Wednesday, March 11, 2009

ಕಾಮನ ಹುಣ್ಣಿಮೆಯೋ ಕೃಷ್ಣನ ರಂಗಿನಾಟವೋ

ನಿನ್ನೆ ಫಾಲ್ಗುಣ ಮಾಸದ ಪೂರ್ಣಿಮೆ. ಅಂದರೆ ಹೋಳಿಯ ಹುಣ್ಣಿಮೆ. ಅಪರೂಪವಾಗಿ ರಜೆಯ ದಿನ. ಹೋಳಿಯ ದಿನ ರಜೆಯಿದ್ದ ನೆನಪೇ ಇಲ್ಲ ನನಗೆ. ನಮ್ಮ ಮನೆಯಲ್ಲಿ (ನಾವು ಬಯಲು ಸೀಮೆಯವರು) ಹೋಳಿಯೆಂದರೆ ಅಂಥ ವಿಶೇಷ ಆಚರಣೆಯೇನೂ ಇಲ್ಲ. ಒಂದು ದೇವರ ಪೂಜೆ, ನಂತರ ಒಬ್ಬಟ್ಟಿನ ಊಟ. ಮನೆಯ ಮಕ್ಕಳಿಗೆ ಸಂಜೆ ಆರತಿ. ಇದೇ ವಿಶೇಷವೆಂದು ಹಲವರಿಗನ್ನಿಸಬಹುದು. ಆದರೆ ನೆನ್ನೆ ನನಗೆ ಅಷ್ಟು ವಿಶೇಷವಾಗಿ ತೋರಲಿಲ್ಲ. ಹೋಳಿಯ ಮಹತ್ತ್ವವೇನೆಂಬುದರ ಬಗ್ಗೆ ಆಲೋಚನೆಗೆ ತೊಡಗಿದೆ. ಆಗ ನನಗೆ ತೋಚಿದ್ದನ್ನು ಬರೆಯಬೇಕೆನ್ನಿಸಿ ಇಗೋ ಬರೆದಿದ್ದೇನೆ.

ಎಲ್ಲರಿಗೂ ಹೋಳಿಯೆಂದರೆ ಕಣ್ಣ ಮುಂದೆ ಬರುವುದು ಗುಲಾಲಿನಾಟ. "ಬಂಧನ" ಚಿತ್ರದ ಸುಹಾಸಿನಿಯ ಮೇಲೆ ವಿಷ್ಣುವರ್ಧನ್ ಸುರಿಯುವ ತರಾವರಿ ಬಣ್ಣದ ನೀರು ನೆನಪಿಗೆ ಬರುತ್ತದೆ. ಕಿರಿತನದಲ್ಲಿ ಹೊರಗೆ ಹೋಗಲು ಭಯ - ಎಲ್ಲಿ ಬಣ್ಣ ಮೆತ್ತಿಸಿಕೊಳ್ಳುತ್ತೇನೋ ಎಂದು. ನಾನು ಚೆನ್ನಾಗಿ ಹೋಳಿಯಾಡಿದ್ದು ಒಮ್ಮೆಯೋ ಎರಡು ಬಾರಿಯೋ ಇರಬಹುದು. ನಂತರ ಮೈಮೇಲಿನ ಬಣ್ಣ ಹೋಗಲು ನಾಲ್ಕೈದು ದಿನಗಳೇ ಹಿಡಿದಿದ್ದವು. ಆದರೆ ಈಗ ಎರಡು ತೊಂದರೆಗಳು ಬಂದಿವೆ. ಮೊದಲನೆಯದು - ಬಣ್ಣಗಳು ಜೈವಿಕ ಮೂಲದ್ದಾಗದೆ ಕೇವಲ ರಾಸಾಯನಿಕ ಮೂಲದ್ದಾಗಿವೆ. ಇದರಿಂದ ಚರ್ಮಕ್ಕೆ, ಕಣ್ಣಿಗೆ ಬರುವ ತೊಂದರೆಗಳು ಹಲವು. ಆದರೂ ಬೆಲೆ ಕಡಿಮೆಯೆಂದು ಇದನ್ನೇ ಬಳಸುತ್ತಾರೆ. ಎರಡನೆಯದು - ಹೋಲಿಯ ನೆಪವೊಡ್ಡಿ ಹಲವೆಡೆ ಹರೆಯದ ಹುಡುಗಿಯರ ಮೈಕೈ ತಾಗಿಸಿ ಮೋಜುಮಾಡುವ ಪರಿ ಸಾಧಾರಣವಾಗಿತ್ತು. ಈಗ ಹೆಣ್ಣುಮಕ್ಕಳು ಹೊರಗೆ ಹೋಗದೇ ಇರುವ ದಿನಗಳಲ್ಲಿ ಹೋಳಿಯೂ ಪ್ರಮುಖವಾದುದು. ಆಸಿಡ್ ದಾಳಿಯನ್ನೇ ಮಾಡುತ್ತಾರಂತೆ. ಹಬ್ಬದ ಈ ಮೋಜಿನ ಸಂಗತಿ ವಿಕೃತಗೊಂಡದ್ದು ನಿಜಕ್ಕೂ ವಿಷಾದನೀಯ. 

