದಲ್ಲಿ ಕಳೆದ ಮೂರುವರ್ಷಗಳ ಸುಂದರ ನೆನಪುಗಳು ಮರುಕಳಿಸಿದವು. ಬೇಸಿಗೆಯಲ್ಲಿ ದಿನವೂ ಸಂಜೆ ರಾತ್ರಿ ಎನ್ನದೆ ರಸವಂತಿ ಮಳಿಗೆಗಳಿಗೆ ಹೋಗಿ ಕಬ್ಬಿನ ಹಾಲು ಕುಡಿಯುತ್ತಿದ್ದೆವು ನಾವೆಲ್ಲ.
ಎಲ್ಲೋರದ ನಿಮ್ಮ ಪ್ರವಾಸಕಥನಕ್ಕೆ ಕಾಯುತ್ತಿರುವೆ. ನಾನು ಹಲವು ಚಾಲುಕ್ಯ ಹೊಯ್ಸಳ ಪಲ್ಲವ ರಾಷ್ಟ್ರಕೂಟರ ಹಲವಾರು ದೇವಾಲಯಗಳನ್ನು ನೋಡಿದ್ದೇನೆ. ಆದರೆ, ಕೈಲಾಸಕ್ಕೆ, ಕೈಲಾಸವೇ ಸಾಟಿ!
ಇನ್ನು, ಸಾಯಿ-ಸಾಇ ಬಗ್ಗೆ; ಮರಾಠಿಯಲ್ಲಿ ಸಾಇ, ಆಈ, ಭಾಊ ಇಂತಹ ಪದಗಳು ಸೂಕ್ತವಾಗಿದ್ದರೂ, ಸ್ವರಗಳು ನಡುವೆ stand-alone ಬರದೇ ಇರುವ ಕನ್ನಡ/ತೆಲುಗಿನಂಥ ಭಾಷೆಗಳಲ್ಲಿ, ಸಾಯಿ, ಆಯಿ, ಭಾವೂ ಇವೇ ಸ್ವಲ್ಪ ಚೆನ್ನಾಗಿ ಕಾಣುತ್ತೆ ಎಂದು ನನ್ನ ಅನಿಸಿಕೆ.
-ನೀಲಾಂಜನ
Travel widens one's horizons, indeed.
The next best thing to travelling is reading travelogues - armchair travelling.
Your writing reminded me of my own visit to those parts long ago on a conducted Maharashtra tour at my beloved's initiative.
By the way, Shirdi Saaeee Baba was a Muslim, though I wonder how many Muslims pray there.
Looking forward to the next installment.
ನೀಲಾಂಜನ-ಅವರೇ,
ಪ್ರತಿಕ್ರಯಿಸಿದ್ದಕ್ಕಾಗಿ ಧನ್ಯವಾದಗಳು.
ನಾನು ಸಾಈ ಬಾಬಾ ಎಂದು ಬರೆದದ್ದಕ್ಕೆ ಕಾರಣಗಳು ಹೀಗಿವೆ.
೧. ಸಾಈ ಎನ್ನುವುದ ವಸ್ತುತಃ ಪಾರಸೀ ಶಬ್ದ.
೨. ಶಬ್ದಗಳನ್ನು ಬೇರೆ ಭಾಷೆಗಳಿಂದ ಆಮದು ಮಾಡಿದಾಗ ಸಾಮಾನ್ಯವಾಗಿ ತಮ್ಮ ಮೂಲರೂಪವನ್ನು ಉಳಿಸಿಕೊಳ್ಳುತ್ತವೆ.
೩. ಅದೂ ವಿಶೇಷವಾಗಿ ಕನ್ನಡದಲ್ಲಿ "ಸಾಯಿ" ಎಂದು ಪದವಾಗಲೇ ಇರುವುದರಿಂದ ಅರ್ಥಗಳ ನಡುವೆ conflict ಆಗುತ್ತದೆ.
೪. ಉದಾಹರಣೆಗೆ - ಸಾಯಿ ಬಾಬಾ ಎಂದು ಬರೆದರೆ. ಇಲ್ಲಿ ಬಾ, ಬಂದು ಸಾಯಿ ಎನ್ನುವ ಅರ್ಥ ಮೂಡಿದಾಗ ಆಭಾಸವಾಗುತ್ತದೆ.
೫. ಸಾಈ ಅಂದಾಗ ಉಚ್ಚಾರಣೆ ಸ್ವಲ್ಪ ಕಷ್ಟವಾಗುತ್ತದೆ. ಸಂತರ ಹೆಸರು ಹೇಳುವಾಗ ಈ ಗುರುತು ಮನಸ್ಸಿನಲ್ಲಿರಲಿ ಅನ್ನುವುದು ಇನ್ನೊಂದು ಕಾರಣ.
ಈ ಮೇಲ್ಕಂಡ ಕಾರಣಗಳಿಂದ ನಾನು ಸಾಈ ಅನ್ನುವುದನ್ನೇ ಇಷ್ಟಪಡುತ್ತೇನೆ.
ಆದರೆ ಮಹಾರಾಷ್ಟ್ರದಲ್ಲಿದ್ದವರು ನೀವು. ನಾನೇನಾದರೂ ತಪ್ಪು ಬರೆದರೆ ದಯವಿಟ್ಟು ತಿದ್ದಬೇಕು.
@Aram,
Thanks for the comment. If I remind you of your trip, I will consider this post series worth its while.
And about Sai Baba being a Muslim, I can just say that it has not been conclusively proved if he was a Muslim or a Hindu. I will write about this in my next post.
Yes, there were a few Muslim families that I saw. But the devotee population is overwhelmingly Hindu.
Nice and crisp. Am actually surprised that you are a novice when it comes to train travel.
As always, verrrry informative, like most of your posts. You don't just blabber, like I do :)
Post a Comment