Thursday, October 25, 2007

ಸಾಈ-ಶಿವಾಜಿಯರ ನಾಡಿನಲ್ಲಿ - ಭಾಗ ೨

ಕಳೆದ ಭಾಗದಲ್ಲಿ ಶಿಂಗನಾಪುರದ ದಾರಿಯಲ್ಲಿದ್ದೆವು.

ಶನಿಶಿಂಗನಾಪುರವನ್ನು ತಲುಪಿದಾಗ ಸರಿ ಸುಮಾರು ಹತ್ತೂವರೆ ಘಂಟೆ. ಶನೈಶ್ಚರನ ದೇವಾಲಯವೇ ಇಲ್ಲಿನ ಮುಖ್ಯ ಭಾಗ. ಇಲ್ಲಿನ ಒಂದು ವಿಚಿತ್ರವೆಂದರೆ ಮನೆಗಳಿಗೆ ಬಾಗಿಲುಗಳಿಲ್ಲದಿರುವುದು. ಒಂದು ಯಾತ್ರಾಸ್ಥಳ ಅಥವಾ ದೇವಾಲಯ ಹಳೆಯದಾದಷ್ಟೂ ನನ್ನ ಆಸಕ್ತಿ ಹೆಚ್ಚುತ್ತದೆ. ಇದು ನನ್ನ ಸಮಸ್ಯೆಯೆಂದೇ ನನ್ನ ಭಾವನೆ. ಹಾಗೆ ನೋಡಿದಾಗ, ಎಷ್ಟು ವರ್ಷಗಳಿಂದ ಈ ಸ್ಥಳ ಖ್ಯಾತವಾಗಿದೆಯೋ ನನಗೆ ತಿಳಿಯದು; ಆಗ ಆ ಕುತೂಹಲ ಕೂಡ ಆಗಿರಲಿಲ್ಲ.

ಗಾಡಿಯಿಂದ ಇಳಿದ ಕ್ಷಣ ನಮಗೆ ಕಂಡವರು ಕಾವಿ ಬಣ್ಣದ ಒದ್ದೆ ಬಟ್ಟೆಯನುಟ್ಟ ಹಲವು ಪುರುಷಭಕ್ತರು. ಇವರೆಲ್ಲರೂ ಬಾಡಿಗೆಗೆ ತೆಗೆದ ಕಾವಿಬಟ್ಟೆಯನ್ನುಟ್ಟು ಅಲ್ಲೇ ನಲ್ಲಿಯಿಂದ ತೊಟ್ಟಿಕ್ಕುವ ನೀರಲ್ಲಿ ಮೀಯುತ್ತಾರೆ. ದೇವಾಲಯದ ಒಳಗೆ ಹೋದಾಗ ಮೈ ಸ್ವಲ್ಪ ಒದ್ದೆಯಿರಬೇಕು ಎನ್ನುವುದು ಇಲ್ಲಿನ ಪದ್ಧತಿ. ಒದ್ದೆ ಬಟ್ಟೆಯನ್ನುಟ್ಟು ಎಳ್ಳೆಣ್ಣೆಯನ್ನು ಕೊಳ್ಳುತ್ತಾರೆ - ಶನೈಶ್ಚರನ ಮೂರ್ತಿಯ ಮೇಲೆ ಅಭಿಷೇಕ ಮಾಡಲು. ಈ ಎಣ್ಣೆಯ ಪ್ರಮಾಣ ಒಂದು ತಮಾಷೆ. ಒಬ್ಬರಿಗೆ "ಶನಿಕಾಟ" ಹೆಚ್ಚಿದಷ್ಟೂ ಹೆಚ್ಚಿನ ಎಣ್ಣೆಯಿಂದ ಅಭಿಷೇಕ ಮಾಡುತ್ತಾರೆ. ೫ ಲೀಟರಿನ ಎಣ್ಣೆಯ ಡಬ್ಬವನ್ನು ಒಯ್ದದ್ದನ್ನು ನಾನೇ ನೋಡಿದೆ.

ನಮ್ಮ ಗುಂಪಿನಲ್ಲಿ ಯಾರಿಗೂ ಬಟ್ಟೆ ಕಳಚಿ ಸ್ನಾನ ಮಾಡುವ ಮನಸ್ಸಾಗಲಿಲ್ಲ. ನಮ್ಮ ಚಾಲಕ ಈ ದೇವರಿಗೆ ನಡೆದುಕೊಳ್ಳುವವನೆಂದು ಕಾಣುತ್ತದೆ. ಆದ್ದರಿಂದ ಅವನು ನೀವು ಒದ್ದೆಬಟ್ಟೆ ಉಟ್ಟು ದೇವರ ಮೇಲೆ ಎಣ್ಣೆ ಹಾಕಲೇ ಬೇಕು ಎಂದು ಹಠ ಮಾಡಿದ. ಇದರಿಂದ ನಮಗೆ ಎಣ್ಣೆಯನ್ನು ದೇವರ ಮೇಲೆ ಹಾಕದೆ ಹೋದರೆ ಅಪಚಾರವೋ ಏನೋ ಎಂಬ ಭಾವನೆ ಬಂದಿತು. ಆದ್ದರಿಂದ ಒಂದು ಹತ್ತು ರೂಪಾಯಿಗಳ ಮಟ್ಟಿಗೆ ಗಂಡಸರು ಪ್ರತಿಯೊಬ್ಬರೂ ಒಂದು ಎಣ್ಣೆಯ ಸಣ್ಣ ಚೀಲ ಕೊಂಡೆವು. ಅಂಗಿ ಧರಿಸಿದ್ದ ನಮಗೆ ಮೂರ್ತಿಯ ನಿಕಟವಾದ ದರ್ಶನ ಸಿಗುತ್ತಿರಲಿಲ್ಲ. ಆದ್ದರಿಂದ ದೊಡ್ಡ ಸಾಲಿನ ಹಲವು ಭಕ್ತರಲ್ಲಿ ಕೆಲವರಿಗೆ ನಮ್ಮ ಚೀಲಗಳನ್ನು ಕೊಟ್ಟೆವು. ಅವರೂ ಅದನ್ನು ದೇವಮೂರ್ತಿಯ ಮೇಲೆ ಅಭಿಷೇಕ ಮಾಡಿದರು. ಅಷ್ಟಕ್ಕೆ ನಮಗೆ ಮನಸ್ಸಿನಲ್ಲಿ ಒಂದು ನಿರಾಳವಾದ ಭಾವನೆ. ಆ ಮೂರ್ತಿಯಾದರೋ - ಯಾವ ವಿಶೇಷವಾದ ಶಿಲ್ಪವೂ ಅಲ್ಲ. ಸ್ವಯಂಭೂ ಅಥವಾ ಉದ್ಭವ ಮೂರ್ತಿ ಒಂದು ವಿಚಿತ್ರಾಕಾರದ ಕೃಷ್ಣಶಿಲೆ. ಇದನ್ನೇ ಜನರು ಭಕ್ತಿಯಿಂದ ಶನೈಶ್ಚರನೆಂದು ಆರಾಧಿಸುವುದು. ಭಕ್ತಿಭಾವನೆಯೇ ತಾನೆ ಯಾವ ಆಕಾರಕ್ಕೂ ದೈವತ್ವ ಕೊಡುವುದು?

