Tuesday, May 08, 2007

ಮೊನ್ನೆ ಮೂಡಿದ ನೆನಪುಗಳು

ಈಚೆಗೆ ಕೆಲಸ ಎಷ್ಟು ಹೆಚ್ಚಾಗಿದೆಯೆಂದರೆ ಬ್ಲಾಗಿಸಲು ಸಾಧ್ಯವೇ ಆಗುತ್ತಿಲ್ಲ. ಇಂದು ಶುಕ್ರವಾರದ ಸಂಜೆಯಾಗಿರುವುದರಿಂದ ಏನಾದರೂ ಬರೆಯಬೇಕೆಂಬ ಚಪಲ. ಬರೆಯುವುದಕ್ಕೆ ಸಮಯ ಕೂಡ ಇದೆ. ಏಕೆಂದರೆ ಒಟ್ಟಿಗೆ ನಾಲ್ಕು ದಿನ ರಜೆ ಬಂದಿದೆ. ಬ್ಲಾಗಿಸಲು ಸಾಧ್ಯವಾಗದ ದಿನಗಳಲ್ಲಿ ಅದೆಷ್ಟು ವಿಚಾರಗಳು ಬ್ಲಾಗ್-ಯೋಗ್ಯವಾಗಿ ಕಂಡವೋ! ದಾರಿಯಲ್ಲಿ ಕಾಣುವ ಮರದ ಹಸಿರಿರಬಹುದು, ಮುಂಗಾರು ಮಳೆಯ ಮೋಡ ಕವಿದ ಆಕಾಶವಿರಬಹುದು. ಬೆವರು ಸುರಿಸುವ ಹೋಟೆಲಿನ ಮಾಣಿಯಿರಬಹುದು, ಮುಗಿಯದ ಟ್ರಾಫಿಕ್ಕಿನಲ್ಲಿ ಮೂಡಿದ ಒಳ್ಳೆಯ ಯೋಚನೆಯಿರಬಹುದು. ಅಥವ ವರ್ಜೀನಿಯಾ ಟೆಕ್ಕಿನ ಮಾರಣ ಹೋಮದ ಬಗ್ಗೆಯಿರಬಹುದು; ಅದು ಮೂಡಿಸಿದ ಜುಗುಪ್ಸೆಯ ಬಗ್ಗೆಯಿರಬಹುದು. ಎಲ್ಲೆಡೆ ಮೊಳಗುವ ಮುಂಗಾರು ಮಳೆ ಚಿತ್ರದ ಸುಂದರ ಗೀತೆಗಳಿರಬಹುದು; ಶಂಕರಜಯಂತಿಯ ಬಗ್ಗೆಯಿರಬಹುದು; ಪೂ.ಚಂ.ತೇ ಅವರ ನಿಧನದ ಬಗ್ಗ್ಎಯಿರಬಹುದು, ಶೃಂಗೇರಿಯ ಜಗದ್ಗುರುಗಳ ಬೆಂಗಳೂರು ಪ್ರವಾಸದ ಬಗ್ಗೆಯಿರಬಹುದು, ರಾಮನವಮಿಯ ಕಚೇರಿಯ ಸಂಗೀತದ ಸೊಬಗಿರಬಹುದು. ಆದರೆ ಇವುಗಳ ಬಗ್ಗೆ ಬರೆಯಲು ವ್ಯವಧಾನವಿದ್ದರೆ ತಾನೆ? ಅಷ್ಟು ಬಿಡುವಿಲ್ಲದ ಕೆಲಸ! ಇರಲಿ. ದುಃಖಿಸಿ ಪ್ರಯೋಜನವಿಲ್ಲ. ಈಗ ತಲೆಯ ಹೊಕ್ಕ ವಿಷಯವೊಂದಿದೆ. ಅದರ ಬಗ್ಗೆ ಬರೆದರಾಯ್ತು!