ಈ ಗುಲಾಲಿನಾಟದ ಐತಿಹ್ಯವೇನೆಂದು ಯೋಚಿಸಹೊರಟೆ. ಶ್ರೀಕೃಷ್ಣನ ಕಿಶೋರಾವಸ್ಥೆಯ ಲೀಲೆಯೇ ಇದಕ್ಕೆ ಪ್ರಮುಖವಾದ ಸ್ಫೂರ್ತಿ ಎಂದು ನನ್ನ ಈಗಣ ಅನಿಸಿಕೆ. ಉತ್ತರಭಾರತದಲ್ಲಿ ಹೋಳಿಯಂದು ಕೃಷ್ಣನು ರಾಧೆ ಮೊದಲಾದ ಗೋಪಿಯರೊಡನೆ ನಡೆಸಿದ ಬಣ್ಣದಾಟದ ನೆನಪು ಮೂಡಿಸಲು ಬಂದ ಹಬ್ಬ. ಬಂಗಾಳ ಮೊದಲಾದ ಕೃಷ್ಣಪಂಥದ ಪ್ರಾಮುಖ್ಯವಿರುವ ಸ್ಥಲಗಳಲ್ಲಿ ಇದೇ ಹಬ್ಬ. ಕೃಷ್ಣನ ಪೂಜೆಯ ಜತೆಗೆ ಹೋಳಿಯ ಓಕುಳಿಯಾಟ. ರಾಧೆಯ ಸ್ಥಾನವೆಂದು ಖ್ಯಾತವಾದ ಬರ್ಸಾನಾ ದಲ್ಲಿಯೂ ಇದು ದೊಡ್ಡ ಹಬ್ಬ. ಆದರೆ ಭಾಗವತ-ವಿಷ್ಣು ಪುರಾಣ-ಹರಿವಂಶ-ಮಹಾಭಾರತವೇ ಮೊದಲಾದ ಗ್ರಂಥಗಳಲ್ಲಿ ರಾಧೆಯ ಹೆಸರೂ ಇಲ್ಲ. ಆದ್ದರಿಂದ ರಾಧೆಯ ಹೆಸರೂ ದಕ್ಷಿಣದಲ್ಲಿ ಅಷ್ಟು ಚಾಲ್ತಿಯಲ್ಲಿರಲಿಲ್ಲ. ಇದರಿಂದ ಈ ಬಣ್ಣದಾಟ ದಕ್ಷಿಣದಲ್ಲಿ ಈಚೆಗೆ ಕಂಡಿದೆ ಎಂದು ಧೈರ್ಯವಾಗಿ ಹೇಳಬಹುದು.