ದೇವಾಲಯದಲ್ಲಿ ಬಹಳಷ್ಟು ಜನರಿರಲಿಲ್ಲ. ಅರ್ಧಘಂಟೆಯಲ್ಲೇ ದರ್ಶನ ಪೂರೈಸಿ ಗಾಡಿ ಹತ್ತಿದೆವು; ಔರಂಗಾಬಾದಿನೆಡೆಗೆ ಪಯಣಿಸಿದೆವು.

ಶನಿಶಿಂಗನಾಪುರದ ದೇವಾಲಯದ ಮುಂಬಾಗಿಲು

ಮಧ್ಯಾಹ್ನ ಹನ್ನೆರಡೂವರೆಗೆ ನಮ್ಮ ಚಾಲಕ ಬೀಬೀ-ಕಾ-ಮಕ್ಬರಾ ಎಂಬೆಡೆ ನಿಲ್ಲಿಸಿದ. ಈ ಜಾಗದಲ್ಲಿ ತಾಜ ಮಹಲಿನ ಒಂದು "ಮಿನಿ" ರೂಪ ನೋಡಲು ಸಿಗುತ್ತದೆ. ಔರಂಗಜೇಬನ ಪತ್ನಿ (ಬೀಬಿ)ಯ ಗೋರಿ (ಮಕ್ಬರಾ) ಇರುವುದು ಇಲ್ಲಿಯೇ. ಅವಳು ಬದುಕಿರುವಾಗಲೇ ಕಟ್ಟಡವನ್ನು ಕಟ್ಟಿಸಿದ್ದರಂತೆ; ಈಕೆ ಸತ್ತ ಮೇಲೆ ಇಲ್ಲಿ ಮಣ್ಣು ಮಾಡೋಣ ಎಂದು. ಇದು ಕಟ್ಟು ಕಥೆಯೋ ಅಥವಾ ಮತ್ತೊಮ್ಮೆ ಇತಿಹಾಸಜ್ಞ(ಘ್ನ?)ರು ಮಾಡಿರುವ "ಆವರಣ"ವೋ ತಿಳಿಯದು. ಏನನ್ನಿಸಿರಬೇಕು ಆಕೆಗೆ?

"ನೋಡಿ; ಈ ಗೋರಿಯನ್ನು ಇನ್ನೂ ಸ್ವಲ್ಪ ಆಳ ಮತ್ತು ಅಗಲ ಮಾಡಬೇಕಲ್ಲ....ನನಗೆ ಹಾಸಿಗೆಯಲ್ಲಿ ಸ್ವಲ್ಪ ಹೊರಳಾಡೋ ಅಭ್ಯಾ(ಯೋಚಿಸಿ).. ಪರವಾಗಿಲ್ಲ ಬಿಡಿ" - ಹೀಗನ್ನಿಸಿರಬಹುದೇ?


ಮೊದಲೇ ರಣಬಿಸಿಲು. ಎಳೆಯ ಮಕ್ಕಳು ನಮ್ಮೊಡನೆ ಬಂದದ್ದರಿಂದ ಎಲ್ಲರೂ ಅವರ ಬಗ್ಗೆ ಕಾಳಜಿ ಇಟ್ಟವರೇ! ಆದರೆ ನಮಗೆ ಒಳ್ಳೆಯ ಬೇವಿನ ಮರದ ನೆರಳು ಸಿಕ್ಕಿತು. ಅದರ ಕೆಳಗೆ ವ್ಯಾನ್ ನಿಲ್ಲಿಸಿ ನಾಲ್ವರು ನಾವು ಟಿಕೆಟ್ಟು ಪಡೆದು ಒಳಗೆ ನಡೆದೆವು. ಮೊದಲು ಒಂದು ಪ್ರವೇಶದ್ವಾರ. ಇದರ ಮತ್ತು ಗೋರಿಯಿರುವ ಕಟ್ಟಡದ ನಡುವೆ ಮುಕ್ತ ಪ್ರದೇಶ. ಆ ಪ್ರದೇಶದಲ್ಲಿ ಒಂದು ಆಯತಾಕಾರದ ಚಿಲುಮೆಗಳಿಗೆ ಮಾಡಿದ ಜಾಗ. ಇನ್ನು ಹೆಚ್ಚು ವಿವರ ಬೇಡ. ಇದೋ ಕೆಳಗಿದೆ - ಚಿತ್ರ. ಇದರಿಂದ ಸಾವಿರ ಪದಗಳು ಮಿಕ್ಕಿದುವು!ಬೀಬೀ ಕಾ ಮಖ್ಬರಾ