ಇಂದು ನನ್ನ ಪತ್ನಿ ತನ್ನ ಮೊಬೈಲನ್ನು ಮನೆಯಲ್ಲಿ ಮರೆತಿದ್ದಳು. ಕೆಲಸಕ್ಕೆ ನನ್ನ ಮೊಬೈಲನ್ನೇ ಒಯ್ದಳು. ನಾನು ಮೊಬೈಲಿಲ್ಲದೆ ನನ್ನ ಕಛೇರಿಗೆ ತೆರಳಿದೆ. ಬಹಳ ದಿವಸಗಳಾದ ಮೇಲೆ ಜೇಬಿನಲ್ಲಿ ಮೊಬೈಲಿಲ್ಲದೇ ಹೋಗಿತ್ತು. ತೀರ ಅಭ್ಯಾಸವಾಗಿರುವ ವಸ್ತು ನಮ್ಮನ್ನು ಕ್ಷಣಕಾಲ ಅಗಲಿದಾಗಲೇ ತಾನೆ, ನಾವು ಅದಕ್ಕೆ ಅಷ್ಟು ದಾಸರಾಗಿದ್ದೇವೆಯೆಂದೋ ಅಥವಾ ಅದನ್ನು ಅಷ್ಟು ಪ್ರೀತಿಸುತ್ತೇವೆಯೆಂದೋ ತಿಳಿಯುವುದು?

ಫೋನಿಲ್ಲದೆ ನನ್ನ ಮನಸ್ಸು ಹದಿನೈದು ವರ್ಷಗಳ ಹಿಂದೆ ಓಡಿತ್ತು - ಸಿನಿಮಾದ ಫ್ಲಾಶ್ ಬ್ಯಾಕ್ ರೀತಿಯಲ್ಲಿ. ಆಗ ಮೊಬೈಲಿರಲಿ, ನಮ್ಮ ಮನೆಯಲ್ಲೇ ದೂರವಾಣಿಯೇ ಇರಲಿಲ್ಲ. ಅದಕ್ಕೆ ಬುಕ್ ಮಾಡಿ ವರ್ಷಗಳೇ ಕಳೆದಿದ್ದವು. ಆದರೂ ನಮ್ಮ ಮನೆಗೆ ಫೋನ್ ಬಂದಿರಲಿಲ್ಲ. ಆದರೂ ಜೀವನ ನಡೆಯುತ್ತಿರಲಿಲ್ಲವೇ? ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಹಠಾತ್ತನೇ ಬರುತ್ತಿದ್ದರು. ಈಗ ಬರುವ ಹಾಗೆ ಫೋನ್ ಮಾಡಿ ಬರುತ್ತಿರಲಿಲ್ಲ. ಅದರಿಂದ ಒಂದು ರೀತಿಯ ಸಂತೋಷದ ಅಚ್ಚರಿ ಉಂಟಾಗುತ್ತಿತ್ತು. ಈ ನಡುವೆ ಹಾಗಾಗುವುದು ಬಹಳ ಕಡಿಮೆ. ನಾನು ಮನೆಗೆ ಯಾರಾದರೂ ಬಂದರೆ ಫೋನ್ ಮಾಡಿಯೇ ಬರಲಿ ಎಂದು ಎಣಿಸುತ್ತೇನೆ. ನಾನೂ ಫೋನ್ ಮಾಡಿಯೇ ಮತ್ತೊಬ್ಬರ ಮನೆಗೆ ಹೋಗುವುದು. ಯಾಕೆ ಪಾಪ ಅವರಿಗೆ ತೊಂದರೆ ಎಂದು ನನಗನ್ನಿಸುವುದು. ಜೊತೆಗೆ ಮನೆಯಲ್ಲಿಲ್ಲದಿದ್ದರೆ? ಇದೇ ಅವರಿಗೂ ಅನ್ನಿಸುವುದು. ಹಿಂದೆ ಒಬ್ಬರ ಮನೆಗೆ ಹೊರಟಾಗ ಈ ಯೋಚನೆಗಳು ಇರುತ್ತಿರಲಿಲ್ಲವೇ?