ಬದಲಾಗುತ್ತಿರುವ ಬೆಂಗಳೂರಿನಲ್ಲಿ ಈಚೆಗೆ ಕಾಣಿಸದ ಹೋಳಿಯ ಆಚರಣೆಯೆಂದರೆ ಹಳೆಯ ವಸ್ತುಗಳ ದಹನ. ನಮ್ಮ ಕಡೆ ಹೋಳಿಯೆಂಬ ಹೆಸರು ಬಂದದ್ದೇ ಈಚೆಗೆ. ಕಾಮನ ಹುಣ್ಣಿಮೆಯೋ ಅಥವಾ ಕಾಮನ ಹಬ್ಬವೆಂದೇ ಇದನ್ನು ಕರೆಯುತ್ತಿದ್ದುದು. ಒಂದಿಪ್ಪತ್ತು ವರ್ಷಗಳ ಹಿಂದೆ ಬೀದಿಯ ಸುತ್ತಮುತ್ತಲಿನ ಪಡ್ದೆ ಹುಡುಗರು ಸುತ್ತಲ ಮನೆಗಳ ಹಳೆಯ ಚಾಪೆ, ಪೊರಕೆ ಮೊದಲಾದ ಒಣಗಿದ, ಕೆಲಸಕ್ಕೆ ಬಾರದ ವಸ್ತುಗಳನ್ನಾಯ್ದು ರಸ್ತೆಯ ಚೌಕದಲ್ಲಿ "ಕಾಮಣ್ಣನ ಮಕ್ಕಳು, ಕಳ್ಳ ಸೂ.. ಮಕ್ಕಳು, ಏನೇನು ಕದ್ದರು" ಎಂದೆಲ್ಲ ಕಿರುಚುತ್ತ ಸುಡುವ ಸಡಗರ ಈಗ ಕಾಣೆಯಾಗಿದೆ. ನಿಮ್ಮಲ್ಲಿ ಇದು ಈಚೆಗೆಲ್ಲಾದರೂ ಕಂಡಿದ್ದರೆ ನನಗೆ ದಯವಿಟ್ಟು ತಿಳಿಸಿ. 

ಪ್ರಭಾವಿ-ಸಂಸ್ಕೃತಿಯ ನುಸುಳುವಿಕೆಯ ಉದಾಹರಣೆಯಾಗಿ ಇದನ್ನು ಕಾಣಬಹುದು. ಹಿಂದಿನ ನಮ್ಮ "ದೇಸಿ" ಸಂಸ್ಕೃತಿಯ ಕಾಮನ ಹಬ್ಬ ಹಿಂದಕ್ಕೆ ಸರಿದು ಉತ್ತರ ಭಾರತದ ಸಿನಿಮಾ ಶೋಕಿಯ ಬಣ್ಣದ ಹಬ್ಬ ಇದೇ ಹೋಳಿಯ ಆಚರಣೆ ಅನ್ನುವುದರ ಮಟ್ಟಿಗೆ ಮನೆ ಮಾಡಿದೆ. ಇನ್ನೊಂದು ಚೆನ್ನಿಲ್ಲವೆಂದಲ್ಲ - ಆದರೆ  ನಮ್ಮ ವಸ್ತುವನ್ನು ಕಳೆದುಕೊಂಡಂಥ ಕೊರಗು ಎಲ್ಲೋ ಕಾಡುತ್ತದೆ.

ಈ ಆಚರಣೆಯ ಹಿಂದೆ ಕೆಲವಾರು ಕಥೆಗಳಿವೆ - ರೋಚಕ ಕಥೆಗಳು ಕೂಡ. 