ಇದು "ಮಿನಿ" ತಾಜ್ ಎಂದೇ ಹೆಸರು ಪಡೆದಿದ್ದರೂ ಅಷ್ಟು ಮಿನಿಯೇನಲ್ಲ. ಹೀಗಾಗಿ ತಾಜ್ ಮಹಲನ್ನು ಕಂಡಿಲ್ಲದ ನನಗೆ ತಾಜ್ ಇನ್ನೆಷ್ಟು ಭವ್ಯವಾಗಿರಬಹುದೋ ಎಂದೆನಿಸಿತು. ಇಂಡೋ-ಸ್ಯಾರಸೆನಿಕ್ ಎಂದು ಕರೆಸಿಕೊಳ್ಳುವ ಕಟ್ಟಡದ ಮಾದರಿಯಲ್ಲಿ ಈಗಲೂ ಅಳಿಸದ ಕುಸುರಿ ಕೆಲಸ ಕಂಡಿತು. ಪಿ.ಎನ್.ಓಕರ ತೇಜೋಮಹಾಲಯವೂ ನೆನಪಿಗೆ ಬಂದು ಇದೇನಾದರೂ ದೇವಾಲಯವಿದ್ದಿರಬಹುದೇ ಎಂದು ಶಂಕಿಸುತ್ತ ಕಂಡೆ. ಓಕರ ಈ ಕಲ್ಪನೆ ನನಗೆ ಅಷ್ಟು ಇಷ್ಟವಿಲ್ಲ - ಏಕೆಂದರೆ ದೇವಾಲಯಗಳನ್ನು ಸಾಮಾನ್ಯವಾಗಿ ಧ್ವಂಸಮಾಡಿದವರು ಇಸ್ಲಾಂ ಮತಾಂಧರು. ಅವರು ದೇವಾಲಯದ ಕಟ್ಟಡವೊಂದನ್ನು ಬಹುತೇಕ ಹಾಗೆಯೇ ಬಿಟ್ಟಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಚೆನ್ನಾದ ಕಟ್ಟಡ. ಆ ದಿನಗಳಲ್ಲಿ ಹೇಗಿತ್ತೋ!

ಒಬ್ಬ ಬಂದು ನಿಮ್ಮ ಗೈಡಾಗುತ್ತೇನೆ. ಮುವ್ವತ್ತು ರೂಪಾಯಿ ಕೊಡಿ ಎಂದು ದುಂಬಾಲು ಬಿದ್ದ. ನಾನು ಹೋಗಲಿ ಪಾಪ ಎಂದು ಒಪ್ಪಿದೆ. ಆ ಪ್ರಜೆ ಹಿಂದಿಯಲ್ಲಿ ಹೊರಗಿನ ಮಂಟಪದ ಬಳಿ ನಿಂದು ಒಂದೈದು ನಿಮಿಷ ಅಲ್ಲೇ ಚೂರು-ಪಾರು ಹೇಳಿ ಹೊರಟೇಬಿಟ್ಟ! ಅಲ್ಲಿ ದೂರದಲ್ಲಿ ಗೋರಿ ಇದೆ; ಹೋಗಿ ನೋಡಿ ಅಂದ! ಇವನೆಂಥ ಗೈಡು?

ಇಲ್ಲಿಂದ ನಾವು ಎಲ್ಲೋರದ ಕಡೆಗೆ ಹೊರಟೆವು. ದಾರಿಯಲ್ಲಿ ದೌಲತಾಬಾದ್ ಅಥವಾ ದೇವಗಿರಿ ಕಂಡಿತು. ಈ ಐತಿಹಾಸಿಕಸ್ಥಳಕ್ಕೇ ಮಹಮದ್ ಬಿನ್ ತುಘಲಕ್ ದೆಹಲಿಯಿಂದ ರಾಜಧಾನಿಯನ್ನು ಬದಲಿಸಲು ಇಷ್ಟ ಪಟ್ಟಿದ್ದು. ನಂತರ ಸೋತು ವಾಪಸಾದದ್ದು. ಭವ್ಯವಾದ ಬೆಟ್ಟದ ಮೇಲೆ ಕೋಟೆ ಕಂಡಿತು. ಬೆಟ್ಟವೇ ಕೋಟೆಯಾಗಿದೆ. ಆದರೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ನಮ್ಮ ಚಾಲಕ-ಮಹಾಶಯ ಒಂದು ಛಾಯಾಚಿತ್ರ ತೆಗೆಯುವಷ್ಟು ಸಮಯ ಕೂಡ ಅಲ್ಲಿ ನಿಲ್ಲಿಸಲಿಲ್ಲ. ಅದನ್ನು ಬಿಟ್ಟು ಮುಸುಕಿನ ಜೋಳ ಮಾರುವ ಕಡೆ, ಕೋಟೆಯಿಂದ ದೂರ ತಂದು ನಿಲ್ಲಿಸಿದ. ಇಂಥ ಜಾಗದ ಅಷ್ಟು ಹತ್ತಿರವಿದ್ದ ಆ ಚಾಲಕನಿಗೆ ಅವನದೇ ಜೀವನ. ನಮ್ಮ ದೃಷ್ಟಿಕೋನ ಅವನಿಗೆ ಹೇಗೆ ಬರಬೇಕು? ಸ್ವಲ್ಪ ಬೇಜಾರು ಮಾಡಿಕೊಂಡೇ ಎಲ್ಲೋರದ ಕಡೆ ಸಾಗಿದೆವು.