ಆಗ ಇನ್ನು ಸ್ವಲ್ಪ ಮುಂದಾಲೋಚನೆ ಮಾಡುವ ಅವಶ್ಯಕತೆಯಿರುತ್ತಿತ್ತು. ಈ ಗೊತ್ತಾದ ದಿನ ನಿಮ್ಮ ಮನೆಗೆ ಬರುವೆ ಎನ್ನುವ ಒಬ್ಬರು ಮಿತ್ರರು ಹೇಳಿದಾಗ ಮನಸ್ಸಿನಲ್ಲಿ ಜ್ಞಾಪಕವಿರುತ್ತಿತ್ತು. ಇಲ್ಲವೇ ಡೈರಿಯಲ್ಲಿ ಬರೆದಿಡುತ್ತಿದ್ದೆವು. ಈಗ ಇದಕ್ಕೆ ತದ್ವಿರುದ್ಧ. ಎಲ್ಲವೂ ಆಗಲೇ! ಕಾರಿನಲ್ಲಿಯೇ ಕುಳಿತು ಹೋಟೆಲಿನ ರಿಸರ್ವೇಶನ್ ಮಾಡಿಸುವುದು, ಬ್ಯಾಂಕಿನ ವ್ಯವಹಾರವನ್ನು ಮನೆಯಿಂದ ಮಾಡುವುದು. ಆಧುನಿಕ ಬೆಳೆವಳಿಗೆ ಚೆನ್ನಾಗಿಲ್ಲವೆಂದಲ್ಲ! ಆದರೆ ಆ ಹಳೆಯ ರೀತಿಯಲ್ಲಿದ್ದ ಸೊಬಗು ಹೋಗಿದೆಯೆಂದು ಸ್ವಲ್ಪ ಖಿನ್ನತೆ. ಎಲ್ಲವೂ ಆ ಕ್ಷಣದಲ್ಲೇ ಮಾಡಬಹುದಾದ್ದರಿಂದ ನಾವು ಸಮಯವನ್ನು ಉಳಿಸುವೆವೇ? ಖಂಡಿತ ಇಲ್ಲ. ಹಿಂದೆ ಯಾರನ್ನು ನೋಡಲು ಹೋದರೂ ಈಗಿನ ಹಾಗೆ "ಇಲ್ಲಾ ರಿ. ನಾನು ತುಂಬಾ ಬಿಝಿ." ಎಂದು ಒದರುತ್ತಿರಲಿಲ್ಲ. ಅವರಿಗೆ ಸಮಯವಿರುತ್ತಿತ್ತು. ಫೋನಿಲ್ಲದ ಆ ಕಾಲದಲ್ಲಿ, ತುಂಬ ಕಾರುಗಳ ಕಾರುಬಾರು ಇರದ ಆ ಕಾಲದಲ್ಲಿ, ಮನೆಗಳು ಚಿಕ್ಕದಾಗಿದ್ದರೂ ಮನಸ್ಸುಗಳು ದೊಡ್ಡದಾಗಿದ್ದ ಆ ಕಾಲದಲ್ಲಿ - ಬಹುತೇಕ ಎಲ್ಲರಿಗೂ ಸಮಯವಿರುತ್ತಿತ್ತು. ಈಗ ಎಲ್ಲವನ್ನೂ ಅಲ್ಲೇ ಮಾಡಲು ಸಾಧ್ಯವಿದ್ದರೂ ನಮ್ಮ ಬಳಿ ಬೇರೆಯವರಿಗೆ ಹೋಗಲಿ, ನಮಗಾಗಿಯೇ ಸಮಯವಿಲ್ಲ. ನಿರಂತರ ಹಾರಾಟ...ನಿರಂತರ ಓಡಾಟ... ಬೇಗ ಕೆಲಸ ಮುಗಿಸಲು ವ್ಯವಸ್ಥೆಯಿದ್ದರೂ ನಮ್ಮ ಬಳಿ ಸಮಯ ಉಳಿಯುವುದಿಲ್ಲ. ಎಂಥ ವಿಪರ್ಯಾಸ!