ಮೊದಲನೆಯದು - ಕಾಮ ದಹನ. ಶಿವನು ತನ್ನ ಮೂರನೆ ಕಣ್ಣಿನಿಂದ ತನ್ನಲ್ಲೇ ಕಾಮವನ್ನು ಕೆರಳಿಸಿದ ಮದನನನ್ನು ಸುಟ್ಟ ಕಥೆ ಸುವಿದಿತ. ಈ ಸಂಗತಿಯನ್ನು ಪುರಾಣಗಳಲ್ಲಿ ಮತ್ತು ಕಾಲಿದಾಸನ ಅಮೋಘವಾದ ಕುಮಾರಸಂಭವದಲ್ಲಿ ಚೆನ್ನಾಗಿ ಕಾಣಬಹುದು. ಇಲ್ಲಿನ ವಿಶೇಷಾಂಶಗಳು ನನಗೆ ತಿಳಿದ ಮಟ್ಟಿಗೆ ಎರಡು. ಒಂದು - ಶಿವನಂಥ ದೇವಾಧಿದೇವತೆಯೂ ಒಂದು ಕ್ಷಣಕಾಲ ಕಾಮದಲ್ಲಿ ಸಕ್ತನಾಗಬಹುದೆಂದರೆ ಕಾಮದ ಶಕ್ತಿಯ ಸ್ವರೂಪ ನಮಗೆ ತಿಳಿಯಬರುವುದು. ಎರಡನೆಯದು - ಕಾಮವನ್ನು ನಿಃಶೇಷವಾಗಿ ಸುಡಲು ಸಾಧ್ಯವೆಂಬುದು. ಬುದ್ಧನು ಮಾರನನ್ನು ಗೆದ್ದ ಬಗೆಯೂ ಇದಕ್ಕೆ ಸಂವಾದಿ.  ದೇವೀ ಉಪಾಸಕರು ಆರಾಧಿಸುವ ಶ್ರೀಲಲಿತಾತ್ರಿಪುರಸುಂದರಿಯ ಕಥೆಯೂ ಇಲ್ಲಿಂದಲೇ ಆರಂಭ. ಸುಟ್ಟ ಕಾಮನ ಬೂದಿಯಿಂದ ಭಂಡಾಸುರನ ಜನನ ಇತ್ಯಾದಿಗಳನ್ನು ಲಲಿತೋಪಾಖ್ಯಾನದಲ್ಲಿ ಕಾಣಬಹುದು. ಕಾಮದ ಶಕ್ತಿಯನ್ನು ತೋರುತ್ತಲೇ ಅದನ್ನು ಮೀರಲು ಸಾಧ್ಯವೆಂದು ಹೇಳುವ ಈ ಕಥೆ ಬಹಳ ಸಮಂಜಸವಾಗಿದೆ. ಹೀಗೆ ದಕ್ಷಿಣದಲ್ಲಿ ಶಿವನ ಪೂಜೆಯನ್ನೂ ಈ ದಿನ ಮಾಡುತ್ತಾರೆ.

ಇನ್ನೊಂದು ಕಥೆ - ಹಿರಣ್ಯಕಶಿಪುವಿಗೆ ಸಂಬಂಧಿಸಿದ್ದು. ತನ್ನ ಮಗನಾದ ಪ್ರಹ್ಲಾದನನ್ನು ಸುಡಲು ತನ್ನ ಬೆಂಕಿಯು ಸುಡಲಾರದ ತಂಗಿಯಾದ ಹೋಲಿಕೆಯನ್ನು ಕೇಳಿಕೊಳ್ಳುತ್ತಾನೆ. ಹೋಲಿಕಾ ಪ್ರಹ್ಲಾದನನ್ನು  ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಗ್ನಿಪ್ರವೇಶ ಮಾಡಿದಾಗ ಹರಿಭಕ್ತನಾದ ಪ್ರಹ್ಲಾದನಿಗೆ ಏನೂ ಆಗದೆ ಹೋಲಿಕೆಯು ಬೆಂಕಿಗೆ ಸಿಗುತ್ತಾಳೆ. ಭಕ್ತನ ಉದ್ಧಾರದ ನೆನಪನ್ನು ಹೀಗೆ ಹೋಳಿಯು ಮಾಡಿಸುತ್ತದೆ.

ಮತ್ತೊಂದು ಕಥೆ - ರಘುಮಹಾರಾಜನಿಗೆ ಸಂಬಂಧಪಟ್ಟದ್ದು. (ಓದಿರಿ - ಶ್ರೀ ಪಿ ವಿ ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ, ಭಾಗ ಮೂರು). ಓರ್ವ ರಾಕ್ಷಸಿ (ಢುಂಡಿ ಎಂದು ಅವಳ ಹೆಸರು) ಶಿವನ ವರದಿಂದ ಹರೆಯದ ಹುಡುಗರ ಅಶ್ಲೀಲಶಬ್ದಗಳಿಂದ ಮಾತ್ರ ಸಾವನ್ನಪ್ಪುವ ವರ ಪಡೆದಿದ್ದಳು. ಅವಳ ಅಬ್ಬರ ಅತಿಯಾದಾಗ ರಘುವಿನ ರಾಜ್ಯದ ಯುವಪ್ರಜೆಗಳು ಅಶ್ಲೀಲಶಬ್ದಗಳಿಂದ ಬೈದುಕೊಂಡು ಹಳೆಯ ವಸ್ತುಗಳನ್ನು ಸುಡುತ್ತಾರೆ. ಆಗ ಆಕೆಯ ಸಾವು. ಈ ಕಥೆಯು ಬಹಳ ಪುರಾತನವಾಗಿದೆ.