ನಮ್ಮ ಚಾಲಕನಿಗೆ ಪ್ರಿಯವಾದ ಧಾಬಾದ ಬಳಿ ನಿಲ್ಲಿಸಿದ. ಅಲ್ಲಿ ಮಹಾರಾಷ್ಟ್ರದ ಥಾಲಿ ತಿನ್ನೋಣವೆಂದು ಆರಿಸಿದೆ. ರಸ್ತೆಯ ಕಡೆಯ ಜಾಗವಾದರೂ ರುಚಿಗೆ ತೊಂದರೆಯೇನಿರಲಿಲ್ಲ. ಬೆಳಗ್ಗೆ ಹೆಚ್ಚೇನೂ ತಿನ್ನದಿದ್ದ ನನ್ನ ಮಗ ಕೊನೆಗೆ ಸ್ವಲ್ಪ ಊಟ ಮಾಡಿದ. ಸ್ವಲ್ಪ ಸಮಾಧಾನ ನಮೆಗೆಲ್ಲ. ಆ ಜಾಗದ ಬಳಿ ಭದ್ರ ಮಾರುತಿ ಎಂಬ ಮಲಗಿರುವ ಆಂಜನೇಯನ ದೇವಾಲಯವಿದೆ. ಸಮಯಾಭಾವದಿಂದ ನಾವಲ್ಲಿಗೆ ಹೋಗಲಿಲ್ಲ.

ಸುಮಾರು ಎರಡೂವರೆ ಮೂರುಘಂಟೆಗೆ ಎಲ್ಲೋರಾ ತಲುಪಿದೆವು. ರಾಷ್ಟ್ರಕೂಟರು (ಇವರು ಕನ್ನಡಿಗರೆಂದು ನನಗೆ ಹೆಮ್ಮೆ) ಆರನೆ ಅಥವಾ ಏಳನೇ ಶತಮಾನದಲ್ಲಿ ಬೆಟ್ಟಗಳನ್ನು ಕಡಿಸಿ ಮಾಡಿಸಿದ ಗುಹೆಯ ದೇವಾಲಯಗಳು. ಮೂವತ್ತೈದು ನಲವತ್ತು ಗುಹೆಗಳಿವೆಯೋ ಏನೋ. ನಾವು ಮೊದಲಿಗೆ ಮೂವತ್ತೆರಡನೆಯೋ ಮೂವತ್ತುನಾಲ್ಕನೆಯ ಗುಹೆಗೋ ಹೋದೆವು. ಇಲ್ಲೂ ಈ ಗುಹೆಗಳ ಲಾಂಛನದಂತಿರುವ ಒಬ್ಬ ಗಜರಾಜನನ್ನು ಕಂಡೆವು. ಅಲ್ಲಿ ನೋಡಿದಾಗ ನಮಗೆ ಪದ್ಮಾಸನಸ್ಥರಾದ ಮೂರ್ತಿಗಳು ಕಂಡವು. ಬುದ್ಧನ ಮೂರ್ತಿಗಳೋ, ಜಿನ ಮೂರ್ತಿಗಳೋ ಮೊದಲಿಗೆ ತಿಳಿಯಲಿಲ್ಲ. ನಂತರ ಒಂದೊಂದೇ ವಿಗ್ರಹವನ್ನು ಗಮನಿಸಿದಾಗ ಒಂದರ ಮೇಲೆಯೂ ಬಟ್ಟೆಯ ಆಕಾರ ಕಾಣಿಸಲಿಲ್ಲ. ಇದರಿಂದ, ಇವು ಜೈನ ದೇವಾಲಯಗಳೇ ಎಂಬ ನಿರ್ಧಾರಕ್ಕೆ ಬಂದೆ. ಏಕೆಂದರೆ ಬುದ್ಧನ ವಿಗ್ರಹಗಳಲ್ಲಿ ಸಾಮಾನ್ಯ ಒಂದು ಉತ್ತರೀಯದ ರೀತಿ ಬಟ್ಟೆ ಇರುತ್ತದೆ. ಜಿನರಿಗೆ ಬಟ್ಟೆ optional. ನಾನು ಯೋಚಿಸಿದ್ದೇ ಸರಿಯೆಂದು ೨೪ ತೀರ್ಥಂಕರರ ಒಂದು ಪಟ್ಟಿಯನ್ನು ನೋಡಿದಾಗ ಖಚಿತವಾಯ್ತು.