ನಾವು ನಮ್ಮೂರಿನ ಬೇರೆಯ ಭಾಗಗಳ ಮತ್ತು ಬೇರೆ ಊರಿನ ನೆಂಟರಿಷ್ಟರನ್ನು ಸಂಪರ್ಕಿಸಲು ಪತ್ರಗಳನ್ನು ಬರೆಯುತ್ತಿದ್ದೆವು. ಅದೂ ಕೈಯಲ್ಲಿ. ಈಗಿನ ಹಾಗೆ ಕೀಲಿಮಣೆಯ ಬರಹ ಇರಲಿಲ್ಲ. ಈಗಲೂ ಈ-ಮೈಲ್ ನಲ್ಲೂ ಅದೇ ವಿಷಯ ಬರೆಯಬಹುದು. ಆದರೆ ಬಹಳಷ್ಟು ಜನರು ಮಾತನಾಡುವುದನ್ನೇ ಅಪೇಕ್ಷಿಸುತ್ತಾರೆ. ಇದರಿಂದ ಜನರ ಬರವಣಿಗೆಯ ಶಕ್ತಿ ಕುಂಠಿತವಾಗುತ್ತಿದೆಯೇ? ಇಲ್ಲಿ ಒಂದು ವಿಚಿತ್ರದ ಸಂಗತಿಯೇ ನಡೆಯುತ್ತಿದೆಯೆನ್ನಬಹುದು. ಯಾವಾಗಲಾದರೂ ಯಾರನ್ನಾದರೂ ಮಾತನಾಡಿಸುವುದು ಆಧುನಿಕ ತಂತ್ರಜ್ಞಾನದ ಸಾಧನೆಯಾದರೆ ಮತ್ತೊಬ್ಬರನ್ನು ಮುಖೇನ ಮಾತನಾಡಿಸುವುದು ತಲತಲಾಂತರಗಳಿಂದ ಮಾನವನಲ್ಲಿ ಹುದುಗಿದ ಆ ಸಂವಹನದ ಕೋರಿಕೆ, ಬೇಡಿಕೆ. ಆದ್ದರಿಂದ ಬರೆಯಲು ಮರೆಯುತ್ತಿದ್ದೇವೆಯಾದರೂ ಅದಕ್ಕಿಂತ ಮೂಲಭೂತವಾದ ರೀತಿಯಲ್ಲಿಯೇ, ಬರಿಯ ಮಾತಿನಿಂದಲೇ ಸಂಪರ್ಕಿಸುತ್ತಿದ್ದೇವೆ. ಆದರೂ ಮನಸ್ಸಿನ ಮೂಲೆಯಲ್ಲಿ - ಹಳೆಯ ರೀತಿಯಲ್ಲಿ ಮೊದಲು ಉ.ಕು.ಸಾಂ ಅಥವಾ "ಕ್ಷೇಮ" ಬರೆದು, "ತೀರ್ಥರೂಪರಾದ" ಮುಂತಾದ ರೀತಿಗಳಲ್ಲಿ ಸಂಬೋಧಿಸಿ, ಬರವಣಿಗೆ ಅರ್ಥವಾಗುವ ರೀತಿಯಲ್ಲಿ ಸ್ಫುಟವಾಗಿ ಬರೆಯುವ ಅಭ್ಯಾಸ ನಮ್ಮಿಂದ ದೂರವಾಗಿದೆಯೆಂದು ಕಂಡಾಗ - ಏನೋ ಕಳೆದುಕೊಂಡ ಹಾಗಾಗಿ ಮನಸ್ಸು ಮ್ಲಾನವಾಗುತ್ತದೆ.

ನದಿಯಲ್ಲಿ ಹಳೆಯ ನೀರು ಹರಿದು ಮುಂದೆ ಹೋಗಲೇಬೇಕು. ಹೊಸ ನೀರು ಹರಿದು ಬರಬೇಕು. ಕಾಲದ ಹರಿಯುವಿಕೆಯಲ್ಲಿ ಕೂಡ ಹೀಗೆಯೇ! "ಕೆಟ್ಟ ಕಾಲವಪ್ಪ ಇದು!" ಎಂದು ಹಲುಬುವವರು ಹಲವರಿದ್ದರೂ ಅವರಿಗೆ ನಾನು ಹೇಳುವುದು ಇದನ್ನೇ - "ನಿಮ್ಮ ಯೌವನದಲ್ಲಿ, ನಿಮ್ಮ ಹಿರಿಯರೂ ಹೀಗೇ ಅಂದದ್ದನ್ನು ಮರತಿರೋ?" ಎಂದು. ನನ್ನ ಮೇಲಿನ ಬರವಣಿಗೆ "ಕಾಲ ಕೆಟ್ಟಿತು" ಅನ್ನುವವರ ರೀತಿಯಾಗಿ ಕಂಡಿರಬಹುದು. ಆದರೆ ಅದು ಇರುವುದರ ಬಗ್ಗೆ ಬೇಸರವಲ್ಲ. ಹಳೆಯ ರೀತಿಯಲ್ಲಿಯೂ ಇದ್ದ ಸ್ವಲ್ಪ ಸೊಗಸು ಮಾಯವಾಗಿರುವ ಬಗೆಗಿನ ಮರುಕವಷ್ಟೆ.