ಕಾಣೆಯವರು ತಿಳಿಸುತ್ತಾರೆ (ನಮ್ಮ ತಂದೆಯವರೂ ಈ ಆಚರಣೆಯನ್ನು ನೋಡಿದ್ದಾರೆ) ರತಿ-ಮನ್ಮಥರ ಮೂರ್ತಿಗಳನ್ನು ಮನೆಯ ಅಥವಾ ಗ್ರಾಮದ ಚೌಕದಲ್ಲಿಟ್ಟು ಅವರಿಗೆ ಪೂಜೆ ಸಲ್ಲಿಸಿ ಕಾಮದಹನವಾದ ನಂತರದ ಬೆಳಗ್ಗೆ ಪಾನಕ-ಪಣ್ಯಾರಗಳ ಸರಬರಾಜು. ಇಲ್ಲಿಯೂ ಅಶ್ಲೀಲ ಶಬ್ದಗಳ ಪ್ರಯೋಗ ನಡೆಯುತ್ತಿತ್ತು. 

ಸನಾತನ ಧರ್ಮ ಕೃಷಿಮೂಲದ್ದಾಗಿರುವುದರಿಂದ ಪ್ರತಿಯೊಂದು ಹಬ್ಬದಾಚರಣೆಗೂ ಪ್ರಕೃತಿಗೂ ನಿಕಟವಾದ ಸಂಬಂಧ. ಇಲ್ಲಿಯೂ ಹೀಗೆಯೇ. ಮಾಸಗಳ ಗಣನೆಯಲ್ಲಿ ಎರಡು ಬಗೆ. ಈಗಿನ ಹಾಗೆಯ ಆಮಾವಾಸ್ಯೆಯ ಅಂತ್ಯದ್ದು ಒಂದು - ಅಮಾವಾಸ್ಯೆಯಿಂದ ಅಮಾವಾಸ್ಯೆಯ ವರೆಗೆ ತಿಂಗಳ ಎಣಿಕೆ. ಎರಡನೆಯದು ಪೂರ್ಣಿಮೆಯ ಅಂತ್ಯದ ಮಾಸದ ಗಣನೆ - ಇಲ್ಲಿ ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಎಣಿಕೆ. ಎರಡನೆಯ ರೀತಿಯ ಪ್ರಕಾರ ಫಾಲ್ಗುಣ ಪೂರ್ಣಿಮೆ ವರ್ಷದ ಕೊನೆಯನ್ನು ಸೂಚಿಸುತ್ತದೆ. ಒಂದೆಡೆ ಛಳಿಯ ಅಂತ್ಯ, ವಸಂತದ ಆಗಮನ ಇರುವುದರಿಂದ ಇದೊಂದು ಸುಖದ ಕಾಲ. ಪ್ರಕೃತಿಯು ಎಲ್ಲೆಡೆ ಸಸ್ಯಶ್ಯಾಮಲೆಯಾಗಿ ಕಂಗೊಳಿಸುವ ಕಾಲ. ಹಳೆಯ ವರ್ಷದ ಹಳತು ತೊಲಗಲೆಂದು ಹಳೆಯ ವಸ್ತುಗಳನ್ನು ಸುಡುವ ಸಂಪ್ರದಾಯ ಇದ್ದಿರಬಹುದು. ಈ ಆಚರಣೆಯೂ ಹಳೆಯದೇ. ಆದರೆ ಈಚೆಗೆ ಕಾಣಸಿಗುತ್ತಿಲ್ಲ.