ಇಲ್ಲಿನ ಶಿಲ್ಪಗಳಲ್ಲಿ ನಮ್ಮ ಬೇಲೂರು-ಸೋಮನಾಥಪುರಗಳಷ್ಟು ಕುಸುರಿ ಕೆಲಸವಿಲ್ಲ. ಆದರೆ ಸ್ವಲ್ಪ ಗಟ್ಟಿತನವನ್ನು ತೋರುತ್ತವೆ. ಅಷ್ಟು ಸುಕುಮಾರವಾಗಿ ಕಾಣುವುದಿಲ್ಲ. ಇಲ್ಲಿನ ಇಂದ್ರ-ಇಂದ್ರಾಣಿಯರು ಎಲ್ಲ ಕಡೆ ದ್ವಾರಪಾಲಕರ ಹಾಗೆ ಶಿಲ್ಪಿತರಾಗಿದ್ದಾರೆ. ಇಂದ್ರ ವೇದದ ಮುಖ್ಯದೇವತೆಗಳಲ್ಲಿ ಒಬ್ಬ. ಇವನನ್ನು ಜೈನರು ತಮ್ಮ ತೀರ್ಥಂಕರರ ದ್ವಾರಪಾಲಕನ ಹಾಗೆ ಮಾಡಿದ್ದಾರೆಂದರೆ ವೇದಮತಕ್ಕಿಂತ ಜಿನಮತ ದೊಡ್ಡದೆಂಬಂತೆ ಧ್ವನಿ. ಆದರೆ ಹಿಂದೂ ದೇವಾಲಯಗಳಲ್ಲಿ ಅಷ್ಟು ಭವ್ಯವಾದ ಇಂದ್ರನ ಶಿಲ್ಪವನ್ನು ನಾನು ನೋಡಿಯೇ ಇಲ್ಲ. ಅಲ್ಲಲ್ಲಿ ಧ್ಯಾನಮಾಡುವ ಸ್ಥಾನಗಳಿದ್ದ ಹಾಗೆ ಕಂಡವು. ದಿಗಂಬರರೇ ಇಲ್ಲಿದ್ದದ್ದು ಎಂದು ನನಗನ್ನಿಸುತ್ತದೆ.

ಅಜಂತಾದಲ್ಲಿ ವರ್ಣಚಿತ್ರಗಳ ಬಗ್ಗೆ ಕೇಳಿದ್ದೆ. ಆದರೆ ಎಲ್ಲೋರಾದಲ್ಲೂ ಅಲ್ಲಲ್ಲಿ ಮಾಸಲುಬಣ್ಣದ ಸುಂದರ ಚಿತ್ರಗಳಿವೆ. ಅವುಗಳನ್ನು ಅಲ್ಲೇ ಇರುವ ಮೇಲ್ವಿಚಾರಕರು ತಮ್ಮ ಬಳಿ ಇರುವ ವಿದ್ಯುದ್ದೀಪದ ಬೆಳಕಿನಿಂದ ತೋರಿಸುತ್ತಾರೆ. ಆಮೇಲೆ ಸ್ವಲ್ಪ ಅವರಿಗೆ ದುಡ್ಡು ಕೊಡಬೇಕು. ಆದರೆ ಆ ದುಡ್ಡು ನಿಜಕ್ಕೂ ಸಾರ್ಥಕವಾಯ್ತು. ಕಾಣದಂಥ ಬಣ್ಣದ ಚಿತ್ರಗಳು ಕಂಡವು. ಇಂದ್ರಸಭೆಯಲ್ಲಿ ನೀಲಾಂಜನೆಯ ನೃತ್ಯದ ಹಾಗೆ ಕಂಡ ಚಿತ್ರ ಕಂಡಿತು. (ಈ ಘಟನೆಯಿಂದಲೇ ಆದಿನಾಥ ಋಷಭದೇವನಿಗೆ ವೈರಾಗ್ಯಪ್ರಾಪ್ತಿಯಾದದ್ದು; ಅವನು ಜಿನನಾದದ್ದು).


ಬಾಹುಬಲಿಯ (?) ವರ್ಣಚಿತ್ರ

ಇಲ್ಲಿಂದ ಒಂದು ಶಿವನ ಗುಹಾದೇವಾಲಯಕ್ಕೆ ಹೋದೆವು (೧೭ನೇ ಗುಹೆ?). ಇಲ್ಲಿ ಪ್ರದಕ್ಷಿಣೆ ಮಾಡಿದಾಗ ದಕ್ಷಯಜ್ಞವಿನಾಶವೇ ಮೊದಲ್ಗೊಂಡು ಕೈಲಾಸದಲ್ಲಿ ಆನಂದವಾಗಿರುವ ಶಿವ-ಪಾರ್ವತಿಯರ ವಿವಿಧ ಉಬ್ಬು ಶಿಲ್ಪಗಳು ಕಂಡವು. ಇದರ ಪಾರ್ಶ್ವದಲ್ಲಿಯೇ ಬೆಟ್ಟದ ಮೇಲಿಂದ ಝರಿಯೊಂದು ಕೆಳಗಿನ ಕೊಳಕ್ಕೆ ಧುಮುಕುತ್ತಿತ್ತು. ಈ ದೃಶ್ಯ ಚೇತೋಹಾರಿಯಾದರೂ ಇದನ್ನು ಅನುಭವಿಸುವುದಕ್ಕೆ ನಮಗೆ ಸಮಯವಿಲ್ಲದೇ ಹೋಯ್ತಲ್ಲ; ನಾವೀಗಲೇ ಹೊರಡಬೇಕಲ್ಲ ಎಂಬ ಖಿನ್ನತೆಯೂ ಉಂಟಾಯ್ತು.ಗುಹೆಯೊಂದರ ಪಕ್ಕದಲ್ಲಿ ಬೀಳುತ್ತಿರುವ ಝರಿ

ಎರಡು-ಮೂರು ಘಂಟೆಗಳಲ್ಲಿ ನೋಡುವಂಥ ಸ್ಥಾನವಲ್ಲ ಎಲ್ಲೋರ. ಒಂದು ವಾರವಾದರೂ ಇದ್ದು ಒಂದೊಂದು ಗುಹೆಯನ್ನೂ ಅರ್ಧ ದಿನ ನೋಡುವಷ್ಟಿದೆ ಇಲ್ಲಿ. ಅದೂ ನನ್ನಂಥ ತಿಳಿಯದವರಿಗೆ. ಸಂಶೋಧನೆ ಮಾಡುವವರನ್ನಂತೂ ಬಿಡಿ - ಒಂದು ಚಿತ್ರದ ಅಥವಾ ಶಿಲ್ಪದ ಬಗ್ಗೆಯೇ ಒಂದು ಪೇಪರ್ ಬರೆದುಬಿಟ್ಟಿರುತ್ತಾರೆ.