"ಬದಲಾವಣೆಯೇ ಶಾಶ್ವತ" - ಈ ವಾಕ್ಯದಷ್ಟು ಕ್ಲೀಷೆ ಮತ್ತೊಂದಿಲ್ಲದಿದ್ದರೂ ಅದು ಎಷ್ಟು ಸತ್ಯವೆಂದು ಒತ್ತಿ ಹೇಳಬೇಕಾದುದೇನಿಲ್ಲ. ಕಾಲ ಜಾರುತ್ತದೆ. ನಿನ್ನೆಯ ಮಕ್ಕಳು, ಇಂದಿನ ಯುವಕರಾಗುತ್ತಾರೆ. ನಿನ್ನೆಯ ಯುವಕರು ಇಂದಿನ ವೃದ್ಧರಾಗಿ, ನಿನ್ನೆಯ ವೃದ್ಧರು ಕೇವಲ ಇಂದಿನ ಮತ್ತು ಮುಂದಿನ ನೆನಪಾಗಿ ಉಳಿಯುವುದರಲ್ಲಿ ಕಾಲದ ನಿಃಶಬ್ದ ಹರಿಯುವಿಕೆ ತಿಳಿಯುವುದು. "ಇತಿಹಾಸದ ಹಿಮದಲ್ಲಿ" ಹುದುಗಿರುವ "ಸಿಂಹಾಸನ ಮಾಲೆಗಳೆ"ಲ್ಲ ಕಾಲ ಮುಟ್ಟಿ ಮುಂದೆ ಹೋದ ಮೈಲಿಗಲ್ಲುಗಳು.

ನನಗೆ ಬಹಳ ಇಷ್ಟವಾದ ಕವಿ-ದಾರ್ಶನಿಕರಲ್ಲಿ ಒಬ್ಬರಾದ ಭರ್ತೃಹರಿಯ ವೈರಾಗ್ಯ ಶತಕದ ಪದ್ಯದೊಂದಿಗೆ ನನ್ನ ಇಂದಿನ ಗದ್ಯಕ್ಕೆ "ಇತಿ ಶಮ್" ಎನ್ನುವೆ.

ಸಾ ರಮ್ಯಾ ನಗರೀ ಮಹಾನ್ ಸ ನೃಪತಿಃ ಸಾಮಂತಚಕ್ರಂ ಚ ತತ್ |
ಪಾರ್ಶ್ವೇ ತಸ್ಯ ಚ ಸಾ ವಿದಗ್ಧಪರಿಷತ್ ತಾಶ್ಚಂದ್ರಬಿಂಬಾನನಾಃ |
ಉದ್ವೃತ್ತಃ ಸ ಚ ರಾಜಪುತ್ರನಿವಹಸ್ತೇ ಬಂದಿನಸ್ತಾಃ ಕಥಾಃ |
ಸರ್ವಂ ಯಸ್ಯ ವಶಾದಗಾತ್-ಸ್ಮೃತಿಪಥಂ ಕಾಲಾಯ ತಸ್ಮೈ ನಮಃ ||

ಏನು ರಮ್ಯ ನಗರ! ಆ ಮಹಾರಾಜ ! ಏನವನ ಸಾಮಂತರು!
ಆಯೆಡೆ ವಿದ್ವನ್ಮಂಡಲಿಯಿರೆ, ಈಯೆಡೆ ಚಂದ್ರಮುಖಿಯರು!
ಏನಾ ರಾಜಕುವರವರ್ಗದ ಗರ್ವ! ಆ ಹೊಗಳುಭಟ್ಟರಾಕಥೆಗಳೋ!
ಈಯೆಲ್ಲ ಯಾರ ವಶದಿಂ ಕೇವಲ ಸ್ಮೃತಿಯಾಗಿಹುದೋ ಆ ಕಾಲಗೆ ನಮೋ ನಮಃ!