ಒಟ್ಟಿನಲ್ಲಿ ಹೋಳಿ ಹಬ್ಬ ಅಥವಾ ಕಾಮನ ಹುಣ್ಣಿಮೆ ರಮಣೀಯವಾದ ರೋಚಕವಾದ ಐತಿಹ್ಯವುಳ್ಳ ಆಚರಣೆ. ಒಂದಷ್ಟು ಗುಣವಿರುವ ಹಿಂದಿನ ಆಚರಣೆಗಳನ್ನು ಮತ್ತೆ ಜಾರಿಗೆ ತರಬಹುದೇ ಎಂಬ ಜಿಜ್ಞಾಸೆ ನನಗೆ. 

ಕೊನೆಯದಾಗಿ ಒಂದು ಮಾತು. ಕಳೆದ ತಿಂಗಳಿನ ವ್ಯಾಲೆಂಟಿನ್ ದಿನಾಚರಣೆಯ ಹಿಂದಣ ಬಿಸಿ ನೆನಪಿಗೆ ಬಂದಿತು. ಒಂದೆಡೆ ರಾಮಸೇನೆಯವರು "ಹಿಂದೂ" ಸಂಸ್ಕೃತಿಯ ಗುತ್ತಿಗೆದಾರರು ತಾವೆಂದು ಎಗರಿದರೆ ಇವರಿಗೆ ಸರಿಯಾಗಿ "ಪಿಂಕ್" ಚಡ್ಡಿಗಳ ಬಣದವರ ಅಬ್ಬರ ಮತ್ತೊಂದೆಡೆ. ನಾನು ನೋಡಿದ ಹಾಗೆ ಸನಾತನ ಧರ್ಮದ ರೀತಿ ಈ ಎರಡು ವಿರುದ್ಧ ಬಣಗಳ ರೀತಿಗಳಿಂದಲೂ ಬೇರೆಯಾಗಿದೆ. ಬೇರೆ ಯಾವ ಧರ್ಮದಲ್ಲಿ ರತಿ-ಮನ್ಮಥರನ್ನಿಟ್ಟು ಪೂಜೆ ಮಾಡುತ್ತಾರೆ? ಇದನ್ನು ಕಂಡ ಸನಾತನ ಧರ್ಮದ "ಮಡಿವಂತಿಕೆ"ಯನ್ನು ಜರೆಯುವ "ಪ್ರಗತಿ"ಪರರು ಈ ಆಚರಣೆಯನ್ನು "ಪ್ರಗತ" ಎಂದು ತೇರ್ಗಡೆ ಮಾಡುತ್ತಾರೋ ಅಥವಾ ವಿಕ್ಟೊರಿಯಾ ರಾಣಿಯ ಕಾಲದ ಮಡಿಯನ್ನು ಮತ್ತೆ ನೆನಪಿಸುವಂತೆ "ಲೋಲುಪತೆ" ಎಂದು ಅನುತ್ತೀರ್ಣ ಮಾಡುತ್ತಾರೋ? ಪ್ರೇಮವೆಂದು ಹೇಳಿ ತಿಪ್ಪೆ ಸಾರಿಸದೆ ಕಾಮನ ಹುಣ್ಣಿಮೆಯೆಂದೇ ಘಂಟಾಘೋಷವಾಗಿ ಹೇಳುವ ಈ ಬಗೆ "ಹಿಂದೂ" ಧರ್ಮದ ಆಚರಣೆಯೆಂದು ರಾಮಸೇನೆಯವರಿಗೆ ಹೇಳಿದರೆ ಅವರು ಮಡಿಮಡಿಯನ್ನು ಬಿಟ್ಟು ಸಿಡಿಸಿಡಿಯಾಗುವರೆ? ಅಥವಾ ಇದನ್ನು ತಮ್ಮ "ಹಿಂದೂ"ಧರ್ಮದಿಂದ ಬಹಿಷ್ಕರಿಸುವರೆ?
 