ಇದಾದ ಮೇಲೆ ಎಲ್ಲೋರದ ಕೇಂದ್ರವೆಂದು ಪರಿಗಣಿಸಲ್ಪಡುವ ಕೈಲಾಸನಾಥದೇವಾಲಯಕ್ಕೆ ಬಂದೆವು. ಈ ದೇವಾಲಯದ ರಿಪೇರಿ ಕೆಲಸ ನಡೆಯುತ್ತಿತ್ತು. ಒಳಗೆ ನಡೆದಾಗ ಒಂದು ಗಜಲಕ್ಷ್ಮಿಯ ಉಬ್ಬು ಶಿಲ್ಪ ಕಾಣುತ್ತದೆ - ಸರಿಯಾಗಿ ಮುಖ ಗೋಚರಿಸುವುದಿಲ್ಲ. ಇದರ ಎಡಕ್ಕೆ ಸಾಗಿದಾಗ ದೇವಾಲಯದ ಒಳ ಆವರಣ ಕಾಣಿಸುತ್ತದೆ. ಇಲ್ಲಿ ಭವ್ಯವಾದ ಎರಡು ಸ್ತಂಭಗಳಿವೆ. ವಿಜಯಸ್ತಂಭಗಳೋ ಅಥವಾ ರಾತ್ರಿಯ ವೇಳೆ ಬೆಳಕಿಗಾಗಿ ಉಪಯೋಗಿಸಲ್ಪಡುತ್ತಿದ್ದ ಸ್ತಂಭಗಳೋ ತಿಳಿಯದು. ಎಡ ಕಂಭದ ಮುಂದೆ ಬಂದರೆ ಮೆಟ್ಟಿಲುಗಳು ಕಾಣುವವು. ಇವನ್ನು ಏರುತ್ತ ಹೋದಾಗ ಗರ್ಭಗುಡಿಯ ಮಟ್ಟಕ್ಕೆ ಬರುತ್ತೇವೆ. ಗರ್ಭಗುಡಿಯಲ್ಲಿ ಕಗ್ಗತ್ತಲು. ಜೈನಗುಹೆಗಳಲ್ಲಿದ್ದ ಹಾಗೆ ಇಲ್ಲೂ ಮೇಲ್ವಿಚಾರಕರು ಆಸಕ್ತರಿಗೆ ದೀಪದ ಮೂಲಕ ಶಿಲ್ಪ-ಚಿತ್ರಗಳ ದರ್ಶನ ಮಾಡಿಸುತ್ತಿದ್ದರು. ಗರ್ಭಗುಡಿಯ ಬಾಗಿಲ ಎದುರು ಒಂದು ಮಂಟಪ. ಅಲ್ಲೇ ನಂದಿಯಿರುವುದು. ಪುಟ್ಟ ನಂದಿ.

ಗರ್ಭಗುಡಿಯ ಗರ್ಭದಲ್ಲಿ ತನಗೂ ಈ ಶಿಲ್ಪವೈಭವೋಪೇತ ದೇವಾಲಯಕ್ಕೂ ಸಂಬಂಧವೇ ಇಲ್ಲವೆಂಬಂತೆ ಲಿಂಗರೂಪಿ ಶಿವನಿದ್ದಾನೆ. ಕಲೋಪಾಸಕರಿಗೆ ಇದೇನು ಈ ಸಾದಾ ಲಿಂಗಕ್ಕೆ ಇಷ್ಟು ವೈಭವದ ದೇವಾಲಯವೇ ಅನ್ನಿಸಬಹುದು. ಆದರೆ ಈ ವಿರೋಧಾಭಾಸದಲ್ಲೇ ಸೊಗಸಿರುವುದು. ಗೀತೆಯಲ್ಲಿನ "ಪದ್ಮಪತ್ರಮಿವಾಂಭಸಾ"ದ ಶಿಲ್ಪರೂಪಕವಾಗಿ ಕಂಡಿತು ಈ ಸಂಗತಿ. ಶಿವನ ಸುಂದರ ಚಿತ್ರವೂ ಇದೇ ತಾನೆ? ಕೈಲಾಸದ ಬಳಿಯಲ್ಲೇ ಧನಿಕರಲ್ಲಿ ಧನಿಕನೆನಿಸಿದ ಕುಬೇರನ ಅಲಕಾವತಿಯಿದೆ. ಹೇಗಿದ್ದಿರಬೇಕು ಕುಬೇರನ ವೈಭವ? ಆದರೆ ಅದನ್ನೂ ಮೀರಿಸಿದ್ದಲ್ಲವೆ ಶಿವನ ವೈರಾಗ್ಯ-ತಪೋ-ಮೂರ್ತಿ? ಇಂಥ ಕುಬೇರನು ಮಣಿದದ್ದು ಭಸ್ಮೋದ್ಧೂಲಿತವಿಗ್ರಹನಾದ ಶ್ಮಶಾನವಾಸಿಯಾದ ಗಜಚರ್ಮಧಾರಿಯಾದ ಪರಮವೈರಾಗ್ಯಮೂರ್ತಿಯಾದ ಶಿವನಿಗಲ್ಲವೇ? ಈ ಸಂಗತಿಯನ್ನೇ ಯಾವುದೇ ಶಿವದೇವಾಲಯ ತೋರುತ್ತದೆ. ಇದು ವಿಶೇಷವಾಗಿ ಕೈಲಾಸವನ್ನೇ ನೆನಪಿಸುವ ಕೈಲಾಸನಾಥನ ದೇವಾಲಯವಾದ್ದರಿಂದ ಒಂದೆಡೆ ಶಿಲ್ಪಸೌಷ್ಠವದ ವೈವಿಧ್ಯದ ಅದ್ಭುತ ಗಾನದ ಜೊತೆ ಇನ್ನೊಂದೆಡೆ ವೈರಾಗ್ಯದ ಆಧಾರಶ್ರುತಿಯೂ ಶೋಭಿಸುತ್ತವೆ.