5 comments:

Anonymous said...

ಹೌದು ಬದಲಾವಣೆ ಅತ್ಯವಶ್ಯಕ. ಅದು ಅನಿವಾರ್ಯ ಕೂಡ. ಆದರೂ ಕೈಯಲ್ಲಿ ಪತ್ರ ಬರೆಯುವ ಮಜ ಈ-ಮೇಲ್ ನಲ್ಲಿ ಸಿಗೊಲ್ಲ. ಹಳೆಯ ಪತ್ರಗಳನ್ನು ಕೆದಕಿ ಓದಿದರೆ ಸಿಗುವ ಸಂತೋಷ...ಆಹ್
ಎಂದಿನಂತೆ, ಸುಂದರ ಬರವಣಿಗೆ.....ಒಳ್ಳೆಯ ಓದು.

parijata said...

ಬಹಳ ಚೆನ್ನಾಗಿ ಬರೆದಿದ್ದೀರಿ. "ಕಾಲದ ನಿಃಶಬ್ದ ಹರಿಯುವಿಕೆ" ಇಷ್ಟವಾಯಿತು. ಚಿಕ್ಕವಳಿದ್ದಾಗ ನನ್ನ ಬಂಧುಗಳಿಗೆಲ್ಲಾ ಪತ್ರಗಳನ್ನು ಬರೆಯುವ ರೂಢಿಯನ್ನು ನನ್ನ ತಾಯಿ ಮಾಡಿಸಿದ್ದರು. ಯಾರಿಂದಲಾದರೂ ಪತ್ರ ಬಂದರೆ ಅದೆಷ್ಟು ಆತುರರಾಗಿ ಓದುತ್ತಿದ್ದೆವು!

ಒಂದಂತೂ ನಿಜ. ಈಗ ನನಗೆ ಬಂಧು-ಮಿತ್ರರಿಂದ ಈ-ಮೈಲ್ ಬಂದರೂ ಬಹಳ ಸಂತೋಷವಾಗುತ್ತದೆ. ಪತ್ರದಲ್ಲಿನ ಆತ್ಮೀಯತೆ ಇಲ್ಲವಾದರೂ ಇಷ್ಟರ ಮಟ್ಟಿಗಾದರೂ ಸಂಪರ್ಕವಿದೆಯಲ್ಲ ಎಂದು ಸಮಾಧಾನವಾಗುತ್ತದೆ.

'ಮಹಾಬ್ರಾಹ್ಮಣ' ದಲ್ಲಿ ಕಾಲನನ್ನು "ಜಗನ್ನಾಥನ ತೇರು" ಎಂದು (ವಿಶ್ವಾಮಿತ್ರನಿಗೆ ಕಾಲನ ಸಾಕ್ಷಾತ್ಕಾರವಾದಾಗ)ಬಣ್ಣಿಸಿರುವುದು ನೆನಪಿಗೆ ಬಂತು.

ಸುಪ್ತದೀಪ್ತಿ suptadeepti said...

ನಮಸ್ಕಾರ, ನಿಮ್ಮ ತೋಟಕ್ಕೆ ಬರುತ್ತಿದ್ದೆನಾದರೂ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲು. ಕಾರಣ- ಇದು ಕನ್ನಡದಲ್ಲಿರುವ ಲೇಖನವೆಂದೇ? ನನಗೇ ಗೊತ್ತಿಲ್ಲ.
ಸುಂದರ ನಿರೂಪಣೆಯ ವಿಚಾರ ಪೂರಿತ-ಪ್ರೇರಿತ ಲೇಖನ. ನಿಜ, ಹಿಂದಿನದೆಲ್ಲ ಕಳೆಯುತ್ತಿದೆಯೆಂಬ ನಿರಾಶೆ ಕೆಲವೊಮ್ಮೆ ಕಾಡಿದರೂ ಇನ್ನು ಕೆಲವಾರು ವರ್ಷಗಳಲ್ಲಿ ಈಗಿನ ಬ್ಲಾಗ್ ತಂತ್ರಜ್ಞಾನವೇ "ಪಳೆಯುಳಿಕೆ" ಆದಾಗ ಮತ್ತೆ ಅದೇ ಅನಿಸಬಹುದು. ಆಗಿನ ಹೊಸದನ್ನು ಆಸ್ವಾದಿಸುವ ಹೊತ್ತಿಗೆ ಇನ್ನೇನೋ ಬಂದಿರುತ್ತದೆ. ಹುಟ್ಟಿನಿಂದ ಬದಲಾಗುತ್ತಲೇ ಇರುವ ಜಗದಲ್ಲಿ ಯಾವುದು ಶಾಶ್ವತ? ಉತ್ತರ ಬೇಕಿಲ್ಲದ ಪ್ರಶ್ನೆಯಿದು.