ಒಂದೆಡೆ ಕಾಮವನ್ನು ಅತಿಯಾಗಿ ವೈಭವೀಕರಿಸದೆ ಮತ್ತೊಂದೆಡೆ ಅದರ ತೃಣೀಕರಣವೂ ಕೂಡದೇ ಕೂಡದು ಅನ್ನುವ ಮಧ್ಯಮ ಮಾರ್ಗ ವ್ಯಕ್ತಿಗೂ ಸಮಾಜಕ್ಕೂ ಶ್ರೇಯಸ್ಕರವೆಂದು ನನ್ನ ನಂಬಿಕೆ. ಅದೇ ನನಗೆ ತಿಳಿದ ಹಾಗೆ ಸನಾತನ ಧರ್ಮದ ಮಾರ್ಗ. ಮಾನವನ ಪ್ರತಿಯೊಂದು ಆಸೆಯನ್ನು, ಪ್ರತಿಯೊಂದು ಬೇಡಿಕೆಯನ್ನು ಸನಾತನ ಧರ್ಮ ಅಂಗೀಕರಿಸುತ್ತದೆ. ಆದರೆ ಎಲ್ಲಕ್ಕೂ ಕ್ರಮವನ್ನು ವಿಧಿಸುತ್ತದೆ. ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯತಕ್ಕದ್ದು. ಆದರೆ ಧರ್ಮವೇನು ಅಧರ್ಮವೇನೆಂಬುದರ ಪ್ರಶ್ನೆಯೇ ಮೂಲದ್ದು. ಅದರ ಅರಿವು ಮಂಥನದ ನಂತರ ಆಗುತ್ತದೆ. ನನಗಂತೂ ಧರ್ಮವೇನೆಂಬುದರ ಅರಿವು ಕಷ್ಟಗ್ರಾಹ್ಯ ಎಂದು ಮಾತ್ರ ತಿಳಿದಿದೆ. ಇದು ಇದೇ ಎಂದು ಹೇಳಲು ಬರುವುದಿಲ್ಲ. ಆದರೆ ಅ ನಿಟ್ಟಿನಲ್ಲಿ ಚಿಂತನೆ ಮುಖ್ಯವೆಂದು ಹೇಳುತ್ತಾ ಇಲ್ಲಿ ವಿರಮಿಸುವೆ.

|| ಇತಿ ಶಮ್ ||

6 comments:

Anonymous said...

Nimma lekhana shaili bahala chennagide.

Nimma Bhairappanavara "Aavarana" kurita lekhana odide. aaga taane avarana odi migisidda nanage nimma bahalasthu mataugalige tale tooguva haagayithu.

Anonymous said...

lEkhana bahaLa chennagide.

Shivanu lOkakalyANakkAgi kAmanannu ananganAgi mADida anta SatyaKAmaru heLuttare.

Anonymous said...

"ಮಾನವನ ಪ್ರತಿಯೊಂದು ಆಸೆಯನ್ನು, ಪ್ರತಿಯೊಂದು ಬೇಡಿಕೆಯನ್ನು ಸನಾತನ ಧರ್ಮ ಅಂಗೀಕರಿಸುತ್ತದೆ. ಆದರೆ ಎಲ್ಲಕ್ಕೂ ಕ್ರಮವನ್ನು ವಿಧಿಸುತ್ತದೆ. ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯತಕ್ಕದ್ದು. ಆದರೆ ಧರ್ಮವೇನು ಅಧರ್ಮವೇನೆಂಬುದರ ಪ್ರಶ್ನೆಯೇ ಮೂಲದ್ದು. ಅದರ ಅರಿವು ಮಂಥನದ ನಂತರ ಆಗುತ್ತದೆ. ನನಗಂತೂ ಧರ್ಮವೇನೆಂಬುದರ ಅರಿವು ಕಷ್ಟಗ್ರಾಹ್ಯ ಎಂದು ಮಾತ್ರ ತಿಳಿದಿದೆ. ಇದು ಇದೇ ಎಂದು ಹೇಳಲು ಬರುವುದಿಲ್ಲ. ಆದರೆ ಅ ನಿಟ್ಟಿನಲ್ಲಿ ಚಿಂತನೆ ಮುಖ್ಯವೆಂದು ಹೇಳುತ್ತಾ ಇಲ್ಲಿ ವಿರಮಿಸುವೆ."

-- ಇದರ ಬಗ್ಗೆ ನಿಮ್ಮಿಂದ ಇನ್ನಷ್ಟು ಓದುವ ಆಸೆ. ಎಂದಿನಂತೆ ಒಳ್ಳೆಯ ಬರಹ.

nIlagrIva said...

ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
ಅನಾಮಿಕ ೧,
ನನ್ನ ಆವರಣದ ಬಗೆಗಿನ ಚಿಂತನೆಗಳು ನಿಮಗೆ ರುಚಿಸಿದವು ಎಂದು ಕೇಳಲು ಸಂತೋಷ.
ಅನಾಮಿಕ ೨,
ಸತ್ಯಕಾಮರದು ಸೂಕ್ಷ್ಮ ದೃಷ್ಟಿ. ಮದನನೂ ಅಂದಿನಿಂದ ಅನಂಗನಾದಾಗ ಅವನ ಶಕ್ತಿ ಇನ್ನಷ್ಟು ಹೆಚ್ಚಿತು, ಅಲ್ಲವೆ?
ಆ ರಾಮ್,
ಬಹಳ ದಿನಗಳಿಂದ ನಾನೂ ಬರೆಯಲಿಲ್ಲ, ನೀವೂ ಬರಲಿಲ್ಲ. ಎಲ್ಲ ಕ್ಷೇಮವೇ?

ಧರ್ಮ ನನಗೆ ಬಹಳ ಆಲೋಚನೆಗಿಕ್ಕುವ ಒಂದು ಪದ. ಬ್ರಹ್ಮದ ಹಾಗೆಯೇ. ಅದನ್ನು ತಿಳಿದೆವೆಂದು ಹೇಳಿದವರು ಅದನ್ನು ತಿಳಿಯರು. ತಿಳಿಯದೆಂದು ಬಗೆದವರು ತಿಳಿದಿದ್ದಾರು.

ಕನ್ನಡದಲ್ಲಿ ಬರೆಯಲು ಸಂತೋಷ; ಆದರೆ ಸಮಯವಿರುತ್ತಿರಲಿಲ್ಲ.

Anonymous said...

ನೀಲಗ್ರೀವರೆ:
ಎಲ್ಲವೂ ಕ್ಷೇಮ ಎನ್ನಲೇಕೋ ಭಯ.
ಇದ್ದೇನೆ, ತಕ್ಕಮಟ್ಟಿಗೆ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು.

ನಿಮ್ಮೆಲ್ಲರ ಬರಹಗಳು ಕಡಿಮೆಯಾದ ಕಾರಣಕ್ಕೋ ಏನೋ, ಸಂಪದ ತಾಣದಲ್ಲಿನ ಬರಹಗಳನ್ನು ಇತ್ತೀಚೆಗೆ ಓದುತ್ತಿದ್ದೇನೆ. ಅಲ್ಲಿನ ಸುಪ್ರೀತ್, K.S. ಎನ್ನುವವರ (ಇನ್ನೂ ಇಂಜಿನಿಯರಿಂಗ್ ಡಿಗ್ರಿ ಓದುತ್ತಿರುವವರು) ಜ್ಞಾನದ ಹಸಿವು, ತರ್ಕಶಕ್ತಿ ಗಳಿಗೆ ಬೆರಗು ಪಡುತ್ತಿದ್ದೇನೆ. ಸಮಯವಾದಲ್ಲಿ ನೋಡಿ ಧರ್ಮದ ಬಗ್ಗೆ ಅವರ ಆಕ್ರೋಶ: http://sampada.net/blog/uniquesupri/23/03/2009/18272?page=೧
ನಿಮಗೂ, ನಿಮ್ಮ ಪ್ರೀತಿಪಾತ್ರರೆಲ್ಲರಿಗೂ (ನಾನೂ ಸೇರಿದ್ದೇನೆ?) ಯುಗಾದಿಯ ಶುಭಾಶಯಗಳು.

ದಿವ್ಯಾ ಮಲ್ಯ ಕಾಮತ್ said...

ತುಂಬಾ ಮಾಹಿತಿಯನ್ನೊಳಗೊಂಡ, ಅಂದದ ಶೈಲಿಯ ನಿಮ್ಮ ಬರಹ ಓದಲು ಚೆನ್ನಾಗಿದೆ ಜೊತೆಗೆ ಓದಿದ ನಂತರ ಏನೋ "ಜ್ಞಾನ " ಪಡೆದುಕೊಂಡ ಅನುಭೂತಿ.