ಶಿಲ್ಪವೈವಿಧ್ಯದ ಮಧ್ಯೆ ನಿರ್ಲಿಪ್ತನಾಗಿರುವ ಕೈಲಾಸನಾಥ

ಇದಾದ ಮೇಲೆ ಒಳಗಣ ಪ್ರಾಕಾರದಲ್ಲಿ ಅಡ್ಡಾಡುವಾಗ ಮಹಾಭಾರತದ ಒಂದು ಉಬ್ಬು ಚಿತ್ರ ಕಂಡಿತು. ಜೊತೆಗೆ ಶಿವನ ಅವತಾರಗಳ, ವಿಷ್ಣುವಿನ ಅವತಾರಗಳ ಉಬ್ಬುಶಿಲ್ಪಗಳು ಕಾಣುತ್ತವೆ.


ಮಹಾಭಾರತದ ದೃಶ್ಯ - ಕೈಲಾಸನಾಥನ ದೇವಳದಲ್ಲಿ


ನನ್ನ ಮಗನಿಗಂತೂ ಪರಮಾನಂದವಾಗಿತ್ತು. ಓಡಲು ಆರಂಭಿಸಿದ. ಅವನನ್ನು ಹಿಡಿಯಲು ಹೋಗಿ ನನ್ನ ಪತ್ನಿಗೆ ಸಾಕಾಯ್ತು; ನನಗೂ ಸಹ. ಆದರೆ ಗುಂಪಿನಲ್ಲಿ ಹೋದದ್ದರಿಂದ ನಮ್ಮ ಅತ್ತೆಯವರೂ ಬಂದಿದ್ದರು. ಇವನನ್ನು ನೋಡಿಕೊಂಡು ಒಂದೆಡೆ ಕುಳಿತಿದ್ದರು. ಅವರು ಮೊದಲೇ ಎಲ್ಲೋರವನ್ನು ನೋಡಿದ್ದರಿಂದ ನಮಗೂ ಸುಲಭವಾಗಿ ನೋಡಿ ಬರಲು ಸಾಧ್ಯವಾಯ್ತು. ಒಂದು ಇಲಿ ಹೋದದ್ದನ್ನು ಗಮನಿಸಿ ಅದರ ಹಿಂದೆ ಓಡಲು ಮೊದಲಿಟ್ಟಿದ್ದ. ಇದನ್ನು ನೋಡಿದ ನಮಗೆಲ್ಲರಿಗೂ ನಗುವಿನ ಸುಗ್ಗಿ.

ಅಲ್ಲಲ್ಲಿ ಬಣ್ಣಗಳೂ ಕಂಡವು. ಈ ದೇವಾಲಯಕ್ಕೆ ಚೆನ್ನಾಗಿ ಬಣ್ಣ ಬಿದ್ದ ಒಂದು ಕಾಲ ಇದ್ದಿರಬೇಕು. ಆದರೂ ಒಂದು ಜಿಜ್ಞಾಸೆ ಮೂಡದೇ ಇರುವುದಿಲ್ಲ. ಇಂಥ ಭವ್ಯದೇವಾಲಯದಲ್ಲಿ ಪೂಜೆಗಳು ಯಾವಾಗ ನಿಂತವು? ಏತಕ್ಕಾಗಿ? ಪಕ್ಕದಲ್ಲಿ ಛತ್ರಗಳ ಹಾಗಿನ ದೊಡ್ಡ ಕೋಣೆಗಳಿವೆ. ಅಲ್ಲಿ ಯಾರು ಉಳಿದುಕೊಳ್ಳುತ್ತಿದ್ದರು ? ಆಗ ಎಂಥ ಸುಗಂಧದ್ರವ್ಯಗಳಿಂದ ಕೂಡಿದ ಮಂದಾನಿಲ ಪ್ರವಹಿಸುತ್ತಿದ್ದಿರಬಹುದು? ಉತ್ಸವಗಳು ಹೇಗಿದ್ದಿರಬಹುದು? ಈಗ ಬಾವುಲಿಗಳಿಂದ ನಾತ ಮಾತ್ರ ಬರುತ್ತದೆ. ಪಾಳು ಬಿದ್ದ ಮನೆ-ಮಠ-ದೇವಳಗಳನ್ನು ಕಂಡಾಗ ನನ್ನನ್ನು ಈ ಭಣಭಣ ಭಾವನೆ ಆವರಿಸಿಕೊಂಡುಬಿಡುತ್ತದೆ. ಇದನ್ನು ಕಂಡೇ ನಮ್ಮ ಭರ್ತೃಹರಿ "ಕಾಲಾಯ ತಸ್ಮೈ ನಮಃ" ಎಂದು ಉದ್ಗರಿಸಿದ್ದಿರಬಹುದು.