Anonymous said...

ನೀಲಗ್ರೀವರೆ,
ಎಂದಿನಂತೆ, ಅದ್ಭುತವಾದ ಬರವಣಿಗೆ.
ವೃದ್ಧರಲ್ಲಿ ಎರಡು ವಿಧ: ವಯೋವೃದ್ಧರು, ಜ್ಞಾನವೃದ್ಧರು.
ನೀವು ಎರಡನೆ ವಿಧಕ್ಕೆ ಸೇರಿದವರು.
ನಮಸ್ಕಾರಗಳೊಡನೆ
ಬೆಳ್ಳೂರ್ ರಾಮಕೃಷ್ಣ

nIlagrIva said...

ಡಿ.ಎಸ್, ಪಾರಿಜಾತ - ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಹಳೆಯ ಪತ್ರಗಳನ್ನೋದುವುದು, ಮತ್ತು ಹೊಸ ಪತ್ರಗಳಿಗಾಗಿ ಕಾಯುವುದು, ಎರಡೂ ಮಧುರಕಾರ್ಯಗಳು!

ಸುಪ್ತದೀಪ್ತಿ - ನನ್ನ ಬಡಬ್ಲಾಗ್-ತಾಣಕ್ಕೆ ಸ್ವಾಗತವಿರಲಿ. ನಿಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು. ನಿಮ್ಮ ಹಾಗೆ ಕವನ ಬರೆಯಲು ನನಗೆ ಬರುವುದಿಲ್ಲ. ಏನೋ ಹೀಗೆ ಒಮ್ಮೊಮ್ಮೆ ಭಾವನೆ ತೋಡಿಕೊಳ್ಳುತ್ತೇನೆ.

ಬೆಳ್ಳೂರ್-ಅವರೆ! ಸದ್ಯ! ವೃದ್ಧರ ಬಗ್ಗೆ ನಿಮ್ಮ ಅನಿಸಿಕೆ ಓದಲು ಆರಂಭಿಸಿದಾಗ "ಏನಪ್ಪಾ ಇದು" ಅಂದುಕೊಂಡೆ. ಸದ್ಯ, ವಯೋವೃದ್ಧನನ್ನಾಗಿ ಈಗಲೇ ಅಕಾಲದಲ್ಲಿ ಮಾಡಲಿಲ್ಲವಲ್ಲ! ಇನ್ನು ಸ್ವಲ್ಪ ದಿನ ಕಳೆದ ಮೇಲೆ - ವೃದ್ಧತ್ವ - ಮೊದಲನೆ ರೀತಿಯದು ಬರುವುದು ಖಚಿತ.

ಆದರೆ ನಿಮ್ಮದು ನನ್ನ ಲೇಖನದ ಬಗ್ಗೆ ದೊಡ್ಡ ಮಾತಾಯ್ತು! ನನ್ನ ಬರವಣಿಗೆ ಅದಕ್ಕೆ ಅರ್ಹವೇ? ಏನಾದರೂ ಆದರೆ ನಾನು ನಿಶ್ಚಯವಾಗಿ ಕಾಲಕ್ರಮದಲ್ಲಿ ವಯೋವೃದ್ಧನಾಗಬಲ್ಲೆ. ಜ್ಞಾನವೃದ್ಧತ್ವ ಬರಲು ಇನ್ನೂ ಸಮಯವಿದೆ, ಆದರೆ ಅದರ ಸಂಭಾವನೆ ಕಡಿಮೆ! ಪ್ರತಿಕ್ರಿಯೆಗಾಗಿ ಧನ್ಯವಾದಗಳು.