ಎಲ್ಲೋರದ ಗುಹಾದೇವಾಲಯಗಳ ಸುತ್ತಲೂ ಹಸುರು ಮರಗಳು ಕಾಣುತ್ತವೆ. ತಂಪು ಪಾನೀಯ, ತಿಂಡಿಗಳ ಮಾರಾಟ ದೇವಾಲಯದಿಂದ ಸಾಕಷ್ಟು ದೂರದಲ್ಲಿವೆ. ಆದರೆ ಇಲ್ಲಿನ ಶೌಚಾಲಯಗಳ ವ್ಯವಸ್ಥೆ ಬಹಳ ಶೋಚನೀಯ. ಭಾರತದೇಶ ಪ್ರವಾಸೋದ್ಯಮದಲ್ಲಿ ಮುಂದುವರೆಯಲು ಇಷ್ಟ ಪಟ್ಟಿದೆ. "Incredible India" ಜಾಹಿರಾತುಗಳು ಮುಖಕ್ಕೆ ರಾಚುವಷ್ಟು ಹೆಚ್ಚಿವೆ. ಇವನ್ನು ನೋಡಿಕೊಂಡು ಯಾರಾದರೊಬ್ಬ ಪ್ರವಾಸಿ ಬಂದರೂ (ನಮ್ಮ ದೇಶದವರೇ ಅಗಲಿ, ವಿದೇಶೀಯರೇ ಆಗಲಿ) ಅವರಿಗೆ ಮೂಲಭೂತಸೌಕರ್ಯಗಳಿಲ್ಲದಿರುವುದು ನಿಜವಾಗಿಯೂ ವಿಷಾದದ ಸಂಗತಿ.

ಇದಾದ ಮೇಲೆ ಹತ್ತಿರದಲ್ಲಿರುವ ಹನ್ನೆರಡು ಜ್ಯೋತಿರ್ ಲಿಂಗಗಳಲ್ಲಿ ಒಂದಾದ ಘೃಷ್ಣೇಶ್ವರಕ್ಕೆ ಹೋದೆವು. ಸಂಜೆ ಐದೂವರೆಯೋ ಏನೋ. ಈ ದೇವಾಲಯದಲ್ಲಿ ವಿಶೇಷವೇನೆಂದರೆ ಎಲ್ಲರೂ ಲಿಂಗದ ರೂಪದಲ್ಲಿರುವ ದೇವರನ್ನು ತಮ್ಮ ತಮ್ಮ ಇಚ್ಛಾನುಸಾರಿಯಾಗಿ ಮುಟ್ಟಿ ಪೂಜೆ ಮಾಡಬಹುದು. ಅಂಗಿಗಳನ್ನು ಗಂಡಸರು ಕಳಚಬೇಕು, ಅಷ್ಟೆ. ಪೂಜೆ ಸಾಮಗ್ರಿಗಳನ್ನು ನಮ್ಮ ಗುಂಪಿನಲ್ಲಿ ನಮ್ಮ ಅತ್ತೆಯವರೋ, ಮಾವನವರೋ ಕೊಳ್ಳುತ್ತಿದ್ದರು.ಮಿಕ್ಕೆಲ್ಲರೂ ಪೂಜೆ ಮಾಡಿದೆವು. ಗರ್ಭಗುಡಿಯೊಳಗೆ ಹಲವು ಜನರಾಗಲೇ ಮಂತ್ರ ಹೇಳುತ್ತಾ ಕುಳಿತಿದ್ದರು. ನನಗೆ ಇಲ್ಲಿ ಬಹಳ ಹೊತ್ತು ಏಕಾಗ್ರತೆಯಿಂದ ನಿಲ್ಲಲಾಗಲಿಲ್ಲ. ಜನರ ಗಲಾಟೆಯಿಂದಲೋ ಏನೋ. ಜ್ಯೋತಿರ್ ಲಿಂಗಗಳ ಬಗ್ಗೆ ಸ್ವಲ್ಪ ಇದಕ್ಕಿಂತಲೂ ಹೆಚ್ಚಾಗಿ ಮುಂದಿನ ಕಂತಿನಲ್ಲಿ ಬರೆಯುತ್ತೇನೆ.


ಘೃಷ್ಣೇಶ್ವರ-ದೇವಾಲಯದ ದೃಶ್ಯ

ಶಿರಡಿಗೆ ಮರಳಿದಾಗ ರಾತ್ರಿ ಒಂಭತ್ತಾಗಿತ್ತು. ಎಲ್ಲರೂ ಸಮೀಪದ ಆಂಧ್ರದ ಸಸ್ಯಾಹಾರಿ ಹೋಟೆಲಿನಲ್ಲಿ ಊಟ ಮಾಡಿ ನಮ್ಮ ಕೋಣೆಗಳಿಗೆ ತೆರಳಿದೆವು.

ಮುಂದಿನ ಭಾಗದಲ್ಲಿ - ಸಾಈ ಬಾಬಾ ಮತ್ತು ಆತನ ಶಿರಡಿಯ ಬಗ್ಗೆ ನನಗೆ ಕಂಡ ಹಾಗೆ ಬರೆಯುತ್ತೇನೆ.

|| ಇತಿ ಶಮ್ ||

4 comments:

nIlagrIva said...

Neelanjana,

I re-posted this with new pictures and the older post got deleted. So your earlier comment went off. Sorry about that.

Can I see your comment again?

Thanks,
-nIlagrIva

Aram said...

Nice pix, good narration.

Very pertinent question - why did the inhabitants abandon everything and where did they go?

Made me recall our own visit there exactly a decade ago. Nothing seems to have changed.

Kiran said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

neelanjana said...

oh boy! I don't remeber my earlier comments very specifically. Anyway, your post looks really good with the pictures now.

I visited Ellora (vErUL, as called in marAThi) about 13 years ago. That time I started from cave 1 (buddhist side) and could cover upto cave 20 or so. I did not see the Jaina caves for want of time, and your post gave me a good view of those caves. Thanks!

BTW, the dEvagiri fort which you missed, is also very good. There are trapways and tunnels. When I went there, I had a nice guide with me. The bad part of the trip is no digital camera at that time - and so no great pictures.

The Grishneshwar temple is sculturally the best jyotirlinga temple among the three I have seen- Ellora, Bhimashankar and Varanasi.

-neelanjana

-neelanjana